ಹುಡುಕಿ

CUBA-US-DIPLOMACY-OIL-FUEL-SHORTAGE CUBA-US-DIPLOMACY-OIL-FUEL-SHORTAGE  (AFP or licensors)

ಕ್ಯೂಬಾದ ಧರ್ಮಾಧ್ಯಕ್ಷರು: ಕ್ಯೂಬಾಗೆ ತೈಲ ಸರಬರಾಜು ಕಡಿತವಾದರೆ ಅರಾಜಕತೆ ಮತ್ತು ಹಿಂಸಾಚಾರದ ಅಪಾಯ

ತೀವ್ರಗೊಳ್ಳುತ್ತಿರುವ ಸಂಕಷ್ಟದ ನಡುವೆ, ಕ್ಯೂಬಾಗೆ ತೈಲ ಪೂರೈಸುವ ದೇಶಗಳ ಮೇಲೆ ತೆರಿಗೆ ವಿಧಿಸುವುದಾಗಿ ಬೆದರಿಕೆ ಹಾಕುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿದ ಕಾರ್ಯಾದೇಶದ ಹಿನ್ನೆಲೆಯಲ್ಲಿ, ಕ್ಯೂಬಾದ ಕಥೋಲಿಕ ಧರ್ಮಾಧ್ಯಕ್ಷರು ಸಮಾಜದಲ್ಲಿ ಹೆಚ್ಚುತ್ತಿರುವ ದುಃಖ, ಅರಾಜಕತೆ ಮತ್ತು ಹಿಂಸಾಚಾರದ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ವ್ಯಾಟಿಕನ್ ವರದಿ

“ ಸೌಹಾರ್ದಯುತ ಸರ್ವ ಕ್ಯೂಬಾದ ಧರ್ಮಾಧ್ಯಕ್ಷರು ದೇಶದಲ್ಲಿ ತೀವ್ರಗೊಳ್ಳುತ್ತಿರುವ ಸಾಮಾಜಿಕ, ಆರ್ಥಿಕ ಹಾಗೂ ಮಾನವೀಯ ಪರಿಸ್ಥಿತಿಯ ಕುರಿತು ಆಳವಾದ ಚಿಂತೆ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಕ್ಯೂಬಾದ ಇಂಧನ ಸರಬರಾಜಿಗೆ ಸಂಬಂಧಿಸಿದ ಇತ್ತೀಚಿನ ನಿರ್ಧಾರಗಳ ಹಿನ್ನೆಲೆ, ಸಮಾಜ ಮತ್ತಷ್ಟು ಕುಸಿತದ ದಿಕ್ಕಿಗೆ ಸಾಗುವ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದಾರೆ.

“ಒಂದೇ ಜನಾಂಗದ ಮಕ್ಕಳ ನಡುವೆ ಅರಾಜಕತೆ ಮತ್ತು ಹಿಂಸಾಚಾರ ಉಂಟಾಗುವ ಅಪಾಯ ನಿಜವಾದದ್ದೇ,” ಎಂದು ಅವರು ಬರೆಯುತ್ತಾರೆ. ಇಂತಹ ಸ್ಥಿತಿಯಲ್ಲಿ ಸಂತೋಷಪಡಲು ಯಾವುದೇ ಸೌಹಾರ್ದಯುತ ಕ್ಯೂಬಾದ ಜನರಿಗೆ ಸಾಧ್ಯವಿಲ್ಲ ಎಂದು ಅವರು ಒತ್ತಿಹೇಳಿದ್ದಾರೆ.

2026ರ ಜನವರಿ 31, ಶನಿವಾರ ಬಿಡುಗಡೆಗೊಂಡ ಸಂದೇಶದಲ್ಲಿ, ಧರ್ಮಾಧ್ಯಕ್ಷರು ದ್ವೀಪವ್ಯಾಪಿ ಜನರ ಮನಸ್ಸಿನಲ್ಲಿ ಇರುವ ಭಾವನೆಯನ್ನು ವ್ಯಕ್ತಪಡಿಸುತ್ತಾ: “ಇತರರ ನೋವನ್ನು ಗಮನವಿಟ್ಟು, ಗೌರವದಿಂದ ಕೇಳುವ ಯಾರಿಗಾದರೂ, ಪರಿಸ್ಥಿತಿ ಸರಿಯಾಗಿಲ್ಲ, ನಾವು ಹೀಗೆಯೇ ಮುಂದುವರಿಯಲು ಸಾಧ್ಯವಿಲ್ಲ ಎಂಬ ಧ್ವನಿ ನಿರಂತರವಾಗಿ ಕೇಳುತ್ತದೆ.”

ಈ ಮನವಿ ಸಮಾಜದ ಎಲ್ಲರಿಗೂ ಅನ್ವಯಿಸುತ್ತದೆ ಎಂದು ಅವರು ಹೇಳಿದ್ದಾರೆ. ಆದರೆ, “ದೇಶದ ಹಿತಕ್ಕಾಗಿ ನಿರ್ಧಾರಗಳನ್ನು ಕೈಗೊಳ್ಳುವ ಅತ್ಯಧಿಕ ಜವಾಬ್ದಾರಿ ಹೊಂದಿರುವವರ  ವಿಶೇಷ ಹೊಣೆಗಾರಿಕೆಯಾಗಿದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಳೆದ ಜೂನ್‌ನಲ್ಲಿ ಜ್ಯೂಬಿಲಿ ವರ್ಷದ ಅಂಗವಾಗಿ ನೀಡಿದ್ದ ಮನವಿಯನ್ನು ಸ್ಮರಿಸಿ, ಧರ್ಮಾಧ್ಯಕ್ಷರು ಈಗಿನ ವಾಸ್ತವ್ಯ “ನೋವುತುಂಬಿದ ಹಾಗೂ ತುರ್ತು” ಸ್ವರೂಪದಲ್ಲೇ ಉಳಿದಿದೆ ಎಂದು ಹೇಳಿದ್ದಾರೆ. ವಾಸ್ತವವಾಗಿ, ಪರಿಸ್ಥಿತಿ ಸುಧಾರಿಸುವ ಬದಲು ಮತ್ತಷ್ಟು ಹದಗೆಟ್ಟಿದ್ದು, ಜನರಲ್ಲಿ ಆತಂಕ ಮತ್ತು ನಿರಾಶೆ ಇನ್ನಷ್ಟು ಗಾಢವಾಗಿದೆ ಎಂದು ಅವರು ಹೇಳಿದ್ದಾರೆ.

ಬಾಹ್ಯ ಒತ್ತಡ ಮತ್ತು ಸಾಮಾಜಿಕ ಅಪಾಯ

“ಇತ್ತೀಚಿನ ಸುದ್ದಿಗಳಲ್ಲಿ, ದೇಶಕ್ಕೆ ತೈಲ ಪ್ರವೇಶಿಸುವ ಯಾವುದೇ ಸಾಧ್ಯತೆಯನ್ನೂ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ ಎಂಬ ಘೋಷಣೆಗಳು—ವಿಶೇಷವಾಗಿ ಅತಿ ದುರ್ಬಲ ವರ್ಗಗಳಿಗಾಗಿ—ಗಂಭೀರ ಎಚ್ಚರಿಕೆಯ ಗಂಟೆಗಳನ್ನು ಮೊಳಗಿಸಿವೆ,” ಎಂದು ಧರ್ಮಾಧ್ಯಕ್ಷರು ಬರೆಯುತ್ತಾರೆ. “ಒಂದೇ ಜನಾಂಗದ ಮಕ್ಕಳ ನಡುವೆ ಸಾಮಾಜಿಕ ಅರಾಜಕತೆ ಮತ್ತು ಹಿಂಸಾಚಾರದ ಅಪಾಯ ನಿಜವಾಗಿಯೂ ಇದೆ. ಸಹೃದಯಿ ಯಾವುದೇ ಕ್ಯೂಬಾದ ನಾಗರೀಕ ಇದನ್ನು ಸ್ವಾಗತಿಸುವುದಿಲ್ಲ.”

ಈ ಹಿನ್ನೆಲೆಯಲ್ಲೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕ್ಯೂಬಾ ಅಮೆರಿಕದ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಗೆ ಅಪಾಯವೆಂದು ಪರಿಗಣಿಸಿ, ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಕಾರ್ಯನಿರ್ವಹಣಾ ಆದೇಶಕ್ಕೆ ಸಹಿ ಹಾಕಿದ್ದಾರೆ. ಈ ಆದೇಶವು ಕ್ಯೂಬಾಕ್ಕೆ ನೇರವಾಗಿಯಾದರೂ ಪರೋಕ್ಷವಾಗಿಯಾದರೂ ತೈಲ ಅಥವಾ ತೈಲ ಉತ್ಪನ್ನಗಳನ್ನು ಪೂರೈಸುವ ಯಾವುದೇ ದೇಶದಿಂದ ಆಗುವ ಆಮದುಗಳ ಮೇಲೆ ಹೆಚ್ಚುವರಿ ಸುಂಕಗಳನ್ನು ವಿಧಿಸಲು ಅಮೆರಿಕ ಸರ್ಕಾರಕ್ಕೆ ಅವಕಾಶ ನೀಡುತ್ತದೆ. ಇದರ ಉದ್ದೇಶ ದ್ವೀಪ ರಾಷ್ಟ್ರದ ಶಕ್ತಿಯ ಪ್ರವೇಶವನ್ನು ಕಡಿತಗೊಳಿಸಿ, ಹವಾನಾ ಸರ್ಕಾರದ ಮೇಲೆ ಒತ್ತಡ ಹೆಚ್ಚಿಸುವುದಾಗಿದೆ. ಕ್ಯೂಬಾ ಆಡಳಿತವು ಅಮೆರಿಕಕ್ಕೆ ವಿರೋಧಿ ರಾಷ್ಟ್ರಗಳು ಮತ್ತು ಗುಂಪುಗಳೊಂದಿಗೆ ಸಹಕರಿಸುತ್ತಿದ್ದು, ಇದು ಅಸಾಮಾನ್ಯ ಮತ್ತು ಗಂಭೀರ ಅಪಾಯವನ್ನುಂಟುಮಾಡುತ್ತದೆ ಎಂದು ಶ್ವೇತ ಭವನ(ವೈಟ್ ಹೌಸ್) ವಾದಿಸುತ್ತದೆ.

ಈ ಸಂದರ್ಭದಲ್ಲೇ ಧರ್ಮಾಧ್ಯಕ್ಷರು ತಮ್ಮ ದೃಢ ಹಾಗೂ ಧಾರ್ಮಿಕ ಮನವಿಯನ್ನು ಹೊರಡಿಸಿದ್ದಾರೆ. “ಕ್ಯೂಬಾಕ್ಕೆ ತುರ್ತಾಗಿ ಬದಲಾವಣೆ ಅಗತ್ಯವಿದೆ. ಇನ್ನಷ್ಟು ಯಾತನೆ ಅಥವಾ ದುಃಖವನ್ನು ಸಹಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ. ವಿಶೇಷವಾಗಿ ಬಡವರು, ವೃದ್ಧರು, ರೋಗಿಗಳು ಮತ್ತು ಮಕ್ಕಳು ಮತ್ತೆ ಹೊಸ ನೋವು ಮತ್ತು ಕಷ್ಟಗಳಿಗೆ ಒಳಗಾಗದಂತೆ ನೋಡಿಕೊಳ್ಳಬೇಕೆಂದು ಅವರು ಕರೆ ನೀಡುತ್ತಾರೆ. 1998ರಲ್ಲಿ ಸಂತ ದ್ವಿತೀಯ ಜಾನ್ ಪಾಲರು ದ್ವೀಪಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಡಿದ ಎಚ್ಚರಿಕೆಯನ್ನು ಸ್ಮರಿಸುತ್ತಾ, “ಪ್ರತ್ಯೇಕತೆ ಜನಸಂಖ್ಯೆಯನ್ನು ವಿಭೇದವಿಲ್ಲದೆ ಪ್ರಭಾವಿಸುತ್ತದೆ ಮತ್ತು ಅದರ ಭಾರವು ಅತಿ ದುರ್ಬಲರ ಮೇಲೇ ಹೆಚ್ಚು ಬೀಳುತ್ತದೆ” ಎಂದು ಅವರು ಉಲ್ಲೇಖಿಸಿದ್ದಾರೆ.

ಸಂವಾದ, ಮಾನವ ಘನತೆ ಮತ್ತು ಸಾಮಾನ್ಯ ಹಿತ

ಪವಿತ್ರ ಪೀಠದ  ಬೋಧನೆಗೆ ಅನುಗುಣವಾಗಿ, ಸಂಘರ್ಷಗಳನ್ನು ಸದಾ ಸಂವಾದ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕವೇ ಪರಿಹರಿಸಬೇಕು, ಬಲವಂತದ ಮೂಲಕ ಅಲ್ಲ ಎಂದು ಧರ್ಮಾಧ್ಯಕ್ಷರು ಉಲ್ಲೇಖಿಸಿದ್ದಾರೆ. “ಜನರು ಪರಸ್ಪರ ಮಾತನಾಡುವುದರ ಮೂಲಕವೇ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುತ್ತಾರೆ,” ಎಂದು ಅವರು ಬರೆಯುತ್ತಾ, ಸದಾಶಯವಿದ್ದಲ್ಲಿ ಸತ್ಯ, ನ್ಯಾಯ ಮತ್ತು ಶಾಂತಿಯ ಕಡೆಗೆ ದಾರಿಗಳನ್ನು ಕಂಡುಹಿಡಿಯುವುದು ಸದಾ  ಸಾಧ್ಯವೆಂದು ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಅದೇ ವೇಳೆ, ದೇಶದ ಒಳಗಿನ ಜನರ ಮಾನವ ಘನತೆ ಮತ್ತು ಸ್ವಾತಂತ್ರ್ಯ ಬಾಹ್ಯ ಸಂಘರ್ಷಗಳ ಮೇಲೆ ಅವಲಂಬಿತವಾಗಿರಬಾರದೆಂದು ಅವರು ಒತ್ತಿಹೇಳುತ್ತಾರೆ. ಗೌರವ, ಬಹುಮತತ್ವ (pluralism) ಮತ್ತು ಭಾಗವಹಿಸುವಿಕೆಯ ವಾತಾವರಣವು ರಾಷ್ಟ್ರವನ್ನು ದುರ್ಬಲಗೊಳಿಸುವುದಿಲ್ಲ; ಬದಲಾಗಿ ಅಂತರರಾಷ್ಟ್ರೀಯ ಒತ್ತಡಗಳನ್ನು ಶಮನಗೊಳಿಸಲು ಸಹಕಾರಿಯಾಗುತ್ತದೆ ಎಂದು ಅವರು ನೆನಪಿಸಿದ್ದಾರೆ.

ಸಂತ ದ್ವಿತೀಯ ಜಾನ್ ಪಾಲರ ಮಾತುಗಳನ್ನು ಸ್ಮರಿಸುತ್ತಾ, ಧರ್ಮಾಧ್ಯಕ್ಷರು “ವಿಶ್ವವು ಕ್ಯೂಬಾಕ್ಕೆ ತೆರೆದುಕೊಳ್ಳಬೇಕು” ಎಂಬುದರ ಜೊತೆಗೆ, “ಕ್ಯೂಬಾ ತನ್ನದೇ ಜನರತ್ತ ತೆರೆದುಕೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ.

ಭರವಸೆಯ ಸೇವೆಯಲ್ಲಿ ಧರ್ಮಸಭೆ

ಕಥೋಲಿಕ ಧರ್ಮಸಭೆ ತನ್ನ ಸೇವೆಯ ಭಾಗವಾಗಿ ಪ್ರಾರ್ಥನೆ, ಸುವಾರ್ತೆಯ ಘೋಷಣೆ ಮತ್ತು ವಿಶೇಷವಾಗಿ ಅತಿ ದುರ್ಬಲರಿಗೆ ಸೇವೆ ಸಲ್ಲಿಸುವ ಕಾರ್ಯದಲ್ಲಿ ಕ್ಯೂಬಾ ಜನರೊಂದಿಗೆ ಮುಂದುವರಿದು ನಿಲ್ಲುವುದಾಗಿ ಧರ್ಮಾಧ್ಯಕ್ಷರು ನುಡಿದಿದ್ದಾರೆ. ಅಗತ್ಯವಿದ್ದಲ್ಲಿ, ಸಾಮಾನ್ಯ ಹಿತಕ್ಕಾಗಿ ಸಂವಾದ ಮತ್ತು ಸಹಕಾರಕ್ಕೆ ವೇದಿಕೆಗಳನ್ನು ನಿರ್ಮಿಸಲು ಸಹಾಯ ಮಾಡುವ ತಮ್ಮ ಸಿದ್ಧತೆಯನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ತಮ್ಮ ಅಧಿಕಾರಾವಧಿಯ ಆರಂಭದಲ್ಲಿ  “ಇದು ಪ್ರೀತಿಯ ಸಮಯ!” ಎಂದು ನೀಡಿದ ಕರೆಯನ್ನು ಧರ್ಮಾಧ್ಯಕ್ಷರು ಸ್ಮರಿಸಿದರು. ಕ್ಯೂಬಾ ಜನರ ತಾಯಿ ಕರುಣಾ ಮಾತೆಯ (Our Lady of Charity) ಮಧ್ಯಸ್ಥಿಕೆಗೆ ದೇಶವನ್ನು ಒಪ್ಪಿಸುತ್ತಾ, ಅವರು ಅಂತಿಮವಾಗಿ “ತಾರ್ಕಿಕತೆ ಮತ್ತು ಸದುದ್ದೇಶ ಮೇಲುಗೈ ಸಾಧಿಸಲಿ; ಈ ಭೂಮಿಯ ಎಲ್ಲಾ ಪುತ್ರರು ಮತ್ತು ಪುತ್ರಿಯರು “ಶಾಂತಿಯಲ್ಲಿ, ಗೌರವದೊಂದಿಗೆ, ಮತ್ತು ಭರವಸೆಯೊಂದಿಗೆ ಇಲ್ಲಿ ಸಂತೋಷವಾಗಿ ಬದುಕಲು ಸಾಧ್ಯವಾಗಲಿ” ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

31 ಜನವರಿ 2026, 12:54