ಪವಿತ್ರ ಭೂಮಿ ಸಹ-ಸಮನ್ವಯ ಸಮಿತಿ: ಪವಿತ್ರ ಭೂಮಿಯ ಜನರ ಜೊತೆ ನಿಲ್ಲಿ, ಸಂವಾದ ಬೆಳೆಸಿರಿ
ವ್ಯಾಟಿಕನ್ ವರದಿ
“ಪವಿತ್ರ ಭೂಮಿಯ ಜನರು ನಮ್ಮ ಸಹಾಯ ಮತ್ತು ಪ್ರಾರ್ಥನೆಗಾಗಿ ಕರೆದಿದ್ದಾರೆ; ತಮ್ಮ ನೋವಿಗೆ ಅಂತ್ಯವನ್ನು ಬಯಸುತ್ತಿದ್ದಾರೆ. ಅವರೊಂದಿಗೆ ನಿಲ್ಲಿ. ಮಾನವ ಘನತೆಯ ಮೇಲಿನ ಅವರ ಮನವಿಯನ್ನು ಗುರುತಿಸಿ. ಸಮುದಾಯಗಳ ನಡುವಿನ ನಿಜವಾದ ಸಂವಾದಕ್ಕೆ ನೆರವಾಗಿರಿ.” ಈ ಮನವಿಯನ್ನು ಪವಿತ್ರ ಭೂಮಿಯಲ್ಲಿನ ಧರ್ಮಸಭೆಗೆ ಬೆಂಬಲ ನೀಡುವ ಧರ್ಮಾಧ್ಯಕ್ಷರ ಸಮ್ಮೇಳನಗಳ ಸಂಯೋಜನಾ ಸಮಿತಿ (Holy Land Co-ordination – HLC) ಜನವರಿ 22, ಗುರುವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಹೊರಡಿಸಿದೆ.
1990ರ ದಶಕದಲ್ಲಿ ಸ್ಥಾಪಿತವಾದ HLC ಅನ್ನು ಇಂಗ್ಲೆಂಡ್ ಮತ್ತು ವೇಲ್ಸ್‌ನ ಕಥೋಲಿಕ ಧರ್ಮಾಧ್ಯಕ್ಷರ ಸಮ್ಮೇಳನ (CBCEW) ಆಯೋಜಿಸುತ್ತದೆ. ಇದು ಯುರೋಪ್, ಉತ್ತರ ಅಮೆರಿಕಾ ಮತ್ತು ದಕ್ಷಿಣ ಆಫ್ರಿಕಾದ ವಿವಿಧ ದೇಶಗಳ ಧರ್ಮಾಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, ಪವಿತ್ರ ಭೂಮಿಯ ಕ್ರೈಸ್ತ ಸಮುದಾಯಗಳೊಂದಿಗೆ ಸಮೀಪತೆ, ಏಕಾತ್ಮತೆ ಹಾಗೂ ಧಾರ್ಮಿಕ ಮತ್ತು ಆಧ್ಯಾತ್ಮಿಕ ಬೆಂಬಲವನ್ನು ವ್ಯಕ್ತಪಡಿಸುತ್ತದೆ.
ಪ್ರತಿ ವರ್ಷ HLC ಪವಿತ್ರ ಭೂಮಿಗೆ ವಾರ್ಷಿಕ ಯಾತ್ರೆ ಕೈಗೊಳ್ಳುತ್ತದೆ. 2026ರ ಯಾತ್ರೆ ಜನವರಿ 17ರಿಂದ 21ರವರೆಗೆ ನಡೆಯಿತು. ಸ್ವಿಟ್ಜರ್ಲ್ಯಾಂಡ್, ಡೆನ್ಮಾರ್ಕ್, ಫಿನ್‌ಲ್ಯಾಂಡ್, ಐಸ್‌ಲ್ಯಾಂಡ್, ನಾರ್ವೆ, ಸ್ವೀಡನ್, ಜರ್ಮನಿ, ಇಂಗ್ಲೆಂಡ್ ಮತ್ತು ವೇಲ್ಸ್, ಕೆನಡಾ, ಸ್ಕಾಟ್ಲೆಂಡ್, ಸ್ಪೇನ್, ಅಮೆರಿಕಾ ಸಂಯುಕ್ತ ಸಂಸ್ಥಾನ, ಫ್ರಾನ್ಸ್, ಐರ್ಲೆಂಡ್ ಮತ್ತು ಇಟಲಿ ದೇಶಗಳ ಧರ್ಮಾಧ್ಯಕ್ಷರ ಸಮ್ಮೇಳನಗಳನ್ನು ಪ್ರತಿನಿಧಿಸಿ ಒಟ್ಟು 13 ಧರ್ಮಾಧ್ಯಕ್ಷರು ಭಾಗವಹಿಸಿದ್ದರು.
ಯಾತ್ರೆಯ ಅಂತ್ಯದಲ್ಲಿ ಬಿಡುಗಡೆ ಮಾಡಿದ ಅಂತಿಮ ಹೇಳಿಕೆಯಲ್ಲಿ, ಜೆರುಸಲೇಮಿನ ಲ್ಯಾಟಿನ್ ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷರಾದ ಪಿಯರ್‌ಬತ್ತಿಸ್ತಾ ಪಿಜ್ಜಬಲ್ಲ ಅವರ ಮನವಿಗೆ ಸ್ಪಂದಿಸಿ, ಪವಿತ್ರ ಭೂಮಿಯ ಜನರ ಮೇಲಿನ ಪ್ರೀತಿ, ಬೆಂಬಲ ಮತ್ತು ಏಕಾತ್ಮತೆಯ ಸಂಕೇತವಾಗಿ ಕ್ರೈಸ್ತರು ಯಾತ್ರೆಗೆ ಬರಬೇಕೆಂದು HLC ಆಹ್ವಾನಿಸಿದೆ.
ಸಂಕಷ್ಟದಲ್ಲಿರುವ ಭೂಮಿ
ತಮ್ಮ ಪ್ರಕಟಣೆಯಲ್ಲಿ HLC, “ಜನರು ಆಘಾತ ಮತ್ತು ನೋವಿನಿಂದ ಬಳಲುತ್ತಿರುವ ಭೂಮಿಗೆ ನಾವು ಯಾತ್ರೆ ಮಾಡಿದ್ದೇವೆ” ಎಂದು ತಿಳಿಸಿದೆ. ಕಳೆದ 12 ತಿಂಗಳಲ್ಲಿ, “ವಾಗ್ದಾತ್ತ ಭೂಮಿ ಕ್ರಮೇಣ ಕುಗ್ಗುತ್ತಾ ಸವಾಲುಗಳನ್ನು ಎದುರಿಸುತ್ತಿದೆ” ಎಂದೂ ಹೇಳಿದೆ. ಆಕ್ರಮಿತ ವೆಸ್ಟ್ ಬ್ಯಾಂಕ್‌ನಲ್ಲಿರುವ ಬೇಡುಯಿನ್ ಸಮುದಾಯಗಳನ್ನು ಭೇಟಿ ಮಾಡಿದಾಗ, “ಅಲ್ಲಿನ ಜನರು ಸಮಾಜದ ಅಂಚಿನ ಬದುಕು, ಸದಾ ವೀಕ್ಷಣೆಯಲ್ಲಿದ್ದರೂ ಕಡೆಗಣಿಸಲ್ಪಟ್ಟಿರುವ ಜೀವನ, ಸುತ್ತಲಿನ ಬೆಟ್ಟಗಳಲ್ಲಿ ವೇಗವಾಗಿ ವಿಸ್ತರಿಸುತ್ತಿರುವ ವಸಾಹತುಗಳಿಂದ ಚಲನವಲನದ ಮೇಲೆ ಬಿಗಿ ನಿಯಂತ್ರಣ” ಇವುಗಳ ಬಗ್ಗೆ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು ಎಂದು HLC ತಿಳಿಸಿದೆ.
ಇಸ್ರಾಯೇಲಿ ವಸಾಹತುಗಾರರ ದಾಳಿಗಳು, ನಿರಂತರ ಹಿಂಸೆ ಮತ್ತು ಬೆದರಿಕೆ, ಜಾನುವಾರುಗಳ ಕಳವು ಹಾಗೂ ಆಸ್ತಿಗಳ ಧ್ವಂಸದಿಂದಾಗಿ ಅನೇಕರು ಮತ್ತಷ್ಟು ಹಿಂಸೆಯ ಭಯದಲ್ಲಿ ರಾತ್ರಿ ನಿದ್ರೆ ಮಾಡಲಾಗದ ಸ್ಥಿತಿಯಲ್ಲಿದ್ದಾರೆ ಎಂಬ ವರದಿಗಳನ್ನೂ HLC ಕೇಳಿದೆ. “ನಿಮ್ಮ ಸಂಕಷ್ಟವನ್ನು ಯಾರು ಗಮನಿಸುತ್ತಾರೆ ಎಂದು ಕೇಳಿದಾಗ, ಅವರು ‘ಯಾರೂ ನಮ್ಮನ್ನು ಕಂಡುಕೊಳ್ಳುವುದಿಲ್ಲ’ ಎಂದು ಉತ್ತರಿಸಿದರು,” ಎಂದು ಪ್ರಕಟಣೆ ಹೇಳುತ್ತದೆ. ಯಾತ್ರೆಯ ಸಮಯದಲ್ಲಿ, ಪ್ಯಾಲೆಸ್ತೀನಿನ ಏಕೈಕ ಸಂಪೂರ್ಣ ಕ್ರೈಸ್ತ ಪಟ್ಟಣದಲ್ಲಿ ನಡೆದ ಪವಿತ್ರ ಬಲಿಪೂಜೆಯಲ್ಲಿ HLC ಭಾಗವಹಿಸಿತು. ಅಲ್ಲಿನ ನಿವಾಸಿಗಳು ತಮ್ಮ ಸಂಕಷ್ಟಗಳನ್ನೂ ಹಂಚಿಕೊಂಡರು.
“ಅತಿರೇಕಿ ವಸಾಹತುಗಾರರ ನಿರಂತರ ದಾಳಿಗಳು, ಓಲಿವ್ ಮರಗಳ ಬೇರು ಕಿತ್ತುಹಾಕುವುದು, ಭೂಮಿ ವಶಪಡಿಸಿಕೊಳ್ಳುವುದು ಮತ್ತು ಬೆದರಿಕೆಯ ಕೃತ್ಯಗಳು ದಿನನಿತ್ಯದ ಜೀವನವನ್ನು ಅಸಹನೀಯವಾಗಿಸುತ್ತಿವೆ. ಇದರಿಂದ ಅನೇಕರು ವಲಸೆ ಹೋಗಲು ಮುಂದಾಗುತ್ತಿದ್ದಾರೆ,” ಎಂದು ಅವರು ಹೇಳಿದರು.
ಹಿಂಸೆಯ ಮೇಲೆ ಶಾಂತಿ ಮೇಲುಗೈ ಸಾಧಿಸಬೇಕು
“ಗಾಜಾ ಇನ್ನೂ ಭೀಕರ ಮಾನವೀಯ ಸಂಕಷ್ಟದಲ್ಲಿದೆ. ನಾವು ಭೇಟಿಯಾದ ವೆಸ್ಟ್ ಬ್ಯಾಂಕ್‌ನ ಜನರು ನಿರಾಶೆಗೊಂಡು ಭಯಭೀತರಾಗಿದ್ದಾರೆ,” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಮಾನವ ಮತ್ತು ನಾಗರಿಕ ಹಕ್ಕುಗಳ ಪರವಾಗಿ ಧ್ವನಿ ಎತ್ತುವ ಧೈರ್ಯಶಾಲಿ ಇಸ್ರಾಯೇಲರು ನಾಗರಿಕರು ಹೆಚ್ಚುತ್ತಿರುವ ಬೆದರಿಕೆಯನ್ನು ಎದುರಿಸುತ್ತಿದ್ದಾರೆ ಎಂದು ಧರ್ಮಾಧ್ಯಕ್ಷರು ಎಚ್ಚರಿಸಿದ್ದಾರೆ. “ಅಂಚಿನ ಧ್ವನಿಗಳಿಗೆ ಬೆಂಬಲ ನೀಡುವುದು ದುಬಾರಿ ಏಕಾತ್ಮತೆಯಾಗಿದೆ; ಶೀಘ್ರದಲ್ಲೇ ಅವರ ಧ್ವನಿಯೂ ಮೌನಗೊಳ್ಳುವ ಭಯವಿದೆ,” ಎಂದು ಅವರು ಹೇಳಿದ್ದಾರೆ.
ಕ್ರೈಸ್ತರಾಗಿ “ಧ್ವನಿಯಿಲ್ಲದವರಿಗೆ ಧ್ವನಿ ನೀಡುವುದು ನಮ್ಮ ಕರ್ತವ್ಯ” ಎಂದು ಧರ್ಮಾಧ್ಯಕ್ಷರು ತಿಳಿಸಿದ್ದು, ಮಾನವ ಘನತೆಯನ್ನು ಉತ್ತೇಜಿಸಿ ನ್ಯಾಯ ಮತ್ತು ಸಹಾನುಭೂತಿಗಾಗಿ ಜಗತ್ತು ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದ್ದಾರೆ.
ವೆಸ್ಟ್ ಬ್ಯಾಂಕ್‌ನ ವಸಾಹತುಗಳು ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಅಕ್ರಮವಾಗಿದ್ದು, ಇತರರ ಭೂಮಿಯನ್ನು ವಶಪಡಿಸಿಕೊಂಡು ಮುಂದುವರಿದಂತೆ ವಿಸ್ತರಿಸುತ್ತಿವೆ ಎಂದು HLC ಹೇಳಿದೆ. ಮಾನವ ಹಕ್ಕುಗಳ ವಿಶ್ವವ್ಯಾಪಕತೆ ಎಲ್ಲರಿಗೂ ಅನ್ವಯಿಸಬೇಕಾದರೂ, ಪ್ರಸ್ತುತ ಅದು ನಾಗರಿಕ ಸ್ಥಿತಿಗೆ ಅವಲಂಬಿತ ವ್ಯವಸ್ಥೆಯಿಂದ ಬದಲಾಗುತ್ತಿದೆ ಎಂದು ಅವರು ವಿಷಾದಿಸಿದ್ದಾರೆ.
“ಇಸ್ರಾಯೇಲಿಗೆ ಅಸ್ತಿತ್ವದ ಹಕ್ಕು ಹಾಗೂ ಭದ್ರತೆಯೊಂದಿಗೆ ಬದುಕುವ ಹಕ್ಕು ಇದೆ. ಅದೇ ರೀತಿ, ಈ ಭೂಮಿಯಲ್ಲಿ ಬೇರುಬಿಟ್ಟಿರುವ ಎಲ್ಲರಿಗೂ ಈ ಹಕ್ಕುಗಳು ಅನ್ವಯಿಸಬೇಕು,” ಎಂದು HLC ಹೇಳಿದೆ. ಹಿಂಸೆಯ ಮೇಲೆ ಶಾಂತಿ ಗೆಲ್ಲಲಿ ಮತ್ತು ಭಯೋತ್ಪಾದನೆ ಹಾಗೂ ಯುದ್ಧಕ್ಕೆ ಅಂತ್ಯ ಬರಲಿ ಎಂಬ ಆಶಯವನ್ನೂ ವ್ಯಕ್ತಪಡಿಸಿದೆ. ಇದಲ್ಲದೆ, ಎರಡು ರಾಷ್ಟ್ರಗಳ ಪರಿಹಾರಕ್ಕೆ ಅರ್ಥಪೂರ್ಣ ಮಾತುಕತೆಗಳನ್ನು ಪುನರುಜ್ಜೀವನಗೊಳಿಸಲು ಸರ್ಕಾರಗಳು ಒತ್ತಡ ತರುವಂತೆ HLC ಮನವಿ ಮಾಡಿದೆ.
ಸ್ಥಳೀಯ ಸಮುದಾಯಗಳ ಧೈರ್ಯ
ಸ್ಥಳೀಯ ಕ್ರೈಸ್ತರು ಮತ್ತು ಇತರ ಧರ್ಮಗಳ ಜನರ ನಂಬಿಕೆ ಹಾಗೂ ಸ್ಥೈರ್ಯದಿಂದ ನಾವು ಆಳವಾಗಿ ಸ್ಪರ್ಶಿತರಾಗಿದ್ದೇವೆ ಎಂದು HLC ತಿಳಿಸಿದೆ. ಅವರ ಪ್ರಯತ್ನಗಳು ಶಾಂತಿಪೂರ್ಣ ಸಹವಾಸಕ್ಕಾಗಿ ಕೆಲಸ ಮಾಡುವುದೇ ಎಲ್ಲರ ಸಾಮಾನ್ಯ ಕರ್ತವ್ಯ ಎಂಬುದನ್ನು ನೆನಪಿಸುತ್ತವೆ ಎಂದು ಹೇಳಿದೆ. ಅತ್ಯಂತ ಕಠಿಣ ಪರಿಸ್ಥಿತಿಗಳ ನಡುವೆಯೂ ನ್ಯಾಯ, ಸಂವಾದ ಮತ್ತು ಸಮ್ಮಿಲನಕ್ಕಾಗಿ ಕೆಲಸ ಮಾಡುವ ಯೆಹೂದ್ಯರ ಮತ್ತು ಪ್ಯಾಲೇಸ್ತೀನಿನವರ ಧ್ವನಿಗಳ ಧೈರ್ಯವನ್ನೂ ನಾವು ಕಂಡೆವು ಎಂದು HLC ಹೇಳಿದೆ.
ಸಂಘರ್ಷದಲ್ಲಿ ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರು ಕ್ಷಮಿಸಲು ಮುಂದಾಗಿರುವುದನ್ನು ಕೇಳುವುದು ಶಾಂತಿಯ ಸಾಧ್ಯತೆಯ ಶಕ್ತಿಶಾಲಿ ಸಾಕ್ಷಿಯಾಗಿದೆ ಎಂದು ಪ್ರಕಟಣೆ ಒತ್ತಿ ಹೇಳುತ್ತದೆ. “ಅಂತಹ ತಾಯಿ ಅಥವಾ ತಂದೆ ಹಿಂಸೆಗೆ ಅಂತ್ಯ ಕೋರುವಾಗ, ಜಗತ್ತು ಕೇಳಲೇಬೇಕು — ಮತ್ತು ಕ್ರಮವಹಿಸಬೇಕು,” ಎಂದು ಅದು ಹೇಳಿದೆ.
ಯಾತ್ರೆಯನ್ನು “ನೋವು ಅನುಭವಿಸುತ್ತಿರುವವರ ಮೇಲಿನ ಸಹಾನುಭೂತಿಯ ಹೃದಯಗಳೊಂದಿಗೆ ಮತ್ತು ನ್ಯಾಯಕ್ಕಾಗಿ ಶ್ರಮಿಸಿ ಶಾಂತಿಯ ಆಶೆಯನ್ನು ಜೀವಂತವಾಗಿಟ್ಟಿರುವವರಿಂದ ಪ್ರೇರಿತರಾಗಿ” ನಾವು ಮುಕ್ತಾಯಗೊಳಿಸುತ್ತಿದ್ದೇವೆ ಎಂದು ಧರ್ಮಾಧ್ಯಕ್ಷರು ಪ್ರಕಟಣೆಯನ್ನು ಮುಗಿಸಿದ್ದಾರೆ.