ಹುಡುಕಿ

2026.02.18 Il vescovo greco-cattolico Maksym Ryabukha, Esarca di Donetsk 2026.02.18 Il vescovo greco-cattolico Maksym Ryabukha, Esarca di Donetsk 

ಡೊನೆಟ್ಸ್ಕ್ ಉಪ ಪ್ರಧಾನ ಧರ್ಮಾಧ್ಯಕ್ಷರು: ದುಷ್ಟತನವನ್ನು ಜಯಿಸುವ ಭರವಸೆ ಇನ್ನೂ ದೃಢವಾಗಿದೆ

ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಡೊನೆಟ್ಸ್ಕ್ ಮಹಾ ಧರ್ಮಪ್ರಾಂತ್ಯದ ಉಪ ಪ್ರಧಾನ ಧರ್ಮಾಧ್ಯಕ್ಷರಾದ ಮಕ್ಸಿಮ್ ರ್ಯಾಬುಖಾ ಅವರು ಸ್ಥಳೀಯ ಧರ್ಮಕೇಂದ್ರಗಳು ಮತ್ತು ಸಮುದಾಯಗಳಲ್ಲಿ ಜೀವನ ಹೇಗೆ ಮುಂದುವರಿಯುತ್ತಿದೆ, ಔಷಧಿ ಮತ್ತು ಜನರೇಟರ್‌ಗಳು ಜನರಿಗೆ ಜೀವಾಳವಾಗುತ್ತಿರುವುದು ಹಾಗೂ ಉಕ್ರೇನ್‌ನಲ್ಲಿ ಭರವಸೆ ಮತ್ತು ನಂಬಿಕೆ ಇನ್ನೂ ಜೀವಂತವಾಗಿರುವುದನ್ನು ಹಂಚಿಕೊಂಡಿದ್ದಾರೆ.

ವ್ಯಾಟಿಕನ್ ವರದಿ

ರಷ್ಯಾ ಉಕ್ರೇನ್ ಮೇಲೆ ಸಂಪೂರ್ಣ ಪ್ರಮಾಣದ ದಾಳಿಯ ನಾಲ್ಕನೇ ವರ್ಷದ ಸ್ಮರಣೆಯ ಹಿನ್ನೆಲೆಯಲ್ಲಿ, ವ್ಯಾಟಿಕನ್ ಸುದ್ದಿ ಸಂಸ್ಥೆಯ ಸ್ವಿಟ್ಲಾನಾ ದುಖೋವಿಚ್ ಅವರು ಉಕ್ರೇನ್‌ನ ಡೊನೆಟ್ಸ್ಕ್ ಡೊನೆಟ್ಸ್ಕ್ ಮಹಾ ಧರ್ಮಪ್ರಾಂತ್ಯದ ಉಪ ಪ್ರಧಾನ ಧರ್ಮಾಧ್ಯಕ್ಷರಾದ ಮಕ್ಸಿಮ್ ರ್ಯಾಬುಖಾ ಅವರೊಂದಿಗೆ ಸಂಭಾಷಣೆ ನಡೆಸಿದರು.

ಬಾಂಬ್ ದಾಳಿ ಮತ್ತು ಹಿಂಸಾಚಾರ ನಡುವೆಯೂ, ಧರ್ಮಕೇಂದ್ರದ ಸದಸ್ಯರು “ಸಹೋದರತ್ವ, ಸ್ನೇಹ ಮತ್ತು ಪರಸ್ಪರ ಸಹಾಯ” ಹಂಚುತ್ತಾ ಎಲ್ಲ ಸಂಕಷ್ಟಗಳ ನಡುವೆಯೂ ಬದುಕುತ್ತಿರುವ ಕುರಿತು ತಾನು ಕೇಳುತ್ತಲೇ ಇದ್ದೇನೆ ಎಂದು ಪೂಜ್ಯ ಧರ್ಮಾಧ್ಯಕ್ಷರಾದವರು ವಿವರಿಸಿದರು.

ಸಂಘರ್ಷದ ಮಧ್ಯೆಯೂ ಯುವಜನರು ಭರವಸೆ ಕಳೆದುಕೊಳ್ಳಿಲ್ಲವೆಂದು ಅವರು ಒತ್ತಿಹೇಳಿದರು. ಪೂಜ್ಯ ಧರ್ಮಾಧ್ಯಕ್ಷರಾದ ರ್ಯಾಬುಖಾ ಅವರ ಮಾತಿನಲ್ಲಿ, ಯುವಜನರು “ಬಾಳಲು ಧೈರ್ಯ ಹೊಂದಿರುವವರು, ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಬಯಸುವವರು ಮತ್ತು ತಮ್ಮ ಜೀವನದ ದೃಷ್ಟಿಯಿಂದ ಇತರರಿಗೆ ಧೈರ್ಯ ತುಂಬುವವರು” ಆಗಿದ್ದಾರೆ.

ಈ ಕೆಳಗೆ ಸಂದರ್ಶನವನ್ನು ಸ್ಪಷ್ಟ ಹಾಗೂ ಸಂಕ್ಷಿಪ್ತ ರೂಪದಲ್ಲಿ ಲೇಖನ ರೂಪದಲ್ಲಿ ನೀಡಲಾಗಿದೆ. 

ಪ್ರಶ್ನೆ: ಪೂಜ್ಯರೇ, ನಿಮ್ಮ ಧರ್ಮಪ್ರಾಂತ್ಯದ ಮಾನವೀಯ ಪರಿಸ್ಥಿತಿ ಹೇಗಿದೆ? ಯಾವ ಪ್ರದೇಶಗಳಲ್ಲಿ ಪರಿಸ್ಥಿತಿ ಅತ್ಯಂತ ಕಠಿಣವಾಗಿದೆ?

ಉತ್ತರ: ನಮ್ಮ ಡೊನೆಟ್ಸ್ಕ್  ಧರ್ಮಪ್ರಾಂತ್ಯದ ಮಾನವೀಯ ಪರಿಸ್ಥಿತಿ ನಿಜಕ್ಕೂ ಅತ್ಯಂತ ಕಠಿಣವಾಗಿದೆ. 2014ರಲ್ಲಿ ನಮ್ಮ ಪ್ರದೇಶದಲ್ಲಿ ಯುದ್ಧ ಆರಂಭವಾದ ಬಳಿಕ ಅತ್ಯಂತ ಕಠಿಣ ಚಳಿಗಾಲಗಳಲ್ಲಿ ಇದೂ ಒಂದಾಗಿದೆ. ರಷ್ಯಾದ ದಾಳಿಗಳಿಂದ ಶಕ್ತಿಸೌಕರ್ಯಗಳು ಹಾನಿಗೊಳಗಾಗಿದ್ದು, ನಮ್ಮ ಪ್ರದೇಶಗಳಲ್ಲಿ ದಿನಕ್ಕೆ 20 ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಕಡಿತವಾಗುತ್ತಿದೆ. ಮರದ ಒಲೆಗಳನ್ನು ಬಳಸುವ ಗ್ರಾಮಗಳಲ್ಲಿ ಪರಿಸ್ಥಿತಿ ಸ್ವಲ್ಪ ಸುಲಭವಾಗಿದೆ, ಏಕೆಂದರೆ ಸ್ಥಳೀಯ ಬೆಂಬಲ ಇನ್ನೂ ಲಭ್ಯವಿದೆ.

ಅತ್ಯಂತ ಕಷ್ಟಕರ ಪರಿಸ್ಥಿತಿ ನಗರಗಳಲ್ಲಿ ಕಂಡುಬರುತ್ತಿದೆ, ಏಕೆಂದರೆ ಅನೇಕ ಬಹುಮಹಡಿ ಕಟ್ಟಡಗಳಲ್ಲಿ ಸ್ವತಂತ್ರ ತಾಪನ ವ್ಯವಸ್ಥೆ ಇಲ್ಲ. ಆದ್ದರಿಂದ ವಿದ್ಯುತ್ ಕಡಿತದಿಂದ ಉಷ್ಣತೆ, ನೀರು ಮತ್ತು ಇತರೆ ಮೂಲಭೂತ ಅಗತ್ಯಗಳ ಕೊರತೆ ಉಂಟಾಗುತ್ತಿದೆ. ಆದಾಗ್ಯೂ, ಈ ದಾಳಿಗಳ ಪರಿಣಾಮಗಳನ್ನು ಎದುರಿಸಲು ಸರ್ಕಾರ ತನ್ನ ಸಾಮರ್ಥ್ಯದ ಮಟ್ಟಿಗೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಲೇಬೇಕು. ತಾಂತ್ರಿಕ ಸಹಾಯ ಸಿಬ್ಬಂದಿ ನಾಗರಿಕರ ಸಾಮಾನ್ಯ ಜೀವನ ಪರಿಸ್ಥಿತಿಯನ್ನು ಪುನಃಸ್ಥಾಪಿಸಲು ಅಸಾಧ್ಯವೆನಿಸುವ ಮಟ್ಟಿಗೆ ಪರಿಶ್ರಮಿಸುತ್ತಿದ್ದಾರೆ. 

ಪ್ರಶ್ನೆ: ಜನರಿಗೆ ಮಾನವೀಯ ನೆರವನ್ನು ನೀವು ಹೇಗೆ ಒದಗಿಸುತ್ತೀರಿ? ಅದಕ್ಕಾಗಿ ಸಾಕಷ್ಟು ಸಂಪನ್ಮೂಲಗಳಿವೆಯೇ?

ಉತ್ತರ: ನಾವು ವಿವಿಧ ರೀತಿಯಲ್ಲಿ ನೆರವು ನೀಡಲು ಪ್ರಯತ್ನಿಸುತ್ತೇವೆ. ದೇವರು ಧರ್ಮಸಭೆಯನ್ನು ಮಹಾನ್ ಸಮುದಾಯವಾಗಿ ರೂಪಿಸಿರುವುದಕ್ಕಾಗಿ ನಾವು ಕೃತಜ್ಞರಾಗಿದ್ದೇವೆ. ಧರ್ಮಸಭೆಯ ವಿಶ್ವವ್ಯಾಪಕತೆಯಿಂದ, ನಮ್ಮ ಪರಿಸ್ಥಿತಿಗೆ ದೂರವಾಗಿದ್ದರೂ ಹೃದಯದಲ್ಲಿ, ಚಿಂತನೆಗಳಲ್ಲಿ, ಪ್ರಾರ್ಥನೆಗಳಲ್ಲಿ ಹಾಗೂ ನೈಜ ಸಹಾಯದ ಮೂಲಕ ನಮ್ಮೊಂದಿಗೆ ಹತ್ತಿರವಾಗಿರುವ ಅನೇಕ ಸ್ನೇಹಿತರು ನಮಗಿದ್ದಾರೆ.

ವಿವಿಧ ಸಂಸ್ಥೆಗಳು ಜನರೇಟರ್‌ಗಳಿಗೆ ಇಂಧನ ಖರೀದಿಸಲು ಸಹಾಯ ಮಾಡುತ್ತವೆ. ಹಲವಾರು ಸಂದರ್ಭಗಳಲ್ಲಿ ನಮ್ಮ ಎಲ್ಲಾ ಧರ್ಮಕೇಂದ್ರಗಳು ಮತ್ತು ಬೆಂಬಲಿಸುವ ಸಮುದಾಯಗಳಿಗೆ ಸ್ನೇಹಿತರು ಜನರೇಟರ್‌ಗಳನ್ನು ಒದಗಿಸಿದ್ದಾರೆ. ಈಗಲೂ ಕೆಲವು ಜನರೇಟರ್‌ಗಳನ್ನು ಸ್ನೇಹಿತರು ಕಳುಹಿಸಿದ್ದು, ಅವುಗಳನ್ನು ಗ್ರಾಮ ಮತ್ತು ನಗರಗಳಲ್ಲಿ ಖಾಸಗಿ ಮನೆಗಳಲ್ಲಿ ವಾಸಿಸುವ ಧರ್ಮಕೇಂದ್ರದ ಸದಸ್ಯರಿಗೆ ಹಂಚಲಾಗಿದೆ. ಮಕ್ಕಳ ಕೇಂದ್ರಗಳು, ಧರ್ಮಶಿಕ್ಷಣ ಶಾಲೆಗಳು ಮುಂತಾದ ನಮ್ಮ ವಿವಿಧ ಚಟುವಟಿಕೆಗಳಲ್ಲೂ ಈ ಜನರೇಟರ್‌ಗಳನ್ನು ಬಳಸಲಾಗುತ್ತಿದೆ.

ಈ ಕಠಿಣ ಸಮಯದಲ್ಲಿ ನಮ್ಮ ದೇವಾಲಯಗಳ ಎಲ್ಲಾ ಸ್ಥಳಗಳು ಚೇತರಿಕೆ, ಭರವಸೆ ಮತ್ತು ನೆರವಿನ ಕೇಂದ್ರಗಳಾಗಿವೆ. ಸ್ಥಳೀಯ ಧರ್ಮಕೇಂದ್ರಗಳ ಸಮುದಾಯಗಳ ಜೊತೆಗೆ, ಸೇವಾ(Caritas) ಜಾಲವೂ ಕಾರ್ಯನಿರ್ವಹಿಸುತ್ತಿದೆ. ನಮ್ಮ ಡೊನೆಟ್ಸ್ಕ್ ಧರ್ಮಪ್ರಾಂತ್ಯದಲ್ಲಿ ಏಳು ಪ್ರಮುಖ ಸೇವಾಕೇಂದ್ರಗಳು(Caritas) ವಿವಿಧ ನಗರ ಮತ್ತು ಗ್ರಾಮಗಳಲ್ಲಿ ಜನರಿಗೆ ನೆರವು ನೀಡುತ್ತಿವೆ. ಜನರಿಗೆ ಸಹಾಯ ಮಾಡುವಲ್ಲಿ ಇದು ಮಹತ್ತರ ಸಂಪನ್ಮೂಲವಾಗಿದೆ. ಈ ಸಂಕಷ್ಟದ ಸಮಯದಲ್ಲಿ ಉಕ್ರೇನ್ ಜನರೊಂದಿಗೆ ನಿಂತಿರುವ ಎಲ್ಲಾ ದಾನಿಗಳು ಮತ್ತು ಸಂಸ್ಥೆಗಳಿಗೂ ನಾವು ಆಳವಾದ ಕೃತಜ್ಞತೆ ವ್ಯಕ್ತಪಡಿಸುತ್ತೇವೆ.

ಉದಾಹರಣೆಗೆ, ಒಂದು ಸಂಸ್ಥೆ ನನ್ನನ್ನು ಸಂಪರ್ಕಿಸಿ, “ಪೂಜ್ಯರೇ, ನೀವು ಎದುರಿಸುತ್ತಿರುವ ಪರಿಸ್ಥಿತಿ ಹೇಗಿದೆ?” ಎಂದು ಕೇಳಿತು. ನಾನು ವಿವರಿಸಿದ ಬಳಿಕ, “ನಾವು ಔಷಧಿ ಸಹಾಯ ನೀಡಬಹುದು” ಎಂದು ಅವರು ತಿಳಿಸಿದರು. ನಂತರ ವಿವಿಧ ಧರ್ಮಕೇಂದ್ರಗಳಲ್ಲಿ ಜ್ವರ ಮತ್ತು ಇತರೆ ಕಾಯಿಲೆಗಳ ಅಗತ್ಯ ಔಷಧಿಗಳನ್ನು ಹಂಚುವ ಕಾರ್ಯವನ್ನು ನಾವು ಸಂಘಟಿಸಿದೆವು. ಜಗತ್ತು ಇಂದು ಉಕ್ರೇನ್ ಮತ್ತು ನಮ್ಮ ಜನರೊಂದಿಗೆ ಕೈಜೋಡಿಸುತ್ತಿರುವ ಅನೇಕ ಮಾರ್ಗಗಳಲ್ಲಿ ಇದೂ ಒಂದಾಗಿದೆ. 

ಪ್ರಶ್ನೆ:ಇತ್ತೀಚಿನ ತಿಂಗಳುಗಳಲ್ಲಿ ನಿಮ್ಮ  ಧರ್ಮಪ್ರಾಂತ್ಯದ ನಗರಗಳು ಮತ್ತು ಗ್ರಾಮಗಳನ್ನು ಅನೇಕರು ತೊರೆದಿರುವರೇ?

ಉತ್ತರ: ನಗರಗಳು ಮತ್ತು ಗ್ರಾಮಗಳ ಚಲನವಲನವನ್ನು ಗಮನಿಸಿದಾಗ, ದೊಡ್ಡ ಪ್ರಮಾಣದ ವಲಸೆ ನಡೆದಿದೆ ಎಂದು ಹೇಳುವುದು ಕಷ್ಟಕರವಾಗಿದೆ. ಉದಾಹರಣೆಗೆ ಜಪೊರಿಜ್ಝಿಯಾ ನಗರವು ಇನ್ನೂ ತನ್ನ ಸಾಮಾನ್ಯ ಜೀವನವನ್ನು ಮುಂದುವರಿಸುತ್ತಿದೆ. ಕೆಲವು ಜನರು ನಗರಗಳನ್ನು ತೊರೆದಿದ್ದಾರೆ. ವಿಶೇಷವಾಗಿ ಡೊನೆಟ್ಸ್ಕ್ ಪ್ರದೇಶದ ಮುಂಚೂಣಿ ಭಾಗಗಳಿಗೆ ಸಮೀಪದ ಗ್ರಾಮಗಳ ನಿವಾಸಿಗಳು ಸುರಕ್ಷಿತ ಸ್ಥಳಗಳ ಹುಡುಕಾಟದಲ್ಲಿ ತೆರಳುತ್ತಿದ್ದಾರೆ. ಅಲ್ಲಿ ಅನೇಕ ಕುಟುಂಬಗಳು ಹಂತ ಹಂತವಾಗಿ ತಮ್ಮ ಗ್ರಾಮಗಳನ್ನು ತೊರೆದು ಸುರಕ್ಷಿತ ಪ್ರದೇಶಗಳಿಗೆ ಸಾಗುತ್ತಿವೆ.

ಆದಾಗ್ಯೂ, ಈ ಚಲನೆಗಳು ಸಾಮಾನ್ಯ ಸ್ವರೂಪದ್ದಾಗಿವೆ, ಏಕೆಂದರೆ ಜನರು ಬರುತ್ತಾ ಹೋಗುತ್ತಾ ಇದ್ದಾರೆ. ಪರಿಸ್ಥಿತಿ ಸ್ವಲ್ಪ ಶಾಂತವಾದ ತಕ್ಷಣವೇ ಅನೇಕ ಕುಟುಂಬಗಳು ಮತ್ತೆ ತಮ್ಮ ಗ್ರಾಮಗಳು ಮತ್ತು ನಗರಗಳಿಗೆ ಮರಳಲು ಪ್ರಾರಂಭಿಸುತ್ತಿವೆ.

ಪ್ರಶ್ನೆ: ಧಾರ್ಮಿಕ ಸೇವಾ ಕಾರ್ಯಗಳು ಹೇಗೆ ನಡೆಯುತ್ತಿವೆ? ಗುರುಗಳು ಮತ್ತು ಧರ್ಮಸೇವಕರು ಇಂತಹ ಗಂಭೀರ ಸವಾಲುಗಳನ್ನು ಹೇಗೆ ಎದುರಿಸುತ್ತಿದ್ದಾರೆ?

ಉತ್ತರ: ಸೌಭಾಗ್ಯವಶಾತ್, ನಾವು ಇನ್ನೂ ಧಾರ್ಮಿಕ ಸೇವಾ ಕಾರ್ಯಗಳನ್ನು ನಿಯಮಿತವಾಗಿ ಮುಂದುವರಿಸಲು ಸಾಧ್ಯವಾಗುತ್ತಿದೆ. ಯುದ್ಧ ಮತ್ತು ಅನೇಕ ಸವಾಲುಗಳ ನಡುವೆಯೂ, ನಮ್ಮ ಗುರುಗಳು ಮತ್ತು ವಿಶ್ವಾಸಿಗಳು ಪ್ರಾರ್ಥನೆ, ಏಕತೆ ಮತ್ತು ಸಹೋದರತ್ವದಲ್ಲಿ ಸಕ್ರಿಯರಾಗಿರಲು ಸದಾ ಪ್ರಯತ್ನಿಸುತ್ತಿದ್ದಾರೆ. ಪರಿಸ್ಥಿತಿ ಅನುಮತಿಸುವ ಕಡೆಗಳಲ್ಲಿ ಭಾನುವಾರದ ಪ್ರಾರ್ಥನೆಗಳು ಮತ್ತು ದೈನಂದಿನ ಪವಿತ್ರ ಬಲಿಪೂಜೆಗಳು ನಿಯಮಿತವಾಗಿ ಆಚರಿಸಲಾಗುತ್ತಿವೆ. ಆದರೆ ಮುಂಚೂಣಿ ಪ್ರದೇಶಗಳ ಬದಲಾವಣೆಯಿಂದ ದುಃಖಕರವಾಗಿ ಕೆಲವು ಪಾರಿಷ್‌ಗ ಧರ್ಮಕೇಂದ್ರಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ.

ಆದಾಗ್ಯೂ, ಸಾಧ್ಯವಾದಲ್ಲಿ ಜನರು ಪ್ರಾರ್ಥನೆಯನ್ನು ಮುಂದುವರಿಸುತ್ತಿದ್ದಾರೆ. ಮಕ್ಕಳಿಗೆ, ಯುವಜನರಿಗೆ ಮತ್ತು ಕುಟುಂಬಗಳಿಗೆ ಧರ್ಮೋಪದೇಶ; “ಮದರ್ಸ್ ಇನ್ ಪ್ರೇಯರ್” ಹಾಗೂ “ನೈಟ್ಸ್ ಆಫ್ ಕೊಲಂಬಸ್” ಮುಂತಾದ ಸಮುದಾಯಗಳ ಪ್ರಾರ್ಥನಾ ಕೂಟಗಳು ಸಹ ನಡೆಯುತ್ತಿವೆ. ಈ ಎಲ್ಲಾ ಗುಂಪುಗಳು ತಮ್ಮ ನಿಯಮಿತ ಸಭೆಗಳನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿವೆ.

ಇದರ ಜೊತೆಗೆ ವಿವಿಧ ತರಬೇತಿ ಕಾರ್ಯಕ್ರಮಗಳೂ ನಡೆಯುತ್ತಿವೆ. ಉದಾಹರಣೆಗೆ, ಕಳೆದ ತಿಂಗಳಲ್ಲಿ ಡೊನೆಟ್ಸ್ಕ್ ಎಕ್ಸಾರ್ಕೇಟ್‌ನ ಧರ್ಮಕೇಂದ್ರಗಳಲ್ಲಿ ಗುರುಗಳಿಗೆ ಸಹಾಯ ಮಾಡುವ ಯುವ ನಾಯಕರು ಮತ್ತು ಪೀಠ ಸೇವಕರಿಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ತಪಸ್ಸು ಕಾಲದ ಆರಂಭವನ್ನೂ ನಾವು ಆಚರಿಸಿದ್ದೇವೆ. ಧರ್ಮಸಭೆ ತನ್ನ ಜೀವನದಲ್ಲಿ ಪಾಲಿಸುವ ಎಲ್ಲಾ ನಿಯಮಿತ ಚಟುವಟಿಕೆಗಳನ್ನು ನಮ್ಮ ಪ್ರದೇಶದಲ್ಲಿಯೂ ನಾವು ಉತ್ತೇಜಿಸಿ ಮುಂದುವರಿಸುತ್ತಿದ್ದೇವೆ. 

ಪ್ರಶ್ನೆ: ನೀವು  ಧರ್ಮಪ್ರಾಂತ್ಯದ ಧರ್ಮಕೇಂದ್ರಗಳಿಗೆ ಆಗಾಗ್ಗೆ ಭೇಟಿ ನೀಡಿ ವಿವಿಧ ವಯಸ್ಸಿನ ಜನರನ್ನು, ವಿಶೇಷವಾಗಿ ಯುವಕರನ್ನು ಭೇಟಿಯಾಗುತ್ತೀರಿ. ಯುವಕರು ನಿಮ್ಮೊಂದಿಗೆ ಯಾವ ವಿಷಯಗಳನ್ನು ಹಂಚಿಕೊಳ್ಳುತ್ತಾರೆ?

ಉತ್ತರ: ವಾಸ್ತವವಾಗಿ, ಧರ್ಮಕೇಂದ್ರಗಳಿಗೆ ಮಾಡುವ ಭೇಟಿಗಳು ನಾವೆಲ್ಲರೂ ಒಂದು ದೊಡ್ಡ ಕುಟುಂಬವಾಗಿ ಸೇರುವ ಕ್ಷಣಗಳಾಗಿವೆ. ಪ್ರತಿಯೊಂದು ಧರ್ಮಕೇಂದ್ರಕ್ಕೆ ಭೇಟಿ ನೀಡುವಾಗ, ಪವಿತ್ರ ಬಲಿಪೂಜೆಯ ಬಳಿಕ ಧರ್ಮಸಭೆ ಈ ಸಮಯದಲ್ಲಿ ಅನುಭವಿಸುತ್ತಿರುವ ಸಂಗತಿಗಳು—ವಿವಿಧ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳು—ಇವೆಲ್ಲವನ್ನು ಹಂಚಿಕೊಳ್ಳಲು ನಾನು ಪ್ರಯತ್ನಿಸುತ್ತೇನೆ. ಇದರಿಂದ ವಿವಿಧ ಪ್ರದೇಶಗಳ ದೇವಾಲಯಗಳಲ್ಲಿ ಇರುವ ಜನರಿಗೆ ವಿಶಾಲ ದೃಷ್ಟಿಕೋನ ಮತ್ತು ಸಭೆಯ ಜೀವನದ ಬಗ್ಗೆ ಹೆಚ್ಚಿನ ಸಂವೇದನೆ ಮೂಡುತ್ತದೆ.

ನಂತರ ವೈಯಕ್ತಿಕ ಭೇಟಿಗಳ ಕ್ಷಣಗಳೂ ಇರುತ್ತವೆ. ಆಗ ಜನರು “ನಮ್ಮ ಭವಿಷ್ಯ ಏನು?” ಎಂದು ಕೇಳುತ್ತಾರೆ. ಆದರೆ ಅದೇ ಸಮಯದಲ್ಲಿ ಅವರು ತಮ್ಮ ಭರವಸೆಯನ್ನೂ ಹಂಚಿಕೊಳ್ಳುತ್ತಾರೆ. ದೇವರು ನಮಗೆ ಜೀವನವನ್ನು ನೀಡಿದರೆ, ನಮ್ಮನ್ನು ಕೈಬಿಡದೆ ಸಹಾಯ ಮಾಡುವ ಮಾರ್ಗವನ್ನೂ ಯೋಜಿಸಿದ್ದಾನೆ ಎಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸುತ್ತಾರೆ. ಸಂಕಷ್ಟಗಳ ನಡುವೆಯೂ ಸಹೋದರತ್ವ, ಸ್ನೇಹ ಮತ್ತು ಪರಸ್ಪರ ಸಹಾಯವನ್ನು ಅನುಭವಿಸುತ್ತಿರುವ ಕುರಿತು ಹಲವರು ನನ್ನೊಂದಿಗೆ ಹಂಚಿಕೊಳ್ಳುತ್ತಾರೆ. ಈ ಕ್ಷಣಗಳು ಮಾನವೀಯತೆಯ ಮಹತ್ವವನ್ನು ಸ್ಪಷ್ಟಪಡಿಸುತ್ತವೆ.

ಯುವಜನರೊಂದಿಗೆ ಮಾತನಾಡುವಾಗ, ಅವರು ಜೀವನದ ಅರ್ಥ ಮತ್ತು ತಮ್ಮ ಭರವಸೆಯ ಅರ್ಥದ ಬಗ್ಗೆ ಪ್ರಶ್ನಿಸುತ್ತಾರೆ. ತಮ್ಮ ಕನಸುಗಳನ್ನು ಹಂಚಿಕೊಂಡು, ಹೃದಯದಲ್ಲಿ ಅನುಭವಿಸುವ ಸತ್ಯಕ್ಕೆ ನಿಷ್ಠರಾಗಿಯೇ ಈ ಅಶಾಂತ ಜಗತ್ತಿನಲ್ಲಿ ಹೇಗೆ ಮುಂದುವರಿಯಬೇಕು ಎಂಬುದರ ಕುರಿತು ಸಲಹೆ ಕೇಳುತ್ತಾರೆ. ಕನಸುಗಳನ್ನು ಹೊಂದಿರುವ ಹಾಗೂ ಜೀವನದ ಬಗ್ಗೆ ಆಳವಾದ ಮತ್ತು ಸ್ಪಷ್ಟ ಅರಿವು ಹೊಂದಿರುವ ಈ ಯುವಜನರನ್ನು ನೋಡಿ ನಾನೂ ಪ್ರಭಾವಿತನಾಗಿದ್ದೇನೆ.

ಇಲ್ಲಿ—ಯುದ್ಧ ಪ್ರದೇಶದಲ್ಲೇ—ಬಾಳಲು ಧೈರ್ಯ ಹೊಂದಿರುವ, ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಬಯಸುವ ಮತ್ತು ತಮ್ಮ ಜೀವನದ ದೃಷ್ಟಿಯಿಂದ ಇತರರಿಗೆ ಧೈರ್ಯ ತುಂಬುವ ಅನೇಕ ಯುವಜನರನ್ನು ನಾನು ಭೇಟಿ ಮಾಡುತ್ತಿದ್ದೇನೆ. 

ಪ್ರಶ್ನೆ: ವಿಸ್ತೃತ ಪ್ರಮಾಣದ ದಾಳಿಯ ದುಃಖದ ನಾಲ್ಕನೇ ವರ್ಷದ ಸ್ಮರಣೆಯಲ್ಲಿ ವ್ಯಾಟಿಕನ್ ಸುದ್ದಿ ಸಂಸ್ಥೆಯ ಓದುಗರಿಗೂ ಕೇಳುಗರಿಗೂ ನೀವು ಯಾವ ಸಂದೇಶವನ್ನು ನೀಡಲು ಬಯಸುತ್ತೀರಿ?

ಉತ್ತರ: ವಿಸ್ತೃತ ಪ್ರಮಾಣದ ದಾಳಿಯ ಆರಂಭದ ಸ್ಮರಣೆಯನ್ನು ಚಿಂತಿಸಿದಾಗ, ದೇವರು ತನ್ನ ಜನರನ್ನು ಕೈಬಿಟ್ಟಿಲ್ಲ ಎಂಬ ವಿಚಾರ ನನ್ನ ಮನಸ್ಸನ್ನು ಆಳವಾಗಿ ಸ್ಪರ್ಶಿಸುತ್ತದೆ. ದುಷ್ಟತನವು ಬಲವಾಗಿ ವ್ಯಕ್ತವಾಗುತ್ತಿದ್ದು, ಮಾನವ ಜೀವನದ ಮೂಲಕ ದುಷ್ಟನು ಕಾರ್ಯನಿರ್ವಹಿಸಲು ಅವಕಾಶ ನೀಡುವ ಪಾಪವು ನಿಜಕ್ಕೂ ಶಕ್ತಿಯುತವಾಗಿದೆ. ಆದಾಗ್ಯೂ, ಆಕ್ರಮಣಕಾರರಿಂದ ಉಕ್ರೇನ್ ಜನರು ಅನುಭವಿಸುವ ದ್ವೇಷದ ವ್ಯಾಪಕತೆಯ ನಡುವೆಯೂ ದೇವರು ನಮ್ಮನ್ನು ಕೈಬಿಡುವುದಿಲ್ಲ ಎಂಬುದನ್ನು ನಾವು ನೋಡುತ್ತಿದ್ದೇವೆ.

ಉದಾಹರಣೆಗೆ ಜಪೊರಿಜ್ಝಿಯಾ ನಗರವನ್ನು ನಾನು ನೆನಪಿಸಿಕೊಳ್ಳುತ್ತೇನೆ. 2023 ಅಕ್ಟೋಬರ್‌ನಿಂದ ಅನೇಕರು “  ರಷ್ಯನ್ನರು ನಗರವನ್ನು ಸಂಪೂರ್ಣ ನಾಶಮಾಡುತ್ತಾರೆ; ಇದು ಮೃತ ಪ್ರದೇಶವಾಗುತ್ತದೆ” ಎಂದು ಹೇಳುತ್ತಿದ್ದರು. ಆದರೆ 2026 ಫೆಬ್ರವರಿಯಲ್ಲಿಯೂ ನಗರದಲ್ಲಿ ಜೀವನ ಮುಂದುವರಿಯುತ್ತಿದೆ.

ಯುದ್ಧದ ನಡುವೆಯೂ ಜೀವನ ಮುಂದುವರಿಯುತ್ತಿರುವ ಅನೇಕ ಕಥೆಗಳಿವೆ. ಮಾನವನ ಮನಃಪರಿವರ್ತನೆಯನ್ನು ದೇವರು ತಡೆಯಲು ಯಾವುದೂ ಸಾಧ್ಯವಿಲ್ಲವೆಂದು ನಾನು ನಂಬುತ್ತೇನೆ. ನಮ್ಮ ಎಲ್ಲಾ ಪ್ರಾರ್ಥನೆಗಳು ಇದೇ ಉದ್ದೇಶಕ್ಕಾಗಿ—ಏಕೆಂದರೆ ಮಾನವನ ಪರಿವರ್ತನೆ ಜೀವನ ಮತ್ತು ಶಾಂತಿಯನ್ನು ತರುತ್ತದೆ. ಕೆಲವೊಮ್ಮೆ ದೇವರು ಈ ದುಷ್ಟತನವನ್ನು ಜಯಿಸಲು ಶಕ್ತಿಯುಳ್ಳವನಾಗಿದ್ದಾನೆ ಎಂಬ ನಂಬಿಕೆ ಕೆಲವರಿಗೆ ಮಾತ್ರವಿದೆ ಎಂಬ ಭಾವನೆ ಉಂಟಾಗುತ್ತದೆ. ಆದರೆ ದುಷ್ಟತನದ ಮೇಲೆ ಜಯ ಸಾಧಿಸುವ ಕನಸು ಮತ್ತು ಭರವಸೆ, ನಾವು ಅನುಭವಿಸುತ್ತಿರುವ ಎಲ್ಲಾ ಭಯ ಮತ್ತು ಸಂಕಷ್ಟಗಳಿಗಿಂತ ಬಲವಾಗಿದೆ.

ವ್ಯಾಟಿಕನ್ ಸುದ್ದಿ ಸಂಸ್ಥೆಯ ಓದುಗರಿಗೂ ಕೇಳುಗರಿಗೂ ನನ್ನ ವಿನಂತಿ: ನಮ್ಮನ್ನು ಬೆಂಬಲಿಸಿ, ಮಾನವನ ಮನಃಪರಿವರ್ತನೆಗಾಗಿ ನಡೆಯುವ ಈ ನಿರಂತರ ಪ್ರಾರ್ಥನೆಯಲ್ಲಿ ನಿಮ್ಮ ಸಹೋದರತ್ವವನ್ನು ನಮಗೆ ಅನುಭವಿಸಲು ಅವಕಾಶ ನೀಡಿ. ನಿರಪರಾಧಿಗಳನ್ನು ಕೊಲ್ಲುವ ಬಾಂಬ್ ದಾಳಿಗಳನ್ನು ನಡೆಸುವವರು ಮನಃಪರಿವರ್ತನೆ ಹೊಂದಬೇಕು. ಎಲ್ಲರ ಕಣ್ಣುಗಳು ಜೀವನದತ್ತ ತೆರೆಯಲಿ ಹಾಗೂ ಹೃದಯಗಳು ದೇವರತ್ತ ಮುಕ್ತವಾಗಲಿ ಎಂದು ನಾವು ಪ್ರಾರ್ಥಿಸುತ್ತೇವೆ. 

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

21 ಫೆಬ್ರವರಿ 2026, 11:19