ಚಿಕಾಗೋ: ತಪಸ್ಸು ಕಾಲ ಆರಂಭ — ವಲಸಿಗರಿಗೆ ಧೈರ್ಯ ತುಂಬಿದ ಪೂಜ್ಯ ಧರ್ಮಾಧ್ಯಕ್ಷ ಕ್ಯೂಪಿಚ್
ವ್ಯಾಟಿಕನ್ ವರದಿ
ಈ ವರ್ಷ ಚಿಕಾಗೋ ಮಹಾಧರ್ಮಪ್ರಾಂತ್ಯದಲ್ಲಿ ಪ್ರಧಾನ ಗುರುಗಳಾದ ಪೂಜ್ಯ ಬ್ಲೇಸ್ ಕ್ಯೂಪಿಚ್ ಅವರು ಮೆಲ್ರೋಸ್ ಪಾರ್ಕ್‌ನ ಅವರ್ ಲೇಡಿ ಆಫ್ ಮೌಂಟ್ ಕಾರ್ಮೆಲ್ ದೇವಾಲಯದಲ್ಲಿ ಬೂದಿಬುಧವಾರದ ಬಲಿಪೂಜೆ ಮತ್ತು ಮೆರವಣಿಗೆಗೆ ನೇತೃತ್ವ ವಹಿಸಿದರು. ಈ ಆಚರಣೆ ವಲಸಿಗ ಕುಟುಂಬಗಳೊಂದಿಗೆ ಏಕತೆ ವ್ಯಕ್ತಪಡಿಸುವುದು ಹಾಗೂ ಸಾರ್ವಜನಿಕ ಬೆಂಬಲದ ಸಂಕೇತವಾಗಿ ನಡೆಯಿತು.
ತಮ್ಮ ಉಪದೇಶದಲ್ಲಿ ಪ್ರಧಾನ ಗುರುಗಳಾದ ಪೂಜ್ಯ ಕ್ಯೂಪಿಚ್ ಅವರು, ಪರಮೇಶ್ವರ ಗುಪ್ತವಾಗಿ ನಡೆಯುವ ಕಾರ್ಯಗಳನ್ನು ಕಂಡು ಪ್ರತಿಫಲ ನೀಡುತ್ತಾರೆ ಎಂಬ ಪ್ರಭು ಯೇಸುಸ್ವಾಮಿಯ ಬೋಧನೆಯನ್ನು ಸ್ಮರಿಸಿದರು. ದಾನಧರ್ಮ, ಪ್ರಾರ್ಥನೆ ಮತ್ತು ಉಪವಾಸದ ಮೂಲಕ ಹೊರಗಣ ಪ್ರದರ್ಶನವಿಲ್ಲದೆ ದೇವರನ್ನು ಹುಡುಕುವಂತೆ ವಿಶ್ವಾಸಿಗಳಿಗೆ ಕರೆ ನೀಡಿದರು.
ವಲಸಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, “ನೀವು ಗುಪ್ತವಾಗಿ ಅಳುವಾಗ, ನಿಮ್ಮ ಮಕ್ಕಳಿಗಾಗಿ ಯಾರಿಗೂ ಗೊತ್ತಾಗದೆ ಕಷ್ಟಪಟ್ಟು ದುಡಿಯುವಾಗ, ಸ್ವದೇಶಕ್ಕೆ ನೆರವು ಕಳುಹಿಸಲು ಹೋರಾಡುವಾಗ — ಆ ಗುಪ್ತ ಕ್ಷಣಗಳಲ್ಲಿಯೇ ಪ್ರಭು ಯೇಸುಸ್ವಾಮಿ ನಿಮ್ಮೊಂದಿಗಿದ್ದಾರೆ” ಎಂದು ಧೈರ್ಯ ತುಂಬಿದರು.
ಮಣ್ಣಿಗೆ ಜೀವ ತುಂಬಿದ ದೇವರು
ಮಾನವನನ್ನು ದೇವರು ಧೂಳಿನಿಂದ ರೂಪಿಸಿ, ಕುಂಭಾರನ ಕೈಯಲ್ಲಿನ ಮಣ್ಣಿನಂತೆ ಆಕಾರ ನೀಡಿ, ತನ್ನ ಜೀವಶ್ವಾಸವನ್ನು ಊದಿ ಸೃಷ್ಟಿಸಿದರು ಎಂಬ ಸತ್ಯವನ್ನು ಸ್ಮರಿಸಿದ ಪ್ರಧಾನ ಗುರುಗಳಾದ ಪೂಜ್ಯ ಕ್ಯೂಪಿಚ್ ಅವರು, “ನೀವು ಮಣ್ಣು” ಎಂಬ ಮಾತು ನಮ್ಮ ಅಲ್ಪತೆಯನ್ನು ಸೂಚಿಸುವುದಲ್ಲ ಎಂದು ಹೇಳಿದರು. ಅದು ದೇವರ ಕೈಯಲ್ಲಿ ರೂಪುಗೊಂಡ ಅಮೂಲ್ಯ ಮಣ್ಣಾಗಿರುವ ನಮ್ಮ ಅಸ್ತಿತ್ವವನ್ನು ನೆನಪಿಸುತ್ತದೆ ಎಂದು ವಿವರಿಸಿದರು.
ವಲಸಿಗರನ್ನು ಉದ್ದೇಶಿಸಿ, “ದೇಶದ ಕಣ್ಣಿನಲ್ಲಿ ನೀವು ದಾಖಲೆಗಳಿಲ್ಲದವರಾಗಿರಬಹುದು; ಆದರೆ ವಿಶ್ವವನ್ನು ಸೃಷ್ಟಿಸಿದ ದೇವರ ಕೈಯಿಂದ ರೂಪಿಸಲ್ಪಟ್ಟವರು ನೀವು. ನಿಮ್ಮ ಮೌಲ್ಯ ವೀಸಾ ಅಥವಾ ಅನುಮತಿ ಪತ್ರದಿಂದ ಬರುವುದಲ್ಲ; ನಿಮ್ಮೊಳಗಿನ ದೇವರ ಜೀವಶ್ವಾಸವೇ ನಿಮ್ಮ ನಿಜವಾದ ಮೌಲ್ಯ” ಎಂದು ಹೇಳಿದರು.
ಎಲ್ಲರೂ ದೇವರ ಮಕ್ಕಳು
ಪ್ರಧಾನ ಗುರುಗಳಾದ ಪೂಜ್ಯ ಕ್ಯೂಪಿಚ್ ಅವರು ನೆತ್ತಿಯ ಮೇಲಿನ ಶಿಲುಬೆ ಗುರುತು ಯಾವುದೇ ಸರ್ಕಾರದ ಗುರುತಿಗಿಂತ ಶಾಶ್ವತವಾದುದೆಂದು ವಿವರಿಸಿದರು. ಅದು ಪ್ರಭು ಯೇಸು ಕ್ರಿಸ್ತನಿಗೆ ಸೇರಿದವರಾಗಿರುವ ಮುದ್ರೆ ಮಾತ್ರವಲ್ಲ, ಗಡಿಗಳಿಲ್ಲದ ಸ್ವರ್ಗೀಯ ದೇಶದ ಪ್ರಜೆಗಳಾಗಿರುವ ಸ್ಮರಣೆಯೂ ಆಗಿದೆ ಎಂದು ಹೇಳಿದರು.
ಯಾವ ಕಾನೂನು ಬದಲಾಗಿದರೂ, ಯಾವ ರಾಜಕೀಯ ಹೇಳಿಕೆಗಳು ಮೂಡಿದರೂ, ಯಾವ ಅನಿಶ್ಚಿತತೆ ಎದುರಾದರೂ ನಾವು ದೇವರ ಮಕ್ಕಳು ಎಂಬ ಸತ್ಯ ಬದಲಾಗುವುದಿಲ್ಲ ಎಂದು ಅವರು ಒತ್ತಿಹೇಳಿದರು.
ಪ್ರಭು ಯೇಸು ಸದಾ ನಿಮ್ಮೊಂದಿಗಿದ್ದಾರೆ
ಕೊನೆಗೆ, ಮರೆಮಾಚಿದ ಜೀವನ ನಡೆಸುವ ವಲಸಿಗರನ್ನು ಉದ್ದೇಶಿಸಿ, ಈ ದಿನವೇ ಅವರಿಗಾಗಿ ಎಂದೂ, ಅನೇಕರಿಗೆ ಮಣ್ಣಿನಂತಾಗಿ ಅಲಕ್ಷ್ಯವಾಗುವ ಬದುಕಿನ ಮಧ್ಯೆಯೂ ದೇವರು ಅವರನ್ನು ಮರೆಯುವುದಿಲ್ಲವೆಂದು ಪೂಜ್ಯರು ಹೇಳಿದರು.
ಅಡಗಿದ ಸ್ಥಳಗಳಲ್ಲಿ ಬದುಕುವ ಸಂದರ್ಭದಲ್ಲಿಯೂ ಪ್ರಭು ಯೇಸು ನಿಮ್ಮೊಂದಿಗಿದ್ದು, ಕುಟುಂಬಕ್ಕಾಗಿ ಮಾಡುವ ತ್ಯಾಗಗಳನ್ನು ನೋಡುತ್ತಿದ್ದಾರೆ ಎಂಬ ವಿಶ್ವಾಸ ಕಳೆದುಕೊಳ್ಳಬಾರದೆಂದು ಅವರು ಪ್ರೇರೇಪಿಸಿದರು.
“ದೇವರು ಪ್ರೀತಿಸಿ ಜೀವ ತುಂಬಿದ ಮಣ್ಣೇ ನೀವು; ನಮ್ಮ ಮಾನವ ಸ್ವರೂಪವನ್ನು ತಾಳಿಕೊಂಡು ಶಿಲುಬೆಯ ಮೂಲಕ ವಿಮೋಚನೆ ನೀಡಿದ ದೇವರ ಪ್ರೀತಿಯ ಗುರುತು ನಿಮ್ಮ ನೆತ್ತಿಯ ಮೇಲಿನ ಶಿಲುಬೆ,” ಎಂದು ಅವರು ಸ್ಮರಿಸಿದರು.
ಅಂತಿಮವಾಗಿ, ತಲೆ ಎತ್ತಿ ನಿಲ್ಲುವಂತೆ ಕರೆ ನೀಡಿದ ಅವರು, ಶಿಲುಬೆ ಎಲ್ಲ ಅನ್ಯಾಯವನ್ನು ಜಯಿಸಿ ಪುನರುತ್ಥಾನದ ದಾರಿಯನ್ನು ತೆರೆದಿಡುತ್ತದೆ; ಅಲ್ಲಿ ಪ್ರತಿಯೊಂದು ಕಣ್ಣೀರು ಒರೆಸಲ್ಪಡುತ್ತದೆ ಮತ್ತು ಪ್ರತಿಯೊಂದು ವಲಸೆ ಬದುಕು ತನ್ನ ನಿಜವಾದ ಮನೆ ತಲುಪುತ್ತದೆ ಎಂದು ಹೇಳಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).