ಹುಡುಕಿ

ವಂ. ಗುರು ಫ್ರಾನ್ಸೆಸ್ಕೊ  ಇಯೆಲ್ಪೊ (© ಕಸ್ಟೋಡಿಯಾ ಡಿ ಟೆರ್ರಾ ಸ್ಯಾಂಟಾ) ವಂ. ಗುರು ಫ್ರಾನ್ಸೆಸ್ಕೊ ಇಯೆಲ್ಪೊ (© ಕಸ್ಟೋಡಿಯಾ ಡಿ ಟೆರ್ರಾ ಸ್ಯಾಂಟಾ)  (© Custodia di Terra Santa)

‘ಹಿಂಸೆಯನ್ನು ತ್ಯಜಿಸುವುದು ದುರ್ಬಲತೆ ಅಲ್ಲ’:ಪವಿತ್ರ ಭೂಮಿಯ ಪಾಲಕರು

ಪ್ಯಾಲೆಸ್ತೀನ್ ಮತ್ತು ಇಸ್ರಾಯೇಲ್‌ನಲ್ಲಿ ಹಿಂಸೆ ನಿರಂತರವಾಗಿ ಮುಂದುವರಿಯುತ್ತಿರುವ ಸಂದರ್ಭದಲ್ಲಿ, ಪವಿತ್ರ ಭೂಮಿಯ ಪಾಲಕರು ಅವರು “ನಿಜವಾದ ಬಲವು ಸ್ವಯಂ ಸಮರ್ಪಣೆಯಲ್ಲಿ, ಅಂತ್ಯದವರೆಗೆ ಪ್ರೀತಿಸುವ ಸಾಮರ್ಥ್ಯದಲ್ಲಿ ನೆಲೆಗೊಂಡಿದೆ” ಎಂದು ಒತ್ತಿ ಹೇಳಿದ್ದಾರೆ.

ಲೇಖಕರು: ಜೋಸೆಫ್ ಟಲ್ಲೊಚ್  

ಪವಿತ್ರ ಭೂಮಿಯ ಪಾಲಕರಾದ ಗುರು ಫ್ರಾನ್ಸೆಸ್ಕೊ ಇಯೆಲ್ಪೊ ಅವರು “ಹಿಂಸೆಯನ್ನು ತ್ಯಜಿಸುವುದು ದುರ್ಬಲತೆ ಅಲ್ಲ, ಕ್ಷಮಿಸುವುದು ಸೋಲು ಅಲ್ಲ, ಮತ್ತು ಮರಣವು ಅಂತ್ಯವಲ್ಲ” ಎಂದು ತಿಳಿಸಿದ್ದಾರೆ.

ಏಪ್ರಿಲ್ 1ರಂದು ಪ್ರಕಟವಾದ ಪುನರುತ್ಥಾನ ಮಹೋತ್ಸವದ ಸಂದೇಶದಲ್ಲಿ, ಪ್ಯಾಲೆಸ್ತೀನ್, ಇಸ್ರಾಯೇಲ್ ಹಾಗೂ ಮಧ್ಯಪ್ರಾಚ್ಯದ ಇತರೆ ಪ್ರದೇಶಗಳಲ್ಲಿ ಯಾತ್ರಾ ಕ್ಷೇತ್ರಗಳನ್ನು ಮೇಲ್ವಿಚಾರಣೆ ಮಾಡುವ ಗುರು ಇಯೆಲ್ಪೊ ಅವರು, ಈ ಪ್ರದೇಶವು ಪ್ರಸ್ತುತ “ಯುದ್ಧದ ಭಾರ, ಹಿಂಸೆ, ಭಯ ಮತ್ತು ಅನಿಶ್ಚಿತತೆಗಳ ಒತ್ತಡದಲ್ಲಿ ನರಳುತ್ತಿದೆ. ಈ ಸಂಕಷ್ಟಭರಿತ ಪರಿಸ್ಥಿತಿಯಲ್ಲಿ, ಪ್ರಭು ಕ್ರಿಸ್ತರ ಪುನರುತ್ಥಾನವು ದೂರದ ಸತ್ಯವಲ್ಲ, ಬದಲಾಗಿ “ಒಂದು ನೈಜ ಮತ್ತು ಸ್ಪಷ್ಟವಾದ ಘಟನೆ” ಆಗಿದ್ದು, ವಿಶ್ವಾಸಿಗಳನ್ನು “ಇತಿಹಾಸವನ್ನು ದೇವರ ಕಣ್ಣಿನಿಂದ ಓದಲು ಕಲಿಯುವಂತೆ” ಕರೆಯುತ್ತದೆ ಎಂದು ಅವರು ಒತ್ತಿ ಹೇಳಿದರು.

ಸ್ವಯಂ ಸಮರ್ಪಣೆ ನಿಜವಾದ ಬಲ

ಗುರು ಇಯೆಲ್ಪೊ ಅವರು ವಿವರಿಸಿದಂತೆ, ಪ್ರಭು ಯೇಸು ಕ್ರಿಸ್ತರ ಪುನರುತ್ಥಾನವು ನಾವು ಲೋಕವನ್ನು ಅರ್ಥೈಸುವ ನಮ್ಮ ಸಹಜ ವಿಧಾನಗಳನ್ನು ಸಂಪೂರ್ಣವಾಗಿ “ತಲೆಕೆಳಗಾಗಿಸುತ್ತದೆ”.

ಲೋಕದ ದೃಷ್ಟಿಯಲ್ಲಿ “ಬಲಿಷ್ಠರಾಗುವುದು, ಶಕ್ತಿಶಾಲಿಗಳಾಗುವುದು ಮತ್ತು ಜಯಶೀಲರಾಗುವುದು” ಮುಖ್ಯವೆಂದು ತೋರುವುದಾದರೂ, ದೇವರ ನಿರ್ಣಯವು ನಿಜವಾದ ಬಲ “ಸ್ವಯಂ ಸಮರ್ಪಣೆಯಲ್ಲಿ, ಅಂತ್ಯದವರೆಗೆ ಪ್ರೀತಿಸುವ ಸಾಮರ್ಥ್ಯದಲ್ಲಿ” ನೆಲೆಗೊಂಡಿದೆ ಎಂದು ಪ್ರಕಟಿಸುತ್ತದೆ.

ನಾವು ಸಹಜವಾಗಿ ಪ್ರಭು ಕ್ರಿಸ್ತರ ಶಿಲುಬೆಯನ್ನು “ಸೋಲು, ನಷ್ಟ, ಅವಮಾನ ಮತ್ತು ಮೂರ್ಖತನ” ಎಂದು ಕಾಣುವ ಪ್ರವೃತ್ತಿಯಲ್ಲಿದಈಸ್ಟರ್ಪುನರುತ್ಥಾನ ನಮಗೆ ಶಿಲುಬೆಯಲ್ಲಿಯೇ “ನಿಜವಾದ ಜ್ಞಾನ” ಮತ್ತು “ನಿಜವಾದ ಜಯ” ವ್ಯಕ್ತವಾಗುತ್ತದೆ ಎಂದು ಕಲಿಸುತ್ತದೆ. ಅದು “ಸ್ವತಃ ಸಂಪೂರ್ಣವಾಗಿ ಅರ್ಪಿಸಿಕೊಳ್ಳುವ ಪ್ರೀತಿಯ ವಿಜಯ”ದ ಮೂಲಕ ವ್ಯಕ್ತವಾಗುತ್ತದೆ.

ಶತಾಧಿಪತಿಯ ದರ್ಶನಾನುಭವ

ಕೆಲವು ದಿನಗಳ ಹಿಂದೆ ಪ್ರಕಟವಾದ ಮತ್ತೊಂದು ಧ್ಯಾನದಲ್ಲಿ, ಜೆರುಸಲೇಮಿನ ಲ್ಯಾಟಿನ್ ಪ್ರಧಾನ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪ್ರಧಾನ ಗುರು ಪಿಯರ್‌ಬತ್ತಿಸ್ತ ಪಿಜ್ಜಬಲ್ಲಾ ಅವರು ಇದೇ ಸಂದೇಶವನ್ನು ಪ್ರತಿಧ್ವನಿಸಿದರು.

ಮಾರ್ಚ್ 29ರಂದು ಬಿಡುಗಡೆಯಾದ ಗರಿಗಳ ಭಾನುವಾರದ ಸಂದೇಶದಲ್ಲಿ, ಅವರು ಮತ್ತಾಯನ ಶುಭಸಂದೇಶದ ಪ್ರಕಾರ, ಪ್ರಭು ಕ್ರಿಸ್ತರ ಶಿಲುಬೆಗೆ ಹಾಕಲ್ಪಟ್ಟ ದೃಶ್ಯವನ್ನು ಕಂಡು ಆಳವಾಗಿ ಸ್ಪರ್ಶಿತರಾಗಿ “ನಿಜವಾಗಿಯೂ ಇವರು ದೇವರ ಮಗನಾಗಿದ್ದಾನೆ” ಎಂದು ಘೋಷಿಸಿದ ರೋಮನ್ ಶತಾಧಿಪತಿಯ ವ್ಯಕ್ತಿತ್ವವನ್ನು ಚಿಂತಿಸಿದರು.

ಪ್ರಧಾನ ಗುರು ಪಿಜ್ಜಬಲ್ಲಾ ಅವರು ಹೇಳುವಂತೆ, ಶತಾಧಿಪತಿ “ಬಲದ ತತ್ವದಿಂದ ರೂಪುಗೊಂಡ ಸೈನಿಕನಾಗಿದ್ದು”, “ಆಳ್ವಿಕೆ, ಜಯ ಮತ್ತು ನಿಯಂತ್ರಣ”ಗಳ ಮೂಲಕ ಯಶಸ್ಸನ್ನು ಅಳೆಯುವವನಾಗಿದ್ದನು.

ಆದರೆ ಶಿಲುಬೆಗೆ ಹಾಕಲ್ಪಟ್ಟ ಪ್ರಭು ಕ್ರಿಸ್ತರ ಮುಂದೆ ನಿಂತಾಗ, “ಶಕ್ತನಾಗಿದ್ದರೂ ತನ್ನ ರಕ್ಷಿಸಿಕೊಳ್ಳದ ಪ್ರೀತಿ, ಮರಣದಲ್ಲಿಯೂ ಹಿಂದಿರುಗದ ನಿಷ್ಠೆ”ಯನ್ನು ಕಂಡು, ಅವನ ಲೋಕವನ್ನು ನೋಡುವ ದೃಷ್ಟಿ ಸಂಪೂರ್ಣವಾಗಿ ಕುಸಿಯುತ್ತದೆ. ಅವನು ಕಂಡುಕೊಳ್ಳುವ ಸತ್ಯವೇನೆಂದರೆ, “ನಿಜವಾದ ಶಕ್ತಿ ಹಿಂಸೆಯಲ್ಲಿ ಅಥವಾ ಕೊಲ್ಲುವ ಕತ್ತಿಯಲ್ಲಿ ಇಲ್ಲ; ಅದು ಸ್ವಯಂ ಇಚ್ಛೆಯಿಂದ ಅರ್ಪಿಸಲ್ಪಟ್ಟ ಜೀವನದಲ್ಲಿದೆ,” ಎಂದು ಪ್ರಧಾನ ಗುರು ಪಿಜ್ಜಾಬಲ್ಲಾ ವಿವರಿಸಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

02 ಏಪ್ರಿಲ್ 2026, 18:53