ಹುಡುಕಿ

MYANMAR-CONFLICT-AIRSTRIKE MYANMAR-CONFLICT-AIRSTRIKE  (AFP or licensors)

ಪ್ರಧಾನ ಗುರು ಚಾರ್ಲ್ಸ್ ಮೌಂಗ್ ಬೋ: “ಮಯನ್ಮಾರನ್ನು ಜಗತ್ತು ಮರೆತಿದೆ, ಆದರೆ ದೇವರು ಮರೆತಿಲ್ಲ”

ಮಯನ್ಮಾರ್ ದೇಶವು ಅಂತ್ಯ ಕಾಣದ ಗೃಹಯುದ್ಧದಿಂದ ತತ್ತರಿಸುತ್ತಿದೆ ಎಂದು ಪ್ರಧಾನ ಗುರು ಚಾರ್ಲ್ಸ್ ಮೌಂಗ್ ಬೋ ತಿಳಿಸಿದ್ದಾರೆ. ಆರ್ಥಿಕ, ಸಾಮಾಜಿಕ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಗಂಭೀರ ಸಂಕಷ್ಟ ಉಂಟಾಗಿದೆ ಎಂದು ಅವರು ಹೇಳಿದ್ದಾರೆ. ಮೂರು ದಶಲಕ್ಷಕ್ಕಿಂತ ಹೆಚ್ಚು ಜನರು ಸ್ಥಳಚ್ಯುತರಾಗಿದ್ದು, ಅನೇಕ ಯುವಜನರು ವಿದೇಶಗಳಿಗೆ ಪಲಾಯನಗೊಳ್ಳುತ್ತಿದ್ದಾರೆ.“ಮಯನ್ಮಾರನ್ನು ಜಗತ್ತು ಮರೆತಿರಬಹುದು, ಆದರೆ ದೇವರು ಮರೆತಿಲ್ಲ,” ಎಂದು ಪ್ರಧಾನ ಗುರುಗಳು ತಿಳಿಸಿದ್ದಾರೆ.

ಲೇಖಕರು: ದೆಬೋರ ಕ್ಯಾಸ್ತೆಲ್ಲಾನೋ ಲುಬೋವ್

ಯಾಂಗೋನ್ ಮಹಾಧಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪ್ರಧಾನ ಗುರು ಚಾರ್ಲ್ಸ್ ಮೌಂಗ್ ಬೋ ಅವರು, “ಮಯನ್ಮಾರ್ ದೇಶವು ‘ಬಹುಮುಖ ಸಂಕಷ್ಟ’ವನ್ನು ಎದುರಿಸುತ್ತಿದೆ” ಎಂದು ಪುನಃ ಪುನಃ ಎಚ್ಚರಿಕೆ ನೀಡಿದ್ದಾರೆ.

ಆರ್ಥಿಕ ಸಂಕಷ್ಟದಿಂದ ಬೆಲೆ ಏರಿಕೆ ಉಂಟಾಗಿದೆ; ಉದ್ಯೋಗಾವಕಾಶಗಳ ನಷ್ಟದಿಂದ ಜನರು ಸಂಕಟಕ್ಕೆ ಸಿಲುಕಿದ್ದಾರೆ; ಸಾಮಾಜಿಕ ಅಸ್ಥಿರತೆಯಿಂದ 35 ಲಕ್ಷಕ್ಕಿಂತ ಹೆಚ್ಚು ಜನರು ಸ್ಥಳಚ್ಯುತರಾಗಿದ್ದಾರೆ ಹಾಗೂ ಅನೇಕ ಯುವಜನರು ವಿದೇಶಗಳಿಗೆ ಪಲಾಯನಗೊಳ್ಳುತ್ತಿದ್ದಾರೆ; ಮೂಲಭೂತ ಆರೋಗ್ಯ ಸೇವೆಗಳು ಕುಸಿದಿವೆ; ಐದು ವರ್ಷಗಳ ವಿದ್ಯಾಭ್ಯಾಸವನ್ನು ಕಳೆದುಕೊಂಡ ಪೀಳಿಗೆಗೆ ಎದುರಿರುವ ಶಿಕ್ಷಣ ಸಂಕಷ್ಟವೂ ಗಂಭೀರವಾಗಿದೆ ಎಂದು   ವಿವರಿಸಿದ್ದಾರೆ.

ವ್ಯಾಟಿಕನ್ ಮಾಧ್ಯಮಗಳೊಂದಿಗೆ ದೇಶದ ಗಂಭೀರ ಪರಿಸ್ಥಿತಿಯನ್ನು ಹಂಚಿಕೊಂಡ ಪ್ರಧಾನ ಗುರುಗಳು, ಸೈನಿಕ ದಂಗೆಯ ಐದು ವರ್ಷಗಳ ಬಳಿಕ ಮಯನ್ಮಾರ್ ಭಯ, ದೌರ್ಬಲ್ಯ ಮತ್ತು ಗಾಢ ಅನಿಶ್ಚಿತತೆಯಿಂದ ಗುರುತಿಸಲ್ಪಟ್ಟ ರಾಷ್ಟ್ರವಾಗಿದೆ, ವಿಶೇಷವಾಗಿ ಯುವಜನರಲ್ಲಿ ಆತಂಕ ಹೆಚ್ಚಾಗಿದೆ. ಆದಾಗ್ಯೂ, “ಭರವಸೆ ಸತ್ತಿಲ್ಲ,” ಆದರೆ ಅದು “ಶಿಲುಬೆಗೆ ಹಾಕಲ್ಪಟ್ಟಿದೆ” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯುವಜನರ ಮೇಲಾಗಿರುವ ಪರಿಣಾಮ

ಪ್ರಧಾನ ಗುರು ಚಾರ್ಲ್ಸ್ ಮೌಂಗ್ ಬೋ ಅವರು, ದೇಶದ ಜನಸಾಮಾನ್ಯರ ಮನೋಭಾವ ಸಂಕೀರ್ಣವಾಗಿದೆ ಎಂದು ತಿಳಿಸಿದ್ದಾರೆ. ವ್ಯಕ್ತಿಗಳ ಅನುಭವ, ಭೌಗೋಳಿಕ ಪ್ರದೇಶ ಹಾಗೂ ಹಿಂಸಾಚಾರದ ಸಮೀಪತೆ ಆಧರಿಸಿ ಪರಿಸ್ಥಿತಿ ಬದಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

ವಿಶೇಷವಾಗಿ ಯುವಜನರ ದೈನಂದಿನ ಜೀವನ ಅಸ್ಥಿರತೆ, ಮಾನಸಿಕ ಒತ್ತಡ ಮತ್ತು ಭವಿಷ್ಯದ ಮೇಲಿನ ನಂಬಿಕೆ ಕುಸಿತದಿಂದ ಗುರುತಿಸಲಾಗಿದೆ ಎಂದು ಪ್ರಧಾನ ಗುರು ಹೇಳಿದ್ದಾರೆ.

“ಯುವಜನರು ತಮ್ಮ ವೈಯಕ್ತಿಕ ಸುರಕ್ಷತೆ ಬಗ್ಗೆ ಬಹುತೇಕ ನಿರಂತರ ಭಯದಲ್ಲೇ ಬದುಕುತ್ತಿದ್ದಾರೆ, ಮುಂದುವರಿಯುತ್ತಿರುವ ಸಂಘರ್ಷ, ವ್ಯಾಪಕ ಹಿಂಸಾಚಾರ, ಆರ್ಥಿಕ ಅಸ್ಥಿರತೆ ಹಾಗೂ ಬಲವಂತದ ಸೇನಾ ನೇಮಕಾತಿಯ ಭೀತಿ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.”

ಈ ದೀರ್ಘಕಾಲದ ಅಸ್ಥಿರತೆ ದೇಶದ ಅನೇಕ ಭಾಗಗಳಲ್ಲಿ ಯುವಜನರಲ್ಲಿ ಆತಂಕ, ಒತ್ತಡ ಹಾಗೂ ಮಾನಸಿಕ ಕಳವಳವನ್ನು ಹೆಚ್ಚಿಸಿದೆ ಎಂದು ಪ್ರಧಾನ ಗುರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ, ಉದ್ಯೋಗ ಮತ್ತು ಸಾಮಾನ್ಯ ಜೀವನದ ನಷ್ಟ

ಪ್ರಧಾನ ಗುರು ಚಾರ್ಲ್ಸ್ ಮೌಂಗ್ ಬೋ ಅವರು, ದೀರ್ಘಕಾಲದ ಅಶಾಂತಿ ದೇಶದ ಯುವಜನರ ಶಿಕ್ಷಣ, ಉದ್ಯೋಗಾವಕಾಶಗಳು ಹಾಗೂ ಸಾಮಾನ್ಯ ಸಾಮಾಜಿಕ ಜೀವನವನ್ನು ಹಾಳುಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ನಿರಂತರ ವ್ಯತ್ಯಯಗಳು ಭವಿಷ್ಯದ ನೆಲೆಯನ್ನು ದುರ್ಬಲಗೊಳಿಸಿವೆ ಎಂದು ಅವರು ತಿಳಿಸಿದ್ದಾರೆ.

ಅನೇಕ ಯುವಜನರು ನಿರಾಶೆ, ದುಃಖ ಹಾಗೂ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಸೈನಿಕ ಆಡಳಿತದ ನಂತರದ ವರ್ಷಗಳಲ್ಲಿ ಉದ್ರೇಕ ಹಾಗೂ ಭಾವನಾತ್ಮಕ ಒತ್ತಡವು ಗಣನೀಯವಾಗಿ ಹೆಚ್ಚಾಗಿದೆ ಎಂಬ ಸಮೀಕ್ಷೆಗಳನ್ನೂ ಅವರು ಉಲ್ಲೇಖಿಸಿದ್ದಾರೆ. “ಬಹಳ ಕಡಿಮೆ ಮಂದಿ ಮಾತ್ರ ಈಗಲೂ ಸಾಮಾನ್ಯ ಜೀವನದ ಅನುಭವವನ್ನು ಹೊಂದಿದ್ದಾರೆ,” ಎಂದು ಅವರು ತಿಳಿಸಿದ್ದಾರೆ. ಹೆಚ್ಚುತ್ತಿರುವ ಸಂಖ್ಯೆಯಲ್ಲಿ ಯುವಜನರು ಮಯನ್ಮಾರ್ ಈಗಾಗಲೇ ದೇಶವನ್ನು ತೊರೆದಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಆದರೆ, ಮಯನ್ಮಾರ್ ಯುವಜನರನ್ನು ಕೇವಲ ಬಲಿಯಾಗಿರುವವರಂತೆ ಮಾತ್ರ ನೋಡಬಾರದು ಎಂದು ಪ್ರಧಾನ ಗುರು ಎಚ್ಚರಿಸಿದ್ದಾರೆ. ಕಷ್ಟಗಳ ನಡುವೆಯೂ ಅವರಲ್ಲಿ ದೃಢತೆ ಹಾಗೂ ಸಂಕಲ್ಪ ಕಾಣಿಸುತ್ತಿದೆ. ಕೆಲವು ಯುವಜನರು ಇನ್ನೂ ಉತ್ತಮ ಭವಿಷ್ಯದ ಸಾಧ್ಯತೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದಾರೆ. ಅತ್ಯಂತ ಕಠಿಣ ಪರಿಸ್ಥಿತಿಗಳ ನಡುವೆಯೂ ಅವರು ಶಿಕ್ಷಣದಲ್ಲಿ ಹಾಗೂ ಡಿಜಿಟಲ್ ತಂತ್ರಜ್ಞಾನ ಸೇರಿದಂತೆ ಹೊಸ ಕೌಶಲ್ಯಗಳನ್ನು ಕಲಿಯುವುದರಲ್ಲಿ ತೊಡಗಿಸಿಕೊಂಡು, ತಮ್ಮದೇ ಅವಕಾಶಗಳನ್ನು ನಿರ್ಮಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಡಿಜಿಟಲ್ ಒತ್ತಡಗಳು ಮತ್ತು ರಾಜಕೀಯ ಸವಾಲುಗಳು

ಡಿಜಿಟಲ್ ಜೀವನವು ಲಾಭ–ನಷ್ಟಗಳೆರಡನ್ನೂ ಹೊಂದಿದೆ ಎಂದು ಪ್ರಧಾನ ಗುರು ಬೋ ತಿಳಿಸಿದ್ದಾರೆ. ಆನ್‌ಲೈನ್ ವೇದಿಕೆಗಳು ಸಂಪರ್ಕ, ಕಲಿಕೆ ಮತ್ತು ಒಗ್ಗಟ್ಟಿಗೆ ಅವಕಾಶ ನೀಡುತ್ತಿದ್ದರೂ, ಅದೇ ಸಮಯದಲ್ಲಿ ದ್ವೇಷ ಭಾಷಣ, ಅವಹೇಳನ ಹಾಗೂ ತಪ್ಪುಮಾಹಿತಿಗೆ ಯುವಜನರ ದಿಕ್ಕು ತಪ್ಪಿಸುತ್ತಿವೆ ಎಂದು ಅವರು ಹೇಳಿದ್ದಾರೆ. ಇದರಿಂದ ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಏಕತೆ ಮತ್ತಷ್ಟು ದುರ್ಬಲಗೊಳ್ಳುತ್ತಿದೆ ಎಂದು ಅವರು ಸೂಚಿಸಿದ್ದಾರೆ.

ಇತ್ತೀಚಿನ ಚುನಾವಣೆಯಲ್ಲಿ ಯುವ ಮತದಾರರ ಪಾಲ್ಗೊಳ್ಳುವಿಕೆ ಕಡಿಮೆಯಾಗಿದೆ ಎಂಬುದನ್ನೂ ಪ್ರಧಾನ ಗುರುಗಳು ಗಮನಿಸಿದ್ದಾರೆ. ಅನೇಕ ಯುವಜನರು ರಾಜಕೀಯವಾಗಿ ನಿರಾಶರಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಶಿಲುಬೆಗೆ ಹಾಕಲ್ಪಟ್ಟ ಭರವಸೆ’

ಈ ಪರಿಸ್ಥಿತಿಯ ನಡುವೆಯೂ ಭರವಸೆ ಇನ್ನೂ ಜೀವಂತವಾಗಿದೆ ಎಂದು ಪ್ರಧಾನ ಗುರು ಬೋ ಒತ್ತಿ ಹೇಳಿದ್ದಾರೆ.

“ಇದು ಸರಳವಾದ ಅಥವಾ ಅಜ್ಞಾನಿ ಆಶಾವಾದವಲ್ಲ,” ಎಂದು ಅವರು ತಿಳಿಸಿದ್ದಾರೆ. “ಇದು ಶಿಲುಬೆ ಮತ್ತು ಪುನರುತ್ಥಾನದ ಅನುಭವದಿಂದ ಹುಟ್ಟಿದ ಕ್ರೈಸ್ತ ಭರವಸೆ,ಈ ಭರವಸೆ ಪರಿಸ್ಥಿತಿಗಳ ಮೇಲೆ ಅಥವಾ ರಾಜಕೀಯ ಲೆಕ್ಕಾಚಾರಗಳ ಮೇಲೆ ಆಧಾರವಾಗಿಲ್ಲ ಎಂದು ಅವರು ವಿವರಿಸಿದ್ದಾರೆ.

“ಮಯನ್ಮಾರ್ ಜನರು ಶಾಂತಿ, ಉದ್ಯೋಗ, ಸ್ಥಿರತೆ ಮತ್ತು ಅಂತಾರಾಷ್ಟ್ರೀಯ ಗಮನ ಸೇರಿದಂತೆ ಅನೇಕ ಭದ್ರತೆಗಳನ್ನು ಕಳೆದುಕೊಂಡಿದ್ದಾರೆ, ಆದರೆ ದೇವರ ಸಾನ್ನಿಧ್ಯವನ್ನು ಅವರು ಕಳೆದುಕೊಂಡಿಲ್ಲ.”

ಆ ಸಾನ್ನಿಧ್ಯವು ಸ್ಥಳಾಂತರಿತ ಹಳ್ಳಿಗಳಲ್ಲಿ, ಒಳನಾಡ ಶರಣಾರ್ಥಿ ಶಿಬಿರಗಳಲ್ಲಿ, ಹಾಗೂ ಸಂಕಟದ ನಡುವೆ ಸಹ ಸೇವೆಯನ್ನು ಮುಂದುವರಿಸುತ್ತಿರುವ ಕುಟುಂಬಗಳು, ತಾಯಂದಿರು, ಧರ್ಮೋಪದೇಶಕರು ಮತ್ತು ಧಾರ್ಮಿಕರ ಮೌನ ಸಹನೆಯಲ್ಲಿ ಗೋಚರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕುಟುಂಬಗಳು ಹೊಂದಿರುವ ಸ್ವಲ್ಪವನ್ನೂ ಹಂಚಿಕೊಳ್ಳುತ್ತಿವೆ

“ಕುಟುಂಬಗಳು ತಮ್ಮ ಬಳಿ ಇರುವ ಸ್ವಲ್ಪವನ್ನೂ ಪರಸ್ಪರ ಹಂಚಿಕೊಳ್ಳುತ್ತಿವೆ. ಇನ್ನೂ ಒಟ್ಟಾಗಿ ಪ್ರಾರ್ಥಿಸುತ್ತಿದ್ದಾರೆ,” ಎಂದು ಪ್ರಧಾನ ಗುರು ಬೋ ತಿಳಿಸಿದ್ದಾರೆ.

ಯುವಜನರು ಕೂಡ ತಮ್ಮ ಕನಸುಗಳನ್ನು ತ್ಯಜಿಸದೆ, ಸಮುದಾಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಭವಿಷ್ಯ ಭಿನ್ನವಾಗಿರಬಹುದು ಎಂಬ ನಂಬಿಕೆಯನ್ನು ಅವರು ಕೈಬಿಟ್ಟಿಲ್ಲ. ಈ ಕಾರ್ಯಗಳು ಅತಿ ಸಣ್ಣದಾಗಿ ಕಾಣಬಹುದು, ಆದರೆ ಅವು ಸಾಸಿವೆ ಕಾಳಿನಂತಹ “ಸುವಾರ್ತೆಯ ಸಂಕೇತಗಳು” ಎಂದು ಅವರು ವಿವರಿಸಿದ್ದಾರೆ.

ದ್ವೇಷವನ್ನು ತಳ್ಳಿಹಾಕಿ, ಹಿಂಸೆಯನ್ನು ನಿರಾಕರಿಸಿ, ಸಮಾಧಾನ ಮತ್ತು ಮಾನವ ಗೌರವದ ಭಾಷೆಯನ್ನು ಮುಂದುವರಿಸುವ ಮೂಲಕ ಧರ್ಮಸಭೆ “ಭರವಸೆಯ ಸಂಸ್ಕಾರವಾಗಿ” ಕಾರ್ಯನಿರ್ವಹಿಸಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನ ಗುರು ಬೋ ತಿಳಿಸಿದ್ದಾರೆ.

“ಲೋಕ ನಿರ್ಲಕ್ಷ್ಯ ತೋರಿಸುತ್ತಿರುವಂತೆ ಕಾಣಿಸಿದರೂ, ಹಿಂಸೆಗೆ ಅಂತಿಮ ಜಯ ಇರುವುದಿಲ್ಲ ಎಂಬ ನಂಬಿಕೆಯಲ್ಲಿ ನಾವು ದೃಢವಾಗಿದ್ದೇವೆ” ಎಂದು ಅವರು ಹೇಳಿದ್ದಾರೆ.

ಮರೆಯಲ್ಪಟ್ಟ ಭಾವನೆ — ದೇವರ ಸಮೀಪತೆಯ ನಂಬಿಕೆ

ಮಯನ್ಮಾರ್‌ನ ಜನರಲ್ಲಿ “ಜಗತ್ತು ನಮ್ಮನ್ನು ಮರೆತಿದೆ” ಎಂಬ ಭಾವನೆ ಹೆಚ್ಚುತ್ತಿದೆ ಎಂದು ಪ್ರಧಾನ ಗುರು  ಬೋ ಹೇಳಿದ್ದಾರೆ. “ವರ್ಷಗಳ ಸಂಕಷ್ಟಗಳು ಕಳೆದಿವೆ, ಆದರೆ ಸ್ಪಷ್ಟವಾದ ಬದಲಾವಣೆ ಕಾಣಿಸುತ್ತಿಲ್ಲ, ತೀವ್ರ ಹಿಂಸಾಚಾರದ ಘಟನೆಗಳು ನಡೆದಾಗ ಮಾತ್ರ ಜಾಗತಿಕ ಗಮನ ಕ್ಷಣಿಕವಾಗಿ ತಿರುಗುತ್ತದೆ; ನಂತರ ಮತ್ತೆ ಮೌನ ಆವರಿಸುತ್ತದೆ ಎಂದು ಅವರು ಸೂಚಿಸಿದ್ದಾರೆ.

ಪ್ರಭಾವಶಾಲಿ ರಾಷ್ಟ್ರಗಳ ಮೌನ, ನಿರ್ಬಂಧಗಳಿಂದ ಉಂಟಾದ ಅಂತರ, ಮತ್ತು ಕಡಿಮೆಯಾದ ಅಂತರರಾಷ್ಟ್ರೀಯ ತೊಡಗಿಸಿಕೊಳ್ಳುವಿಕೆ — ಇವು ಸಾಮಾನ್ಯ ನಾಗರಿಕರಲ್ಲಿ ತಾವು ಒಂಟಿಯಾಗಿದ್ದೇವೆ ಎಂಬ ಭಾವನೆಯನ್ನು ಬಿತ್ತಿವೆ ಎಂದು ಅವರು ವಿವರಿಸಿದ್ದಾರೆ.

ಆದರೆ ಲೋಕದಿಂದ ಮರೆಯಲ್ಪಟ್ಟ ಭಾವನೆ, ದೇವರಿಂದ ತ್ಯಜಿಸಲ್ಪಟ್ಟಿರುವುದಕ್ಕೆ ಸಮಾನವಲ್ಲ ಎಂದು ಪ್ರಧಾನ ಗುರುಗಳು ಒತ್ತಿ ಹೇಳಿದ್ದಾರೆ. “ಮಯನ್ಮಾರ್‌ ಜಗತ್ತಿನ ಗಮನದಿಂದ ದೂರವಾಗಿರಬಹುದು, ಆದರೆ ಅದು ದೇವರ ಯೋಜನೆಯಿಂದ ಎಂದಿಗೂ ಹೊರಗುಳಿದಿಲ್ಲ.”

ಸಂಧಾನದ ದಾರಿಯಲ್ಲಿ ಧರ್ಮಸಭೆ

ಮಯನ್ಮಾರ್‌ನ ಧರ್ಮಸಭೆ ವಹಿಸುತ್ತಿರುವ ಆಧ್ಯಾತ್ಮಿಕ ಹಾಗೂ ಕಾರ್ಯಾತ್ಮಕ ಪಾತ್ರವನ್ನು ಪ್ರಧಾನ ಗುರು ಬೋ ವಿವರಿಸಿದ್ದಾರೆ.

ಹಿಂಸಾಚಾರ ಅಂತ್ಯವಾಗಬೇಕು ಹಾಗೂ ನ್ಯಾಯ, ಕ್ಷಮೆ ಮತ್ತು ಕರುಣೆಯ ಮೇಲೆ ನೆಲೆಯಾದ ಸಂಧಾನ ಪ್ರಕ್ರಿಯೆ ಆರಂಭವಾಗಬೇಕು ಎಂಬುದನ್ನು ಕಥೋಲಿಕ ನಾಯಕರು ನಿರಂತರವಾಗಿ ಒತ್ತಿಹೇಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. “ಶಾಂತಿ ಎಂದರೆ ಕೇವಲ ಯುದ್ಧದ ಅಭಾವವಲ್ಲ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಿಭಜನೆಯ ನಡುವೆಯೂ ಸಹಬಾಳ್ವೆಗೆ ಸಾಕ್ಷಿಯಂತೆ ಕ್ರೈಸ್ತರು, ಬೌದ್ಧರು, ಮುಸ್ಲಿಮರು ಮತ್ತು ಹಿಂದೂಗಳು ಒಟ್ಟಾಗಿ ಶಾಂತಿಗಾಗಿ ಪ್ರಾರ್ಥಿಸುವ ಅಂತರಧರ್ಮ ಉಪಕ್ರಮಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.

ಧಾರ್ಮಿಕ ಸಂದೇಶಗಳು ಗೆಲುವಿನ ರಾಜಕಾರಣಕ್ಕಿಂತ ಸಹಾನುಭೂತಿ ಮತ್ತು ಆಲಿಸುವ ಸಂಸ್ಕೃತಿಯನ್ನು ಉತ್ತೇಜಿಸುತ್ತಿವೆ ಎಂದು ಪ್ರಧಾನ ಗುರುಗಳು ವಿವರಿಸಿದ್ದಾರೆ. 

ಅಂತರರಾಷ್ಟ್ರೀಯ ಸಹಭಾಗಿಗಳ ಬೆಂಬಲದೊಂದಿಗೆ ಮಯನ್ಮಾರ್ ಧರ್ಮಸಭೆಗಳ ಮಂಡಳಿ ಮುಂತಾದ ಸಾರ್ವತ್ರಿಕ ಸಂಸ್ಥೆಗಳು ಮತ್ತು ವೇದಿಕೆಗಳು ಏಕತೆ, ಮಾನವ ಘನತೆ ಮತ್ತು ಸಂವಾದವನ್ನು ಪ್ರೋತ್ಸಾಹಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ. ಜೊತೆಗೆ, ಜನಮಟ್ಟದ ಉಪಕ್ರಮಗಳು ಸ್ಥಳಾಂತರಿತರು ಮತ್ತು ಅತ್ಯಂತ ದುರ್ಬಲರ ರಕ್ಷಣೆಗೆ ಆದ್ಯತೆ ನೀಡುತ್ತಿವೆ ಎಂದು ಅವರು ಹೇಳಿದ್ದಾರೆ.

“ನಂಬಿಗಸ್ತ ದೇವರು”

ಮಯನ್ಮಾರ್ ವಿಶ್ವ ಸಮುದಾಯದ ಗಮನದಿಂದ ದೂರವಾದಂತಾಗಿದ್ದರೂ, ಪವಿತ್ರ ಪೀಠ ದೇಶವನ್ನು ಮರೆತಿಲ್ಲವೆಂದು ಪ್ರಧಾನ ಗುರುಗಳು ಸ್ಪಷ್ಟಪಡಿಸಿದರು. ಪೂಜ್ಯ ಜಗದ್ಗುರುಗಳಿಗೆ ಮಯನ್ಮಾರಿನ ಸ್ಥಿತಿ ಕುರಿತು ಆಳವಾದ ಕಾಳಜಿ ಇದೆ ಎಂದು ಅವರು ಹೇಳಿದರು. ಶಾಂತಿ, ಸಂವಾದ, ನಾಗರಿಕರ ರಕ್ಷಣೆ ಹಾಗೂ ಮಾನವೀಯ ನೆರವಿನ ಪ್ರವೇಶಕ್ಕಾಗಿ ಪೂಜ್ಯ ಜಗದ್ಗುರುಗಳು ಸತತವಾಗಿ ಮನವಿ ಮಾಡಿರುವುದನ್ನೂ ಅವರು ಉಲ್ಲೇಖಿಸಿದರು. ರಾಜಕೀಯ ಪರಿಹಾರಗಳು ಇನ್ನೂ ಸಂಕೀರ್ಣವಾಗಿದ್ದರೂ, ರೋಮ್‌ನಿಂದ ನಿರಂತರ ಪ್ರಾರ್ಥನೆ ಮತ್ತು ಗಮನ ಮಯನ್ಮಾರಿನತ್ತ ಹರಿಯುತ್ತಿದೆ ಎಂದು ಹೇಳಿದರು.

ಕೊನೆಯಲ್ಲಿ, ಪ್ರಧಾನ ಗುರು ಬೋ ವಿಶ್ವಾಸದಲ್ಲೂ ನಿರೀಕ್ಷೆಯಲ್ಲೂ ಸ್ಥಿರವಾಗಿರಲು ಕರೆ ನೀಡಿದರು. “ನಿರೀಕ್ಷೆಯನ್ನು ಕಳೆದುಕೊಳ್ಳುವುದು ಅಂದರೆ ಭವಿಷ್ಯವನ್ನು ಹಿಂಸೆಗೆ ಒಪ್ಪಿಸುವಂತಾಗಿದೆ,” ಎಂದರು. 

“ಮಯನ್ಮಾರ್ ಪರಿಸ್ಥಿತಿ ಸುಧಾರಿಸುವುದು ಎಂಬ ನಿರೀಕ್ಷೆಯನ್ನು ಕಳೆದುಕೊಂಡಿಲ್ಲ, “ಪರಿಸ್ಥಿತಿ ಸುಗಮವಾಗಿದೆ ಎಂಬ ಭ್ರಮೆಯಿಂದಲ್ಲ, ಬದಲಾಗಿ ದೇವರು ವಿಶ್ವಾಸಾರ್ಹನೆಂಬ ಅಚಲ ನಂಬಿಕೆಯಿಂದ ನಾವು ನಿರೀಕ್ಷಿಸುತ್ತೇವೆ.”

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

12 ಫೆಬ್ರವರಿ 2026, 14:33