ರಷ್ಯಾದಲ್ಲಿ ಮಕ್ಕಳಿಗಾಗಿ ವಿನ್ಸೆಂಟಿಯನ್ ಸಹೋದರಿಯರ ಕರುಣಾಪೂರಿತ ಸೇವೆ
1997ರಲ್ಲಿ ವಿನ್ಸೆಂಟಿಯನ್ ಗುರುಗಳು ಕ್ರೈಸ್ತರು ಅಲ್ಪ ಸಂಖ್ಯಾತರಾಗಿದ್ದ ರಷ್ಯಾದ ನಿಜ್ನಿ ಟಾಗಿಲ್ ನಗರಕ್ಕೆ ಬಂದರು. ಹಸಿದ ಮಕ್ಕಳ ಸ್ಥಿತಿಗೆ ಪ್ರತಿಕ್ರಿಯೆಯಾಗಿ ಆರಂಭವಾದ ಈ ಸೇವೆ, ಕ್ರಮೇಣ ದೀರ್ಘಕಾಲದ ಕರುಣೆಯ ಸೇವೆಯಾಗಿ ಬೆಳೆದಿದೆ.
ಸ್ಲೋವೋಕಿಯಾದವರಾಗಿರುವ ಸಹೋದರಿ ಅಂಟೋನಿಯಾ ಲೆಡ್ನಿಕಾ ಅವರು ಸಂತ ವಿನ್ಸೆಂಟ್ ದಿ ಪಾಲ್ ಸಭೆಗೆ ಸೇರಿದ ಡಾಟರ್ಸ್ ಆಫ್ ಚಾರಿಟಿ ಸಭೆಯ ಸದಸ್ಯೆ. ಅವರು 30 ವರ್ಷಗಳಿಂದ ಧಾರ್ಮಿಕ ಜೀವನದಲ್ಲಿದ್ದು, 23 ವರ್ಷಗಳಿಂದ ರಷ್ಯಾದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
“ರಸ್ತೆಗಳಲ್ಲಿ ಹಸಿವಿನಿಂದ, ಚಳಿಯಿಂದ, ಮರೆತುಹೋಗಿ ತಿರುಗಾಡುತ್ತಿದ್ದ ಮಕ್ಕಳನ್ನು ಕಂಡು ವಂ. ಗುರು ತೋಮಾಜ್ ಮಾವ್ರಿಚ್ ಅವರು ತುಂಬಾ ಕಳವಳಗೊಂಡರು,” ಎಂದು ಸಹೋದರಿ ಅಂಟೋನಿಯಾ ಹೇಳುತ್ತಾರೆ. “ಅವರು ಈ ವಿಷಯವನ್ನು ಧರ್ಮಕೇಂದ್ರದ ಸದಸ್ಯರೊಂದಿಗೆ, ನಂತರ ಶಾಲೆ ಸಂಖ್ಯೆ 41ರ ಮುಖ್ಯಶಿಕ್ಷಕಿ ನಟಾಲಿಯಾ ಪೆಟ್ರೋವ್ನಾ ಅವರೊಂದಿಗೆ ಚರ್ಚಿಸಿ, ಕಥೋಲಿಕ ಧರ್ಮಕೇಂದ್ರ ಮತ್ತು ಸರ್ಕಾರಿ ಸಂಸ್ಥೆಗಳ ನಡುವೆ ಸಹಕಾರವನ್ನು ಆರಂಭಿಸಿದರು.”
ಹಣವಿಲ್ಲದ ಮಕ್ಕಳಿಗೆ ಬಿಸಿ ಊಟ ಒದಗಿಸುವುದರಿಂದ ವಿನ್ಸೆಂಟಿಯನ್ ಸೇವೆ ಆರಂಭವಾಯಿತು. ಇದು ಪ್ರೀತಿಯೂ ನಂಬಿಕೆಯೂ ಕಾರ್ಯರೂಪಕ್ಕೆ ಬರುವ ಕಾರ್ಯಕ್ರಮವಾಯಿತು. ಧರ್ಮಕೇಂದ್ರದ ಸದಸ್ಯರು ಮತ್ತು ಗುರುಗಳು 50ರಿಂದ 80 ಮಕ್ಕಳ ಶಾಲಾ ಊಟದ ವೆಚ್ಚವನ್ನು ಭರಿಸುವ ಮೂಲಕ ಸರಳವಾಗಿ ಆರಂಭಿಸಿದರು.
ರಷ್ಯಾದಲ್ಲಿ ಡಾಟರ್ಸ್ ಆಫ್ ಚಾರಿಟಿ ಸಹೋದರಿಯರು
“ವಂ. ಗುರು ತೋಮಾಜ್ ಅವರು ಚಾರಿಟಿ ಸಹೋದರಿಯರನ್ನು ಸೇವೆಗೆ ಕರೆದರು,” ಎಂದು ಸಿಸ್ಟರ್ ಅಂಟೋನಿಯಾ ಹೇಳುತ್ತಾರೆ. “2000ರಲ್ಲಿ ಸ್ಲೋವಾಕಿಯಾದಿಂದ ಬಂದ ಸಹೋದರಿಯರು. ಮಕ್ಕಳ ಕ್ಲಬ್ ಕೇರ್ ಅನ್ನು ಆರಂಭಿಸಿದರು. ಇದು ನೂರಾರು ಮಕ್ಕಳಿಗೆ ಆಶ್ರಯ, ಪಾಠಶಾಲೆ ಮತ್ತು ಎರಡನೇ ಮನೆಯಾಯಿತು. ವಾರಕ್ಕೆ ಒಂದು ಬಾರಿ ಆರಂಭವಾದ ಸೇವೆ ಈಗ ವಾರದಲ್ಲಿ ಐದು ದಿನ ನಡೆಯುತ್ತಿದೆ.”
“ಈ ಕ್ಲಬ್‌ನಿಂದ 1,500ಕ್ಕೂ ಹೆಚ್ಚು ಮಕ್ಕಳು ಲಾಭ ಪಡೆದಿದ್ದಾರೆ, ಕೆಲವರಿಗೆ ಇದು ಒಂದು ವರ್ಷದ ಅನುಭವ; ಇನ್ನಿತರರಿಗೆ ಸಂಪೂರ್ಣ ಶಾಲಾ ಜೀವನದ ಭಾಗ.”
ಈ ಕ್ಲಬ್‌ನ ಉದ್ದೇಶ, ಪ್ರೀತಿ, ಸ್ಥಿರತೆ ಮತ್ತು ಮಾರ್ಗದರ್ಶನ ವಂಚಿತರಾದ ಮಕ್ಕಳಿಗೆ ಅವನ್ನು ನೀಡುವುದು.
“ಅನೇಕ ಮಕ್ಕಳು ಕ್ರೈಸ್ತ ಮಕ್ಕಳಲ್ಲ. ನಿಧಾನವಾಗಿ ನಾವು ಆರ್ಥಡಾಕ್ಸ್ ಮತ್ತು ಮುಸ್ಲಿಂ ಮಕ್ಕಳಿಗೂ ಸಹಾಯ ಮಾಡಿದೆವು. ಧರ್ಮ ಪ್ರಶ್ನೆಯಲ್ಲ; ಯಾರಾದರೂ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬುದನ್ನು ತೋರಿಸುವುದೇ ಮುಖ್ಯವಾಗಿತ್ತು,” ಎಂದು ಸಹೋದರಿ ಅಂಟೋನಿಯಾ ಹೇಳುತ್ತಾರೆ.
ಉಲ್ಯಾನಾ ಅವರ ಸಾಕ್ಷ್ಯ
34 ವರ್ಷದ ಉಲ್ಯಾನಾ ಅವರು ಈ ಸೇವೆಯ ಫಲಾನುಭವಿಗಳಲ್ಲಿ ಒಬ್ಬರು. “ನನ್ನ ಬಾಲ್ಯದ ನೆನಪುಗಳು ತುಂಬಾ ಮಧುರ,” ಎಂದು ಅವರು ನಗುತ್ತಾ ಹೇಳುತ್ತಾರೆ. “ಚಳಿಗಾಲದಲ್ಲಿ ಒಟ್ಟಿಗೆ ಬೆಟ್ಟದ ಮೇಲೆ ಜಾರುವುದು, ನಡಿಗೆಗೆ ಹೋಗುವುದು ತುಂಬಾ ಸಂತೋಷಕರವಾಗಿತ್ತು. ಅದು ಮನೆಯಂತೆಯೇ ಇತ್ತು.”
“ನಾನು ಅಸ್ಥಿರ ಕುಟುಂಬದಿಂದ ಬಂದವಳು, ದಯೆ ಮತ್ತು ಪ್ರೀತಿ ನನಗೆ ಕಲಿಸಲ್ಪಟ್ಟಿರಲಿಲ್ಲ. ಆದರೆ ಈ ಕ್ಲಬ್ ನನ್ನ ವ್ಯಕ್ತಿತ್ವ ಬೆಳವಣಿಗೆಗೆ ಸಹಾಯ ಮಾಡಿತು. ನನ್ನ ಸೃಜನಶೀಲತೆಯನ್ನು ರೂಪಿಸಿತು. ಇಂದು ನಾನು ಡಿಸೈನರ್ ಆಗಿದ್ದೇನೆ. ಮಕ್ಕಳ ಕ್ಲಬ್‌ಗೆ ನಾನು ಸದಾ ಕೃತಜ್ಞಳಾಗಿದ್ದೇನೆ.”
ವಿಸ್ತೃತ ಸೇವೆ
ಡಾಟರ್ಸ್ ಆಫ್ ಚಾರಿಟಿ ಸಹೋದರಿಯರು ನಿಜ್ನಿ ಟಾಗಿಲ್‌ನಲ್ಲಿ ಗೃಹರಹಿತರಿಗೂ ಸೇವೆ ಸಲ್ಲಿಸುತ್ತಾರೆ. ಪ್ರತಿದಿನ ಆಶ್ರಯ ಕೇಂದ್ರಗಳಿಗೆ ಭೇಟಿ ನೀಡಿ, ಸ್ವಚ್ಛತೆ ಮತ್ತು ವಾಸಸ್ಥಳಗಳ ಪುನರ್‌ನಿರ್ಮಾಣದಲ್ಲಿ ಸಹಾಯ ಮಾಡುತ್ತಾರೆ.
ಅವರು ಸರ್ಕಾರಿ ಕ್ಷಯರೋಗ ಆಸ್ಪತ್ರೆಯಲ್ಲಿಯೂ ಸೇವೆ ಮಾಡುತ್ತಾರೆ. “ಅನೇಕ ರೋಗಿಗಳು ಗೃಹರಹಿತರಾಗಿದ್ದು, ದಾಖಲೆಗಳಿಲ್ಲದೆ ಬರುತ್ತಾರೆ,” ಎಂದು ಸಹೋದರಿ ಅಂಟೋನಿಯಾ ವಿವರಿಸುತ್ತಾರೆ. “ಅವರಿಗೆ ಕಾನೂನು ದಾಖಲೆಗಳನ್ನು ಪಡೆಯಲು ಸಹಾಯ ಮಾಡುತ್ತೇವೆ, ಸಾಮಾಜಿಕ ಸೌಲಭ್ಯಗಳನ್ನು ದೊರಕಿಸುವಂತೆ ಮಾಡುತ್ತೇವೆ.” ಸಹೋದರಿಯರು ತಮ್ಮ ಕಾರಿನಲ್ಲಿ ರೋಗಿಗಳನ್ನು ಕಚೇರಿಗಳಿಗೆ ಕರೆದೊಯ್ಯುತ್ತಾರೆ ಮತ್ತು ಎಲ್ಲಾ ವೆಚ್ಚಗಳನ್ನು ಭರಿಸುತ್ತಾರೆ.
ತಿಂಗಳಿಗೆ ಒಮ್ಮೆ ಕ್ಷಯರೋಗ ಚಿಕಿತ್ಸಾ ಕೇಂದ್ರಕ್ಕೆ ಆಹಾರವನ್ನು ತಲುಪಿಸಲಾಗುತ್ತದೆ. ಇದು ರೋಗಿಗಳು ನಿಯಮಿತ ವೈದ್ಯಕೀಯ ಪರೀಕ್ಷೆಗೆ ಬರುವಂತೆ ಪ್ರೋತ್ಸಾಹವಾಗುತ್ತದೆ. ಧರ್ಮಕೇಂದ್ರದ ಸದಸ್ಯರಿಗೆ ಆತ್ಮೀಯ ಸೇವೆ, ಧರ್ಮೋಪದೇಶ, ಹಾಗೂ ಹಬ್ಬಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ಸಭೆಗಳನ್ನು ಸಹ ಅವರು ನಡೆಸುತ್ತಾರೆ.
ಕಠಿಣ ಸಮಯದಲ್ಲಿ ಸಹಾಯ
ಈ ಸೇವೆಗಳಿಗೆ ಹಣ ಅಗತ್ಯವಿದ್ದು, ಅದು ಸ್ಲೋವಾಕಿಯಾದ ವಿನ್ಸೆಂಟಿಯನ್ ಪ್ರಾಂತ್ಯದಿಂದ ಅನುದಾನಗಳ ಮೂಲಕ ಹಾಗೂ ಸ್ಥಳೀಯ ಜನರಿಂದ ‘ಸೇಂಟ್ ವಿನ್ಸೆಂಟ್ ಚೀಲ’ ಆಹಾರ ಸಂಗ್ರಹದ ಮೂಲಕ ಲಭ್ಯವಾಗುತ್ತದೆ.
“ಜನರು ಬಹಳ ಉದಾರಿಗಳಾಗಿದ್ದಾರೆ,” ಎಂದು ಸಹೋದರಿ ಅಂಟೋನಿಯಾ ಕೃತಜ್ಞತೆಯಿಂದ ಹೇಳುತ್ತಾರೆ. “ಆಹಾರವು ಬಡವರಿಗೆ ಹೋಗುತ್ತದೆ ಎಂಬುದು ಅವರಿಗೆ ಗೊತ್ತು.”
ಕ್ರಿಸ್ತಜಯಂತಿ, ಪುನರುತ್ಥಾನ ಹಬ್ಬ ಮತ್ತು ಹಿರಿಯರ ಗೌರವ ದಿನದಂತಹ ಸಂದರ್ಭಗಳಲ್ಲಿ ಸಹೋದರಿಯರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸುತ್ತಾರೆ.
ಒಮ್ಸ್ಕ್‌ನಲ್ಲಿ ಸೇವೆ
2010ರಲ್ಲಿ ನೊವೊಸಿಬಿರ್ಸ್ಕ್ ಧರ್ಮಕ್ಷೇತ್ರದ ಬಿಷಪ್ ಜೋಸೆಫ್ ವರ್ತ್ ಅವರು ಸಹೋದರಿಯರನ್ನು ಸೈಬೀರಿಯಾದ ಒಮ್ಸ್ಕ್ ನಗರಕ್ಕೆ ಆಹ್ವಾನಿಸಿದರು.
ಅಲ್ಲಿ ಅವರು ಎರಡು ಧರ್ಮಕೇಂದ್ರಗಳಲ್ಲಿ ಮಕ್ಕಳಿಗೂ ವಯಸ್ಕರಿಗೂ ಧರ್ಮೋಪದೇಶ ತರಗತಿಗಳನ್ನು ನಡೆಸುತ್ತಿದ್ದಾರೆ. ಗೃಹರಹಿತರು ಮತ್ತು ಕ್ಷಯರೋಗಿಗಳಿಗೆ ಕಥೋಲಿಕ ಚಾರಿಟಿಯಲ್ಲಿ ಸೇವೆ ಮಾಡುತ್ತಾ, ದಾನ ಸಂಸ್ಥೆಗಳ ಕಾರ್ಮಿಕರು, ಕುಟುಂಬಗಳು ಮತ್ತು ಮಕ್ಕಳಿಗೆ ಆತ್ಮೀಯ ಬೆಂಬಲ ನೀಡುತ್ತಾರೆ.
“ಗುರುಗಳೊಂದಿಗೆ ನಾವು ಸುತ್ತಮುತ್ತಲಿನ ಧರ್ಮಕೇಂದ್ರಗಳಿಗೆ ಹೋಗುತ್ತೇವೆ. ಕೆಲವೊಮ್ಮೆ 100 ಕಿಲೋಮೀಟರ್‌ಗೂ ಹೆಚ್ಚು ದೂರ ಪ್ರಯಾಣ ಮಾಡಬೇಕಾಗುತ್ತದೆ,” ಎಂದು ಸಹೋದರಿ ಅಂಟೋನಿಯಾ ಹೇಳುತ್ತಾರೆ.
ಸಂತೋಷ ಮತ್ತು ಸಂಕಷ್ಟಗಳು
ಭಯ, ದಾರಿದ್ರ್ಯ ಮತ್ತು ಕುಟುಂಬದ ಸಮಸ್ಯೆಗಳು ಸದಾ ಇರುವ ಈ ಸಮುದಾಯದಲ್ಲಿ ಸಹೋದರಿ ಅಂಟೋನಿಯಾ ಆಳವಾದ ನೋವಿನ ಜೊತೆಗೆ ಮೌನ ಭರವಸೆಯನ್ನು ಕಾಣುತ್ತಾರೆ. ಕಥೋಲಿಕರು ಅಲ್ಪಸಂಖ್ಯೆಯಾಗಿದ್ದರೂ, ಸಹೋದರಿಯರು ಎಲ್ಲರನ್ನೂ ವೈಯಕ್ತಿಕವಾಗಿ ಅರಿತಿದ್ದಾರೆ. ಅವರು ಒಮ್ಮೆ ಸೇವೆ ಮಾಡಿದ ಮಕ್ಕಳ ಮಕ್ಕಳು ಬೆಳೆದುಬರುತ್ತಿರುವುದನ್ನು ನೋಡುವುದು ಅವರಿಗೆ ಮಹಾ ಸಂತೋಷ.
ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ, ರಷ್ಯಾದಲ್ಲಿ ವಿನ್ಸೆಂಟಿಯನ್ ಸಹೋದರಿಯರ ಸೇವೆ ದೇವರ ಪ್ರೇರಿತ ಪ್ರೀತಿಯಿಂದ ಹುಟ್ಟಿದ ಸೇವೆಯಾಗಿ ಸಣ್ಣ ಪ್ರೀತಿ ಕಾರ್ಯಗಳಲ್ಲಿಯೇ ಬೇರುಬಿಟ್ಟಿದೆ.