ಹುಡುಕಿ

2026.02.16 San Francesco 2026.02.16 San Francesco 

ಅಸ್ಸಿಸಿಯಲ್ಲಿ ಸಂತ ಫ್ರಾನ್ಸಿಸ್ ಅವರ ಪವಿತ್ರ ಅವಶೇಷಗಳ ಸಾರ್ವಜನಿಕ ದರ್ಶನ

ಅಸ್ಸಿಸಿಯಲ್ಲಿ ಸಂತ ಫ್ರಾನ್ಸಿಸ್ ಅವರ ಪವಿತ್ರ ಅವಶೇಷಗಳನ್ನು ಭಕ್ತರ ವಂದನೆಗಾಗಿ ಸಾರ್ವಜನಿಕವಾಗಿ ದರ್ಶನಕ್ಕೆ ಇರಿಸಲಾಗುತ್ತಿದೆ. ಈ ಸಂದರ್ಭದ ಮಹತ್ವ ಮತ್ತು ಇಂದಿನ ಜಗತ್ತಿಗೆ ಸಂತ ಫ್ರಾನ್ಸಿಸ್ ನೀಡುವ ಸಂದೇಶದ ಕುರಿತು ಅಸ್ಸಿಸಿಯ ಪವಿತ್ರ ಮಠದ ಸಂವಹನ ಕಚೇರಿ ನಿರ್ದೇಶಕ ವಂ. ಗುರು ಜುಲಿಯೊ ಚೆಸಾರೆೊ ಅವರು ವ್ಯಾಟಿಕನ್ ಸುದ್ದಿಗೆ ತಿಳಿಸಿದ್ದಾರೆ.

ಲೇಖಕರು: ಫ್ರಾನ್ಸಿಸ್ಕೋ ರಿಕ್ಯುಪೆರೋ

ಫೆಬ್ರವರಿ 22ರಿಂದ ಮಾರ್ಚ್ 22ರವರೆಗೆ, ಅಸ್ಸಿಸಿಯ ಸಂತ ಫ್ರಾನ್ಸಿಸ್ ಕಿರಿಯ ಬಸಿಲಿಕಾದಲ್ಲಿ, 2026ರಲ್ಲಿ ಅವರ ನಿಧನದ 800ನೇ ವರ್ಷದ ಸ್ಮರಣಾರ್ಥ, ಭಕ್ತರಿಗೆ ಮೊದಲ ಬಾರಿಗೆ ಸಂತನ ಪವಿತ್ರ ಅವಶೇಷಗಳ ಮುಂದೆ ಪ್ರಾರ್ಥಿಸುವ ಅವಕಾಶ ದೊರೆಯಲಿದೆ.

ಅನಿಶ್ಚಿತತೆ, ಸಾಮಾಜಿಕ ಉದ್ವಿಗ್ನತೆ ಮತ್ತು ಜೀವನಾರ್ಥದ ಹುಡುಕಾಟದಿಂದ ಗುರುತಿಸಲ್ಪಟ್ಟ ಈ ಕಾಲಘಟ್ಟದಲ್ಲಿ, ಸಂತ ಫ್ರಾನ್ಸಿಸ್ ಅವರ ಅವಶೇಷಗಳ ಪ್ರದರ್ಶನವು ಕೇವಲ ಭಕ್ತಿಯ ಆಚರಣೆಯಷ್ಟೇ ಅಲ್ಲ, ಅದರಾಚೆಗೆ ಸಾಗುವ ಆಧ್ಯಾತ್ಮಿಕ ಘಟನೆವಾಗಿದೆ. ಕಥೋಲಿಕ ಧರ್ಮಸಭೆಗೆ ಇದು ಗಾಢವಾದ ಆಧ್ಯಾತ್ಮಿಕ ಕರೆದಾಗಿದ್ದು, ಭಕ್ತರಿಗೆ ವಿಶ್ವದ ಅತ್ಯಂತ ಪ್ರೀತಿಸಲ್ಪಡುವ ಸಂತನ ಜೀವಂತ ಸ್ಮರಣೆಯೊಂದಿಗಿನ ಸ್ಪರ್ಶಯೋಗ್ಯ ಭೇಟಿಯ ಅವಕಾಶವಾಗಿದೆ.

ಅಸ್ಸಿಸಿಯಲ್ಲಿ ಈ ದರ್ಶನವು ಇತಿಹಾಸ, ವಿಶ್ವಾಸ ಮತ್ತು ಸಮುದಾಯದ ನಡುವಿನ ಆಳವಾದ ಬಾಂಧವ್ಯವನ್ನು ಮತ್ತೊಮ್ಮೆ ನವೀಕರಿಸುತ್ತಿದ್ದು, ಶಾಂತಿ, ಸಹೋದರತ್ವ ಮತ್ತು ಸರಳತೆಯ ಸಂದೇಶವನ್ನು ಇಂದಿನ ಜಗತ್ತಿಗೆ ಪುನಃ ಸಾರುತ್ತಿದೆ. ಪ್ರತಿದಿನ ಸುಮಾರು 15,000ರಿಂದ 18,000 ಭಕ್ತರು ಭೇಟಿ ನೀಡುವ ನಿರೀಕ್ಷೆಯಿದ್ದು, ಒಟ್ಟು ಸುಮಾರು 3,70,000 ಮಂದಿ ಆಗಮಿಸುವ ಸಾಧ್ಯತೆ ಇದೆ.

ಈ ಸಂದರ್ಭದಲ್ಲಿ, ಅಸ್ಸಿಸಿಯ ಪವಿತ್ರ ಮಠದ ಸಂವಹನ ಕಚೇರಿ ನಿರ್ದೇಶಕ ವಂ. ಗುರು ಜುಲಿಯೊ ಚೆಸಾರೆೊ ಅವರು ವ್ಯಾಟಿಕನ್ ಸುದ್ದಿಗೆ ನೀಡಿದ ಸಂದರ್ಶನದಲ್ಲಿ, ಇಂದಿನ ಸಮಾಜಕ್ಕೆ ಈ ಪ್ರಾಚೀನ ಆಧ್ಯಾತ್ಮಿಕ ಕೃತ್ಯದ ಅರ್ಥವನ್ನು ವಿವರಿಸಿದ್ದಾರೆ.

ಪ್ರಶ್ನೆ: ಇಂದಿನ ಕಥೋಲಿಕ ಧರ್ಮಸಭೆಗೆ ಸಂತ ಫ್ರಾನ್ಸಿಸ್ ಅವರ ಪವಿತ್ರ ಅವಶೇಷಗಳ ದರ್ಶನದ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಮಹತ್ವವೇನು?

ಉತ್ತರ: ಕ್ರೈಸ್ತರು ಸದಾಕಾಲವೂ ಪವಿತ್ರ ಅವಶೇಷಗಳನ್ನು ಗೌರವದಿಂದ ಪೂಜಿಸಿದ್ದಾರೆ. ಏಕೆಂದರೆ ಸಂತರು—ವಿಶೇಷವಾಗಿ ರಕ್ತಸಾಕ್ಷಿಗಳು—ತಮ್ಮ ಜೀವನದ ಮೂಲಕ ದೇವರ ಪ್ರೀತಿ, ಅವರನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ ಎಂಬುದಕ್ಕೆ ಸಾಕ್ಷಿಯಾದವರು. ದೇವರ ಪ್ರೀತಿ ಯಾವುದೋ ತತ್ತ್ವಜ್ಞಾನಾತ್ಮಕ ಕಲ್ಪನೆ ಅಲ್ಲ; ಅದು ಮಾನವ ದೇಹವನ್ನೇ ಸ್ಪರ್ಶಿಸುವ, ಜೀವಂತ ಅನುಭವ.

ಸಂತರು ಬಡವರ ಸೇವೆ ಮಾಡಿದರು, ಪ್ರಾರ್ಥಿಸಿದರು, ಉಪವಾಸವಿದ್ದು, ಪರರನ್ನು ಪ್ರೀತಿಸಿದರು; ಅವರು ಕ್ರಿಸ್ತನ ಮೇಲಿನ ಪ್ರೀತಿಯಿಂದಲೇ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡರು. ಅವರ ಜೀವನದಲ್ಲಿ ಪವಿತ್ರ ಆತ್ಮನ ಕ್ರಿಯೆ ಗೋಚರವಾಗಿತ್ತು. ಅದಕ್ಕಾಗಿ ಕ್ರೈಸ್ತರು ಸಂತ ಜೀವನವನ್ನು ಗೌರವಿಸುತ್ತಾರೆ—ಅವರ ದೇಹದಲ್ಲೇ ದೇವರ ಪ್ರೀತಿ ವ್ಯಕ್ತವಾಯಿತೆಂದು ಕಂಡರು.

ಸಂತ ಫ್ರಾನ್ಸಿಸ್ ಅವರ ಅವಶೇಷಗಳ ದರ್ಶನವೂ ಇದೇ ಆಧ್ಯಾತ್ಮಿಕ ಹಿನ್ನೆಲೆಯಲ್ಲಿದೆ. ನಾವು ಯೋವಾನ್ನನ ಸುವಾರ್ತೆ ಅಧ್ಯಾಯ 12, ವಾಕ್ಯ 24ನ್ನು ಇದರ ವಿವರಣೆಗಾಗಿ ಆಯ್ದುಕೊಂಡಿದ್ದೇವೆ. ಅಲ್ಲಿ ಯೇಸುಸ್ವಾಮಿ ತಮಗೇ ಸಂಬಂಧಿಸಿ ಹೇಳುತ್ತಾರೆ: “ಗೋಧಿಯ ಕಾಳು ನೆಲಕ್ಕೆ ಬಿದ್ದು ಸಾಯದೆ ಇದ್ದರೆ ಅದು ಒಂಟಿಯಾಗಿಯೇ ಉಳಿಯುತ್ತದೆ; ಅದು ಸತ್ತರೆ ಮಾತ್ರ ಸಮೃದ್ಧಿಯಾದ ಫಲವನ್ನು ಕೊಡುತ್ತದೆ.”

ಸಂತ ಫ್ರಾನ್ಸಿಸ್ ನಿಜವಾಗಿಯೂ ಆ ಗೋಧಿಯ ಕಾಳಿನಂತೆ—ಯೇಸುಸ್ವಾಮಿಯಂತೆ, ಸಂತರು ಮತ್ತು ರಕ್ತಸಾಕ್ಷಿಗಳಂತೆ—ತನ್ನನ್ನು ಪ್ರತಿದಿನದ ಜೀವನದಲ್ಲಿ ಸಂಪೂರ್ಣವಾಗಿ ಅರ್ಪಿಸಿಕೊಂಡವರು. ಯಾರು ತಮ್ಮನ್ನು ಕೊಡುವರೋ, ಅವರು ಕರಗದೇ ಇರಲು ಸಾಧ್ಯವಿಲ್ಲ; ಅದನ್ನು ತಪ್ಪಿಸಲು ದಾರಿ ಇಲ್ಲ. ಆದರೆ ಆ ಅರ್ಪಣೆ ಫಲವನ್ನು ಕೊಡುತ್ತದೆ. ಅದೇ ಅವರ ಜೀವನದ ಆಧ್ಯಾತ್ಮಿಕ ಸಂದೇಶ.

ಪ್ರಶ್ನೆ: ಸಂತ ಫ್ರಾನ್ಸಿಸ್ ಅವರ ಪವಿತ್ರ ಅವಶೇಷಗಳ ಪ್ರದರ್ಶನವು ಸ್ಥಳೀಯ ಹಾಗೂ ವಿಶ್ವಮಟ್ಟದಲ್ಲಿ ಭಕ್ತರಲ್ಲಿ ಒಗ್ಗಟ್ಟು ಮತ್ತು ಸಹಭಾಗಿತ್ವದ ಭಾವನೆಯನ್ನು ಹೇಗೆ ಬಲಪಡಿಸುತ್ತದೆ?

ಉತ್ತರ: ಇದು ನಂಬಿಕೆಯನ್ನು ಬಲಪಡಿಸುತ್ತದೆ. ನಮ್ಮ ನಂಬಿಕೆ ಯಾವುದೋ ಪೂರ್ವನಿರ್ಧರಿತ ಕಲ್ಪನೆ ಅಲ್ಲ; ಅದು ಪ್ರೀತಿಯ ಸ್ವರೂಪನಾದ ಪ್ರಭುವಿನೊಂದಿಗೆ ಇರುವ ಜೀವಂತ ಸಂಬಂಧವಾಗಿದೆ. ನಂಬಿಕೆ ಎಂದರೆ ಪ್ರೀತಿಯಲ್ಲಿ ಒಂದಾಗಿರುವ ಅನುಭವದಿಂದ ಬೇರ್ಪಡಿಸಲಾಗದದ್ದು.

ಈ ದೃಷ್ಟಿಯಿಂದ ಸಂತ ಫ್ರಾನ್ಸಿಸ್ ಅವರ ಅವಶೇಷಗಳಿಗೆ ವಂದನೆ ಸಲ್ಲಿಸುವುದು ಆತ್ಮಿಕವಾಗಿ ದೃಢವಾಗುವ ಅನುಭವ. ಅದು ನಮಗೆ ಈ ನಿಶ್ಚಿತತೆಯಲ್ಲಿ ಸ್ಥಿರಗೊಳಿಸುವ ಕೃಪೆಯನ್ನು ನೀಡುತ್ತದೆ: ಯಾರು ಪ್ರೀತಿಯಲ್ಲಿ ತಮ್ಮನ್ನು ತಾವೇ ಅರ್ಪಿಸುತ್ತಾರೋ, ಅವರು ಹೊರಗೆ ಕರಗುತ್ತಿರುವಂತೆ ಕಾಣಬಹುದು; ಆದರೆ ನಿಜವಾಗಿ ಅವರು ಧರ್ಮಸಭೆಯ ಏಕತೆ, ದಾನಧರ್ಮದ ಬಂಧಗಳನ್ನು ಪೋಷಿಸುತ್ತಿದ್ದಾರೆ.

ನಾವು ಎಷ್ಟೆಷ್ಟು ಪ್ರೀತಿಯಲ್ಲಿ ಮತ್ತು ಆತ್ಮಾರ್ಪಣದಲ್ಲಿ ಜೀವಿಸುತ್ತೇವೋ, ಅಷ್ಟಷ್ಟು ನಮ್ಮ ಮಾನವೀಯತೆ ನಮ್ಮ ನಿಜಸ್ವರೂಪವಾಗಿ ಅರಳುತ್ತದೆ. ನಮ್ಮನ್ನು ಇತರರೊಂದಿಗೆ ಒಂದಾಗಿಸುವುದು ಆಲೋಚನೆಗಳಲ್ಲ; ನಮ್ಮ ಸಂಬಂಧಗಳಲ್ಲಿ ನಾವು ನೀಡುವ ಪ್ರೀತಿಯೇ.

ಸಂತ ಫ್ರಾನ್ಸಿಸ್ ಅವರಿಗೆ ವಂದನೆ ಸಲ್ಲಿಸುವುದು, ಸತ್ಯಸಂಧವಾದ ಪ್ರೀತಿ ಎಷ್ಟು ಮಹತ್ತರ ಫಲವನ್ನು ಉಂಟುಮಾಡುತ್ತದೆ ಎಂಬುದನ್ನು ಚಿಂತಿಸಲು ದೊರೆಯುವ ಅವಕಾಶ. ಎಂಟು ನೂರು ವರ್ಷಗಳ ಬಳಿಕವೂ ಅವರ ಹೆಸರು ಜೀವಂತವಾಗಿದೆ ಎಂಬುದೇ ಅದರ ಸಾಕ್ಷಿ.

ಪ್ರಶ್ನೆ: ಈ ಕಾರ್ಯಕ್ರಮವು ಸ್ಥಳೀಯ ಸಮುದಾಯದ ಮೇಲೆ ಹಾಗೂ ಬಸಿಲಿಕಾಗೆ ಆಗಮಿಸುವ ತೀರ್ಥಯಾತ್ರಿಗಳ ಮೇಲೆ ಯಾವ ಪರಿಣಾಮ ಬೀರುತ್ತದೆ?

ಉತ್ತರ: ನಿಶ್ಚಯವಾಗಿಯೂ, ಈ ಒಂದು ತಿಂಗಳ ಅವಧಿಯಲ್ಲಿ ಅಸ್ಸಿಸಿ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವೆಲ್ಲವೂ ಈ ಆತ್ಮಿಕ ಘಟನೆಯ ಸನ್ನಿಧಿಯಲ್ಲಿ ಜೀವಿಸುತ್ತಿವೆ. ವಸತಿ ವ್ಯವಸ್ಥೆಗಳು ಹಲವು ತಿಂಗಳುಗಳ ಹಿಂದೆಯೇ ಪೂರ್ಣವಾಗಿ ಬುಕ್ ಆಗಿವೆ; ಹೋಟೆಲ್‌ಗಳು, ಊಟಕೇಂದ್ರಗಳು—ಎಲ್ಲವೂ ಮುಂಗಡ ಕಾಯ್ದಿರಿಸಲಾಗಿದೆ.

ಆದರೆ ಇದು ಕೇವಲ ಜನಸಂಚಾರದ ವಿಷಯವಲ್ಲ. ಇದು ಕೃಪೆಯ ಸಂದರ್ಭವಾಗಲಿ ಎಂಬುದು ನಮ್ಮ ಆಶೆ. ಏಕೆಂದರೆ ಇಂದಿನ ಸಮಾಜವು ನಿರಂತರವಾಗಿ ನಮಗೆ ಹೇಳುವುದು: “ನಿನ್ನ ಬಗ್ಗೆ ಮಾತ್ರ ಯೋಚಿಸು. ನಿನ್ನನ್ನು ನೀನು ಕೊಡಬೇಡ. ಇತರರ ಬಗ್ಗೆ ಚಿಂತಿಸಬೇಡ. ಮೊದಲು ನಿನ್ನನ್ನು ನೀನೇ ಕಾಪಾಡಿಕೋ.”

ಸಂತ ಫ್ರಾನ್ಸಿಸ್ ಅವರ ಸಂದೇಶವು ಇದಕ್ಕೆ ಸಂಪೂರ್ಣ ವಿರುದ್ಧ. ಅವರ ಅಸ್ಥಿಗಳೇ ಅದಕ್ಕೆ ಸಾಕ್ಷಿ. ಇವು ತಮ್ಮನ್ನೇ ಸಂಪೂರ್ಣವಾಗಿ ಅರ್ಪಿಸಿಕೊಂಡ ಒಬ್ಬರ ಅಸ್ಥಿಗಳು—ನಡೆಯುತ್ತಾ, ಮೊಣಕಾಲೂರಿ ಪ್ರಾರ್ಥಿಸುತ್ತಾ, ಗುಹೆಗಳಲ್ಲಿ ವಾಸಿಸುತ್ತಾ, ಪ್ರೀತಿಯಲ್ಲಿ ಕರಗಿದ ಜೀವನ ನಡೆಸಿದ ಒಬ್ಬರ ಚಿಹ್ನೆಗಳು.

ಅವರು ನಮ್ಮ ಹೃದಯದಲ್ಲಿ “ನಿನ್ನನ್ನು ಅರ್ಪಿಸಲು ಹೆದರಬೇಡ; ಆ ಅರ್ಪಣೆಯಲ್ಲೇ ಫಲವಿದೆ” ಎಂದು ಇಂದಿಗೂ ಹೇಳುತ್ತಾರೆ. ಇದು ಅತೀ ಸುಂದರವಾದ ಮತ್ತು ನಮ್ಮೆಲ್ಲರಿಗೂ ಆಳವಾದ ಲಾಭವನ್ನು ನೀಡುವ ಸಂದೇಶವೆಂದು ನಾನು ನಂಬುತ್ತೇನೆ.

ಪ್ರಶ್ನೆ: ಅವಶೇಷಗಳಂತಹ ಸ್ಪಷ್ಟ ಚಿಹ್ನೆಗಳ ಮೂಲಕ  ಸಂತ ಫ್ರಾನ್ಸಿಸ್ ಅವರಂತಹ ವ್ಯಕ್ತಿತ್ವವು ಯುವಜನರು ಮತ್ತು ನಾಸ್ತಿಕರೊಂದಿಗೆ ಇಂದಿಗೂ ಏಕೆ ಮಾತನಾಡುತ್ತಲೇ ಇದೆ?

ಉತ್ತರ: ನನ್ನ ನಂಬಿಕೆಯಲ್ಲಿ ಮಾತನಾಡುವುದು ಸ್ವತಃ ಸಂತ ಫ್ರಾನ್ಸಿಸರೇ. ಅವಶೇಷಗಳು ಅವರ ದೇಹದ ಅಂಶವೇ ಆಗಿವೆ. ನಾನು ಈಗ ಮಾತನಾಡುತ್ತಿರುವುದನ್ನು ನೀವು ಕೇಳುತ್ತಿರುವುದಾದರೆ, ಅದಕ್ಕೆ ಕಾರಣ ನನಗೆ ದೇಹವಿದೆ; ದೇಹವಿಲ್ಲದಿದ್ದರೆ ಧ್ವನಿಯೂ ಇರದು.

ನಮ್ಮ ದೇಹವೇ ಸಂಬಂಧಗಳ ನೆಲೆ. ಅದೇ ರೀತಿ, ಸಂತ ಫ್ರಾನ್ಸಿಸ್ ಅವರ ಅವಶೇಷಗಳು ಅವರ ಜೀವನವೆಂಬ ಬೀಜದ ಹೊರಚಿಪ್ಪಿನಂತಿವೆ—ಒಂದು ಬೀಜ ಮೊಳೆತು ಫಲ ಕೊಟ್ಟ ನಂತರ ಉಳಿಯುವ ಚಿಹ್ನೆ. ಆ ಚಿಪ್ಪು ನಮಗೆ ಅವರ ಬಗ್ಗೆ ಹೇಳುತ್ತದೆ; ಅವರ ಜೀವನದ ಕಥೆಯನ್ನು ಮೌನದಲ್ಲೇ ಸಾರುತ್ತದೆ.

ಜನರು ಅವರನ್ನು ಯಾಕೆ ಹುಡುಕುತ್ತಾರೆ? ನನ್ನ ದೃಢ ನಂಬಿಕೆ ಏನೆಂದರೆ, ಜನರು ಸಂತ ಫ್ರಾನ್ಸಿಸ್ ಅವರನ್ನು ಹುಡುಕುವುದಕ್ಕೆ ಕಾರಣ ಅವರು ಸ್ವತಃ ಸುವಾರ್ತೆಯ ಜೀವಂತ ರೂಪವಾಗಿರುವುದು. ಅವರಲ್ಲಿ ಸುವಾರ್ತೆಯನ್ನು ಸ್ವೀಕರಿಸಿದಾಗ ಅದು ಲೋಕಕ್ಕೂ, ವ್ಯಕ್ತಿಗೂ, ಸಮುದಾಯಕ್ಕೂ ಶುಭಸಂದೇಶವಾಗುತ್ತದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದೇ ಆಕರ್ಷಣೆ.

ಆರಂಭದಿಂದಲೇ ಫ್ರಾನ್ಸಿಸ್ ಅವರನ್ನು alter Christus ಎಂದು ಕರೆಯಲಾಗುತ್ತಿತ್ತು—ಅಂದರೆ “ಇನ್ನೊಬ್ಬ ಕ್ರಿಸ್ತ” ಎಂಬ ಅರ್ಥದಲ್ಲಿ ಅಲ್ಲ, ಬದಲಾಗಿ ಕ್ರಿಸ್ತನ ಪ್ರತಿಬಿಂಬ, ಕ್ರಿಸ್ತನ ಜೀವಂತ ಪ್ರತಿಮೆಯಂತೆ.

ಪ್ರಶ್ನೆ: ಅವಶೇಷಗಳ ಪ್ರದರ್ಶನವು ಕೇವಲ ಭಕ್ತಿಯ ಕ್ಷಣವೇ? ಅಥವಾ ಅದು ಆಳವಾದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಅರ್ಥ ಹೊಂದಿರುವ ಧರ್ಮಸಭೆಯ ಕ್ರಿಯೆಯೇ?

ಉತ್ತರ: ಇದು ಕೇವಲ ಜನಪ್ರಿಯ ಭಕ್ತಿಯ ಘಟನೆಯಲ್ಲ. ಇದು ಧರ್ಮಸಭೆಯ ಅನುಭವ—ಆಳವಾದ ಧಾರ್ಮಿಕ ಅರ್ಥವನ್ನು ಹೊಂದಿರುವ ಒಂದು ಆತ್ಮಿಕ ಕ್ರಿಯೆ.

ನಾವು sanfrancescovive.org ವೆಬ್‌ಸೈಟ್ ಮತ್ತು ಬಸಿಲಿಕಾದ ಸಾಮಾಜಿಕ ಜಾಲತಾಣಗಳಲ್ಲಿ (ಫೇಸ್‌ಬುಕ್, ಇನ್‌ಸ್ಟಾಗ್ರಾಮ್) ಸಾಕಷ್ಟು ಮಾಹಿತಿ ನೀಡಿದ್ದೇವೆ. ನಮ್ಮ ಉದ್ದೇಶ ಭಕ್ತಿಯನ್ನು—ಪ್ರೀತಿಯನ್ನು ಪೋಷಿಸುವುದು.ಅದು ಕೇವಲ ಭಾವನಾತ್ಮಕ ಭಕ್ತಿ ಅಲ್ಲ; ಧಾರ್ಮಿಕ ಆಧಾರದ ಮೇಲೆ ನಿಂತಿರುವ ಧರ್ಮಸಭಾ ಅನುಭವ.

ಧಾರ್ಮಿಕ ತತ್ವಶಾಸ್ತ್ರವು ಕಷ್ಟಕರವಾಗಲು ಹುಟ್ಟಿಲ್ಲ; ಅದು ನಮ್ಮೊಳಗಿನ ಜೀವನವನ್ನು ಪದಗಳಲ್ಲಿ ವ್ಯಕ್ತಪಡಿಸಲು ಹುಟ್ಟಿದೆ. ಈ ದೃಷ್ಟಿಯಿಂದ, ಸಂತ ಫ್ರಾನ್ಸಿಸ್ ನಮಗೆ ದಾನಧರ್ಮದಲ್ಲಿ ಮೊಳೆತ ಬೀಜದ ಹೊರಚಿಪ್ಪಿನಂತೆ ಕಾಣುತ್ತಾರೆ. ಕಾಲ ಮತ್ತು ಸ್ಥಳಗಳನ್ನು ಮೀರಿ ಫಲ ನೀಡಿದ ಜೀವನದ ಸಾಕ್ಷಿಯಾಗಿದ್ದಾರೆ. ಅವರ ಬದುಕು ನಮಗೆ ದಿನನಿತ್ಯದ ಜೀವನವನ್ನೇ ಪ್ರೀತಿಯಿಂದ ಬದುಕಲು ಆಹ್ವಾನಿಸುತ್ತದೆ. ಅದೇ ಅವರ ಸಂದೇಶ.

ಪ್ರಶ್ನೆ: ಸಾಮಾಜಿಕ ಸಂಕಟಗಳು ಮತ್ತು ಸಂಘರ್ಷಗಳಿಂದ ಗುರುತುಗೊಂಡ ಈ ಕಾಲದಲ್ಲಿ, ಸಂತ ಫ್ರಾನ್ಸಿಸ್ ಅಸ್ಸಿಸಿಯವರು ವಿಶ್ವಾಸಿಗಳಿಗೆ ಯಾವ ಸರ್ವಮಾನ್ಯ ಸಂದೇಶವನ್ನು ನೀಡುತ್ತಾರೆ?

ಉತ್ತರ: ಸಂತ ಫ್ರಾನ್ಸಿಸ್ ಅವರು ನಮ್ಮ ಕಾಲಕ್ಕಿಂತ ಬಹಳ ಉತ್ತಮವಾದ ಯುಗದಲ್ಲಿ ಬದುಕಲಿಲ್ಲ. ಆ ಕಾಲದಲ್ಲೂ ಧಾರ್ಮಿಕ ಯುದ್ಧಗಳು, ನಗರಗಳ ಒಳಗಿನ ಸಂಘರ್ಷಗಳು, ಕುಟುಂಬ ವೈಷಮ್ಯಗಳು, ಅನ್ಯಾಯಗಳು—ಇವೆಲ್ಲವೂ ಇದ್ದವು. ಅದು ಆದರ್ಶ ಕಾಲವಲ್ಲ.

ಆದರೂ ಅವರ ಸಂದೇಶ ಅತ್ಯಂತ ಸ್ಪಷ್ಟ ಮತ್ತು ಸುಂದರವಾಗಿದೆ: ಒಬ್ಬ ವ್ಯಕ್ತಿ ನಿಜವಾಗಿ ಸುವಾರ್ತೆಯನ್ನು ಅಪ್ಪಿಕೊಂಡರೆ, ತನ್ನ ಸುತ್ತಲಿನ ಇತಿಹಾಸವನ್ನು ಬದಲಾಯಿಸುತ್ತಾನೆ; ಹೊಸ ಸಂಬಂಧಗಳನ್ನು ನಿರ್ಮಿಸುತ್ತಾನೆ.ನಮ್ಮೊಳಗೆ ಕೆಲವೊಮ್ಮೆ ಒಂದು ಧ್ವನಿ ಕೇಳಿಸುತ್ತದೆ: “ನೀನು ಏನೂ ಮಾಡಲಾರೆ. ನೀನು ಒಬ್ಬನೇ. ಶಕ್ತಿಶಾಲಿಗಳೇ ಆಳುತ್ತಾರೆ.” ಆದರೆ ಫ್ರಾನ್ಸಿಸ್ ಅವರ ಜೀವನವೇ ಈ ಮಾತು ಸುಳ್ಳು ಎಂದು ಸಾರುತ್ತದೆ. ಒಬ್ಬ ವ್ಯಕ್ತಿ ಸುವಾರ್ತೆಯನ್ನು ಜೀವಿಸಿದರೆ, ಅವನು ಸಂಪೂರ್ಣ ಜಗತ್ತನ್ನು ಬದಲಾಯಿಸದಿದ್ದರೂ, ತನ್ನ ಸುತ್ತಲಿನ ವಾಸ್ತವಿಕತೆಯನ್ನು ಬದಲಾಯಿಸಬಲ್ಲನು.

ಎಂಟು ನೂರು ವರ್ಷಗಳಾದರೂ ಫ್ರಾನ್ಸಿಸ್ ಇನ್ನೂ ಹೃದಯಗಳನ್ನು ಸ್ಪರ್ಶಿಸುತ್ತಿದ್ದಾರೆ. ಅವರ ವಿಶ್ವಸಂದೇಶ ಇದೇ: ನಾವು ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾರೆವು, ಆದರೆ ಪ್ರತಿಯೊಬ್ಬರೂ ಒಂದು ಹೆಜ್ಜೆ ಇಟ್ಟರೆ, ಆ ಹೆಜ್ಜೆಗೆ ಪರಿಣಾಮವಿರುತ್ತದೆ. “ನಾವು ಏನೂ ಮಾಡಲಾರೆವು” ಎನ್ನುವುದು ಸತ್ಯವಲ್ಲ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

17 ಫೆಬ್ರವರಿ 2026, 11:40