ಹುಡುಕಿ

2020.08.27 Vangelo del giorno lampada illuminare luce vegliare 2020.08.27 Vangelo del giorno lampada illuminare luce vegliare 

ಪ್ರಭುವಿನ ದಿನದ ಧ್ಯಾನ: ಕತ್ತಲೆಯನ್ನು ತೊಲಗಿಸುವ ಕರುಣೆ

ಸಾಧಾರಣ ಕಾಲದ ಐದನೇ ಭಾನುವಾರವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಅಬ್ಬೋಟ್ ಮರಿಯನ್ ನ್ಗುಯೆನ್ “ಕರುಣೆ ,ಕತ್ತಲೆಯನ್ನು ತೊಲಗಿಸುವ ಬೆಳಕಿನ ದೃಢತೆ” ಎಂಬ ವಿಷಯದ ಮೇಲೆ ಚಿಂತನೆಯನ್ನು ಹಂಚಿಕೊಂಡಿದ್ದಾರೆ.

ಲೇಖಕರು: ಅಬ್ಬೊಟ್ ಮರಿಯೋನ್ ನಗುಯೆನ್

ಯೇಸು ತನ್ನ ಶಿಷ್ಯರಿಗೆ, “ನೀವು ಲೋಕದ ಬೆಳಕು” ಎಂದು ಹೇಳುವಾಗ, ಆ ಮಾತುಗಳು ನಮಗೆ ಭರವಸೆಯಾಗಿ, ಕೆಲವೊಮ್ಮೆ ಹೊಗಳಿಕೆಯಂತೆ ಕೂಡ ಕೇಳಿಸಬಹುದು. ನಮ್ಮ ಕಾಲದಲ್ಲಿ “ಬೆಳಕು” ಎಂದರೆ ಬಹುಸಾರಿ ಸ್ವಯಂ–ಅಭಿವ್ಯಕ್ತಿ, ವೈಯಕ್ತಿಕ ಸಾಧನೆ, ಅಥವಾ ಒಳಗಿನ ಆತ್ಮಸತ್ಯದ ಮೃದುವಾದ ಕಾಂತಿ ಎಂದು ಅರ್ಥಮಾಡಿಕೊಳ್ಳಲಾಗುತ್ತದೆ. ಆದರೆ ಪ್ರವಾದಿ ಯೆಶಾಯನು ಈ ಆರಾಮದ ಭಾವನೆಯನ್ನು ತಕ್ಷಣವೇ ಅಸ್ತವ್ಯಸ್ತಗೊಳಿಸುತ್ತಾನೆ. ಅವನಿಗೆ ಬೆಳಕು ಮೃದುವಾಗಿಲ್ಲ; ಅದಕ್ಕೆ “ದೃಢತೆ” ಇದೆ. ಹಸಿದವರಿಗೆ ಅನ್ನ ಹಂಚಿದಾಗ, ನಿರಾಶ್ರಿತರನ್ನು ಸ್ವೀಕರಿಸಿದಾಗ, ದಬ್ಬಾಳಿಕೆ, ಸುಳ್ಳು ಆರೋಪ ಮತ್ತು ನಿರಾಶೆಗಳನ್ನು ತೊಲಗಿಸಿದಾಗಲೇ ಬೆಳಕು ಹೊಳೆಯುತ್ತದೆ. ಬೆಳಕು ಒಳಗೆ ನೋಡಿದರೆ ಸಿಗುವುದಿಲ್ಲ; ಕತ್ತಲೆಯನ್ನು ಸಕ್ರಿಯವಾಗಿ ಹಿಂದಕ್ಕೆ ತಳ್ಳಿದಾಗ ಅದು ಪ್ರಕಟವಾಗುತ್ತದೆ.

ಇದು ಯೇಸುವಿನ ಮಾತುಗಳನ್ನು ನಾವು ಇನ್ನೂ ಸ್ಪಷ್ಟವಾಗಿ ಕೇಳಲು ಸಹಾಯ ಮಾಡುತ್ತದೆ. “ನೀವು ಲೋಕದ ಬೆಳಕು” ಎಂಬ ವಾಕ್ಯವು ಧನ್ಯವಚನಗಳ (Beatitudes) ತಕ್ಷಣದ ನಂತರ ಬರುತ್ತದೆ—ಅಲ್ಲಿ ಬಡವರು, ವಿನಯಶೀಲರು, ಹಿಂಸಿತರಾದವರು ವರ್ಣಿಸಲ್ಪಟ್ಟಿದ್ದಾರೆ; ಕೊನೆಯಲ್ಲಿ ಇವು ಯೇಸುವನ್ನೇ ಸೂಚಿಸುತ್ತವೆ. ಆದ್ದರಿಂದ ಬೆಳಕಾಗುವುದು ಎಂದರೆ ದುಃಖದಿಂದ ದೂರ ಸರಿಯುವುದು ಅಲ್ಲ; ಬದಲಾಗಿ ಅದತ್ತ ಹೆಜ್ಜೆ ಹಾಕುವುದು, ದೇವರ ರಾಜ್ಯಕ್ಕೆ ಸಮೀಪವಾಗಿರುವವರ ಧನ್ಯತೆಯಲ್ಲಿ ಪಾಲುಗೊಳ್ಳುವುದು. ಇದು ಸ್ವಯಂ–ಸಾಕ್ಷಾತ್ಕಾರವಲ್ಲ; ಕರುಣೆಯ ಪ್ರೀತಿಯ ಮೂಲಕ ನಮ್ಮ ಮಾನವೀಯತೆಯ ನಿಜವಾದ ಸಾಕ್ಷಾತ್ಕಾರ—ಪೂರ್ಣವಾಗಿ ತಂದೆಯ ಮಹಿಮೆಗೆ ಅರ್ಪಣೆ. ಯೆಶಾಯನು ಮುಂಚಿತವಾಗಿ ಸೂಚಿಸಿದ್ದನ್ನು ಯೇಸು ಮತ್ತಾಯ 25ರಲ್ಲಿ ಸ್ಪಷ್ಟಪಡಿಸುತ್ತಾರೆ: ಕರುಣೆ ಸ್ಪಷ್ಟವಾಗಿ ಕ್ರಿಯಾರೂಪ ಪಡೆದಾಗ ಬೆಳಕು ಹೊಳೆಯುತ್ತದೆ.

ಸಂನ್ಯಾಸದ ದೃಷ್ಟಿಕೋನದಿಂದ ನೋಡಿದರೆ, ಇಲ್ಲಿ ಒಂದು ಸ್ಪಷ್ಟ ತೀವ್ರತೆ ಕಾಣುತ್ತದೆ. ಸಂನ್ಯಾಸಿಗಳಿಗೆ ದೇಹಸಂಬಂಧಿ ಕರುಣಾಕಾರ್ಯಗಳನ್ನು ನೇರವಾಗಿ ಮಾಡುವುದು ಕಷ್ಟವಾಗಬಹುದು. ನಿಯಮದ ಪ್ರಕಾರ ಅವನಿಗೆ ಸ್ವಂತ ದೇಹದ ಮೇಲೂ ಸಂಪೂರ್ಣ ಅಧಿಕಾರವಿಲ್ಲ; ಹಸಿದವರಿಗೆ ಆಹಾರ ನೀಡುವ ಅಥವಾ ಬಟ್ಟೆ ಕೊಡುವ ಸಾಮರ್ಥ್ಯವೂ ಇಲ್ಲ. ಆದರೂ, ಬೆನೆಡಿಕ್ಟನ ಸಂಪ್ರದಾಯವು ಕರುಣೆಯನ್ನು ಎಂದಿಗೂ ವೈಯಕ್ತಿಕ ಕಾರ್ಯವೆಂದು ಮಾತ್ರ ನೋಡಿಲ್ಲ. ಒಬ್ಬ ಸಂನ್ಯಾಸಿಗೆ ಸಾಧ್ಯವಿಲ್ಲದದ್ದನ್ನು ಸಮುದಾಯ ಒಟ್ಟಾಗಿ ಮಾಡುತ್ತದೆ. ಬೆನೆಡಿಕ್ಟ್ ವಿಶೇಷವಾಗಿ ದ್ವಾರಪಾಲಕನ ಕುರಿತು ಹಾಗೂ ಅತಿಥಿ ಸ್ವೀಕಾರದ ಕುರಿತು ಹೇಳುತ್ತಾರೆ: ಪ್ರತಿಯೊಬ್ಬ ಅತಿಥಿಯನ್ನೂ ಕ್ರಿಸ್ತನಂತೆ ಸ್ವೀಕರಿಸಬೇಕು; ಮಠವು ಅವರಿಗೆ ಉಚಿತವಾಗಿ ಆಹಾರ ಮತ್ತು —ಕೆಲವೊಮ್ಮೆ ಸಮುದಾಯಕ್ಕಿಂತಲೂ ಉತ್ತಮವಾಗಿ ಆರೈಕೆ ನೀಡಬೇಕು. ಹಿಂದಿನ ಕಾಲದಲ್ಲಿ ಉಪವಾಸ ಎಂದರೆ ಕೇವಲ ವೈಯಕ್ತಿಕ ತಪಸ್ಸು ಅಲ್ಲ; ಕಡಿಮೆಯಾದ ಅನ್ನದ ಪಾಲು ನೇರವಾಗಿ ಬಡವರಿಗೆ ನೀಡಲ್ಪಡುತ್ತಿತ್ತು. ಹೀಗಾಗಿ ಕರುಣೆ ನೈಜವಾಗಿಯೇ ಉಳಿಯುತ್ತದೆ, ಆದರೆ ವೈಯಕ್ತಿಕ ಅಹಂಕಾರದಿಂದ ಶುದ್ಧಗೊಳ್ಳುತ್ತದೆ.

ಆದರೂ ಯೆಶಾಯನು ಇನ್ನೂ ಆಳವಾಗಿ: “ನೀನು ನಿನ್ನ ಮಧ್ಯದಿಂದ ದಬ್ಬಾಳಿಕೆ, ಸುಳ್ಳು ಆರೋಪ ಮತ್ತು ದುರುದ್ದೇಶದ ಮಾತುಗಳನ್ನು ತೆಗೆದುಹಾಕಿದರೆ…” ಎಂಬ ಅವನ ಮಾತುಗಳು ಸಂನ್ಯಾಸಿಯ ಹೃದಯವನ್ನೇ ಸ್ಪರ್ಶಿಸುತ್ತವೆ. ಸಂನ್ಯಾಸಿಗೆ ಬೆಳಕನ್ನು ಹೊಳೆಯಿಸುವ ಅತ್ಯಂತ ಕಠಿಣ ಕೆಲಸ ಒಳಗಿನದು. ಬೆನೆಡಿಕ್ಟ್ ಸ್ಪಷ್ಟವಾಗಿ ಹೇಳುತ್ತಾನೆ: ಒಳ್ಳೆಯದು ದೇವರ ಕೆಲಸ; ತಪ್ಪಾಗುವದು ಸಂನ್ಯಾಸಿಯ ತಪ್ಪು. ಇದು ಸ್ವಯಂ–ದ್ವೇಷವಲ್ಲ, ಆತ್ಮೀಯ ಸ್ಪಷ್ಟತೆ.

ದಬ್ಬಾಳಿಕೆ ಆರಂಭವಾಗುವುದು, ಸಂನ್ಯಾಸಿ ತನ್ನೊಳಗಿನ ಕೆಟ್ಟ ಆತ್ಮದ ಪ್ರಭುತ್ವವನ್ನು ಜಯಿಸುವಾಗ. ಸುಳ್ಳು ಆರೋಪ ಕೇವಲ ಸಾಮಾಜಿಕ ಪಾಪವಲ್ಲ; ಅದು ವಿನಯದ ಮೊದಲ ಮೆಟ್ಟಿಲಾದ “ಎಲ್ಲೆಡೆ ಸನ್ನಿಹಿತನಾದ ಸತ್ಯಸ್ವರೂಪಿಯಾದ ದೇವರ ಭಯ”ವನ್ನು ತಿರಸ್ಕರಿಸುವುದು. ಸುಳ್ಳಾಗಿ ಆರೋಪಿಸುವುದು ಎಂದರೆ ಜವಾಬ್ದಾರಿಯಿಂದ ಓಡಿಹೋಗುವುದು; ಇದು ಐದನೇ ವಿನಯದ ಹಂತದಲ್ಲಿ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವ ಧೈರ್ಯವನ್ನು, ಮತ್ತು ಏಳನೇ ಹಂತದಲ್ಲಿ ಸಣ್ಣ ತಪ್ಪಿಗೂ ಹೊಣೆ ಹೊರುವ ಮನೋಭಾವವನ್ನು ನಿರಾಕರಿಸುವಂತಾಗಿದೆ. ಆರೋಪಿಸುವ ಪ್ರವೃತ್ತಿ ಆತ್ಮೀಯ ಪ್ರೌಢತೆಯಲ್ಲ, ಅಪಕ್ವತೆಯ ಸೂಚನೆ.

ದುರುದ್ದೇಶದ ಮಾತು ಇನ್ನೂ ಆಳಕ್ಕೆ ಹೋಗುತ್ತದೆ. ಇದು ವಿನಯದ ಹನ್ನೆರಡನೇ ಮೆಟ್ಟಲಿಗೆ ವಿರುದ್ಧ. ತನ್ನ ಕೆಲಸವನ್ನು ಮಾಡುವ ಬದಲು, ಸಂನ್ಯಾಸಿ ಎಲ್ಲವನ್ನೂ ವಿಮರ್ಶಿಸಲು ಪ್ರಾರಂಭಿಸುತ್ತಾನೆ; ತನ್ನ ವ್ಯಾಪ್ತಿಗೆ ಸೇರದ ವಿಷಯಗಳಲ್ಲಿ ತಲೆ ಹಾಕುತ್ತಾನೆ. ಪ್ರಾರಂಭದಲ್ಲಿ ಇದು ಕಿರಿಕಿರಿಯಂತೆ ಕಾಣಬಹುದು.ಆದರೆ ಅದು ಅಡಗಿದ ಸ್ವಚ್ಛಂದತೆಯ ಪ್ರೀತಿ. ಅದು ಗೊಣಗುವಿಕೆಗೆ ಮಾರ್ಪಡುತ್ತದೆ; ಇತರರನ್ನು ತನ್ನ ನಕಾರಾತ್ಮಕತೆಯಲ್ಲಿ ಸೇರಿಸಿಕೊಳ್ಳುತ್ತದೆ; ಕೊನೆಗೆ ಅಹಂಕಾರವಾಗಿ—ಅಧಿಕಾರ, ಕ್ರಮ ಮತ್ತು ಶಾಂತಿಯ ವಿರುದ್ಧ ಮಾತನಾಡುತ್ತದೆ. ಬೆನೆಡಿಕ್ಟ್ ಇದನ್ನು ಅತ್ಯಂತ ನಾಶಕಾರಕವೆಂದು ತಿಳಿಸುತ್ತಾರೆ; ಇದು ಬೆಳಕನ್ನು ತಕ್ಷಣ ನಂದಿಸುತ್ತದೆ.

ಮೊದಲ ನೋಟಕ್ಕೆ ಈ ಆಂತರಿಕ ಹೋರಾಟ ಯೇಸುವಿನ “ನಿಮ್ಮ ಬೆಳಕು ಹೊಳೆಯಲಿ” ಎಂಬ ಆಜ್ಞೆಯಿಂದ ದೂರದಂತೆ ತೋರುತ್ತದೆ. ಆದರೆ ನಿಜವಾಗಿ ಇಲ್ಲಿಯೇ ಬೆಳಕು ಬಿಡುಗಡೆಯಾಗುತ್ತದೆ ಅಥವಾ ಉಸಿರುಗಟ್ಟುತ್ತದೆ. ಸಂನ್ಯಾಸಿ ಕಲಿಯುವದು—ಪವಿತ್ರತೆ ಹೆಚ್ಚಾಗಿ ಒಳ್ಳೆಯ ಕಾರ್ಯಗಳನ್ನು ಸೇರಿಸುವುದಲ್ಲ; ದೇವರು ಕೊಟ್ಟಿರುವ ಬೆಳಕನ್ನು ಮುಚ್ಚಿಹಾಕಿದ ತನ್ನ ಸ್ವಂತ ಅಹಂಕಾರದ ಪದರಗಳನ್ನು ತೆಗೆದುಹಾಕುವುದು. ಕೀರ್ತನಕಾರನು ಇದನ್ನು ಚೆನ್ನಾಗಿ ಅರಿತಿದ್ದನು: ಪ್ರಭುವು ತನ್ನ ಆತ್ಮವನ್ನು ಹಿಂಪಡೆಯಿದರೆ, ಎಲ್ಲ ಜೀವವೂ ಧೂಳಾಗುತ್ತದೆ. ಬೆಳಕು ನಮ್ಮದಾಗಿಲ್ಲ; ಅದು ನಮ್ಮೊಳಗಿನ ದೇವರ ಜೀವನ. ನಾವು ಅನೇಕ ಬಾರಿ ಹಿರಿಯ ಮಗನಂತೆ ಪ್ರೀತಿಯನ್ನು ಗಳಿಸಬೇಕು ಎಂದುಕೊಳ್ಳುತ್ತೇವೆ; ಆದರೆ ವಾಸ್ತವದಲ್ಲಿ ಅದನ್ನು ಸ್ವೀಕರಿಸಿ ಕಾಪಾಡಬೇಕು. ಬೆಳಕು ಮೊದಲು ದೇವರದು.

ಅದಕ್ಕಾಗಿಯೇ ಮಠಗಳು ಬೆಟ್ಟಗಳ ಮೇಲೆ (ಸುಬಿಯಾಕೊ, ಮೊಂಟೆ ಕ್ಯಾಸಿನೋ, ಮೊಂಟ್ಸೆರಾತ್)ನಿಲ್ಲುತ್ತವೆ. ಅವು ಸಾಧನೆಯ ಸ್ಮಾರಕಗಳಲ್ಲ, ಸಂಕೇತಗಳು. ಜನರು ಅಲ್ಲಿಗೆ ಹೊಗಳಲು ಬರುವುದಿಲ್ಲ; ಶಾಂತಿ, ಸಾನ್ನಿಧ್ಯ ಮತ್ತು ಮೃದುವಾದ ಕಾಂತಿಯನ್ನು ಅನುಭವಿಸಲು ಬರುತ್ತಾರೆ. ಸಂನ್ಯಾಸಿಗಳು ತಮ್ಮ ನಿಜವಾದ ಕೆಲಸವನ್ನು ಮಾಡಿದಾಗ, ಸಮುದಾಯವೇ ಬೆಳಕಾಗುತ್ತದೆ—ಅದು ಹೊಳೆಯಲು ಪ್ರಯತ್ನಿಸುವುದರಿಂದ ಅಲ್ಲ, ದೇವರು ಈಗಾಗಲೇ ಅಲ್ಲಿ ಇಟ್ಟ ಬೆಳಕನ್ನು ಮುಚ್ಚುವುದು ಉಳಿಯದಿರುವುದರಿಂದ.


ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

07 ಫೆಬ್ರವರಿ 2026, 17:53