ಹುಡುಕಿ

2020.05.12 speranza, croce, mani 2020.05.12 speranza, croce, mani  (©paul - stock.adobe.com)

ಪಪುವಾ ನ್ಯೂಗಿನಿಯಾ: ವಿಶ್ವಾಸಿಗಳೊಂದಿಗೆ ಸೇವಾ ಹೃದಯ ಹಂಚಿಕೊಳ್ಳುವ ಫ್ರಾನ್ಸಿಸ್ಕನ್ ಸಭೆಯ ಮಾತೆ ಮೇರಿಯ ಸಹೋದರಿಯರು

ಕಡಿದಾದ ಭೂಪ್ರದೇಶ ಹಾಗೂ ದೂರದ ಸಮುದಾಯಗಳನ್ನು ಹೊಂದಿರುವ ಪಪುವಾ ನ್ಯೂಗಿನಿಯಾದಲ್ಲಿ, ಭೌಗೋಳಿಕ ಪರಿಸ್ಥಿತಿಗಳು ಅನೇಕ ಬಾರಿ ಧಾರ್ಮಿಕ ಮತ್ತು ಸಾಮಾಜಿಕ ಸೇವೆಗಳಿಗೆ ಪ್ರವೇಶವನ್ನು ಸೀಮಿತಗೊಳಿಸುತ್ತವೆ. ಈ ಸವಾಲುಗಳ ನಡುವೆಯೂ, ಫ್ರಾನ್ಸಿಸ್ಕನ್ ಸಭೆಯ ಮಾತೆ ಮೇರಿಯ ಸಹೋದರಿಯರು (FSM) ಮೌನವಾದರೂ ದೃಢವಾದ ಹಾಜರಾತಿಯನ್ನು ಕಾಪಾಡಿಕೊಂಡು, ಸ್ಥಳೀಯ ಧರ್ಮಸಭೆಯ ಸೇವಾ ಬದುಕಿನಲ್ಲಿ ಆಳವಾದ ಬದಲಾವಣೆಯನ್ನು ತರುತ್ತಿದ್ದಾರೆ.

ಲೇಖಕರು: ಸಹೋದರಿ ಕ್ರಿಸ್ಟಿನ್ ಮಸಿವೋ, CPS

ಫ್ರಾನ್ಸಿಸ್ಕನ್ ಸಭೆಯ ಮಾತೆ ಮೇರಿಯ ಸಹೋದರಿಯರ ಸಭೆಯನ್ನು (ಫ್ರಾನ್ಸಿಸ್ಕನ್ ಸಿಸ್ಟರ್ಸ್ ಆಫ್ ಮೇರಿ-FSM) 1976ರಲ್ಲಿ ಮೆಂಡಿ ಧರ್ಮಕ್ಷೇತ್ರದಲ್ಲಿ ಕಪುಚಿನ್ ಧರ್ಮಾಧ್ಯಕ್ಷರಾದ ಪೂಜ್ಯ ಫಿರ್ಮಿನ್ ಶ್ಮಿಡ್ ಅವರ ನೇತೃತ್ವದಲ್ಲಿ ಸ್ಥಾಪಿಸಲಾಯಿತು. ಈ ಸ್ಥಾಪನೆಗೆ ಅಮೆರಿಕದ ಕಪುಚಿನ್ ಸನ್ಯಾಸಿಗಳ, ಭಾರತದ ಫ್ರಾನ್ಸಿಸ್ಕನ್ ಸಹೋದರಿಯರ ಹಾಗೂ ಸ್ವಿಟ್ಜರ್‌ಲ್ಯಾಂಡ್‌ನ ಮಿಷನರಿ ಸಹೋದರಿಯರ ಸಹಕಾರ ದೊರೆಯಿತು.

ಮೆಂಡಿ ಧರ್ಮಕ್ಷೇತ್ರದ ಯುವ ಹಾಗೂ ವೇಗವಾಗಿ ಬದಲಾಗುತ್ತಿರುವ ಧರ್ಮಸಭೆಯ ತುರ್ತು ಧಾರ್ಮಿಕ ಅಗತ್ಯಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಬಲ್ಲ ಸ್ಥಳೀಯ ಸನ್ಯಾಸಿನಿ ಸಮುದಾಯವನ್ನು ರೂಪಿಸುವುದೇ ಅವರ ಪ್ರಮುಖ ಧ್ಯೇಯವಾಗಿತ್ತು.

ಧಾರ್ಮಿಕ ಸೇವೆಯ ಅಗತ್ಯದಿಂದ ಹುಟ್ಟಿದ ಸಭೆ

ಫ್ರಾನ್ಸಿಸ್ಕನ್ ಸಭೆಯ ಮಾತೆ ಮೇರಿಯ ಸಹೋದರಿಯರ ಸಭೆ (ಫ್ರಾನ್ಸಿಸ್ಕನ್ ಸಿಸ್ಟರ್ಸ್ ಆಫ್ ಮೇರಿ-FSM) ಧಾರ್ಮಿಕ ಸೇವೆಯ ನೈಜ ಅಗತ್ಯಗಳಿಂದಲೇ ರೂಪುಗೊಂಡಿತು ಎಂದು ಸಹೋದರಿ ಗ್ರೇಸ್ ನಾಕನ್ ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದರು. ಪಪುವಾ ನ್ಯೂಗಿನಿಯ ಜನರ ನಡುವೆ ತಮ್ಮ ಸೇವೆಯನ್ನು, ವಿಶೇಷವಾಗಿ ಗುರುಗಳು ಸುಲಭವಾಗಿ ತಲುಪಲು ಸಾಧ್ಯವಾಗದ ದೂರದ ಪ್ರದೇಶಗಳಲ್ಲಿ ಸಮರ್ಪಣೆ ಮತ್ತು ಸೇವಾ ಪಯಣದ ಅನುಭವಗಳನ್ನು ಅವರು ಹಂಚಿಕೊಂಡರು.

“ಆ ಸಮಯದಲ್ಲಿ ಬಹಳ ಕಡಿಮೆ ಮಿಷನರಿಗಳು ಇದ್ದರು. ಅವರು ಎಲ್ಲೆಡೆ, ವಿಶೇಷವಾಗಿ ಕಾಡಿನ ಒಳಭಾಗದಲ್ಲಿರುವ ದೂರದ ಹೋರವಲಯಗಳಿಗೆ ತಲುಪಲು ಸಾಧ್ಯವಾಗುತ್ತಿರಲಿಲಲ.”ಎಂದು ಸಹೋದರಿ ಗ್ರೇಸ್ ನೆನಪಿಸಿಕೊಳ್ಳುತ್ತಾರೆ.

2026ರಲ್ಲಿ ತಮ್ಮ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಈ ಸಭೆಯ ಸಹೋದರಿಯರು, ಕೃತಜ್ಞತೆಯಿಂದ ತಮ್ಮ ಸೇವಾ ಪಯಣವನ್ನು ಹಿಂತಿರುಗಿ ನೋಡುತ್ತಾ, ತಮಗೆ ವಹಿಸಲಾದ ಧಾರ್ಮಿಕ ಸೇವೆಯನ್ನು ಇನ್ನಷ್ಟು ಉತ್ಸಾಹದಿಂದ ಮುಂದುವರಿಸಲು ಹೊಸ ಬದ್ಧತೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ರಸ್ತೆಗಳು ಮುಗಿಯುವಲ್ಲಿ ಧಾರ್ಮಿಕ ಸೇವೆ

ಪಾಪುವಾ ನ್ಯೂಗಿನಿಯದ ದೂರದ ಮತ್ತು ದುರ್ಗಮ ಪ್ರದೇಶಗಳಲ್ಲಿ, ಫ್ರಾನ್ಸಿಸ್ಕನ್ ಸಭೆಯ ಮಾತೆ ಮೇರಿಯ ಸಹೋದರಿಯರ ಸಭೆ (ಫ್ರಾನ್ಸಿಸ್ಕನ್ ಸಿಸ್ಟರ್ಸ್ ಆಫ್ ಮೇರಿ-FSM) ಧಾರ್ಮಿಕ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಗುರುಗಳು ತಲುಪಲು ಕಷ್ಟವಾಗುವ ಹೋರವಲಯಗಳಲ್ಲಿ ಈ ಸಹೋದರಿಯರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಹೋದರಿಯರು ಗುರುಗಳೊಂದಿಗೆ ಸಹಕರಿಸಿ, ಧರ್ಮಬೋಧನೆ, ಸಂಸ್ಕಾರ ಸಿದ್ಧತೆ ಮತ್ತು ನಂಬಿಕೆಯ ಪೋಷಣೆಯಲ್ಲಿ ಸಹಾಯ ಮಾಡುತ್ತಾರೆ. ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಜನರು ದೀರ್ಘಕಾಲ ಗುರುಗಳನ್ನು ಕಾಣದೆ ಇರುವ ಕಾರಣ, ಸಹೋದರಿಯರ ಉಪಸ್ಥಿತಿ ಧರ್ಮಸಭೆಯ ನಿರಂತರತೆಯನ್ನು ಕಾಯ್ದುಕೊಳ್ಳಲು ಸಹಕಾರಿಯಾಗಿದೆ.

FSM ಸಹೋದರಿ ಗ್ರೇಸ್ ನಾಕನ್ ಪ್ರಕಾರ, ಸಹೋದರಿಯರು ದೂರದ ಹಳ್ಳಿಗಳಲ್ಲಿ ಜನರೊಂದಿಗೆ ಉಳಿದುಕೊಂಡು ಪ್ರಾರ್ಥನೆ ನಡೆಸುತ್ತಾರೆ ಹಾಗೂ ಸಂಸ್ಕಾರಗಳಿಗೆ ಅವರನ್ನು ಸಿದ್ಧಪಡಿಸುತ್ತಾರೆ. ಇದರಿಂದ ಸಮುದಾಯಗಳು ಧರ್ಮಸಭೆಯೊಂದಿಗೆ ಸದಾ ಸಂಪರ್ಕದಲ್ಲಿರುವ ಭಾವನೆ ಪಡೆಯುತ್ತವೆ.

ಅಲ್ಲದೆ, ಸಹೋದರಿಯರು ಆರೋಗ್ಯ ಸಂಬಂಧಿತ ಅಗತ್ಯಗಳಿಗೂ ಸ್ಪಂದಿಸುತ್ತಿದ್ದಾರೆ. ಎಲ್ಲರೂ ವೈದ್ಯಕೀಯ ತರಬೇತಿ ಪಡೆದವರಲ್ಲದಿದ್ದರೂ, ಪರಸ್ಪರ ಸಹಕಾರದಿಂದ ಪ್ರಾಥಮಿಕ ಚಿಕಿತ್ಸೆ ನೀಡುತ್ತಾರೆ ಮತ್ತು ಮೂಲ ಔಷಧಿಗಳನ್ನು ಪೂರೈಸುತ್ತಾರೆ. HIV/AIDS ಪೀಡಿತರಿಗೆ ಅಗತ್ಯ ಔಷಧಿ ತಲುಪುವಂತೆ ನೋಡಿಕೊಳ್ಳುವುದು ಸಹ ಅವರ ಸೇವೆಯ ಭಾಗವಾಗಿದೆ.

ಶಿಕ್ಷಣ, ಆರೋಗ್ಯ ಮತ್ತು ಸೇವೆ 

ಧರ್ಮಬೋಧನೆಯಾಚೆ, ಫ್ರಾನ್ಸಿಸ್ಕನ್ ಸಭೆಯ ಮಾತೆ ಮೇರಿಯ ಸಹೋದರಿಯರ (ಫ್ರಾನ್ಸಿಸ್ಕನ್ ಸಿಸ್ಟರ್ಸ್ ಆಫ್ ಮೇರಿ-FSM)ಸಭೆಯ ಸೇವಾಚರಿತ್ರೆ ಶಿಕ್ಷಣ, ಆರೋಗ್ಯ, ಸಾಮಾಜಿಕ ಸೇವೆಗಳನ್ನು  ಒಳಗೊಂಡಿದೆ ಎಂದು ಸಹೋದರಿ ಗ್ರೇಸ್ ನಾಕನ್ ಹೇಳಿದ್ದಾರೆ.

ಸಹೋದರಿಯರು ಕಥೋಲಿಕ ಶಾಲೆಗಳು, ಧರ್ಮಕ್ಷೇತ್ರದ ಆಡಳಿತ ಕಚೇರಿಗಳು ಹಾಗೂ ಕಥೋಲಿಕ ಸಂಸ್ಥೆಗಳ ಅಡಿಯಲ್ಲಿ ನಡೆಯುವ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿಶೇಷವಾಗಿ ಸರ್ಕಾರದ ಸೇವೆಗಳು ತಲುಪದ ಅಥವಾ ಅಪರ್ಯಾಪ್ತವಾಗಿರುವ ದೂರದ ಪ್ರದೇಶಗಳಲ್ಲಿ ಇವರ ಸೇವೆ ಮಹತ್ವದ್ದಾಗಿದೆ.

ಆರೋಗ್ಯ ಕ್ಷೇತ್ರದಲ್ಲಿ, FSM ಸಹೋದರಿಯರು ನಗರ ಪ್ರದೇಶಗಳಲ್ಲಿಯೂ ಹಾಗೂ ಹೋರವಲಯಗಳಲ್ಲಿಯೂ ಇರುವ ಕಥೋಲಿಕ ಚಿಕಿತ್ಸಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಹೋದರಿ ಗ್ರೇಸ್ ಪ್ರಕಾರ, ಇದು ಕೇವಲ ವೈದ್ಯಕೀಯ ಸೇವೆಯಲ್ಲ, ಧಾರ್ಮಿಕ ಸೇವೆಯ ಭಾಗವೂ ಹೌದು.

ಮಾರ್ಗದರ್ಶನ ಮತ್ತು ಸೇತುವೆ ನಿರ್ಮಾಣ

ಸಹೋದರಿ ಗ್ರೇಸ್ ನಾಕನ್ ಪ್ರಸ್ತುತ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣವನ್ನು ಮುಂದುವರೆಸುತ್ತಿದ್ದು, ಕ್ಯಾಂಪಸ್‌ನಲ್ಲೇ ತಮ್ಮ ಧಾರ್ಮಿಕ ಸೇವೆಯನ್ನು ಕೂಡಾ ನಿರ್ವಹಿಸುತ್ತಿದ್ದಾರೆ. ಅವರು ಕಥೋಲಿಕ ವಿದ್ಯಾರ್ಥಿಗಳ ಸಂಘದ (Catholic Students Association) ಆಧ್ಯಾತ್ಮಿಕ ಮಾರ್ಗದರ್ಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶೈಕ್ಷಣಿಕ ವಾತಾವರಣದಲ್ಲಿನ ತಮ್ಮ ಉಪಸ್ಥಿತಿಯ ಹೊರತಾಗಿ, ಸಹೋದರಿ ಗ್ರೇಸ್ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಅವರ ಆಧ್ಯಾತ್ಮಿಕ ಬೆಳವಣಿಗೆಗೆ ಬೆಂಬಲ ನೀಡುತ್ತಾರೆ. ವಿಶ್ವವಿದ್ಯಾಲಯದ  ಗುರುಗಳೊಂದಿಗೆ ಸಹಕರಿಸಿ, ಆರಾಧನಾ ಆಚರಣೆಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ನೇತೃತ್ವವು ದಾನಧರ್ಮದ ಕಾರ್ಯಗಳನ್ನು ಕೂಡಾ ಪ್ರೇರೇಪಿಸಿದೆ. ಇತರ ವಿದ್ಯಾರ್ಥಿಗಳು ಹಾಗೂ ಸಹಕಾರ ನೀಡುವ ಉಪನ್ಯಾಸಕರೊಂದಿಗೆ ಸೇರಿ, ಅವರು ಕಾರಾಗೃಹಗಳು ಮತ್ತು ಆಸ್ಪತ್ರೆಗಳಿಗೆ ಸಹಾಯ ಕಾರ್ಯಗಳನ್ನು ಸಂಘಟಿಸುತ್ತಾರೆ. ಈ ಪ್ರಯತ್ನಗಳಲ್ಲಿ ಬಳಸಿದ ಬಟ್ಟೆ, ಆಹಾರ ಮತ್ತು ಧನಸಹಾಯ ಸಂಗ್ರಹಿಸಲಾಗುತ್ತದೆ. ಈ ಉಪಕ್ರಮಗಳು ವಿದ್ಯಾರ್ಥಿ ಕೇಂದ್ರಿತವಾಗಿದ್ದು, ಪ್ರಾರ್ಥನೆಯಲ್ಲಿ ನೆಲೆಗೊಂಡಿವೆ.

“ಏನನ್ನಾದರೂ ನೀಡುವ ಮೊದಲು, ನಾವು ಅವರೊಂದಿಗೆ ಪ್ರಾರ್ಥಿಸುತ್ತೇವೆ, ಅವರನ್ನು ಪ್ರೋತ್ಸಾಹಿಸುತ್ತೇವೆ ಮತ್ತು ಅವರನ್ನು ನಾವು ಮರೆತಿಲ್ಲ ಎಂಬುದನ್ನು ನೆನಪಿಸುತ್ತೇವೆ,” ಎಂದು ಸಹೋದರಿ ಗ್ರೇಸ್ ತಿಳಿಸಿದ್ದಾರೆ.

ಗಡಿಗಳನ್ನು ಮೀರಿ ಪ್ರತಿಧ್ವನಿಸುವ ಧ್ವನಿ

ಸಹೋದರಿ ಗ್ರೇಸ್ ನಾಕನ್ ಅವರು ಪಪುವಾ ನ್ಯೂಗಿನಿಯದ ಕಥೋಲಿಕ ವಿದ್ಯಾರ್ಥಿಗಳನ್ನು ಪ್ರತಿನಿಧಿಸಿ ಥೈಲ್ಯಾಂಡಿನಲ್ಲಿ ನಡೆದ ಏಷ್ಯಾ–ಪೆಸಿಫಿಕ್ ವಿದ್ಯಾರ್ಥಿಗಳ ಸಭೆಯಲ್ಲಿ ಭಾಗವಹಿಸಲು ಆಹ್ವಾನಿತರಾಗಿದ್ದರು. ಈ ಸಭೆ ಯುವಜನರ ನಡುವೆ ಐಕ್ಯತೆಯನ್ನು ಬಲಪಡಿಸುವುದು ಹಾಗೂ ಬಡತನ, ನಿರುದ್ಯೋಗ, ಆರ್ಥಿಕ ಸಂಕಷ್ಟ, ಭ್ರಷ್ಟಾಚಾರ, ಶಾಂತಿ ಮತ್ತು ನ್ಯಾಯದಂತಹ ಸಾಮಾನ್ಯ ಸವಾಲುಗಳನ್ನು ಚರ್ಚಿಸುವುದನ್ನು ಕೇಂದ್ರವಾಗಿಟ್ಟುಕೊಂಡಿತ್ತು.

ಈ ಅನುಭವದ ಕುರಿತು ಮಾತನಾಡಿದ ಸಹೋದರಿ ಗ್ರೇಸ್, “ಪಪುವಾ ನ್ಯೂಗಿನಿಯದ ಯುವಜನರು ಎದುರಿಸುತ್ತಿರುವ ಅನೇಕ ಸಮಸ್ಯೆಗಳು ಏಷ್ಯಾ–ಪೆಸಿಫಿಕ್ ಪ್ರದೇಶದ ಇತರ ದೇಶಗಳ ಯುವಜನರಿಗೂ ಸಾಮಾನ್ಯವಾಗಿವೆ ಎಂಬುದನ್ನು ಈ ಸಭೆ ನನಗೆ ಸ್ಪಷ್ಟಪಡಿಸಿತು,” ಎಂದು ಹೇಳಿದರು.

ಥೈಲ್ಯಾಂಡಿನಿಂದ ಮರಳಿದ ಬಳಿಕ, ಸಹೋದರಿ ಗ್ರೇಸ್ ಸಭೆಯ ಫಲಿತಾಂಶಗಳನ್ನು ತಮ್ಮ ದೇಶದ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಅವರು ವಾಟ್ಸಾಪ್(WhatsApp) ಮತ್ತು ಇ–ಮೇಲ್ ಗುಂಪುಗಳ ಮೂಲಕ ಗಡಿಗಳನ್ನು ಮೀರಿ ಕಥೋಲಿಕ ವಿದ್ಯಾರ್ಥಿ ನಾಯಕರನ್ನು ಸಂಪರ್ಕಿಸುವ ಜಾಲವನ್ನು ಬಲಪಡಿಸಲು ಸಹಕಾರ ನೀಡಿದರು. “ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಹಾಗೂ ಪರಸ್ಪರ ಬೆಂಬಲ ನೀಡುವ ಮೂಲಕ ನಾವು ಒಬ್ಬರಿಗೊಬ್ಬರು ಸಹಾಯ ಮಾಡುತ್ತಿದ್ದೇವೆ,” ಎಂದು ಅವರು ಅಭಿಪ್ರಾಯಪಟ್ಟರು.

ಜೀವಂತವಾಗಿ ಮುಂದುವರಿಯುತ್ತಿರುವ ಧ್ಯೇಯ

ಸಹೋದರಿ ಗ್ರೇಸ್ ನಾಕನ್ ಅವರು ತಮ್ಮ ಧಾರ್ಮಿಕ ಸೇವೆ ಹಾಗೂ ವಿದ್ಯಾರ್ಥಿ ಮಾರ್ಗದರ್ಶನದ ಜವಾಬ್ದಾರಿಗಳ ಜೊತೆಗೆ, ಧರ್ಮಕೇಂದ್ರದ ಸಂವಹನದ ಸಂಪರ್ಕ ಸೇತುವೆಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಸ್ಥಳೀಯ ಧರ್ಮಕೇಂದ್ರದ ಚಟುವಟಿಕೆಗಳ ಕುರಿತು ವರದಿಗಳನ್ನು ಸಂಗ್ರಹಿಸಿ, ಅವುಗಳನ್ನು ರೇಡಿಯೋ ಮರಿಯಾ ಪಪುವಾ ನ್ಯೂಗಿನಿಯಾದೊಂದಿಗೆ ಹಂಚಿಕೊಳ್ಳುತ್ತಾರೆ, ಇದರಿಂದ ಸ್ಥಳೀಯ ಧರ್ಮಸಭೆಯ ಧ್ವನಿ ವ್ಯಾಪಕವಾಗಿ ಕೇಳುವಂತಾಗುತ್ತದೆ.

ಸಹೋದರಿ ಗ್ರೇಸ್ ಅವರ ಕಾರ್ಯವು ಪ್ರಚಾರಕ್ಕಿಂತ ಸೇವೆಗೆ ಆದ್ಯತೆ ನೀಡುವ ನಿಶ್ಶಬ್ದ ಸಾಕ್ಷಿಯಾಗಿದೆ. ಸ್ಥಳೀಯ ಧಾರ್ಮಿಕರು ಸಮುದಾಯದೊಡನೆ ಹೊಂದಿರುವ ನಿಕಟ ಸಂಪರ್ಕ ಹಾಗೂ ಜನರ ಜೀವನದ ಆಳವಾದ ಅರಿವು ಅವರ ಸೇವೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಐದು ದಶಕಗಳ ಹಿಂದೆ ಸಭೆಯ ಸಂಸ್ಥಾಪಕರು ರೂಪಿಸಿದ ಧ್ಯೇಯ “ಜನರೊಂದಿಗೆ ಅದರಲ್ಲೂ ವಿಶೇಷವಾಗಿ ಹೆಚ್ಚು ಅಗತ್ಯವಿರುವ ಜನರೊಂದಿಗೆ ಹೆಜ್ಜೆ ಹಾಕುವುದು” ಇಂದು ಸಹೋದರಿ ಗ್ರೇಸ್ ಅವರ ಮೂಲಕ ಜೀವಂತವಾಗಿ ಮುಂದುವರಿಯುತ್ತಿದೆ. ಪಪುವಾ ನ್ಯೂಗಿನಿಯಾದ ಗ್ರಾಮಗಳು, ವಿಶ್ವವಿದ್ಯಾಲಯಗಳು, ಆಸ್ಪತ್ರೆಗಳು ಮತ್ತು ಪ್ರಾರ್ಥನಾ ಸಮುದಾಯಗಳಲ್ಲಿ ಈ ಧ್ಯೇಯ ನಿಧಾನವಾಗಿ, ಆದರೆ ದೀರ್ಘಕಾಲೀನ ಫಲ ನೀಡುತ್ತಿದೆ.

 

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

05 ಫೆಬ್ರವರಿ 2026, 10:51