ಶಾಂತಿಗಾಗಿ ಸಾರ್ವತ್ರಿಕ ಪ್ರಾರ್ಥನೆ: ದುಬೈನಲ್ಲಿ ಒಂದಾದ ಕ್ರೈಸ್ತ ನಾಯಕರು
ಲೇಖಕರು: ದೆಬೋರ ಕ್ಯಾಸ್ತೆಲ್ಲಾನೋ ಲುಬೋವ್
ಏಪ್ರಿಲ್ 29ರಂದು ದುಬೈಯ ಸಂತ ಮೇರಿ ಕಥೋಲಿಕ ದೇವಾಲಯದಲ್ಲಿ ಕ್ರೈಸ್ತ ನಾಯಕರು ರಾಷ್ಟ್ರೀಯ ಸಾರ್ವತ್ರಿಕ ಶಾಂತಿ ಪ್ರಾರ್ಥನೆಗಾಗಿ ಒಂದಾಗಿ ಸೇರಿದರು. ಈ ಉಪಕ್ರಮವನ್ನು ಗಲ್ಫ್ ಚರ್ಚಸ್ ಫೆಲೋಶಿಪ್ ಪ್ರೋತ್ಸಾಹಿಸಿದ್ದು, ದಕ್ಷಿಣ ಅರೇಬಿಯಾದ ಪ್ರೇಷಿತ ಧರ್ಮಕ್ಷೇತ್ರದ ಸರ್ವಧರ್ಮ ಮತ್ತು ಐಕ್ಯತಾ ಸಂವಾದ ಕಚೇರಿ (AVOSA) ಮತ್ತು ಸಂತ ಮೇರಿ ದೇವಾಲಯದ ಸಹಯೋಗ ನೀಡಿವೆ.
ತಮ್ಮ ಉದ್ಘಾಟನಾ ಭಾಷಣದಲ್ಲಿ, ದಕ್ಷಿಣ ಅರೇಬಿಯಾದ ಪ್ರೇಷಿತ ಪ್ರತಿನಿಧಿಯಾದ ಪೂಜ್ಯ ಧರ್ಮಾಧ್ಯಕ್ಷ ಪಾವ್ಲೋ ಮಾರ್ಟಿನೆಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್, ಗಲ್ಫ್ ಪ್ರದೇಶ, ಮಧ್ಯಪ್ರಾಚ್ಯ ಮತ್ತು ವಿಶ್ವದಾದ್ಯಂತ ಶಾಂತಿಗಾಗಿ ಪ್ರಾರ್ಥಿಸಲು ಕರೆದರು. “ಶಾಂತಿ,ಕೇವಲ ಮಾನವ ನಿರ್ಮಿತವಲ್ಲ; ಅದು ದೇವರ ವರ. ಅದನ್ನು ಹುಡುಕಬೇಕು, ಸ್ವೀಕರಿಸಬೇಕು, ಪೋಷಿಸಬೇಕು ಮತ್ತು ಉತ್ತಮ ಸಂಬಂಧಗಳ ಮೂಲಕ ಸಮಾಜದಲ್ಲಿ ಹರಡಬೇಕು” ಎಂದು ಒತ್ತಿಹೇಳಿದರು.
ಪೂಜ್ಯ ಧರ್ಮಾಧ್ಯಕ್ಷ ಮಾರ್ಟಿನೆಲ್ಲಿ ಅವರು ಇತ್ತೀಚಿನ ತಿಂಗಳಲ್ಲಿ ನೀಡಿದ ರಕ್ಷಣೆಗೆ ನಾಗರಿಕ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿ, ಕ್ರೈಸ್ತ ಸಮುದಾಯದ ಪ್ರಾರ್ಥನೆಗಳು ಸದಾ ಅವರೊಂದಿಗಿದೆ ಎಂದು ಭರವಸೆ ನೀಡಿದರು. “ದೇವರು ನಮ್ಮ ಸಾಮೂಹಿಕ ಪ್ರಾರ್ಥನೆಯನ್ನು ಆಲಿಸಲಿ; ನಮಗೆ ಶಾಂತಿ ಮತ್ತು ಸೌಹಾರ್ದತೆ, ಸಮ್ಮಿಲನ ಮತ್ತು ಸಮೃದ್ಧಿಯನ್ನು ನೀಡಲಿ.”
ಈ ಸಭೆಯನ್ನು ಪ್ರದೇಶದಲ್ಲಿ ಶಾಂತಿಗಾಗಿ ಪ್ರಾರ್ಥಿಸಲು, ದುಬೈಯಲ್ಲಿ ದೇವಾಲಯಗಳ ಪುನರಾರಂಭವನ್ನು ಗುರುತಿಸಲು ಮತ್ತು ಪುನರುತ್ಥಾನ ಮಹೋತ್ಸವದ ಸಂತೋಷವನ್ನು ಆಚರಿಸಲು ಆಯೋಜಿಸಲಾಯಿತು. ಈ ದೇವಾಲಯ ತನ್ನ ಬಾಗಿಲುಗಳನ್ನು ತೆರೆಯುತ್ತಾ, ಆರು ಕ್ರೈಸ್ತ ಮತಪಂಥಗಳ ಪ್ರತಿನಿಧಿಗಳು ಮತ್ತು ಭಕ್ತರನ್ನು ಸ್ವಾಗತಿಸಿತು.
ಈ ಪ್ರಾರ್ಥನೆ ಮೂರು ಪ್ರಮುಖ ಹಂತಗಳಲ್ಲಿ ನಡೆಯಿತು: ನೈಸೀನ್ ವಿಶ್ವಾಸಪ್ರಮಾಣ; ಬೈಬಲ್ ವಾಚನಗಳು, ವಿವಿಧ ಕ್ರೈಸ್ತ ಪರಂಪರೆಗಳಿಂದ ಪ್ರಾರ್ಥನೆಗಳು ಮತ್ತು ಧಾರ್ಮಿಕ ವಿಧಿವಿಧಾನದ ಭಾಷೆಗಳೊಂದಿಗೆ ಶಾಂತಿಗಾಗಿ ಪ್ರಾರ್ಥನೆ ಹಾಗೂ ದೀಪಗಳನ್ನು ಬೆಳಗಿಸುವುದು; ಮತ್ತು ಶಾಂತಿಯ ಮನವಿ ಮಾಲೆ, ಇದನ್ನು ಅನುಸರಿಸಿ ಶಾಂತಿಯ ಸಂಕೇತದ ವಿನಿಮಯ ನಡೆಯಿತು.
ಬಿಷಪ್ ಪಾವ್ಲೋ ಮಾರ್ಟಿನೆಲ್ಲಿಯವರೊಂದಿಗೆ, ಈ ಸಭೆಯಲ್ಲಿ ಭಾಗವಹಿಸಿದ್ದ ಇತರ ಕ್ರೈಸ್ತ ನಾಯಕರು: ಆರ್ಮೇನಿಯನ್ ಧರ್ಮಸಭೆಯ ಮಹಾಧರ್ಮಾಧ್ಯಕ್ಷರಾದ ಪೂಜ್ಯ ಮೆಸ್ರೋಬ್ ಸರ್ಕಿಸಿಯನ್, ಇಥಿಯೋಪಿಯನ್ ಆರ್ಥಡಾಕ್ಸ್ ಧರ್ಮಸಭೆಯ ಮಹಾಧರ್ಮಾಧ್ಯಕ್ಷರಾದ ಪೂಜ್ಯ ಅಬುನೇ ಡಿಮೆಟ್ರೋಸ್, ಆಂಗ್ಲಿಕನ್ ಧರ್ಮಸಭೆಯ ಧರ್ಮಾಧ್ಯಕ್ಷರಾದ ಪೂಜ್ಯ ಶಾನ್ ಸೆಂಪಲ್, ಗ್ರೀಕ್ ಆರ್ಥಡಾಕ್ಸ್ ಧರ್ಮಸಭೆಯ ಮಹಾಧರ್ಮಾಧ್ಯಕ್ಷರಾದ ಪೂಜ್ಯ ಪ್ರಧಾನ ಮಠಾಧ್ಯಕ್ಷರಾದ ವಂ. ಗುರು ಇಶಾಕ್ ಜಖೂರ್, ಮತ್ತು ಕಾಪ್ಟಿಕ್ ಧರ್ಮಸಭೆಯ ವಂ. ಗುರು ಮಿನಾ ಹನ್ನಾ—ತಮ್ಮ ತಮ್ಮ ಸಮುದಾಯಗಳನ್ನು ಪ್ರತಿನಿಧಿಸುತ್ತಾ ಉಪಸ್ಥಿತರಿದ್ದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).