ಜೆರುಸಲೇಮ್‌ನ ಲ್ಯಾಟಿನ್ ಪ್ರಧಾನ ಧರ್ಮಕೇಂದ್ರದಿಂದ ವಸತಿಗಾರರ ಅತಿಕ್ರಮಣ ಖಂಡ
ವ್ಯಾಟಿಕನ್ ವರದಿ
ಜೆರುಸಲೇಮ್‌ನ ಲ್ಯಾಟಿನ್ ಪ್ರಧಾನ ಧರ್ಮಕೇಂದ್ರದ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಪತ್ರಿಕಾ ಪ್ರಕಟಣೆ, ಆಕ್ರಮಿತ ಪಶ್ಚಿಮ ಕರಾವಳಿಯ ಉತ್ತರ ಜೋರ್ಡನ್ ಕಣಿವೆಯ ಟೂಬಾಸ್ ಪ್ರಾಂತ್ಯದ ತಯಾಸಿರ್ ಮತ್ತು ಹಮಾಮ್ ಇಲ್-ಮಲೇಹ್ ಪ್ರದೇಶಗಳಲ್ಲಿ ಧರ್ಮಸಭೆಗೆ ಸೇರಿದ ಭೂಮಿಯ ಮೇಲೆ ಇತ್ತೀಚೆಗೆ ನಡೆದ ಇಸ್ರಾಯೇಲಿ ವಸತಿಗಾರರ ಅತಿಕ್ರಮಣಗಳ ಕುರಿತು ಚಿಂತೆಯನ್ನು ವ್ಯಕ್ತಪಡಿಸಿದೆ.
ಏಪ್ರಿಲ್ 23ರ ಬುಧವಾರ, ಪ್ರಧಾನ ಧರ್ಮಕೇಂದ್ರದ ದತ್ತಿ ವಿಭಾಗದ ಪ್ರತಿನಿಧಿಗಳು ಇಸ್ರಾಯೇಲಿ ಸೈನಿಕ ಅಧಿಕಾರಿಗಳು ಹಾಗೂ ಪಶ್ಚಿಮ ಕರಾವಳಿಯ ನಾಗರಿಕ ವಿಚಾರಗಳನ್ನು ನಿರ್ವಹಿಸುವ ಸಿವಿಲ್ ಆಡಳಿತದ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನಾ ಸಭೆ ನಡೆಸಿದರು. ಈ ಸಭೆಯಲ್ಲಿ ಭೂಮಿಗೆ ಉಂಟಾದ ಹಾನಿ ಮತ್ತು ಅದರ ಸ್ಥಳೀಯ ನಿವಾಸಿಗಳ ಮೇಲೆ ಇರುವ ಪರಿಣಾಮಗಳ ಕುರಿತು ಚರ್ಚಿಸಲಾಯಿತು.
ಈ ಸಭೆ, ಧರ್ಮಸಭೆಯ ಆಸ್ತಿ ಮತ್ತು ಸುತ್ತಮುತ್ತಲಿನ ಸಮುದಾಯದ ಮೇಲೆ ಪರಿಣಾಮ ಬೀರಿದ ದಾಳಿಗಳ ಕುರಿತು ಪ್ರಧಾನ ಧರ್ಮಕೇಂದ್ರವು ಸಲ್ಲಿಸಿದ ಅಧಿಕೃತ ದೂರಿನ ನಂತರ ನಡೆದಿತು. ಪತ್ರಿಕಾ ಪ್ರಕಟಣೆಯ ಪ್ರಕಾರ, ಅಧಿಕಾರಿಗಳು ಕ್ರಮ ಕೈಗೊಳ್ಳಲು ಆರಂಭಿಸಿದ್ದು, “ಜವಾಬ್ದಾರರ ವಿರುದ್ಧ ಕ್ರಮ ಕೈಗೊಳ್ಳುವುದು ಮತ್ತು ಭೂ ಹಾನಿಗೆ ಬಳಸಲಾದ ಭಾರೀ ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳುವುದು” ಸೇರಿದಂತೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಈ ಘಟನೆ, ಪಶ್ಚಿಮ ಕರಾವಳಿಯಲ್ಲಿ ನಡೆಯುತ್ತಿರುವ ವಸತಿ ವಿಸ್ತರಣೆ ಹಾಗೂ ಪ್ಯಾಲಸ್ತೀನಿಯ ಸಮುದಾಯಗಳ ಮೇಲೆ ಹೆಚ್ಚುತ್ತಿರುವ ಒತ್ತಡದ ಕುರಿತು ಅಂತರರಾಷ್ಟ್ರೀಯ ವೀಕ್ಷಕರು ಮತ್ತು ಧರ್ಮಸಭಾ ನಾಯಕರಲ್ಲಿ ವ್ಯಕ್ತವಾಗುತ್ತಿರುವ ವ್ಯಾಪಕ ಚಿಂತೆಯ ಹಿನ್ನೆಲೆಯಲ್ಲಿದೆ. ಇಂತಹ ಬೆಳವಣಿಗೆಗಳನ್ನು ಹಕ್ಕುಗಳ ಸಂಘಟನೆಗಳು ಮತ್ತು ವಿಶ್ಲೇಷಕರು “ವಾಸ್ತವಿಕ ವಿಲೀನ” (de facto annexation) ಎಂದು ವಿವರಿಸುತ್ತಿದ್ದು, ಇದು ಅಂತರರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿರುವುದಾಗಿ ಮತ್ತು ಮಾತುಕತೆಯ ಮೂಲಕ ಸಾಧ್ಯವಾಗಬಹುದಾದ ಎರಡು ರಾಷ್ಟ್ರಗಳ ಪರಿಹಾರಕ್ಕೆ ಮತ್ತೊಂದು ಅಡೆತಡೆ ಎಂದು ಪರಿಗಣಿಸಲಾಗಿದೆ.
ಚರ್ಚೆಗಳ ಸಂದರ್ಭದಲ್ಲಿ, ಪ್ರಧಾನ ಧರ್ಮಕೇಂದ್ರವು “ಈ ಕ್ರಮಗಳನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ” ಎಂದು ತಿಳಿಸಿ, ಅವನ್ನು “ಧರ್ಮಸಭೆಯ ಆಸ್ತಿಗಳ ಸ್ಪಷ್ಟ ಉಲ್ಲಂಘನೆ” ಎಂದು ವಿವರಿಸಿತು. ಜೊತೆಗೆ, “ಉಂಟಾದ ಎಲ್ಲಾ ಹಾನಿಯನ್ನು ತಕ್ಷಣವೇ ನಿವಾರಿಸಬೇಕು” ಎಂದು ಒತ್ತಾಯಿಸಿ, ಮುಂದಿನ ಅತಿಕ್ರಮಣಗಳನ್ನು ತಡೆಯುವ ಹಾಗೂ ತನ್ನ ಭೂಮಿಗೆ ಕಾನೂನುಬದ್ಧ ರಕ್ಷಣೆಯನ್ನು ಖಚಿತಪಡಿಸುವ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿತು.
ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳು ಪರಿಸ್ಥಿತಿಯ ಗಂಭೀರತೆಯನ್ನು ಒಪ್ಪಿಕೊಂಡು, ಅತಿಕ್ರಮಣಗಳನ್ನು ತೆರವುಗೊಳಿಸುವುದಾಗಿ ಮತ್ತು ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮಗಳನ್ನು ಮುಂದುವರಿಸುವುದಾಗಿ ಭರವಸೆ ನೀಡಿದ್ದಾರೆ.
ಪ್ರಧಾನ ಧರ್ಮಕೇಂದ್ರವು ತನ್ನ ಮಾನವೀಯ ಧ್ಯೇಯಕ್ಕೆ ಅನುಗುಣವಾಗಿ, ಸ್ಥಳೀಯ ನಿವಾಸಿಗಳಿಗೆ ತನ್ನ ಬೆಂಬಲವನ್ನು ಮರುದೃಢಪಡಿಸಿ, “ಅವರು ದೃಢವಾಗಿ ನಿಲ್ಲಲು, ತಮ್ಮ ಮಾನವನ್ನು ಕಾಪಾಡಿಕೊಳ್ಳಲು ಮತ್ತು ಸುರಕ್ಷತೆ ಹಾಗೂ ಸ್ಥಿರತೆಯಲ್ಲಿ ಬದುಕಲು” ಸಹಾಯ ಮಾಡುವ ತನ್ನ ಬದ್ಧತೆಯನ್ನು ವ್ಯಕ್ತಪಡಿಸಿದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).