ಹುಡುಕಿ

AUSTRALIA GEORGE PELL HIGH COURT AUSTRALIA GEORGE PELL HIGH COURT  (ANSA)

ಆಸ್ಟ್ರೇಲಿಯಾ ಆರ್ಥಿಕ ಸಂಕಷ್ಟ ಕುರಿತು ಧರ್ಮಾಧ್ಯಕ್ಷರ ಹೇಳಿಕೆ: ಅಂಕಿಅಂಶಗಳಾಚೆ, ಸ್ಥೈರ್ಯದ ಕಥೆಗಳು

ಆಸ್ಟ್ರೇಲಿಯಾ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮಾವೇಶ ಸಾಮಾಜಿಕ ನ್ಯಾಯ ಮತ್ತು “ಜೀವನ ನಿರ್ವಹಣಾ ವೆಚ್ಚದ ಸಂಕಷ್ಟದ” ಕುರಿತು ಎರಡು ಹೇಳಿಕೆಗಳಲ್ಲಿ ಮೊದಲನೆಯದನ್ನು ಪ್ರಕಟಿಸಿದೆ. ಪೂಜ್ಯ ಅಧ್ಯಕ್ಷರು, ಜೀವನ ನಿರ್ವಹಣಾ ವೆಚ್ಚದ ಸಂಕಷ್ಟದ ಈ ಕಾಲದಲ್ಲಿ “ಸಾಮಾನ್ಯ ಹಿತಕ್ಕಾಗಿ ಕೆಲಸ ಮಾಡುವಲ್ಲಿ ಪ್ರತಿಯೊಬ್ಬರೂ ತಮ್ಮ ಪಾಲನ್ನು ವಹಿಸಬೇಕು” ಎಂದು ಎಲ್ಲರನ್ನೂ ಪ್ರೋತ್ಸಾಹಿಸಿದ್ದಾರೆ.

ಲೇಖಕರು: ಕೀಲ್ ಗಸ್ಸಿ

ಆಸ್ಟ್ರೇಲಿಯಾ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮಾವೇಶ (ACBC) ದೇಶದಲ್ಲಿನ ಸಾಮಾಜಿಕ ನ್ಯಾಯದ ಕುರಿತು ಎರಡು ಹೇಳಿಕೆಗಳ ಪೈಕಿ ಮೊದಲನೆಯ ಹೇಳಿಕೆಯನ್ನು ಪ್ರಕಟಿಸಿದೆ. ಈ ಹೇಳಿಕೆಯನ್ನು ಪರಿಚಯಿಸುತ್ತಾ, ACBCಯ ಅಧ್ಯಕ್ಷರಾದ ಪೂಜ್ಯ ಧರ್ಮಾಧ್ಯಕ್ಷ ತಿಮೋಥಿ ಕಾಸ್ಟೆಲ್ಲೋ ಅವರು, “ದೇಶ ಎದುರಿಸುತ್ತಿರುವ ಸವಾಲುಗಳನ್ನು ಆಳವಾಗಿ ಚಿಂತಿಸಿ, ನಂಬಿಕೆ, ಭರವಸೆ ಮತ್ತು ಪ್ರೀತಿಯಿಂದ ಪ್ರತಿಕ್ರಿಯಿಸುವಂತೆ” ನಾಗರಿಕರನ್ನು ಆಹ್ವಾನಿಸಿದ್ದಾರೆ.

ದೇಶಾದ್ಯಂತ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ ಎಂದು ಪೂಜ್ಯ ಧರ್ಮಾಧ್ಯಕ್ಷರು ವಿಷಾದ ವ್ಯಕ್ತಪಡಿಸಿದ್ದಾರೆ. “ಕೆಲವರಿಗಂತೂ ಊಟವನ್ನು ಬಿಟ್ಟುಬಿಡುವುದು, ವೈದ್ಯಕೀಯ ಚಿಕಿತ್ಸೆ ಮುಂದೂಡುವುದು ಅಥವಾ ಸುರಕ್ಷಿತ ವಸತಿಯಿಲ್ಲದೆ ಬದುಕುವುದು ಅನಿವಾರ್ಯವಾಗಿದೆ,” ಎಂದು ಅವರು ಹೇಳಿದ್ದಾರೆ.

ಆದರೆ ಈ ಜನರನ್ನು ಕೇವಲ ಸಂಖ್ಯೆಗಳಾಗಿ ಅಥವಾ ಅಂಕಿಅಂಶಗಳಾಗಿ ನೋಡಬಾರದು, ಬದಲಾಗಿ, ಅವರಲ್ಲಿ ಸಂಘರ್ಷ ಮತ್ತು ದೃಢಸಂಕಲ್ಪದ ಮಾನವೀಯ ಕಥೆಗಳು ಅಡಗಿವೆ ಎಂದು ಅವರು ಒತ್ತಿ ಹೇಳಿದ್ದಾರೆ.

ಯಾರೂ ಮರೆತುಹೋಗದ ಸಮುದಾಯಗಳ ನಿರ್ಮಾಣಕ್ಕೆ ಕರೆ

ಪೂಜ್ಯ ಧರ್ಮಾಧ್ಯಕ್ಷ ತಿಮೋಥಿ ಕಾಸ್ಟೆಲ್ಲೋ ಅವರು, ದುಃಖದಲ್ಲಿರುವವರೊಂದಿಗೆ ಜೊತೆಯಾಗಿ ನಡೆಯುವಂತೆ ಪ್ರತಿಯೊಬ್ಬರನ್ನೂ ಸುವಾರ್ತೆ ಕರೆಯುತ್ತದೆ ಎಂದು ಒತ್ತಿ ಹೇಳಿದ್ದಾರೆ. ಆಸ್ಟ್ರೇಲಿಯಾ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮಾವೇಶ (ACBC) ಪ್ರಕಟಿಸಿದ ಈ ಹೇಳಿಕೆಯನ್ನು, ಇದೇ ಧ್ಯೇಯಕ್ಕೆ ನೀಡಿದ ಆಹ್ವಾನವೆಂದು ಅವರು ವಿವರಿಸಿದ್ದಾರೆ.

ಆಸ್ಟ್ರೇಲಿಯಾದ  ಧರ್ಮಾಧ್ಯಕ್ಷರುಗಳು ತಮ್ಮ ಹೇಳಿಕೆಯಲ್ಲಿ ಕಥೋಲಿಕ ಸಾಮಾಜಿಕ ಬೋಧನೆಯ ಏಳು ತತ್ವಗಳ ಪೈಕಿ ಪ್ರತಿಯೊಬ್ಬ ವ್ಯಕ್ತಿಯ ಘನತೆ, ಸಾಮಾನ್ಯ ಹಿತ, ಸಹಭಾಗಿತ್ವ (solidarity), ಉಪಸಹಾಯ ತತ್ವ (subsidiarity) ಮತ್ತು ಬಡವರ ಪರ ಪ್ರಾಧಾನ್ಯತೆ ಎಂಬ ನಾಲ್ಕನ್ನು ವಿಶೇಷವಾಗಿ ಉಲ್ಲೇಖಿಸಿದ್ದಾರೆ. 

ಈ ತತ್ವಗಳು “ಉದಾರವಾಗಿ ಹಂಚಿಕೊಳ್ಳಲು, ನ್ಯಾಯಕ್ಕಾಗಿ ಧ್ವನಿ ಎತ್ತಲು ಮತ್ತು ಯಾರೂ ಮರೆತುಹೋಗದಂತಹ ಸಮುದಾಯಗಳನ್ನು ನಿರ್ಮಿಸಲು ನಮ್ಮನ್ನು ಸವಾಲು ಮಾಡುತ್ತವೆ” ಎಂದು ಪೂಜ್ಯ ಧರ್ಮಾಧ್ಯಕ್ಷ ಕಾಸ್ಟೆಲ್ಲೋ ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಪರಿಸ್ಥಿತಿ

ಕಳೆದ ಕೆಲವು ವರ್ಷಗಳಿಂದ ಆಸ್ಟ್ರೇಲಿಯಾ ಗಂಭೀರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಜನರು ದಿನನಿತ್ಯದ ಮೂಲಭೂತ ವಸ್ತುಗಳು ಮತ್ತು ಸೇವೆಗಳಿಗೆ ಹಣ ಪಾವತಿಸಲು ಹೆಣಗಾಡುತ್ತಿರುವ ಈ ಪರಿಸ್ಥಿತಿಯನ್ನು ಸಾಮಾನ್ಯವಾಗಿ “ಜೀವನ ನಿರ್ವಹಣಾ ವೆಚ್ಚದ ಬಿಕ್ಕಟ್ಟು” (cost of living crisis) ಎಂದು ಕರೆಯಲಾಗುತ್ತಿದೆ. ಕೋವಿಡ್–19 ಮಹಾಮಾರಿ, ಯುದ್ಧಗಳು, ಹೆಚ್ಚುತ್ತಿರುವ ಬಡ್ಡಿದರಗಳು, ಏರುತ್ತಿರುವ ವಸತಿ ವೆಚ್ಚ, ವೇತನ ಸ್ಥಗಿತ ಮತ್ತು ಅತಿಯಾದ ಬಂಡವಾಳಶಾಹಿ ಲಾಭಗಳು ಈ ಬಿಕ್ಕಟ್ಟಿಗೆ ಕಾರಣಗಳೆಂದು ವರದಿಗಳು ಸೂಚಿಸುತ್ತವೆ.

 ಆಸ್ಟ್ರೇಲಿಯಾ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮಾವೇಶ  (ACBC) ಪ್ರಕಟಿಸಿದ ಹೇಳಿಕೆಯು ಈ ಬಿಕ್ಕಟ್ಟಿನ ಮಾನವೀಯ ಪರಿಣಾಮವನ್ನು ಜನರ ನೈಜ ಅನುಭವಗಳ ಮೂಲಕ ಎತ್ತಿ ತೋರಿಸಿದೆ. ನ್ಯೂ ಸೌತ್ ವೇಲ್ಸ್‌ನ ಯುವ ಮಹಿಳೆಯೊಬ್ಬರು ಕಳೆದ ವರ್ಷದಲ್ಲಿ ಹಣದ ಕೊರತೆಯಿಂದ ತನ್ನ ಜೀವನ ಸಂಪೂರ್ಣವಾಗಿ ಬದಲಾಗಿರುವುದನ್ನು ವಿವರಿಸಿದ್ದಾರೆ. “ನನ್ನ ಮಗಳು ಮತ್ತು ಸಾಕುಪ್ರಾಣಿಗಳಿಗೆ ಊಟ ಸಿಗಲೆಂದು ನಾನು ಅನೇಕ ಬಾರಿ ಊಟ ಬಿಟ್ಟಿದ್ದೇನೆ,” ಎಂದು ಅವರು ಹೇಳಿದ್ದು, ಕಳೆದ ಎರಡು ವರ್ಷಗಳಿಂದ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ಆದರೆ ಇದು ಒಬ್ಬರ ಪ್ರಕರಣವಲ್ಲ. 2024ರಲ್ಲಿ ನಡೆದ ಅಧ್ಯಯನವೊಂದು, ಉದ್ಯೋಗದಲ್ಲಿರುವವರಲ್ಲಿ ಮತ್ತು ಸರ್ಕಾರದ ಸಹಾಯ ಪಡೆಯುತ್ತಿರುವವರಲ್ಲಿ 70% ಕ್ಕೂ ಹೆಚ್ಚು ಮಂದಿ ವಸ್ತುಗಳ ಮತ್ತು ಸೇವೆಗಳ ಬೆಲೆಗಳು ಜನರ ವೇತನಕ್ಕಿಂತ ವೇಗವಾಗಿ ಏರಿಕೆಯಾಗಿವೆ ಎಂದು ಹೇಳಿದ್ದಾರೆ ಎಂದು ಬಹಿರಂಗಪಡಿಸಿದೆ. ಪರಿಣಾಮವಾಗಿ, ಜನರು ತಮ್ಮ ಉಳಿತಾಯವನ್ನು ಬಳಸಬೇಕಾಗಿ ಬಂದಿದ್ದು, ಸಾಲ ಪಡೆಯುತ್ತಿದ್ದಾರೆ, ತಾಪಮಾನ ನಿಯಂತ್ರಣ (ಹೀಟಿಂಗ್/ಏರ್ ಕಂಡೀಷನಿಂಗ್) ಇಲ್ಲದೆ ಬದುಕಬೇಕಾಗಿದೆ, ಅಥವಾ ವೈದ್ಯರನ್ನು ಭೇಟಿ ಮಾಡುವುದನ್ನು ಹಾಗೂ ಔಷಧ ಖರೀದಿಸುವುದನ್ನು ತಪ್ಪಿಸಬೇಕಾದ ಸ್ಥಿತಿಗೆ ತಲುಪಿದ್ದಾರೆ.

2025ರಲ್ಲಿ, ಮೂರು ಆಸ್ಟ್ರೇಲಿಯಾದ ಕುಟುಂಬಗಳಲ್ಲಿ ಒಂದಕ್ಕಿಂತ ಹೆಚ್ಚು ಕುಟುಂಬಗಳು “ಆಹಾರ ಭದ್ರತೆ ಇಲ್ಲದ ಸ್ಥಿತಿ”ಯನ್ನು ಅನುಭವಿಸುತ್ತಿವೆ ಎಂದು ವರದಿಯಾಗಿದೆ. ಅನೇಕರು ಊಟ ಬಿಟ್ಟುಬಿಡುತ್ತಿದ್ದಾರೆ ಅಥವಾ ತುರ್ತು ಆಹಾರ ನೆರವಿನ ಮೇಲೆ ಅವಲಂಬಿತರಾಗಿದ್ದಾರೆ. ಗ್ರಾಮೀಣ ಹಾಗೂ ದೂರದ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಪರಿಸ್ಥಿತಿ ಇನ್ನಷ್ಟು ಕಠಿಣವಾಗಿದೆ; ಅಲ್ಲಿ ಮೂಲಭೂತ ಆಹಾರ ಪದಾರ್ಥಗಳ ಬೆಲೆ ರಾಜಧಾನಿ ನಗರಗಳಿಗಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಎಲ್ಲರೂ ಅಮೂಲ್ಯರು

ಈ ಹಿನ್ನೆಲೆಯಲ್ಲಿ, ಆಸ್ಟ್ರೇಲಿಯಾದ ಧರ್ಮಾಧ್ಯಕ್ಷರು ಧರ್ಮಸಭೆಯ ಸಾಮಾಜಿಕ ಸಿದ್ಧಾಂತಗಳ ಸಂಗ್ರಹ (Compendium of the Social Doctrine of the Church) ಕಡೆಗೆ ಗಮನ ಸೆಳೆದಿದ್ದಾರೆ. ಅವರು ಕಥೋಲಿಕ ಧರ್ಮಸಭೆಯ ಬೋಧನೆಯ ಎರಡು ಪ್ರಮುಖ ತತ್ವಗಳಿಗೆ ಆದ್ಯತೆ ನೀಡಿದ್ದಾರೆ: ಸಂಪತ್ತಿನ ಸಾರ್ವತ್ರಿಕ ಗುರಿ (universal destination of goods) ಮತ್ತು ಬಡವರ ಪರ ವಿಶೇಷ ಆಯ್ಕೆ (preferential option for the poor).

ಆದಾಗ್ಯೂ, ಪ್ರತಿಯೊಬ್ಬ ಮಾನವನ ಘನತೆಗೆ ಗೌರವ ನೀಡುವುದೇ ಕಥೋಲಿಕ ಸಾಮಾಜಿಕ ಬೋಧನೆಯ ಹೃದಯವಾಗಿದೆ ಎಂದು ಧರ್ಮಾಧ್ಯಕ್ಷರು ಒತ್ತಿ ಹೇಳಿದ್ದಾರೆ. ಪ್ರತಿಯೊಬ್ಬರೂ ದೇವರ ಸ್ವರೂಪ ಮತ್ತು ಪ್ರತಿರೂಪದಲ್ಲಿ ಸೃಷ್ಟಿಯಾಗಿರುವುದರಿಂದ, ಪ್ರತಿಯೊಬ್ಬರ ಮೌಲ್ಯವೂ ಅಳತೆಯಿಲ್ಲದ್ದು ಎಂದು ಅವರು ನೆನಪಿಸಿದ್ದಾರೆ. ಆದರೆ ವಾಸ್ತವಿಕ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿರುವುದು ಕಳವಳಕಾರಿ ಎಂದು ಅವರು ಸೂಚಿಸಿದ್ದಾರೆ.

ಧರ್ಮಾಧ್ಯಕ್ಷರು ತಮ್ಮ ಹೇಳಿಕೆಯಲ್ಲಿ ಮಂಡಿಸಿರುವ ಸಾಕ್ಷ್ಯಗಳು, ಜೀವನ ವೆಚ್ಚದ ಏರಿಕೆಯ ಪರಿಣಾಮವಾಗಿ ಅನೇಕ ಆಸ್ಟ್ರೇಲಿಯನ್ನರು ತಮ್ಮ ಮಾನವೀಯ ಘನತೆಯಿಂದ ವಂಚಿತರಾಗುತ್ತಿರುವುದನ್ನು ತೋರಿಸುತ್ತವೆ. ಇದು “ಒಪ್ಪಿಕೊಳ್ಳಲಾಗದ ಸ್ಥಿತಿ” ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ಸಂಪತ್ತಿನ ಸಾರ್ವತ್ರಿಕ ಗುರಿ ಎಂಬ ತತ್ವವು ಪ್ರತಿಯೊಬ್ಬ ವ್ಯಕ್ತಿಗೂ ಘನತೆಯಿಂದ ಬದುಕಲು ಅಗತ್ಯವಾದ ಮೂಲಭೂತ ಸಂಪನ್ಮೂಲಗಳು ಲಭ್ಯವಾಗಬೇಕು ಎಂದು ಒತ್ತಾಯಿಸುತ್ತದೆ. ಇದಕ್ಕೂ ಮೇಲಾಗಿ, ಸಾಮಾನ್ಯ ಹಿತ (common good) ಎಂಬ ಧರ್ಮಸಭೆಯ ತತ್ವವು ಪ್ರತಿಯೊಬ್ಬರೂ ಅಭಿವೃದ್ದಿ ಹೊಂದಲು ಬೇಕಾದ ಎಲ್ಲವೂ ಸಿಗುವಂತಿರಬೇಕು ಎಂದು ಹೇಳುತ್ತದೆ ಎಂದು ಧರ್ಮಾಧ್ಯಕ್ಷರು ವಿವರಿಸಿದ್ದಾರೆ.

ನಮ್ಮೆಲ್ಲರಿಗೂ ಪಾತ್ರವಿದೆ

ಆಸ್ಟ್ರೇಲಿಯಾದಲ್ಲಿ ಜೀವನ ನಿರ್ವಹಣಾ ವೆಚ್ಚದ ನಿರಂತರ ಏರಿಕೆಯಿಂದ ಅನೇಕರು ಆಹಾರ, ಔಷಧಿ, ಮತ್ತು ಕೆಲವೊಮ್ಮೆ ವಸತಿಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಧರ್ಮಾಧ್ಯಕ್ಷರು ಹೇಳಿದ್ದಾರೆ. “ದೇವರು ಉದ್ದೇಶಿಸಿದ ಮೂಲಭೂತ ಮಾನವ ಘನತೆಗೆ ವಿರುದ್ಧವಾಗಿರುವ ಪರಿಸ್ಥಿತಿಯನ್ನು ಧರ್ಮಸಭೆ ನಿರ್ಲಕ್ಷಿಸಲು ಸಾಧ್ಯವಿಲ್ಲ,” ಎಂದು ಅವರು ವಾದಿಸಿದ್ದಾರೆ. ಯಾವುದೇ ವ್ಯಕ್ತಿಯೂ ಅಂಚಿಗೆ ತಳ್ಳಲ್ಪಡದಂತೆ ಅಥವಾ ನಿರ್ಲಕ್ಷಿಸಲ್ಪಡದಂತೆ ನೋಡಿಕೊಳ್ಳುವುದು ತಮ್ಮ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ, ಬಡವರು ಮತ್ತು ಅಂಚಿನಲ್ಲಿರುವವರತ್ತ ಮೊದಲ ಗಮನ ನೀಡಬೇಕೆಂದು ಆಸ್ಟ್ರೇಲಿಯಾದ ಧರ್ಮಾಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ. ಇದು ಕೇವಲ ದಾನ ನೀಡುವುದಲ್ಲ, ಸಮಾಜದಲ್ಲಿ ದಾರಿದ್ರ್ಯವನ್ನು ಉಂಟುಮಾಡುವ ಮತ್ತು ಗಟ್ಟಿಗೊಳಿಸುವ ವ್ಯವಸ್ಥಾತ್ಮಕ ಕಾರಣಗಳನ್ನು ಪ್ರಶ್ನಿಸುವ ಅಗತ್ಯವನ್ನೂ ಒಳಗೊಂಡಿದೆ ಎಂದು ಅವರು ವಿವರಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆಯಾಗಿ, ಧರ್ಮಾಧ್ಯಕ್ಷರು ಸರ್ಕಾರಗಳು, ಕಾರ್ಪೊರೇಟ್ ಸಂಸ್ಥೆಗಳು, ವ್ಯಾಪಾರ ವಲಯ, ಧರ್ಮಸಭೆಗಳು, ಧಾರ್ಮಿಕ ಸಮುದಾಯಗಳು ಹಾಗೂ ನಾಗರಿಕ ಸಮಾಜ—ಎಲ್ಲರೂ ಈ ಹೋರಾಟದಲ್ಲಿ ಭಾಗಿಯಾಗಬೇಕೆಂದು ಕರೆ ನೀಡಿದ್ದಾರೆ.

ದೇಶದಾದ್ಯಂತ ವಿವಿಧ ಧರ್ಮಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಅನೇಕ ಕಥೋಲಿಕ ಸಾಮಾಜಿಕ ಸೇವಾ ಸಂಸ್ಥೆಗಳು ಪ್ರತಿ ವರ್ಷ ಸುಮಾರು 7 ಲಕ್ಷ ಜನರಿಗೆ ಆರ್ಥಿಕ ಸಲಹೆ, ಕೈಗೆಟುಕುವ ವಸತಿ ಮತ್ತು ತುರ್ತು ನೆರವು ಒದಗಿಸುತ್ತಿವೆ ಎಂದು ವರದಿ ಮಾಡಲಾಗಿದೆ. ವಿಶೇಷವಾಗಿ, ಸಂತ ವಿನ್ಸೆಂಟ್ ದ ಪೌಲ್ ಸಂಘವು ಪ್ರತಿ ವರ್ಷ ಸುಮಾರು 5 ಕೋಟಿ ಡಾಲರ್ ಮೌಲ್ಯದ ತುರ್ತು ನೆರವು ನೀಡುತ್ತಿದೆ.

ಆದರೂ, ಈ ಜವಾಬ್ದಾರಿ ಕೇವಲ ಈ ಸಂಸ್ಥೆಗಳ ಮೇಲೇ ಇರಬಾರದು.ಜೀವನ ನಿರ್ವಹಣಾ ವೆಚ್ಚದ ಸಂಕಷ್ಟದ ಮಧ್ಯೆಯೂ “ಸಾಮಾನ್ಯ ಹಿತಕ್ಕಾಗಿ ಪ್ರತಿಯೊಬ್ಬರೂ ತಮ್ಮದೇ ಆದ ಪಾತ್ರ ವಹಿಸಬೇಕು” ಎಂದು ಅವರು ಎಲ್ಲ ವರ್ಗದ ಜನರನ್ನು ಪ್ರೇರೇಪಿಸಿದ್ದಾರೆ.

ಸ್ಥಳೀಯ ಧರ್ಮಕೇಂದ್ರ ಹಾಗೂ ಸಮುದಾಯ ಸಂಘಟನೆಗಳಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುವುದು, ಹಣ ಅಥವಾ ವಸ್ತುಗಳನ್ನು ದಾನ ಮಾಡಲು, ಅಗತ್ಯವಿರುವವರ ಪರವಾಗಿ ಸ್ಥಳೀಯ ರಾಜಕಾರಣಿಗಳ ಮೇಲೆ ಒತ್ತಡ ಹೇರಲು, ಅಥವಾ ಕೈಗೆಟುಕುವ ವಸತಿಗಾಗಿ ಹೋರಾಡುವ ಸಂಘಟನೆಗಳಿಗೆ ಬೆಂಬಲ ನೀಡಲು ಸಲಹೆ ನೀಡಿದ್ದಾರೆ.

“ಜನರು ಜೀವನ ನಡೆಸಲು ಹೋರಾಡುತ್ತಿರುವ ಈ ಕಾಲದಲ್ಲಿ, ನಾವು ಭರವಸೆಯ ಪ್ರವಾದಿಗಳಾಗಬೇಕು,” ಎಂದು ಧರ್ಮಾಧ್ಯಕ್ಷರು ಹೇಳಿದ್ದಾರೆ. ದೇಶದಾದ್ಯಂತ ಪ್ರತಿಯೊಬ್ಬರೂ ‘ನಿರಾಶೆಯ ಮೋಡವನ್ನು ಸರಿಸಿ, ಹೆಚ್ಚು ನ್ಯಾಯಸಮ್ಮತ, ಕರುಣಾಮಯ ಮತ್ತು ದೃಢವಾದ ಆಸ್ಟ್ರೇಲಿಯಾದತ್ತ’ ಹೆಜ್ಜೆ ಇಡಲು ಸಹಕರಿಸಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

09 ಫೆಬ್ರವರಿ 2026, 09:10