ಹುಡುಕಿ

2026.01.19 croce olimpica 2026.01.19 croce olimpica 

ಚಳಿಗಾಲದ ಕ್ರೀಡಾಕೂಟಕ್ಕೆ ಮಿಲಾನ್‌ಗೆ ಒಲಿಂಪಿಕ್ ಶಿಲುಬೆಯನ್ನು ತರಲಿರುವ ಅಥ್ಲೆಟಿಕಾ ವ್ಯಾಟಿಕಾನಾ

ಜನವರಿ 29ರಂದು ಅಥ್ಲೆಟಿಕಾ ವ್ಯಾಟಿಕಾನಾ ಮಿಲಾನ್‌ಗೆ ಒಲಿಂಪಿಕ್ ಹಾಗೂ ಪ್ಯಾರಾಲಿಂಪಿಕ್ ಶಿಲುಬೆಯನ್ನು ತರಲಿದೆ. ಈ ಸಂದರ್ಭ ಸಾನ್ ಬಾಬಿಲಾ ಬಸಿಲಿಕಾದಲ್ಲಿ ಪವಿತ್ರ ಬಲಿಪೂಜೆ ನಡೆಯಲಿದ್ದು, ಚಳಿಗಾಲದ ಕ್ರೀಡಾಕೂಟದ ಅವಧಿಯಲ್ಲಿ ಈ ದೇವಾಲಯವನ್ನು “ಕ್ರೀಡಾಪಟುಗಳ ದೇವಾಲಯ”ವಾಗಿ ಬಳಸಲಾಗುತ್ತದೆ.

ಲೇಖಕರು: ಜಿಯಾಂಪೌಲೊ ಮತ್ತೆಯಿ

ಲಂಡನ್ 2012 ಒಲಿಂಪಿಕ್ ಕ್ರೀಡಾಕೂಟದಿಂದ ಒಲಿಂಪಿಕ್ ಹಾಗೂ ಪ್ಯಾರಾಲಿಂಪಿಕ್ ಶಿಲುಬೆ ಕ್ರೀಡಾಪಟುಗಳೊಂದಿಗೆ ಸಂಚರಿಸುತ್ತಿದೆ. ಬರಲಿರುವ ಮಿಲಾನ್–ಕೋರ್ಟಿನಾ ಚಳಿಗಾಲದ ಕ್ರೀಡಾಕೂಟದಲ್ಲಿಯೂ ಈ ಸಂಪ್ರದಾಯ ಮುಂದುವರಿಯಲಿದೆ.

ಜನವರಿ 29, ಗುರುವಾರ ಸಂಜೆ 6:30ಕ್ಕೆ, ಪವಿತ್ರ ಸಿಂಹಾಸನದ ಅಧಿಕೃತ ಕ್ರೀಡಾ ಸಂಘಟನೆಯಾದ ಅಥ್ಲೆಟಿಕಾ ವ್ಯಾಟಿಕಾನಾ ಮಿಲಾನ್‌ನ ಸಾನ್ ಬಾಬಿಲಾ ಬಸಿಲಿಕಾದಲ್ಲಿ ನಡೆಯುವ ಪವಿತ್ರ ಬಲಿಪೂಜೆಯ ಸಂದರ್ಭದಲ್ಲಿ ಈ ಶಿಲುಬೆಯನ್ನು ಅನ್ನು ಸಮರ್ಪಿಸಲಿದೆ.

ಬಲಿಪೂಜೆಯಲ್ಲಿ ಮಿಲಾನ್‌ನ ಮಹಾಧರ್ಮಾಧ್ಯಕ್ಷರಾದ ವಂ. ಮಾರಿಯೊ ಡೆಲ್ಪಿನಿ ಅಧ್ಯಕ್ಷತೆ ವಹಿಸಲಿದ್ದು, ಸಂಸ್ಕೃತಿ ಮತ್ತು ಶಿಕ್ಷಣ ವಿಭಾಗದ ಕಾರ್ಯದರ್ಶಿ ಧರ್ಮಾಧ್ಯಕ್ಷರಾದ ವಂ. ಪಾಲ್ ಟೈಘ್ ಹಾಗೂ ಅಥ್ಲೆಟಿಕಾ ವ್ಯಾಟಿಕಾನಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಭಾಗವಹಿಸಲಿದ್ದಾರೆ.

ಕ್ರೀಡಾಪಟುಗಳ ದೇವಾಲಯ

ಈ ಪವಿತ್ರ ಬಲಿಪೂಜೆ ಒಲಿಂಪಿಕ್ ಶಾಂತಿ ವಿರಾಮದ (Olympic Truce) ಪೂರ್ವಸಂಧ್ಯೆಯನ್ನು ಸೂಚಿಸುತ್ತದೆ. ನವೆಂಬರ್ 19ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ ಅಂಗೀಕರಿಸಿದ ನಿರ್ಣಯದ ಪ್ರಕಾರ, ಈ ಶಾಂತಿ ವಿರಾಮವು ಒಲಿಂಪಿಕ್ ಕ್ರೀಡಾಕೂಟ ಆರಂಭಕ್ಕೆ ಒಂದು ವಾರ ಮೊದಲು (ಫೆಬ್ರವರಿ 6ರಿಂದ) ಆರಂಭವಾಗಿ, ಪ್ಯಾರಾಲಿಂಪಿಕ್ ಕ್ರೀಡಾಕೂಟದ ಸಮಾರೋಪ ಸಮಾರಂಭದ ನಂತರ ಒಂದು ವಾರದವರೆಗೆ (ಮಾರ್ಚ್ 15ರವರೆಗೆ) ಜಾರಿಯಲ್ಲಿರುತ್ತದೆ.

ಈ ಅವಧಿಯೆಲ್ಲಾ ಮಿಲಾನ್‌ನ ಸಾನ್ ಬಾಬಿಲಾ ಬಸಿಲಿಕಾವನ್ನು “ಕ್ರೀಡಾಪಟುಗಳ ದೇವಾಲಯ”ನ್ನಾಗಿ ಮೀಸಲಿರಿಸಲಾಗುತ್ತದೆ. ಕ್ರೀಡಾಕೂಟಗಳಿಗೆ ಸಂಬಂಧಿಸಿದ ವಿವಿಧ ಪವಿತ್ರ ಆಚರಣೆಗಳು ಮತ್ತು ಕಾರ್ಯಕ್ರಮಗಳು ಅಲ್ಲಿ ನಡೆಯಲಿವೆ.

ಪವಿತ್ರ ದ್ವಾರದ ಮೂಲಕ ಪ್ರವೇಶಿಸಿದ ಶಿಲುಬೆ

ಜೂನ್ 14ರಂದು ನಡೆದ ಕ್ರೀಡಾ ಜ್ಯೂಬಿಲಿ ಸಂದರ್ಭದಲ್ಲಿ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋರವರೊಂದಿಗೆ ಕ್ರೀಡಾಪಟುಗಳ ಶಿಲುಬೆಯನ್ನು ಅಥ್ಲೆಟಿಕಾ ವ್ಯಾಟಿಕಾನಾಗೆ ವಹಿಸಲಾಯಿತು. ಈ ಶಿಲುಬೆ ಜಾಗತಿಕ ಕ್ರೀಡಾಜಗತ್ತಿನ ಆತ್ಮಿಕ ಸಂಕೇತವಾಗಿದೆ.

ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ಥಾಮಸ್ ಬಾಕ್ ಅವರು, ಸಂಸ್ಕೃತಿ ಮತ್ತು ಶಿಕ್ಷಣ ವಿಭಾಗದ ಪ್ರಿಫೆಕ್ಟ್ ಆಡಳಿತ ಮುಖ್ಯಾಧಿಕಾರಿಯಾದ  ಕಾರ್ಡಿನಲ್ ವಂ. ಜೊಸೆ ಟೊಲೆಂಟಿನೊ ದೆ ಮೆಂಡೋನ್ಸಾ ಅವರೊಂದಿಗೆ, ಸೈಂಟ್ ಪೀಟರ್ ಬಸಿಲಿಕಾದ ಪವಿತ್ರ ದ್ವಾರದ ಮೂಲಕ ಈ ಶಿಲುಬೆಯನ್ನು ಹೊತ್ತು ಸಾಗಿದರು.

ನಂತರ, 2024ರ ಒಲಿಂಪಿಕ್ ಕ್ರೀಡಾಕೂಟಗಳಿಗೆ ಸಂಬಂಧಿಸಿದಂತೆ ಜ್ಯೂಬಿಲಿಗಾಗಿ ವಿಶೇಷವಾಗಿ ಪ್ಯಾರಿಸ್‌ನಿಂದ ಆಗಮಿಸಿದ್ದ ಪ್ರತಿನಿಧಿ ಮಂಡಳಿಯಿಂದ ಅಥ್ಲೆಟಿಕಾ ವ್ಯಾಟಿಕಾನಾ ಈ ಶಿಲುಬೆಯನ್ನು ಸ್ವೀಕರಿಸಿತು. ಈ ಪ್ರಾರ್ಥನಾ ಕ್ಷಣವು ಪಿಯಾಜ್ಜಾ ಪಿಯಾ‌ನಿಂದ ವಿಯಾ ಕಾಂಚಿಲಿಯಾಜಿಯೋನೆ ಮೂಲಕ ಸೈಂಟ್ ಪೀಟರ್ ಬಸಿಲಿಕಾದ ಪವಿತ್ರ ದ್ವಾರವರೆಗೆ ನಡೆದ ಜ್ಯೂಬಿಲಿ ಯಾತ್ರೆಗೆ ಅಧಿಕೃತ ಆರಂಭವಾಯಿತು.

ಜಗತ್ತಿನ ವಿವಿಧ ಭಾಗಗಳ ಮರದಿಂದ ನಿರ್ಮಿಸಲ್ಪಟ್ಟಿರುವ ಶಿಲುಬೆ

ಕ್ರೀಡಾಪಟುಗಳ ಶಿಲುಬೆಯನ್ನು ಇಂಗ್ಲಿಷ್ ಕಲಾವಿದ ಜಾನ್ ಕಾರ್ನ್‌ವಾಲ್ ಅವರು 2012ರ ಲಂಡನ್ ಒಲಿಂಪಿಕ್ ಕ್ರೀಡಾಕೂಟಗಳಿಗಾಗಿ ವಿಶೇಷವಾಗಿ ರೂಪಿಸಿದ್ದರು. ಅಂತರರಾಷ್ಟ್ರೀಯ ಕಥೋಲಿಕ ಒಲಿಂಪಿಕ್ ಸಮಾವೇಶವಾದ ಜೋಷುವಾ ಕ್ಯಾಂಪಿನ ನಡೆಯುವ ಕಥೋಲಿಕ ಉಪಕ್ರಮಗಳ ಸಮನ್ವಯ ಸಮಿತಿಯ ವಿನಂತಿಯ ಮೇರೆಗೆ ಈ ಶಿಲುಬೆ ಸಿದ್ಧವಾಯಿತು.

ಈ ಶಿಲುಬೆ (ಅದನ್ನು ಆಧರಿಸುವ ವೇದಿಕೆಯನ್ನು ಒಳಗೊಂಡಂತೆ) ಒಟ್ಟು 15 ವಿಭಿನ್ನ ಮರದ ತುಂಡುಗಳಿಂದ ನಿರ್ಮಿತವಾಗಿದೆ. ಪ್ರತಿ ಮರದ ತುಂಡನ್ನೂ ಜಗತ್ತಿನ ವಿವಿಧ ಭಾಗಗಳಿಂದ ಆಯ್ದುಕೊಳ್ಳಲಾಗಿದೆ. ಅವುಗಳಲ್ಲಿ ಪವಿತ್ರ ಭೂಮಿ, ಚೀನಾ, ರಷ್ಯಾ, ಉತ್ತರ ಆಫ್ರಿಕಾ, ದಕ್ಷಿಣ ಆಫ್ರಿಕಾ, ಭಾರತ, ಆಸ್ಟ್ರೇಲಿಯಾ, ಬ್ರೆಜಿಲ್, ಅರ್ಜೆಂಟಿನಾ, ಜಮೈಕಾ, ಉತ್ತರ ಅಮೆರಿಕಾ ಹಾಗೂ ಯುನೈಟೆಡ್ ಕಿಂಗ್‌ಡಮ್ ಸೇರಿವೆ.

ಲಂಡನ್‌ನಿಂದ ಮಿಲಾನ್‌ವರೆಗಿನ ಪಯಣ

2012ರ ಲಂಡನ್ ಒಲಿಂಪಿಕ್ ಕ್ರೀಡಾಕೂಟಗಳ ಸಮಾಪ್ತಿಯ ಸಂದರ್ಭದಲ್ಲಿ, ಕ್ರೀಡಾಪಟುಗಳ ಶಿಲುಬೆಯನ್ನು 2016ರ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳಿಗಾಗಿ ರಿಯೋ ಡಿ ಜನೈರೊ ಮಹಾಧರ್ಮಕ್ಷೇತ್ರಕ್ಕೆ ಹಸ್ತಾಂತರಿಸಲಾಯಿತು.

2013ರಲ್ಲಿ ಬ್ರೆಜಿಲ್‌ನಲ್ಲಿ ನಡೆದ ವಿಶ್ವ ಯುವ ದಿನಾಚರಣೆಯ (WYD) ವೇಳೆ, ಪೋಪ್ ಫ್ರಾನ್ಸಿಸ್ ಅವರು ಈ ಶಿಲುಬೆಗೆ ಆಶೀರ್ವಾದ ನೀಡಿದರು. ನಂತರ ಇದು 2014ರ ಫಿಫಾ ವಿಶ್ವಕಪ್ ಸಂದರ್ಭದಲ್ಲೂ ರಿಯೋದಲ್ಲಿತ್ತು.

ಕೊವಿಡ್–19 ಮಹಾಮಾರಿಯ ಕಾರಣದಿಂದ 2020ರ ಟೋಕಿಯೊ ಕ್ರೀಡಾಕೂಟಗಳ ಸಂದರ್ಭದಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯಲಿಲ್ಲ. ಆ ಬಳಿಕ ಶಿಲುಬೆಯನ್ನು 2023ರ ಲಿಸ್ಬನ್ ವಿಶ್ವ ಯುವ ದಿನಾಚರಣೆಗೆ ಕರೆದೊಯ್ಯಲಾಯಿತು. ನಂತರ ಪ್ಯಾರಿಸ್‌ನ ಲಾ ಮಡೆಲೆನ್ ದೇವಾಲಯದಲ್ಲಿರುವ “ಕ್ರೀಡಾಪಟುಗಳ ಚಾಪೆಲ್”ನಲ್ಲಿ ಇದನ್ನು ಪ್ರತಿಷ್ಠಾಪಿಸಲಾಯಿತು.


ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

26 ಜನವರಿ 2026, 22:28