ರೇಡಿಯೋ ವೆರಿಟಾಸ್ ಏಷ್ಯಾ ವತಿಯಿಂದ ಯುವ ಪತ್ರಕರ್ತರಿಗೆ ಗೌರವ; ಸ್ಮರಣಾರ್ಥ ಪುಸ್ತಕ ಬಿಡುಗಡೆ
ವ್ಯಾಟಿಕನ್ ವರದಿ
ರೇಡಿಯೋ ವೆರಿಟಾಸ್ ಏಷ್ಯಾ (RVA) ಜನವರಿ 30ರಂದು ಮಹತ್ವದ ಆನ್‌ಲೈನ್ ಸಮಾರಂಭವನ್ನು ಆಯೋಜಿಸಿ, ಏಷ್ಯಾದ ವಿವಿಧ ಕ್ಷೇತ್ರಗಳ ಗಣ್ಯರನ್ನು ಒಂದೇ ವೇದಿಕೆಯಲ್ಲಿ ಸೇರಿಸಿತು. ಈ ಸಂದರ್ಭದಲ್ಲಿ ಲೌಡಾಟೊ ಸಿ' ಕೇರ್ ಫಾರ್ ಕ್ರಿಯೇಷನ್ ಕಿರುಚಿತ್ರ ಸ್ಪರ್ಧೆ ಪ್ರಶಸ್ತಿ ಪ್ರದಾನ ಹಾಗೂ ವಾಯ್ಸಸ್ ಫಾರ್ ಅವರ್ ಕಾಮನ್ ಹೋಂ(Voices for Our Common Home) ಎಂಬ ಸ್ಮರಣಾರ್ಥ ಪುಸ್ತಕದ ಬಿಡುಗಡೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಏಷ್ಯಾದ ಚಲನಚಿತ್ರಕಾರರು, ಧರ್ಮಸಭೆಯ ಮಾಧ್ಯಮ ಕಾರ್ಯಕರ್ತರು,, ಪರಿಸರ ಹೋರಾಟಗಾರರು, ಧರ್ಮಶಾಸ್ತ್ರಜ್ಞರು ಹಾಗೂ ಧರ್ಮಾಧ್ಯಕ್ಷರು ಭಾಗವಹಿಸಿದ್ದರು. ಈ ಕಿರುಚಿತ್ರ ಸ್ಪರ್ಧೆ, ಏಷ್ಯನ್ ಧರ್ಮಾಧ್ಯಕ್ಷರ ಫೆಡರೇಷನ್ (FABC) ನೀಡಿದ ಧಾರ್ಮಿಕ ಪಾಲನಾ ಪತ್ರಕ್ಕೆ ಪ್ರತಿಕ್ರಿಯೆಯಾಗಿ RVA ಆರಂಭಿಸಿದ ಒಂದು ವರ್ಷದ ವಿಶೇಷ ಅಭಿಯಾನದ ಭಾಗವಾಗಿತ್ತು. ಪೂಜ್ಯ ಜಗದ್ಗುರುಗಳಾದ ಫ್ರಾನ್ಸಿಸ್ ಅವರ ‘Laudato Si’ ಪರಿಕಲ್ಪನಾ ಪತ್ರದ ದಶಮಾನೋತ್ಸವವನ್ನು ಈ ಅಭಿಯಾನ ಸ್ಮರಿಸಿತು.
2025ರ ಸೆಪ್ಟೆಂಬರ್ ಆರಂಭದಲ್ಲಿ ಘೋಷಿಸಲಾದ ಈ ಸ್ಪರ್ಧೆ, ಏಷ್ಯಾ ಸೇರಿದಂತೆ ವಿವಿಧ ಪ್ರದೇಶಗಳ ಕಥೆಗಾರರನ್ನು ಆಹ್ವಾನಿಸಿ, ಮೂರರಿಂದ ಐದು ನಿಮಿಷಗಳ ಮೂಲ ಕಿರುಚಿತ್ರಗಳನ್ನು ಸಲ್ಲಿಸಲು ಅವಕಾಶ ನೀಡಿತ್ತು. ಸ್ಪರ್ಧೆಯ ಕೇಂದ್ರ ವಿಷಯ—ನಮ್ಮ ಸಾಮಾನ್ಯ ಮನೆಯ (ಭೂಮಿಯ) ಸಂರಕ್ಷಣೆ ಹಾಗೂ ಏಷ್ಯಾದಲ್ಲಿ ‘ಲಾಡಾಟೊ ಸಿ’ (Laudato Si)ಯ ಪ್ರಭಾವ.
ಒಟ್ಟು 80ಕ್ಕೂ ಹೆಚ್ಚು ಚಲನಚಿತ್ರಕಾರರು ತಮ್ಮ ಕೃತಿಗಳನ್ನು ಸಲ್ಲಿಸಿದ್ದರು. ಅಂತಾರಾಷ್ಟ್ರೀಯ ತೀರ್ಪುಗಾರರ ಸಮಿತಿ ಸೂಕ್ಷ್ಮ ಪರಿಶೀಲನೆಯ ಬಳಿಕ 13 ಅಂತಿಮ ಸ್ಪರ್ಧಿಗಳನ್ನು ಆಯ್ಕೆ ಮಾಡಿತು. ಇವರಲ್ಲಿ 10 ಸಮಾಧಾನ ಬಹುಮಾನ ವಿಜೇತರು ಹಾಗೂ 3 ಪ್ರಮುಖ ಬಹುಮಾನ ಪಡೆದವರು ಸೇರಿದ್ದಾರೆ.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ RVA ಕಾರ್ಯಕ್ರಮ ನಿರ್ದೇಶಕ ಹಾಗೂ FABC–OSC ಕಾರ್ಯದರ್ಶಿ ವಂ. ಗುರು ಜಾನ್ ಮಿ ಶೆನ್, ಇದು ಕೇವಲ ಪ್ರಶಸ್ತಿ ಪ್ರದಾನ ಸಮಾರಂಭವಲ್ಲ, ಲಾಡಾಟೊ ಸಿ (Laudato Si)ಯ ದೃಷ್ಟಿಕೋನದ ಆಚರಣೆ ಎಂದರು. ಸೃಷ್ಟಿ ಸಂರಕ್ಷಣೆ ಕ್ರೈಸ್ತ ಶಿಷ್ಯತ್ವದ ಅವಿಭಾಜ್ಯ ಅಂಗವೆಂದು ಅವರು ಒತ್ತಿಹೇಳಿದರು.
“ಈ ಕಿರುಚಿತ್ರ ಸ್ಪರ್ಧೆಯ ಮೂಲಕ ಏಷ್ಯಾದ ಯುವ ಸಂವಹನಕಾರರು ಪರಿಸರ ಪರಿವರ್ತನೆಗೆ ಸೃಜನಾತ್ಮಕವಾಗಿ ಸ್ಪಂದಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಅವರ ಕಥೆಗಳು ಮನಸ್ಸನ್ನು ಜಾಗೃತಗೊಳಿಸಿ, ಕರುಣೆಯನ್ನು ಬೆಳೆಸಿ, ಜವಾಬ್ದಾರಿಯುತ ಕಾರ್ಯಕ್ಕೆ ಪ್ರೇರಣೆ ನೀಡುತ್ತವೆ,” ಎಂದು ಹೇಳಿದರು.
ವ್ಯಾಟಿಕನ್ ಸಂವಹನ ವಿಭಾಗದ ಡಾ. ನತಾಶಾ ಗೋವೇಕರ್ ಅಭಿನಂದನಾ ಸಂದೇಶ ಕಳುಹಿಸಿ, ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಮಾಧ್ಯಮಗಳ ಯುಗದಲ್ಲಿಯೂ ಲಾಡಾಟೊ ಸಿ(Laudato Si)ಯ ಆತ್ಮವನ್ನು ಜೀವಂತವಾಗಿಟ್ಟಿರುವ RVAಯ ಪ್ರಯತ್ನವನ್ನು ಶ್ಲಾಘಿಸಿದರು.
ಮಾನವನು ಸೃಷ್ಟಿಯನ್ನು ರಕ್ಷಿಸುವುದಷ್ಟೇ ಅಲ್ಲ, ಸೃಷ್ಟಿಯೇ ಮಾನವನನ್ನು ರಕ್ಷಿಸುತ್ತದೆ ಎಂಬುದನ್ನು ಅವರು ನೆನಪಿಸಿದರು. ಪೂಜ್ಯ ಜಗದ್ಗುರುಗಳಾದ ೧೪ನೆ ಲಿಯೋ ಅವರ ವಿಶ್ವ ಸಂವಹನ ದಿನದ ಸಂದೇಶವನ್ನು ಉಲ್ಲೇಖಿಸಿದ ಅವರು, ನಿಜವಾದ ಮಾನವ ಮುಖಗಳು ಮತ್ತು ಧ್ವನಿಗಳನ್ನು ಕಾಪಾಡುವ ಅಗತ್ಯವಿದೆ ಎಂದು ಹೇಳಿದರು. ಅತಿಯಾದ ಪರದೆ ಅವಲಂಬನೆ( screen addiction ) ಪ್ರಕೃತಿಯಿಂದ ದೂರ ಮಾಡುವ ಅಪಾಯವಿದೆ ಎಂದು ಎಚ್ಚರಿಸಿದರು.
‘ಸಾಮಾನ್ಯ ಮನೆ (ಭೂಮಿ)’ಗಾಗಿ ಸ್ಮರಣಾರ್ಥ ಪುಸ್ತಕ
ಸಮಾರಂಭದ ಪ್ರಮುಖ ಆಕರ್ಷಣೆಯಾಗಿ ವಾಯ್ಸಸ್ ಫಾರ್ ಅವರ್ ಕಾಮನ್ ಹೋಂ (Voices for Our Common Home): ಲಾಡಾಟೊ ಸಿ (Laudato Si) in Asia” ಎಂಬ ಸ್ಮರಣಾರ್ಥ ಪುಸ್ತಕದ ಅಧಿಕೃತ ಬಿಡುಗಡೆ ನಡೆಯಿತು. ಕಾರಿಟಾಸ್ ಫಿಲಿಪ್ಪೀನ್ಸ್ ಅಧ್ಯಕ್ಷರಾದ ಪೂಜ್ಯ ಧರ್ಮಾಧ್ಯಕ್ಷ ಜೆರಾರ್ಡೊ ಅಲ್ಮಿನಾಸಾ ಅವರು ಪುಸ್ತಕವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು.
“ಈ ಪುಸ್ತಕದಲ್ಲಿನ ಧ್ವನಿಗಳು ಏಷ್ಯಾದ ಮೇಲೆ Laudato Si’ ಉಂಟುಮಾಡಿದ ಪ್ರಭಾವದ ಸಾಕ್ಷ್ಯ ಮಾತ್ರವಲ್ಲ; ನಮ್ಮ ಸಾಮಾನ್ಯ ಮನೆ (ಭೂಮಿ)ಯ ಸಂರಕ್ಷಣೆಗೆ ತಕ್ಷಣದ ಅಗತ್ಯವಿದೆ ಎಂಬ ಎಚ್ಚರಿಕೆಯೂ ಹೌದು,” ಎಂದು ಪೂಜ್ಯ ಧರ್ಮಾಧ್ಯಕ್ಷ ಅಲ್ಮಿನಾಸಾ ಹೇಳಿದರು.
ಪರಿಸರ ಸಂಕಷ್ಟಕ್ಕೆ ಪ್ರತಿಕ್ರಿಯಿಸಲು ಧರ್ಮಸಭೆ ಇನ್ನೆಂದೂ ತಡಮಾಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು. ಈ ಪುಸ್ತಕ ಜನರಲ್ಲಿ ಜಾಗೃತಿ ಮೂಡಿಸಿ, ಒಟ್ಟಾಗಿ ಕಾರ್ಯನಿರ್ವಹಿಸಲು ಪ್ರೇರಣೆ ನೀಡುತ್ತದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.
ಮಲೇಶಿಯಾದ ಕುಚಿಂಗ್‌ನ ಮಹಾಧರ್ಮಾಧ್ಯಕ್ಷ ಸೈಮನ್ ಪೊಹ್, ಧರ್ಮಪ್ರಚಾರ ಕಚೇರಿಯ ಅಧ್ಯಕ್ಷರೂ ಆಗಿರುವ ಅವರು, ಯುವ ಚಲನಚಿತ್ರಕಾರರನ್ನು ಅಭಿನಂದಿಸಿ, ಅವರು ಧರ್ಮಸಭೆಯ “ಇಂದಿನ ಮುಖ” ಎಂದು ಹೇಳಿದರು. “ವಾಯ್ಸಸ್ ಫಾರ್ ಅವರ್ ಕಾಮನ್ ಹೋಂ" (Voices for Our Common Home) ಪುಸ್ತಕಕ್ಕೆ ಅವರು ಲೇಖನವನ್ನೂ ನೀಡಿದ್ದಾರೆ. ಲಾಡಾಟೊ ಸಿ (Laudato Si)ಯ ಪ್ರಮುಖ ಚಿಂತನೆಯಾದ ಪಾರಂಪರಿಕ ಜ್ಞಾನವನ್ನು ಸಂರಕ್ಷಿಸಿ ಹಂಚಿಕೊಳ್ಳುವ ಅಗತ್ಯವಿದೆ ಎಂದು ಅವರು ಒತ್ತಿಹೇಳಿದರು.
ಕಾರ್ಯಕ್ರಮದ ಅಂತ್ಯದಲ್ಲಿ, ಮೂರು ಪ್ರಮುಖ ಬಹುಮಾನ ಪಡೆದ ಕಿರುಚಿತ್ರಗಳ ಘೋಷಣೆ ಹಾಗೂ ಪ್ರದರ್ಶನ ನಡೆಯಿತು. ಪ್ರಥಮ ಬಹುಮಾನವನ್ನು ಥೈಲ್ಯಾಂಡ್‌ನ “Love in Action” ಚಿತ್ರ ಪಡೆದುಕೊಂಡಿತು. ಈ ಘೋಷಣೆಯನ್ನು RVA ಪ್ರಧಾನ ವ್ಯವಸ್ಥಾಪಕರಾದ ವಂ. ಗುರು ಫೆಲ್ಮಾರ್ ಫಿಯೆಲ್ ಮಾಡಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).