ಹುಡುಕಿ

2026.01.22 Bossey 2026 2026.01.22 Bossey 2026  

ಸಾರ್ವತ್ರಿಕತೆ ಹಾಗೂ ಇದರ ದೀರ್ಘಕಾಲೀನ ಸರಣಿ ಪ್ರತಿಕ್ರಿಯೆ

ಭಾರತದಿಂದ ರೋಮ್‌ವರೆಗೆ ಸಾಗಿ,ಬೋಸ್ಸೆ ಸರ್ವಕ್ರೈಸ್ತ ಏಕತಾ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿರುವ ಯುವ ಉಪಯಾಜಕರೊಬ್ಬರು, ಕ್ರೈಸ್ತ ಏಕತೆಯ ಅರ್ಥ, ಅದರ ಸಾಮಾಜಿಕ ನ್ಯಾಯದ ಹೊಣೆಗಾರಿಕೆ ಮತ್ತು ವಿಭಜನೆಯಿಂದ ಬಳಲುತ್ತಿರುವ ಜಗತ್ತಿನಲ್ಲಿ ಅದರ ದೀರ್ಘಕಾಲಿಕ ಪ್ರಭಾವದ ಬಗ್ಗೆ ಚಿಂತನೆಯನ್ನು ಹಂಚಿಕೊಂಡಿದ್ದಾರೆ.

ವರದಿ: ಫ್ರಾನ್ಸೆಸ್ಕಾ ಮೆರ್ಲೊ

ಭಾರತದಿಂದ ರೋಮ್‌ವರೆಗೆ ಕ್ರೈಸ್ತ ಏಕತೆಯ ಹುಡುಕಾಟ

ಕ್ರೈಸ್ತ ಏಕತೆಯ ಪ್ರಾರ್ಥನಾ ವಾರದ ಸಂದರ್ಭದಲ್ಲಿ ರೋಮ್ ನಗರದಲ್ಲಿ ಸಾರ್ವತ್ರಿಕತೆ ದಿನನಿತ್ಯದ ಬದುಕಿನ ಭಾಗವಾಗುತ್ತದೆ. ಶಾಶ್ವತ ನಗರವೆಂದೇ ಪ್ರಸಿದ್ಧಿಯಾದ ರೋಮ್‌ನ ಬೀದಿಗಳು ವಿವಿಧ ಕ್ರೈಸ್ತ ಪಂಥಗಳ ವಿಶ್ವಾಸಿಗಳಿಂದ ತುಂಬಿ, ಕ್ರೈಸ್ತ ಏಕತೆ ಜೀವಂತವಾಗಿ ಕಾಣಿಸುತ್ತದೆ.

ಈ ವಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದವರಲ್ಲಿ, ಭಾರತದಿಂದ ಆಗಮಿಸಿದ್ದ 29 ವರ್ಷದ ಯುವ ಉಪಯಾಜಕ ಏಬೆಲ್ ಪುನ್ನೂಸ್ ಕೂಡ ಇದ್ದರು. ಇವರು ಬಿಲೀವರ್ಸ್ ಈಸ್ಟರ್ನ್ ಸಭೆಯ ಸದಸ್ಯರಾಗಿದ್ದು, ವಿಶ್ವ ಧರ್ಮಸಭೆಗಳ ಮಂಡಳಿಗೆ ಸೇರಿದ ಸಾರ್ವತ್ರಿಕ ಕ್ರೈಸ್ತ ಸಂಸ್ಥೆ (Ecumenical Institute) ಯ ಪ್ರತಿನಿಧಿ ತಂಡದೊಂದಿಗೆ ರೋಮ್‌ಗೆ ಭೇಟಿ ನೀಡಿದ್ದರು.

ಒಂದು ವಾರದ ಕಾಲ ಈ ತಂಡ ಕಥೋಲಿಕ ಧರ್ಮಸಭೆಯ ಜೀವನವನ್ನು ಹತ್ತಿರದಿಂದ ಅನುಭವಿಸಿತು. ಕಾರ್ಡಿನಲ್‌ಗಳೊಂದಿಗೆ ಭೇಟಿಗಳು, ಸಂಯುಕ್ತ ಪ್ರಾರ್ಥನೆಗಳು ಮತ್ತು ಕ್ರೈಸ್ತ ಸಮುದಾಯಗಳನ್ನು ಇನ್ನೂ ವಿಭಜಿಸುವ ಭಿನ್ನತೆಗಳ ಕುರಿತು ಮುಕ್ತ ಸಂವಾದಗಳು ಈ ಅನುಭವದ ಭಾಗವಾಗಿದ್ದವು.

“ಇದು ಕ್ರೈಸ್ತ ಏಕತೆಯ ಪ್ರಾರ್ಥನಾ ವಾರ. ನಾವು ಇಲ್ಲಿ ಬಂದಿರುವುದು ಭಿನ್ನತೆಗಳನ್ನು ಗುರುತಿಸಲು ಮಾತ್ರವಲ್ಲ, ಏಕತೆಯತ್ತ ಜಾಣ್ಮೆಯಿಂದ ನಡೆಯಲು,” ಎಂದು ಏಬೆಲ್ ವಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಏಬೆಲ್ ಅವರ ಮಾತಿನಂತೆ, ಸಾರ್ವತ್ರಿಕ ಕ್ರೈಸ್ತ ಸಂಸ್ಥೆ ಕೇವಲ ಶೈಕ್ಷಣಿಕ ಕೇಂದ್ರವಲ್ಲ; ಅದು ಸಾರ್ವತ್ರಿಕತೆಯನ್ನು ದಿನನಿತ್ಯದ ಬದುಕಾಗಿ ಅನುಭವಿಸುವ ಸ್ಥಳ. ವಿಭಿನ್ನ ದೇಶಗಳು, ಸಂಪ್ರದಾಯಗಳು ಮತ್ತು ಧಾರ್ಮಿಕ ಹಿನ್ನೆಲೆಗಳಿಂದ ಬಂದ ವಿದ್ಯಾರ್ಥಿಗಳು ತರಗತಿಗಳಷ್ಟೇ ಅಲ್ಲದೆ, ಊಟ, ಪ್ರಾರ್ಥನೆ ಮತ್ತು ಸಾಮಾನ್ಯ ಜೀವನವನ್ನೂ ಹಂಚಿಕೊಳ್ಳುತ್ತಾರೆ. “ಆರಂಭದಲ್ಲಿ ವ್ಯತ್ಯಾಸಗಳು ಬಹಳ ಸ್ಪಷ್ಟವಾಗಿ ಕಾಣಿಸುತ್ತವೆ. ಆದರೆ ಕಾಲಕ್ರಮೇಣ, ವಿಭಜಿಸುವ ಅಂಶಗಳಿಗಿಂತ ಸಾಮ್ಯತೆಗಳೇ ಹೆಚ್ಚು ಎಂಬುದು ಅರಿವಿಗೆ ಬರುತ್ತದೆ,” ಎಂದು ಅವರು ಹೇಳಿದರು.

ಅವರ ಪ್ರಕಾರ, ಪ್ರಾರ್ಥನೆಯೇ ಏಕತೆಯತ್ತ ಸಾಗುವ ಪ್ರಮುಖ ತಿರುವು. “ಆಧ್ಯಾತ್ಮಿಕ ಜೀವನದಲ್ಲಿ ಒಟ್ಟಾಗಿ ಸೇರುವುದು ಏಕತೆಗೆ ಶಕ್ತಿ ನೀಡುತ್ತದೆ. ಇದು ಸುಲಭವಾದ ಪಯಣವಲ್ಲ; ಕಠಿಣ ದಿನಗಳೂ ಇರುತ್ತವೆ. ಆದರೆ ನಿಷ್ಠೆ ಮತ್ತು ನಿಜವಾದ ಉದ್ದೇಶ ಇದ್ದರೆ ಬದುಕಿನಲ್ಲೇ ಎಕ್ಯೂಮೆನಿಸಂ ಸಾಧ್ಯ,” ಎಂದರು.

ವಿಭಜಿತ ಕ್ರೈಸ್ತ ಧರ್ಮ – ವಿಭಜಿತ ಜಗತ್ತು

ಏಬೆಲ್ ಅವರ ಅಭಿಪ್ರಾಯದಲ್ಲಿ, ಕ್ರೈಸ್ತ ಏಕತೆ ಧರ್ಮಸಭೆಯ ಒಳಗಿನ ವಿಷಯಕ್ಕೆ ಮಾತ್ರ ಸೀಮಿತವಲ್ಲ. ಅದು ಜಗತ್ತಿನ ಮೇಲೆ ನೇರ ಪರಿಣಾಮ ಬೀರುತ್ತದೆ. ವಿಶ್ವ ಧರ್ಮಸಭೆಗಳ ಮಂಡಳಿಯ ಪ್ರಧಾನ ಕಾರ್ಯದರ್ಶಿ ವಂ. ಪ್ರೊ. ಡಾ. ಜೆರಿ ಪಿಲ್ಲೇ ಅವರ “ವಿಭಜಿತ ಕ್ರೈಸ್ತ ಧರ್ಮಕ್ಕೆ ವಿಭಜಿತ ಜಗತ್ತಿಗೆ ಹೇಳುವುದೇನೂ ಇಲ್ಲ” ಎಂಬ ಮಾತುಗಳನ್ನು ಅವರು ಸ್ಮರಿಸಿದರು.

ರಾಜಕೀಯ, ಜಾತಿ, ಸಿದ್ಧಾಂತ ಮತ್ತು ಭಿನ್ನತೆಯಿಂದ ಒಡೆದಿರುವ ಸಮಾಜಗಳಲ್ಲಿ ಕ್ರೈಸ್ತ ಸಾಕ್ಷ್ಯದ ವಿಶ್ವಾಸಾರ್ಹತೆ ಪ್ರತಿದಿನ ಪರೀಕ್ಷೆಗೆ ಒಳಗಾಗುತ್ತಿದೆ ಎಂದು ಅವರು ಹೇಳಿದರು. “ನಾವು ದೇವರ ರಾಜ್ಯದ ಭಾಗವೆಂದು ಹೇಳಿಕೊಳ್ಳುತ್ತಿದ್ದರೆ, ಅದು ನಮ್ಮ ಬದುಕಿನಲ್ಲಿ ಸ್ಪಷ್ಟವಾಗಿ ಗೋಚರಿಸಬೇಕು,” ಎಂದರು. ಮಾನವ ಸ್ವಾತಂತ್ರ್ಯ, ಸಹಾನುಭೂತಿ ಮತ್ತು ನೋವು ಅನುಭವಿಸುವವರ ಜೊತೆ ನಿಲ್ಲುವುದು ಎಲ್ಲ ಕ್ರೈಸ್ತ ಸಂಪ್ರದಾಯಗಳಲ್ಲಿಯೂ ಸಾಮಾನ್ಯ ಆದ್ಯತೆಗಳಾಗಿವೆ ಎಂದು ಅವರು ಹೇಳಿದರು.

ಭಾರತೀಯ ಹಿನ್ನೆಲೆ: ಏಕತೆ ನಮ್ಮೊಳಗಿನಿಂದಲೇ ಆರಂಭ

ಭಾರತದ ವಿಷಯದಲ್ಲಿ ಈ ಪ್ರಶ್ನೆಗಳು ಇನ್ನಷ್ಟು ವೈಯಕ್ತಿಕವಾಗುತ್ತವೆ ಎಂದು ಏಬೆಲ್ ಹೇಳಿದರು. ಸಂತ ತೋಮಸರ ಕಾಲದಿಂದಲೂ ಭಾರತದಲ್ಲಿ ಕ್ರೈಸ್ತ ಧರ್ಮದ ಇತಿಹಾಸವಿದೆ. ಆದರೂ ಕ್ರೈಸ್ತರು ಅಲ್ಪಸಂಖ್ಯಾತರಾಗಿದ್ದು, ಧರ್ಮಸಭೆಯ ಒಳಗೆಯೇ ವಿಭಜನೆಗಳು ಇನ್ನೂ ಮುಂದುವರಿದಿವೆ.

“ಕ್ರೈಸ್ತ ಸಮುದಾಯಗಳೊಳಗೆಯೇ ಜಾತಿಭೇದ ಇರುವುದು ಇನ್ನೂ ನೋವು ತಂದಿರುವ ವಿಷಯ,” ಎಂದು ಅವರು ಒಪ್ಪಿಕೊಂಡರು. “ನಾವು ನಮ್ಮೊಳಗಿನ ಅನ್ಯಾಯವನ್ನು ಸರಿಪಡಿಸದೇ ಇದ್ದರೆ, ಜಗತ್ತಿಗೆ ನೈತಿಕ ಸಾಕ್ಷಿಯಾಗಲು ಸಾಧ್ಯವಿಲ್ಲ.”

ಆದರೂ ಭಾರತದಲ್ಲಿ ಶಿಕ್ಷಣ, ಸಾಮಾಜಿಕ ನ್ಯಾಯ ಮತ್ತು ಬಡತನ ನಿವಾರಣೆಯಲ್ಲಿ ಧರ್ಮಸಭೆಯ ಪಾತ್ರವನ್ನು ಅವರು ಗುರುತಿಸಿದರು. “ಬಹಳಷ್ಟು ಕೆಲಸವಾಗಿದೆ, ಆದರೆ ಇನ್ನೂ ಬಹಳ ಮಾಡಬೇಕಿದೆ. ಯುವಕರು ಜವಾಬ್ದಾರಿ ಹೊತ್ತು ನೋವಿನ ಸ್ಥಳಗಳಿಗೆ ಹೋಗಿ ನಿಲ್ಲಬೇಕು,” ಎಂದು ಅವರು ಹೇಳಿದರು.

ಜಗದ್ಗುರುಗಳೊಂದಿಗೆ ಸ್ಮರಣೀಯ ಕ್ಷಣ

ಈ ಭೇಟಿಯಲ್ಲಿ ಏಬೆಲ್ ಅವರ ಮನಸ್ಸಿನಲ್ಲಿ ವಿಶೇಷವಾಗಿ ಉಳಿದ ಕ್ಷಣವೆಂದರೆ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ  ಅವರನ್ನು ಭೇಟಿಯಾದ ಸಂದರ್ಭ.

“ಅವರು ನೇರವಾಗಿ ನಮ್ಮ ಮುಂದೆ ನಿಂತು ನಮ್ಮ ಆರೋಗ್ಯ ವಿಚಾರಿಸಿದರು. ಸಮಯ ತೆಗೆದುಕೊಂಡು ಮಾತನಾಡಿದರು. ಅವರ ವಿನಯ ನನ್ನ ಮನಸ್ಸಿನಲ್ಲಿ ಆಳವಾಗಿ ಉಳಿಯಿತು,” ಎಂದು ಏಬೆಲ್ ಹೇಳಿದರು.

“ಅವರ ಸ್ಥಾನದಲ್ಲಿರುವ ವ್ಯಕ್ತಿಗೆ ಅಂಥ ಸರಳತೆ ಅಗತ್ಯವಿರಲಿಲ್ಲ. ಆದರೆ ಅವರು ಅದನ್ನು ತೋರಿಸಿದರು. ಭವಿಷ್ಯದಲ್ಲಿ ನನಗೆ ಯಾವ ಜವಾಬ್ದಾರಿ ಬಂದರೂ, ಅವರಂತೆಯೇ ವಿನಯದಿಂದ ಇರಬೇಕು ಎಂಬ ಪಾಠವನ್ನು ನಾನು ನನ್ನೊಂದಿಗೆ ಕೊಂಡೊಯ್ಯುತ್ತೇನೆ,” ಎಂದರು.

ಸಣ್ಣ ಹೆಜ್ಜೆಗಳು – ದೀರ್ಘ ಪರಿಣಾಮ

ಕ್ರೈಸ್ತ ಏಕತೆ ತಮ್ಮ ಜೀವನಕಾಲದಲ್ಲಿ ಸಂಪೂರ್ಣವಾಗಿ ಕಾಣಿಸಿಕೊಳ್ಳದಿರಬಹುದು ಎಂಬ ವಾಸ್ತವವನ್ನು ಏಬೆಲ್ ಒಪ್ಪಿಕೊಂಡರು. ಆದರೆ ಅದು ನಿರಾಶೆಗೆ ಕಾರಣವಲ್ಲ ಎಂದು ಅವರು ಹೇಳಿದರು.

“ನಮ್ಮ ಸಣ್ಣ ಪರಿಸರದಲ್ಲಿ ಪ್ರತಿಯೊಬ್ಬರೂ ಏಕತೆಗೆ ಕೆಲಸ ಮಾಡಿದರೆ, ಅದರ ಅಲೆಗಳು ದೂರವರೆಗೆ ತಲುಪುತ್ತವೆ,” ಎಂದು ಅವರು ಹೇಳಿದರು. ಬದುಕಿನಲ್ಲೇ ಅನುಸರಿಸಲ್ಪಡುವ ಸಾರ್ವತ್ರಿಕತೆ ಶಬ್ದ ಮಾಡದೆ, ಆದರೆ ದೀರ್ಘಕಾಲ ಉಳಿಯುವ ಶಕ್ತಿಯಾಗಿ ಕೆಲಸ ಮಾಡುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.


ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

22 ಜನವರಿ 2026, 20:39