ಹುಡುಕಿ

2019.03.18 mani in preghiera, mani giunte 2019.03.18 mani in preghiera, mani giunte 

ಅಮೆರಿಕಾಗಾಗಿ ಪವಿತ್ರ ಘಂಟೆಯ ಪ್ರಾರ್ಥನೆಗೆ ಯುಎಸ್‌ಸಿಸಿಬಿ ಅಧ್ಯಕ್ಷರ ಕರೆ

ಅಮೆರಿಕಾ ಕಥೋಲಿಕ ಧರ್ಮಾಧ್ಯಕ್ಷರ ಸಮಾವೇಶಗಳ (USCCB) ಅಧ್ಯಕ್ಷರಾದ ಪೂಜ್ಯ ಮಹಾಧರ್ಮಾಧ್ಯಕ್ಷ ಪಾಲ್ ಎಸ್. ಕೋಕ್ಲಿ ಅವರು, ದೇಶದಲ್ಲಿಯೂ ಹಾಗೂ ಜನರ ಹೃದಯಗಳಲ್ಲಿಯೂ ಆತ್ಮಿಕ ಪುನರುಜ್ಜೀವನಕ್ಕಾಗಿ ಪ್ರಾರ್ಥನೆಗೆ ಕರೆ ನೀಡಿದ್ದಾರೆ. ಇಂದಿನ “ಭಯ ಮತ್ತು ಧ್ರುವೀಕರಣದಿಂದ ಕೂಡಿದ ವಾತಾವರಣ”ದ ಮಧ್ಯೆ, ಅಮೆರಿಕಾಗಾಗಿ ಪವಿತ್ರ ಘಂಟೆಯ ಪ್ರಾರ್ಥನೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದ್ದಾರೆ.

ಲೇಖಕರು: ಕೀಲ್ ಗಸ್ಸಿ

ಅಮೆರಿಕಾ ಕಥೋಲಿಕ ಧರ್ಮಾಧ್ಯಕ್ಷರ ಸಭೆಯ (USCCB) ಅಧ್ಯಕ್ಷರಾದ ಪೂಜ್ಯ ಮಹಾಧರ್ಮಾಧ್ಯಕ್ಷ ಪಾಲ್ ಎಸ್. ಕೋಕ್ಲಿ ಅವರು, ಪ್ರತಿಯೊಬ್ಬರ ಹೃದಯಗಳಲ್ಲಿಯೂ ಹಾಗೂ ದೇಶದ ಸಮಗ್ರ ಜೀವನದಲ್ಲಿಯೂ ಆತ್ಮಿಕ ಪುನರುಜ್ಜೀವನಕ್ಕಾಗಿ ಪ್ರಾರ್ಥನೆಗೆ ಸಮಯ ಮೀಸಲಿಡುವಂತೆ ಜನರನ್ನು ಆಹ್ವಾನಿಸಿದ್ದಾರೆ.

ತಮ್ಮ ಆಹ್ವಾನದಲ್ಲಿ, ಸಮಾಜ ಮತ್ತು ರಾಜಕೀಯ ಅಶಾಂತಿ, ಅನ್ಯಾಯ ಹಾಗೂ ಹಿಂಸಾಚಾರದಿಂದ ಆವರಿತವಾಗಿರುವ ಪರಿಸ್ಥಿತಿಯಲ್ಲಿ ಅನೇಕರು ತಾವು ಅಶಕ್ತರಾಗಿದ್ದೇವೆ ಎಂದು ಭಾವಿಸಬಹುದು ಎಂದು ಮಹಾಧರ್ಮಾಧ್ಯಕ್ಷರು ಹೇಳಿದರು.“ನಿಮ್ಮ ನಿಷ್ಠೆ ಮಹತ್ವದ್ದಾಗಿದೆ. ನಿಮ್ಮ ಪ್ರಾರ್ಥನೆಗಳು ಮಹತ್ವದ್ದಾಗಿವೆ. ನಿಮ್ಮ ಪ್ರೀತಿ ಕಾರ್ಯಗಳು ಮತ್ತು ನ್ಯಾಯಕ್ಕಾಗಿ ಮಾಡುವ ಪ್ರಯತ್ನಗಳು ಮಹತ್ವದ್ದಾಗಿವೆ” ಎಂಬ ಅವರ ಸಂದೇಶ ಸ್ಪಷ್ಟವಾಗಿದೆ.

ಯಾವುದೇ ಕರುಣಾ ಕಾರ್ಯವೂ ಅಲ್ಪವಲ್ಲ

ಇತ್ತೀಚಿಗೆ ನೀಡಿದ ಸಂದೇಶದಲ್ಲಿ, ಅಮೆರಿಕಾ ಕಥೋಲಿಕ ಧರ್ಮಾಧ್ಯಕ್ಷರ ಸಭೆಯ (USCCB) ಅಧ್ಯಕ್ಷರು, ಕಥೋಲಿಕರು ಹಾಗೂ ಸತ್ಭಾವನೆಯುಳ್ಳ ಜನರು ಪರಸ್ಪರ ಕಾಳಜಿ ವಹಿಸುವುದು ಮತ್ತು ಶಾಂತಿ ಹಾಗೂ ನ್ಯಾಯಕ್ಕಾಗಿ ಶ್ರಮಿಸುವುದನ್ನು ಅನೇಕ ರೀತಿಯಲ್ಲಿ ಮುಂದುವರಿಸಿಕೊಂಡು ಬಂದಿರುವುದಕ್ಕೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಆ ಕಾರ್ಯಗಳು ಹಸಿದವರಿಗೆ ಆಹಾರ ನೀಡುವ ರೂಪದಲ್ಲಿರಲಿ, ಅನ್ಯರನ್ನು ಸ್ವಾಗತಿಸುವುದಾಗಿರಲಿ, ಅಸ್ವಸ್ಥರ ಆರೈಕೆ ಮಾಡುವುದಾಗಿರಲಿ—ಯಾವುದೇ ರೂಪದಲ್ಲಿದ್ದರೂ—ದೇವರು ಪ್ರತಿಯೊಂದು ಕರುಣೆಯ, ನ್ಯಾಯದ ಮತ್ತು ಪ್ರೀತಿಯ ಕಾರ್ಯವನ್ನು ಎಷ್ಟೇ ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ ಗಮನಿಸುತ್ತಾನೆ ಎಂದು ಪೂಜ್ಯ ಮಹಾಧರ್ಮಾಧ್ಯಕ್ಷ ಕೋಕ್ಲಿ ಒತ್ತಿ ಹೇಳಿದರು.

ಅಮೆರಿಕಾದಾದ್ಯಂತ ಹಲವು ಪ್ರತಿಭಟನೆಗಳು ನಡೆದಿದ್ದು ಮತ್ತು ನಡೆಯುತ್ತಿರುವ ಹಿನ್ನೆಲೆಯಲ್ಲಿ, “ಕರುಣಾ ಕಾರ್ಯಗಳು, ಶಾಂತಿಯುತವಾಗಿ ಸಭೆಸೇರುವುದು ಮತ್ತು ನಿಮ್ಮ ಸಮುದಾಯದ ಜನರ ಆರೈಕೆ ಮಾಡುವುದು ಭರವಸೆಯ ಸಂಕೇತಗಳಾಗಿವೆ; ಅವು ಕೋಪ ಅಥವಾ ನಿರಾಶೆಗಿಂತ ಹೆಚ್ಚು ದೃಢವಾಗಿ ಶಾಂತಿಯನ್ನು ನಿರ್ಮಿಸುತ್ತವೆ” ಎಂದು ಮಹಾಧರ್ಮಾಧ್ಯಕ್ಷರು ಹೇಳಿದರು.

ಅನ್ಯಾಯದ ವಾತಾವರಣ

ಇತ್ತೀಚೆಗೆ ಮಿನಿಯಪೊಲಿಸ್, ಮಿನೆಸೋಟಾದಲ್ಲಿ ಒಕ್ಕೂಟ ಸರ್ಕಾರದ ಜನಪ್ರವಾಸ ಮತ್ತು ಅಕ್ರಮ ವಲಸೆ ನಿಗಾವಹಿ ಸಿಬ್ಬಂದಿ ಹಿಂಸಾಚಾರದಿಂದ ರೆನೆ ಗುಡ್ ಮತ್ತು ಆಲೆಕ್ಸ್ ಪ್ರೆಟ್ಟಿ ಎಂಬ ಇಬ್ಬರು ನಾಗರಿಕರ ಹತ್ಯೆಗಳ ಬಗ್ಗೆ ಉಲ್ಲೇಖಿಸಿದ ಪೂಜ್ಯ ಮಹಾಧರ್ಮಾಧ್ಯಕ್ಷ ಪಾಲ್ ಎಸ್. ಕೋಕ್ಲಿ, ಇ “ಈ ಸಾವುಗಳನ್ನು ಪ್ರತಿಯೊಂದು ಮಾನವ ಜೀವದ ಘನತೆಯನ್ನು ಗೌರವಿಸಲು ನಮ್ಮ ಸಮಾಜದಲ್ಲಿ ಉಂಟಾಗಿರುವ ವೈಫಲ್ಯವನ್ನು ಪ್ರತಿಬಿಂಬಿಸುವ ದುಃಖಕರ ಹಿಂಸಾಚಾರದ ಉದಾಹರಣೆಗಳು” ಎಂದು ವರ್ಣಿಸಿದರು. 

ಈ ಜೀವನಷ್ಟಗಳನ್ನು ದುಃಖದಿಂದ ಸ್ಮರಿಸಲಾಗುತ್ತದೆ ಹಾಗೂ ಆ ಘಟನೆಯ ಮೂಲಕ ವ್ಯಕ್ತವಾಗಿರುವ ಅನ್ಯಾಯ ಮತ್ತು ನಿರ್ಲಕ್ಷ್ಯವನ್ನು ತೀವ್ರವಾಗಿ ನಿಂದಿಸಲಾಗಿದೆ. ಮಹಾಧರ್ಮಾಧ್ಯಕ್ಷರು ಮುಂದುವರೆದು, “ಮಾನವ ಘನತೆಯನ್ನು ನಿರ್ಲಕ್ಷಿಸುವಾಗ ಸಶಕ್ತವಾಗುವ ಭಯ ಮತ್ತು ಧ್ರುವೀಕರಣದ ಪ್ರಸ್ತುತ ವಾತಾವರಣವು, ಸುವಾರ್ತೆಯಲ್ಲಿ ಕ್ರಿಸ್ತನು ಸ್ಥಾಪಿಸಿದ ಮಾನದಂಡಕ್ಕೆ ಹೊಂದಿಕೆಯಾಗುವುದಿಲ್ಲ” ಎಂದು ಹೇಳಿದರು.

ನವೀಕರಣಕ್ಕಾಗಿ ಪವಿತ್ರ ಘಂಟೆ

ಉಪಶಮನದತ್ತ ಒಂದು ಚಿಕಿತ್ಸಾತ್ಮಕ ಹೆಜ್ಜೆಯಾಗಿ, ಅಮೆರಿಕಾದಾದ್ಯಂತ ಎಲ್ಲಾ ಧರ್ಮಾಧ್ಯಕ್ಷರು ಮತ್ತು ಯಾಜಕರು ಶಾಂತಿಗಾಗಿ ಪವಿತ್ರ ಘಂಟೆ ಆರಾಧನೆಯನ್ನು ಅರ್ಪಿಸಬೇಕೆಂದು  ಪೂಜ್ಯ ಮಹಾಧರ್ಮಾಧ್ಯಕ್ಷ  ಕೋಕ್ಲಿ ಅವರು ಆಹ್ವಾನಿಸಿದ್ದಾರೆ.

ವಿಭಜನೆಯಿರುವ ಸ್ಥಳಗಳಲ್ಲಿ ಸಮಾಧಾನ, ಮೂಲಭೂತ ಹಕ್ಕುಗಳು ಉಲ್ಲಂಘನೆಯಾಗಿರುವ ಕಡೆಗಳಲ್ಲಿ ನ್ಯಾಯ, ಹಾಗೂ ಭಯ ಅಥವಾ ನಷ್ಟದಿಂದ ಕಂಗೆಟ್ಟಿರುವವರಿಗೆ ಸಾಂತ್ವನ ದೊರಕಲೆಂದು ಪ್ರಾರ್ಥಿಸುವಂತೆ ಅವರು ಕರೆ ನೀಡಿದರು.

ಈ ಪ್ರಾರ್ಥನಾ ಆಹ್ವಾನವು ಎಲ್ಲಾ ಕಥೋಲಿಕರಿಗೆ ಅನ್ವಯಿಸುತ್ತದೆ ಎಂದು ಅವರು ತಿಳಿಸಿದರು. “ಧರ್ಮಕೇಂದ್ರಗಳಲ್ಲಿ, ಪ್ರಾರ್ಥನಾಲಯಗಳಲ್ಲಿ, ಅಥವಾ ತಮ್ಮ ಹೃದಯಗಳ ನಿಶ್ಶಬ್ದತೆಯಲ್ಲಿ ಪ್ರಭುವಿನ ಸಾನ್ನಿಧ್ಯದಲ್ಲಿ—ನಮ್ಮ ದೇಶ ಮತ್ತು ಸಮುದಾಯಗಳ ಉಪಶಮನಕ್ಕಾಗಿ ಪ್ರಾರ್ಥಿಸಬಹುದು,” ಎಂದು ಮಹಾಧರ್ಮಾಧ್ಯಕ್ಷರು ಹೇಳಿದರು.

ಈ ಪವಿತ್ರ ಘಂಟೆ “ನಮ್ಮ ಹೃದಯಗಳಿಗೂ ನಮ್ಮ ರಾಷ್ಟ್ರಕ್ಕೂ ಪುನರುಜ್ಜೀವನ ತರುವ ಕ್ಷಣವಾಗಲಿ” ಎಂಬ ತಮ್ಮ ಆಶಯವನ್ನು ಅವರು ವ್ಯಕ್ತಪಡಿಸಿದರು.

ಸಂದೇಶದ ಅಂತ್ಯದಲ್ಲಿ, ಮಹಾಧರ್ಮಾಧ್ಯಕ್ಷ ಕೋಕ್ಲಿ ಅವರು ಎಲ್ಲರನ್ನು ತಮ್ಮ ಆಶೆಗಳು ಮತ್ತು ಭಯಗಳನ್ನು ಯೇಸು ಕ್ರಿಸ್ತನ ಪರಿಶುದ್ಧ ಹೃದಯಕ್ಕೆ ಅರ್ಪಿಸಲು ಆಹ್ವಾನಿಸಿ, ಪ್ರತಿಯೊಬ್ಬರೂ ಆತನ ಶಾಂತಿಯ ಸಾಧನಗಳಾಗಿಯೂ, ಮತ್ತು ಪ್ರತಿ ಮಾನವನ ಅಂತರ್ನಿಹಿತ ಘನತೆಯ ಸಾಕ್ಷಿಗಳಾಗಿಯೂ ರೂಪುಗೊಳ್ಳಲೆಂದು ಪ್ರಾರ್ಥಿಸಲು ಮನವಿ ಮಾಡಿದರು.

“ದೇವರು ತನ್ನ ಜನರ ಮೊರೆಯನ್ನು ಕೇಳುತ್ತಾನೆ ಮತ್ತು ಅವನನ್ನು ಹುಡುಕುವ ಎಲ್ಲರಿಗೂ ಸಮೀಪದಲ್ಲೇ ಇರುತ್ತಾನೆ ಎಂಬ ವಿಶ್ವಾಸದೊಂದಿಗೆ ನಾವು ಒಟ್ಟಾಗಿ ಪ್ರಾರ್ಥಿಸೋಣ,” ಎಂದು ಅವರು ಹೇಳಿದರು.


ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

29 ಜನವರಿ 2026, 08:54