ಕ್ರೈಸ್ತ ಏಕತಾ ಪ್ರಾರ್ಥನಾ ವಾರ: ಏಕತೆ ಎಂದರೆ ಪರಸ್ಪರ ಬೆಂಬಲ — ಅಧೀನತೆ ಅಥವಾ ಹೀನತೆ ಅಲ್ಲ
ವರದಿ: ಅಗಸ್ಟೀನ್ ಆಸ್ತಾ ಹಾಗೂ ಕೀಲ್ ಗಸ್ಸಿ
118 ವರ್ಷಗಳ ಹಿಂದೆ, ಆಂಗ್ಲಿಕನ್ ಧಾರ್ಮಿಕ ಸಮುದಾಯದ ಸ್ಥಾಪಕರಾಗಿದ್ದ ಹಾಗೂ ನಂತರ ಕಥೋಲಿಕ ಧರ್ಮಸಭೆಗೆ ಸೇರಿದ ವಂದನೀಯ ಗುರು ಪೌಲ್ ವಾಟ್‌ಸನ್, ಕ್ರೈಸ್ತ ಏಕತೆಯ ಆತ್ಮವನ್ನು ಜೀವಂತವಾಗಿಡಲು ಕ್ರೈಸ್ತ ಏಕತೆಗಾಗಿ ಪ್ರಾರ್ಥನಾ ವಾರ ಎಂಬ ಪರಿಕಲ್ಪನೆಯನ್ನು ಪ್ರಾರಂಭಿಸಿದರು. ಈ ಆಧ್ಯಾತ್ಮಿಕ ಮುಂದಾಳತ್ವಕ್ಕೆ ಒಂದು ವರ್ಷದೊಳಗೆ ಜಗದ್ಗುರುಗಳಾದ ಸಂತ ಹತ್ತನೇ ಪಿಯೂಸರು ತಮ್ಮ ಅಧಿಕೃತ ಆಶೀರ್ವಾದವನ್ನು ನೀಡಿದರು.
2026ರ ಕ್ರೈಸ್ತ ಏಕತೆಗಾಗಿ ಪ್ರಾರ್ಥನಾ ವಾರದ ಪ್ರಾರ್ಥನಾ ಆವೃತ್ತಿಯನ್ನು ಈ ಬಾರಿ ಅರ್ಮೇನಿಯನ್ ಅಪೋಸ್ತೋಲಿಕ ಧರ್ಮಸಭೆ, ದೇಶದ ವಿವಿಧ ಸ್ಥಳೀಯ ಕ್ರೈಸ್ತ ಧರ್ಮಸಭೆಗಳೊಂದಿಗೆ ಸೇರಿ ಸಿದ್ಧಪಡಿಸಿದೆ. ಇದು ಕ್ರೈಸ್ತ ಸಮುದಾಯಗಳ ನಡುವಿನ ಸಹಭಾಗಿತ್ವ ಮತ್ತು ಪರಸ್ಪರ ಗೌರವದ ಸ್ಪಷ್ಟ ಸಂಕೇತವಾಗಿದೆ.
ಮೂಲಭೂತ ಕ್ರೈಸ್ತ ಸತ್ಯದತ್ತ ಮರಳುವ ಕರೆ
ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ವಂದನೀಯ ಗುರು ಗ್ಯಾರಜಿನ್ ಹಂಬರ್ಡ್‌ಜುಮ್ಯಾನ್ ಅವರು, “ಈ ಪ್ರಾರ್ಥನಾ ವಾರವು ನಮ್ಮನ್ನು ನಾವೆಲ್ಲರೂ ಕ್ರಿಸ್ತನ ಒಂದೇ ದೇಹದ ಅಂಗಗಳಾಗಿದ್ದೇವೆ ಎಂಬ ಮೂಲಭೂತ ಸತ್ಯದ ಕಡೆಗೆ ಮರಳಿಸುತ್ತದೆ ” ಎಂದು ಹೇಳಿದರು.
ಈ ವಾರದ ಅಂತರಾಳಾರ್ಥವೆಂದರೆ, ಒಟ್ಟಾಗಿ ಪ್ರಾರ್ಥಿಸುವುದು, ದೇವರ ವಾಕ್ಯವನ್ನು ಒಟ್ಟಾಗಿ ಧ್ಯಾನಿಸುವುದು ಮತ್ತು ಪರಸ್ಪರ ಕ್ರೈಸ್ತ ಸಹೋದರ–ಸಹೋದರಿಯರಾಗಿ ಬದುಕುವ ಕರೆಯನ್ನು ಮತ್ತೆ ನೆನಪಿಸಿಕೊಳ್ಳುವುದಾಗಿದೆ. ಇದು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಕ್ರಿಸ್ತನಲ್ಲಿ ನಮ್ಮ ಐಕ್ಯತೆಯನ್ನು ಅನುಭವಿಸುವ ಜೀವಂತ ಅನುಭವವಾಗಿದೆ.
ಆದರೆ ಏಕತೆ ಎಂದರೆ ಏಕರೂಪತೆ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು. ವಿವಿಧ ಧರ್ಮಸಭೆಗಳ ಆರಾಧನಾ ವಿಧಿಗಳು , ಸಂಪ್ರದಾಯ, ಆಧ್ಯಾತ್ಮಿಕ ಅಭಿವ್ಯಕ್ತಿಗಳು—ಇವು ಕ್ರಿಸ್ತನ ಒಂದೇ ದೇಹದೊಳಗಿನ ವೈವಿಧ್ಯಮಯ ಅಂಗಗಳಾಗಿವೆ. ಈ ವೈವಿಧ್ಯವೇ ಏಕತೆಯನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತದೆ.
ಪರೀಕ್ಷೆಗಳ ಮೂಲಕ ಬಲಪಡಿಸಿದ ನಂಬಿಕೆಯ ಸಾಕ್ಷ್ಯ
ಅರ್ಮೇನಿಯನ್ ಕ್ರೈಸ್ತ ಇತಿಹಾಸವನ್ನು ಸ್ಮರಿಸಿದ ವಂದನೀಯ ಗುರು ಹಂಬರ್ಡ್‌ಜುಮ್ಯಾನ್, “ಕಷ್ಟ, ಹಿಂಸೆ ಮತ್ತು ನಿರಂತರ ನಂಬಿಕೆಯ ಪರೀಕ್ಷೆಗಳ ಮಧ್ಯೆ ಕ್ರೈಸ್ತ ಏಕತೆ ಹೇಗೆ ಶುದ್ಧಗೊಳ್ಳುತ್ತದೆ ಎಂಬುದಕ್ಕೆ ಅರ್ಮೇನಿಯನ್ ಧರ್ಮಸಭೆ ಜೀವಂತ ಸಾಕ್ಷ್ಯವಾಗಿದೆ,” ಎಂದು ಹೇಳಿದರು.
ನಂಬಿಕೆ, ನಿರೀಕ್ಷೆ ಮತ್ತು ಕ್ರೈಸ್ತ ಸಮಾಗಮದ ಮೂಲಕ ಸಂಕಷ್ಟಗಳನ್ನು ಎದುರಿಸಿದ ಅನುಭವವು, ಜಾಗತಿಕ ಕ್ರೈಸ್ತ ಸಮುದಾಯಕ್ಕೆ ಮಹತ್ವದ ಆಧ್ಯಾತ್ಮಿಕ ಕೊಡುಗೆಯಾಗಿದೆ. ಇಂದಿನ ಜಗತ್ತು—ಯುದ್ಧ, ಅನ್ಯಾಯ, ಮಾನವ ಗೌರವದ ಹನನ, ಮತ್ತು ಅರ್ಥಶೂನ್ಯತೆಯಿಂದ ನರಳುತ್ತಿರುವ ಸಂದರ್ಭದಲ್ಲಿ—ಒಟ್ಟಾಗಿ ನಿಲ್ಲುವ ಕ್ರೈಸ್ತ ಸಾಕ್ಷ್ಯ ಅತ್ಯಂತ ಅಗತ್ಯವಾಗಿದೆ.
ಕ್ರಿಸ್ತನಲ್ಲಿ ಸಮಾನತೆ: ಏಕತೆಯ ಮೂಲ
“ಕ್ರೈಸ್ತ ಏಕತೆ ಎಂದರೆ ಪರಸ್ಪರ ಬೆಂಬಲಿಸುವ ಸಹೋದರತ್ವ. ಇದು ಹಿರಿಮೆ–ಕೀಳರಿಮೆ ಸಂಬಂಧವಲ್ಲ,” ಎಂದು ವಂದನೀಯ ಗುರು ಹಂಬರ್ಡ್‌ಜುಮ್ಯಾನ್ ಹೇಳಿದರು. ಕ್ರಿಸ್ತನಲ್ಲಿ ಎಲ್ಲರೂ ಸಮಾನರು; ಈ ಸಮಾನತೆಯ ಮೇಲೆ ನಿರ್ಮಿತವಾದ ಏಕತೆಯೇ ಸತ್ಯವಾದ ಏಕತೆ ಎಂದು ಅವರು ಹೇಳಿದರು.
ಆದರೆ ಇಂತಹ ಏಕತೆ ತಾನಾಗಿಯೇ ಉಂಟಾಗುವುದಿಲ್ಲ. ಅದಕ್ಕೆ ನಿರಂತರ ಪ್ರಾರ್ಥನೆ, ಸತ್ಯಸಂಧ ಸಂವಾದ ಮತ್ತು ಬದ್ಧತೆ ಅಗತ್ಯ. “ಈ ಬದ್ಧತೆ ಆಯ್ಕೆಯ ವಿಷಯವಲ್ಲ; ಇದು ಕ್ರೈಸ್ತ ಕರ್ತವ್ಯ,” ಎಂದು ಅವರು ಗಂಭೀರವಾಗಿ ಹೇಳಿದರು.
ಸಹೋದರತ್ವದ ಸಹಯೋಗದ ದಾರಿ
ಕ್ರೈಸ್ತ ಏಕತಾ ಪ್ರಾರ್ಥನಾ ವಾರದ ಸಂದರ್ಭದಲ್ಲಿ, ವಿಶ್ವ ಕ್ರೈಸ್ತ ಮಂಡಳಿ, ರೋಮನ್ ಕಥೋಲಿಕ ಧರ್ಮಸಭೆ, ಹಾಗೂ ಇತರ ಕ್ರೈಸ್ತ ಸಮುದಾಯಗಳೊಂದಿಗೆ ಸಹೋದರತ್ವದ ಸಹಯೋಗವನ್ನು ಗಟ್ಟಿಗೊಳಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.
ಇದು ಯಾವುದೇ ಧರ್ಮಸಭೆಯ ವೈಶಿಷ್ಟ್ಯವನ್ನು ಅಳಿಸಿಹಾಕುವ ಪ್ರಯತ್ನವಲ್ಲ. ಬದಲಾಗಿ, ಇಂದಿನ ಜಗತ್ತಿನ ಸವಾಲುಗಳ ನಡುವೆ, ಪರಸ್ಪರ ಪ್ರೀತಿ, ಗೌರವ ಮತ್ತು ಸೇವೆಯ ಮನೋಭಾವವನ್ನು ಬಲಪಡಿಸುವುದೇ ಇದರ ಗುರಿಯಾಗಿದೆ.
ಕ್ರೈಸ್ತ ಏಕತಾ ಪ್ರಾರ್ಥನಾ ವಾರದಂತಹ ಆಧ್ಯಾತ್ಮಿಕ ಮುಂದಾಳತ್ವಗಳು, ಧರ್ಮಸಭೆಗಳು ಕ್ರಿಸ್ತನಲ್ಲಿ ಇನ್ನಷ್ಟು ಸಮೀಪವಾಗಲು, ಪರಸ್ಪರ ಅರಿತುಕೊಳ್ಳಲು ಮತ್ತು ಒಂದೇ ಸಾಕ್ಷ್ಯವನ್ನು ಲೋಕಕ್ಕೆ ನೀಡಲು ಅವಕಾಶ ಒದಗಿಸುತ್ತವೆ. “ಬೇರೆ ಸಂಪ್ರದಾಯದ ಕ್ರೈಸ್ತರು ಒಟ್ಟಾಗಿ ಪ್ರಾರ್ಥಿಸುವಾಗ, ನಾವು ವಿಭಿನ್ನರಾಗಿದ್ದರೂ ಒಂದೇ ಆತ್ಮದಲ್ಲಿ ಬಂಧಿತರಾಗಿದ್ದೇವೆ ಎಂಬ ಸತ್ಯ ಸ್ಪಷ್ಟವಾಗುತ್ತದೆ,” ಎಂದು ವಂದನೀಯ ಗುರು ಹಂಬರ್ಡ್‌ಜುಮ್ಯಾನ್ ಹೇಳಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).