ಪ್ರಧಾನ ಗುರು ಪಿಜ್ಜಾಬಲ್ಲಾ: ಪವಿತ್ರ ಭೂಮಿಯಲ್ಲಿ ನಂಬಿಕೆಯನ್ನು ಪುನರ್‌ನಿರ್ಮಿಸಲು ‘ನಿಖರವಾದ ಕ್ರಮಗಳು’ ಅಗತ್ಯ
ಲೇಖಕರು: ರಾಬರ್ಟೊ ಪಾಗ್ಲಿಯಾಲೊಂಗಾ
ಗಾಜಾದಲ್ಲಿ ನಡೆದಿರುವ ಮತ್ತು ಇನ್ನೂ ನಡೆಯುತ್ತಿರುವ ಘಟನೆಗಳ ಹಿನ್ನೆಲೆಯಲ್ಲಿ, ಇಸ್ರಾಯೇಲರು ಮತ್ತು ಪ್ಯಾಲೇಸ್ತೀನಿಯರ ನಡುವೆ “ಅಲ್ಪಾವಧಿಯ ಪರಿಹಾರವನ್ನು ಕಾಣುವುದು ಕಷ್ಟ” ಎಂದು ಜೆರುಸಲೇಮಿನ ಲ್ಯಾಟಿನ್ ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷರಾದ ಪ್ರಧಾನ ಗುರುಗಳಾದ ಪಿಯರ್‌ಬಟ್ಟಿಸ್ತಾ ಪಿಜ್ಜಾಬಲ್ಲಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪೂಜ್ಯರು 2026ರ ಜನವರಿ 6ರಂದು ರೋಮಿನ ಸಾನ್ ಫ್ರಾನ್ಚೆಸ್ಕೊ ಅ ರಿಪಾ ದೇವಾಲಯದಲ್ಲಿ, ಸಂತ ಫ್ರಾನ್ಸಿಸ್ ಅವರ ಮರಣದ 800ನೇ ವಾರ್ಷಿಕೋತ್ಸವದ ರಾಷ್ಟ್ರೀಯ ಸಮಿತಿಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ.
“ಗಾಯಗಳು ಇನ್ನೂ ಆಳವಾಗಿವೆ; ಜನರು ಗೊಂದಲದಲ್ಲಿದ್ದಾರೆ ಮತ್ತು ನಾಯಕತ್ವ ದುರ್ಬಲವಾಗಿದೆ. ಭವಿಷ್ಯದ ಕುರಿತು ಸ್ಪಷ್ಟ ದೃಷ್ಟಿ ಇಲ್ಲ, ನಿಮ್ಮ ಪಕ್ಕದಲ್ಲಿರುವ ಇನ್ನೊಬ್ಬರನ್ನು ನಿಮ್ಮ ಜೀವನದ ಭಾಗವಾಗಿ ನೋಡುವ ಮನೋಭಾವವೂ ಕಾಣುತ್ತಿಲ್ಲ,” ಎಂದು ಅವರು ವಿವರಿಸಿದ್ದಾರೆ.
“ಯಾವುದೇ ಬದಿಯೂ ಮತ್ತೊಂದರ ಮಾತನ್ನು ಕೇಳಲು ಸಿದ್ಧವಿಲ್ಲ; ಸಂಬಂಧ ಸಂಪೂರ್ಣವಾಗಿ ಮುರಿದುಬಿದ್ದಿದೆ —ಇದನ್ನೇ ಮೊದಲು ಮನಗಾಣಬೇಕು ಮತ್ತು ಇಲ್ಲಿಂದಲೇ ಪುನರಾರಂಭಿಸಬೇಕು,” ಎಂದು ಅವರು ಒತ್ತಿ ಹೇಳಿದ್ದಾರೆ.
ಅಕ್ಟೋಬರ್ 7 ಮತ್ತು ಗಾಜಾ ಯುದ್ಧ: “ಹಿಂದೆಂದೂ ಕಂಡಿಲ್ಲದ ಘಟನೆಗಳು”
ಅಕ್ಟೋಬರ್ 7 ಮತ್ತು ಅದರ ನಂತರ ಉಂಟಾದ ಯುದ್ಧವು “ಹಿಂದೆಂದೂ ಕಂಡಿಲ್ಲದ ಘಟನೆಗಳು” ಎಂದು ಪ್ರಧಾನ ಗುರುಗಳಾದ ಪಿಜ್ಜಾಬಲ್ಲಾ ಅಭಿಪ್ರಾಯ ವ್ಯಕ್ತಪಡಿಸಿದರು.
ಇಟಲಿಯ ರಾಷ್ಟ್ರೀಯ ಸಾರ್ವಜನಿಕ ಪ್ರಸಾರ ಸಂಸ್ಥೆ RAIಯ ಜೆರುಸಲೇಮ್ ಪ್ರತಿನಿಧಿ ಮಾರಿಯಾ ಜಿಯಾನಿಟಿ ಅವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುತ್ತಾ ಅವರು, “ಹಮಾಸ್ ದಾಳಿಯ ವ್ಯಾಪ್ತಿ ಎಷ್ಟು ಗಂಭೀರವಾಗಿತ್ತು ಎಂಬುದನ್ನು ನಾವು ತಕ್ಷಣ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಿಲ್ಲ; ಅದೇ ರೀತಿ, IDFನ ಪ್ರತಿಕ್ರಿಯೆಯಿಂದ ಮುಂದೆ ಏನಾಗಲಿದೆ ಎಂಬುದನ್ನೂ ನಾವು ಊಹಿಸಿರಲಿಲ್ಲ,” ಎಂದು ವಿವರಿಸಿದ್ದರು.
“ಹಿಂದೆ ಅನೇಕ ಬಾರಿ ನಡೆದಂತೆ ಮತ್ತೊಂದು ಪ್ರತೀಕಾರದ ದಾಳಿ ನಡೆಯಬಹುದು ಎಂದು ನಾವು ಭಾವಿಸಿದ್ದೆವು. ಆದರೆ ಈ ಬಾರಿ ನಮಗೆ ತಿಳಿದಿದ್ದ ಎಲ್ಲ ನಿಯಮಗಳು ಮತ್ತು ಊಹೆಗಳು ಸಂಪೂರ್ಣವಾಗಿ ಕುಸಿದುಬಿದ್ದವು,” ಎಂದು ಅವರು ಹೇಳಿದರು.
‘ಶಾಂತಿ ಮಂಡಳಿ’ ಕುರಿತು ಅನುಮಾನಗಳು
ಟ್ರಂಪ್ ಆಡಳಿತದ ಶಾಂತಿ ಮಂಡಳಿ ಯೋಜನೆ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಧಾನ ಗುರುಗಳಾದ ಪಿಜ್ಜಾಬಲ್ಲಾ, ಇಂತಹ ಯಾವುದೇ ಉಪಕ್ರಮದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.
ಅವರು, ಈ ಯೋಜನೆ ಮುಖ್ಯವಾಗಿ ಮಹಾಶಕ್ತಿಗಳ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ರೂಪುಗೊಂಡಂತೆ ಕಾಣಿಸುತ್ತಿದೆ ಎಂದು ಹೇಳಿದ್ದರು. ಇದರಲ್ಲಿ ಪ್ಯಾಲೆಸ್ತೀನಿಯ ಜನರ ಅಸ್ತಿತ್ವ, ಅವರ ಹಕ್ಕುಗಳು ಹಾಗೂ ನ್ಯಾಯಸಮ್ಮತ ಹಕ್ಕುಗಳ ಬಗ್ಗೆ ನಿಜವಾದ ಮಾನ್ಯತೆ ಇಲ್ಲದಿರುವುದು ಆತಂಕಕಾರಿ ಎಂದು ಅವರು ಅಭಿಪ್ರಾಯಪಟ್ಟಿದ್ದರು. ಪ್ಯಾಲೆಸ್ತೀನಿಯ ಜನರ ಧ್ವನಿ, ನೋವು ಮತ್ತು ಹಕ್ಕುಗಳನ್ನು ಗೌರವಿಸದ ಯಾವುದೇ ಶಾಂತಿ ಉಪಕ್ರಮ ನಿಜವಾದ ಶಾಂತಿಗೆ ದಾರಿ ಮಾಡಿಕೊಡುವುದಿಲ್ಲ ಎಂದು ಪ್ರಧಾನ ಗುರು ಸ್ಪಷ್ಟಪಡಿಸಿದರು.
ಸ್ಪಷ್ಟ ಕಾರ್ಯಗಳ ಅಗತ್ಯ
ಶಾಂತಿ ಮತ್ತು ಸಮನ್ವಯವು ಸುಂದರ ಕಲ್ಪನೆಗಳಾಗಿದ್ದರೂ, ಅವು ಸ್ಪಷ್ಟ ಕಾರ್ಯಗಳು, ಅರ್ಥಪೂರ್ಣ ಸಂಕೇತಗಳು ಹಾಗೂ ನಂಬಿಕೆಯನ್ನು ಪುನರ್‌ನಿರ್ಮಿಸುವ ಸಾಧ್ಯತೆಯನ್ನು ದೃಶ್ಯವಾಗಿ ತೋರಿಸುವ ಸಾಕ್ಷ್ಯಗಳೊಂದಿಗೆ ಜೊತೆಯಾಗದಿದ್ದರೆ ಕೇವಲ ಘೋಷಣೆಗಳಾಗಿ ಉಳಿಯುವ ಅಪಾಯವಿದೆ ಎಂದು ಪ್ರಧಾನ ಗುರು ಪಿಜ್ಜಾಬಲ್ಲಾ ಹೇಳುತ್ತಾರೆ.
ಇದು ಸುಲಭವಾಗುವುದಿಲ್ಲ, ಸ್ವಯಂಚಾಲಿತವಾಗಿಯೂ ನಡೆಯುವುದಿಲ್ಲ, ಆದಾಗ್ಯೂ, ಮೊದಲು ಜನರು ಪರಸ್ಪರ ಭೇಟಿಯಾಗುವ ಅವಕಾಶಗಳನ್ನು, ಜೊತೆಗೆ ಕ್ರಮೇಣವಾಗಿ ಹೊಸ ರೀತಿಯಲ್ಲಿ ಯೋಚಿಸಲು ನೆರವಾಗುವ ಸಾಂಸ್ಕೃತಿಕ ಮತ್ತು ಸಾಮಾಜಿಕ ವಾತಾವರಣಗಳನ್ನು ನಿರ್ಮಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳುತ್ತಾರೆ. “ಕೇವಲ ಮಾತುಗಳು ಸಾಕಾಗುವುದಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.
ಇದಕ್ಕಾಗಿ ರಾಜಕೀಯ ನಾಯಕತ್ವ ಮಾತ್ರವಲ್ಲ, ಧಾರ್ಮಿಕ ನಾಯಕತ್ವವೂ ಅಗತ್ಯ .ಶಾಂತಿ ಕೋಪ ಮತ್ತು ಪ್ರತೀಕಾರದ ಮೇಲೆ ಅಲ್ಲ, ದೂರದೃಷ್ಟಿಯ ಮೇಲೆ ಆಧಾರಿತವಾಗಿರಬೇಕು ಎಂದು ಅವರು ಹೇಳುತ್ತಾರೆ. ಇದು ದೀರ್ಘಕಾಲದ ಪ್ರಕ್ರಿಯೆ ಎಂದು ವಿವರಿಸುವ ಅವರು, ಈ ಮಧ್ಯೆ ಕ್ರೈಸ್ತ ಸಮುದಾಯವು ದೃಢವಾಗಿ ನಿಂತಿರಬೇಕು ಎಂದು ಒತ್ತಿಹೇಳುತ್ತಾರೆ. “ನಾವು ಕಥನವನ್ನು ಅತಿರೇಕಿಗಳಿಗಾಗಲಿ,ಹಮಾಸಿಗಾಗಲಿ, ವಸಾಹತುಗಾರರಾಗಲಿ ಬಿಟ್ಟುಬಿಡಲು ಸಾಧ್ಯವಿಲ್ಲ,” ಎಂದು ಅವರು ಎಚ್ಚರಿಸುತ್ತಾರೆ. ಕ್ರೈಸ್ತರಿಗೆ ಈ ಹಂತದಲ್ಲಿ ಅತ್ಯಂತ ಮುಖ್ಯವಾದುದು, ತಮ್ಮ ಗುರುತಿಗೆ ನಿಷ್ಠರಾಗಿದ್ದು ಅಲ್ಲಿಯೇ ಉಳಿಯುವುದು ಎಂದು ಅವರು ಹೇಳುತ್ತಾರೆ.
ಪವಿತ್ರ ಭೂಮಿ ನಮಗೆ , ಅಲ್ಪಸಂಖ್ಯಾತರಾಗಿರುವುದು ದುರಂತವಲ್ಲ—ಒಬ್ಬರಿಗೆ ಹಂಚಿಕೊಳ್ಳಲು ಸುಂದರವಾದ ಸತ್ಯವಿದ್ದರೆ ಸಾಕು ಎಂಬುದನ್ನು ಕಲಿಸುತ್ತದೆ ಎಂದು ಅವರು ನೆನಪಿಸುತ್ತಾರೆ.
“ಈ ಕ್ಷಣದಲ್ಲಿ ನಂಬಿಕೆ ನಮಗೆ ಏನು ಹೇಳುತ್ತಿದೆ ಎಂಬುದನ್ನು ಕೇಳಿ ಅರಿಯಬೇಕು; ನನ್ನ ಜೀವನ ದೇವರದು, ಕ್ರಿಸ್ತನದು—ಆದ್ದರಿಂದ ಗಾಜಾದಲ್ಲಿ ಬಂಧಿತರಾಗಿದ್ದವರ ಬದಲಾಗಿ ನನ್ನನ್ನೇ ಒಪ್ಪಿಸಿಕೊಳ್ಳುವಿರಾ ಎಂದು ಕೇಳಿದಾಗ ‘ಹೌದು’ ಎಂದು ಹೇಳುವುದು ನನಗೆ ಸಹಜವಾಗಿದೆ,” ಎಂದು ಅವರು ಹೇಳುತ್ತಾರೆ.
ಸಂತ ಫ್ರಾನ್ಸಿಸ್ ಹೇಗೆ ಕ್ರಿಸ್ತನ ಪ್ರೇರಣೆಯಿಂದ ಎಲ್ಲರಿಗೂ ಸಂಕೇತವಾಗಿದ್ದರೋ, ಹಾಗೆಯೇ ಕ್ರೈಸ್ತರು ಏಕತೆಯ ಸಂಕೇತವಾಗಬಹುದು ಎಂದು ಕಾರ್ಡಿನಲ್ ಪಿಜ್ಜಾಬಲ್ಲಾ ಒತ್ತಿಹೇಳುತ್ತಾರೆ. ಅವರ ಸಾಕ್ಷ್ಯ ಶತಮಾನಗಳನ್ನು ದಾಟಿ ಇಂದಿಗೂ ನಮ್ಮೊಂದಿಗೆ ಮಾತನಾಡುತ್ತಿದೆ ಎಂದು ಅವರು ನೆನಪಿಸಿದರು.
ಯುದ್ಧದ ವೇಳೆ ಗಾಜಾಗೆ ನಾಲ್ಕು ಭೇಟಿ
ಸಂತ ಬೊನವೆಂಚರ್ ಪ್ರಾಂತ್ಯದ ವಿಕಾರ್ ಫಾದರ್ ಪಾವ್ಲೊ ಮೈಯೆಲ್ಲೊ ಹಾಗೂ ಸಂತ ಫ್ರಾನ್ಸಿಸ್ ಅವರ ಮರಣದ 800ನೇ ವಾರ್ಷಿಕೋತ್ಸವ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಕವಿ ದಾವಿದೇ ರೊಂಡೋನಿ ಅವರ ಆರಂಭಿಕ ಸ್ವಾಗತಗಳ ನಂತರ, ಪ್ರಧಾನ ಗುರುಗಳಾದ ಪಿಜ್ಜಾಬಲ್ಲಾ ಅವರು ಯುದ್ಧದ ಸಮಯದಲ್ಲಿ ಗಾಜಾ ಪಟ್ಟಿಗೆ ಮಾಡಿದ ತಮ್ಮ ನಾಲ್ಕು ಭೇಟಿಗಳ ಅನುಭವವನ್ನು ಹಂಚಿಕೊಂಡಿದ್ದಾರೆ.
2024ರ ಮೇ ತಿಂಗಳ ಮೊದಲ ಭೇಟಿಯು ಆಘಾತಕಾರಿಯಾಗಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ. “ನಾನು ಮೊದಲು ತಿಳಿದಿದ್ದ ಸ್ಥಳಗಳನ್ನು ಗುರುತಿಸಲಾಗದಷ್ಟು ನಾಶವಾಗಿದ್ದವು; ಜನರ ಕಣ್ಣುಗಳಲ್ಲಿ ಭಯ ಸ್ಪಷ್ಟವಾಗಿ ಕಾಣಿಸುತ್ತಿತ್ತು, ಮಕ್ಕಳ ಭಾವನೆಗಳು ಮನಸ್ಸನ್ನು ಕಲಕಿದವು,” ಎಂದು ಹೇಳಿದರು.
ಅದೇ ವರ್ಷದ ಕ್ರಿಸ್ಮಸ್‌ಗಿಂತ ಸ್ವಲ್ಪ ಮುಂಚಿನ ಎರಡನೇ ಭೇಟಿಯಲ್ಲಿ, ಜನರಲ್ಲಿದ್ದ ದಣಿವು ಸ್ಪಷ್ಟವಾಗಿತ್ತು ಎಂದು ಪ್ರಧಾನ ಗುರುಗಳು ವಿವರಿಸಿದ್ದಾರೆ. “ಸಾಮಾನ್ಯ ಗೊಂದಲ, ತೀವ್ರ ಹಸಿವು, ಹೆಚ್ಚುತ್ತಿರುವ ಧ್ವಂಸ ಹಾಗೂ ಕಾರ್ಯನಿರತವಲ್ಲದ ಆಸ್ಪತ್ರೆಗಳು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರವಾಗಿಸಿತ್ತು.” 2025ರ ಜುಲೈ ಭೇಟಿಯನ್ನು ಅವರು “ಅತ್ಯಂತ ಕಠಿಣ ಕ್ಷಣ” ಎಂದು ವರ್ಣಿಸಿದ್ದಾರೆ. ಪವಿತ್ರ ಕುಟುಂಬ ದೇವಾಲಯದಲ್ಲಿ ಮೂವರ ಹತ್ಯೆಯ ನಂತರ ಮತ್ತು ಇಸ್ರಾಯೇಲ್ ಸೇನೆಯು ಗಾಜಾ ನಗರಿಯ ಮೇಲೆ ದಾಳಿ ಸಿದ್ಧಪಡಿಸುತ್ತಿದ್ದ ವೇಳೆಯಲ್ಲಿ ತಾವು ಒಳಗೆ ಪ್ರವೇಶಿಸಿದ್ದಾಗಿ ಅವರು ತಿಳಿಸಿ, “ಧ್ವಂಸ ಹಾಗೂ ಸಾವಿನ ವಾಸನೆ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದೆ,” ಎಂದು ಹೇಳಿದರು.
ಕೊನೆಯ ಭೇಟಿ—ಕಳೆದ ಕ್ರಿಸ್ಮಸ್ ಮುಂಚಿತವಾಗಿ—ಬೇರೆಯ ಚಿತ್ರಣ ನೀಡಿತ್ತು ಎಂದು ಪ್ರಧಾನ ಗುರುಗಳು ಹೇಳಿದ್ದಾರೆ. “ಎಲ್ಲದರ ನಡುವೆಯೂ ಜನರ ಮುಖಗಳಲ್ಲಿ ಘನತೆ ಹಾಗೂ ಬದುಕನ್ನು ಮುಂದುವರಿಸುವ ಆಶೆ ಕಾಣಿಸುತ್ತಿತ್ತು.” ಆ ಸಮಯದಲ್ಲಿ ನೆರವು ಆಹಾರದಿಂದ ಔಷಧಗಳತ್ತ, ವಿಶೇಷವಾಗಿ ರೋಗನಿರೋಧಕಗಳತ್ತ ತಿರುಗಿರುವುದನ್ನು ಅವರು ಗಮನಿಸಿದ್ದಾರೆ, ಇದರಿಂದ ಆಸ್ಪತ್ರೆಗಳು ರೋಗಿಗಳನ್ನು ಚಿಕಿತ್ಸೆ ನೀಡಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.
ಪವಿತ್ರ ಭೂಮಿಯಲ್ಲಿ ಕ್ರೈಸ್ತರ ಪರಿಸ್ಥಿತಿ
ಪವಿತ್ರ ಭೂಮಿಯಲ್ಲಿ ಕ್ರೈಸ್ತರು ಎದುರಿಸುತ್ತಿರುವ ಕಷ್ಟಗಳು ಗಂಭೀರವಾಗಿವೆ ಎಂದು ಜೆರುಸಲೇಮಿನ ಲ್ಯಾಟಿನ್ ಪ್ರಧಾನ ಧರ್ಮಾಧ್ಯಕ್ಷರಾದ ಪ್ರಧಾನ ಗುರು ಪಿಜ್ಜಾಬಲ್ಲಾ ಹೇಳಿದರು. 1990ರಲ್ಲಿ ತಾವು ಅಧಿಕಾರ ಸ್ವೀಕರಿಸಿದ ಬಳಿಕ ಕ್ರೈಸ್ತರ ಹಾಜರಾತಿ ಗಮನಾರ್ಹವಾಗಿ ಕುಸಿದಿದೆ ಎಂದು ಅವರು ತಿಳಿಸಿದರು. ಯುದ್ಧ ಆರಂಭವಾದ ನಂತರವೇ ಕನಿಷ್ಠ ನೂರು ಕುಟುಂಬಗಳು ಬೆತ್ಲೆಹೇಮನ್ನು ತೊರೆದಿವೆ ಎಂದು ಅವರು ವಿವರಿಸಿದರು.
“ದುರದೃಷ್ಟವಶಾತ್, ಸಮೀಪದ ಭವಿಷ್ಯದಲ್ಲಿಯೇ ಪರಿಸ್ಥಿತಿ ಬದಲಾಗುತ್ತದೆ ಎಂಬ ವಿಶ್ವಾಸವನ್ನು ಅನೇಕರು ಕಳೆದುಕೊಂಡಿದ್ದಾರೆ,” ಎಂದು ಅವರು ವ್ಯಕ್ತಪಡಿಸಿದರು. ಎಲ್ಲರೂ ಇಲ್ಲಿ ಉಳಿಯುವಂತೆ ಧರ್ಮಸಭೆ ಪ್ರಯತ್ನಿಸುತ್ತಿದೆ ಎಂದು ಅವರು ತಿಳಿಸಿದರು, ಆದರೆ ಹೊರಡುವ ನಿರ್ಧಾರ ತೆಗೆದುಕೊಂಡವರನ್ನು ತೀರ್ಪು ನೀಡಲಾಗುವುದಿಲ್ಲ ಎಂದು ಅವರು ವಿವರಿಸಿದರು. “ಇಲ್ಲಿ ಉಳಿಯಲು ಅಪಾರ ಧೈರ್ಯ ಅಗತ್ಯವಾಗಿದೆ,” ಎಂದು ಅವರು ಹೇಳಿದರು.
ಪವಿತ್ರ ಕುಟುಂಬ ದೇವಾಲಯದಲ್ಲಿ ಜನರು ಅತೀವ ಸಂಕಟ ಅನುಭವಿಸಿದ್ದಾರೆ ಎಂದು ಪೂಜ್ಯರು ವಿವರಿಸಿ, ಅಲ್ಲಿ ಆಹಾರ, ನೀರು ಮತ್ತು ಔಷಧಗಳ ಕೊರತೆ ಮಾತ್ರವಲ್ಲದೆ, ಕಾಳಜಿ, ಅನುಕಂಪ ಹಾಗೂ ಮಾನವೀಯ ಸಮೀಪತೆಯ ತೀವ್ರ ಅಗತ್ಯವೂ ಉಂಟಾಗಿದೆ ಎಂದು ಅವರು ವ್ಯಕ್ತಪಡಿಸಿದರು. ಈ ಅಗತ್ಯವನ್ನು ಜನರು ಪೂಜ್ಯ ಜಗದ್ಗುರುಗಳು ಮತ್ತು ಸಂಪೂರ್ಣ ಧರ್ಮಸಭೆಯ ಸಹಾಯದಿಂದ ಈ ಅಗತ್ಯಗಳು ಸಂಧಿಸಲ್ಪಡುತ್ತಿವೆ ಎಂದು ಅವರು ತಿಳಿಸಿದರು.
ಇದೇ ವೇಳೆ, ಪಶ್ಚಿಮ ದಂಡೆಯ ಪರಿಸ್ಥಿತಿಯೂ ಗಂಭೀರವಾಗಿಯೇ ಮುಂದುವರಿದಿದೆ ಎಂದು ಅವರು ವಿವರಿಸಿದರು. ಇಸ್ರಾಯೇಲಿ ವಸಾಹತುಗಾರರಿಂದ ನಿರಂತರ ಒತ್ತಡ ಮುಂದುವರಿದಿದೆ. ಏಕೈಕ ಕ್ರೈಸ್ತ ಹಳ್ಳಿಯಾದ ತೈಬೆಹ್‌ನಲ್ಲಿ ಕೆಲವೇ ದಿನಗಳ ಹಿಂದೆ ಮತ್ತೊಂದು ದಾಳಿ ನಡೆದಿದೆ ಎಂದು ಅವರು ತಿಳಿಸಿದರು. ಪ್ಯಾಲೆಸ್ತೀನಿಯರ ವಿರುದ್ಧ—ಮುಸ್ಲಿಮರು ಮತ್ತು ಕ್ರೈಸ್ತರು—ಕೆಲಸ ನಿರಾಕರಣೆ, ಭೂಮಿ ಕಬಳಿಕೆ, ಸಶಸ್ತ್ರ ದಾಳಿಗಳು, ವಿಧ್ವಂಸಕ ಕೃತ್ಯಗಳು ಹಾಗೂ ಮನೆಗಳ ಧ್ವಂಸ ಅಥವಾ ವಶಪಡಿಸಿಕೊಳ್ಳುವ ಘಟನೆಗಳು ನಡೆಯುತ್ತಲೇ ಇವೆ ಎಂದು ಅವರು ವಿವರಿಸಿದರು.
ಜೆರುಸಲೇಮಿನಲ್ಲಿರುವ 13 ಕ್ರೈಸ್ತ ಶಾಲೆಗಳು ನಿರಂತರ ಆಡಳಿತಾತ್ಮಕ ಅಡಚಣೆಗಳನ್ನು ಎದುರಿಸುತ್ತಿವೆ. ವಿಶೇಷವಾಗಿ ಬೆತ್ಲೆಹೇಮಿನಿಂದ ಬರುವ ಶಿಕ್ಷಕರಿಗೆ ಅನುಮತಿ ಪಡೆಯುವಲ್ಲಿ ತೊಂದರೆ ಮುಂದುವರಿದಿದೆ ಎಂದು ಅವರು ತಿಳಿಸಿದರು. “ಮೂಲಭೂತ ಹಕ್ಕುಗಳಿಗಾಗಿ ಪ್ರತಿದಿನ ಹೋರಾಡಬೇಕಾದ ಸ್ಥಿತಿ ದಣಿವಿನಾಯಕವಾಗಿದೆ—ಈ ಹಕ್ಕುಗಳು ಸಹಜವಾಗಿಯೇ ಖಚಿತವಾಗಿರಬೇಕಾಗಿತ್ತು,” ಎಂದು ಅವರು ಹೇಳಿದರು.
ಎರಡು-ರಾಜ್ಯ ಪರಿಹಾರ
ಪ್ರಸ್ತುತ ಪರಿಸ್ಥಿತಿಯಲ್ಲಿ ಎರಡು-ರಾಜ್ಯ ಪರಿಹಾರವನ್ನು ಕಲ್ಪಿಸುವುದೂ, ಜಾರಿಗೆ ತರುವುದೂ ಅತ್ಯಂತ ಸಂಕೀರ್ಣವಾಗಿದೆ ಎಂದು ಪ್ರಧಾನ ಗುರು ಪಿಜ್ಜಾಬಲ್ಲಾ ಹೆಳಿದರು, ಆದರೂ “ಇದು ಕಡೆಗಣಿಸಲಾಗದ, ನಿರಂತರವಾಗಿ ಕೆಲಸ ಮಾಡಬೇಕಾದ ಗುರಿ” ಎಂದು ಅವರು ವಿವರಿಸಿದರು.
ಪ್ಯಾಲೆಸ್ತೀನಿಯರು ತಮ್ಮನ್ನು ಒಂದು ಜನಾಂಗವಾಗಿ ಗುರುತಿಸಿಕೊಳ್ಳುವ ಹಕ್ಕು ಹೊಂದಿದ್ದಾರೆ ಮತ್ತು ತಮ್ಮದೇ ರಾಜ್ಯವನ್ನು ಹೊಂದುವ ಹಕ್ಕು ಅವರಿಗಿದೆ ಎಂದು ಅವರು ವ್ಯಕ್ತಪಡಿಸಿದರು. ಈ ಸಾಧ್ಯತೆಯನ್ನು ಒಪ್ಪಿಕೊಳ್ಳುವುದೇ ನ್ಯಾಯದ ಕೃತ್ಯವಾಗಿದೆ ಎಂದು ಅವರು ತಿಳಿಸಿದರು, ಏಕೆಂದರೆ ಅದು ಪ್ಯಾಲೆಸ್ತೀನಿಯರಿಗೆ ತಮ್ಮದೇ ಮನೆಯ ಕನಸನ್ನು ಜೀವಂತವಾಗಿಟ್ಟುಕೊಳ್ಳಲು ನೆರವಾಗುತ್ತದೆ ಎಂದು ಅವರು ವಿವರಿಸಿದರು.
ಯಾತ್ರಿಕರಿಗೆ ಮನವಿ
ಕೊನೆಗೆ, ಪ್ರಧಾನ ಗುರು ಪಿಜ್ಜಾಬಲ್ಲಾ ಯಾತ್ರಿಕರು ಮತ್ತೆ ಪವಿತ್ರ ಭೂಮಿಗೆ ಮರಳಬೇಕೆಂದು ಮನವಿ ಮಾಡಿದ್ದಾರೆ. “ಈಗ ಮರಳುವ ಸಮಯ ಬಂದಿದೆ; ತುರ್ತುಸ್ಥಿತಿಗಳ ಕಾಲ ಮುಗಿದಿದೆ, ಇದು ಧೈರ್ಯ ತೋರಿಸಬೇಕಾದ ಸಮಯ ಬೆತ್ಲೆಹೇಮ್ ಮತ್ತು ಜೆರುಸಲೇಮ್ ಸುರಕ್ಷಿತವಾಗಿವೆ, ಆದ್ದರಿಂದ ಯಾತ್ರಿಕರು ಬರುವುದನ್ನು ಮುಂದುವರಿಸಬೇಕು ಎಂದು ಅವರು ತಿಳಿಸಿದರು. ಧರ್ಮಸಭೆ ಹಾಗೂ ಕ್ರೈಸ್ತ ಸಮುದಾಯವು ಅಲ್ಲಿ ದೈಹಿಕವಾಗಿ ಹಾಜರಿರಬೇಕು ಎಂಬುದನ್ನು ಲೋಕಕ್ಕೆ ತೋರಿಸುವ ಅಗತ್ಯವಿದೆ” ಎಂದು ಅವರು ಆಹ್ವಾನಿಸಿದರು.
ಇದಲ್ಲದೆ, ಇದು ಪ್ಯಾಲೆಸ್ತೀನಿಯರು ಮತ್ತು ಇಸ್ರಾಯೇಲರಿಗೆ ಸಮಾನವಾಗಿ ನೀಡುವ ಸಂದೇಶವೂ ಆಗಿದೆ ಎಂದು ಅವರು ವ್ಯಕ್ತಪಡಿಸಿದರು. “ನಾವು ಕೂಡ ಈ ಭೂಮಿಯಲ್ಲಿ ಇದ್ದೇವೆ; ನಮ್ಮ ಬೇರುಗಳು ಇಲ್ಲೇ ಇವೆ” ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ ಎಂದು ಅವರು ತಿಳಿಸಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).