ಹುಡುಕಿ

Al-Maghtas-Secondo-la-tradizione-luogo-del-battestimo-di-Gesu.jpg Al-Maghtas-Secondo-la-tradizione-luogo-del-battestimo-di-Gesu.jpg 

ಜೋರ್ಡಾನ್ ನದಿಯಾಚೆಯ ಬೆಥಾನಿ – ಪ್ರಭು ಯೇಸು ಕ್ರಿಸ್ತರ ದೀಕ್ಷಾಸ್ನಾನದ ಸ್ಥಳ

ಇಂದು ಧರ್ಮಸಭೆ ಪ್ರಭು ಯೇಸು ಕ್ರಿಸ್ತರ ದೀಕ್ಷಾಸ್ನಾನದ ಹಬ್ಬವನ್ನು ಆಚರಿಸುತ್ತದೆ. ಜೋರ್ಡಾನ್‌ನ ಅಲ್-ಮಘ್ತಾಸ್ ಪ್ರದೇಶದಲ್ಲಿ ನಡೆದ ಪುರಾತತ್ವ ಉತ್ಖನನಗಳು, ಪ್ರಾರಂಭಿಕ ಕ್ರೈಸ್ತರು ಈ ಸ್ಥಳವನ್ನು ಪವಿತ್ರವೆಂದು ಗೌರವಿಸುತ್ತಿದ್ದರು ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ. 2015ರಲ್ಲಿ ಈ ಪ್ರದೇಶವನ್ನು ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲಾಯಿತು. ಈ ಪವಿತ್ರ ಸ್ಥಳಕ್ಕೆ ಈಗಾಗಲೇ ಪೂಜ್ಯ ಜಗದ್ಗುರು ಎರಡನೇ ಜಾನ್ ಪಾಲ್ , ಪೂಜ್ಯ ಜಗದ್ಗುರು ಹದಿನಾರನೆಯ ಬೆನೆಡಿಕ್ಟ್ ಮತ್ತು ಪೂಜ್ಯ ಜಗದ್ಗುರು ಫ್ರಾನ್ಸಿಸ್ ತೀರ್ಥಯಾತ್ರೆ ನಡೆಸಿದ್ದಾರೆ. ವಂ. ಗುರು ಪಾವೆಲ್ ರೈಟಲ್ ಆಂಡ್ರಿಯಾನಿಕ್, ಅಲ್-ಮಘ್ತಾಸ್

ಯೋವಾನ್ನರ ಶುಭ ಸಂದೇಶದಲ್ಲಿ, “ಸ್ನಾನಿಕ ಯೋವಾನ್ನರು ಜೋರ್ಡಾನ್ ನದಿಯಾಚೆ ಸ್ನಾನ ನೀಡುತ್ತಿದ್ದ ಬೆಥಾನಿಯಲ್ಲಿ ಈ ಘಟನೆ ನಡೆಯಿತು” ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ (ಯೋವಾನ್ನ 1:28). ಇದೇ ಶುಭ ಸಂದೇಶದಲ್ಲಿ ಮತ್ತೊಂದು ಸ್ಥಳದಲ್ಲಿ, “ಪ್ರಭು ಯೇಸು ಕ್ರಿಸ್ತರು ಮತ್ತೆ ಜೋರ್ಡಾನ್ ದಾಟಿ ಯೋವಾನ್ನರು ಮೊದಲು ದೀಕ್ಷಾಸ್ನಾನ ನೀಡಿದ್ದ ಸ್ಥಳಕ್ಕೆ ಹೋದರು” ಎಂದು ಹೇಳಲಾಗಿದೆ (ಯೋವಾನ್ನ 10:40).

ಇಲ್ಲಿ ಉಲ್ಲೇಖವಾಗುವ “ಜೋರ್ಡಾನ್ ನದಿಯಾಚೆಯ ಬೆಥಾನಿ” ಎಂದರೆ, ಓಲಿವ್ ಬೆಟ್ಟದ ಬಳಿಯಿರುವ ಬೆಥಾನಿಯಲ್ಲ. ಇದು ವಿಭಿನ್ನ ಸ್ಥಳವಾಗಿದೆ. ಮೂರನೇ ಶತಮಾನದಲ್ಲಿ ಒರಿಜೆನ್, ನಾಲ್ಕನೇ ಶತಮಾನದಲ್ಲಿ ಸಂತ ಜಾನ್ ಕ್ರೈಸೋಸ್ಟಮ್ ಮತ್ತು ಆ ಕಾಲದ ಕ್ರೈಸ್ತರು ಈ ಸ್ಥಳವನ್ನು “ಬೆಥಾಬರಾ” ಎಂದು ಗುರುತಿಸಿದ್ದರು. ಯೋವಾನ್ನರ ಶುಭ ಸಂದೇಶದ ಕೆಲವು ಪ್ರಾಚೀನ ಪ್ರತಿಗಳಲ್ಲಿಯೂ ಈ ಹೆಸರು ಕಾಣಿಸುತ್ತದೆ.

ಆರನೇ ಶತಮಾನದ ಮಡಾಬಾ ನಕ್ಷೆಯಲ್ಲಿಯೂ ಈ ಸ್ಥಳವನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ. ಯೆಹೂದ್ಯರ ಪ್ರಮುಖ ಗ್ರಂಥಗಳಲ್ಲೊಂದಾದ ಟಾಲ್ಮಡ್ ನಲ್ಲಿಯೂ ಈ ಪ್ರದೇಶದ ಉಲ್ಲೇಖವಿದೆ. ಇಂದಿನ ದಿನಗಳಲ್ಲಿ ಈ ಸ್ಥಳವನ್ನು “ಅಲ್-ಮಘ್ತಾಸ್” ಎಂದು ಕರೆಯಲಾಗುತ್ತದೆ. ಅರೇಬಿಕ್ ಭಾಷೆಯಲ್ಲಿ ಇದರ ಅರ್ಥವೇ “ದೀಕ್ಷಾಸ್ನಾನ” ಅಥವಾ “ಮುಳುಗು”.

ಪುರಾತತ್ವ ಸಾಕ್ಷ್ಯಗಳು

ನಾಲ್ಕನೇ ಶತಮಾನದ ಆರಂಭದವರೆಗೆ, ರೋಮನ್ ಸಾಮ್ರಾಜ್ಯದಲ್ಲಿ ಕ್ರೈಸ್ತಧರ್ಮ ಹಿಂಸೆಗೆ ಒಳಗಾಗಿದ್ದುದರಿಂದ ಅಧಿಕೃತ ದೇವಾಲಯಗಳನ್ನು ನಿರ್ಮಿಸಲು ಸಾಧ್ಯವಾಗಿರಲಿಲ್ಲ. ಆದರೂ, ಪ್ರಾರಂಭಿಕ ಕ್ರೈಸ್ತರು ಪ್ರಭು ಯೇಸು ಕ್ರಿಸ್ತರ ಜೀವನಕ್ಕೆ ಸಂಬಂಧಿಸಿದ ಸ್ಥಳಗಳ ಸ್ಮೃತಿಯನ್ನು ಪೀಳಿಗೆಯಿಂದ ಪೀಳಿಗೆಗೆ ಸಂರಕ್ಷಿಸಿದರು.

ಐದನೇ ಶತಮಾನದ ಅಂತ್ಯ ಮತ್ತು ಆರನೇ ಶತಮಾನದ ಆರಂಭದಲ್ಲಿ, ಬೈಜಾಂಟೈನ್ ಚಕ್ರವರ್ತಿ ಮೊದಲನೇ ಅನಸ್ತಾಸಿಯಸ್  ಡಿಕೋರಸ್ ಅಲ್-ಮಘ್ತಾಸ್ ಪ್ರದೇಶದಲ್ಲಿ ಸ್ನಾನಿಕ ಯೋವಾನ್ನರ ಹೆಸರಿನಲ್ಲಿ ಮೊದಲ ದೇವಾಲಯವನ್ನು ನಿರ್ಮಿಸಿದರು. ಈ ದೇವಾಲಯವು ನಂತರ ಪ್ರವಾಹಗಳು ಮತ್ತು ಭೂಕಂಪಗಳಿಂದ ನಾಶವಾಯಿತು. ಹಲವು ಬಾರಿ ಮರುನಿರ್ಮಾಣಗೊಂಡರೂ, ಏಳನೇ ಅಥವಾ ಎಂಟನೇ ಶತಮಾನಕ್ಕೆ ಬರುವಾಗ ಅದು ಅವಶೇಷಗಳಾಗಿ ಉಳಿದಿತ್ತು ಎಂದು ಪುರಾತತ್ವ ಅಧ್ಯಯನಗಳು ಸೂಚಿಸುತ್ತವೆ.

ಸುಮಾರು ಕ್ರಿ.ಶ. 530ರ ಕಾಲದ ತೀರ್ಥಯಾತ್ರಿ ಥಿಯೋಡೋಸಿಯಸ್ ಈ ಸ್ಥಳದ ಬಗ್ಗೆ ಬರೆದಿದ್ದಾರೆ. ಅವರ ಪ್ರಕಾರ, ಮೃತಸಾಗರದ ಉತ್ತರಕ್ಕೆ ಐದು ಮೈಲು ದೂರದಲ್ಲಿ, ಪ್ರಭು ಯೇಸು ಕ್ರಿಸ್ತರು ದೀಕ್ಷಾಸ್ನಾನ ಸ್ವೀಕರಿಸಿದ ಸ್ಥಳದಲ್ಲಿ, ಕಬ್ಬಿಣದ ಶಿಲುಬೆಯುಳ್ಳ ಒಂಟಿ ಕಂಬವಿದ್ದು, ಅದರ ಬಳಿಯಲ್ಲಿ ಚಕ್ರವರ್ತಿ ಅನಸ್ತಾಸಿಯಸ್ ನಿರ್ಮಿಸಿದ ಸ್ನಾನಿಕ ಯೋವಾನ್ನರ ದೇವಾಲಯವಿತ್ತು. ಜೋರ್ಡಾನ್ ನದಿಯ ಪ್ರವಾಹದ ಕಾರಣದಿಂದ ದೇವಾಲಯವನ್ನು ಎತ್ತರದ ಕೋಣೆಗಳ ಮೇಲೆ ನಿರ್ಮಿಸಲಾಗಿತ್ತು ಎಂದು ಅವರು ವಿವರಿಸುತ್ತಾರೆ.

ಈ ಸ್ಥಳದಲ್ಲೇ ಪರಮ ತ್ರಿತ್ವ ಮಹಾದೇವಾಲಯವನ್ನು ಕೂಡ ನಿರ್ಮಿಸಲಾಯಿತು. ಪ್ರಭು ಯೇಸು ಕ್ರಿಸ್ತರ ದೀಕ್ಷಾಸ್ನಾನದ ವೇಳೆ ಪರಮ ತ್ರಿತ್ವದ ಪ್ರಕಟಣೆ ನಡೆದದ್ದು—ಪರಲೋಕದಿಂದ ಪಿತದೇವರ ವಾಣಿ, ಪಾರಿವಾಳದ ರೂಪದಲ್ಲಿ ಇಳಿದ ಪವಿತ್ರ ಆತ್ಮ—ಈ ದೇವಾಲಯದ ಹೆಸರಿನ ಮೂಲವಾಗಿದೆ. ಪುರಾತತ್ವ ಉತ್ಖನನಗಳು, ಈ ದೇವಾಲಯ ಕನಿಷ್ಠ 27 ಮೀಟರ್ ಉದ್ದ ಮತ್ತು 15 ಮೀಟರ್ ಅಗಲ ಹೊಂದಿದ್ದ ದೊಡ್ಡ ಕಟ್ಟಡವಾಗಿತ್ತು ಎಂಬುದನ್ನು ತೋರಿಸುತ್ತವೆ. ಇಂದಿಗೆ ಅದರ ಅವಶೇಷಗಳು ಮಾತ್ರ ಉಳಿದಿವೆ.

ಇದಕ್ಕೆ ಹೊರತಾಗಿ,  ಕಿರಿಯ ಬಸಿಲಿಕಾ, ತಪಸ್ವಿಗಳ ಗುಹೆಗಳು, ಪ್ರಾರ್ಥನಾ ಮಂದಿರಗಳು, ಮೋಸಾಯಿಕ್ ನೆಲಹಾಸುಗಳು, ಮಾರ್ಬಲ್ ನೆಲಗಳು ಮತ್ತು ದೊಡ್ಡ ಶಿಲುಬೆಯಾಕಾರದ ದೀಕ್ಷಾಸ್ನಾನ ಮಂದಿರವನ್ನು ಕೂಡ ಅಲ್-ಮಘ್ತಾಸ್ ಪ್ರದೇಶದಲ್ಲಿ ಪತ್ತೆ ಹಚ್ಚಲಾಗಿದೆ.

ಅಲ್-ಮಘ್ತಾಸ್ ಸಮೀಪದಲ್ಲಿ ನಡೆದ ಪುರಾತತ್ವ ಉತ್ಖನನಗಳಲ್ಲಿ ತೆಲ್ ಅಲ್-ಖರ್ರಾರ್ ಎಂಬ ಬೆಟ್ಟವೂ ಪತ್ತೆಯಾಗಿದೆ. ಈ ಬೆಟ್ಟವನ್ನು ಪ್ರವಾದಿ ಎಲೀಯರಿಗೆ ಸಂಬಂಧಿಸಿ, ಎಲೀಯ ಬೆಟ್ಟ (ಜಬಲ್ ಮಾರ್ ಎಲಿಯಾಸ್) ಎಂದು ಕರೆಯಲಾಗುತ್ತದೆ. ಬೈಝಾಂಟೈನ್ ಕಾಲಘಟ್ಟದಲ್ಲಿ—ಬಹುಶಃ ಐದನೇ ಶತಮಾನದಲ್ಲಿ—ಈ ಸ್ಥಳದಲ್ಲಿ ಪ್ರವಾದಿ ಎಲೀಯರ ಗೌರವಾರ್ಥ ಒಂದು ಮಠವನ್ನು ನಿರ್ಮಿಸಲಾಗಿತ್ತು ಎಂಬುದನ್ನು ಪುರಾತತ್ವ ಸಾಕ್ಷ್ಯಗಳು ಸೂಚಿಸುತ್ತವೆ.

ಯುನೆಸ್ಕೋ : ಮಾನವತೆಗೆ ವಿಶಿಷ್ಟ ಮೌಲ್ಯ

2015ರಲ್ಲಿ ತೆಲ್ ಅಲ್-ಖರ್ರಾರ್ ಪ್ರದೇಶವನ್ನು ಒಳಗೊಂಡಂತೆ “ಜೋರ್ಡಾನ್ ನದಿಯಾಚೆಯ ಬೆಥಾನಿ” (ಅಲ್-ಮಘ್ತಾಸ್) ಪ್ರದೇಶವನ್ನು ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲಾಯಿತು. ಯುನೆಸ್ಕೋನ ಅಧಿಕೃತ ಜಾಲತಾಣದಲ್ಲಿ ಈ ಕುರಿತು ಹೀಗೆ ವಿವರಿಸಲಾಗಿದೆ:

“ಜೋರ್ಡಾನ್ ನದಿಯಾಚೆಯ ಬೆಥಾನಿ ಕ್ರೈಸ್ತ ನಂಬಿಕೆಯ ಬಹುತೇಕ ಎಲ್ಲ ಪಂಥಗಳಿಗೆ ಅತ್ಯಂತ ಮಹತ್ವದ ಧಾರ್ಮಿಕ ಸ್ಥಳವಾಗಿದೆ. ಇಲ್ಲಿ ಸ್ನಾನಿಕ ಯೋವಾನ್ನರಿಂದ ನಜರೇತಿನ ಯೇಸು ದೀಕ್ಷಾಸ್ನಾನವನ್ನು ಸ್ವೀಕರಿಸಿದರು ಎಂಬ ನಂಬಿಕೆಯನ್ನು ಕ್ರೈಸ್ತ ಪರಂಪರೆ ಅಂಗೀಕರಿಸಿದೆ. ಈ ಗುರುತಿನೇ ಶತಮಾನಗಳ ಕಾಲ ತಪಸ್ವಿಗಳು, ಸನ್ಯಾಸಿಗಳು, ತೀರ್ಥಯಾತ್ರಿಕರು ಮತ್ತು ಯಾಜಕರು ಈ ಪ್ರದೇಶದಲ್ಲಿ ವಾಸಿಸಲು, ಇಲ್ಲಿಗೆ ಭೇಟಿ ನೀಡಲು ಮತ್ತು ತಮ್ಮ ಭಕ್ತಿ, ಆರಾಧನೆ ಹಾಗೂ ಧಾರ್ಮಿಕ ಚಟುವಟಿಕೆಗಳ ಸಾಕ್ಷ್ಯಗಳನ್ನು ಉಳಿಸಿಹೋಗಲು ಪ್ರೇರಣೆಯಾಯಿತು. ಈ ಸಾಕ್ಷ್ಯಗಳು ಕ್ರಿ.ಶ. ನಾಲ್ಕನೇ ಶತಮಾನದಿಂದ ಹದಿನೈದನೇ ಶತಮಾನವರೆಗೆ ವಿಸ್ತರಿಸಿವೆ.”

ಜಗದ್ಗುರುಗಳ ತೀರ್ಥಯಾತ್ರೆ

ಅಲ್-ಮಘ್ತಾಸಿಗೆ  ವಿಶಿಷ್ಟ ಮೌಲ್ಯ ತೀರ್ಥಯಾತ್ರೆ ನಡೆಸಿದ ಮೊದಲ ಜಗದ್ಗುರು ಪೂಜ್ಯ ಜಗದ್ಗುರು ಎರಡನೇ ಜಾನ್ ಪಾಲ್. ಅವರು 2000ದ ಇಸವಿಯ ಜೂಬಿಲಿಯ ಸಂದರ್ಭದಲ್ಲಿ ಈ ಸ್ಥಳಕ್ಕೆ ಭೇಟಿ ನೀಡಿದರು. 2009ರಲ್ಲಿ ಪೂಜ್ಯ ಜಗದ್ಗುರು ಹದಿನಾರನೆಯ ಬೆನೆಡಿಕ್ಟ್ ಈ ಪ್ರದೇಶಕ್ಕೆ ಆಗಮಿಸಿ, ಪ್ರಭು ಯೇಸು ಕ್ರಿಸ್ತರ ದೀಕ್ಷಾಸ್ನಾನ ಸ್ಮರಣಾರ್ಥ ನಿರ್ಮಿಸಲಾದ ದೇವಾಲಯದ ಕಾಮಗಾರಿಗೆ ಚಾಲನೆ ನೀಡಿದ್ದರು. 2014ರಲ್ಲಿ ಪೂಜ್ಯ ಜಗದ್ಗುರು ಫ್ರಾನ್ಸಿಸ್ ಈ ಸ್ಥಳಕ್ಕೆ ಭೇಟಿ ನೀಡಿ, ಜೋರ್ಡಾನ್‌ನಲ್ಲಿ ಆಶ್ರಯ ಪಡೆದಿದ್ದ ಸಿರಿಯನ್ ಮತ್ತು ಇರಾಕಿ ಶರಣಾರ್ಥಿಗಳು, ರೋಗಿಗಳು ಮತ್ತು ಅಂಗವಿಕಲರನ್ನು ಭೇಟಿಯಾಗಿದ್ದರು.

ಪ್ರಭು ಯೇಸು ಕ್ರಿಸ್ತರ ದೀಕ್ಷಾಸ್ನಾನದ ಹೊಸ ದೇವಾಲಯವನ್ನು ಜನವರಿ 2025ರಲ್ಲಿ ವಿಧಿವಿಧಾನಗಳೊಂದಿಗೆ ಸಮರ್ಪಿಸಲಾಯಿತು. ಪೂಜ್ಯ ಜಗದ್ಗುರು ಫ್ರಾನ್ಸಿಸ್ ಅವರ ಪ್ರತಿನಿಧಿಯಾಗಿ ಪವಿತ್ರ ಸಿಂಹಾಸನದ ಕಾರ್ಯದರ್ಶಿ ಕಾರ್ಡಿನಲ್ ಪಿಯೇತ್ರೋ ಪ್ಯಾರೋಲಿನ್ ಅವರು ಈ ವಿಧಿಯನ್ನು ನೆರವೇರಿಸಿದರು. ಇದು ಇಂದಿನ ದಿನಗಳಲ್ಲಿ ಜೋರ್ಡಾನ್‌ನ ಅತಿದೊಡ್ಡ ಕಥೊಲಿಕ ದೇವಾಲಯವಾಗಿದ್ದು, ಈ ಪ್ರದೇಶದಲ್ಲಿ ವಿವಿಧ ಕ್ರೈಸ್ತ ಪಂಥಗಳ ದೇವಾಲಯಗಳೂ ಸ್ಥಾಪಿತವಾಗಿವೆ.

11 ಜನವರಿ 2026, 18:04