ಹುಡುಕಿ

2026.02.06 Botswana Human Trafficking intv 2026.02.06 Botswana Human Trafficking intv 

ತಲಿಥಾ ಕುಮ್ ಯುವ ರಾಯಭಾರಿ: ‘ಮಾನವ ಕಳ್ಳಸಾಗಣೆ ತಡೆಯಲು ಎಲ್ಲಾ ವೇದಿಕೆಗಳನ್ನೂ ಬಳಸಿ'

ದಕ್ಷಿಣ ಆಫ್ರಿಕಾ ದೇಶ ಬೋಟ್ಸ್‌ವಾನಾದವರಾದ ಲೋನೆ ಬೋತ್ಸೆಲೊ ಅವರು ಪ್ರಸ್ತುತ ರೋಮ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾರೆ. ಈ ಸಭೆಯನ್ನು ಮಾನವ ಕಳ್ಳಸಾಗಣೆ ವಿರುದ್ಧ ಕಾರ್ಯನಿರ್ವಹಿಸುವ “ತಲಿಥಾ ಕುಮ್” ಜಾಲ ಆಯೋಜಿಸಿದ್ದು, ಫೆಬ್ರವರಿ 8ರಂದು ಆಚರಿಸಲಾಗುವ ಅಂತರರಾಷ್ಟ್ರೀಯ ಮಾನವ ಕಳ್ಳಸಾಗಣೆ ವಿರೋಧಿ ಜಾಗೃತಿ ಹಾಗೂ ಪ್ರಾರ್ಥನಾ ದಿನದ ಸಿದ್ಧತೆಗಳ ಭಾಗವಾಗಿ ಇದು ನಡೆಯುತ್ತಿದೆ.

ಲೇಖಕರು: ವಂ. ಗುರು ಮಾರ್ಕ್ ರಾಬಿನ್ ದೆಸ್ತುರಾ, RCJ

ಪ್ರತಿ ವರ್ಷ ಫೆಬ್ರವರಿ 8ರಂದು ಆಚರಿಸಲ್ಪಡುವ ಅಂತರರಾಷ್ಟ್ರೀಯ ಮಾನವ ಕಳ್ಳಸಾಗಣೆ ವಿರೋಧಿ ಜಾಗೃತಿ ಮತ್ತು ಪ್ರಾರ್ಥನಾ ದಿನದ ಹಿನ್ನೆಲೆಯಲ್ಲಿ, ಬೋಟ್ಸ್‌ವಾನಾದ ತಲಿಥಾ ಕುಮ್ ಯುವ ರಾಯಭಾರಿ ಲೋನೆ ಬೋತ್ಸೆಲೊ ಅವರು ಆಧುನಿಕ ದಾಸ್ಯವನ್ನು ಎದುರಿಸುವ ತುರ್ತು ಅಗತ್ಯದ ಕುರಿತು ಮಾತನಾಡಿದ್ದಾರೆ.

2024ರಲ್ಲಿ ತಲಿಥಾ ಕುಮ್ ಯುವ ರಾಯಭಾರಿ ಕಾರ್ಯಕ್ರಮಕ್ಕೆ ಸೇರಿದ್ದ ಲೋನೆ, ಆರಂಭದಲ್ಲಿ ತಮ್ಮದೇ ದೇಶದಲ್ಲಿ ಮಾನವ ಕಳ್ಳಸಾಗಣೆ ಎಷ್ಟು ವ್ಯಾಪಕವಾಗಿದೆ ಎಂಬುದರ ಅರಿವು ಕಡಿಮೆಯಿತ್ತು ಎಂದು ಒಪ್ಪಿಕೊಳ್ಳುತ್ತಾರೆ. “ಬೋಟ್ಸ್‌ವಾನಾದಲ್ಲೇ ಇದು ಎಷ್ಟು ಜೀವಂತ ಹಾಗೂ ನಿಜವಾದ ಸಮಸ್ಯೆಯಾಗಿದೆ ಎಂಬುದು ನನಗೆ ಗೊತ್ತಿರಲಿಲ್ಲ,” ಎಂದು ಅವರು ಹೇಳುತ್ತಾರೆ. ತರಬೇತಿ ಮತ್ತು ಕ್ಷೇತ್ರಾನುಭವದ ಮೂಲಕ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಂತಹ ಅತಿಸಂವೇದನಶೀಲ ಸಮುದಾಯಗಳು ಇದರಿಂದ ಎಷ್ಟು ಗಂಭೀರವಾಗಿ ಪ್ರಭಾವಿತರಾಗಿವೆ ಎಂಬುದನ್ನು ಅವರು ಮನಗಂಡರು.

“ಈ ಪಯಣ ನನ್ನ ಕಣ್ಣು ತೆರೆಸಿತು,” ಎಂದು ಅವರು ಹೇಳುತ್ತಾರೆ. “ಮಾನವ ಕಳ್ಳಸಾಗಣೆ ದೂರದ ಸಮಸ್ಯೆಯಲ್ಲ; ಅದು ನಮ್ಮ ನಡುವೆಯೇ ನಡೆಯುತ್ತಿದೆ ಎಂಬುದು ನನಗೆ ಸ್ಪಷ್ಟವಾಯಿತು.” ಇದನ್ನು ಅವರು ಉದ್ದೇಶಪೂರ್ಣ ಬದುಕಿಗೆ ಕರೆಯಾಗಿ ಕಂಡರು.

ವಿತ್ತ ಕ್ಷೇತ್ರದಲ್ಲಿ ಕೆಲಸ ಮಾಡುವ ಜೊತೆಗೆ ವಿಷಯ ಸೃಷ್ಟಿಕರ್ತರಾಗಿಯೂ ಸಕ್ರಿಯವಾಗಿರುವ ಲೋನೆ, ಯುವ ಸೇವೆ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಹವಾಮಾನ ಬದಲಾವಣೆ, ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ನ್ಯಾಯದಂತಹ ವಿಷಯಗಳ ಮೇಲಿನ ಅವರ ಆಸಕ್ತಿ ಸಹಜವಾಗಿಯೇ ಮಾನವ ಕಳ್ಳಸಾಗಣೆ ವಿರುದ್ಧದ ವಕಾಲತ್ತಿನತ್ತ ಅವರನ್ನು ಕರೆದೊಯ್ದಿತು.

“ನಾನು ಉದ್ದೇಶಪೂರ್ಣವಾಗಿ ಬದುಕುವುದನ್ನು ಪ್ರೀತಿಸುತ್ತೇನೆ,” ಎಂದು ಅವರು ಹೇಳುತ್ತಾರೆ. ತಾಲಿಥಾ ಕುಮ್‌ನ ಧ್ಯೇಯವನ್ನು ತಿಳಿದ ಕ್ಷಣವೇ ತಾವು ಈ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ಭಾಸವಾಯಿತೆಂದು ಅವರು ನೆನಪಿಸುತ್ತಾರೆ. “ಇದು ಕೇವಲ ಮತ್ತೊಂದು ಯೋಜನೆಯಲ್ಲ; ಇದು ಸೇವೆಯ ಮಾರ್ಗ,” ಎಂದು ಅವರು ಹೇಳಿದ್ದಾರೆ.

ಅಂತರರಾಷ್ಟ್ರೀಯ ಸಭೆಯಲ್ಲಿ ಪಾಲ್ಗೊಳ್ಳಲು ರೋಮ್‌ಗೆ ಬಂದ ಲೋನೆ, ಈ ಅನುಭವವನ್ನು ಭಾವನಾತ್ಮಕ ಹಾಗೂ ಸವಾಲಿನದಾಗಿ ವಿವರಿಸುತ್ತಾರೆ. ಪೂಜ್ಯ ಜಗದ್ಗುರುಗಳನ್ನು ಭೇಟಿಯಾಗುವ ಕಾರ್ಯಕ್ರಮಕ್ಕೆ ತಡವಾಗಿ ತಲುಪಿದ್ದರೂ, ಅವರು ತಕ್ಷಣವೇ ಕಾರ್ಯಾಗಾರಗಳು ಮತ್ತು ಚರ್ಚೆಗಳಲ್ಲಿ ತೊಡಗಿಕೊಂಡರು.

“ನಾವು ಇಲ್ಲಿ ಪ್ರಾರ್ಥಿಸಲು, ಕಲಿಯಲು ಮತ್ತು ಕಾರ್ಯನಿರ್ವಹಿಸಲು ಬಂದಿದ್ದೇವೆ,” ಎಂದು ಅವರು ಹೇಳುತ್ತಾರೆ. “ವಿವಿಧ ದೇಶಗಳ ಯುವಜನರೊಂದಿಗೆ ಇರುವಾಗ, ಇದು ಜಾಗತಿಕ ಹೋರಾಟ ಎಂಬುದು ಸ್ಪಷ್ಟವಾಗುತ್ತದೆ.”

ಈ ವಾರದ ಭಾಗವಾಗಿ, ತಲಿಥಾ ಕುಮ್ ಜಾಲವು ಮೇಣದಬತ್ತಿ ಮೆರವಣಿಗೆ ಮತ್ತು ಪ್ರಾರ್ಥನಾ ಜಾಗರಣೆ ಆಯೋಜಿಸಿತು—ಇದು ಮಾನವ ಕಳ್ಳಸಾಗಣೆಯ ವಿರುದ್ಧ ಜಾಗೃತಿ ಮೂಡಿಸಲು ಹಾಗೂ ಬಲಿಯಾದವರಿಗಾಗಿ ಪ್ರಾರ್ಥಿಸಲು ನಡೆದ ಉಪಕ್ರಮವಾಗಿತ್ತು.

ಮಾನವ ಕಳ್ಳಸಾಗಣೆ ವಿರುದ್ಧ ಡಿಜಿಟಲ್ ಅಭಿಯಾನ

ಲೋನೆ ಬೋತ್ಸೆಲೊ ಅವರ ದೃಷ್ಟಿಯಲ್ಲಿ, ಇಂದಿನ ಯುವ ವಕೀಲರಿಗೆ ಸಾಮಾಜಿಕ ಮಾಧ್ಯಮವು ಅತ್ಯಂತ ಶಕ್ತಿಶಾಲಿ ಸಾಧನಗಳಲ್ಲಿ ಒಂದಾಗಿದೆ. “ನಾವು ಡಿಜಿಟಲ್ ಯುಗದಲ್ಲಿ ಬದುಕುತ್ತಿದ್ದೇವೆ,” ಎಂದು ಅವರು ಹೇಳುತ್ತಾರೆ. “ಮಕ್ಕಳಿಂದ ಹಿರಿಯರ ತನಕ ಎಲ್ಲರೂ ಆನ್‌ಲೈನ್‌ನಲ್ಲಿದ್ದಾರೆ. ಹೀಗಿರುವಾಗ ಜಾಗೃತಿಗಾಗಿ ಈ ವೇದಿಕೆಯನ್ನು ಏಕೆ ಬಳಸಬಾರದು?”

ಬೋಟ್ಸ್‌ವಾನಾದಲ್ಲಿ ತಲಿಥಾ ಕುಮ್ ತಂಡವು ಮಾನವ ಕಳ್ಳಸಾಗಣೆಯ ಕುರಿತು ನಿಯಮಿತವಾಗಿ ವೀಡಿಯೊಗಳು, ಚಿಂತನೆಗಳು ಮತ್ತು ಸೃಜನಾತ್ಮಕ ವಿಷಯಗಳನ್ನು ತಯಾರಿಸುತ್ತದೆ. ಮಾನವ ಕಳ್ಳಸಾಗಣೆ ಬಲಿಯಾದವರ ಪಾಲಕ ಸಂತರಾದ ಜೋಸೆಫಿನ್ ಬಹಿತಾ ಅವರ ನವದಿನದ ಸಂದರ್ಭದಲ್ಲಿ, ಅವರ ಜೀವನ ಕಥೆಯನ್ನು ಇಂದಿನ ವಾಸ್ತವಿಕತೆಗೆ ಜೋಡಿಸಿ ದೈನಂದಿನ ಧ್ಯಾನಗಳನ್ನು ಹಂಚಿಕೊಂಡರು.

“ಟ್ರೆಂಡ್ಸ್, ವ್ಲಾಗ್‌ಗಳು ಮತ್ತು ಕಥನಗಳ ಮೂಲಕ, ಸೆಮಿನಾರ್‌ಗಳಿಗೆ ಎಂದಿಗೂ ಬರದವರನ್ನೂ ತಲುಪಬಹುದು,” ಎಂದು ಲೋನೆ ವಿವರಿಸುತ್ತಾರೆ. “ಡಿಜಿಟಲ್ ವೇದಿಕೆಗಳು ಶಿಕ್ಷಣ ಮತ್ತು ಮನಪರಿವರ್ತನೆಯ ಸ್ಥಳಗಳಾಗಬಹುದು.”

ಗಾಬೊರೋನೆ ಧರ್ಮಕ್ಷೇತ್ರದಲ್ಲಿ ಸುಮಾರು 40 ಸದಸ್ಯರನ್ನು ಹೊಂದಿರುವ ತಾಲಿಥಾ ಕುಮ್ ತಂಡವು ಮೊದಲಿಗೆ ತಮ್ಮದೇ ಧರ್ಮಕೇಂದ್ರದಲ್ಲಿ ಕಾರ್ಯಾರಂಭಿಸಿತು. ಧರ್ಮಕೇಂದ್ರ ಭೇಟಿಗಳು ಮತ್ತು ಬಲಿಪೂಜೆಯ ನಂತರದ ಜಾಗೃತಿ ಮಾತುಕತೆಗಳು, ಮಾಹಿತಿ ಪುಸ್ತಕಿಕೆಗಳ ವಿತರಣೆ, ಯುವ ಕಾರ್ಯಾಗಾರಗಳು, ಶಾಲಾ ಸಭೆಗಳು, ಸಮುದಾಯ ಸಂಪರ್ಕ ಕಾರ್ಯಕ್ರಮಗಳ  ಮೂಲಕ, ಮಾನವ ಕಳ್ಳಸಾಗಣೆ ವಿರುದ್ಧ ಜಾಗೃತಿ ಮೂಡಿಸುವುದರ ಜೊತೆಗೆ, ಸಮುದಾಯ ಮಟ್ಟದಲ್ಲಿ ತಡೆಗಟ್ಟುವ ಪ್ರಯತ್ನಗಳನ್ನು ಬಲಪಡಿಸಲಾಗಿದೆ.

ಸಂಸ್ಥೆಗಳೊಂದಿಗೆ ಸಂವಾದ

ಮಾನವ ಕಳ್ಳಸಾಗಣೆ ವಿರುದ್ಧದ ಹೋರಾಟದಲ್ಲಿ ಪ್ರಮುಖ ಹೆಜ್ಜೆಯಾಗಿ ರಾಷ್ಟ್ರೀಯ ಮಟ್ಟದ ತಜ್ಞರೊಂದಿಗೆ ಚರ್ಚೆಯನ್ನು ಆಯೋಜಿಸಲಾಯಿತು. ಈ ಚರ್ಚೆಯಲ್ಲಿ ಧರ್ಮಸಭೆಯ ನಾಯಕರು, ಸಾಮಾಜಿಕ ಕಾರ್ಯಕರ್ತರು, ಕಾನೂನು ಜಾರಿ ಅಧಿಕಾರಿಗಳು ಹಾಗೂ ಬೋಟ್ಸ್‌ವಾನಾ ಸರ್ಕಾರದ ಪ್ರತಿನಿಧಿಗಳು ಪಾಲ್ಗೊಂಡರು. ಸುಮಾರು 60 ಮಂದಿ ನೇರವಾಗಿ ಭಾಗವಹಿಸಿದರೆ, ಇನ್ನೂ ಅನೇಕರು ಆನ್‌ಲೈನ್ ಹಾಗೂ ರೇಡಿಯೋ ಮೂಲಕ ಪಾಲ್ಗೊಂಡರು.

“ಇಂತಹ ಸಂವಾದ ಅತ್ಯಂತ ಅಗತ್ಯ,” ಎಂದು ಲೋನೆ ಒತ್ತಿ ಹೇಳಿದರು. “ಧರ್ಮಸಭೆ, ಸರ್ಕಾರ ಮತ್ತು ನಾಗರಿಕ ಸಮಾಜ ಒಟ್ಟಾಗಿ ಕೆಲಸ ಮಾಡಬಹುದು ಎಂಬುದನ್ನು ಇದು ತೋರಿಸುತ್ತದೆ.” ತಡೆಗಟ್ಟುವಿಕೆ ಮತ್ತು ಬಾಧಿತರಿಗೆ ನೆರವು ನೀಡುವಲ್ಲಿ ಈ ಸಹಕಾರ ಪರಿಣಾಮಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮುಂದಿನ ಹಂತವಾಗಿ, ಲೋನೆ ಅವರು ತಲಿಥಾ ಕುಮ್ ಕಾರ್ಯಕ್ರಮವನ್ನು ಗಾಬೊರೋನೆ ಧರ್ಮಕ್ಷೇತ್ರದ ಹೊರಗೂ ವಿಸ್ತರಿಸಲು ಉದ್ದೇಶಿಸಿದ್ದಾರೆ. ಬೋಟ್ಸ್‌ವಾನಾದ ಮಾನವ ಕಳ್ಳಸಾಗಣೆ ವಿರೋಧಿ ರಾಷ್ಟ್ರೀಯ ಕಾರ್ಯಯೋಜನೆಯ ಅಡಿಯಲ್ಲಿ ಸರ್ಕಾರದ ವಿವಿಧ ಇಲಾಖೆಗಳೊಂದಿಗೆ ಇನ್ನಷ್ಟು ಸಮನ್ವಯ ಸಾಧಿಸುವುದು ಅವರ ಪ್ರಮುಖ ಗುರಿಯಾಗಿದೆ.

“ನಾವು ಸರ್ಕಾರದ ವಿರುದ್ಧ ನಿಲ್ಲಲು ಅಲ್ಲ, ಜೊತೆಯಾಗಿ ನಡೆಯಲು ಬಯಸುತ್ತೇವೆ,” ಎಂದು ಅವರು ಹೇಳಿದರು. ಹಣಕಾಸು ನೆರವು, ತರಬೇತಿ ಅಥವಾ ಜಂಟಿ ಯೋಜನೆಗಳ ಮೂಲಕ ಸಹಭಾಗಿತ್ವವೇ ಶಾಶ್ವತ ಬದಲಾವಣೆಯ ಕೀಲಿಕೈ ಎಂದು ಅವರು ಅಭಿಪ್ರಾಯಪಟ್ಟರು.

ಭರವಸೆಯ ದೃಷ್ಟಿಕೋನ

ಲೋನೆ ಬೋಟ್ಷೆಲೋ ಅವರ “ಜನರು ಮೌನವಾಗಿರುವಲ್ಲಿ ಮಾನವ ಕಳ್ಳಸಾಗಣೆ ಬೆಳೆಯುತ್ತದೆ. ನಮ್ಮ ಕರ್ತವ್ಯ ಮಾತನಾಡುವುದು, ಶಿಕ್ಷಣ ನೀಡುವುದು ಮತ್ತು ರಕ್ಷಿಸುವುದು ” ಎಂಬ ಮುಖ್ಯ ಸಂದೇಶ ಸ್ಪಷ್ಟವಾಗಿದೆ.

ಯುವಜನರು ನಂಬಿಕೆ ಮತ್ತು ತಂತ್ರಜ್ಞಾನದಿಂದ ಶಕ್ತಿಗೊಂಡರೆ, ಅವರು ಸಾಮಾಜಿಕ ಪರಿವರ್ತನೆಯ ಕಾರ್ಯಕರ್ತರಾಗಬಹುದು ಎಂದು ಅವರು ನಂಬುತ್ತಾರೆ. “ನಾವು ನಮ್ಮ ಧ್ವನಿಗಳನ್ನು ಜಾಣ್ಮೆಯಿಂದ ಬಳಸಿದರೆ ಕಾಣದಂತೆ ಮಾಡಲ್ಪಟ್ಟವರ ಘನತೆಯನ್ನು ಪುನಃಸ್ಥಾಪಿಸಲು ಸಹಾಯ ಮಾಡಬಹುದು. ಡಿಜಿಟಲ್ ಜಗತ್ತಲ್ಲಿಯೂ ನೈಜ ಬದುಕಲ್ಲಿಯೂ ಮಾನವರ ಶೋಷಣೆಯನ್ನು ಸುಲಭಗೊಳಿಸಬಾರದು. ಪ್ರತಿಯೊಬ್ಬರೂ ಸ್ವಾತಂತ್ರ್ಯಕ್ಕೆ ಅರ್ಹರು” ಎಂದು ಲೋನೆ ಹೇಳಿದರು.


ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

06 ಫೆಬ್ರವರಿ 2026, 14:45