ಹುಡುಕಿ

2025.11.09 mani - apostolat modlitby 2025.11.09 mani - apostolat modlitby 

ಶಾಂತಿ ನಿರ್ಮಾಣಕ್ಕೆ ಪುನರುಸ್ಥಾಪನಾ ದೃಷ್ಟಿಕೋನವನ್ನು ಒತ್ತಿ ಹೇಳಿದ ಪೂಜ್ಯ ಜಗದ್ಗುರುಗಳ ‘ಶಾಂತಿಯ ದಿನ’ ಸಂದೇಶ

ಅಮೆರಿಕದಾದ್ಯಂತ ಕಥೋಲಿಕ ಧರ್ಮಸಭೆ, ಐತಿಹಾಸಿಕ ಅನ್ಯಾಯಗಳನ್ನು ಪರಿವರ್ತಿಸಲು, ಅಪರಾಧ ಹಾಗೂ ಕಾರಾಗೃಹೀಕರಣಕ್ಕೆ ಸಮುದಾಯಾಧಾರಿತ ಪ್ರತಿಕ್ರಿಯೆ ನೀಡಲು, ಹಾಗೂ ಸ್ಥಳೀಯ ಮತ್ತು ಧರ್ಮಪ್ರಾಂತ ಮಟ್ಟದಲ್ಲಿ ವಿಭಜನೆಯ ಗಾಯಗಳನ್ನು ಗುಣಪಡಿಸುವ ಪ್ರಾಯೋಗಿಕ ಸಾಧನವಾಗಿ ಪುನರುಸ್ಥಾಪನಾ (restorative) ವಿಧಾನಗಳನ್ನು ಬಳಸುತ್ತಿದೆ ಎಂದು ಕಥೋಲಿಕ ಸಂಘಟನಾ ಜಾಲದ (ಕ್ಯಾಥೊಲಿಕ್ ಮೊಬಿಲೈಸಿಂಗ್ ನೆಟ್‌ವರ್ಕ್‌) ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ಲೇಖಕರು: ಕ್ರಿಸನ್ನೇ ವೈಲ್ಲ್ಯಾಂಕೋರ್ಟ್ ಮರ್ಫಿ

ಪ್ರತಿ ಹೊಸ ವರ್ಷದ ಮೊದಲ ದಿನ, ಕಥೋಲಿಕ to ಧರ್ಮಸಭೆ ವಿಶ್ವ ಶಾಂತಿ ದಿನವನ್ನು ಆಚರಿಸುತ್ತದೆ. ಇದು ಜಗತ್ತಿನಾದ್ಯಂತ ಶಾಂತಿಯ ಆಳವಾದ ಅಗತ್ಯವನ್ನು ನೆನಪಿಸುವುದಲ್ಲದೆ, ಮಾನವ ಘನತೆಯನ್ನು ಕಾಪಾಡುವ ನಮ್ಮ ಪ್ರಯತ್ನಗಳಲ್ಲಿ ಶಾಂತಿ ನಿರ್ಮಾಣಕ್ಕೆ ನೀಡಬೇಕಾದ ಆದ್ಯತೆಯನ್ನು ಒತ್ತಿ ಹೇಳುತ್ತದೆ.

ಈ ದಿನವನ್ನು ವರ್ಷದ ಆರಂಭದಲ್ಲೇ ಆಚರಿಸುವುದು ವಿಶೇಷ ಮಹತ್ವವನ್ನು ಹೊಂದಿದೆ, ಏಕೆಂದರೆ ಅನೇಕರು ಹೊಸ ಗುರಿಗಳನ್ನು ನಿಗದಿಪಡಿಸುವ ಅಥವಾ ನಿರ್ಣಯಗಳನ್ನು ತೆಗೆದುಕೊಳ್ಳುವ ಕಾಲವಿದು. ವ್ಯಕ್ತಿಗತ ಗುರಿಗಳು ಏನೇ ಇರಲಿ, ಧರ್ಮಸಭೆ ನಮ್ಮೆಲ್ಲರನ್ನು ಶಾಂತಿಯ ಪರವಾದ ಸಾಮೂಹಿಕ ಬದ್ಧತೆಗೆ ಆಹ್ವಾನಿಸುತ್ತದೆ.

59ನೇ ವಿಶ್ವ ಶಾಂತಿ ದಿನಕ್ಕಾಗಿ ಪೂಜ್ಯ ಜಗದ್ಗುರು 14ನೇ ಲಿಯೋ ಅವರು ನೀಡಿದ ಸಂದೇಶದ ಶೀರ್ಷಿಕೆ, “ಶಾಂತಿ ನಿಮಗೆಲ್ಲರೊಡನೆ ಇರಲಿ: ‘ನಿರಸ್ತ್ರ ಹಾಗೂ ಶಸ್ತ್ರರಹಿತ’ ಶಾಂತಿಯತ್ತ” ಎಂಬುದಾಗಿದೆ. ಇದು ಅವರು ಪೇತ್ರನ ಉತ್ತರಾಧಿಕಾರಿಯಾಗಿ ಆಯ್ಕೆಯಾದ ದಿನ, ಸಂತರ ಪೇತ್ರರ ಚೌಕದ ಮೇಲಿನ ಬಾಲ್ಕನಿಯಿಂದ ಉಚ್ಚರಿಸಿದ ಮೊದಲ ಪದಗಳ ಪ್ರತಿಧ್ವನಿಯಾಗಿದೆ.

ಪೂಜ್ಯ ಜಗದ್ಗುರು 14ನೇ ಲಿಯೋ ಅವರು, ಹಿಂಸೆಯ ಕತ್ತಲೆಯಲ್ಲಿಯೂ ಬೆಳಕು ಚೆಲ್ಲುವ ಸ್ಥಿರ ಸಾಕ್ಷ್ಯದ ಬಗ್ಗೆ ಮಾತನಾಡಿದರು; ಶಾಂತಿ ಒಂದು ಗಮ್ಯಸ್ಥಾನವಲ್ಲ, ಬದಲಾಗಿ ನಿರಂತರ ಬದ್ಧತೆಯ ಪ್ರಯಾಣವೆಂದು ಅವರು ಒತ್ತಿ ಹೇಳಿದರು; ಜೊತೆಗೆ, ಆಲಿಸುವಿಕೆ ಮತ್ತು ಅರ್ಥಪೂರ್ಣ ಸಂವಾದದ ಮಹತ್ವವನ್ನು ನೆನಪಿಸಿದರು. ಇದೇ ಶಾಂತಿಯ ನಿರಂತರ ಕಾರ್ಯ. ಇದೇ ಪುನರ್‌ಸ್ಥಾಪನಾತ್ಮಕ ನ್ಯಾಯದ ಕಾರ್ಯ.

ಶಾಂತಿ ನಿರ್ಮಾಣ ಮತ್ತು ಪುನರ್‌ಸ್ಥಾಪನಾತ್ಮಕ ಕ್ರಮಗಳ ನಡುವಿನ ಈ ಅವಿಭಾಜ್ಯ ಸಂಬಂಧವನ್ನು ಪವಿತ್ರ ತಂದೆ ಸ್ಪಷ್ಟಪಡಿಸಿದರು: “ನಾವು ನಾಗರಿಕ ಸಮಾಜಗಳಲ್ಲಿ ಸ್ವಯಂ-ಜಾಗೃತಿಯನ್ನು ಉತ್ತೇಜಿಸಬೇಕು; ಜವಾಬ್ದಾರಿಯುತ ಸಂಘಟನೆಗಳ ರೂಪಗಳನ್ನು ಬೆಳೆಸಬೇಕು; ಅಹಿಂಸಾತ್ಮಕ ಭಾಗವಹಿಸುವಿಕೆಯ ಅನುಭವಗಳನ್ನು ಉತ್ತೇಜಿಸಬೇಕು; ಹಾಗೂ ಸಣ್ಣ ಮತ್ತು ದೊಡ್ಡ ಮಟ್ಟಗಳಲ್ಲಿ ಪುನರ್‌ಸ್ಥಾಪನಾತ್ಮಕ ನ್ಯಾಯದ ಅಭ್ಯಾಸಗಳನ್ನು ಪ್ರೋತ್ಸಾಹಿಸಬೇಕು.”

ಪುನರ್‌ಸ್ಥಾಪನಾತ್ಮಕ ನ್ಯಾಯವು ಕಥೋಲಿಕ ಸಾಮಾಜಿಕ ಬೋಧನೆಗಳೊಂದಿಗೆ ಹೊಂದಿಕೆಯಾಗುತ್ತದೆ, ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಗೂ ಅಂತರ್ನಿಹಿತ ಘನತೆ ಇದೆ ಮತ್ತು ತಮ್ಮ ಮೇಲೆ ಪರಿಣಾಮ ಬೀರುವ ಪ್ರಕ್ರಿಯೆಗಳು ಹಾಗೂ ವ್ಯವಸ್ಥೆಗಳಲ್ಲಿ ಪಾಲ್ಗೊಳ್ಳುವ ಹಕ್ಕು ಹೊಂದಿದ್ದಾರೆ ಎಂಬುದನ್ನು ಈ ಬೋಧನೆಗಳು ಕಲಿಸುತ್ತವೆ. ಹಾನಿಯನ್ನು ಸರಿಪಡಿಸಲು ಮತ್ತು ಮುರಿದ ಸಂಬಂಧಗಳನ್ನು ಮರುನಿರ್ಮಿಸಲು ಮಾರ್ಗಗಳನ್ನು ಒದಗಿಸುವ ಮೂಲಕ, ಪುನರ್‌ಸ್ಥಾಪನಾತ್ಮಕ ನ್ಯಾಯವು ಜನರು ಮತ್ತು ಸಮಾಜಗಳು ಹಿಂಸೆಯಿಂದ ಉಂಟಾದ ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಮತ್ತು ಕಥೋಲಿಕರು ತಮ್ಮ ವಿಶ್ವಾಸಕ್ಕೆ ಸಾಕ್ಷಿ ನೀಡಲು ನೆರವಾಗುತ್ತದೆ.

ಪುನರ್‌ಸ್ಥಾಪನಾತ್ಮಕ ನ್ಯಾಯದ ಅಭ್ಯಾಸಗಳು ಹಾನಿಗೆ ಒಳಗಾದವರಿಗೆ ಆ ಹಾನಿಯ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಪರಿಸ್ಥಿತಿಯನ್ನು ಸರಿಪಡಿಸಲು ಅಗತ್ಯವಿರುವುದನ್ನು ಮಾಡಲು ಅವಕಾಶಗಳನ್ನು ಸೃಷ್ಟಿಸುತ್ತವೆ.

ಇದು ಪ್ರಭು ಯೇಸು ಕ್ರಿಸ್ತರ ಸಮಾಧಾನಪರ ಮಾರ್ಗವನ್ನು ಪ್ರತಿಬಿಂಬಿಸುವ ನ್ಯಾಯದ ದೃಷ್ಟಿಕೋನವಾಗಿದೆ. ವಾಸ್ತವವಾಗಿ, ಪುನರ್‌ಸ್ಥಾಪನಾತ್ಮಕ ನ್ಯಾಯದ ಅಭ್ಯಾಸಗಳು ವಿಶೇಷವಾಗಿ ಗಂಭೀರ ಹಾನಿಯ ನಂತರ ನಮ್ಮ ನಡುವೆ ಶಾಂತಿಯನ್ನು ಬೆಳೆಸುವ ಒಂದು ಸ್ಪಷ್ಟ ಮಾರ್ಗವಾಗಿವೆ.  ಕಾಥೋಲಿಕರು ಹಾಗೂ ಒಳಿತನ್ನು ಬಯಸುವ ಎಲ್ಲಾ ಜನರು, ಆಳವಾದ ವಿಭಜನೆ, ಏಕಾಂಗಿ ಭಾವನೆ ಮತ್ತು ಅಂಚಿನೀಕರಣದಿಂದ ಗುರುತಿಸಲ್ಪಟ್ಟ ಪ್ರಸ್ತುತ ಕಾಲಘಟ್ಟದಲ್ಲಿ, ನಮ್ಮ ಧರ್ಮಕೇಂದ್ರಗಳು, ಸೇವಾಕಾರ್ಯಗಳು ಮತ್ತು ಸಮುದಾಯಗಳಲ್ಲಿ ಈ ನ್ಯಾಯದ ದೃಷ್ಟಿಯನ್ನು ಬದುಕಿನ ರೀತಿಯಾಗಿ ಸಾಕಾರಗೊಳಿಸಬಹುದು. ಈ ಸಂದೇಶವೂ ಅದರೊಡನೆ ಇರುವ ಕ್ರಿಯೆಯ ಕರೆಯೂ ನಮ್ಮೆಲ್ಲರಿಗೂ ಅತ್ಯಂತ ಅಗತ್ಯವಾಗಿದೆ.

ಪುನರ್‌ಸ್ಥಾಪನಾ ನ್ಯಾಯದ ಅಭ್ಯಾಸ

ಅಮೇರಿಕಾದಲ್ಲಿ ಕಥೋಲಿಕ ಸಮುದಾಯಗಳು ಪುನರ್‌ಸ್ಥಾಪನಾ (restorative) ವಿಧಾನಗಳನ್ನು ವಿವಿಧ ರೀತಿಯಲ್ಲಿ ಅಳವಡಿಸಿಕೊಳ್ಳುತ್ತಿವೆ. ಇವು ಐತಿಹಾಸಿಕ ಅನ್ಯಾಯಗಳನ್ನು ಸರಿಪಡಿಸಲು, ಅಪರಾಧ ಮತ್ತು ಕಾರಾಗೃಹೀಕರಣಕ್ಕೆ ಮಾನವೀಯ ರೀತಿಯಲ್ಲಿ ಪ್ರತಿಕ್ರಿಯಿಸಲು, ಹಾಗೂ ಸ್ಥಳೀಯ ಮತ್ತು ಧರ್ಮಪ್ರಾಂತ್ಯ ಮಟ್ಟದಲ್ಲಿ ವಿಭಜನೆಯ ಗಾಯಗಳನ್ನು ಗುಣಪಡಿಸಲು ಪ್ರಾಯೋಗಿಕ ಸಾಧನಗಳಾಗಿ ಬಳಸಲಾಗುತ್ತಿವೆ.

ಹಾನಿಯನ್ನು ಪುನರ್‌ಸ್ಥಾಪನಾ ದೃಷ್ಟಿಯಿಂದ ಎದುರಿಸುವುದು ನೈಜ ಉದಾಹರಣೆಗಳ ಮೂಲಕ ಹೆಚ್ಚು ಸ್ಪಷ್ಟವಾಗುತ್ತದೆ; ಅವು ವಿಭಿನ್ನ ರೂಪಗಳಲ್ಲಿ ಮತ್ತು ಪ್ರಮಾಣಗಳಲ್ಲಿ ಕಾಣಿಸುತ್ತವೆ.

2025ರ ಅಕ್ಟೋಬರ್‌ನಲ್ಲಿ, ಫ್ರಾನ್ಸಿಸ್ಕನ್ ಸಭೆಯ ನಿತ್ಯ ಆರಾಧನಾ ಸಹೋದರಿಯರು (ಫ್ರಾನ್ಸಿಸ್ಕನ್ ಸಿಸ್ಟರ್ಸ್ ಆಫ್ ಪರ್ಪೆಚುಯಲ್ ಅಡೋರೇಷನ್) ಅವರು ಭೂಮಿಯನ್ನು ಮೂಲ ಬಾಧ್ಯಸ್ಥರಾದ ಒಜಿಬ್ವೆ ರಾಷ್ಟ್ರದ ಭಾಗವಾಗಿರುವ ಲ್ಯಾಕ್ ಡು ಫ್ಲಾಂಬೋ ಬ್ಯಾಂಡ್ ಆಫ್ ಲೇಕ್ ಸುಪೀರಿಯರ್ ಚಿಪ್ಪೆವಾ  ಸಮುದಾಯಕ್ಕೆ ಮರುಹಸ್ತಾಂತರಿಸಿದರು.

ಮೂಲ ನಿವಾಸಿ ಸಮುದಾಯಕ್ಕೆ ಭೂಮಿ ಮರಳಿಸುವ ಪ್ರಕ್ರಿಯೆ, ಸನ್ಯಾಸಿನಿಯರು ಮೊದಲು ಬುಡಕಟ್ಟು ನಾಯಕರನ್ನು ಸಂಪರ್ಕಿಸಿದ ಎರಡು ವರ್ಷಗಳ ಬಳಿಕ ಪೂರ್ಣಗೊಂಡಿತು. ಇದಕ್ಕೂ ಮುನ್ನ, ಸಮುದಾಯವು ಐದು ವರ್ಷಗಳ ಕಾಲ ತನ್ನದೇ ಇತಿಹಾಸವನ್ನು ಪರಿಶೀಲಿಸಿತು—ವಿಶೇಷವಾಗಿ ಅವರು ನಡೆಸಿದ್ದ ಭಾರತೀಯ ವಸತಿ ಶಾಲೆಯ (Indian Boarding School) ಪಾತ್ರವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವೂ ಇದರ ಭಾಗವಾಗಿತ್ತು. ಬುಡಕಟ್ಟಿನ ಅಧ್ಯಕ್ಷ ಜಾನ್ ಡಿ. ಜಾನ್ಸನ್ ಸೀನಿಯರ್, “ಈ ಭೂಮಿಯ ಮರಳಿಕೆ ಕೇವಲ ಭೂಮಿಯ ಪುನಃಸ್ಥಾಪನೆ ಅಲ್ಲ—ಇದು ಸಮತೋಲನ, ಗೌರವ ಮತ್ತು ನಮ್ಮ ಪೂರ್ವಜರು ನಡೆದುಕೊಂಡ ಪವಿತ್ರ ನೆಲದೊಡನೆ ನಮ್ಮ ಆಧ್ಯಾತ್ಮಿಕ ಸಂಬಂಧದ ಪುನರುಜ್ಜೀವನ.”ಎಂದು  ಹೇಳಿದರು.

ಅಮೇರಿಕಾದ ಹಲವಾರು ನಗರಗಳಲ್ಲಿ, “ಒಂದು ಧರ್ಮಕೇಂದ್ರ–ಒಬ್ಬ ಕೈದಿ” (One Parish One Prisoner) ಕಾರ್ಯಕ್ರಮವು ಪುನರ್‌ಸ್ಥಾಪನಾ ನ್ಯಾಯ ಮಾದರಿಯನ್ನು ಬಳಸುತ್ತಿದೆ. ಇದರ ಮೂಲಕ ಧರ್ಮಕೇಂದ್ರಗಳು ಕಾರಾಗೃಹದಿಂದ ಬಿಡುಗಡೆಗೊಂಡು ಸಮಾಜಕ್ಕೆ ಮರಳುತ್ತಿರುವ ವ್ಯಕ್ತಿಯೊಂದಿಗೆ ಬೆಂಬಲಾತ್ಮಕ ಸಂಬಂಧವನ್ನು ನಿರ್ಮಿಸುತ್ತವೆ. ಎರಡು ವರ್ಷಗಳ ಅವಧಿಯಲ್ಲಿ, ಧರ್ಮಗುರು ಸೇರಿ ಏಳು ಸದಸ್ಯರ ತಂಡವು ಆ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸಿ, ಉದ್ಯೋಗ, ವಸತಿ, ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ಸಮುದಾಯದಲ್ಲಿ ಪುನಃ ಹೊಂದಿಕೊಳ್ಳಲು ಸಮಗ್ರ ಬೆಂಬಲವನ್ನು ನೀಡುತ್ತದೆ. ಧರ್ಮಕ್ಷೇತ್ರ ಹಾಗೂ ಸ್ಥಳೀಯ ಧರ್ಮಕೇಂದ್ರ ಮಟ್ಟದಲ್ಲಿ, ಕೆಲವರು “ವಲಯ ಪ್ರಕ್ರಿಯೆ” (circle process) ಎಂಬ ಪುನರ್‌ಸ್ಥಾಪನಾ ವಿಧಾನವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇದು ಪವಿತ್ರಾತ್ಮ ಪ್ರೇರಿತ ಸಂವಾದದ ಮಾದರಿಯಾಗಿದ್ದು, ಕಠಿಣ ಹಾಗೂ ಸೂಕ್ಷ್ಮ ವಿಷಯಗಳ ಕುರಿತು ಭಾಗವಹಿಸುವವರು ಮುಕ್ತವಾಗಿ ಮಾತನಾಡಿ, ಆಳವಾಗಿ ಆಲಿಸುವ ಅವಕಾಶವನ್ನು ಕಲ್ಪಿಸುತ್ತದೆ.

ಈ ಪ್ರಕ್ರಿಯೆ ಕೇವಲ ಸಿನೋಡಾಲಿಟಿಯ ಉದ್ದೇಶಗಳನ್ನು ಪ್ರತಿಬಿಂಬಿಸುವುದಷ್ಟೇ ಅಲ್ಲ; ಕಥೋಲಿಕರು ಅನ್ಯಾಯ ಹಾಗೂ ಸಂಕೀರ್ಣ ಸಮಸ್ಯೆಗಳನ್ನು “ನಿರಸ್ತ್ರ ಮತ್ತು ನಿರಾಯುಧ” ಮನೋಭಾವದಲ್ಲಿ ಎದುರಿಸಲು ಆಹ್ವಾನಿಸುತ್ತದೆ—ಸಂಪರ್ಕ, ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಮತ್ತು ಶಾಂತಿಪೂರ್ಣ ಸಂಬಂಧಗಳನ್ನು ಬೆಳೆಸುತ್ತದೆ.

ಇದೇ ಮಾರ್ಗವೇ ನಮ್ಮ ಧರ್ಮಸಭೆ ಅನುಸರಿಸಲು ಕರೆಯಲ್ಪಟ್ಟಿರುವ ದಾರಿ—ವಿಶೇಷವಾಗಿ ಕಳೆದ ಕೆಲವು ವರ್ಷಗಳಲ್ಲಿ ನಡೆದ ಸಿನೋಡಾಲಿಟಿಯ(ಸಹಯಾತ್ರೆಯ) ಸಿನೋಡ್ ಮೂಲಕ. ಸಿನೋಡಾಲಿಟಿ(ಸಹಯಾತ್ರೆ) ಹಾಗೂ ಪುನರ್‌ಸ್ಥಾಪನಾ ನ್ಯಾಯದ ಅಭ್ಯಾಸಗಳು ಎರಡೂ, ಗಾಯಗೊಂಡ ಮತ್ತು ವಿಭಜಿತ ಜಗತ್ತಿನಲ್ಲಿ ಒಟ್ಟಾಗಿ ಪ್ರಯಾಣಿಸುವ ದೃಷ್ಟಿ ಹಾಗೂ ವಿಧಾನವನ್ನು ಒಳಗೊಂಡಿವೆ. ಎರಡೂ ಆಳವಾದ ಆಲಿಕೆ, ಪ್ರಾಮಾಣಿಕ ಸಂವಾದ ಮತ್ತು ನಿರ್ಭಯ ಸತ್ಯವಚನದ ಶಕ್ತಿಯನ್ನು ಬಳಸಿಕೊಂಡು, ಐಕ್ಯಮತ್ಯ ಮತ್ತು ಅಂತಿಮವಾಗಿ ಉಪಶಮನದತ್ತ ದಾರಿ ತೋರಿಸುತ್ತವೆ.

ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಶಾಂತಿ ಹಾಗೂ ಸಿನೋಡಲ್ ವಿಧಾನಗಳ ಮೇಲಿನ ದೃಢ ಬದ್ಧತೆ ನಮ್ಮೆಲ್ಲರಿಗೂ ಆಳವಾದ ಪ್ರೇರಣೆ. ನಮ್ಮ ಧರ್ಮಸಭೆ ಮತ್ತು ಇದಕ್ಕೆ ಸೇರಿದ ಪ್ರತಿಯೊಬ್ಬರೂ ಪುನರ್‌ಸ್ಥಾಪನಾ ನ್ಯಾಯದ ತತ್ವಗಳನ್ನು ನಮ್ಮ ಧರ್ಮಕೇಂದ್ರಗಳು, ಸೇವಾ ಸಂಸ್ಥೆಗಳು ಮತ್ತು ಸಮುದಾಯಗಳಲ್ಲಿ ಅಳವಡಿಸಬಹುದು. ವಿಭಜನೆಗಳನ್ನು ಸೇತುವೆಗೊಳಿಸಿ, ಬಂಧಗಳನ್ನು ಬಲಪಡಿಸುವ ಮಾರ್ಗಗಳಿಗಾಗಿ ನಮ್ಮ ಧರ್ಮಸಭೆ ಹಂಬಲಿಸುತ್ತಿದೆ, ಹೀಗಾಗಿ ನಿಜವಾದ ಶಾಂತಿ ಸಾಧ್ಯವಾಗಲಿ.

ಕಾರ್ಯನಿರ್ವಾಹಕ ನಿರ್ದೇಶಕರು, ಕಥೋಲಿಕ ಸಂಘಟನಾ ಜಾಲದ (ಕ್ಯಾಥೊಲಿಕ್ ಮೊಬಿಲೈಸಿಂಗ್ ನೆಟ್‌ವರ್ಕ್)

ಕಥೋಲಿಕ ಸಂಘಟನಾ ಜಾಲ (ಕ್ಯಾಥೊಲಿಕ್ ಮೊಬಿಲೈಸಿಂಗ್ ನೆಟ್‌ವರ್ಕ್) ಅಮೇರಿಕಾದ ಕಥೋಲಿಕ ಸಂಸ್ಥೆಯಾಗಿದ್ದು, ಮರಣದಂಡನೆ ರದ್ದುಪಡಿಸಲು ಹಾಗೂ ಪುನರ್‌ಸ್ಥಾಪನಾ ನ್ಯಾಯದ ಉಪಶಮನಕಾರಿ ಅಭ್ಯಾಸಗಳನ್ನು ಉತ್ತೇಜಿಸಲು ಕಾರ್ಯನಿರ್ವಹಿಸುತ್ತದೆ. ಹೆಚ್ಚಿನ ಮಾಹಿತಿಗೆ: catholicsmobilizing.org

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

02 ಫೆಬ್ರವರಿ 2026, 14:18