ಹುಡುಕಿ

ಲಿಮಾಸಾವಾದಲ್ಲಿ ೫೦೫ನೇ ವರ್ಷದ ಬಲಿಪೂಜೆ ನೆರವೇರಿಸುತ್ತಿರುವ ಮಾಸಿನ್ ಧರ್ಮಾಧ್ಯಕ್ಷ ಪ್ರೆಸಿಯೊಸೊ ಕಾಂಟಿಲ್ಲಾಸ್. ಲಿಮಾಸಾವಾದಲ್ಲಿ ೫೦೫ನೇ ವರ್ಷದ ಬಲಿಪೂಜೆ ನೆರವೇರಿಸುತ್ತಿರುವ ಮಾಸಿನ್ ಧರ್ಮಾಧ್ಯಕ್ಷ ಪ್ರೆಸಿಯೊಸೊ ಕಾಂಟಿಲ್ಲಾಸ್. 

ಫಿಲಿಪೀನ್ಸ್: ಮೊದಲ ಪುನರುತ್ಥಾನ ಮಹೋತ್ಸವದ ಬಲಿಪೂಜೆಯ 505ನೇ ವಾರ್ಷಿಕೋತ್ಸವ ಆಚರಣೆ

ಲಿಮಾಸಾವಾದಲ್ಲಿ ಭಕ್ತರು ಸೇರಿ, ಫಿಲಿಪೀನ್ಸ್‌ನಲ್ಲಿ ನಡೆದ ಮೊದಲ ಪುನರುತ್ಥಾನ ಮಹೋತ್ಸವದ ಬಲಿಪೂಜೆಯ ಐತಿಹಾಸಿಕ ಘಟನೆಯನ್ನು ಸ್ಮರಿಸಿ, ನಂಬಿಕೆ ಮತ್ತು ಭರವಸೆಯ ಜನರಾಗಿ ತಮ್ಮ ಧರ್ಮಕೃತ್ಯವನ್ನು ಪುನರುಜ್ಜೀವಗೊಳಿಸಿದರು.

ಲೇಖಕರು: ವಂ. ಗುರು ಮಾರ್ಕ್ ರಾಬಿನ್ ದೆಸ್ತುರಾ, RCJ

“ಪಾಪದ ಮಧ್ಯದಲ್ಲಿಯೂ, ನಮ್ಮ ಪಾಪಗಳ ನಡುವೆಯೂ, ಪ್ರಭುವಿನ ಕರುಣೆ ಜಯ ಸಾಧಿಸುತ್ತದೆ. ಅದೇ ಬೆಳಕು, ಅದೇ ನಾವು ಆಚರಿಸುವುದು — ಪ್ರಭುವಿನ ಪ್ರೀತಿ ಮತ್ತು ಕರುಣೆ ಇಂದಿಗೂ ಮುಂದುವರಿಯುತ್ತಿದೆ,” ಎಂದು ಮಾಸಿನ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪ್ರೆಸಿಯೋಸೊ ಡಿ. ಕಾಂಟಿಲ್ಲಾಸ್ ಹೇಳಿದರು.

ಫಿಲಿಪೀನ್ಸ್‌ನ ಕಥೋಲಿಕ ಧರ್ಮಸಭೆ, ಮಾರ್ಚ್ 31ರಂದು ಲಿಮಾಸಾವಾದಲ್ಲಿ ನಡೆದ ಘನ ಸಮಾರಂಭದ ಮೂಲಕ ಮೊದಲ ಪುನರುತ್ಥಾನ ಬಲಿಯ 505ನೇ ವಾರ್ಷಿಕೋತ್ಸವವನ್ನು ಆಚರಿಸಿತು. ಯಾತ್ರಿಕರು, ಗುರುಗಳು ಮತ್ತು ಸ್ಥಳೀಯ ಸಮುದಾಯಗಳು ಒಂದಾಗಿ ಸೇರಿ ಕೃತಜ್ಞತೆ ಮತ್ತು ಪುನರುಜ್ಜೀವನದ ಕ್ಷಣವನ್ನು ಹಂಚಿಕೊಂಡರು.

ಈ ಆಚರಣೆ ಲಿಮಾಸಾವಾದಲ್ಲೇ ನಡೆಯಿತು — 1521ರಲ್ಲಿ ಫರ್ಡಿನಾಂಡ್ ಮ್ಯಾಗೆಲ್ಲನ್ ಅಭಿಯಾನದ ಚಾಪ್ಲೈನ್ ಆಗಿದ್ದ ಗುರು ಪೆದ್ರೊ ವಾಲ್ದೆರಾಮಾ ಇಲ್ಲಿ ಮೊದಲ ಪುನರುತ್ಥಾನ ಬಲಿಯನ್ನು ಆಚರಿಸಿದ್ದರೆಂದು ನಂಬಲಾಗುತ್ತದೆ. ಇದು ದ್ವೀಪಸಮೂಹದಲ್ಲಿ ಕ್ರೈಸ್ತಧರ್ಮದ ಆರಂಭವನ್ನು ಗುರುತಿಸಿದ ಮಹತ್ವದ ಘಟ್ಟವಾಗಿದೆ.

ನಂಬಿಕೆ ಮತ್ತು ಇತಿಹಾಸದ ಆಚರಣೆ

ಈ ವಾರ್ಷಿಕೋತ್ಸವವು ಯಾತ್ರೆಗಳು, ಯುವಜನರ ಸಮಾಗಮಗಳು, ಪವಿತ್ರ ಆರಾಧನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡ ಚಟುವಟಿಕೆಗಳ ಸರಣಿಯ ಭಾಗವಾಗಿತ್ತು. ಈ ಕಾರ್ಯಕ್ರಮಗಳು ಲಿಮಾಸಾವಾದ ಐತಿಹಾಸಿಕ ಮಹತ್ವವನ್ನು ಮಾತ್ರವಲ್ಲ, ನಂಬಿಕೆ ಮತ್ತು ಯಾತ್ರೆಯ ಕೇಂದ್ರವಾಗಿರುವ ಅದರ ನಿರಂತರ ಪಾತ್ರವನ್ನೂ ಬೆಳಗಿಸಿವೆ. ಈ ವಾರ್ಷಿಕ ಸ್ಮರಣೆಯು ಫಿಲಿಪೀನ್ಸ್‌ನಲ್ಲಿ ಕ್ರೈಸ್ತಧರ್ಮದ ಬೇರುಗಳನ್ನು ನೆನಪಿಸುತ್ತದೆ — ಐದು ಶತಮಾನಗಳ ಹಿಂದೆ ಇಲ್ಲಿ ಸುವಾರ್ತೆ ಮೊದಲು ಘೋಷಿಸಲಾಯಿತು.

ಧರ್ಮಕೃತ್ಯವಾಗಿ ನಂಬಿಕೆ

ತಮ್ಮ ಉಪದೇಶದಲ್ಲಿ ಧರ್ಮಾಧ್ಯಕ್ಷರಾದ ಕಾಂಟಿಲ್ಲಾಸ್, ನಂಬಿಕೆ ಕೇವಲ ವೈಯಕ್ತಿಕ ಅನುಭವವಲ್ಲ, ಪ್ರತಿಯೊಬ್ಬ ನಂಬಿಕೆಯವರಿಗೆ ನೀಡಲ್ಪಟ್ಟ ಧರ್ಮಕೃತ್ಯವಾಗಿದೆ ಎಂದು ಒತ್ತಿ ಹೇಳಿದರು. “ಪ್ರತಿ ಕುಟುಂಬಕ್ಕೂ ಒಂದು ಧರ್ಮಕೃತ್ಯ ಇದೆ,” ಪ್ರತಿ ದಿನದ ಜೀವನವನ್ನೇ ದೇವರ ಯೋಜನೆಯ ಭಾಗವೆಂದು ನೋಡಿ, ಸೇವೆ, ತ್ಯಾಗ ಮತ್ತು ಇತರರಿಗಾಗಿ ಬದ್ಧತೆಯ ಮೂಲಕ ನಂಬಿಕೆಯನ್ನು ವ್ಯಕ್ತಪಡಿಸಲು ಕುಟುಂಬಗಳು ಮತ್ತು ಸಮುದಾಯಗಳನ್ನು ಅವರು ಪ್ರೇರೇಪಿಸಿದರು.

ನಂಬಿಕೆಯಲ್ಲಿ ಸ್ಥೈರ್ಯ

ಕ್ರೈಸ್ತ ಜೀವನದ ಸವಾಲುಗಳನ್ನು ಉಲ್ಲೇಖಿಸಿ, ನಂಬಿಕೆ ಅನೇಕ ಬಾರಿ ಕಷ್ಟಗಳು, ಸಂಶಯಗಳು ಮತ್ತು ವಿಫಲತೆಗಳಿಂದ ಪರೀಕ್ಷಿಸಲ್ಪಡುತ್ತದೆ ಎಂದು ಧರ್ಮಾಧ್ಯಕ್ಷರು ಹೇಳಿದರು. “ಕೆಲವೊಮ್ಮೆ ದೇವರ ಕರೆಯ ಪ್ರತಿಕ್ರಿಯೆಯಲ್ಲಿ ನಾವು ಆಯಾಸಗೊಳ್ಳುತ್ತೇವೆ… ಕೆಲವೊಮ್ಮೆ ಫಲವೂ ಕಾಣಿಸದು,ಆದರೂ, ಸ್ಥೈರ್ಯ ಅತ್ಯಗತ್ಯವೆಂದು ಅವರು ಭಕ್ತರಿಗೆ ನೆನಪಿಸಿದರು ಮತ್ತು ಅವರ ಪ್ರಯತ್ನಗಳು ವ್ಯರ್ಥವಾಗುವುದಿಲ್ಲವೆಂದು’ ಭರವಸೆ ನೀಡಿದರು.

ಭೂತಕಾಲದಿಂದ ಪಾಠ

ಫಿಲಿಪೀನ್ಸ್‌ನ  ಕ್ರೈಸ್ತಧರ್ಮದ ದೀರ್ಘ ಇತಿಹಾಸವನ್ನು ಉಲ್ಲೇಖಿಸಿ, ಪರೀಕ್ಷೆಗಳ ನಡುವೆಯೂ ನಂಬಿಕೆಯನ್ನು ಉಳಿಸಿಕೊಂಡ ಸಂತರು ಮತ್ತು ರಕ್ತಸಾಕ್ಷಿಗಳ ಸಾಕ್ಷಿಯನ್ನು ಅವರು ನೆನಪಿಸಿದರು. ಮರಣದ ಎದುರಲ್ಲಿಯೂ ಕ್ರಿಸ್ತನಿಗೆ ನಿಷ್ಠೆಯಿಂದ ಉಳಿದ ಸಂತ ಲೊರೆನ್ಜೊ ರೂಯಿಜ್ ಅವರ ಉದಾಹರಣೆಯನ್ನು ಅವರು ಉಲ್ಲೇಖಿಸಿದರು.

ವಿಶ್ವಾಸಘಾತ ಮತ್ತು ನಿರಾಕರಣೆಯ ಸುವಾರ್ತೆ ಘಟನೆಗಳನ್ನು ಉಲ್ಲೇಖಿಸಿ, ನಂಬಿಕೆ ಪರಿಪೂರ್ಣವಲ್ಲ; ಅದು ಸದಾ ಪರೀಕ್ಷಿಸಲ್ಪಡುತ್ತದೆ ಎಂದು ಅವರು ಹೇಳಿದರು.

“ನಮ್ಮ ಕಥೋಲಿಕ ನಂಬಿಕೆ ಸಂಪೂರ್ಣವಲ್ಲ, ಪರಿಪೂರ್ಣವಲ್ಲ; ಅದು ಪರೀಕ್ಷೆಗೆ ಒಳಗಾಗುತ್ತದೆ,” ಎಂದು ಅವರು ಹೇಳಿದರು, ವಿನಯ ಮತ್ತು ಪರಿವರ್ತನೆಗೆ ಕರೆ ನೀಡಿದರು. ಅದೇ ಸಮಯದಲ್ಲಿ, ಮಾನವ ದೌರ್ಬಲ್ಯದಲ್ಲಿಯೂ ದೇವರ ಕರುಣೆ ಅಚಲವಾಗಿದೆ ಎಂದು ಅವರು ಒತ್ತಿ ಹೇಳಿದರು.

ಧರ್ಮಕೃತ್ಯದ ನಿರಂತರತೆ

ಫಿಲಿಪೀನ್ಸ್‌ನಲ್ಲಿ ಐದು ಶತಮಾನಗಳಿಗಿಂತ ಹೆಚ್ಚು ಕಾಲದ ಕ್ರೈಸ್ತಧರ್ಮವನ್ನು ಸ್ಮರಿಸುತ್ತಿರುವ ಈ ಸಂದರ್ಭದಲ್ಲಿ, ಲಿಮಾಸಾವಾದ ಆಚರಣೆ ನಂಬಿಕೆಯ ಜನರ ನಿರಂತರ ಧರ್ಮಕೃತ್ಯವನ್ನು ನೆನಪಿಸುತ್ತದೆ. ಸರಳ ಆರಂಭದಿಂದ ಬೆಳೆದ ಈ ನಂಬಿಕೆ, ಲಕ್ಷಾಂತರ ಫಿಲಿಪ್ಪೀನೋ ಜನರ ಜೀವನವನ್ನು ರೂಪಿಸುತ್ತಲೇ ಇದೆ.

ಲಿಮಾಸಾವಾ ಕಥೆ ಕೇವಲ ಇತಿಹಾಸವಲ್ಲ, ಅದು ಜೀವಂತ ಧರ್ಮಕೃತ್ಯವೆಂದು ಧರ್ಮಾಧ್ಯಕ್ಷರಾದ ಕಾಂಟಿಲ್ಲಾಸ್ ಹೇಳಿದರು. “ಲಿಮಾಸಾವಾ ಕೇವಲ ಪ್ರವಾಸೋದ್ಯಮದ ಸ್ಥಳವಲ್ಲ; ‘ಡಿಸ್ಕವರ್ ಲಿಮಾಸಾವಾ’ ವನ್ನು ಮೀರಿಸಿ, ದೇವರ ಯೋಜನೆಯನ್ನು ಇಲ್ಲಿ ಅರಿಯಬೇಕು,” ಎಂದು ಅವರು ಹೇಳಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

31 ಮಾರ್ಚ್ 2026, 15:20