ಹುಡುಕಿ

2022.09.30 Sunday Gospel Reflections 2022.09.30 Sunday Gospel Reflections 

ಪ್ರಭುವಿನ ದಿನದ ಚಿಂತನೆ: “ಮಾನವ ಹೃದಯಗಳ ಫಲಕಗಳಲ್ಲಿ”

ಸಾಮಾನ್ಯ ಕಾಲದ ಆರನೇ ಭಾನುವಾರವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ವಂ. ಗುರು ಎಡ್ಮಂಡ್ ಪವರ್, OSB ಅವರು “ಮಾನವ ಹೃದಯಗಳ ಫಲಕಗಳಲ್ಲಿ” ಎಂಬ ವಿಷಯದ ಮೇಲೆ ಆಧ್ಯಾತ್ಮಿಕ ಚಿಂತನೆಯನ್ನು ಹಂಚಿಕೊಂಡಿದ್ದಾರೆ.

ಲೇಖಕರು:ವಂ. ಗುರು ಎಡ್ಮಂಡ್ ಪವರ್, OSB

ಪ್ರತಿಯೊಂದು ಭಾನುವಾರವೂ ನಾವು ಪ್ರಭು ಕ್ರಿಸ್ತರ ಪುನರುತ್ಥಾನವನ್ನು ಆಚರಿಸುವಾಗ, ಪವಿತ್ರ ಗ್ರಂಥದ ನಾಲ್ಕೂ ಶುಭಸಂದೇಶಗಳೂ ಪ್ರಭು ಯೇಸುವಿನ ಸಮಾಧಿಯ ದ್ವಾರದಿಂದ ಉರುಳಿಸಲ್ಪಟ್ಟ ಕಲ್ಲನ್ನು ಉಲ್ಲೇಖಿಸುತ್ತವೆ. ಆದರೆ ಈ ಕಲ್ಲು ಕೇವಲ ಸಮಾಧಿಯ ಬಾಗಿಲನ್ನು ಮುಚ್ಚಿದ್ದ ಭೌತಿಕ ವಸ್ತುವಲ್ಲ. ಅದು ಮರಣದ ಶೂನ್ಯತೆಯನ್ನು ನೋಡದಂತೆ ತಡೆಯುವ ನಮ್ಮ ಆಂತರಿಕ ಕಠಿಣತೆಯಾಗಿರಬಹುದು.

ಸಂತ ಪೌಲರು “ಕಲ್ಲು” ಎಂಬ ರೂಪಕವನ್ನು ಮತ್ತೊಂದು ದಿಕ್ಕಿನಲ್ಲಿ ವಿವರಿಸುತ್ತಾರೆ. ಅವರು ಕಲ್ಲಿನ ಫಲಕಗಳ ಮೇಲೆ ಬರೆಯಲ್ಪಟ್ಟ ಅಕ್ಷರಗಳಿಗಿಂತಲೂ ಮಾನವ ಹೃದಯಗಳ ಫಲಕಗಳ ಮೇಲೆ ಬರೆಯಲ್ಪಡುವ ದೈವವಾಕ್ಯದ ಮಹತ್ವವನ್ನು ನಮ್ಮ ಮುಂದಿಡುತ್ತಾರೆ (2 ಕೊರಿಂಥ 3:3). ಅವರ ಚಿಂತನೆಯ ಹಿಂದೆ ಸೀನಾಯ ಪರ್ವತದಿಂದ ಧರ್ಮಶಾಸ್ತ್ರದ ಫಲಕಗಳನ್ನು ಹಿಡಿದು ಇಳಿದ ಮೋಶೆಯವ ದಿವ್ಯ ಅನುಭವದ ಚಿತ್ರಣ ನೆಲಸಿದೆ. ಹಾಗೆಯೇ ಪ್ರವಾದಿ ಏಜೆಕಿಯೇಲರ ಪ್ರಭುವಿನ ವಾಗ್ದಾನವನ್ನು ಸಾರುತ್ತಾರೆ: “ ಕಲ್ಲಾದ ಹೃದಯವನ್ನು ನಿಮ್ಮೊಳಗಿಂದ ತೆಗೆದು ಮೃದುವಾದ ಹೃದಯವನ್ನು ನಿಮಗೆ ದಯಪಾಲಿಸುವೆನು” (ಯೆಜೆಕಿಯೇಲ 36:26).

ನಮ್ಮ ಹೃದಯವು ಕಲ್ಲಿನಂತಾಗಿದೆಯೇ? ಸಾಮಾನ್ಯ ಕಾಲದ ಆರನೇ ಭಾನುವಾರದ ಶುಭಸಂದೇಶದ ಭಾಗವು ಧರ್ಮಶಾಸ್ತ್ರದ ಕುರಿತು ಆಳವಾದ ಮನನಕ್ಕೆ ನಮ್ಮನ್ನು ಆಹ್ವಾನಿಸುತ್ತದೆ. ಸಂತ ಮತ್ತಾಯರ ಶುಭಸಂದೇಶವನ್ನು ಉಪದೇಶಾತ್ಮಕ ಶುಭಸಂದೇಶ ಎಂದು ಕರೆಯಲಾಗುತ್ತದೆ. ಈ ದಿನಗಳಲ್ಲಿ ನಾವು ಪ್ರಭು ಯೇಸುವಿನ ಬೋಧನೆಗಳ ಮೊದಲ ವ್ಯವಸ್ಥಿತ ನಿರೂಪಣೆಯಾದ  ಪರ್ವತೋಪದೇಶವನ್ನು ಆಲಿಸುತ್ತಿದ್ದೇವೆ .

ಈ ಬೋಧನೆಗಳ ಇಪ್ಪತ್ತು ವಚನಗಳಲ್ಲಿ, ಪ್ರಭು ಯೇಸು ತಮ್ಮ ಅನುಯಾಯಿಗಳಾಗಿ ನಾವು ಹೇಗೆ ಬದುಕಬೇಕು ಎಂಬುದರ ಕುರಿತು ಮಾರ್ಗದರ್ಶನವನ್ನು ನೀಡುತ್ತಾರೆ. ಅವರು ಸೂಚಿಸುವುದು ಧರ್ಮಶಾಸ್ತ್ರದ ಆಂತರೀಕರಣ. ಅದು ಹೊರಗಿನ ಆಚರಣೆ ಅಥವಾ ಅಕ್ಷರದ ಪಾಲನೆ ಮಾತ್ರವಲ್ಲ. “ಧರ್ಮಶಾಸ್ತ್ರಿಗಳ ಹಾಗೂ ಫರಿಸಾಯರ ಧರ್ಮನಿಷ್ಠೆಗಿಂತ ನಿಮ್ಮ ಧರ್ಮನಿಷ್ಠೆ ಉತ್ತಮವಾಗದ ಹೊರತು ನೀವು ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸಲಾರಿರಿ ಎಂಬುದು ನಿಶ್ಚಯ.”(ಮತ್ತಾಯ 5:20) ಎಂದು ಪ್ರಭು ಎಚ್ಚರಿಸುತ್ತಾರೆ.

ನಮ್ಮ ನೀತಿ ಹೇಗೆ ಮಿಗಿಲಾಗಬಹುದು? ಬಹುಶಃ ಹೃದಯದ ಪರಿವರ್ತನೆಯ ಮೂಲಕವೇ ಅದು ಸಾಧ್ಯ. ಬೇಗ ಕಠಿಣವಾಗುವ, ಹೃದಯಹೀನ ಹಾಗೂ ಸ್ವಯಂ ತೃಪ್ತಿಗೊಳ್ಳುವ ಕಾನೂನಾತ್ಮಕ ಮನೋಭಾವದಿಂದ ಸ್ನೇಹಪೂರ್ಣ, ಕರುಣೆಯಿಂದ ತುಂಬಿದ ಮತ್ತು ಹೊಂದಿಕೊಳ್ಳುವ ಮನೋಭಾವದತ್ತ ಆಗುವ ಪರಿವರ್ತನೆಯ ಮೂಲಕವೇ ನಮ್ಮ ನೀತಿ ಮಿಗಿಲಾಗಲು ಸಾಧ್ಯ. ಧರ್ಮಶಾಸ್ತ್ರವನ್ನು ಪಾಲಿಸುವುದಷ್ಟೇ ಅಲ್ಲ, ಅದನ್ನು ಪ್ರೀತಿಯಿಂದ ಬದುಕುವ ಹೃದಯದ ರೂಪಾಂತರವೇ ಪ್ರಭುವಿನ ಆಶಯ.

ಪ್ರಭು ಯೇಸು ಸ್ವಾಮಿ ದಶಾಜ್ಞೆಗಳಲ್ಲಿನ ಮೂರು ಆಜ್ಞೆಗಳ ಕುರಿತು ವಿಶೇಷವಾಗಿ ಸ್ಪಷ್ಟಪಡಿಸುತ್ತಾರೆ — ಐದನೆಯದು (“ಕೊಲ್ಲಬಾರದು”), ಆರನೆಯದು (“ವ್ಯಭಿಚಾರ ಮಾಡಬಾರದು”) ಮತ್ತು ಎಂಟನೆಯದು (“ಸುಳ್ಳು ಸಾಕ್ಷಿ ಕೊಡಬಾರದು”). ಕಾನೂನಿನ ನಿಜವಾದ ಆತ್ಮಾರ್ಥವೇನು ಎಂಬುದನ್ನು ಒಳಮನಸ್ಸಿನಲ್ಲಿ ಅಳವಡಿಸಿಕೊಳ್ಳಲು ಈ ಉದಾಹರಣೆಗಳನ್ನು ನೀಡುತ್ತಾರೆ. ಹೊರಗಿನ ಆಚರಣೆ ಮಾತ್ರ ಸಾಕಾಗುವುದಿಲ್ಲ; ಆಜ್ಞೆಗಳ ಆಂತರಿಕ ಹಾಗೂ ಆಳವಾದ ಅರ್ಥವನ್ನು ಹೃದಯಪೂರ್ವಕವಾಗಿ ಸ್ವೀಕರಿಸುವ ಪರಿವರ್ತನೆಯನ್ನೇ ಅವರು ಬೋಧಿಸುತ್ತಾರೆ. ಹೊರಗೆ ನೋಡಿದರೆ ಈ ಆಜ್ಞೆಗಳು ಇನ್ನಷ್ಟು ಕಠಿಣವಾಗಿದೆಯೆಂದು ತೋರುವುದಾದರೂ, ವಾಸ್ತವವಾಗಿ ಆಜ್ಞೆಗಳ ಆಳವಾದ ಮತ್ತು ವ್ಯಾಪಕ ಅರ್ಥವನ್ನು ಜೀವಿತದಲ್ಲಿ ಅನುಸರಿಸುವ ಹೃದಯದ ಪರಿವರ್ತನೆಯತ್ತ ನಮ್ಮನ್ನು ಕರೆದೊಯ್ಯುತ್ತವೆ.

ಇದು ಸಂತ ಬೆನಡಿಕ್ಟರ ನಿಯಮಾವಳಿಯಲ್ಲಿನ ವಿನಯದ ಅಧ್ಯಾಯವನ್ನು ನೆನಪಿಗೆ ತರುತ್ತದೆ. ಸಂತ ಬೆನಡಿಕ್ಟರು ವಿಧೇಯತೆಯ ಪ್ರೇರಣೆಯ ವಿವಿಧ ಹಂತಗಳನ್ನು ವಿವರಿಸುತ್ತಾರೆ: ಶಿಕ್ಷೆಯ ಭಯ ಮತ್ತು ಮೆಚ್ಚುಗೆ ಪಡೆಯುವ ಆಸೆ — ಇವು ಅತಿ ಕೆಳಮಟ್ಟದ ಪ್ರೇರಣೆಗಳು; ವಿಧೇಯತೆಯ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಮತ್ತೊಂದು ಹಂತ; ಸದ್ಗುಣದಲ್ಲಿ ಆನಂದಿಸುವುದು ಇನ್ನೂ ಮೇಲಿನ ಹಂತ; ಮತ್ತು ಕೊನೆಯದು, ಶ್ರೇಷ್ಠ ಹಂತ — ಕ್ರಿಸ್ತನ ಪ್ರೀತಿ (RB 7:67–69).

ಮತ್ತೊಂದೆಡೆ ಸಂತ ಮತ್ತಾಯರ ಶುಭಸಂದೇಶದಲ್ಲಿ (ಮತ್ತಾ 22:36–40) ಪ್ರಭು ಯೇಸು ಸ್ವಾಮಿ ಧರ್ಮಶಾಸ್ತ್ರವನ್ನು ಅದರ ಮೂಲಸಾರಕ್ಕೆ ಇಳಿಸಿ, ದೇವರ ಪ್ರೀತಿ ಮತ್ತು ನೆರೆಯವನ ಪ್ರೀತಿಯಲ್ಲೇ ಅದನ್ನು ಸರಾಗಗೊಳಿಸುತ್ತಾರೆ. ಇಲ್ಲಿ ಅವರು ಬೇರೆ ರೀತಿಯಲ್ಲಿ ಅದೇ ಧರ್ಮಶಾಸ್ತ್ರವನ್ನು ವಿಸ್ತರಿಸುತ್ತಾ,  ಆಜ್ಞೆಗಳು ಕೇವಲ ಹೊರಗಿನ ನಿಯಮಗಳಾಗಿರದೆ, ಪ್ರೀತಿಯ ಆಳವಾದ ಮತ್ತು ಸಂಪೂರ್ಣ ಬೇಡಿಕೆಯನ್ನು ಒಳಗೊಂಡಿರುವುದನ್ನು ಅವರು ತೋರಿಸುತ್ತಾರೆ. ಅವರ ಮಾತಿನ ಗಂಭೀರತೆ, ಈ ಬೋಧನೆಯನ್ನು ಲಘುವಾಗಿ ತೆಗೆದುಕೊಳ್ಳುವವರಿಗಾಗಿ ಉಲ್ಲೇಖಿಸಲಾದ ಗಂಭೀರ ಪರಿಣಾಮಗಳಿಂದ ಸ್ಪಷ್ಟವಾಗುತ್ತದೆ.

ಇಂದಿನ ಸುವಾರ್ತೆಯ ವಾಕ್ಯಗಳು ನಮ್ಮ ಮನಸ್ಸನ್ನು ಕದಡುತ್ತವೆಯಾದರೆ, ನಾವು ಅದರ ಮುಂದಿನ ಭಾಗದ ಆಳವಾದ ಅರ್ಥವನ್ನು ನೆನಪಿಸಿಕೊಳ್ಳಬೇಕು. ತಪಸ್ಸು ಕಾಲದ ಅಂಚಿನಲ್ಲಿ ನಿಂತಿರುವುದರಿಂದ ಆ ವಚನಗಳು ಇಂದು ನಮ್ಮ ಕಿವಿಗಳಿಗೆ ಕೇಳಿಸದಿದ್ದರೂ, ಅವು ನಮ್ಮ ಹೃದಯದಲ್ಲಿ ಪ್ರತಿಧ್ವನಿಸುತ್ತವೆ.ಅಲ್ಲಿ ಪ್ರಭು ಯೇಸುಸ್ವಾಮಿ ನಮ್ಮನ್ನು ಶತ್ರುಗಳನ್ನೂ ಪ್ರೀತಿಸಲು ಕರೆಯುತ್ತಾರೆ—ಲಾಭದ ನಿರೀಕ್ಷೆಯಿಲ್ಲದ, ಪ್ರತಿಫಲದ ಹಂಬಲವಿಲ್ಲದ, ಯಾರೂ ಅರ್ಹತೆ ತೋರಿಸಬೇಕಾಗದ ಉಚಿತವಾದ ಪ್ರೀತಿ. ಅದು ವ್ಯವಹಾರವಲ್ಲ; ಅದು ಕೃಪೆ. ಅದು ಮಾನವ ಅಳತೆಯಿಂದ ಅಳೆಯುವ ಪ್ರೀತಿ ಅಲ್ಲ; ಅದರ ಅಳತೆ ಪಿತದೇವರು ನಮ್ಮ ಮೇಲಿಟ್ಟಿರುವ ಪ್ರೀತಿ

 ನಾವು ದೇವರನ್ನು ಮತ್ತು ನೆರೆಯವನನ್ನು ಪ್ರೀತಿಸುವುದು ದೇವರು ನಮ್ಮನ್ನು ಪ್ರೀತಿಸಲೆಂದು ಅಲ್ಲ. ದೇವರು ಮೊದಲೇ ನಮ್ಮನ್ನು ಪ್ರೀತಿಸಿದ್ದಾನೆ; ಆದ್ದರಿಂದ ಕೃತಜ್ಞತೆಯ ಪ್ರತಿಕ್ರಿಯೆಯಾಗಿ ನಾವು ಪ್ರೀತಿಸಲು ಪ್ರಯತ್ನಿಸುತ್ತೇವೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

14 ಫೆಬ್ರವರಿ 2026, 16:09