ಹುಡುಕಿ

ವೆನಿಲೇಲ್‌ನಲ್ಲಿ ಮಕ್ಕಳಿಗೆ ಆಹಾರ ವಿತರಿಸುತ್ತಿರುವ ಸಲೇಶಿಯನ್ ಸಹೋದರಿಯರು ವೆನಿಲೇಲ್‌ನಲ್ಲಿ ಮಕ್ಕಳಿಗೆ ಆಹಾರ ವಿತರಿಸುತ್ತಿರುವ ಸಲೇಶಿಯನ್ ಸಹೋದರಿಯರು 

ಟಿಮೋರ್-ಲೆಸ್ಟೆಯಲ್ಲಿ ಭರವಸೆಯನ್ನು ಬೆಳೆಸುತ್ತಿರುವ ಸಲೇಶಿಯನ್ ಸಹೋದರಿಯರು

ದಕ್ಷಿಣ ಪೂರ್ವ ಏಷ್ಯಾದ ಹೃದಯಭಾಗದಲ್ಲಿರುವ ವೆನಿಲಾಲೆ ಸುತ್ತಲಿನ ಗ್ರಾಮಗಳಲ್ಲಿ, ಸಲೇಶಿಯನ್ ಸಹೋದರಿಯರು ಪೋಷಕಾಂಶ ಕೊರತೆಯನ್ನು ಎದುರಿಸಲು ಮಕ್ಕಳಿಗೆ ಶಿಕ್ಷಣ ನೀಡಿ, ವಿಭಿನ್ನ ಭವಿಷ್ಯವನ್ನು ರೂಪಿಸಲು ಪ್ರೇರೇಪಿಸುತ್ತಿದ್ದಾರೆ.

ಲೇಖಕರು: ಸಹೋದರಿ ಎಲಿಸಾ ಮೊಲಿನಾರಿ, FMA

ಟಿಮೋರ್-ಲೆಸ್ಟೆಯ ವೆನಿಲಾಲೆಯ ಮೇರಿಯಾ ಆಕ್ಸಿಲಿಯಡೋರಾ ಕ್ಲಿನಿಕ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವವರು ತಾಯಂದಿರೇ. “ಮೇರಿ ಸಹಾಯಕರ ಪುತ್ರಿಯರು” ನಡೆಸುತ್ತಿರುವ ಈ ಕೇಂದ್ರಕ್ಕೆ ಬರುವ   ತಾಯಂದಿರ ಮಕ್ಕಳಲ್ಲಿ ಕಾಣಿಸುವ ತೊಂದರೆ ಎಂದರೆ- ಹಾಲು ಬಿಡಿಸಿದ ಬಳಿಕ, ಅವರ ತೂಕ ಕುಸಿಯುತ್ತಿದ್ದು, ಪೋಷಕಾಂಶದ ಕೊರತೆಯ ಲಕ್ಷಣಗಳು.

“ಇದು ವ್ಯಾಪಕವಾದ ಅಪೋಷಣೆಯ ಸಮಸ್ಯೆಯಲ್ಲ, ಅಥವಾ ಆಹಾರದ ಅಭಾವವೇ ಮೂಲ ಕಾರಣವೂ ಅಲ್ಲ; ಬದಲಾಗಿ, ಹಾಲು ಬಿಡಿಸಿದ ಬಳಿಕದ ಆಹಾರ ಕ್ರಮದಲ್ಲಿ ಸರಿಯಾದ ಗಮನದ ಕೊರತೆ ಮತ್ತು ಕೆಲವು ತಪ್ಪು ಆಹಾರ ನಂಬಿಕೆಗಳು ಇನ್ನೂ ಗ್ರಾಮೀಣ ಜೀವನದಲ್ಲಿ ಗಟ್ಟಿಯಾಗಿ ನೆಲೆಯೂರಿರುವುದು ಇದರ ಮೂಲ,” ಎಂದು ಇಟಾಲಿಯನ್ ಮಿಷನರಿ ಹಾಗೂ ವೈದ್ಯೆಯಾಗಿರುವ ಸಹೋದರಿ ಅಲ್ಮಾ ಕಸ್ತಾಗ್ನಾ ವಿವರಿಸಿದರು.

ಸುಮಾರು 16,000 ಜನಸಂಖ್ಯೆ ಹೊಂದಿರುವ ವೆನಿಲಾಲೆ, ಟಿಮೋರ್-ಲೆಸ್ಟೆಯ ರಾಜಧಾನಿಯಾದ ಡಿಲಿಯಿಂದ ಸುಮಾರು 150 ಕಿಲೋಮೀಟರ್ ಪೂರ್ವಕ್ಕೆ ಇದೆ. ದಶಕಗಳ ಸಂಘರ್ಷದ ಬಳಿಕ 1999ರಲ್ಲಿ ಈ ಸಣ್ಣ ರಾಷ್ಟ್ರವು ಇಂಡೋನೇಷಿಯಾದಿಂದ ಸ್ವಾತಂತ್ರ್ಯ ಪಡೆದರೂ, ಸ್ಥಳೀಯ ಸಮುದಾಯಗಳು ದೊಡ್ಡ ಬೆಲೆ ಕಟ್ಟಬೇಕಾಯಿತು; ಗ್ರಾಮೀಣ ಆರ್ಥಿಕ ವ್ಯವಸ್ಥೆಯ ಮೇಲೂ ಅದರ ಪರಿಣಾಮ ಆಳವಾಗಿ ಬೀರಿತು.

“ಮೇರಿ ಸಹಾಯಕರ ಪುತ್ರಿಯರು” (FMA), ಡಾನ್ ಬೋಸ್ಕೋ ಸಲೇಶಿಯನ್ ಸಹೋದರಿಯರಾಗಿ ಪರಿಚಿತರು, 1988ರಿಂದ ಟಿಮೋರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅರಣ್ಯ ಪ್ರದೇಶಗಳಲ್ಲಿ ಕಂಡುಬಂದ ಕುಟುಂಬವಿಲ್ಲದ ಬಾಲಕಿಯರ ಸೇವೆಗಾಗಿ ಅವರನ್ನು ಕರೆಯಲಾಯಿತು; ಅಂದಿನ ಪರಿಸ್ಥಿತಿಯಲ್ಲಿ ಜನಸಂಖ್ಯೆಯ ಬಹುಪಾಲು ಕಾಡುಗಳಲ್ಲಿ ಆಶ್ರಯ ಪಡೆದಿತ್ತು.

ಇಂಡೋನೇಷಿಯನ್ ಆಕ್ರಮಣದ ಸಮಯದಲ್ಲಿ ಆಗಮಿಸಿದ ಈ ಸಹೋದರಿಯರು, ಜನಮತ ಸಂಗ್ರಹ, ಯುದ್ಧ ಮತ್ತು 2002ರ ಸ್ವಾತಂತ್ರ್ಯ ಘೋಷಣೆಯಂತಹ ಘಟನೆಗಳಿಗೆ ಸಾಕ್ಷಿಯಾದರು. ಅದಾದ ಬಳಿಕ, ಶಿಕ್ಷಣದ ಮೂಲಕ ಪುನರ್‌ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಅದು ಅವರ ಧಾರ್ಮಿಕ ಸೇವೆಯ ಕೇಂದ್ರ ಅಂಶವಾಗಿದೆ. 1990ರಲ್ಲಿ ಮೊದಲ ಮಿಷನರಿಗಳಲ್ಲೊಬ್ಬರಾದ ಸಹೋದರಿ ಪೌಲಾ ಬಟ್ಟಾಗ್ಲಿಯೋಲಾ, ಸರ್ಕಾರಿ ನರ್ಸ್‌ಗಳ ಸಹಕಾರದಿಂದ ಆರೋಗ್ಯ ಕೇಂದ್ರವನ್ನು ಆರಂಭಿಸಿದರು; ಇಂದು ಅದು ಸ್ಥಳೀಯರಿಗೆ ಪ್ರಮುಖ ಆಧಾರವಾಗಿದೆ.

ಪೋಷಣಾ ಶಿಕ್ಷಣದ ಅಗತ್ಯತೆಯನ್ನು ಮನಗಂಡು, ಆರಂಭದಲ್ಲಿ ಗ್ರಾಮಗಳಿಗೆ ಭೇಟಿ ನೀಡುವ ವೇಳೆ ತಾಯಂದಿರಿಗೆ ಸರಿಯಾದ ಆಹಾರ ಕ್ರಮಗಳನ್ನು ವಿವರಿಸುವುದು ಮತ್ತು ಕೆಲವು ಆಹಾರಗಳನ್ನು ಒಟ್ಟಿಗೆ ತಯಾರಿಸುವುದರ ಮೂಲಕ ಕಾರ್ಯಾರಂಭಿಸಲಾಯಿತು.

ಆದರೆ ಈ ಪ್ರಯತ್ನ ಸಂಪೂರ್ಣವಾಗಿ ವಿಫಲವಾಯಿತು; ಸ್ಥಳೀಯ ಜನರ ಗಾಢವಾಗಿ ನೆಲೆಯೂರಿರುವ ನಂಬಿಕೆಗಳನ್ನು ಬದಲಿಸುವುದು ಅತ್ಯಂತ ಕಷ್ಟಕರವೆಂಬುದು ಸ್ಪಷ್ಟವಾಯಿತು.

ಆದ್ದರಿಂದ, ಇನ್ನೂ ಪೂರ್ವಗ್ರಹಗಳಿಂದ ಮುಕ್ತವಾಗಿರುವ ಮಕ್ಕಳಿಂದಲೇ ಆರಂಭಿಸುವ ನಿರ್ಧಾರ ಕೈಗೊಳ್ಳಲಾಯಿತು. ವೆನಿಲಾಲೆ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಎಲ್ಲಾ ಶಾಲೆಗಳಲ್ಲಿ — ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆ ತನಕ — ಪೋಷಣಾ ಕಾರ್ಯಕ್ರಮವನ್ನು ಜಾರಿಗೊಳಿಸಿ, ದೂರದ ಗ್ರಾಮಗಳಿಗೂ ತಲುಪಿಸಲಾಯಿತು.

2023ರಲ್ಲಿ ಕಥೋಲಿಕ ಸೇವಾ ಸಂಸ್ಥೆಯ ಸಹಕಾರದಿಂದ ಈ ಯೋಜನೆ ವೆನಿಲಾಲೆಯ ಮೇರಿಯಾ ಆಕ್ಸಿಲಿಯಡೋರಾ ಕ್ಲಿನಿಕ್‌ನಿಂದ ಆರಂಭವಾಯಿತು. ಇದನ್ನು ಸಹೋದರಿ ಕ್ಯಾರೊಲಿನಾ ಮಾರಿಯಾ ಕೊರೇಜಾ ಸಂಯೋಜಿಸಿದ್ದು, ನರ್ಸ್‌ಗಳು, ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ಯುವತಿಯರು, ಶಿಕ್ಷಕರು ಮತ್ತು ತಾಯಂದಿರು ಸೇರಿದಂತೆ ಸುಮಾರು 20 ಮಂದಿ ಒಳಗೊಂಡ ತಂಡ ಕಾರ್ಯನಿರ್ವಹಿಸಿತು.

ಆರಂಭಿಕ ತರಬೇತಿಯ ನಂತರ, ಅವರು ಶಾಲೆಗಳಿಗೆ ಭೇಟಿ ನೀಡಿದರು; ಹುಡುಗರು ಮತ್ತು ಹುಡುಗಿಯರ ತೂಕವನ್ನು ಅಳೆಯಲಾಯಿತು, ಎತ್ತರವನ್ನು ಮಾಪಿಸಲಾಯಿತು ಮತ್ತು ಅವುಗಳನ್ನು ವಯಸ್ಸಿನ ಮಾನದಂಡಗಳೊಂದಿಗೆ ಹೋಲಿಕೆ ಮಾಡುವಂತೆ ಪಟ್ಟಿಗಳಲ್ಲಿ ದಾಖಲಿಸಲಾಯಿತು.

ಈ ಕಾರ್ಯ ವ್ಯಾಪಕವಾಗಿತ್ತು; ಎಂಟು ಗ್ರಾಮಗಳನ್ನು ಒಳಗೊಂಡಿರುವ ವೆನಿಲಾಲೆಯ ಉಪನಗರ ಪ್ರದೇಶ ವಿಶಾಲವಾಗಿದ್ದು, ಒಟ್ಟು 27 ಶಾಲೆಗಳು ಒಳಗೊಂಡಿದ್ದವು. ಕಡಿಮೆ ತೂಕದ ಮಕ್ಕಳು ಹೆಚ್ಚಿನವಾಗಿ ಕೇಂದ್ರದಿಂದ ದೂರದ ಗ್ರಾಮಗಳಲ್ಲಿ ಕಂಡುಬಂದರು. ಕಥೋಲಿಕ ಸೇವಾ ಸಂಸ್ಥೆಯ ಸಹಕಾರದಿಂದ — ಪ್ರತಿಯೊಂದು ಶಾಲೆಗೆ ತೂಕದ ಯಂತ್ರಗಳನ್ನು ಒದಗಿಸಿ ಹಾಗೂ ವಿವಿಧ ವೆಚ್ಚಗಳನ್ನು ನಿರ್ವಹಿಸಿ — ಶಿಕ್ಷಕರು ಮಕ್ಕಳ ತೂಕವನ್ನು  ಆಗಾಗ್ಗೆ  ದಾಖಲಿಸಲು ಸಾಧ್ಯವಾಯಿತು. ಕಡಿಮೆ ತೂಕದ ಮಕ್ಕಳಿಗೆ ಹಾಲು ಮತ್ತು ಬೀನ್ಸ್‌ಗಳಂತಹ ಪೂರಕ ಆಹಾರಗಳನ್ನು ನೀಡಲಾಯಿತು.

ಈ ಪ್ರಾಥಮಿಕ ಪರಿಶೀಲನೆಯ ನಂತರ ತರಬೇತಿ ಹಂತ ಆರಂಭವಾಯಿತು. ಸಿಬ್ಬಂದಿಯನ್ನು ಜೋಡಿಗಳಾಗಿ ಶಾಲೆಗಳಿಗೆ ಕಳುಹಿಸಿ, ಮೊದಲಿಗೆ ವೈಯಕ್ತಿಕ ಸ್ವಚ್ಛತೆ ಮತ್ತು ಸರಿಯಾದ ಜೀವನಶೈಲಿಯ ಕುರಿತು ಸಾಮಾನ್ಯ ಅರಿವು ಮೂಡಿಸಲಾಯಿತು; ನಂತರ ಪೋಷಣೆ ಮತ್ತು ಸ್ಥಳೀಯ ಉತ್ಪನ್ನಗಳನ್ನು, ವಿಶೇಷವಾಗಿ ಹಣ್ಣುಗಳು ಮತ್ತು ತರಕಾರಿಗಳನ್ನು ಬಳಸಿಕೊಂಡು ಪ್ರಾಯೋಗಿಕ ಅಡುಗೆ ತರಗತಿಗಳನ್ನು ನಡೆಸಲಾಯಿತು.

ಸೆಲೇಶಿಯನ್ ಸಹೋದರಿಯರು ಯುವಜನರ ಸಮಗ್ರ ಅಭಿವೃದ್ಧಿಗೆ ಮಾರ್ಗದರ್ಶನ ನೀಡುವ ಮೂಲಕ ಹಾಗೂ ಮಹಿಳೆಯರನ್ನು ಸಬಲಗೊಳಿಸುವ ಮೂಲಕ ಸಾಮಾನ್ಯ ಜನರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಡಾನ್ ಬೋಸ್ಕೋ ಮತ್ತು ಮಾತಾ ಮಜ್ಜರೆಲ್ಲೊ ಅವರ ಶಿಕ್ಷಣ ವ್ಯವಸ್ಥೆಯ ಆತ್ಮವನ್ನು ಪ್ರತಿಬಿಂಬಿಸುತ್ತದೆ.

ಅವರ ಉದ್ದೇಶ ಹೊಸ ಮನೋಭಾವವನ್ನು ರೂಪಿಸುವುದು; ಮಕ್ಕಳಿಗೆ ಅವರ ಸಮಗ್ರ ಬೆಳವಣಿಗೆಗೆ ಅಡ್ಡಿಯಾಗುವ ಹಳೆಯ ನಂಬಿಕೆಗಳಿಂದ ಹೊರಬರುವ ಪಾಯ್ದಾಣವನ್ನು ನಿರ್ಮಿಸುವುದು.

“ಒಂದು ಬೀಜದಿಂದ  ಒಂದು ಹೊಸ ಚಿಂತನೆ ಮೊಳಕೆಯೊಡೆಯುವುದನ್ನು ಕಾಣಬಹುದು,” ಎಂದು ಅವರು ಹೇಳುತ್ತಾರೆ. ಒಂದು ಬಾಲಕ ತನ್ನ ಕುಟುಂಬಕ್ಕೆ ಸರಿಯಾದ ಆಹಾರ ಬಳಕೆಯನ್ನು ವಿವರಿಸಲು ಪ್ರಯತ್ನಿಸಿದ ಘಟನೆ ಇದಕ್ಕೆ ಉದಾಹರಣೆ. ತನ್ನ ತಾತನ ಮಾತಿಗೆ ವಿರೋಧವಾಗಿ, ಆತ ಧೈರ್ಯದಿಂದ “ನಮಗೆ ಕಲಿಸಿರುವುದು ಹೀಗೆ” ಎಂದು ಆಹಾರ ಪದ್ಧತಿಯ ಕುರಿತು ತನ್ನ ಮನೆಯವರಿಗೆ ತಿಳಿಸಲು ಮುಂದಾದನು.

ಈ ರೀತಿಯಲ್ಲಿ ಮಕ್ಕಳು ವಯಸ್ಕರಿಗೆ ಶಿಕ್ಷಕರಾಗುತ್ತಿದ್ದಾರೆ. ಟಿಮೋರ್-ಲೆಸ್ಟೆಯಲ್ಲಿ 2024ರ ಸೆಪ್ಟೆಂಬರ್‌ನಲ್ಲಿ ನಡೆದ ಅಪೋಸ್ತೋಲಿಕ ಭೇಟಿಯ ವೇಳೆ, ಡಿಲಿಯಲ್ಲಿ ಅಂಗವೈಕಲ್ಯ ಹೊಂದಿದ ಮಕ್ಕಳ ಶಾಲೆಗೆ ಭೇಟಿ ನೀಡಿದ ಪೂಜ್ಯ ಜಗದ್ಗುರು ಫ್ರಾನ್ಸಿಸ್ ಕೂಡ ಇದೇ ವಿಚಾರವನ್ನು ಉಲ್ಲೇಖಿಸಿದ್ದರು.

“ನೀವು ಮಾಡುತ್ತಿರುವ ಸೇವೆಗೆ ಧನ್ಯವಾದಗಳು; ಮತ್ತು ತಮ್ಮ ಆರೈಕೆ ಮಾಡಲು ಅವಕಾಶ ನೀಡಿದ ಮಕ್ಕಳಿಗೂ ಯುವಜನರಿಗೂ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ,” ಎಂದು ಪೂಜ್ಯ ಜಗದ್ಗುರು ಫ್ರಾನ್ಸಿಸ್ ಹೇಳಿದರು. 

“ಮಕ್ಕಳು ದೇವರಿಂದ ಆರೈಕೆ ಸ್ವೀಕರಿಸುವುದನ್ನು ನಮಗೆ ಕಲಿಸುತ್ತಾರೆ.”

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

31 ಮಾರ್ಚ್ 2026, 15:00