ಹುಡುಕಿ

2010.01.03 Sacra Sindone 2010.01.03 Sacra Sindone 

ಟ್ಯೂರಿನ್‌ನ ಪವಿತ್ರ ವಸ್ತ್ರ: ಮಧ್ಯಯುಗದ ಬಾಸ್-ರಿಲೀಫ್ ಸಿದ್ಧಾಂತಕ್ಕೆ ವೈಜ್ಞಾನಿಕ ಸವಾಲು

ಟ್ಯೂರಿನ್‌ನ ಪವಿತ್ರ ವಸ್ತ್ರದ ಮೂಲದ ಕುರಿತು ಬ್ರೆಜಿಲ್ ಸಂಶೋಧಕ ಮೊರೇಸ್ ಮಂಡಿಸಿದ್ದ ಮಧ್ಯಯುಗದ ಬಾಸ್-ರಿಲೀಫ್ (ತಗ್ಗು-ಉಬ್ಬು ಶಿಲ್ಪ) ಸಿದ್ಧಾಂತವನ್ನು ಈ ಹಿಂದೆ ಪ್ರಕಟಿಸಿದ್ದ Archaeometry (ಆರ್ಕಿಯೊಮೆಟ್ರಿ) ಜರ್ನಲ್ ಈಗ ಪ್ರಮುಖ ತಜ್ಞರಾದ ಕಾಸಾಬಿಯಾಂಕಾ, ಮರಿನೆಲ್ಲಿ ಮತ್ತು ಪಿಯಾನಾ ಅವರ ಪ್ರತಿವಾದವನ್ನು ಪ್ರಕಟಿಸಿದೆ.

ವ್ಯಾಟಿಕನ್ ವರದಿ

ಕಳೆದ ಬೇಸಿಗೆಯಲ್ಲಿ ಪ್ರಕಟವಾದ ವರದಿಗಳಲ್ಲಿ, ಬ್ರೆಜಿಲಿನ ಸಂಶೋಧಕ ಸಿಸೆರೋ ಮೊರೇಸ್ ಅವರು ಟ್ಯೂರಿನ್‌ನ ಪವಿತ್ರ ವಸ್ತ್ರದ ಚಿತ್ರವನ್ನು ಡಿಜಿಟಲ್ ರೀತಿಯಲ್ಲಿ ಪುನರ್‌ರಚಿಸಿ, ಅದು ಮಧ್ಯಯುಗದಲ್ಲಿ ಬಾಸ್-ರಿಲೀಫ್ (ತಗ್ಗು-ಉಬ್ಬು ಶಿಲ್ಪ) ತಂತ್ರದ ಮೂಲಕ ಸೃಷ್ಟಿಸಲ್ಪಟ್ಟಿರಬಹುದೆಂಬ ಊಹೆಯನ್ನು ಮಂಡಿಸಿದ್ದರು. ಇದೀಗ ಆರ್ಕಿಯೊಮೆಟ್ರಿ (Archaeometry) ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನವು, ಮೊರಾಯೆಸ್ ಅವರ ಈ ವಾದವನ್ನು ಹಂತ ಹಂತವಾಗಿ ಪ್ರಶ್ನಿಸಿದೆ.

ಟ್ಯೂರಿನ್‌ನ ಪವಿತ್ರ ವಸ್ತ್ರದ ಮೂವರು ಪ್ರಮುಖ ತಜ್ಞರಾದ ಟ್ರಿಸ್ಟಾನ್ ಕಾಸಾಬಿಯಾಂಕಾ, ಎಮಾನುಯೆಲಾ ಮರಿನೆಲ್ಲಿ ಮತ್ತು ಅಲೆಸ್ಸಾಂಡ್ರೊ ಪಿಯಾನಾ ಅವರು ಈ ಸಂಶೋಧನೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಅವರ ಪ್ರಕಾರ, ಮೊರೇಸ್ ಅವರ ಅಧ್ಯಯನವು ಸ್ಪಷ್ಟವಲ್ಲದ ಉದ್ದೇಶಗಳು, ವಿಧಾನಾತ್ಮಕ ದೋಷಗಳು ಮತ್ತು ತಪ್ಪು ತಾರ್ಕಿಕ ನಿರ್ಣಯಗಳ ಮೇಲೆ ಆಧಾರಿತವಾಗಿದೆ.

ಈ ಟೀಕೆ, ಕಳೆದ ಬೇಸಿಗೆಯಲ್ಲಿ ಟ್ಯೂರಿನ್‌ನ ಧರ್ಮಾಧ್ಯಕ್ಷರೂ ಹಾಗೂ ಪವಿತ್ರ ವಸ್ತ್ರದ ಪಾಲಕರಾದ ಪ್ರಧಾನ ಗುರು ರೊಬೆರ್ಟೊ ರೆಪೋಲೆ ಮತ್ತು ಟ್ಯೂರಿನ್‌ನ ಅಂತಾರಾಷ್ಟ್ರೀಯ ಪವಿತ್ರ ವಸ್ತ್ರ ಅಧ್ಯಯನ ಕೇಂದ್ರ (CISS) ಈಗಾಗಲೇ ವ್ಯಕ್ತಪಡಿಸಿದ್ದ ಸಂದೇಹಗಳನ್ನು ಮತ್ತಷ್ಟು ದೃಢಪಡಿಸಿದೆ.

ಇಲ್ಲಿ ವಿಶೇಷವಾಗಿ ಗಮನಾರ್ಹ ಸಂಗತಿ ಎಂದರೆ, ಈ ಪ್ರತಿವಾದವು ಮೊರೇಸ್ ಅವರ ಮೂಲ ಲೇಖನ ಪ್ರಕಟವಾದ ಅದೇ ಆರ್ಕಿಯೊಮೆಟ್ರಿ (Archaeometry) ಶೈಕ್ಷಣಿಕ ಜರ್ನಲ್‌ನಲ್ಲೇ ಪ್ರಕಟಗೊಂಡಿರುವುದು. ಇದು ಅವರ ಟೀಕೆಗೆ ಹೆಚ್ಚುವರಿ ಶೈಕ್ಷಣಿಕ ಮಹತ್ವ ನೀಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಚರ್ಚೆಯಲ್ಲಿರುವ ವಿಷಯ

ಟ್ಯೂರಿನ್‌ನ ಪವಿತ್ರ ವಸ್ತ್ರದ ನೈಜತೆ ಕುರಿತ ಚರ್ಚೆ 1898ರಲ್ಲಿ ಛಾಯಾಗ್ರಾಹಕ ಸೆಕೊಂಡೊ ಪಿಯಾ ಮೊದಲ ಛಾಯಾಚಿತ್ರ ತೆಗೆದಂದಿನಿಂದಲೇ ಸಕ್ರಿಯವಾಗಿದೆ. ಇಂದಿಗೂ ಈ ವಿವಾದ ಮುಖ್ಯವಾಗಿ ಅಂತರರಾಷ್ಟ್ರೀಯ ಶೈಕ್ಷಣಿಕ ಜರ್ನಲ್‌ಗಳಲ್ಲಿ ಮುಂದುವರಿಯುತ್ತಿದೆ. 2019ರಲ್ಲಿ, 1989ರಲ್ಲಿ ನೇಚರ್ ಜರ್ನಲ್‌ನಲ್ಲಿ ಪ್ರಕಟವಾದ ಪ್ರಸಿದ್ಧ ಕಾರ್ಬನ್-14 ಕಾಲನಿರ್ಣಯ (ಕ್ರಿ.ಶ. 1260–1390) ಅಧ್ಯಯನವನ್ನು, ಮೂಲ ದತ್ತಾಂಶದ ಹೊಸ ವಿಶ್ಲೇಷಣೆ ಪ್ರಶ್ನಿಸಿತ್ತು; ಇದು ಮೂಲ ಪರೀಕ್ಷೆಯಲ್ಲಿ ಭಾಗವಹಿಸಿದ್ದ ಆಕ್ಸ್‌ಫರ್ಡ್ ಪ್ರಯೋಗಾಲಯಕ್ಕೆ ಸಂಬಂಧಿಸಿದ ಆರ್ಕಿಯೊಮೆಟ್ರಿ (Archaeometry) ಜರ್ನಲ್‌ನಲ್ಲೇ ಪ್ರಕಟವಾಗಿತ್ತು.

ಕಳೆದ ಬೇಸಿಗೆಯಲ್ಲಿ, ಇದೇ ಜರ್ನಲ್‌ನಲ್ಲಿ ಬ್ರೆಜಿಲಿನ ಸಂಶೋಧಕ ಸಿಸೆರೋ ಮೊರೇಸ್ ಮಧ್ಯಯುಗದ ನಕಲಿ ಸಿದ್ಧಾಂತವನ್ನು ಬೆಂಬಲಿಸುವ ಲೇಖನವನ್ನು ಪ್ರಕಟಿಸಿದ್ದರು. ಅವರ ಪ್ರಕಾರ, ಬಾಸ್-ರಿಲೀಫ್ ತಂತ್ರವು ಉಂಟುಮಾಡುವ ಸಂಪರ್ಕದ ಮಾದರಿ, ಮಾನವ ದೇಹದ ಘನಾಕಾರಕ್ಕಿಂತ ಪವಿತ್ರ ವಸ್ತ್ರದಲ್ಲಿ ಕಾಣುವ ರೂಪರೇಖೆಗಳಿಗೆ ಹೆಚ್ಚು ಹೊಂದಿಕೆಯಾಗುತ್ತದೆ; ಇದರಿಂದ ಅವರು ಮಧ್ಯಯುಗದ ಕಲಾತ್ಮಕ ಮೂಲದ ಪರವಾದ ವಾದವನ್ನು ಮಂಡಿಸಿದ್ದರು. ಆದಾಗ್ಯೂ, ಪ್ರಕಟಣೆಯ ಕ್ಷಣದಿಂದಲೇ ಅವರ ಲೇಖನವು ತಜ್ಞರಲ್ಲಿ ಅನೇಕ ಸಂದೇಹಗಳನ್ನು ಹುಟ್ಟುಹಾಕಿತ್ತು. ಪ್ರಧಾನ ಗುರು ರೊಬೆರ್ಟೊ ರೆಪೋಲೆ ತಮ್ಮ ಹೇಳಿಕೆಯಲ್ಲಿ, “ಕೆಲವು ತೀರ್ಮಾನಗಳ ಮೇಲ್ಮೈಯುತ ಸ್ವಭಾವದ ಬಗ್ಗೆ ಆತಂಕವಿದೆ; ಅವು ಸಮೀಪದ ಪರಿಶೀಲನೆಗೆ ತಕ್ಕಷ್ಟು ಬಲವಾಗಿಲ್ಲ” ಎಂದು ಟೀಕಿಸಿದ್ದರು.

ಮೊರೇಸ್ ಅವರ ವಿಶ್ಲೇಷಣೆಯ ದೋಷಗಳು

ಮಾಧ್ಯಮಗಳ ಗಮನ ಶಮನವಾದ ಬಳಿಕ, ಆರ್ಕಿಯೊಮೆಟ್ರಿ (Archaeometry)ಯಲ್ಲಿ ಟ್ರಿಸ್ಟಾನ್ ಕಸಾಬಿಯಾಂಕಾ, ಎಮಾನುಯೆಲಾ ಮರಿನೆಲ್ಲಿ ಮತ್ತು ಅಲೆಸ್ಸಾಂಡ್ರೋ ಪಿಯಾನಾ ಪ್ರಕಟಿಸಿದ ಟಿಪ್ಪಣಿ, ಮೊದಲು ವ್ಯಕ್ತವಾದ ಟೀಕೆಗಳ ತರ್ಕಸಮ್ಮತಿಯನ್ನು ಸಂಪೂರ್ಣವಾಗಿ ದೃಢಪಡಿಸಿದೆ. ಮೊರಾಯೆಸ್ ಅವರ ವಿಶ್ಲೇಷಣೆಯಲ್ಲಿ ಹಲವು ದೋಷಗಳಿವೆ ಎಂದು ಲೇಖಕರು ಸೂಚಿಸಿದ್ದಾರೆ: ಅವರ ಮಾದರಿ ಅಂಗರಚನಾ ಶಾಸ್ತ್ರದ ದೃಷ್ಟಿಕೋನದಿಂದ ಕೊರತೆಯಿರುವ ಮಾದರಿಯಾಗಿದೆ  ಏಕೆಂದರೆ ಅದು ಕೇವಲ ಮುಂಭಾಗದ ಚಿತ್ರವನ್ನು ಮಾತ್ರ ಪುನರುತ್ಪಾದಿಸಿದೆ, ಪಾದಗಳು ಹಾಗೂ ಕೈಗಳಲ್ಲಿ ಬಲ–ಎಡವನ್ನು ತಪ್ಪಾಗಿ ತೋರಿಸಿದೆ ಮತ್ತು ಒಪ್ಪಿಗೆಯಲ್ಲಿರುವ 173–177 ಸೆಂ.ಮೀ. ಎತ್ತರವನ್ನು ಮೀರಿ ಸ್ವೇಚ್ಛೆಯಿಂದ 180 ಸೆಂ.ಮೀ. ಆಯ್ಕೆಮಾಡಿದೆ. ಜೊತೆಗೆ, ನಿಖರ ಅಳತೆಗಳನ್ನು ನೀಡದೆ ಅಸ್ಪಷ್ಟ ಪದಗಳನ್ನು ಬಳಸಿಕೊಂಡು “ಸಾಮ್ಯ”ವನ್ನು ಪ್ರತಿಪಾದಿಸಲಾಗಿದೆ ಮತ್ತು ಇತ್ತೀಚಿನ ಛಾಯಾಚಿತ್ರಗಳು ಲಭ್ಯವಿದ್ದರೂ 1931ರ ಒಂದೇ ಚಿತ್ರವನ್ನು ಮಾತ್ರ ಬಳಸಲಾಗಿದೆ. ಅದೂ ಅಲ್ಲದೆ, ಮಾದರಿಯನ್ನು ಲೆನಿನ್ ಬಟ್ಟೆಯ ಮೇಲಲ್ಲದೆ, ಹತ್ತಿಯ ಮೇಲೆ ಅನುಕರಿಸಲಾಗಿದೆ.

ಇನ್ನೂ ಗಂಭೀರವಾಗಿ, ಮೊರೇಸ್ ಅವರ 3D ಮಾದರಿ ಪವಿತ್ರ ವಸ್ತ್ರದ ಪ್ರಮುಖ ಲಕ್ಷಣಗಳನ್ನು ನಿರ್ಲಕ್ಷಿಸಿದೆ—ಚಿತ್ರದ ಅತಿಸೂಕ್ಷ್ಮ ಆಳ (ಮಿಲ್ಲಿಮೀಟರಿನ ಐದು ಲಕ್ಷಾಂಶದ ಒಂದು ಭಾಗ) ಮತ್ತು ರಕ್ತದ ಅಸ್ತಿತ್ವದ ಅನೇಕ ಸ್ವತಂತ್ರ ದೃಢೀಕರಣಗಳು, ಇವು ಯಾವ ಮಧ್ಯಯುಗೀನ ಕಲಾ ತಂತ್ರಕ್ಕೂ ಹೊಂದಿಕೆಯಾಗುವುದಿಲ್ಲ. ಹೀಗಾಗಿ, ಪವಿತ್ರ ವಸ್ತ್ರದ “ವ್ಯಕ್ತಿಯ” ಶಾರೀರಿಕ ಲಕ್ಷಣಗಳನ್ನು ನಿಷ್ಠೆಯಿಂದ ಪುನರುತ್ಪಾದಿಸದ ಮತ್ತು ಅದರ ಪ್ರಮುಖ ಭೌತ–ರಾಸಾಯನಿಕ ಗುಣಗಳನ್ನು ಕಡೆಗಣಿಸಿದ ಮಾದರಿಯ ನೈಜ ಮೌಲ್ಯವನ್ನು ಲೇಖಕರು ಪ್ರಶ್ನಿಸಿದ್ದಾರೆ.

ಮೊರಾಯೆಸ್ ಅವರ ಅಧ್ಯಯನವು 1980ರ ಆರಂಭದಲ್ಲೇ ಶೈಕ್ಷಣಿಕ ಜರ್ನಲ್‌ಗಳಲ್ಲಿ ಬಾಸ್–ರಿಲೀಫ್ ಊಹೆಯ  ಹಲವಾರು ರೂಪಾಂತರಗಳನ್ನು ಈಗಾಗಲೇ ಪರೀಕ್ಷಿಸಲಾಗಿದೆ ಮತ್ತು ತಿರಸ್ಕರಿಸಲಾಗಿದೆ ಎಂಬ ಅಂಶವನ್ನು ಮೊರೇಸ್ ಅವರ ಅಧ್ಯಯನವು ನಿರ್ಲಕ್ಷಿಸುತ್ತದೆ. ಅದೇ ರೀತಿ, ದೇಹವು ಬಟ್ಟೆಯ ಮೇಲೆ ಉಂಟುಮಾಡುವ ಶಾರೀರಿಕ ವಕ್ರತೆಯ ಪ್ರಶ್ನೆಯನ್ನು 1902ರಲ್ಲೇ ಫ್ರೆಂಚ್ ವಿಜ್ಞಾನಿ ಪಾಲ್ ವಿಗ್ನೊನ್ ಸಮಗ್ರವಾಗಿ ಅಧ್ಯಯನಿಸಿದ್ದನ್ನು ಕೂಡ ಅದು ಪರಿಗಣಿಸಿಲ್ಲ.

ದುರ್ಬಲ ಐತಿಹಾಸಿಕ ಆಧಾರಗಳು

ವಿಮರ್ಶಕರ ಪ್ರಕಾರ, ಮೊರೇಸ್ ಅವರ ಮೂಲ ಅಧ್ಯಯನದ ಐತಿಹಾಸಿಕ ಆಧಾರಗಳು ಕೂಡ ದುರ್ಬಲವಾಗಿ ಕಾಣಿಸುತ್ತವೆ. ಪವಿತ್ರ ವಸ್ತ್ರದ ಮೇಲೆ ಮುಂಭಾಗ ಮತ್ತು ಹಿಂಭಾಗ ಎರಡೂ ಕಾಣುವ, ಶಿಲುಬೆಗೆ ಹಾಕಲ್ಪಟ್ಟ ನಂತರದ ಸ್ಥಿತಿಯಲ್ಲಿರುವ ನಗ್ನ ಕ್ರಿಸ್ತನ ವಿಶಿಷ್ಟ ಚಿತ್ರವನ್ನು ಯಾವುದೇ ಕಲಾವಿದ ಅಥವಾ ನಕಲಿಗನು ಹೇಗೆ ಕಲ್ಪಿಸಿಕೊಳ್ಳಬಹುದಿತ್ತು ಮತ್ತು ವಾಸ್ತವವಾಗಿ ಹೇಗೆ ನಿರ್ಮಿಸಬಹುದಿತ್ತು ಎಂಬುದನ್ನು ವಿವರಿಸಲು, ಅವರು ಪರಸ್ಪರ ಸಂಬಂಧವಿಲ್ಲದ ಕಾಲಘಟ್ಟಗಳು ಮತ್ತು ಸ್ಥಳಗಳನ್ನು ಜೋಡಿಸಬೇಕಾಗಿ ಬಂದಿದೆ ಎಂದು ಅವರು ಸೂಚಿಸಿದ್ದಾರೆ. ಆದರೆ, ಕಸಾಬಿಯಾಂಕಾ, ಮರಿನೆಲ್ಲಿ ಮತ್ತು ಪಿಯಾನಾ ಹೇಳುವಂತೆ, ಇದು “ಸಂಯೋಜನೆಯ ಭ್ರಾಂತಿ”ಗೆ ಸಮಾನವಾಗಿದೆ. ಈ ರೀತಿಯ ವಿವರಣಾ ವಿಧಾನವನ್ನು ಸಾಮಾನ್ಯೀಕರಿಸಿದರೆ, ಅದು ಕಲಾ ಇತಿಹಾಸದ ಮೂಲಾಧಾರಗಳನ್ನೇ ದುರ್ಬಲಗೊಳಿಸುತ್ತದೆ.

ಪವಿತ್ರ ವಸ್ತ್ರದ ಚಿತ್ರ ಪಾರಂಪರಿಕ ಕಲಾ ಚೌಕಟ್ಟಿನಿಂದ ಬಹಳ ದೂರದಲ್ಲಿದೆ ಎಂದು ಅವರು ಒತ್ತಿಹೇಳಿದ್ದಾರೆ. ಮೊರೇಸ್ ಅವಲಂಬಿಸಿದ ಪ್ರಮುಖ ಇತಿಹಾಸಕಾರ ವಿಲಿಯಂ ಎಸ್. ಎ. ಡೇಲ್ ಅವರೂ ಕೂಡ, ಈ ಚಿತ್ರವನ್ನು 14ನೇ ಶತಮಾನದ ಫ್ರಾನ್ಸ್‌ನಲ್ಲಿ ಸೃಷ್ಟಿಸಲಾಗಿರಲಾರದು ಎಂದು ನಂಬಿದ್ದರು; ಬದಲಾಗಿ, ಅದು ಕನಿಷ್ಠ 200 ವರ್ಷಗಳಷ್ಟು ಹಳೆಯದಾಗಿ, ಶಾಂಪೇನ್‌ನಿಂದ ಸುಮಾರು 2,000 ಕಿ.ಮೀ ದೂರದಲ್ಲಿರುವ ಬೈಜಾಂಟೈನ್ ಕಾಲಕ್ಕೆ ಸೇರಿದದ್ದು ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಈ ಟೀಕೆಗಳಿಗೆ ಪ್ರತಿಕ್ರಿಯೆಯಾಗಿ, ಇದೇ ಜರ್ನಲ್‌ನಲ್ಲಿ ಪ್ರಕಟವಾದ ಉತ್ತರದಲ್ಲಿ—ಮೊರೇಸ್ ತಮ್ಮ ತೀರ್ಮಾನಗಳನ್ನು ಕಾಯ್ದುಕೊಂಡಿದ್ದಾರೆ, ಆದರೆ ತಮ್ಮ ಲೇಖನವು “ಕಟ್ಟುನಿಟ್ಟಾದ ವಿಧಾನಾತ್ಮಕ” ದೃಷ್ಟಿಕೋನವನ್ನು ಮಾತ್ರ ಹೊಂದಿದ್ದು, ದೇಹವನ್ನು ಬಟ್ಟೆಯ ಮೇಲೆ ಸಂಯೋಜಿಸಿದಾಗ ಮಾಡಿದಾಗ ಉಂಟಾಗುವ ರೂಪಾತ್ಮಕ ವಕ್ರತೆಯನ್ನು ವಿಶ್ಲೇಷಿಸುವುದರ ಮೇಲೆ ಕೇಂದ್ರೀಕೃತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ಈ ವಿಧಾನಾತ್ಮಕ ವ್ಯಾಪ್ತಿಯನ್ನು ಮೀರಿ, ಅವರು 11ನೇ ಶತಮಾನದಿಂದ 14ನೇ ಶತಮಾನದವರೆಗೆಗಿನ ನಾಲ್ಕು ಕಲಾಕೃತಿಗಳನ್ನು ಉಲ್ಲೇಖಿಸಿದ್ದಾರೆ, ಅವು ಪವಿತ್ರ ವಸ್ತ್ರದ ರಚನೆಗೆ ಪ್ರೇರಣೆಯಾಗಿರಬಹುದೆಂದು ಅವರು ಸೂಚಿಸಿದ್ದಾರೆ. ಆದರೆ, ಅವುಗಳಲ್ಲಿ ಯಾವುದು ಕೂಡ ಶಿಲುಬೆಗೆ ಹಾಕಲ್ಪಟ್ಟ ನಂತರದ ಸ್ಥಿತಿಯಲ್ಲಿರುವ ನಗ್ನ ಕ್ರಿಸ್ತನನ್ನು ಚಿತ್ರಿಸುವುದಿಲ್ಲ; ಹೀಗಾಗಿ, 14ನೇ ಶತಮಾನದ ಮಧ್ಯಭಾಗದಲ್ಲಿ ಫ್ರಾನ್ಸ್‌ನ ಸಣ್ಣ ಹಳ್ಳಿಯಲ್ಲಿ ಈ ಚಿತ್ರ ಹೇಗೆ ಕಾಣಿಸಿಕೊಂಡಿತು ಎಂಬುದನ್ನು ಅವು ವಿವರಿಸುವುದಿಲ್ಲ ಎಂದು ವಿಮರ್ಶಕರು ಹೇಳಿದ್ದಾರೆ.

20ನೇ ಶತಮಾನದ ಆರಂಭದಿಂದಲೇ ಪವಿತ್ರ ವಸ್ತ್ರದ “ಮಾನವ ಚಿತ್ರ” ಅನೇಕ ಪ್ರಶ್ನೆಗಳು ಮತ್ತು ವೈಜ್ಞಾನಿಕ ಅಧ್ಯಯನಗಳಿಗೆ ಕಾರಣವಾಗಿದೆ. ಈ ಇತ್ತೀಚಿನ ಶೈಕ್ಷಣಿಕ ವಿವಾದವು, ಡಿಜಿಟಲ್ ಸಾಧನಗಳು ಜ್ಞಾನವನ್ನು ವಿಸ್ತರಿಸಬಹುದಾದರೂ, ಪವಿತ್ರ ವಸ್ತ್ರದಂತಹ ವಿಶಿಷ್ಟ ವಸ್ತುವಿನ ಮೂಲದ ಬಗ್ಗೆ ನಿರ್ಣಯಗಳನ್ನು ಹೊರಡುವಾಗ ವಿಧಾನಾತ್ಮಕ ಹಾಗೂ ಐತಿಹಾಸಿಕ ಕಟ್ಟುನಿಟ್ಟನ್ನು ಅತ್ಯಂತ ಜಾಗರೂಕತೆಯಿಂದ ಪಾಲಿಸಬೇಕೆಂದು ತೋರಿಸಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

 

10 ಫೆಬ್ರವರಿ 2026, 20:15