ಹುಡುಕಿ

People warm up in a tent provided by emergency services for residents whose apartments are left without heating in Kyiv People warm up in a tent provided by emergency services for residents whose apartments are left without heating in Kyiv 

ಸೇವಾಭಾವದ ಉಷ್ಣದಿಂದ ಕಡುಚಳಿಯನ್ನು ಎದುರಿಸುತ್ತಿರುವ ಉಕ್ರೇನ್

ಡ್ನಿಪ್ರೋ ನಗರದಲ್ಲಿ ಹುಟ್ಟಿಕೊಂಡ ‘ದಿ ಸೀವಿಂಗ್ ಕಂಪನಿ’ ಎಂಬ ಸ್ವಯಂಸೇವಕ ಸಂಸ್ಥೆಯು, ಈಗ ವಿಶ್ವದ ವಿವಿಧ ದೇಶಗಳ ಮಹಿಳೆಯರ ಸಹಕಾರವನ್ನೂ ಪಡೆದು, ಯುದ್ಧದಲ್ಲಿ ಗಾಯಗೊಂಡ ಸೈನಿಕರು ಹಾಗೂ ನಾಗರಿಕರಿಗೆ ಉಚಿತವಾಗಿ “ಅನುಕೂಲಿತ” (Adaptive) ಉಡುಪುಗಳನ್ನು ತಯಾರಿಸಿ ನೀಡುತ್ತಿದೆ. ಇದರ ಮೂಲಕ ಅವರು ಕಠಿಣ ಚಳಿಗಾಲದ ತೀವ್ರ ತಾಪಮಾನವನ್ನು ಜಯಿಸಲು ನೆರವಾಗುತ್ತಿದ್ದಾರೆ.

ಲೇಖನ: ಸ್ವಿತ್ಲಾನಾ ದುಖೋವಿಚ್

ರಷ್ಯಾದ ಉಕ್ರೇನ್ ಮೇಲಿನ ಸಂಪೂರ್ಣ ಪ್ರಮಾಣದ ಆಕ್ರಮಣವು 2022ರ ಫೆಬ್ರವರಿ 24ರಂದು—ಚಳಿಗಾಲದ ಮಧ್ಯದಲ್ಲೇ—ಆರಂಭವಾಯಿತು. ಆ ಚಳಿಗಾಲವು ತುಸು ಮೃದುವಾಗಿದ್ದರೂ, ಬೇಗನೆ ಚಳಿ ನಾಗರಿಕರಿಗೂ ಸೈನಿಕರಿಗೂ ದೊಡ್ಡ ಸವಾಲಾಗಿ ಪರಿಣಮಿಸಿತು. ಯಾರೂ ಸಿದ್ಧರಾಗಿರಲಿಲ್ಲ. ಮೂಲಭೂತ ಸಂಪನ್ಮೂಲಗಳ ಕೊರತೆ ಇತ್ತು; ಕನಿಷ್ಠ ಮಟ್ಟದ ಭದ್ರತೆಯೂ ಕೈಗೆಟುಕದಂತಾಗಿತ್ತು.

ಆದರೂ ಈ ಸಂಕಷ್ಟಗಳ ನಡುವೆಯೇ ಉಕ್ರೇನಿನವರು ಪ್ರತಿರೋಧಿಸಲು ಬೇಕಾದ ಧೈರ್ಯವನ್ನು ಕಂಡುಕೊಂಡರು. ಸ್ವಯಂಸಂಘಟನೆ ಮಾಡುವ ತಮ್ಮ ಶಕ್ತಿಯನ್ನು ಆಧಾರವಾಗಿ ಇಟ್ಟುಕೊಂಡು, ಅಸಾಧ್ಯವೆನಿಸಿದ ಸಂದರ್ಭದಲ್ಲಿಯೂ—ಅತಿದಟ್ಟ ಅಂಧಕಾರದ ಕ್ಷಣಗಳಲ್ಲಿ, ಅತಿಕಡು ಚಳಿಯ ಪ್ರದೇಶಗಳಲ್ಲಿ—ಮಾನವೀಯ ಉಷ್ಣತೆಯ ಸಣ್ಣ ದೀಪಗಳನ್ನು ಬೆಳಗಿಸಿದರು.

ಇಂತಹ ಪರಸ್ಪರ ಕಾಳಜಿ, ಸಹಕಾರ ಮತ್ತು ಸಹಾನುಭೂತಿಯ ಕಾರ್ಯಗಳಲ್ಲಿಯೇ ಯುದ್ಧದ ನಡುವೆ ಸಹ ಜೀವನ ಇನ್ನೂ ಹಸಿರಾಗಿ ಉಳಿಯುತ್ತಿದೆ.

ಸಂಸ್ಥೆಯ ಜನನ

ಡ್ನಿಪ್ರೋ ಎಂಬ ಪೂರ್ವ ಉಕ್ರೇನಿನ ಪ್ರದೇಶದ ರಾಜಧಾನಿ ನಗರದಿಂದ ಬಂದ ಯುವತಿ ಕ್ಸೇನಿಯಾ ಸಮೋಯ್ಲಿಚ್ ಅವರು ‘ದಿ ಸೀವಿಂಗ್ ಕಂಪನಿ’ ಎಂಬ ಸ್ವಯಂಸೇವಕ ಸಂಸ್ಥೆಯ  ಕಥೆಯನ್ನು ಹಂಚಿಕೊಳ್ಳುತ್ತಾರೆ.

ಆರಂಭದಿಂದಲೂ ಈ ತಂಡವು 90ಕ್ಕೂ ಹೆಚ್ಚು ಉಕ್ರೇನಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಗೊಂಡ ನಾಗರಿಕರು ಹಾಗೂ ಸೈನಿಕರಿಗೆ 3 ಲಕ್ಷಕ್ಕೂ ಹೆಚ್ಚು ಅನುಕೂಲಿತ ಉಡುಪುಗಳನ್ನು ತಯಾರಿಸಿ ಒದಗಿಸಿದೆ. ವಿಶ್ವದ ವಿವಿಧ ಭಾಗಗಳಿಂದ 800ಕ್ಕೂ ಹೆಚ್ಚು ಸ್ವಯಂಸೇವಕರು ಇದರೊಂದಿಗೆ ಕೈಜೋಡಿಸಿದ್ದಾರೆ.

“ನಾವು 2022ರ ಫೆಬ್ರವರಿ 28ರಂದು ಮೆರಿನಾ ಪಾಲ್ಚೆಂಕೋ ಅವರ ಜೊತೆಗೂಡಿ ಈ ಸಂಸ್ಥೆ ಆರಂಭಿಸಿದ್ದೇವೆ,” ಎಂದು ಕ್ಸೇನಿಯಾ ವಿವರಿಸುತ್ತಾರೆ. “ಇದು ಇನ್‌ಸ್ಟಾಗ್ರಾಂನಲ್ಲಿ ಪ್ರಾದೇಶಿಕ ರಕ್ಷಣಾ ಪಡೆಗೆ ಸೇರಿದ ಯುವಕರಿಗೆ ಬಾಲಕ್ಲಾವಾ (ಮುಖ ಮುಚ್ಚುವ ಉಣ್ಣೆ ಟೋಪಿ) ಹೊಲೆಯುವವರು ಬೇಕೆಂದು ಹಾಕಿದ ಒಂದು ಕರೆಯೊಂದಿಗೆ ಶುರುವಾಯಿತು.

ಡ್ನಿಪ್ರೋದಲ್ಲಿದ್ದ ಕೆಲವು ಐಟಿ ಉದ್ಯೋಗಿಗಳು ಹೊಲಿಗೆಗೆ ಜಾಗ ಮತ್ತು ಬಟ್ಟೆ ಖರೀದಿಗೆ ಹಣ ಒದಗಿಸಿದರು. ನಾವು ನಮ್ಮ ಹೊಲಿಗೆ ಯಂತ್ರಗಳನ್ನು ತಂದೆವು. ಮೆರಿನಾ ಮತ್ತು ನಾನು ಹೋಗುತ್ತಿದ್ದ ಹೊಲಿಗೆ ತರಗತಿಯ ಇತರ ಮಹಿಳೆಯರನ್ನೂ ಸೇರಿಸಿಕೊಂಡೆವು.”

ಕಟ್ಟುನಿಟ್ಟಾದ ಸಂಘಟನೆ ಮತ್ತು ಶಿಸ್ತುಬದ್ಧ ನಿರ್ವಹಣೆಯಿಂದ ತಂಡವು ಬೇಗನೆ ದಿನಕ್ಕೆ 495 ಬಾಲಕ್ಲಾವಾಗಳವರೆಗೆ ತಯಾರಿಸುವ ಮಟ್ಟ ತಲುಪಿತು—ಯುದ್ಧದ ಮುನ್ನ ಅಂಥ ಸಂಖ್ಯೆ ಕಲ್ಪನೆಗೂ ಅಸಾಧ್ಯವಾಗಿತ್ತು. ನಂತರ ಬೇಡಿಕೆಗಳು ಇನ್ನಷ್ಟು ವಿಸ್ತರಿಸಿ, ಉಷ್ಣಾಂಶ ಕಾಪಾಡುವ ಒಳಉಡುಪುಗಳಿಗೂ ತಲುಪಿದವು. ಆದರೆ ಅಗತ್ಯ ವಸ್ತುಗಳನ್ನು ಪೂರೈಸುವುದು ದೊಡ್ಡ ಸಮಸ್ಯೆಯಾಗಿತ್ತು: ಹಲವಾರು ಅಂಗಡಿಗಳು ಮುಚ್ಚಿದ್ದವು; ಸೂಕ್ತ ಬಟ್ಟೆ ಸಿಗುವುದು ಕಷ್ಟವಾಗಿತ್ತು. ಹಣ ಮುಗಿದಾಗ, ತಂಡವು ಸಾಮಾಜಿಕ ಜಾಲತಾಣಗಳ ಮೂಲಕ ನೆರವು ಕೋರಿತು.

ಯುದ್ಧದಿಂದ ಸ್ಥಳಾಂತರಗೊಂಡವರೂ ಸೇರಿದಂತೆ, ಉಕ್ರೇನಿನ ಹಲವು ಪ್ರದೇಶಗಳ ಹೊಲಿಗೆಯವರು “ನಾವೂ ಸಹಾಯ ಮಾಡಬೇಕು” ಎಂದು ಮುಂದೆ ಬಂದರು. ತಂಡವು ನಿಧಿ ಸಂಗ್ರಹ ಆರಂಭಿಸಿ, ದೊಡ್ಡ ಪ್ರಮಾಣದಲ್ಲಿ ಬಟ್ಟೆ ಖರೀದಿಸಿ, ದೇಶದ ವಿವಿಧ ಭಾಗಗಳ ಸ್ವಯಂಸೇವಕರಿಗೆ ಹೊಲಿಗೆ ಕಿಟ್‌ಗಳನ್ನು ಕಳುಹಿಸತೊಡಗಿತು.

ವಿನ್ಯಾಸಗಳು ಮತ್ತು ಸೂಚನೆಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ಪರಿಣಾಮ, ‘ದಿ ಸೀವಿಂಗ್ ಕಂಪನಿ’ ಉಕ್ರೇನಿನ ಗಡಿಯನ್ನು ದಾಟಿ ವಿಸ್ತರಿಸಿತು. ಇಂದು ಉಕ್ರೇನಿನ ನಗರಗಳಲ್ಲಷ್ಟೇ ಅಲ್ಲದೆ ಕೆನಡಾ, ಸ್ವಿಟ್ಜರ್ಲ್ಯಾಂಡ್, ಮಾಂಟೆನೇಗ್ರೋ, ಯುನೈಟೆಡ್ ಕಿಂಗ್‌ಡಮ್, ಪೋಲ್ಯಾಂಡ್, ಜೆಕ್ ಗಣರಾಜ್ಯ ಮತ್ತು ಜರ್ಮನಿ ಸೇರಿದಂತೆ ಹಲವು ದೇಶಗಳಲ್ಲಿ ಇದರ 25 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಗಾಯಾಳುಗಳಿಗಾಗಿ ಅನುಕೂಲಿತ ಉಡುಪು

‘ದಿ ಸೀವಿಂಗ್ ಕಂಪನಿ’ ತಯಾರಿಸುವ ಅನುಕೂಲಿತ ಉಡುಪುಗಳು ಯುದ್ಧದಲ್ಲಿ ಗಾಯಗೊಂಡ ಸೈನಿಕರಿಗೆ ಮಾತ್ರವಲ್ಲ, ಬಾಂಬ್ ದಾಳಿಗಳಿಂದ ಗಾಯಗೊಂಡ ನಾಗರಿಕರಿಗೂ ಉದ್ದೇಶಿತವಾಗಿವೆ—ಮತ್ತು ಅವುಗಳನ್ನು ಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತದೆ.

ಇದಕ್ಕೆ ಇತ್ತೀಚಿನ ಉದಾಹರಣೆ: ಒಡೆಸಾ ನಗರದ ಯೆವ್ಹೆನಿಯಾ ಎಂಬ ಮಹಿಳೆ. ಡಿಸೆಂಬರ್ 30ರಂದು ನಡೆದ ದಾಳಿಯಲ್ಲಿ   ಗಂಭೀರವಾಗಿ ಸುಟ್ಟು ಗಾಯಗೊಂಡರು.

“ನಾವು ಅವರಿಗೆ ಅನುಕೂಲಿತ ಉಡುಪುಗಳನ್ನು ಕಳುಹಿಸಿದ್ದೇವೆ,” ಎಂದು ಕ್ಸೇನಿಯಾ ಹೇಳುತ್ತಾರೆ. “ಅವರು ಈಗ ಲ್ವಿವ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಮಯದಲ್ಲಿ ಅವರು ಧರಿಸಬಹುದಾದ ಏಕೈಕ ಉಡುಪು ಇದೇ.”

ಅಗತ್ಯಗಳು ಹೆಚ್ಚುತ್ತಿವೆ, ಸಂಪನ್ಮೂಲಗಳು ಕಡಿಮೆಯಾಗಿವೆ

ಇಂದು ಈ ತಂಡವು 100ಕ್ಕೂ ಹೆಚ್ಚು ಆಸ್ಪತ್ರೆಗಳು, ಚಿಕಿತ್ಸಾಲಯಗಳು ಮತ್ತು ಸ್ಥಿರೀಕರಣ ಕೇಂದ್ರಗಳೊಂದಿಗೆ ಕೆಲಸ ಮಾಡುತ್ತಿದೆ. ಸಾಮಾನ್ಯ ಉಷ್ಣ ಉಡುಪುಗಳ ಜೊತೆಗೆ ಅನುಕೂಲಿತ ಉಡುಪುಗಳನ್ನೂ ನಿರಂತರವಾಗಿ ಪೂರೈಸುತ್ತಿದೆ.

ಆದರೆ, ವಿಶೇಷವಾಗಿ ಚಳಿಗಾಲದಲ್ಲಿ, ಅಗತ್ಯವು ಸ್ವಯಂಸೇವಕರ ಸಾಮರ್ಥ್ಯಕ್ಕಿಂತ ಬಹಳ ಹೆಚ್ಚಾಗಿದೆ. ತೀವ್ರ ಚಳಿ ಗಾಯಗೊಂಡವರ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡುತ್ತದೆ.

 “ನಮ್ಮ ಜನರಿಗೆ ಕನಿಷ್ಠ ಮೇ ತಿಂಗಳವರೆಗೂ ಫ್ಲೀಸ್ ಪ್ಯಾಂಟ್, ಉಣ್ಣೆ ಸ್ವೆಟರ್, ಉಣ್ಣೆ ಕಂಬಳಿ ಮತ್ತು ಕಾಲುಚೀಲಗಳ ಸಹಾಯ ಬೇಕಾಗಿದೆ. ಈಗ ತುಂಬಾ ಚಳಿ. ಸಂಜೆ ಹೊತ್ತಿಗೆ ತಾಪಮಾನ ಮೈನಸ್ 15 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತದೆ. ಇಷ್ಟು ಚಳಿ ಬಹಳ ಕಾಲದ ಬಳಿಕ ಬಂದಿದೆ. ನನಗೆ 2022ರ ಮಾರ್ಚ್ ನೆನಪಾಗುತ್ತದೆ—ಅದು ಕೂಡ ತುಂಬಾ ಚಳಿಯಾಗಿತ್ತು; ಬಹುಶಃ ನನ್ನ ಜೀವನದಲ್ಲೇ ಅತ್ಯಂತ ಕಡುಚಳಿಯ ವಸಂತಕಾಲ” ಎಂದು ಕ್ಸೇನಿಯಾ ಹೇಳುತ್ತಾರೆ.

ಅಡಚಣೆಗಳನ್ನು ಮೀರಿ ಸಾಗುವ ಹೋರಾಟ

ಕ್ಸೇನಿಯಾ ವಿವರಿಸುವಂತೆ, ಈ ಸಂಸ್ಥೆಯು ಸಂಪೂರ್ಣವಾಗಿ ಸ್ವಯಂಸೇವಕರ ಶ್ರಮದ ಮೇಲೆ ನಿಂತಿದೆ. ಎಲ್ಲ ಹೊಲಿಗೆಯವರು ಮತ್ತು ಸಂಯೋಜಕರು ಯಾವುದೇ ಸಂಬಳವಿಲ್ಲದೆ ಸೇವೆ ಮಾಡುತ್ತಾರೆ. ಸಂಗ್ರಹಿಸಿದ ಹಣವನ್ನು ಕೇವಲ ಬಟ್ಟೆ ಖರೀದಿ ಮತ್ತು ಸಾಗಣೆ ವೆಚ್ಚಗಳಿಗಷ್ಟೇ ಬಳಸಲಾಗುತ್ತದೆ. ಆದರೆ ಬಾಂಬ್ ದಾಳಿಗಳಿಂದ ವಿದ್ಯುತ್ ವ್ಯತ್ಯಯಗಳು ಆಗಾಗ್ಗೆ ಸಂಭವಿಸುವುದರಿಂದ ಈ ಕಾರ್ಯ ಇನ್ನಷ್ಟು ಕಷ್ಟವಾಗುತ್ತಿದೆ.

ವಿದ್ಯುತ್ ಇಲ್ಲದಿದ್ದರೂ ಸ್ವಯಂಸೇವಕರು ಹೊಲಿಗೆ ನಿಲ್ಲಿಸುವುದಿಲ್ಲ—ಅನೆಕ ಬಾರಿ ರಾತ್ರಿಯಲ್ಲೂ ಕೆಲಸ ನಡೆಯುತ್ತದೆ. ಜನರೇಟರ್‌ಗಳನ್ನು ಬಳಸುವುದು, ವಿದ್ಯುತ್ ಇಲ್ಲದಾಗ ಕೈಯಿಂದ ಹೊಲಿಯುವಂತೆ ವಿನ್ಯಾಸಗಳನ್ನು ಬದಲಾಯಿಸುವುದು—ಹೀಗೆ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುತ್ತಾರೆ. 

ಗುರಿ ಒಂದೇ: ಗಾಯಗೊಂಡ ಸೈನಿಕರು ಮತ್ತು ನಾಗರಿಕರು ಚಳಿಯಲ್ಲಿ ಗಡ್ಡೆ ಕಟ್ಟಿಕೊಳ್ಳದಂತೆ, ಸುರಕ್ಷಿತವಾಗಿ ಉಷ್ಣತೆ ಕಾಯ್ದುಕೊಳ್ಳುವಂತೆ ನೆರವಾಗುವುದು.

ದೈಹಿಕ ಮತ್ತು ಮಾನಸಿಕ ದಣಿವು ಸದಾ ಎದುರಾಗುವ ಸವಾಲು. ಆದರೂ ಉಷ್ಣ ಹಾಗೂ ಅನುಕೂಲಿತ ಉಡುಪುಗಳ ನಿರಂತರ ಬೇಡಿಕೆ ಮತ್ತು ಸಮುದಾಯದ ಗಟ್ಟಿಯಾದ ಭಾಗವಹಿಸುವಿಕೆ ಕ್ಸೇನಿಯಾಗೆ ಪ್ರೇರಣೆಯಾಗುತ್ತದೆ.

“ನನ್ನನ್ನು ಹೆಚ್ಚು ಪ್ರೇರೇಪಿಸುವುದು ನಾನು ಒಬ್ಬಳೇ ಅಲ್ಲ ಎಂಬ ಅರಿವು,” ಎಂದು ಅವರು ಹೇಳುತ್ತಾರೆ. “ಅಲಕ್ಷ್ಯ ಮಾಡದ ಜನರು ಇದ್ದಾರೆ. ಎಷ್ಟು ಉಡುಪು ಬೇಕಾದರೂ, ಬಟ್ಟೆಯನ್ನೂ ಹೊಲಿಗೆಯವರನ್ನೂ ಹುಡುಕುವ ದಾರಿ ಯಾವಾಗಲೂ ಸಿಗುತ್ತದೆ—ನಾವು ಕೂಡ ಚಳಿಯಲ್ಲಿ ನಡುಗುತ್ತೇವೆ, ನಮ್ಮ ಕಾರ್ಯಸ್ಥಳಗಳಲ್ಲಿ ಹೀಟಿಂಗ್ ಇಲ್ಲ. ಅದಕ್ಕಾಗಿಯೇ ಹೆಚ್ಚಿನ ಕೆಲಸವನ್ನು ಮನೆಗಳಿಗೆ ಸ್ಥಳಾಂತರಿಸಿದ್ದೇವೆ. ಗಾಯಗೊಂಡ ಬಳಿಕ ನಮ್ಮ ಸಹ ನಾಗರಿಕರಿಗೆ ಅವರು ಅತೀ ಅಗತ್ಯವಿರುವ ಕ್ಷಣದಲ್ಲೇ ಬೆಂಬಲ ನೀಡಬಲ್ಲೆವು ಎಂಬುದೇ ನನಗೆ ಶಕ್ತಿ.”

ಇತರರಿಗಾಗಿ ಕಾಳಜಿ

ಉಡುಪುಗಳನ್ನು ಆಸ್ಪತ್ರೆಗಳು ಮತ್ತು ಪ್ರಥಮ ಚಿಕಿತ್ಸೆ ಕೇಂದ್ರಗಳಿಗೆ ಕಳುಹಿಸುವ ಮೊದಲು, ಸ್ವಯಂಸೇವಕರು ಪ್ರತಿಯೊಂದು ವಸ್ತುವನ್ನೂ ಎಚ್ಚರಿಕೆಯಿಂದ ತೊಳೆಯುತ್ತಾರೆ, ಒಣಗಿಸುತ್ತಾರೆ ಮತ್ತು ಪ್ಯಾಕ್ ಮಾಡುತ್ತಾರೆ. ವಿದ್ಯುತ್ ಇಲ್ಲದೆ ಇವುಗಳನ್ನು ಶೀಘ್ರವಾಗಿ ಮುಗಿಸುವುದು ಎಷ್ಟು ಕಷ್ಟ ಎಂಬುದನ್ನೂ ಅವರು ಚೆನ್ನಾಗಿ ಅರಿತಿದ್ದಾರೆ.

“ಇದು ನಾವು ಜನರ ಗೌರವ ಮತ್ತು ಕಲ್ಯಾಣದ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸುತ್ತೇವೆ ಎಂಬುದನ್ನು ತೋರಿಸುತ್ತದೆ,” ಎಂದು ಕ್ಸೇನಿಯಾ ಹೇಳುತ್ತಾರೆ. “ನಾವು ನಮ್ಮ ಪ್ರೀತಿಪಾತ್ರರಿಗಾಗಿ, ನಮ್ಮ ಸ್ನೇಹಿತರಿಗಾಗಿ—ಅಥವಾ ನಮ್ಮದೇಗಾಗಿ ಮಾಡುತ್ತಿರುವಂತೆ ಎಲ್ಲವನ್ನೂ ಮಾಡುವ ಪ್ರಯತ್ನ ಮಾಡುತ್ತೇವೆ.”

 

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

20 ಜನವರಿ 2026, 20:29