ಹುಡುಕಿ

2026.02.04 Fr. Francesco Palliola 2026.02.04 Fr. Francesco Palliola 

ರಕ್ತಸಾಕ್ಷಿಯಾದ ವಂ. ಗುರು ಫ್ರಾನ್ಚೆಸ್ಕೊ ಪಲ್ಲಿಯೋಲ ಅವರ ವಾರ್ಷಿಕ ಸ್ಮರಣಾರ್ಥ ಬಲಿಪೂಜೆ

ಫಿಲಿಪ್ಪೀನ್ಸ್‌ನ ದಿಪೊಲೋಗ್ ಧರ್ಮಕ್ಷೇತ್ರವು ರಕ್ತಸಾಕ್ಷಿ ವಂ. ಗುರು ಫ್ರಾನ್ಚೆಸ್ಕೊ ಪಲ್ಲಿಯೋಲ ಅವರ 378ನೇ ವಾರ್ಷಿಕೋತ್ಸವವನ್ನು ಪವಿತ್ರ ಬಲಿಪೂಜೆಯೊಂದಿಗೆ ಸ್ಮರಿಸಿತು. ಈ ಸಂದರ್ಭದಲ್ಲಿ ಅವರ ಸಂತಪದವಿ ಘೋಷಣೆಯ ಪ್ರಕ್ರಿಯೆಯಲ್ಲಿ ಕಂಡುಬಂದಿರುವ ಸಕಾರಾತ್ಮಕ ಬೆಳವಣಿಗೆಗಳನ್ನೂ ಧರ್ಮಕ್ಷೇತ್ರ ಸಂತೋಷದಿಂದ ಸ್ವಾಗತಿಸಿತು.

ಲೇಖಕರು: ವಂ. ಗುರು ಮಾರ್ಕ್ ರಾಬಿನ್ ದೆಸ್ತೂರಾ, RCJ

ಫಿಲಿಪ್ಪೀನ್ಸ್‌ನ ದಿಪೊಲೋಗ್ ಧರ್ಮಕ್ಷೇತ್ರವು ವಂ. ಗುರು ಫ್ರಾನ್ಚೆಸ್ಕೊ ಪಲ್ಲಿಯೋಲ ಅವರ ರಕ್ತಸಾಕ್ಷಿಯ 378ನೇ ವಾರ್ಷಿಕೋತ್ಸವವನ್ನು ಗೌರವಪೂರ್ವಕವಾಗಿ ಸ್ಮರಿಸಿತು. 1648ರ ಜನವರಿ 29ರಂದು, 35ನೇ ವಯಸ್ಸಿನಲ್ಲಿ ಅವರು ಹುತಾತ್ಮರಾದ ಜೋಸೆ ದಾಲ್ಮನ್ (ಹಳೆಯ ಹೆಸರು ಪೊನೋಟ್) ಪಟ್ಟಣದಲ್ಲಿ ವಿಶೇಷ ಪವಿತ್ರ ಬಲಿಪೂಜೆ ನಡೆಯಿತು.

ಈ ಬಲಿಪೂಜೆಗೆ ಪೂಜ್ಯ ಧರ್ಮಾಧ್ಯಕ್ಷ ಸೆವೆರೊ ಸಿ. ಕೇರ್ಮಾರೆ ಅವರು ಅಧ್ಯಕ್ಷತೆ ವಹಿಸಿದ್ದರು. ಜಾಂಬೋಆಂಗಾ ಮತ್ತು ಕಾಗಯಾನ್ ದೆ ಓರೊದ ಜೆಸೂಯಿಟ್ ಗುರುಗಳು ಹಾಗೂ ದಿಪೊಲೋಗ್ ಧರ್ಮಕ್ಷೇತ್ರದ ಗುರುಗಳು ಸಹ  ಭಾಗವಹಿಸಿದ್ದರು.

ಈ ಆರಾಧನಾ ಸಮಾರಂಭವು ಫಾ. ಪಲ್ಲಿಯೋಲ ಅವರ ಶಾಶ್ವತ ಪರಂಪರೆಯನ್ನು ವಿಶೇಷವಾಗಿ ಸ್ಮರಿಸಿತು. ವಂ. ಗುರು ಫ್ರಾನ್ಚೆಸ್ಕೊ ಪಲ್ಲಿಯೋಲ ಮಿಂಡನಾವೊದ ಮುಂಚೂಣಿ ಧರ್ಮಪ್ರಚಾರಕರಲ್ಲಿ ಒಬ್ಬರಾಗಿದ್ದರು ಹಾಗೂ ತಮ್ಮ ರಕ್ತಸಾಕ್ಷಿಯ ಮೂಲಕ ವಿಶ್ವಾಸದ ಸಾಕ್ಷಿಯಾದರು.

ಸಂತ ಘೋಷಣಾ ಪ್ರಕ್ರಿಯೆಯಲ್ಲಿ ಪ್ರಗತಿ

ವಾರ್ಷಿಕ ಸ್ಮರಣಾಚರಣೆಯ ಜೊತೆಗೆ, ಧರ್ಮಕ್ಷೇತ್ರವು (ಸೊಸೈಟಿ ಆಫ್ ಜೀಸಸ್)ಯೇಸು ಸಭೆಯ ಸಂತಘೋಷಣಾ ವಿಷಯ ಪ್ರಸ್ತಾಪಕ ವಂ. ಗುರು ಪಾಸ್ಕ್ವಲ್ ಸೆಬೊಲ್ಲಾದರಿಂದ ಅಧಿಕೃತ ಪತ್ರವನ್ನು ಸ್ವೀಕರಿಸಿದ್ದಾಗಿ ಘೋಷಿಸಿತು.

ಆ ಪತ್ರದಲ್ಲಿ,  ವ್ಯಾಟಿಕನ್ ಸಂತಘೋಷಣಾ ಕಾರಣಗಳ ದೀಕ್ಷಾಲಯದ (Dicastery for the Causes of Saints) ಇತಿಹಾಸಕಾರರ ಮಂಡಳಿಯು ವಂ. ಫ್ರಾನ್ಸೆಸ್ಕೊ ಪಲ್ಲಿಯೋಲಾ ಅವರ ಜೀವನ ಮತ್ತು ಮರಣಕ್ಕೆ ಸಂಬಂಧಿಸಿದ ಐತಿಹಾಸಿಕ ಸ್ಥಾನದ  (Positio Historica) ಮೇಲಿನ ಪರಿಶೀಲನೆಯನ್ನು ಪೂರ್ಣಗೊಳಿಸಿದೆ ಎಂದು ತಿಳಿಸಲಾಗಿದೆ. ಈ ಮಾಹಿತಿಯು ಜನವರಿ 29ರಂದು ನಡೆದ ಅವರ  ಸ್ಮರಣಾ ದಿನದ ಆಚರಣೆಯೊಂದಿಗೆ ಹೊಂದಿಕೊಂಡಿತ್ತು.

ದೀಪೊಲೋಗ್ ಧರ್ಮಕ್ಷೇತ್ರದ ಸಂತಘೋಷಣಾ ವಿಷಯ ಪ್ರಸ್ತಾಪಕ ವಂ. ಗುರು ಪ್ಯಾಟ್ರಿಕ್ ದಲಾಂಗಿನ್ ಅವರು ಇತಿಹಾಸಾತ್ಮಕ ಪರಿಶೀಲನೆಯ ಫಲಿತಾಂಶವನ್ನು ವಿವರಿಸಿ: “ಮತ ಚಲಾಯಿಸಿದ ಆರು ಇತಿಹಾಸಕಾರರಲ್ಲಿ ಐವರು ಅನುಕೂಲಕರ ತೀರ್ಪು ನೀಡಿದ್ದು, ಒಬ್ಬರು affirmative ad mentem (ನಿರ್ದಿಷ್ಟ ಸ್ಪಷ್ಟೀಕರಣದೊಂದಿಗೆ ಅನುಮೋದನೆ) ನೀಡಿದ್ದಾರೆ. ಯಾವುದೇ ಪ್ರತಿಕೂಲ ಅಥವಾ ಸ್ಥಗಿತ ಮತಗಳು ದಾಖಲಾಗಿಲ್ಲ,” ಎಂದರು. ಒಂದು ಸಣ್ಣ ಸ್ಪಷ್ಟೀಕರಣವನ್ನು ಕೇಳಬಹುದಾದ ಸಾಧ್ಯತೆ ಇದ್ದರೂ, ಇದು ಪ್ರಕ್ರಿಯೆಯ ಸಾಮಾನ್ಯ ಭಾಗವಾಗಿದ್ದು, ಸಂತಘೋಷಣಾ ಕಾರಣದ ಪ್ರಗತಿಗೆ ಅಡ್ಡಿಯಾಗುವುದಿಲ್ಲ ಎಂದು ಅವರು ಸೇರಿಸಿದರು.

ಧರ್ಮಕ್ಷೇತ್ರವು 2017ರಲ್ಲಿ ದಾಖಲೆಗಳ ಸಂಗ್ರಹ ಹಾಗೂ ಸ್ಥಳೀಯ ತನಿಖೆಯನ್ನು ಆರಂಭಿಸಿತ್ತು. ಪ್ರಕರಣವನ್ನು ಮುಂದಿನ ವರ್ಷ ವ್ಯಾಟಿಕನ್ನಿಗೆ ಕಳುಹಿಸಲಾಗಿದ್ದು, ಅದು ಮಾನ್ಯವೆಂದು ಘೋಷಿಸಲಾಯಿತು. ಧರ್ಮಕ್ಷೇತ್ರವು ತನ್ನ ಅಧಿಕೃತ ಹೇಳಿಕೆಯಲ್ಲಿ, “ಅವರ ಸಮಾಧಿ, ಸಣ್ಣ ಸ್ಮಾರಕದಿಂದ ಗುರುತಿಸಲ್ಪಟ್ಟಿದ್ದು, ಅವರ ಮಧ್ಯಸ್ಥಿಕೆಯನ್ನು ಕೋರುವ ಭಕ್ತರು ಭೇಟಿ ನೀಡುತ್ತಾರೆ” ಎಂದು ತಿಳಿಸಿದೆ.

ಮಿಷನರಿ ಸೇವೆ ಮತ್ತು ರಕ್ತಸಾಕ್ಷಿ

ವಂ. ಫ್ರಾನ್ಸೆಸ್ಕೊ ಪಲ್ಲಿಯೋಲಾ 17ನೇ ಶತಮಾನದ ಮಧ್ಯಭಾಗದಲ್ಲಿ ಫಿಲಿಪ್ಪೀನ್ಸ್‌ಗೆ ಆಗಮಿಸಿದ ಮೊದಲ (ಸೊಸೈಟಿ ಆಫ್ ಜೀಸಸ್)ಯೇಸು ಸಭೆಯ (Jesuit) ಮಿಷನರಿಗಳಲ್ಲಿ ಒಬ್ಬರು. 1612ರಲ್ಲಿ ನೇಪಲ್ಸ್‌ನ ಗೌರವಾನ್ವಿತ ಕುಟುಂಬದಲ್ಲಿ ಜನಿಸಿದ ಅವರು, ಮಿಂದನಾವೊದಲ್ಲಿ ಮಿಷನ್ ಸ್ಥಾಪಿಸಲು ಯೇಸು ಸಂಘದಿಂದ ಕಳುಹಿಸಲ್ಪಟ್ಟರು.

ಅವರು ಜಾಂಬೋಅಂಗಾ ಉಪದ್ವೀಪದಲ್ಲಿ, ವಿಶೇಷವಾಗಿ ಸುಬಾನೆನ್ ಜನಾಂಗದ ನಡುವೆ ಸುವಾರ್ತಾ ಕಾರ್ಯ ನಡೆಸಿದರು. ಅವರ ಧಾರ್ಮಿಕ ಸೇವೆ, ಉಪದೇಶ, ಧರ್ಮೋಪದೇಶ (ಕ್ಯಾಟೆಕಿಸಿಸ್) ಮತ್ತು ಸ್ಥಳೀಯ ಸಮುದಾಯಗಳ ನಂಬಿಕೆಯನ್ನು ಬಲಪಡಿಸುವುದರ ಮೇಲೆ ಕೇಂದ್ರೀಕೃತವಾಗಿತ್ತು.

ಧರ್ಮಕೇಂದ್ರದ ದಾಖಲೆಗಳ ಪ್ರಕಾರ,ಮುಂಚೆ ಮತಾಂತರ ಹೊಂದಿ ನಂತರದಲ್ಲಿ ವಿಶ್ವಾಸವನ್ನು ತ್ಯಜಿಸಿದ್ದ ಟಾಂಪಿಲೋ ಎಂಬ ಸ್ಥಳೀಯ ಆದಿವಾಸಿ ನಾಯಕನಿಂದ ವಂ. ಪಲ್ಲಿಯೋಲಾ ಕೊಲ್ಲಲ್ಪಟ್ಟರು. ವರದಿಗಳ ಪ್ರಕಾರ, ವಂ. ಪಲ್ಲಿಯೋಲಾ ಅವರು ಟಾಂಪಿಲೋವನ್ನು ವಿಶ್ವಾಸಕ್ಕೂ ದೇವಾಲಯಕ್ಕೂ ಮರಳಿಸಲು ಯತ್ನಿಸುತ್ತಿದ್ದಾಗ ದಾಳಿಗೆ ಒಳಗಾಗಿ ಹತ್ಯೆಗೀಡಾದರು.

ಸ್ಥಳೀಯ ಧರ್ಮಸಭೆ ಅವರ ಮರಣವನ್ನು ನಂಬಿಕೆಯ ಮೇಲಿನ ದ್ವೇಷದಿಂದ ಉಂಟಾದ ನಿಜವಾದ ರಕ್ತಸಾಕ್ಷಿಯೆಂದು ಪರಿಗಣಿಸುತ್ತದೆ.

ಶಾಶ್ವತ ಭಕ್ತಿ

ಧರ್ಮಕ್ಷೇತ್ರದ ದಾಖಲೆಗಳು ಮತ್ತು ಸುಬಾನೆನ್ ಜನರ ಮೌಖಿಕ ಪರಂಪರೆಯ ಪ್ರಕಾರ, ವಂ. ಫ್ರಾನ್ಸೆಸ್ಕೊ ಪಲ್ಲಿಯೋಲಾ ಅವರು ಸುವಾರ್ತೆಯ ನಿಮಿತ್ತ ತಮ್ಮ ಪ್ರಾಣವನ್ನೇ ಅರ್ಪಿಸಿದ ಪವಿತ್ರ ಮಿಷನರಿಯಾಗಿ ದೀರ್ಘಕಾಲದಿಂದ ಸ್ಮರಿಸಲ್ಪಡುತ್ತಾರೆ. ಅವರ ಕಥೆ ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರವಾಗುತ್ತಿದ್ದು, ಯಾತ್ರಾರ್ಥಿಗಳು ನಿಯಮಿತವಾಗಿ ಅವರ ರಕ್ತಸಾಕ್ಷಿಯಾದ ಸ್ಥಳಕ್ಕೆ ತೆರಳಿ ಪ್ರಾರ್ಥನೆ ಮಾಡಿ, ಅವರ ಮಧ್ಯಸ್ಥಿಕೆಯನ್ನು ಬೇಡಿಕೊಳ್ಳುತ್ತಾರೆ.

ವಾರ್ಷಿಕ ಸ್ಮರಣಾಚರಣೆ ಮತ್ತು ನಡೆಯುತ್ತಿರುವ ಸಂತಪದವಿ ಪ್ರದಾನ ಪ್ರಕ್ರಿಯೆಯ ಮೂಲಕ, ದೀಪೊಲಾಗ್ ಧರ್ಮಕ್ಷೇತ್ರವು ವಂ. ಪಲ್ಲಿಯೋಲಾರವರ ಸಾಕ್ಷ್ಯವನ್ನು ಮಿಷನರಿ ಉತ್ಸಾಹ, ಧೈರ್ಯ ಮತ್ತು ಕ್ರಿಸ್ತನಿಗೆ ನಿಷ್ಠೆಯ ಮಾದರಿಯಾಗಿ ಮುಂದುವರಿಸಿ ಪ್ರಚಾರ ಮಾಡುತ್ತಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದುಇಲ್ಲಿ ಕ್ಲಿಕ್ ಮಾಡಿ).

 

04 ಫೆಬ್ರವರಿ 2026, 13:24