ಹುಡುಕಿ

People affected by a deadly train derailment are transferred and treated at the Caseta Municipal in the town of Adamuz People affected by a deadly train derailment are transferred and treated at the Caseta Municipal in the town of Adamuz 

ಸ್ಪೇನ್ ರೈಲು ದುರಂತ: ದುರಂತದಿಂದ ತತ್ತರಿಸಿದವರಿಗೆ ಧರ್ಮಕೇಂದ್ರದ ಆಶ್ರಯ

ವಂದನೀಯ ಗುರು ರಾಫೆಲ್ ಪ್ರಾಡೋಸ್ ಅವರು ಸ್ಪೇನ್‌ನ ರೈಲು ದುರಂತದಿಂದ ತತ್ತರಿಸಿದವರಿಗೆ ಜೊತೆಯಾಗಲು, ರಾತ್ರಿಯಿಡೀ ಬಾಗಿಲು ತೆರೆದಿಟ್ಟ ಆದಮೂಸ್‌ನ ಸಂತ ಅಂದ್ರೇಯ ಧರ್ಮಕೇಂದ್ರದ ಸೇವೆಯ ಕುರಿತು ವ್ಯಾಟಿಕನ್ ಸುದ್ದಿ ಸಂಸ್ಥೆಗೆ ವಿವರಿಸಿದ್ದಾರೆ.

ಲೇಖನ: ರೆನಾಟೋ ಮಾರ್ಟಿನೆಝ್

ಸ್ಪೇನ್‌ನ ದಕ್ಷಿಣ ಭಾಗದ ಆದಮೂಸ್‌ನಲ್ಲಿ ಸಂಭವಿಸಿದ ಪ್ರಾಣಹಾನಿಕರ ರೈಲು ಅಪಘಾತದ ನಂತರ, ಸಂತ ಅಂದ್ರೇಯ ಧರ್ಮಕೇಂದ್ರ ಬದುಕುಳಿದವರಿಗೂ ಕುಟುಂಬಗಳಿಗೂ ಆಶ್ರಯವಾಗಿದ್ದು, ಧರ್ಮಕೇಂದ್ರದ ಬಾಗಿಲುಗಳನ್ನು ರಾತ್ರಿಯಿಡೀ ತೆರೆದಿಟ್ಟು, ಸಂತ್ರಸ್ತರ ಪಕ್ಕದಲ್ಲೇ ನಿಂತಿದ್ದಾರೆ ವಂದನೀಯ ಗುರು ರಾಫೆಲ್ ಪ್ರಾಡೋಸ್.

ಆದಮೂಸ್ (ಕೋರ್ಡೊಬಾ) ದುರಂತದ ಎರಡು ದಿನಗಳ ಬಳಿಕವೂ, ತುರ್ತು ಸೇವಾ ತಂಡಗಳು ರಕ್ಷಣಾ ಕಾರ್ಯಾಚರಣೆ ಹಾಗೂ ಮೃತರ ಗುರುತಿಸುವಿಕೆಯನ್ನು ಮುಂದುವರಿಸಿವೆ. ಅಧಿಕಾರಿಗಳು, 41 ಮಂದಿ ಮೃತರು, 43 ಮಂದಿ ಕಾಣೆಯಾಗಿದ್ದಾರೆ ಎಂಬ ವರದಿಗಳು, ಮತ್ತು 39 ಮಂದಿ ಆಸ್ಪತ್ರೆಗೆ ದಾಖಲು, ಅವರಲ್ಲಿ 13 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದೃಢಪಡಿಸಿದ್ದಾರೆ.

ಸೋಮವಾರ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಮೃತರಿಗೂ ಅವರ ಕುಟುಂಬಗಳಿಗೂ ತಮ್ಮ ಸಂತಾಪವನ್ನು ಕಳುಹಿಸಿದ್ದಾರೆ.

ವ್ಯಾಟಿಕನ್ ಸುದ್ದಿ ಸಂಸ್ಥೆಗೆ ಮಾತನಾಡಿದ ವಂದನೀಯ ಗುರು ಪ್ರಾಡೋಸ್, ದುರಂತದ ಗಂಭೀರತೆ ಅರಿವಾದ ಕ್ಷಣದಲ್ಲೇ ಧರ್ಮಕೇಂದ್ರವು ಪೀಡಿತರ ನೆರವಿಗೆ ಧಾವಿಸಿದೆ ಎಂದು ತಿಳಿಸಿದರು. ಧರ್ಮಕೇಂದ್ರದ ಸಿಬ್ಬಂದಿ ಹಾಗೂ ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ, ಬದುಕುಳಿದವರನ್ನು ಸ್ವೀಕರಿಸಲು ಧರ್ಮಕೇಂದ್ರದ ಸೌಲಭ್ಯಗಳನ್ನು ತೆರೆದಿಟ್ಟರು.

“ಅಪಘಾತದ ವಿಷಯ ತಿಳಿದ ತಕ್ಷಣವೇ, ಬದುಕುಳಿದ ಪ್ರಯಾಣಿಕರು ಇಲ್ಲಿ ಬರುತ್ತಾರೆ ಎಂಬುದು ನಮಗೆ ಸ್ಪಷ್ಟವಾಗಿತ್ತು,” ಎಂದು ಅವರು ಹೇಳಿದರು. ಅಲ್ಲದೆ, ಊರಿನ ಜನರು ಸಹಜವಾಗಿ ನೀರು, ಆಹಾರ, ಹಾಸಿಗೆಗಳು—ಇವೆಲ್ಲವನ್ನೂ ತಂದುಕೊಟ್ಟರು ಎಂದರು. “ಕೆಲವರು ಬಂದವರಿಗೆ ಊಟ ಸಿಗಲಿ ಎಂದು ತಮ್ಮ ಫ್ರಿಜ್‌ಗಳನ್ನೇ ಖಾಲಿ ಮಾಡಿ ಆಹಾರ ತಂದರು,” ಎಂದು ಅವರು ಮನಸ್ಸಿಗೆ ತಾಕುವಂತೆ ವಿವರಿಸಿದರು.

ನೋವಿನ ಕ್ಷಣದಲ್ಲಿ ಮೃದು ಸಾಂತ್ವನ

ವಂದನೀಯ ಗುರು ಪ್ರಾಡೋಸ್ ಅವರ ಮಾತಿನಂತೆ, ವೈದ್ಯಕೀಯ ನೆರವು ಅಗತ್ಯವಿರದ ಪ್ರಯಾಣಿಕರಿಗೆ ಧರ್ಮಕೇಂದ್ರದಲ್ಲಿ ಆಶ್ರಯ ನೀಡಲಾಯಿತು. ಗಂಭೀರ ಸ್ಥಿತಿಯಲ್ಲಿದ್ದವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಅಥವಾ ತಾತ್ಕಾಲಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು. ಉಳಿದವರಿಗೆ ಆಹಾರ, ನೀರು, ಬಿಸಿ ಕಾಫಿ, ವಿಶ್ರಾಂತಿ ಪಡೆಯಲು ಸ್ಥಳ—ಇವೆಲ್ಲವನ್ನೂ ಒದಗಿಸಲಾಯಿತು.

“ಅವರು ಕುಳಿತು ಸ್ವಲ್ಪ ಶಾಂತಗೊಂಡ ನಂತರ—ಅವರ ಸ್ಥಿತಿಯ ಮಿತಿಯೊಳಗೆ—ನಾವು ಅವರ ಜೊತೆಗಿದ್ದೆವು, ಅವರ ಮಾತು ಕೇಳಿದೆವು, ಮನಸ್ಸಿನ ಭಾರ ಇಳಿಸಿಕೊಳ್ಳಲು ಅವಕಾಶ ಮಾಡಿಕೊಟ್ಟೆವು,” ಎಂದು ಅವರು ಹೇಳಿದರು. “ಅದು ನೋವಿನ ಕ್ಷಣದಲ್ಲಿ ಒಂದು ಮೃದುವಾದ ಮುಲಾಮಿನಂತಿತ್ತು,” ಎಂದು ಅವರು ಮನಮುಟ್ಟುವ ಪದಗಳಲ್ಲಿ ವಿವರಿಸಿದರು.

ಜನವರಿ 19ರಂದು, ವಂದನೀಯ ಗುರು ಪ್ರಾಡೋಸ್ ಹಾಗೂ ಕೋರ್ಡೊಬಾದ ಧರ್ಮಾಧ್ಯಕ್ಷ ಯೇಸುಸ್ ಫೆರ್ನಾಂಡೆಝ್ ಗೋನ್ಸಾಲೆಝ್ ಅವರು ಆದಮೂಸ್‌ಗೆ ಭೇಟಿ ನೀಡಿ, ಪೀಡಿತ ಕುಟುಂಬಗಳೊಂದಿಗೆ ಐಕಮತ್ಯ ವ್ಯಕ್ತಪಡಿಸಿದರು.

ಧರ್ಮಾಧ್ಯಕ್ಷರು ಸುದ್ದಿ ನಿರೀಕ್ಷಿಸುತ್ತಿದ್ದ ಬಂಧುಗಳನ್ನು ಭೇಟಿಯಾಗಿ, ಸಾಂತ್ವನ ನೀಡಿದರು ಮತ್ತು ಅವರ ಚಿಂತೆಗಳನ್ನು ಶ್ರದ್ಧೆಯಿಂದ ಆಲಿಸಿದರು. ನಂತರ ಕುಟುಂಬಗಳನ್ನು ಕೋರ್ಡೊಬಾಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿ ಮೃತದೇಹಗಳ ಗುರುತಿಸುವಿಕೆ ನಡೆಯುತ್ತಿದ್ದು, ರೇನಾ ಸೋಫಿಯಾ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಆಸ್ಪತ್ರೆಯ ಧರ್ಮಸೇವಕರು ಸಹಾಯ ಮಾಡುತ್ತಿದ್ದಾರೆ.

“ಒಂದಲ್ಲೊಂದು ರೀತಿಯಲ್ಲಿ, ಅನೇಕ ಮಾರ್ಗಗಳ ಮೂಲಕ, ಈ ದುರಂತದಿಂದ ತತ್ತರಿಸಿದವರಿಗೆ ಸಾಧ್ಯವಾದಷ್ಟು ಜೊತೆಯಾಗಲು ಮತ್ತು ಸಾಂತ್ವನ ನೀಡಲು ಸಭೆ ಪ್ರಯತ್ನಿಸುತ್ತಿದೆ,” ಎಂದು ವಂದನೀಯ ಗುರು ಪ್ರಾಡೋಸ್ ಹೇಳಿದರು.

ಸ್ಮರಣೆ

ಧರ್ಮಕೇಂದ್ರದ ವಂದನೀಯ ಗುರು ತಮ್ಮ ಮಾತನ್ನು ಆಶಾವಾದದ ಸಂದೇಶದೊಂದಿಗೆ ಮುಕ್ತಾಯಗೊಳಿಸಿದರು. ಪ್ರಾರ್ಥನೆ, ಸಮೀಪತೆ ಮತ್ತು ಅಗತ್ಯ ನೆರವಿನ ಮೂಲಕ ಬೆಂಬಲ ಮುಂದುವರಿಯುತ್ತದೆ ಎಂದು ಅವರು ಕುಟುಂಬಗಳಿಗೆ ಭರವಸೆ ನೀಡಿದರು. ಎಲ್ಲ ಮೃತರ ಗುರುತಿಸುವಿಕೆ ಪೂರ್ಣಗೊಂಡ ನಂತರ, ನಾವು ಯಾರಿಗಾಗಿ ಪ್ರಾರ್ಥಿಸಬೇಕೋ ಅವರ ಎಲ್ಲ ಹೆಸರುಗಳು ತಿಳಿದಾಗ ಮೃತಾತ್ಮರ ಶಾಶ್ವತ ವಿಶ್ರಾಂತಿಗಾಗಿ ಧರ್ಮಕೇಂದ್ರದಲ್ಲಿ ವಿಶೇಷ ಪವಿತ್ರ ಬಲಿಪೂಜೆಯನ್ನು ಅರ್ಪಿಸಲಾಗುವುದು, ಅವರ ಆತ್ಮಗಳನ್ನು ಕರ್ತನಿಗೆ ಅರ್ಪಿಸುವಂತೆ ಒಂದು ಪವಿತ್ರ ಬಲಿಪೂಜೆಯನ್ನು ನಾವು ಆಯೋಜಿಸುತ್ತೇವೆ” ಎಂದರು.

 

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

 

20 ಜನವರಿ 2026, 19:17