ಹುಡುಕಿ

Daycare Center for Ukrainian Refugee Children opened in Bucharest Daycare Center for Ukrainian Refugee Children opened in Bucharest  (ANSA)

ಮಕ್ಕಳ ರಕ್ಷಣೆಗೆ ಜಾಗತಿಕ ನೆರವು ತಜ್ಞರ ಒಕ್ಕೂಟ: ಸಂಪರ್ಕ ಹಾಗೂ ವಕಾಲತ್ತು ಬಲಪಡಿಸಲು ರೋಮ್‌ನಲ್ಲಿ ಸಭೆ

ಕಥೋಲಿಕ ನಾಯಕರು, ಧಾರ್ಮಿಕ ಸಭೆಗಳು, ಮಾನವೀಯ ಸಂಸ್ಥೆಗಳು ಹಾಗೂ ಮಕ್ಕಳ ರಕ್ಷಣಾ ತಜ್ಞರು ಜಗತ್ತಿನ ವಿವಿಧ ಭಾಗಗಳಿಂದ ರೋಮ್‌ನಲ್ಲಿ ಸಭೆ ಸೇರಿ, ಜಾಗತಿಕ ಮಟ್ಟದಲ್ಲಿ ತೀವ್ರಗೊಳ್ಳುತ್ತಿರುವ ಬಿಕ್ಕಟ್ಟುಗಳಿಂದ ಬಳಲುತ್ತಿರುವ ಮಕ್ಕಳಿಗೆ ಧರ್ಮಸಭೆಯ ಸ್ಪಂದನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಚರ್ಚೆ ನಡೆಸಿದರು.

ವ್ಯಾಟಿಕನ್ ವರದಿ

ಮಕ್ಕಳ ಮೇಲೆ ಹೆಚ್ಚುತ್ತಿರುವ ಜಾಗತಿಕ ಬಿಕ್ಕಟ್ಟುಗಳಿಗೆ ಧರ್ಮಸಭೆಯ ಸ್ಪಂದನೆಯನ್ನು ಬಲಪಡಿಸುವ ಉದ್ದೇಶದಿಂದ ನಡೆದ ಅಂತರರಾಷ್ಟ್ರೀಯ ಸಭೆ ರೋಮ್‌ನಲ್ಲಿ ಯಶಸ್ವಿಯಾಗಿ ಸಮಾಪ್ತಿಯಾಯಿತು. “ಸಂಕಷ್ಟದಿಂದ ಆರೈಕೆಗೆ: ಮಕ್ಕಳಿಗಾಗಿ ಕಥೋಲಿಕ ಕಾರ್ಯಾಚರಣೆ” ಎಂಬ ಶೀರ್ಷಿಕೆಯ ಈ ಮೂರು ದಿನಗಳ ಸಭೆ ಫೆಬ್ರವರಿ 2 ರಿಂದ 5ರವರೆಗೆ ನಡೆಯಿತು. ಇದರಲ್ಲಿ 19 ದೇಶಗಳಿಂದ 70 ಪ್ರತಿನಿಧಿಗಳು ಭಾಗವಹಿಸಿದ್ದರು. ಇದಕ್ಕೂ ಮೊದಲು, ಕಳೆದ ಮೂರು ತಿಂಗಳಲ್ಲಿ ಮೂರು ಅಂತರರಾಷ್ಟ್ರೀಯ ವೆಬಿನಾರ್‌ಗಳು ನಡೆದಿದ್ದವು. ಫೆಬ್ರವರಿ 5ರಂದು ಸಂಘಟನಾ ಸಮಿತಿಯ ಸದಸ್ಯರು ಪೂಜ್ಯ ಜಗದ್ಗುರುಗಳಾದ 14ನೆ ಲಿಯೋ ಅವರನ್ನು ಖಾಸಗಿ ಭೇಟಿಯಲ್ಲಿ ಭೇಟಿಯಾದರು.

ಈ ಉಪಕ್ರಮವು, ಸಂಘರ್ಷ, ಸ್ಥಳಾಂತರ, ದಾರಿದ್ರ್ಯ ಮತ್ತು ಸಾಮಾಜಿಕ ಅಸ್ಥಿರತೆಯಿಂದ ಗುರುತಿಸಲ್ಪಡುವ ‘ವಿವಿಧ ಜಾಗತಿಕ ಬಿಕ್ಕಟ್ಟು'ಗಳ(poly-crisis) ಸಂದರ್ಭದಲ್ಲಿ ಮಕ್ಕಳ ಹಕ್ಕುಗಳು ಮತ್ತು ಘನತೆಯನ್ನು ರಕ್ಷಿಸುವಂತೆ ಪೂಜ್ಯ ಜಗದ್ಗುರುಗಳಾದ  ಫ್ರಾನ್ಸಿಸ್ ನೀಡಿದ ಕರೆಯ ಪ್ರತಿಕ್ರಿಯೆಯಾಗಿ ಆರಂಭಿಸಲಾಯಿತು. ನವೆಂಬರ್ 2025 ರಿಂದ ಜನವರಿ 2026ರ ನಡುವೆ ಮೂರು ವೆಬಿನಾರ್‌ಗಳು ನಡೆದ ಬಳಿಕ ರೋಮ್ ಸಭೆ ಆಯೋಜಿಸಲಾಯಿತು.

ಚರ್ಚೆಗಳು ಕಥೋಲಿಕ ಸಾಮಾಜಿಕ ಬೋಧನೆ, ಧರ್ಮಸಭೆಯ ಸಹಯಾತ್ರೆಯ (ಸಿನೋಡಲ್) ದೃಷ್ಟಿಕೋನ ಹಾಗೂ 2026ರ ವಿಶ್ವ ರೋಗಿಗಳ ದಿನದ ಕುರಿತು ಪೂಜ್ಯ ಜಗದ್ಗುರುಗಳಾದ 14ನೆ ಲಿಯೋ ನೀಡಿದ ಸಂದೇಶದ ಆಧಾರದಲ್ಲಿ ನಡೆಯಿತು—ಇದು ಸಂಬಂಧಗಳು ಮತ್ತು ಸಮೂಹ ಜವಾಬ್ದಾರಿತ್ವದ ಮೂಲಕ ವ್ಯಕ್ತವಾಗುವ ಕರುಣೆಯನ್ನು ಪ್ರತಿಬಿಂಬಿಸುತ್ತದೆ.

ಈ ಪ್ರಕ್ರಿಯೆ, 2025ರ ಫೆಬ್ರವರಿಯಲ್ಲಿ ವ್ಯಾಟಿಕನ್‌ನಲ್ಲಿ ಪೂಜ್ಯ ಜಗದ್ಗುರುಗಳಾದ ಫ್ರಾನ್ಸಿಸ್ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಕ್ಕಳ ಹಕ್ಕುಗಳ ಶೃಂಗಸಭೆಯಿಂದ ಉಂಟಾದ ವೇಗವನ್ನು ಮುಂದುವರಿಸಿದೆ. ಆ ಶೃಂಗಸಭೆ, ಜಗತ್ತಿನ ಅತ್ಯಂತ ದುರ್ಬಲ ಮಕ್ಕಳ ರಕ್ಷಣೆಗೆ ಜಾಗತಿಕ ಕಾರ್ಯಾಚರಣೆಯ ಕರೆಯನ್ನು ನೀಡಿತ್ತು.

ರೋಮ್ ಸಭೆಯಲ್ಲಿ ಭಾಗವಹಿಸಿದವರು ಶಸ್ತ್ರ ಸಂಘರ್ಷಗಳಲ್ಲಿ ಕೊಲ್ಲಲ್ಪಡುವ ಮಕ್ಕಳು, ಅಪಾಯಕಾರಿ ಮಾರ್ಗಗಳಲ್ಲಿ ಕಾಣೆಯಾಗುವ ವಲಸಿಗ ಮಕ್ಕಳು, ಹಾಗೂ ಆರೋಗ್ಯಸೇವೆ, ಕಾನೂನು ಗುರುತು, ಅಥವಾ ಶೋಷಣೆ ಮತ್ತು ಹಿಂಸೆಯಿಂದ ರಕ್ಷಣೆ ಪಡೆಯಲು ಸಾಧ್ಯವಾಗದ ಲಕ್ಷಾಂತರ ಅಪ್ರಾಪ್ತ ವಯಸ್ಕ ಮಕ್ಕಳು ಎದುರಿಸುತ್ತಿರುವ ಗಂಭೀರ ವಾಸ್ತವಗಳನ್ನು ಪರಾಮರ್ಶಿಸಿದರು.

ಕಥೋಲಿಕ ಅಂತರರಾಷ್ಟ್ರೀಯ ಮಕ್ಕಳ ಆರೈಕೆ ಸಂಸ್ಥೆ (Catholic Care for Children International) ಸಂಸ್ಥೆಯ ಸಂಯೋಜಕಿ ಹಾಗೂ ಸಂಘಟನಾ ಸಮಿತಿಯ ಸಹಾಧ್ಯಕ್ಷೆ ಸಹೋದರಿ ನಿಲುಕಾ ಪೆರೆರಾ ಅವರು ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ, ಪರಿಣಾಮಕಾರಿ ಸಹಕಾರವನ್ನು ಆಳಗೊಳಿಸುವುದೇ ಪ್ರಮುಖ ಗುರಿ ಎಂದು ತಿಳಿಸಿದರು.

“ನಾವು ಒಟ್ಟಾಗಿ ಕಾರ್ಯನಿರ್ವಹಿಸುವ ಉತ್ತಮ ಮಾರ್ಗಗಳನ್ನು ಕಂಡುಕೊಳ್ಳುವುದು, ಈ ಮಹತ್ವದ ಧ್ಯೇಯದತ್ತ ನಮ್ಮ ಬದ್ಧತೆಯನ್ನು ಗಾಢಗೊಳಿಸುವುದು ಹೇಗೆ ಎಂಬುದನ್ನು ಚರ್ಚಿಸಿದ್ದೇವೆ. ಮಕ್ಕಳ ಹಕ್ಕುಗಳನ್ನು ಸುತ್ತುವರಿದ ಅನೇಕ ಬಿಕ್ಕಟ್ಟುಗಳನ್ನು ನಾವು ಈಗ ಕಾಣುತ್ತಿರುವುದರಿಂದ, ಇದು ಅತ್ಯಂತ ಅಗತ್ಯ,” ಎಂದರು.

ಸಂಘಟಕರು ವಿಶ್ವದಾದ್ಯಂತ ಮಕ್ಕಳ ಎದುರಿಸುತ್ತಿರುವ ಬಿಕ್ಕಟ್ಟಿನ ಗಂಭೀರತೆಯನ್ನು ಒತ್ತಿ ಹೇಳಿದರು. 2024–2025ರಲ್ಲಿ ಅಂದಾಜು 12.32 ಕೋಟಿ ಜನರು ಸ್ಥಳಾಂತರಗೊಂಡಿದ್ದರೆ; ಇದರಲ್ಲಿ ಲಕ್ಷಾಂತರ ಮಕ್ಕಳು ಸೇರಿದ್ದಾರೆ. ಅದೇ ವೇಳೆ, 160 ಕೋಟಿ ಮಕ್ಕಳು ಹಿಂಸಾತ್ಮಕ ಶಿಸ್ತಿಗೆ ಒಳಗಾಗುತ್ತಿದ್ದಾರೆ ಮತ್ತು ದಶಲಕ್ಷಾರು ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುತ್ತಿದ್ದಾರೆ.

ಇದರ ಜೊತೆಗೆ, ನಿಧಿ ಕೊರತೆಯಿಂದ ಅಗತ್ಯ ಸೇವೆಗಳು ದುರ್ಬಲಗೊಂಡಿದ್ದು, ಮಕ್ಕಳ ರಕ್ಷಣೆಗೆ ಅಗತ್ಯವಾದ ಕುಟುಂಬ, ಸಮುದಾಯ ಹಾಗೂ ಸಂಸ್ಥಾತ್ಮಕ ಬೆಂಬಲ ವ್ಯವಸ್ಥೆಗಳು ಕುಸಿಯುತ್ತಿವೆ. ಮುಂಚೂಣಿ ಆರೈಕೆ ಒದಗಿಸುವವರಾಗಿರುವ ಕಥೋಲಿಕ ಸಂಸ್ಥೆಗಳು ಹೆಚ್ಚುತ್ತಿರುವ ಬೇಡಿಕೆಯ ನಡುವೆ ಸಂಪನ್ಮೂಲಗಳ ಕೊರತೆಯನ್ನು ಎದುರಿಸುತ್ತಿವೆ.

ಸಂಘಟನಾ ಸಮಿತಿಯ ಸಹಾಧ್ಯಕ್ಷರೂ, ಮಾನವ ಸಮಗ್ರ ಅಭಿವೃದ್ಧಿ ಉತ್ತೇಜನಕ್ಕಾಗಿ ಸ್ಥಾಪಿತವಾದ ವ್ಯಾಟಿಕನ್‌ ವಿಭಾಗದ ಹಿರಿಯ ಸಲಹೆಗಾರರೂ ಆದ ಮಾನ್ಯ ಮೊನ್ಸಿನಿಯರ್ ರಾಬರ್ಟ್ ವಿಟಿಲ್ಲೊ ಅವರು ವ್ಯಾಟಿಕನ್‌ ಸುದ್ದಿ ಸಂಸ್ಥೆಗೆ  ಮಾತನಾಡಿ, ಈ ಸಂಕಷ್ಟಗಳು ಮಕ್ಕಳ ಮೇಲೆ ಬೀರುತ್ತಿರುವ “ಅಪಾರ ಪರಿಣಾಮ”ವನ್ನು ವಿವರಿಸಿದರು.

ಹೆಚ್ಚುತ್ತಿರುವ ಸಂಖ್ಯೆಯ ಮಕ್ಕಳು ಮತ್ತು ಕುಟುಂಬಗಳಿಗೆ ಶಿಕ್ಷಣ, ಮೂಲ ಆರೋಗ್ಯಸೇವೆ ಅಥವಾ ತಡೆಗಟ್ಟಬಹುದಾದ ರೋಗಗಳ ವಿರುದ್ಧ ಲಸಿಕೆಗಳ ಪ್ರವೇಶವೂ ಇಲ್ಲ ಎಂದು ಅವರು ಗಮನಿಸಿದರು.

“ಇವುಗಳು ಇಂದು ಎದುರಿಸುತ್ತಿರುವ ವಾಸ್ತವಿಕ ಪರಿಸ್ಥಿತಿಗಳು. ಧರ್ಮಸಭೆ (Church) ಮುಂಚೂಣಿ ಸೇವೆಗಳಲ್ಲಿ ತೊಡಗಿದೆ. ಆದ್ದರಿಂದ, ಈ ಸೇವೆಗಳನ್ನು ಮುಂದುವರಿಸಲು ಅಗತ್ಯ ಸಂಪನ್ಮೂಲಗಳನ್ನು ಒದಗಿಸುವುದಷ್ಟೇ ಅಲ್ಲ, ಈ ಸಮಸ್ಯೆಗಳ ಬಗ್ಗೆ ಜಗತ್ತಿಗೆ ಅರಿವು ಮೂಡಿಸುವ ಮಾರ್ಗಗಳನ್ನು ಕೂಡ ನಾವು ಹುಡುಕಬೇಕು,” ಎಂದರು.

ಈ ಉಪಕ್ರಮವನ್ನು ಹಲವು ವ್ಯಾಟಿಕನ್‌ ಕಚೇರಿಗಳು ಹಾಗೂ ಅಂತರರಾಷ್ಟ್ರೀಯ ಧಾರ್ಮಿಕ ನಾಯಕತ್ವ ಸಂಸ್ಥೆಗಳು ಸಹಪ್ರಾಯೋಜಿಸಿದ್ದವು. ಚರ್ಚೆಗಳು ಸಮಾಲೋಚನಾತ್ಮಕ (ಸಿನೋಡಲ್) ದೃಷ್ಟಿಕೋನವನ್ನು ಆಧರಿಸಿ—ಆಲಿಸುವಿಕೆ, ಹಂಚಿಕೊಂಡ ಹೊಣೆಗಾರಿಕೆ ಹಾಗೂ ಸಮನ್ವಯಿತ ಕ್ರಮ ನಡೆಸಲಾಯಿತು.

ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಪ್ರಮುಖ ಸಂಸ್ಥೆಗಳು:

ಮಾನವ ಸಮಗ್ರ ಅಭಿವೃದ್ಧಿ ಉತ್ತೇಜನಕ್ಕಾಗಿ ಸ್ಥಾಪಿತವಾದ ವ್ಯಾಟಿಕನ್‌ ವಿಭಾಗ, ಪಾಂಟಿಫಿಕಲ್ ಅಕಾಡೆಮಿ ಫಾರ್ ಲೈಫ್, ಅಪ್ರಾಪ್ತರ ರಕ್ಷಣಾ ಪಾಂಟಿಫಿಕಲ್ ಆಯೋಗ,, ಅಂತಾರಾಷ್ಟ್ರೀಯ ಮಹಿಳಾ ಧಾರ್ಮಿಕ ಮೇಲ್ವಿಚಾರಕರ ಸಂಘ (UISG), ಪುರುಷ ಧಾರ್ಮಿಕ ಮೇಲ್ವಿಚಾರಕರ ಸಂಘ (USG) ಧರ್ಮಗುರುಗಳು, ಧಾರ್ಮಿಕ ಸಮುದಾಯಗಳು ಹಾಗೂ ಮಕ್ಕಳ ತಜ್ಞರು.

ಭಾಗವಹಿಸಿದವರು “ಸಂಪೂರ್ಣ-ಮಗು, ಸಂಪೂರ್ಣ-ಪರಿಸರ” ದೃಷ್ಟಿಕೋನವನ್ನು ಅಂಗೀಕರಿಸುವ ಅಗತ್ಯವಿದೆ ಎಂದು ಒಪ್ಪಿಕೊಂಡರು—ಇದರಲ್ಲಿ ಕುಟುಂಬದ ಆರೈಕೆ, ಸಮುದಾಯ ಬೆಂಬಲ ಮತ್ತು ಸಾರ್ವಜನಿಕ ನೀತಿಗಳು ಒಂದೇ ಚೌಕಟ್ಟಿನಲ್ಲಿ ಸಂಯೋಜಿತವಾಗಿರಬೇಕು.

ಈ ಪ್ರಕ್ರಿಯೆಯ ಅಂತಿಮ ಗುರಿ: ಸಾರ್ವಜನಿಕ ಕಥೋಲಿಕ ಕ್ರಿಯಾ ಯೋಜನೆ ರೂಪಿಸುವುದು. ಇದರ ಮೂಲಕ ಪ್ರತಿಯೊಬ್ಬ ಮಗುವೂ ಸುರಕ್ಷಿತ, ಸ್ಥಿರ ಮತ್ತು ಪೋಷಕ ಕುಟುಂಬ ವಾತಾವರಣದಲ್ಲಿ ಬೆಳೆದು, ಸಮನ್ವಯಿತ ಆರೈಕೆ ವ್ಯವಸ್ಥೆಗಳ ಬೆಂಬಲವನ್ನು ಪಡೆಯುವಂತೆ ಮಾಡುವುದು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

05 ಫೆಬ್ರವರಿ 2026, 11:24