ಹುಡುಕಿ

ಶುಭ ಶುಕ್ರವಾರದ ಸಂಗ್ರಹಕ್ಕೂ ಮುನ್ನ ಕ್ರೈಸ್ತರಿಗೆ ಪವಿತ್ರ ಭೂಮಿಯ ಪಾಲಕರ ಮನವಿ ಶುಭ ಶುಕ್ರವಾರದ ಸಂಗ್ರಹಕ್ಕೂ ಮುನ್ನ ಕ್ರೈಸ್ತರಿಗೆ ಪವಿತ್ರ ಭೂಮಿಯ ಪಾಲಕರ ಮನವಿ 

ಪವಿತ್ರ ಭೂಮಿಯಲ್ಲಿರುವ ಕ್ರೈಸ್ತರಿಗೆ ಸಹಾಯ ನೀಡಿ ನಂಬಿಕೆಯನ್ನು ಜೀವಂತವಾಗಿರಿಸಿ

ಪವಿತ್ರ ಶುಕ್ರವಾರದ ಸಂಗ್ರಹಣೆಯ ಹಿನ್ನೆಲೆ, ಪವಿತ್ರ ಭೂಮಿಯ ಪಾಲಕರು ವಿಶ್ವದ ಕ್ರೈಸ್ತರಿಗೆ ಮತ್ತೊಮ್ಮೆ ಮನವಿ ಮಾಡಿದ್ದು, “ದಾನ ಮಾಡುವ ಮೂಲಕ ಮತ್ತು ಶಾಂತಿಯನ್ನು ಉತ್ತೇಜಿಸುವ ಮೂಲಕ ಭರವಸೆಯನ್ನು ಜೀವಂತವಾಗಿರಿಸಿ” ಎಂದು ಕರೆ ನೀಡಿದ್ದಾರೆ.

ಲೇಖಕರು: ಕೀಲ್ ಗಸ್ಸಿ

ಪವಿತ್ರ ವಾರ ಆರಂಭವಾಗುತ್ತಿದ್ದಂತೆ, ಪವಿತ್ರ ಭೂಮಿಯಲ್ಲಿ ಪವಿತ್ರ ಶುಕ್ರವಾರದ ಸಂಗ್ರಹಣೆ ಪ್ರಮುಖವಾಗಿ ಗಮನ ಸೆಳೆಯುತ್ತಿದೆ. ಪವಿತ್ರ ಭೂಮಿಯ ಪಾಲಕರಾದ ವಂ. ಗುರು ಫ್ರಾನ್ಸಿಸ್ಕೊ ಐಲ್ಪೊ ಅವರು, ಇನ್ನೇನು ಕೆಲವೇ ದಿನಗಳಲ್ಲಿ ಬರುವ ಪವಿತ್ರ ಶುಕ್ರವಾರದ ಮುನ್ನ ವಿಶ್ವದಾದ್ಯಂತದ ಕ್ರೈಸ್ತರಿಗೆ ಮನವಿ ಮಾಡಿದ್ದಾರೆ. ಆ ದಿನ, “ಶಿಲುಬೆಗೆ ಹಾಕಲ್ಪಟ್ಟ ಪ್ರಭು ಯೇಸುವನ್ನು ಧ್ಯಾನಿಸುವಾಗ, ನಮ್ಮ ವಿಮೋಚನೆಯ ಸ್ಥಳಗಳಲ್ಲಿ ಸುವಾರ್ತೆಗೆ ಸಾಕ್ಷಿಯಾಗುತ್ತಿರುವವರನ್ನು ನಿಮ್ಮ ಪ್ರಾರ್ಥನೆಗಳಲ್ಲಿ ಮತ್ತು ಕಾರ್ಯರೂಪದ ದಾನದಲ್ಲಿ ನೆನಪಿಸಿಕೊಳ್ಳಿ.ಪ್ರಿಯ ಸಹೋದರ ಸಹೋದರಿಯರೇ, ನಿಮ್ಮ ಸಹಾಯ ಮತ್ತು ಅದರ ಮುಖೇನ ಸಾಮಿಪ್ಯ, ಭರವಸೆ ಮತ್ತು ಶಾಂತಿಯ ಸ್ಪಷ್ಟ ಚಿಹ್ನೆಯಾಗಿದೆ” ಎಂದು ಅವರು ಹೇಳಿದರು.

ಜಗದ್ಗುರುಗಳ ಮನವಿಯ ಮೇರೆಗೆ

ಪವಿತ್ರ ಶುಕ್ರವಾರದ ಸಂಗ್ರಹಣೆ — ಇದು ಪ್ರಭುವಿನ ಪಾಡು ಸ್ಮರಣೆಗೆ ಸಂಬಂಧಿಸಿದುದು — ಪವಿತ್ರ ಭೂಮಿಯಲ್ಲಿ ವಾಸಿಸುವವರಿಗೆ ನೆರವಾಗುವ ಸ್ಪಷ್ಟ ಮಾರ್ಗವಾಗಿದೆ. ಪೂಜ್ಯ ಜಗದ್ಗುರುಗಳಾದ ಆರನೇ ಪೌಲರು 1974ರ ಮಾರ್ಚ್‌ನಲ್ಲಿ ಪ್ರಕಟಿಸಿದ Nobis Animo ಅಪೋಸ್ತೋಲಿಕ ಉಪದೇಶದಲ್ಲಿ, ವಿಶ್ವದ ಧರ್ಮಾಧ್ಯಕ್ಷರುಗಳು, ಗುರುಗಳು ಮತ್ತು ಭಕ್ತರನ್ನು ಉದ್ದೇಶಿಸಿ ಈ ಸಂಗ್ರಹಣೆಯನ್ನು ಸ್ಥಾಪಿಸಲು ಮನವಿ ಮಾಡಿದ್ದರು.

ಇದರ ಉದ್ದೇಶ ವಿಶ್ವದ ಕ್ರೈಸ್ತರು ಮತ್ತು ಪವಿತ್ರ ಸ್ಥಳಗಳ ನಡುವೆ ಇರುವ ಬಂಧವನ್ನು ಗಾಢಗೊಳಿಸುವುದಾಗಿದೆ. ಇಂದಿಗೂ ಇದು ಕಥೋಲಿಕ ಚರ್ಚಿನ ಅಧಿಕೃತ ಸಂಗ್ರಹಣೆಯಾಗಿ ಮುಂದುವರಿಯುತ್ತಿದೆ.

ಈ ವರ್ಷದ ಪವಿತ್ರ ಶುಕ್ರವಾರದ ಸಂಗ್ರಹಣೆ ಏಪ್ರಿಲ್ 3ರಂದು ನಡೆಯಲಿದ್ದು, ಪವಿತ್ರ ಭೂಮಿಯ ಪವಿತ್ರ ಸ್ಥಳಗಳಿಗೆ ಸಂಬಂಧಿಸಿದ ಕಾರ್ಯಗಳು ಮತ್ತು ದೈನಂದಿನ ಜೀವನವನ್ನು ಬೆಂಬಲಿಸುವ ಪ್ರಮುಖ ಮೂಲವಾಗಿದೆ. ಪವಿತ್ರ ಭೂಮಿಯಲ್ಲಿ ಸೇವೆ ಸಲ್ಲಿಸುವ ಫ್ರಾನ್ಸಿಸ್ಕನ್ ಸನ್ಯಾಸಿಗಳು, ವಿವಿಧ ಧರ್ಮಪೀಠಗಳು ಮತ್ತು ಧರ್ಮಾಧ್ಯಕ್ಷರಿಂದ ಸಂಗ್ರಹಿಸಲಾದ ದೇಣಿಗೆಗಳನ್ನು ಪವಿತ್ರ ಭೂಮಿಯ ಪಾಲಕರಿಗೆ ಒಪ್ಪಿಸುತ್ತಾರೆ.

ಈ ದೇಣಿಗೆಗಳನ್ನು ಪವಿತ್ರ ಸ್ಥಳಗಳ ಸಂರಕ್ಷಣೆಗಾಗಿ ಮತ್ತು ಸ್ಥಳೀಯ ಕ್ರೈಸ್ತ ಸಮುದಾಯಗಳ ಉಳಿವಿಗಾಗಿ ಬಳಸಲಾಗುತ್ತದೆ. ಈ ಸಮುದಾಯಗಳನ್ನು ಸಾಮಾನ್ಯವಾಗಿ “ಜೀವಂತ ಕಲ್ಲುಗಳು” ಎಂದು ಕರೆಯಲಾಗುತ್ತದೆ.

ಭವಿಷ್ಯದ ಕಡೆ ಗಮನ

ಈ ಪ್ರದೇಶದಲ್ಲಿ ಅಗತ್ಯಗಳು ಅಪಾರವಾಗಿವೆ. ಆದರೆ ಈ ಸಂಗ್ರಹಣೆ ಕೇವಲ ನೆರವು ನೀಡುವುದಲ್ಲ; ತುರ್ತು ಪರಿಸ್ಥಿತಿಗೆ   ಪ್ರತಿಕ್ರಿಯಿಸುವುದನ್ನೂ ಮೀರಿ ಹೋಗುತ್ತದೆ. ಶಿಕ್ಷಣದ ಮೂಲಕ ಭವಿಷ್ಯದ ಪೀಳಿಗೆಗಳಿಗೆ ಬೀಜ ಬಿತ್ತುವ ಕಾರ್ಯದಲ್ಲಿಯೂ ಇದು ತೊಡಗಿದೆ.

ಪವಿತ್ರ ಶುಕ್ರವಾರದ ಸಂಗ್ರಹಣೆ ಸುಮಾರು 630 ಕುಟುಂಬಗಳಿಗೆ ಮನೆ, 15 ಶಾಲೆಗಳಲ್ಲಿ 12,000 ವಿದ್ಯಾರ್ಥಿಗಳಿಗೆ ಶಿಕ್ಷಣ, 1,100 ಉದ್ಯೋಗಗಳು, 270 ಮಿಷನರಿಗಳು, 55 ಪವಿತ್ರ ತೀರ್ಥಕ್ಷೇತ್ರಗಳು, 6 ಯಾತ್ರಿಕರ ನಿವಾಸಗಳು, 5 ಅನಾಥರು ಮತ್ತು ರೋಗಿಗಳಿಗಾಗಿ ಮನೆಗಳು, ಹಾಗೂ 3 ವಿದ್ಯಾಸಂಸ್ಥೆಗಳಿಗೆ ಬೆಂಬಲ ನೀಡುತ್ತದೆ.

ಜೆರುಸಲೇಮ್, ಪ್ಯಾಲೆಸ್ತೀನ್, ಇಸ್ರಾಯೇಲ್, ಜೋರ್ಡನ್, ಸೈಪ್ರಸ್, ಸಿರಿಯಾ, ಲೆಬನಾನ್, ಈಜಿಪ್ಟ್, ಇಥಿಯೋಪಿಯಾ, ಎರಿಟ್ರಿಯಾ, ಟರ್ಕಿ, ಇರಾನ್ ಮತ್ತು ಇರಾಕ್ ಸೇರಿದಂತೆ ಅನೇಕ ಪ್ರದೇಶಗಳ ಜನರು ವಿಶ್ವದ ಕ್ರೈಸ್ತರ ಉದಾರ ದೇಣಿಗೆಗಳಿಂದ ಲಾಭ ಪಡೆಯುತ್ತಿದ್ದಾರೆ.

ಪವಿತ್ರ ಭೂಮಿಯ ಪಾಲಕರು ಈ ಸಂಗ್ರಹಣೆಯು ನಮಗೆ — “ದಾನ ಮಾಡುವ ಮೂಲಕ ಭರವಸೆಯನ್ನು ಜೀವಂತವಾಗಿರಿಸಬಹುದು, ಮತ್ತು ಶಾಂತಿಯನ್ನು ಉತ್ತೇಜಿಸುವ ಮೂಲಕವೂ ಭರವಸೆಯನ್ನು ಬೆಂಬಲಿಸಬಹುದು” ಎಂಬುದನ್ನು ನೆನಪಿಸುತ್ತದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

31 ಮಾರ್ಚ್ 2026, 15:00