ಸಿಯೆರಾ ಲಿಯೋನ್: ಧರ್ಮಗುರುಗಳ ಮೇಲಿನ ಹಿಂಸಾಚಾರ ಹೆಚ್ಚಳ – ಧರ್ಮಾಧ್ಯಕ್ಷರ ತೀವ್ರ ಖಂಡನೆ
ವರದಿ: ಸಹೋದರಿ ಕ್ರಿಸ್ಟಿನ್ ಮಸಿವೊ, CPS
ವ್ಯಾಟಿಕನ್ ಫಿಡೆಸ್ ಸುದ್ದಿಸಂಸ್ಥೆಯ ಪ್ರಕಾರ, ಇತ್ತೀಚೆಗೆ ಕಥೋಲಿಕ ಗುರುಗಳ ಮೇಲೆ ನಡೆದ ದಾಳಿಯ ಹಿನ್ನೆಲೆಯಲ್ಲಿ ಧರ್ಮಾಧ್ಯಕ್ಷರ ಸಮಿತಿ ಅಧಿಕೃತ ಹೇಳಿಕೆ ಹೊರಡಿಸಿದೆ.
“ನಮ್ಮ ಧರ್ಮಕ್ಷೇತ್ರಗಳಲ್ಲಿ ಧರ್ಮಗುರುಗಳ,ಧಾರ್ಮಿಕ ಸೇವಾಕರ್ತರ, ವಿಶ್ವಾಸಿಗಳ, ಧಾರ್ಮಿಕ ಸೇವಾ ಕೇಂದ್ರಗಳ ವಿರುದ್ಧ ನಡೆದ ಸರಣಿ ದಾಳಿಗಳನ್ನು ನಾವು ಸ್ಪಷ್ಟವಾಗಿ ಖಂಡಿಸುತ್ತೇವೆ,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇತ್ತೀಚಿನ ಘಟನೆಗಳು
2025 ಜನವರಿ 27ರಂದು, ಮೇಲಿನ ಬಾಂಬಾರಾ ಪ್ರದೇಶದ ಪೆಂಡೆಂಬು ಪಟ್ಟಣದ ಸ್ವರ್ಗಾರೋಹಣ ಮಾತೆಯ ಧರ್ಮಕೇಂದ್ರದ ಗುರುಗಳಾದ ವಂ. ಜೇಮ್ಸ್ ಜೋಶುವ ಜಮುರಿ ಅವರ ಮೇಲೆ ದಾಳಿ ನಡೆದಿದೆ. ಅವರ ಕೈ, ತಲೆ ಹಾಗೂ ಎರಡೂ ಮೊಣಕಾಲುಗಳಿಗೆ ಗಾಯಗಳಾಗಿವೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಧರ್ಮಾಧ್ಯಕ್ಷರು 2025 ಆಗಸ್ಟ್ 30ರಂದು ಕೆನೆಮಾದ ಅಮಲೋದ್ಭವ ಮಾತೆಯ ಧರ್ಮಕೇಂದ್ರದ ಗುರುಗಳಾದ ವಂ. ಆಗಸ್ಟಿನ್ ದೌದಾ ಅಮಾಡು ಅವರ ಹತ್ಯೆಯನ್ನೂ ಉಲ್ಲೇಖಿಸಿದ್ದಾರೆ. ಅವರು ತಮ್ಮ ನಿವಾಸದಲ್ಲೇ ಹತ್ಯೆಗೀಡಾಗಿದ್ದರು, ಇದು ಸ್ಥಳೀಯ ಕಥೋಲಿಕ ಸಮುದಾಯದಲ್ಲಿ ತೀವ್ರ ಆತಂಕ ಉಂಟುಮಾಡಿತ್ತು.
ತನಿಖೆಯ ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳು 350 ಡಾಲರ್ ಮೌಲ್ಯದ ಲ್ಯಾಪ್‌ಟಾಪ್ ಹಾಗೂ 5,000 ಸಿಯೆರಾ ಲಿಯೋನ್ ಲಿಯೋನ್ಸ್ ನಗದು ಕದ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಚಲವಾದ ಒಗ್ಗಟ್ಟು
ಧರ್ಮಾಧ್ಯಕ್ಷರ ಪ್ರಕಾರ, ಕಳೆದ ಆರು ತಿಂಗಳಲ್ಲಿ ಧಾರ್ಮಿಕ ಸೇವಾ ಕೇಂದ್ರಗಳು ಹಾಗೂ ಧರ್ಮಸಭೆಯ ಆಸ್ತಿಗಳನ್ನು ಗುರಿಯಾಗಿಸಿಕೊಂಡ ಕಳ್ಳತನ ಮತ್ತು ದರೋಡೆ ಪ್ರಕರಣಗಳು ಹೆಚ್ಚಾಗಿವೆ. ಇದರಿಂದ ವಿಶೇಷವಾಗಿ ಬಡವರು ಹಾಗೂ ದುರ್ಬಲರಿಗೆ ನೀಡಲಾಗುತ್ತಿದ್ದ ಸೇವೆಗಳು ವ್ಯತ್ಯಯಗೊಂಡಿವೆ.
“ಸಶಸ್ತ್ರ ದರೋಡೆ, ವಸತಿಗಳ ಆಕ್ರಮಣ ಹಾಗೂ ಧಾರ್ಮಿಕ ಸೇವಾ ಆಸ್ತಿಗಳ ಲೂಟಿಯಿಂದ ಆಘಾತಕ್ಕೊಳಗಾದ ಗುರುಗಳು, ಧಾರ್ಮಿಕ ಸೇವಾಕರ್ತರು ಹಾಗೂ ಸಾಮಾನ್ಯ ಭಕ್ತರೊಂದಿಗೆ ನಾವು ಅಚಲ ಐಕ್ಯತೆಯಲ್ಲಿ ನಿಲ್ಲುತ್ತೇವೆ,” ಎಂದು ಧರ್ಮಾಧ್ಯಕ್ಷರು ತಿಳಿಸಿದ್ದಾರೆ.
ಹೆಚ್ಚುತ್ತಿರುವ ಹಿಂಸಾಚಾರವನ್ನು ತಡೆಯಲು ತಕ್ಷಣದ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಧರ್ಮಾಧ್ಯಕ್ಷರು ಕಾನೂನು ಜಾರಿ ಸಂಸ್ಥೆಗಳು ಹಾಗೂ ಪೊಲೀಸರನ್ನು ಒತ್ತಾಯಿಸಿದ್ದಾರೆ. ಧರ್ಮಗುರುಗಳು, ಧಾರ್ಮಿಕ ಸಮುದಾಯಗಳು ಮತ್ತು ಧರ್ಮಸಭೆಯ ಸಂಸ್ಥೆಗಳ ಸುರಕ್ಷತೆಯನ್ನು ಖಚಿತಪಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).