ಹುಡುಕಿ

2024.05.20 Images from Talitha Kum 2nd General Assembly 2024.05.20 Images from Talitha Kum 2nd General Assembly 

ಸಂಕಷ್ಟದಿಂದ ಸಾಕ್ಷಿಯಾದ ಮಾರ್ಗ: ಮಾನವ ಕಳ್ಳಸಾಗಣೆಯ ವಿರುದ್ಧ ಬುಕುರು ಕ್ಲೋಡ

ಬುರುಂಡಿಯ ಬುಕುರು ಕ್ಲೋಡ್‌ ಅವರು ತಾವು ಅನುಭವಿಸಿದ ಮಾನವ ಕಳ್ಳಸಾಗಣೆಯ ನೋವಿನ ಕಥೆಯನ್ನು ವ್ಯಾಟಿಕನ್ ಸುದ್ದಿ ಸಂಸ್ಥೆಯ ಜೊತೆ ಹಂಚಿಕೊಂಡಿದ್ದಾರೆ. ಹಿಂದೆ ಕಳ್ಳಸಾಗಣೆಯ ಬಲಿಯಾಗಿದ್ದ ಅವರು, ಇಂದು ತಲಿಥಾ ಕುಮ್ ಜಾಲದೊಂದಿಗೆ ಕೈಜೋಡಿಸಿ, ಈ ಅಪರಾಧದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಇತರರು ಇದೇ ದುರಂತಕ್ಕೆ ಒಳಗಾಗದಂತೆ ತಡೆಯಲು ಕಾರ್ಯನಿರ್ವಹಿಸುತ್ತಿದ್ದಾರೆ.

ಲೇಖಕರು:ಮೋರಿಬ ಕಮಾರ S.J.

ಬುಕುರು ಕ್ಲೋಡ್ ಅವರ ಕಥೆ, ಬುರುಂಡಿಯ ವಿಶ್ವವಿದ್ಯಾಲಯದ ಪದವಿ ಕೈಯಲ್ಲಿ ಬಂದ ಕ್ಷಣದಿಂದಲೇ ಹೊಸ ತಿರುವು ಪಡೆದುಕೊಂಡಿತು. ಅಧ್ಯಯನ ಮುಗಿಸಿ, ಭರವಸೆ ತುಂಬಿಕೊಂಡು ಹೊರಬಂದ ಯುವಕನ ಮುಂದೆ ಇದ್ದದ್ದು ನಿರುದ್ಯೋಗದ ಕಠಿಣ ವಾಸ್ತವ. ಕೆಲಸವಿಲ್ಲದೆ ದಿನಗಳು ಸಾಗುತ್ತಿದ್ದಂತೆ, ಮನಸ್ಸಿನ ಮೇಲೆ ಒತ್ತಡ ಹೆಚ್ಚುತ್ತಲೇ ಹೋಯಿತು.

ಅವರು ತಮ್ಮ ಕುಟುಂಬದ  ಶ್ರಮ, ನಿರೀಕ್ಷೆಗಳು, ಅವಲಂಬನೆಗಳನ್ನು ನೋಡಿ  “ನಾನು ಅವರಿಗಾಗಿ ಏನಾದರೂ ಮಾಡಬೇಕು” ಎಂಬ ಆಲೋಚನೆ ಪ್ರತಿದಿನವೂ ಅವರನ್ನು ಕಾಡುತ್ತಿತ್ತು. ನಿರಾಶೆ, ಅಸಹಾಯಕತೆ ಮತ್ತು ಸಾಮಾಜಿಕ ಒತ್ತಡ ಒಟ್ಟಾಗಿ ಅವರನ್ನು ಸುತ್ತುವರಿದವು.

ಇಂಥ ದುರ್ಬಲ ಕ್ಷಣದಲ್ಲಿ, ಅವರು ಕೆಲವು ಅಪರಿಚಿತ ಮಧ್ಯವರ್ತಿಗಳನ್ನು ಭೇಟಿಯಾದರು. ಅವರು ಮೃದು ಮಾತುಗಳಲ್ಲಿ ಭರವಸೆಗಳನ್ನು ಸುರಿದರು — ಕುವೈತ್, ಲೆಬನಾನ್, ದುಬೈ… ದೂರದ ದೇಶಗಳಲ್ಲಿ ಉತ್ತಮ ಉದ್ಯೋಗ, ದೊಡ್ಡ ಸಂಬಳ, ಗೌರವದ ಜೀವನ. ಎಲ್ಲವೂ ಕನಸಿನಂತೆ ಕೇಳಿಸಿತು.

ಮಾನವ ಕಳ್ಳಸಾಗಣೆಯ ಜಾಲ ಹೇಗೆ ಕೆಲಸ ಮಾಡುತ್ತದೆ ಎಂಬುದು ಅವರಿಗೆ ತಿಳಿದಿರಲಿಲ್ಲ. ಆ ಕ್ಷಣದಲ್ಲಿ, ಅವರು ಅದನ್ನು ಮೋಸ ಎಂದು ಭಾವಿಸಲಿಲ್ಲ. ತಮ್ಮ ಭವಿಷ್ಯಕ್ಕಾಗಿ ಹೂಡಿಕೆ ಮಾಡುತ್ತಿದ್ದೇನೆಂದು ನಂಬಿ, ಅವರು ದೊಡ್ಡ ಮೊತ್ತದ ಹಣವನ್ನು ನೀಡಿದರು. ಆ ಹಣ ಮಾತ್ರವಲ್ಲ — ತಮ್ಮ ಜೀವನದ ಅಮೂಲ್ಯ ವರ್ಷಗಳನ್ನೂ ಕಳೆದುಕೊಂಡರು. ಇದು ಉತ್ತಮ ಬದುಕಿನ ದಾರಿ ಅಲ್ಲ, ಬಲೆಯ ಬಾಗಿಲು ಎಂದು ಅಂದು ಅವರು ಅರಿತಿರಲಿಲ್ಲ.

ಬಲೆಯಾಗಿ ಬದಲಾದ ಪ್ರಯಾಣ

ಬುಕುರು ಕ್ಲೋಡ್‌ನ ಪ್ರಯಾಣವು ಭರವಸೆಯಿಂದ ಆರಂಭವಾಗಿ, ಮೌನವಾದ ಬಲೆಯಾಗಿ ಪರಿವರ್ತನೆಯಾಯಿತು.

ಅವರನ್ನು ಮೊದಲು ಕೀನ್ಯಾಕ್ಕೆ ಕಳುಹಿಸಿ ಇದು ಗಲ್ಪ್ ದೇಶಗಳಿಗೆ ತೆರಳುವ ಮೊದಲು ಕೇವಲ ತಾತ್ಕಾಲಿಕ ನಿಲುಗಡೆ ಎಂದು ಹೇಳಲಾಯಿತು. “ನಾವು ಗಲ್ಪ್ ದೇಶಗಳಿಗೆ ಹೋಗಬೇಕಾಗಿತ್ತು. "ಆದರೆ ಅಲ್ಲಿ ತಲುಪಿದ ಕ್ಷಣದಿಂದಲೇ ವಾಸ್ತವ ಸಂಪೂರ್ಣವಾಗಿ ಬೇರೆಯಾಗಿ ತೋರಿಬಂತು,” ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಮೊದಲ ದಿನವೇ, ಅವರನ್ನು ಕರೆದುಕೊಂಡು ಬಂದ ವ್ಯಕ್ತಿ ಅವರ ಪಾಸ್‌ಪೋರ್ಟ್‌ಗಳು ಮತ್ತು ಎಲ್ಲಾ ದಾಖಲೆಗಳನ್ನು ಕಸಿದುಕೊಂಡ. ನಂತರ, ಅವರನ್ನು ಒಂದು ಅಪಾರ್ಟ್‌ಮೆಂಟ್‌ನ ಕೊಠಡಿಯಲ್ಲಿ ಬಿಟ್ಟುಹೋದ. ಆ ಸಣ್ಣ ಕೋಣೆಯಲ್ಲಿ ಒಟ್ಟಾರೆ ಇಪ್ಪತ್ತೊಂದು ಮಂದಿ ಸೇರಿ ವಾಸಿಸಬೇಕಾಯಿತು.

ಆ ಬದುಕು ಅತ್ಯಂತ ಕಠಿಣವಾಗಿತ್ತು. ಊಟ ಸಿಗುವುದು ದೊಡ್ಡ ಹೋರಾಟ. “ನಮಗೆ ಆಹಾರ ಸಿಗುವುದೇ ಅಪರೂಪವಾಗಿತ್ತು. ಬುರುಂಡಿಯಲ್ಲಿದ್ದ ನಮ್ಮ ಕುಟುಂಬಗಳು ಕಳುಹಿಸುವ ಸಹಾಯದಿಂದ, ಮೂರು ದಿನಕ್ಕೊಮ್ಮೆ ಮಾತ್ರ ಊಟ ಮಾಡುತ್ತಿದ್ದೆವು,” ಎಂದು ಬುಕುರು ಹೇಳುತ್ತಾರೆ. ಆದರೂ, ಆ ಕ್ಷಣದಲ್ಲಿ ಬುಕುರು ತಾವು ಮಾನವ ಕಳ್ಳಸಾಗಣೆಯ ಬಲಿಯಾದೆವೆಂದು ಅರಿತಿರಲಿಲ್ಲ. “ಆ ಸಮಯದಲ್ಲಿ ನಾನು ಕಳ್ಳಸಾಗಣೆಯ ಬಲಿಯಾದೆ ಎಂದು ಗೊತ್ತಿರಲಿಲ್ಲ. ಏನೋ ತಪ್ಪಾಗಿದೆ ಎಂಬ ಭಾವನೆ ಮಾತ್ರ ಇತ್ತು. ಆದರೂ, ಒಂದು ದಿನ ಅವನು ಕೊಟ್ಟ ಮಾತಿನಂತೆ ನಮ್ಮನ್ನು ಗಲ್ಪ್ ದೇಶಗಳಿಗೆ ಕರೆದೊಯ್ಯುತ್ತಾನೆ ಎಂಬ ನಂಬಿಕೆ ನನಗಿತ್ತು.” ಆ ನಂಬಿಕೆಯೇ ಅವರನ್ನು ಇನ್ನಷ್ಟು ಗಾಢವಾದ ಬಲೆಗೆ ಎಳೆದೊಯ್ಯಿತು.

“ನಮ್ಮನ್ನು ಕಾಪಾಡಿದ ತಲಿಥಾ ಕುಮ್–ಕೀನ್ಯಾ”

ಬಲೆಯೊಳಗೆ ಸಿಲುಕಿದ್ದ ಬುಕುರುಗೆ ತಪ್ಪಿಸಿಕೊಳ್ಳುವ ದಾರಿ ಅಚಾನಕವಾಗಿ, ದೈವಸಂಯೋಗದಂತೆ ತೆರೆದುಕೊಂಡಿತು. ಕೀನ್ಯಾದಲ್ಲಿ ಧಾರ್ಮಿಕ ಸಹೋದರನಾದ ತನ್ನ ಹಳೆಯ ಸಹಪಾಠಿಯೊಬ್ಬರನ್ನು ಅವರು ಭೇಟಿಯಾದರು. ಆ ಭೇಟಿಯೇ ಎಲ್ಲವನ್ನೂ ಬದಲಿಸಿತು.

ತನ್ನ ಅನುಭವವನ್ನು ವಿವರಿಸಲು ಪದಗಳು ಸಿಗದೆ ತೊಳಲಾಡುತ್ತಿದ್ದ ಬುಕುರುಗೆ, ಆ ಸಹೋದರ ಸ್ಪಷ್ಟವಾಗಿ “ನೀನು ಒಪ್ಪಿಕೊಂಡರೂ ಇಲ್ಲದಿದ್ದರೂ, ನೀನು ಮಾನವ ಕಳ್ಳಸಾಗಣೆಯ ಬಲಿಯಾಗಿದ್ದೀಯ”ಎಂದು ತಿಳಿಸಿಕೊಟ್ಟರು. ಆ ಮಾತು ಬುಕುರುನ ಮನಸ್ಸನ್ನು ಜಾಗೃತಗೊಳಿಸಿತು. ಸ್ನೇಹ ಮತ್ತು ಒಗ್ಗಟ್ಟಿನ ಆ ಜಾಲದ ಮೂಲಕ ಈ ಪ್ರಕರಣವನ್ನು ತಾಲಿಥಾ ಕುಮ್–ಕೀನ್ಯಾಗೆ ತಿಳಿಸಲಾಯಿತು. “ನಮ್ಮನ್ನು ಕಾಪಾಡಿದವರು ತಲಿಥಾ ಕುಮ್–ಕೀನ್ಯಾ,” ಎಂದು ಬುಕುರು ನೆನಪಿಸಿಕೊಳ್ಳುತ್ತಾರೆ. ಅಲ್ಜೀರಿಯಾದಲ್ಲಿದ್ದ ಒಬ್ಬ ಸಹೋದರಿಯ ಮಧ್ಯಸ್ಥಿಕೆಯಿಂದಲೇ ಈ ನೆರವು ಸಾಧ್ಯವಾಯಿತು. ಆ ಕ್ಷಣವೇ ಅವರ ಬದುಕಿನ ನಿರ್ಣಾಯಕ ತಿರುವು. 

“ತಲಿಥಾ ಕುಮ್‌ ಭೇಟಿಯಾದಾಗಲೇ ನಾನು ಅನುಭವಿಸಿದ್ದುದಕ್ಕೆ ಸರಿಯಾದ ಹೆಸರು ಕೊಡಲು ಸಾಧ್ಯವಾಯಿತು — ಅದು ಮಾನವ ಕಳ್ಳಸಾಗಣೆ,” ಎಂದು ಅವರು ಹೇಳುತ್ತಾರೆ.

ನೋವಿನಿಂದ ಬದ್ಧತೆಯತ್ತ

ಇಂದು ಬುಕುರು ಕ್ಲೋಡ್ ಮಾನವ ಕಳ್ಳಸಾಗಣೆಯ ವಿರುದ್ಧ ಧ್ವನಿ ಎತ್ತುವ ಯುವ ವಕೀಲರಾಗಿದ್ದಾರೆ. ತಮ್ಮ ವೈಯಕ್ತಿಕ ನೋವನ್ನು ಸಾರ್ವಜನಿಕ ಬದ್ಧತೆಯಾಗಿ ಪರಿವರ್ತಿಸಿರುವುದನ್ನು ಅವರು ತಮ್ಮ ಜೀವನದ ಕರ್ತವ್ಯವೆಂದು ನೋಡುತ್ತಾರೆ.

“ನನ್ನ ಅನುಭವವನ್ನು ಬದ್ಧತೆಯಾಗಿ ಪರಿವರ್ತಿಸುವುದು ಮೂರು ಕಾರಣಗಳಿಂದ ಅಗತ್ಯ,ಮೊದಲನೆಯದಾಗಿ, “ನಾನು ಅನುಭವಿಸಿದದ್ದಕ್ಕೆ ಅರ್ಥ ನೀಡಲು — ಸತ್ಯವನ್ನು ಹೇಳಿ ಜಾಗೃತಿ ಮೂಡಿಸುವ ಮೂಲಕ.” ಎರಡನೆಯದಾಗಿ, ತಮ್ಮಂತೆಯೇ ನಿರುದ್ಯೋಗ ಮತ್ತು ದಾರಿದ್ರ್ಯವನ್ನು ಎದುರಿಸುತ್ತಿರುವ ಯುವಜನರೊಂದಿಗೆ ಒಗ್ಗಟ್ಟನ್ನು ತೋರಿಸಲು. “ಇಂದು ಅನೇಕ ಯುವಕರು ನಾನು ಆಗಿದ್ದಂತೆಯೇ ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ,” ಎಂದು ಅವರು ಒತ್ತಿಹೇಳುತ್ತಾರೆ. ಮೂರನೆಯದಾಗಿ, ಅವರು ತಮ್ಮ ನೈತಿಕ ಹೊಣೆಗಾರಿಕೆಯನ್ನು ಉಲ್ಲೇಖಿಸುತ್ತಾರೆ. “ಮಾನವ ಕಳ್ಳಸಾಗಣೆಯ ಕಾರ್ಯವಿಧಾನವನ್ನು ಹತ್ತಿರದಿಂದ ನೋಡಿದ ನಂತರ ನಾನು ಮೌನವಾಗಿರಲಾರೆ — ಹಾಗಿದ್ದರೆ ಅದು ಸ್ವಯಂಸಮ್ಮತ ಸಹಕಾರದಂತೆ” ಎಂದು ಅವರು ವಿವರಿಸುತ್ತಾರೆ.

ಇತರ ಯುವಕರೊಂದಿಗೆ ಸೇರಿ, ಬುಕುರು ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದ್ದಾರೆ. “ನಾವು ಮಾನವ ಕಳ್ಳಸಾಗಣೆಯ ಇಂದಿನ ರೂಪಗಳು ಮತ್ತು ವಂಚಕ ನೇಮಕಾತಿ ತಂತ್ರಗಳ ಬಗ್ಗೆ ಮಾತನಾಡುತ್ತೇವೆ; ಎಚ್ಚರಿಕೆಯಿಂದ ಇರಲು ಹಾಗೂ ಪ್ರಕರಣಗಳನ್ನು ವರದಿ ಮಾಡಲು ಪ್ರೋತ್ಸಾಹಿಸುತ್ತೇವೆ.”

ಪೂರ್ವ ಆಫ್ರಿಕಾದಲ್ಲಿ ಗಡಿ ದಾಟುವ ಜಾಗೃತಿ ಯೋಜನೆಗಳನ್ನೂ ಪರಿಗಣಿಸಲಾಗುತ್ತಿದೆ. “ಇದೇ ರೀತಿಯಲ್ಲಿ ನಾನು ಸಂಪೂರ್ಣವಾಗಿ ಜಾಗೃತಿ ಮೂಡಿಸಲು, ಕಳ್ಳಸಾಗಣೆ ತಡೆಯಲು ಮತ್ತು ಎಚ್ಚರಿಸಲು ಯುವ ರಾಯಭಾರಿಯಾಗಿ ಬದ್ಧನಾದೆ” ಎಂದು ಅವರು ಹೇಳುತ್ತಾರೆ.

ಎಚ್ಚರಿಕೆಯ ಸಂಕೇತಗಳನ್ನು ಗುರುತಿಸುವುದು

ತನ್ನ ಸ್ವಂತ ಅನುಭವದ ಆಧಾರದಲ್ಲಿ, ಬುಕುರು ಕ್ಲೋಡ್ ಮಾನವ ಕಳ್ಳಸಾಗಣೆಯ ಅಪಾಯವನ್ನು ಸೂಚಿಸುವ ಹಲವಾರು ಎಚ್ಚರಿಕೆ ಲಕ್ಷಣಗಳನ್ನು ಗುರುತಿಸಿದ್ದಾರೆ. ಅವರ ಪ್ರಕಾರ, ಮೊದಲ ಎಚ್ಚರಿಕೆ ಸಂಕೇತವೆಂದರೆ “ಅತಿಯಾದ ಆಕರ್ಷಕ ವಾಗ್ದಾನಗಳು” — ಸ್ಪಷ್ಟ ಒಪ್ಪಂದವಿಲ್ಲದೆ, ಅಗತ್ಯ ಅರ್ಹತೆಗಳಿಲ್ಲದೆ, ಮತ್ತು ತ್ವರಿತವಾಗಿ ಹೊರಡುವಂತೆ ಒತ್ತಡ ಹೇರಲಾಗುವ, ಅತಿಯಾದ ವೇತನದ ಉದ್ಯೋಗದ ಭರವಸೆ.

ಇನ್ನೊಂದು ಅಪಾಯ ಸೂಚಕವೆಂದರೆ ನೇಮಕದಾರರ ಕಡೆಯಿಂದ ಪಾರದರ್ಶಕತೆಯ ಕೊರತೆ — ಅಧಿಕೃತ ದಾಖಲೆಗಳ ಅಭಾವ, ಉದ್ಯೋಗದಾತ, ನಿಖರ ಕೆಲಸದ ಸ್ಥಳ ಅಥವಾ ನಿಜವಾದ ಕೆಲಸದ ಪರಿಸ್ಥಿತಿಗಳ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲದಿರುವುದು. ಅದೇ ರೀತಿ, ಉದ್ಯೋಗ ಪಡೆಯಲು ಅಥವಾ ಪ್ರಯಾಣಕ್ಕೆ ಹೆಚ್ಚಿನ ಮೊತ್ತದ ಹಣ ಪಾವತಿಸಲು ಒತ್ತಾಯಿಸುವುದೂ ಸಂಶಯಾಸ್ಪದ ಎಂದು ಅವರು ಎಚ್ಚರಿಸುತ್ತಾರೆ.

ಇತರ ಎಚ್ಚರಿಕೆ ಸಂಕೇತಗಳಲ್ಲಿ “ಯೋಜನೆಯನ್ನು ಕುಟುಂಬದಿಂದಲೂ ರಹಸ್ಯವಾಗಿಡುವಂತೆ ಕೇಳುವುದು” ಅಥವಾ “ಗುರುತಿನ ದಾಖಲೆಗಳನ್ನು ವಶಪಡಿಸಿಕೊಳ್ಳುವುದು ಹಾಗೂ ಚಲನವಲನದ ಮೇಲೆ ನಿರ್ಬಂಧ ವಿಧಿಸುವುದು” ಸೇರಿವೆ.

“ನೀವು ಒಬ್ಬಂಟಿಯಲ್ಲ”

ಮಾನವ ಕಳ್ಳಸಾಗಣೆಯ ಬಲೆಗೆ ಸಿಲುಕಿರುವವರಿಗೆ ಬುಕುರು ಕ್ಲೋಡ್ ಆಶಾದಾಯಕ ಸಂದೇಶವನ್ನು ನೀಡಿದರು. “ಪ್ರಿಯ ಸಹೋದರ ಸಹೋದರಿಯರೇ, ನೀವು ಒಬ್ಬರಲ್ಲ. ಪರಿಸ್ಥಿತಿ ನಿರಾಶಾದಾಯಕವಾಗಿ ಕಂಡರೂ ನಿಮ್ಮ ಬದುಕಿಗೆ ಅಪಾರ ಮೌಲ್ಯವಿದೆ. ನಿಮಗೆ ಸಹಾಯ ಮಾಡಲು ಸಿದ್ಧವಾಗಿರುವ ಜನರು ಮತ್ತು ಸಂಸ್ಥೆಗಳಿವೆ. ಧೈರ್ಯದಿಂದ ಮಾತಾಡುವುದು ಸ್ವಾತಂತ್ರ್ಯದತ್ತ ಮೊದಲ ಹೆಜ್ಜೆಯಾಗಬಹುದು,” ಎಂದು ಅವರು ಹೇಳಿದರು.

ಅಧಿಕಾರಿಗಳು, ಸಮುದಾಯಗಳು ಹಾಗೂ ಯುವಜನರನ್ನೂ ಉದ್ದೇಶಿಸಿ  “ಒಟ್ಟಾಗಿ, ನಾವು ಸಂಕಟವನ್ನು ರಕ್ಷಣೆಯಾಗಿ ಮತ್ತು ಭಯವನ್ನು ಭರವಸೆಯಾಗಿ ಪರಿವರ್ತಿಸಬಹುದು,” ಎಂದು ಬುಕುರು ಕ್ಲೋಡ್ ನುಡಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

07 ಫೆಬ್ರವರಿ 2026, 17:33