ಹುಡುಕಿ

Christmas preparations in Bethlehem Christmas preparations in Bethlehem  (ANSA)

ಬೆತ್ಲೆಹೇಮ್‌ನ ಕ್ರಿಸ್ತ ಜನ್ಮ ಗವಿಯ ಜೀರ್ಣೋದ್ದಾರ – ಭರವಸೆ ಮತ್ತು ಏಕತೆಯ ಸಂಕೇತ

ಜೆರುಸಲೇಮ್‌ನ ಗ್ರೀಕ್ ಆರ್ಥೋಡಾಕ್ಸ್ ಪಿತೃಸ್ಥಾನ ಹಾಗೂ ಪವಿತ್ರ ಭೂಮಿಯ ರಕ್ಷಣಾ ವಿಭಾಗ( Custody of Holy Land) , ಕ್ರೈಸ್ತಧರ್ಮದ “ಪಾಲನಾ ತೊಟ್ಟಿಲು” ಎಂದು ಪರಿಗಣಿಸಲ್ಪಡುವ ಬೆತ್ಲೆಹೇಮ್‌ನ ಕ್ರಿಸ್ತ ಜನ್ಮ ಗವಿಯ (Grotto of the Nativity) ಜೀರ್ಣೋದ್ದಾರ ಕಾರ್ಯಗಳು ಆರಂಭಗೊಳ್ಳಲಿರುವುದಾಗಿ ಘೋಷಿಸಿವೆ. ಯೇಸು ಕ್ರಿಸ್ತರು ಜನಿಸಿದ ಪವಿತ್ರ ಸ್ಥಳದಲ್ಲಿ ನಡೆಯಲಿರುವ ಈ ಪುನರ್‌ನಿರ್ಮಾಣ ಕಾರ್ಯಗಳನ್ನು, ಭರವಸೆ, ಸಹಕಾರ ಮತ್ತು ಕ್ರೈಸ್ತ ಏಕತೆಯ ಮಹತ್ವದ ಸಂಕೇತವೆಂದು ತಿಳಿಸಲಾಗಿದೆ.

ಲೇಖಕರು: ಸಿಸಿಲಿಯ ಸೆಪ್ಪಿಯಾ

ಬೆತ್ಲೆಹೇಮಿನಲ್ಲಿ ಕ್ರಿಸ್ತನ ಜನ್ಮಸ್ಥಳವಾದ ಕ್ರಿಸ್ತ ಜನ್ಮ ಗವಿಯ ಜೀರ್ಣೋದ್ದಾರ ಕಾರ್ಯಗಳು ಆರಂಭಗೊಳ್ಳಲು ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಸುಮಾರು 600 ವರ್ಷಗಳ ಬಳಿಕ ಈ ಪವಿತ್ರ ಸ್ಥಳದಲ್ಲಿ ಮೊದಲ ಬಾರಿ ಸಮಗ್ರ ಪುನರ್‌ಸ್ಥಾಪನಾ ಕಾರ್ಯ ನಡೆಯಲಿದೆ.

ಈ ಘೋಷಣೆಯನ್ನು ಜೆರುಸಲೇಮ್‌ನ ಗ್ರೀಕ್ ಆರ್ಥಡಾಕ್ಸ್ ಪಿತೃಸ್ಥಾನ ಹಾಗೂ ಪವಿತ್ರ ಭೂಮಿಯ ಸಂರಕ್ಷಣಾ ಸಂಸ್ಥೆ (Custody of the Holy Land) ಒಟ್ಟಾಗಿ ಪ್ರಕಟಿಸಿವೆ. ಈ ಮಹತ್ವದ ಯೋಜನೆಯಲ್ಲಿ ಅರ್ಮೇನಿಯನ್ ಅಪೋಸ್ತೋಲಿಕ್ ಆರ್ಥಡಾಕ್ಸ್ ಪಿತೃಸ್ಥಾನ ಸಹಭಾಗಿತ್ವವೂ ಇದ್ದು, ಪ್ಯಾಲೆಸ್ಟೈನ್ ರಾಜ್ಯದ ಅಧ್ಯಕ್ಷರ ಆಶ್ರಯದಲ್ಲಿ ಈ ಕಾರ್ಯ ನಡೆಯಲಿದೆ ಎಂದು ತಿಳಿಸಲಾಗಿದೆ.

2025ರ ನವೆಂಬರ್‌ನಲ್ಲಿ ರೋಮ್‌ಗೆ ಭೇಟಿ ನೀಡಿದ ವೇಳೆ ಪ್ಯಾಲೆಸ್ಟೈನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್,  ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರನ್ನು ಭೇಟಿಯಾದ ಸಂದರ್ಭದಲ್ಲಿಯೂ ಹಾಗೂ “ಬೆತ್ಲೆಹೇಮಿನ ಪುನರ್ಜನ್ಮ” (“Bethlehem Reborn”) ಪ್ರದರ್ಶನ ಉದ್ಘಾಟನೆಯಲ್ಲಿಯೂ ಈ ಜೀರ್ಣೋದ್ದಾರ ಯೋಜನೆಯನ್ನು ಉಲ್ಲೇಖಿಸಿದ್ದರು. ಕ್ರಿಸ್ತನು ಜನಿಸಿದ ಈ ಸ್ಥಳದ ಪುನರ್‌ನವೀಕರಣವು “ಪವಿತ್ರ ಭೂಮಿಗೆ ಮಹತ್ತರ ಆಶೆಯೂ ಪುನರ್ಜನ್ಮದ ಸಂಕೇತವೂ ಆಗಿದೆ” ಎಂದು ಅವರು ಹೇಳಿದ್ದಾರೆ.

2024ರಲ್ಲಿ ಹೊರಡಿಸಲಾದ ಅಧ್ಯಕ್ಷೀಯ ಆದೇಶದ ಅನುಸಾರವಾಗಿ ಹಾಗೂ ಪವಿತ್ರ ಸ್ಥಳಗಳಿಗೆ ಸಂಬಂಧಿಸಿದ ಐತಿಹಾಸಿಕ ಯಥಾಸ್ಥಿತಿ (status quo) ನಿಯಮಗಳನ್ನು ಗೌರವಿಸಿ, ವಿವಿಧ ಕ್ರೈಸ್ತ ಸಮುದಾಯಗಳಿಂದ ಪೂಜಿಸಲ್ಪಡುವ ಈ ಗವಿಗೆ ಈಗ ಅಗತ್ಯವಿರುವ ಸಂರಕ್ಷಣಾ ಕಾಳಜಿ ದೊರಕಲಿದೆ.

ಕ್ರಿಸ್ತ ಜನ್ಮ ಗವಿಯ ಜೀರ್ಣೋದ್ದಾರಕ್ಕೆ ಇಟಾಲಿಯನ್ ಕಂಪನಿ ನೇಮಕ

ಈ ಜೀರ್ಣೋದ್ದಾರ ಕಾರ್ಯವನ್ನು ಇಟಲಿಯ ಪ್ರಾಟೋ ನಗರದಲ್ಲಿರುವ ಇಟಾಲಿಯನ್ ಕಂಪನಿಯೊಂದು ಕೈಗೊಳ್ಳಲಿದೆ. ಇದೇ ಸಂಸ್ಥೆ   ಎರಡು ವರ್ಷಗಳ ಹಿಂದೆಯಷ್ಟೇ, ವಿಶಾಲ ಮತ್ತು ಸೂಕ್ಷ್ಮ ಪುನರ್‌ಸ್ಥಾಪನಾ ಯೋಜನೆಯಡಿ ಕ್ರಿಸ್ತ ಜನ್ಮ ಬಸಿಲಿಕಾವನ್ನು ಯಶಸ್ವಿಯಾಗಿ ಜೀರ್ಣೋದ್ದಾರ ಮಾಡಿತ್ತು.

ಈ ಕಂಪನಿಯ ಆಯ್ಕೆಯು, ಕಾರ್ಯವಿಧಾನದ ನಿರಂತರತೆ, ಕೈಚಾಣಾಕ್ಷತೆ ಹಾಗೂ ಅಪಾರ ಪವಿತ್ರ ಮೌಲ್ಯ ಹೊಂದಿರುವ ಸ್ಥಳದತ್ತ ಅಗತ್ಯವಿರುವ ಕಲಾತ್ಮಕ ಸಂವೇದನಾಶೀಲತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಮಾಡಲಾಗಿದೆ. ಪವಿತ್ರ ಭೂಮಿಯ ಸಂರಕ್ಷಣಾ ಸಂಸ್ಥೆಯ ವೆಬ್‌ಸೈಟ್ ಪ್ರಕಾರ, ಪೂರ್ವಸಿದ್ಧತಾ ಕಾರ್ಯಗಳು ಈಗಾಗಲೇ ಪೂರ್ಣಗೊಂಡಿದ್ದು, ಜೀರ್ಣೋದ್ದಾರ ಕೆಲಸಗಳು ಆರಂಭಕ್ಕೆ ಸಿದ್ಧವಾಗಿವೆ.

ಯೋಜನೆಯಡಿಯಲ್ಲಿ ಕ್ರಿಸ್ತ ಜನ್ಮ ಗವಿಯೊಳಗಿನ ಕಾರ್ಯಗಳು—ಬೆತ್ತಲೆ ಶಿಲಾಸ್ಥರ, ಮಾರ್ಬಲ್ ನೆಲಹಾಸು, ಕಂಬಗಳು, ಅಲಂಕಾರಗಳು ಹಾಗೂ ಯೇಸು ಜನಿಸಿದ ನಿಖರ ಸ್ಥಳವನ್ನು ಸೂಚಿಸುವ ನಕ್ಷತ್ರ—ಇವೆಲ್ಲದರ ಸಂರಕ್ಷಣೆಯೊಂದಿಗೆ, ಪಕ್ಕದ ಭಾಗಗಳಲ್ಲಿ ಅಗತ್ಯವಾದ ತಾಂತ್ರಿಕ ಬಲವರ್ಧನಾ ಕ್ರಮಗಳನ್ನೂ ಕೈಗೊಳ್ಳಲಾಗುತ್ತದೆ. ಇದು ಈ ಪವಿತ್ರ ಸ್ಥಳದ ವಾಸ್ತುಶಿಲ್ಪದ ಏಕತೆಗೂ, ಮಾನವಕುಲದ ಹಿತಕ್ಕಾಗಿ ವಿವಿಧ ಸಮುದಾಯಗಳು ತೋರಿಸುವ ಸಹಕಾರದ ಮನೋಭಾವಕ್ಕೂ ಪ್ರತಿಬಿಂಬವಾಗಿದೆ.

ಈ ಜೀರ್ಣೋದ್ದಾರ ಕಾರ್ಯವು ಸ್ಥಳೀಯ ಕಾರ್ಮಿಕ ಕುಟುಂಬಗಳಿಗೆ ಸಹ ನೆರವಾಗಲಿದೆ. ಪುನರ್‌ಸ್ಥಾಪನಾ ತರಬೇತಿ ಪಡೆದ ಹಲವರಿಗೆ ಉದ್ಯೋಗ ದೊರಕುವುದರಿಂದ, ಇದು ಬೆತ್ಲೆಹೇಮ್‌ನ ಆರ್ಥಿಕತೆಗೆ ಸಹ ಸಕಾರಾತ್ಮಕ ಪರಿಣಾಮ ಬೀರುವ ನಿರೀಕ್ಷೆಯಿದೆ.

ಇಸ್ರಾಯೇಲ್–ಹಮಾಸ್ ಸಂಘರ್ಷ ಹಾಗೂ ತೀರ್ಥಯಾತ್ರೆಗಳ ಸ್ಥಗಿತದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಪರಿಸ್ಥಿತಿ ಕಠಿಣವಾಗಿತ್ತು. ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶಾಂತಿ ಯೋಜನೆಯ “ಹಂತ–2” ಆರಂಭವಾಗುತ್ತಿದ್ದಂತೆ, ತೀರ್ಥಯಾತ್ರೆಗಳು ನಿಧಾನವಾಗಿ ಪುನರಾರಂಭಗೊಳ್ಳುತ್ತಿವೆ ಎಂದು ತಿಳಿಸಲಾಗಿದೆ.

ಏಕತೆಯ ಸಂಕೇತ

ಇದು ಪುನರ್ಜನ್ಮದ ಸಂಕೇತವಾಗಿರುವುದರ ಜೊತೆಗೆ, ಗ್ರೀಕ್ ಆರ್ಥಡಾಕ್ಸ್ ಕ್ರೈಸ್ತರು ಮತ್ತು ಕ್ರಿಸ್ತ ಜನ್ಮ ಗವಿಯ ಸಂರಕ್ಷಕರಾದ ಫ್ರಾನ್ಸಿಸ್ಕನ್ ಸಮುದಾಯದ ಸಹಕಾರದಿಂದ ರೂಪುಗೊಂಡ ಬಲಿಷ್ಠ ಸಾರ್ವತ್ರಿಕ (ಎಕುಮೆನಿಕಲ್) ಮುಂದಾಳತ್ವವೂ ಆಗಿದೆ.

“ಈ ಯೋಜನೆ ಭವಿಷ್ಯ ಪೀಳಿಗೆಗಳಿಗಾಗಿ ಪವಿತ್ರ ಕ್ರಿಸ್ತ ಜನ್ಮ ಗವಿಯ ಆಧ್ಯಾತ್ಮಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಕ್ರೈಸ್ತರ ಏಕತೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಕ್ರೈಸ್ತ ಶ್ರದ್ಧೆಯ ಘೋಷಣೆ ಸ್ಪಷ್ಟವಾಗಿ ರೂಪ ಪಡೆದ ಸ್ಥಳದ ಘನತೆಯನ್ನು ಕಾಯ್ದುಕೊಳ್ಳುವ ಜವಾಬ್ದಾರಿಯನ್ನೂ ಇದು ಒತ್ತಿ ಹೇಳುತ್ತದೆ. ಶತಮಾನಗಳ ಕಾಲ ವಿವಿಧ ರಾಷ್ಟ್ರಗಳ ಭಕ್ತರು ಯಾತ್ರೆಗೆ ಬಂದ ಈ ಪವಿತ್ರ ಸ್ಥಳದ ಮಹಿಮೆಯನ್ನು ಉಳಿಸುವುದೇ ಇದರ ಉದ್ದೇಶ”ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ

“ಈ ಗವಿಯಲ್ಲೇ ಅವತಾರದ ರಹಸ್ಯ ಇತಿಹಾಸದೊಳಗೆ ಪ್ರವೇಶಿಸಿತು; ಅಲ್ಲಿಂದಲೇ ಕ್ರೈಸ್ತ ವಿಶ್ವಾಸವು ಐಹಿಕ ಆರಂಭವನ್ನು ಪಡೆದಿತು. ಈ ಪವಿತ್ರ ಸ್ಥಳವನ್ನು ಜೀರ್ಣೋದ್ಧಾರಗೊಳಿಸುವುದು ಎಂದರೆ, ಕ್ರಿಸ್ತ ಜನ್ಮಭೂಮಿಯಲ್ಲಿ ವಿಶ್ವಾಸ, ಸ್ಮೃತಿ ಮತ್ತು ಭಕ್ತಿಯ ನಿರಂತರತೆಯನ್ನು ಸಂರಕ್ಷಿಸುವುದಾಗಿದೆ,” ಎಂದು ಪ್ರಕಟಣೆ ವಿವರಿಸುತ್ತದೆ.

“ಈ ಸಾಮೂಹಿಕ ಪ್ರಯತ್ನದ ಮೂಲಕ, ಜೆರುಸಲೇಮಿನ ಧರ್ಮಸಭೆಗಳು ಮತ್ತು ದೇವಾಲಯಗಳು ತಮ್ಮಗೆ ಒಪ್ಪಿಸಲಾದ ಶುಭಸಂದೇಶದ ಪರಂಪರೆಯನ್ನು ರಕ್ಷಿಸುತ್ತಿವೆ. ಎಲ್ಲಾ ಪರಂಪರೆಗಳ ಭಕ್ತರು ಗೌರವಭಾವದಿಂದ ಕ್ರಿಸ್ತನ ಜನ್ಮಸ್ಥಳವನ್ನು ಪೂಜಿಸಲು ಇದು ಅವಕಾಶ ಕಲ್ಪಿಸುತ್ತದೆ. ಬೆತ್ಲೆಹೇಮಿನಿಂದ ಜನ್ಮೋತ್ಸವದ ಬೆಳಕು ಇಂದಿಗೂ ಜಗತ್ತನ್ನು ಪ್ರಕಾಶಮಾನಗೊಳಿಸುತ್ತಿದ್ದು, ಪವಿತ್ರ ಭೂಮಿಯಲ್ಲಿ ಕ್ರೈಸ್ತರ ಶಾಶ್ವತ ಉಪಸ್ಥಿತಿಗೂ, ರಕ್ಷಕನು ಜನಿಸಿದ ಆ ಪವಿತ್ರ ಗೋದಲಿಯಿಂದ ಹರಡುವ ಆಶಾಕಿರಣಕ್ಕೂ ಸಾಕ್ಷಿಯಾಗಿದೆ.”


ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

26 ಜನವರಿ 2026, 22:33