ಹುಡುಕಿ

2025.12.22 Visita del cardinale Tagle al Vicariato dell'Arabia del Sud (Credits: Apostolic Vicariate of Southern Arabia / AVOSA) 2025.12.22 Visita del cardinale Tagle al Vicariato dell'Arabia del Sud (Credits: Apostolic Vicariate of Southern Arabia / AVOSA) 

ಕಾರ್ಡಿನಲ್ ತಾಗ್ಲೆಯವರಿಂದ ಹಾಂಗ್‌ಕಾಂಗ್ ಧರ್ಮಕ್ಷೇತ್ರದ 80ನೇ ವಾರ್ಷಿಕೋತ್ಸವ ಆಚರಣೆ

ಹಾಂಗ್‌ಕಾಂಗ್ ಧರ್ಮಕ್ಷೇತ್ರ ಸ್ಥಾಪನೆಯ 80ನೇ ವರ್ಷಾಚರಣೆಯ ಸಂದರ್ಭದಲ್ಲಿ ಕಾರ್ಡಿನಲ್ ಲೂಯಿಸ್ ಅಂಟೋನಿಯೋ ತಾಗ್ಲೆ ಬಲಿಪೂಜೆ ಸಲ್ಲಿಸಿ, 4 ಲಕ್ಷಕ್ಕೂ ಹೆಚ್ಚು ಕಥೋಲಿಕ ವಿಶ್ವಾಸಿಗಳಿಗೆ ಸಮಾಜಕ್ಕೆ ಭರವಸೆಯ ಸಾಧನಗಳಾಗುವಂತೆ ಹಾಗೂ ಪ್ರಭುವಿನ ಧೈರ್ಯಶಾಲಿ ಸಾಕ್ಷಿಗಳಾಗುವಂತೆ ಕರೆ ನೀಡಿದರು.

ಲೇಖಕರು: ಕೀಲ್ ಗಸ್ಸಿ

ಹಾಂಗ್‌ಕಾಂಗ್ ಧರ್ಮಕ್ಷೇತ್ರ ಸ್ಥಾಪನೆಯ 80ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಾರ್ಥನೆ, ಭಜನೆ ಮತ್ತು ಸಂಗೀತದೊಂದಿಗೆ ವಿಶೇಷ ಆಚರಣೆ ನಡೆಯಿತು. ಈ ಸಮಾರಂಭದಲ್ಲಿ ಧರ್ಮಕ್ಷೇತ್ರದ ವಿವಿಧ ಭಾಗಗಳಿಂದ ಬಂದ ವಿಶ್ವಾಸಿಗಳು ಒಂದಾಗಿ ಸೇರಿದರು.

ಜನವರಿ 18ರಂದು ಹಾಂಗ್‌ಕಾಂಗ್‌ನ ಚಾರ್ಟರ್ ಗಾರ್ಡನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಡಿನಲ್ ಪೂಜ್ಯ ಲೂಯಿಸ್ ಅಂಟೋನಿಯೋ ತಾಗ್ಲೆ, “ಪ್ರಭುಯೇಸು ಕ್ರಿಸ್ತನ ಪವಿತ್ರ ಮುಖವು ಸದಾ ಹಾಂಗ್‌ಕಾಂಗ್ ಮೇಲೆ ಪ್ರಕಾಶಿಸಲಿ” ಎಂದು ಆಶೀರ್ವಚನ ನೀಡಿದರು.

ಸುವಾರ್ತಾಪ್ರಚಾರ ದಿಕಾಸ್ಟರಿಯ ಪ್ರಧಾನ ಆಡಳಿತಾಧಿಕಾರಿಯಾದ ಆಗಿರುವ ಕಾರ್ಡಿನಲ್ ತಾಗ್ಲೆ , ಕ್ರೈಸ್ತ ಆಶೀರ್ವಾದದ ಬೈಬಲ್ ಮೂಲ ಹಾಗೂ ಅದರ ಆತ್ಮಾರ್ಥವನ್ನು ವಿವರಿಸಿದರು. ನಂತರ, ಹಾಂಗ್‌ಕಾಂಗ್‌ನ ಧರ್ಮಾಧ್ಯಕ್ಷರಾದ ಜೆಸುಯಿಟ್ ಕಾರ್ಡಿನಲ್ ಪೂಜ್ಯ ಸ್ಟೀಫನ್ ಚೌ ಸೌ–ಯಾನ್ ಅವರೊಂದಿಗೆ, ಸಮಾರಂಭದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಹಾಗೂ ಸಂಪೂರ್ಣ ನಗರಕ್ಕೂ ಆಶೀರ್ವಾದ ನೀಡಿದರು.

ಪ್ರಭು ಯೇಸುವಿನ ಮುಖಕಾಂತಿಯ ಅನುಭವ

ವ್ಯಾಟಿಕನ್‌ ಫಿಡೆಸ್ ಸುದ್ದಿಸಂಸ್ಥೆಯ ಪ್ರಕಾರ, ಕಾರ್ಡಿನಲ್ ಲೂಯಿಸ್ ಅಂಟೋನಿಯೋ ತಾಗ್ಲೆ ಅವರು ಸಂಖ್ಯಾಕಾಂಡದಲ್ಲಿರುವ ಆಶೀರ್ವಚನದಿಂದ — “ಪ್ರಭು ತನ್ನ ಮುಖವನ್ನು ನಿನ್ನ ಮೇಲೆ ಪ್ರಕಾಶಿಸಲಿ ಮತ್ತು ನಿನಗೆ ಶಾಂತಿಯನ್ನು ನೀಡಲಿ” — ಪ್ರೇರಣೆ ಪಡೆದರು. ಇದನ್ನು ಅವರು “ದೇವರು ನಮಗೆ ನೀಡಲು ಬಯಸುವ ಆಶೀರ್ವಾದ” ಎಂದು ವಿವರಿಸಿ, ಎಲ್ಲಾ ಯುಗಗಳಲ್ಲಿಯೂ ಪುರುಷರು ಮತ್ತು ಮಹಿಳೆಯರ ಮೇಲೆ ದೇವರ ಮುಖ ಪ್ರಕಾಶಿಸಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.

“ದೇವರು ನಮಗೆ ಮತ್ತು ಹಾಂಗ್‌ಕಾಂಗ್‌ಗೆ ನೀಡುವ ಆಶೀರ್ವಾದವೆಂದರೆ ಯೇಸು ಕ್ರಿಸ್ತನಲ್ಲಿ ಪ್ರಕಟವಾದ ಆತನ ಪವಿತ್ರ ಮುಖವೇ”, ಎಂದು ಕಾರ್ಡಿನಲ್ ಟ್ಯಾಗ್ಲೆ ಹೇಳಿದರು. ಆ ಮುಖವು ಸಂಪೂರ್ಣವಾಗಿ ದೈವಿಕವೂ ಆಗಿದ್ದು, ಸಂಪೂರ್ಣವಾಗಿ ಮಾನವೀಯವೂ ಆಗಿದೆ ಎಂದರು.

ಮಕ್ಕಳ ಮುಖದ ಮೂಲಕವೂ ಯೇಸುವಿನ ಮುಖವನ್ನು ಅನುಭವಿಸಬಹುದು ಎಂದು ಅವರು ತಿಳಿಸಿದರು. ಮಕ್ಕಳು ಸದಾ ಸಮಾಜಕ್ಕೆ ಆಶೀರ್ವಾದವಾಗಿದ್ದಾರೆ ಎಂದು ಹೇಳಿದ ಅವರು, “ಯಾವುದೇ ಮಗು ಅಥವಾ ಯುವಜೀವವೂ ಸಮಸ್ಯೆಯಲ್ಲ” ಎಂದು ಸ್ಪಷ್ಟಪಡಿಸಿದರು.

ಆದ್ದರಿಂದ ಹಾಂಗ್‌ಕಾಂಗ್‌ಗೆ ನಿಜವಾದ ಆಶೀರ್ವಾದವೆಂದರೆ “ಅದರ ಮೇಲೆ ಪ್ರಕಾಶಿಸುವ ದೇವರ ಮುಖ” ಎಂದು ಕಾರ್ಡಿನಲ್ ತಾಗ್ಲೆ ಹೇಳಿದರು. ಯೇಸುವಿನ ಮುಖವು ಸದಾ ಹಾಂಗ್‌ಕಾಂಗ್ ಮೇಲೆ ಪ್ರಕಾಶಿಸಲಿ ಮತ್ತು ನಗರವು ಆತನ ಸನ್ನಿಧಿಯಲ್ಲಿ ಸದಾ ಆನಂದಿಸಲಿ ಎಂಬುದು ಅವರ ಆಶಯವಾಗಿದೆ. ಈ ಮನೋಭಾವದಲ್ಲಿ, ಜನರನ್ನು “ಸಮಾಜಕ್ಕೆ ಭರವಸೆ ತರುವಂತೆ” ಹಾಗೂ “ಪ್ರಭುವಿನ ಧೈರ್ಯಶಾಲಿ ಸಾಕ್ಷಿಗಳಾಗುವಂತೆ” ಆಹ್ವಾನಿಸಲಾಯಿತು.

ಇತರರಿಗೆ ಆಶೀರ್ವಾದದ ದೀವಿಗೆಗಳಾಗಿ 

ತಮ್ಮ ಭಾಷಣದಲ್ಲಿ, ಪ್ರಧಾನ ಆಡಳಿತಾಧಿಕಾರಿಯಾದ ಕಾರ್ಡಿನಲ್ ತಾಗ್ಲೆ ಅವರು ಹಾಂಗ್‌ಕಾಂಗ್‌ನ ಎಲ್ಲರನ್ನು ಈ “ಆಶೀರ್ವಾದಗಳನ್ನು” ಬೆಳೆಸಿಕೊಳ್ಳಲು ಉತ್ತೇಜಿಸಿದರು. ಪ್ರತಿಯೊಬ್ಬರೂ “ಇತರರಿಗೆ ಆಶೀರ್ವಾದವಾಗುವ” ಸಾಮರ್ಥ್ಯ ಹೊಂದಿದ್ದಾರೆ ಎಂಬುದನ್ನು ಅವರು ನೆನಪಿಸಿದರು.

ಸಮಾರಂಭದಲ್ಲಿ ವಿವಿಧ ರಾಷ್ಟ್ರಗಳು ಮತ್ತು ಹಿನ್ನೆಲೆಯ ಜನರು ಹಾಂಗ್‌ಕಾಂಗ್‌ಗಾಗಿ ವಿಭಿನ್ನ ಭಾಷೆಗಳಲ್ಲಿ ಪ್ರಾರ್ಥಿಸಿದರು. ಕ್ಯಾಂಟೊನೀಸ್, ಫಿಲಿಪ್ಪಿನೋ, ಫ್ರೆಂಚ್, ಮಂಡರಿನ್, ಕೊರಿಯನ್ ಮತ್ತು ವಿಯೆಟ್ನಾಮೀಸ್ ಭಾಷೆಗಳಲ್ಲಿ ಪ್ರಾರ್ಥನೆ ನಡೆಯಿತು.

ಸ್ಥಳೀಯ ಧರ್ಮಕ್ಷೇತ್ರದ ವಾರಪತ್ರಿಕೆ ದಿ ಸಂಡೇ ಎಕ್ಸಾಮಿನರ್ ಪ್ರಕಾರ, ಹಾಂಗ್‌ಕಾಂಗ್‌ನಲ್ಲಿ ತಮ್ಮ ಸಂಕ್ಷಿಪ್ತ ವಾಸದ ವೇಳೆ ಕಾರ್ಡಿನಲ್ ಟ್ಯಾಗ್ಲೆ ಅವರು ಫಿಲಿಪ್ಪಿನೋಗಳಿಗಾಗಿ ಇರುವ ಧರ್ಮಕ್ಷೇತ್ರ ಧಾರ್ಮಿಕ ಕೇಂದ್ರದ ಧಾರ್ಮಿಕ ಸಹೋದರಿಯರಾದ ಸಿಸ್ಟರ್ ಕೊರಸಾನ್ ಡೆಮೆಟಿಲ್ಲೋ ಮತ್ತು ಸಿಸ್ಟರ್ ವಿಕ್ಟೋರಿಯಾ ವಿಕ್ಟೋರಿನೋ ಅವರನ್ನು ಕೂಡ ಭೇಟಿಯಾದರು.

ವಲಸಿಗರ ಒಗ್ಗೂಡಿಕೆಯನ್ನು ಉತ್ತೇಜಿಸಲು ಸ್ಥಳೀಯ ಧರ್ಮಕೇಂದ್ರಗಳು ಕೈಗೊಂಡಿರುವ ಉಪಕ್ರಮಗಳ ಬಗ್ಗೆ ಅವರು ವಿವರಿಸಿದರು. ಜೊತೆಗೆ, ಫಿಲಿಪೈನ್ ರಾಯಭಾರಿಯ ಕಛೇರಿಯ ಸಹಕಾರದೊಂದಿಗೆ ಆಶ್ರಯಾರ್ಥಿಗಳು ಮತ್ತು ಶರಣಾರ್ಥಿಗಳಿಗೆ ಧರ್ಮಕ್ಷೇತ್ರ ನೀಡುತ್ತಿರುವ ಬೆಂಬಲದ ಕುರಿತು ಚರ್ಚಿಸಿದರು.

ಹಾಂಗ್‌ಕಾಂಗ್‌ನಲ್ಲಿ ದೊಡ್ಡ ಫಿಲಿಪ್ಪಿನೋ ಸಮುದಾಯವಿದೆ. 2021ರ ಆಗಸ್ಟ್ 31ರ ತನಕದ ಮಾಹಿತಿಯಂತೆ, ಸುಮಾರು 1,77,000 ಫಿಲಿಪ್ಪಿನೋಗಳು ಹಾಂಗ್‌ಕಾಂಗ್‌ನ ಅಸ್ಥಾಯಿ ನಿವಾಸಿಗಳಾಗಿದ್ದಾರೆ. ಈ ಫಿಲಿಪ್ಪಿನೋ ಕಥೋಲಿಕರಲ್ಲಿ ಅನೇಕರು ವಾರ್ಷಿಕೋತ್ಸವದ ಆಚರಣೆಯಲ್ಲಿ ಭಾಗವಹಿಸಿದ್ದರು.

ಹಾಂಗ್‌ಕಾಂಗ್‌ನ 74 ಲಕ್ಷಕ್ಕಿಂತ ಹೆಚ್ಚು ಶಾಶ್ವತ ನಿವಾಸಿಗಳಲ್ಲಿ, ಸುಮಾರು 4 ಲಕ್ಷಕ್ಕೂ ಅಧಿಕರು ಕಥೋಲಿಕರು.

 

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

26 ಜನವರಿ 2026, 22:41