ಹುಡುಕಿ

2025ರ ಪುನರುತ್ಥಾನ ಮಹೋತ್ಸವದ ಬಲಿಪೂಜೆಯಲ್ಲಿ  ಕಾರ್ಡಿನಲ್ ಪಿಯರ್ಬತ್ತಿಸ್ತ ಪಿಜ್ಜಬಲ್ಲಾ 2025ರ ಪುನರುತ್ಥಾನ ಮಹೋತ್ಸವದ ಬಲಿಪೂಜೆಯಲ್ಲಿ ಕಾರ್ಡಿನಲ್ ಪಿಯರ್ಬತ್ತಿಸ್ತ ಪಿಜ್ಜಬಲ್ಲಾ 

ಕಾರ್ಡಿನಲ್ ಪಿಜ್ಜಾಬಲ್ಲಾ: ವಿಶ್ವದ ಗಾಯಗಳನ್ನು ಗುಣಪಡಿಸಲು ಜೆರುಸಲೇಮ್ ಕರೆಯಲ್ಪಟ್ಟಿದೆ

ಇತ್ತೀಚಿಗೆ ಪ್ರಕಟಿಸಿದ ಧಾರ್ಮಿಕ ಪಾಲನಾ ಪತ್ರದಲ್ಲಿ, ಜೆರುಸಲೇಮ್‌ನ ಲ್ಯಾಟಿನ್ ಪ್ರಧಾನ ಧರ್ಮಕ್ಷೇತ್ರದ ಪ್ರಧಾನ ಧರ್ಮಾಧ್ಯಕ್ಷರಾದ ಕಾರ್ಡಿನಲ್ ಪಿಯರ್ಬತ್ತಿಸ್ತ ಪಿಜ್ಜಬಲ್ಲಾ ಪವಿತ್ರ ಭೂಮಿಯ ಯುದ್ಧದ ಬಗ್ಗೆ ಚಿಂತನೆ ವ್ಯಕ್ತಪಡಿಸಿ, ಈ ಸಂಘರ್ಷವು “ಅತ್ಯಂತ ದುಃಖಕರ ರೀತಿಯಲ್ಲಿ ಒಂದು ಯುಗವನ್ನು ಅಂತ್ಯಗೊಳಿಸಿ ಮತ್ತೊಂದು ಯುಗವನ್ನು ಆರಂಭಿಸಿದೆ” ಎಂದು ಹೇಳಿದ್ದಾರೆ.

ಲೇಖಕರು: ಬೀಟ್ರಿಸ್ ಗ್ವಾರ್ರೆರ

ಈ ಸಮಯದಲ್ಲಿ ಪವಿತ್ರ ಭೂಮಿಯನ್ನು ತೀವ್ರವಾಗಿ ಹಿಂಸಿಸುತ್ತಿರುವ ಸಂಘರ್ಷದ ಮಧ್ಯೆ ಕ್ರೈಸ್ತರು ಹೇಗೆ ಬದುಕಬೇಕು?

ಈ ಪ್ರಶ್ನೆಯೇ ಜೆರುಸಲೇಮ್‌ನ ಲ್ಯಾಟಿನ್ ಪ್ರಧಾನ ಧರ್ಮಪ್ರಾಂತ್ಯದ ಪ್ರಧಾನ ಧರ್ಮಾಧ್ಯಕ್ಷರಾದ ಕಾರ್ಡಿನಲ್ ಪಿಯರ್ಬತ್ತಿಸ್ತ ಪಿಜ್ಜಬಲ್ಲಾ ಅವರ ಹೊಸ ಧಾರ್ಮಿಕ ಪಾಲನಾ ಪತ್ರದ ಕೇಂದ್ರವಾಗಿದೆ. ಏಪ್ರಿಲ್ 27ರ ಸೋಮವಾರ ಬಿಡುಗಡೆಗೊಂಡ ಈ ಪತ್ರಕ್ಕೆ, “ಅವರು ಮಹಾ ಸಂತೋಷದಿಂದ ಜೆರುಸಲೇಮಿಗೆ ಮರಳಿದರು: ಪವಿತ್ರ ಭೂಮಿಯಲ್ಲಿ ಧರ್ಮಸಭೆಯ ಕರೆಯನ್ನು ಬದುಕುವ ಕುರಿತು ಒಂದು ಪ್ರಸ್ತಾವನೆ” ಎಂಬ ಶೀರ್ಷಿಕೆ ನೀಡಲಾಗಿದೆ.

ವಿಶ್ವದ ಗಾಯಗಳನ್ನು ಗುಣಪಡಿಸುವ ಕರೆ

ಈ ಪತ್ರದಲ್ಲಿ ಕಾರ್ಡಿನಲ್ ಪಿಜ್ಜಾಬಲ್ಲಾ ಹೇಳುವಂತೆ, ಜೆರುಸಲೇಮಿನ ಕರೆಯು ವಿಶ್ವದ ಗಾಯಗಳನ್ನು ಗುಣಪಡಿಸುವುದಾಗಿದೆ. ಪಿತೃಪ್ರಧಾನರ ಚಿಂತನೆ ಬೈಬಲ್‌ನ ಜೆರುಸಲೇಮ್ ನಗರಿಯ ರೂಪಕವನ್ನು ಕೇಂದ್ರವಾಗಿಸಿಕೊಂಡಿದ್ದು, ಅದು “ಸಹವಾಸ ಮತ್ತು ಸಂಬಂಧಗಳ—ನಾಗರಿಕ ಹಾಗೂ ಧಾರ್ಮಿಕ ಪ್ರತೀಕವಾಗಿದೆ.”

ಈ ಪತ್ರವು ಮೂರು ಭಾಗಗಳಾಗಿ ವಿನ್ಯಾಸಗೊಳಿಸಲಾಗಿದೆ: ಮೊದಲ ಭಾಗದಲ್ಲಿ ಪ್ರಸ್ತುತ ಪ್ರದೇಶದ ಸ್ಥಿತಿಗತಿಗಳ ಮೌಲ್ಯಮಾಪನ, ಎರಡನೇ ಭಾಗದಲ್ಲಿ ಜೆರುಸಲೇಮ್ ಧರ್ಮಸಭೆಯ ದೃಷ್ಟಿಕೋನ, ಮತ್ತು ಮೂರನೇ ಭಾಗದಲ್ಲಿ ಧರ್ಮಕೇಂದ್ರಗಳ, ಕುಟುಂಬಗಳ, ಶಾಲೆಗಳ ಹಾಗೂ ಸಂಸ್ಥೆಗಳ ಮೇಲಿನ ಧಾರ್ಮಿಕ ಪಾಲನಾ ಪರಿಣಾಮಗಳ ಕುರಿತು ಚಿಂತನೆ ನೀಡಲಾಗಿದೆ.

ಈ ಪತ್ರವು ರಾಜಕೀಯ ವಿಶ್ಲೇಷಣೆಯನ್ನು ಒಳಗೊಂಡಿಲ್ಲವೆಂದು ಪಿಜ್ಜಬಲ್ಲಾ ಸ್ಪಷ್ಟಪಡಿಸುತ್ತಾರೆ. ಇದು ವಿಶಾಲ ಅರ್ಥದಲ್ಲಿ ಮಾತ್ರ “ರಾಜಕೀಯ”ವಾಗಿದ್ದು, ಕ್ರೈಸ್ತರಾಗಿ ನಾವು ಈ ಲೋಕದ ಸಮಾಜದಲ್ಲಿ—ಅಂದರೆ  ಈಗ ಅಸ್ತಿತ್ವದಲ್ಲಿರುವ ಲೋಕದಲ್ಲಿರುವಾಗಲೂ, ಸದಾ ನಿಜವಾದ ರಾಜ್ಯ ಸ್ವರ್ಗೀಯ ಜೆರುಸಲೇಮಿನತ್ತ ದೃಷ್ಟಿ ನೆಟ್ಟಿರಬೇಕು ಎಂಬುದನ್ನು ಸೂಚಿಸುತ್ತದೆ.

ತಿರುವು ತಂದ ಘಟನೆಗಳು

ಪಿತೃಪ್ರಧಾನರಾದ ಕಾರ್ಡಿನಲ್ ಪಿಜ್ಜಾಬಲ್ಲಾ ತಮ್ಮ ಚಿಂತನೆಗಳನ್ನು ಅಕ್ಟೋಬರ್ 7ರ ಘಟನೆಗಳು ಮತ್ತು ಗಾಜಾದ ಯುದ್ಧವನ್ನು  ಉಲ್ಲೇಖಿಸಿ—“ಅತ್ಯಂತ ದುಃಖಕರ ರೀತಿಯಲ್ಲಿ ಒಂದು ಯುಗವನ್ನು ಅಂತ್ಯಗೊಳಿಸಿ ಮತ್ತೊಂದು ಯುಗಕ್ಕೆ ದಾರಿ ತೆರೆದ ತಿರುವು ತಂದ ಘಟನೆಗಳು”ಎಂದು ಹೇಳಿದರು.

“ನಾವು ಅನುಭವಿಸುತ್ತಿರುವುದು ಕೇವಲ ಸ್ಥಳೀಯ ಸಂಘರ್ಷವಲ್ಲ, ಸ್ಥಳೀಯ ಸಂಘರ್ಷವು ಇನ್ನೂ ಆಳವಾದ ಜಾಗತಿಕ ಸಂಕಷ್ಟದ ಲಕ್ಷಣವಾಗಿದೆ—ಇದು ಒಂದು ಮಹತ್ತರ ಪರಿಕಲ್ಪನಾ ಬದಲಾವಣೆಯನ್ನು ಸೂಚಿಸುತ್ತದೆ. ಹಲವು ದಶಕಗಳಿಂದ ಅಂತರರಾಷ್ಟ್ರೀಯ ಸಮುದಾಯ, ವಿಶೇಷವಾಗಿ ಪಾಶ್ಚಾತ್ಯ ಜಗತ್ತು, ನಿಯಮಗಳು, ಒಪ್ಪಂದಗಳು ಮತ್ತು ಬಹುಪಕ್ಷೀಯತೆಯ ಮೇಲೆ ಆಧಾರಿತ ವ್ಯವಸ್ಥೆಯನ್ನು ನಂಬಿಕೊಂಡಿತ್ತು… ಆದರೆ ಇಂದು, ಆ ವ್ಯವಸ್ಥೆಯ ದುರ್ಬಲತೆಗಳು ಎಲ್ಲರಿಗೂ ಗೋಚರವಾಗುತ್ತಿವೆ.”

“ವಿವಾದಗಳನ್ನು ಪರಿಹರಿಸಲು ನಿರ್ಣಾಯಕ ಮಾರ್ಗವಾಗಿ ಬಲಪ್ರಯೋಗದ ಮೇಲೆ ಮತ್ತೆ ಅವಲಂಬನೆ ಹೆಚ್ಚುತ್ತಿರುವುದನ್ನು ನಾವು ಸಾಕ್ಷಿಯಾಗಿದ್ದೇವೆ,” ಎಂದು ಪಿಜ್ಜಬಲ್ಲಾ ಬರೆಯುತ್ತಾರೆ. “ಯುದ್ಧವೇ ಒಂದು ವಿಧದ ಮೂರ್ತಿಪೂಜೆಯ  ವಿಷಯವಾಗಿಬಿಟ್ಟಿದೆ.”

ಅಶಾಂತಿಯ ಪರಿಣಾಮಗಳು

ಪದಗಳು ಮತ್ತು ಚಿತ್ರಗಳ ಮೂಲಕವೂ ನಡೆಯುತ್ತಿರುವ ಈ ಯುದ್ಧದ ನಡುವೆ, “ಸುದ್ದಿ ಮತ್ತು ಪ್ರಚಾರ”ವನ್ನು ಬೇರ್ಪಡಿಸುವುದು ದಿನೇದಿನೇ ಕಷ್ಟವಾಗುತ್ತಿದೆ ಎಂದು ಪಿತೃಪ್ರಧಾನರು ಸೂಚಿಸುತ್ತಾರೆ.

ಈ ಅಶಾಂತಿಯ ಪರಿಣಾಮಗಳನ್ನು ಜೆರುಸಲೇಮ್‌ನ ಲ್ಯಾಟಿನ್ ಪ್ರಧಾನ ಧರ್ಮಪ್ರಾಂತ್ಯವು ದ್ವೇಷ ಮತ್ತು ಅವಿಶ್ವಾಸದಿಂದ ವಿಷಮಗೊಂಡ ಸಂಬಂಧಗಳ ಕುಸಿತದಲ್ಲಿ, ಹಾಗೆಯೇ ಸಾಮಾಜಿಕ ಮಾಧ್ಯಮಗಳ ಅಲ್ಗೊರಿದಮ್‌ಗಳಿಂದ ಹೆಚ್ಚುಗೊಂಡಿರುವ ಪ್ರತ್ಯೇಕ ಗುಂಪುಗಳು ಮತ್ತು ಗುರುತಿನ ಬಲೆಯಾಗಿ ಸಮಾಜವು ವಿಭಜಿತವಾಗುತ್ತಿರುವ ಸ್ಥಿತಿಯಲ್ಲಿ  ತೀವ್ರವಾಗಿ ಅನುಭವಿಸಿದೆ ಎಂದು  ಬರೆಯುತ್ತಾರೆ.

ಇದರ ನಕಾರಾತ್ಮಕ ಪರಿಣಾಮಗಳಲ್ಲಿ ಅಂತರ್ಧರ್ಮ ಸಂವಾದದ ಸಂಕಷ್ಟವೂ ಒಂದು. “ಪ್ರಾರ್ಥನೆಗೆ ಮೀಸಲಾಗಿರಬೇಕಾದ ಪವಿತ್ರ ಸ್ಥಳಗಳು, ಈಗ ಗುರುತಿನ ಸಂಘರ್ಷಗಳ ಯುದ್ಧಭೂಮಿಗಳಾಗುತ್ತಿವೆ. ಪವಿತ್ರ ಗ್ರಂಥಗಳನ್ನು ಹಿಂಸೆ, ಆಕ್ರಮಣ ಮತ್ತು ಭಯೋತ್ಪಾದನೆಯನ್ನು ಸಮರ್ಥಿಸಲು ಬಳಸಲಾಗುತ್ತಿದೆ.” “ದೇವರ ನಾಮದ ಈ ದುರುಪಯೋಗವೇ ನಮ್ಮ ಕಾಲದ ಅತ್ಯಂತ ಗಂಭೀರ ಪಾಪವೆಂದು ನಾನು ನಂಬುತ್ತೇನೆ,” ಎಂದು ಪಿಜ್ಜಬಲ್ಲಾ ಬರೆಯುತ್ತಾರೆ.

ಪವಿತ್ರ ನಗರದ ಚಿತ್ರಣ

ಪ್ರಸ್ತುತ ಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ, ಜೆರುಸಲೇಮ್ ಧರ್ಮಸಭೆ “ಈ ಅಶಾಂತಿಯ ಮಧ್ಯೆಯೂ ಸತ್ಯದ ವಾಕ್ಯವನ್ನು—ನಿಷ್ಠೆಯಿಂದ, ಸ್ಪಷ್ಟತೆಯಿಂದ, ಧೈರ್ಯದಿಂದ ಉಚ್ಚರಿಸಲು ಪ್ರಯತ್ನಿಸಿದೆ; ಅನೇಕರಿಂದ ತಪ್ಪು ಅರ್ಥೈಸಲ್ಪಡುವ ಅಪಾಯವಿದ್ದರೂ ಸಹ ತನ್ನ ಧ್ವನಿಯನ್ನು ಎತ್ತಿದೆ,” ಎಂದು ಪಿಜ್ಜಬಲ್ಲಾ ಹೇಳುತ್ತಾರೆ.

ಆದರೆ, ಇದು ಸಾಕ್ಷಿಯಾಯಿತೇ ಎಂಬ ಪ್ರಶ್ನೆ ಅವರನ್ನು ಕಾಡುತ್ತದೆ. “ಈ ಅತ್ಯಂತ ಕಠಿಣ ಕಾಲದಲ್ಲಿ, ನಾವು ಕೆಲವೊಮ್ಮೆ ವಿವೇಕದ ಹೆಸರಿನಲ್ಲಿ ಸಂಸ್ಥೆಯ ಉಳಿವನ್ನು ಹುಡುಕುತ್ತಾ, ನಮ್ಮ ಪ್ರವಾದಾತ್ಮಕ ಸಾಕ್ಷಿಯನ್ನು ತ್ಯಜಿಸಿದ್ದೇವೇ? ಈ ಪ್ರಶ್ನೆ ಪ್ರತಿದಿನ ನನ್ನನ್ನು ಕಾಡುತ್ತಿದೆ; ಇದಕ್ಕೆ ಉತ್ತರ ನೀಡುವುದು ಸುಲಭವಲ್ಲ” ಎಂದು ಅವರು ಆತ್ಮಪರಿಶೀಲನೆ ಮಾಡುತ್ತಾರೆ.

ಇನ್ನೊಂದೆಡೆ, ಜೆರುಸಲೇಮಿಗಾಗಿ ದೇವರ ಇಚ್ಛೆಯೇನು ಎಂಬುದನ್ನೂ ಪ್ರಶ್ನಿಸಬೇಕು ಎಂದು ಪಿಜ್ಜಬಲ್ಲಾ ಬರೆಯುತ್ತಾರೆ. ಜೆರುಸಲೇಮ್ “ಕೇವಲ ರಾಜಕೀಯ ಗಡಿಗಳು ಅಥವಾ ತಾಂತ್ರಿಕ ವ್ಯವಸ್ಥೆಗಳ ವಿಷಯವಲ್ಲ”; ಬದಲಾಗಿ, “ಅದರ ಮೂಲ ಗುರುತು—ನಗರದ ಹಾಗೂ ಸಂಪೂರ್ಣ ಪವಿತ್ರ ಭೂಮಿಯ ಪ್ರಮುಖ ಲಕ್ಷಣ—ದೇವರ ಪ್ರಕಟಣೆಯ ಸ್ಥಳವಾಗಿರುವುದು, ನಂಬಿಕೆಗಳು ತಮ್ಮ ಮನೆ ಕಂಡುಕೊಳ್ಳುವ ಸ್ಥಳವಾಗಿರುವುದು” ಆಗಿದೆ.

ಈ ಪವಿತ್ರ ಭೂಮಿಯ “ಲಂಬ” ಆಯಾಮವನ್ನು—ಅಂದರೆ ಅದರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸ್ಪಂದನೆಯನ್ನು ಅವಗಣಿಸುವುದೇ, ಕಳೆದ ದಶಕಗಳಲ್ಲಿ ಸಹವಾಸ ಒಪ್ಪಂದಗಳು ವಿಫಲವಾಗಿರುವುದಕ್ಕೆ ಅತ್ಯಂತ ಆಳವಾದ ಕಾರಣವಾಗಿದೆ ಎಂದು ಪಿತೃಪ್ರಧಾನರು ಒತ್ತಿಹೇಳುತ್ತಾರೆ.

ಧಾರ್ಮಿಕ ಪಾಲನಾ ಪರಿಣಾಮಗಳು

ಧಾರ್ಮಿಕ ಪಾಲನಾ ಮಟ್ಟದಲ್ಲಿ, ಪಿಜ್ಜಬಲ್ಲಾ ಆರಾಧನೆ ಮತ್ತು ಪ್ರಾರ್ಥನೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾರೆ. ಸಮಾನವಾಗಿ ಮಹತ್ವದ್ದಾಗಿರುವುದು ಕುಟುಂಬಗಳ ಪಾತ್ರ ಅತಿ ಮುಖ್ಯವಾಗಿದೆದ್ವೇಷ ಮತ್ತು ಪ್ರತೀಕಾರದ ಭಾವನೆಗಳನ್ನು ತುಂಬದೆ, ಸಹವಾಸ ಮತ್ತು ಪರಸ್ಪರ ಗೌರವವನ್ನು ಬೆಳೆಸುವ ಶಿಕ್ಷಣದ ಕಾರ್ಯಾಗಾರಗಳಾಗಿ, ಅಲ್ಲಿ ಭೂತಕಾಲವನ್ನು ದುಃಖ ಮತ್ತು ಸತ್ಯದೊಂದಿಗೆ ಮಕ್ಕಳೊಂದಿಗೆ ಕುಟುಂಬಗಳು ಹಂಚಿಕೊಳ್ಳಬಹುದು.

ಕ್ರೈಸ್ತ ಶಾಲೆಗಳು “ಹೊಸ ಮಾನವತೆಯ ಕಾರ್ಯಾಗಾರಗಳು” ಎಂದು ಅರ್ಥಮಾಡಿಕೊಳ್ಳಬೇಕು ಎಂದು ಕಾರ್ಡಿನಲ್ ಪಿಜ್ಜqಬಲ್ಲಾ ಬರೆಯುತ್ತಾರೆ; ಅಲ್ಲಿ ಮಕ್ಕಳು ಕೋಪ ಮತ್ತು ಅಸಹನೆಯಿಂದ ಮುಕ್ತವಾದ ದೃಷ್ಟಿಯಿಂದ ಇತಿಹಾಸವನ್ನು ಪುನರ್ವಿಮರ್ಶಿಸಲು ಕಲಿಯಬೇಕು. ಸ್ವಾಗತ, ಸಂವಾದ ಮತ್ತು ಗುಣಮುಖತೆ ಈಗಾಗಲೇ ಜೀವಂತವಾಗಿರುವ ಸ್ಥಳಗಗಳಾಗಿರುವ ಆಸ್ಪತ್ರೆಗಳು ಮತ್ತು ಸಾಮಾಜಿಕ ಸೇವಾ ಸಂಸ್ಥೆಗಳು ಬೆಂಬಲಿಸಲ್ಪಡಬೇಕು.

ಪಿತೃಪ್ರಧಾನರು ಹೇಳುವಂತೆ, ಜೀವಂತ ಸ್ಮರಣೆಗಳಾಗಿರುವವರ ಹಿರಿಯರು, ಭವಿಷ್ಯದ ಪ್ರವಾದಿಗಳಾಗಿರುವವರ ಯುವಜನರು ಹಾಗೂ ಸಮುದಾಯಕ್ಕೆ ನಿಷ್ಠಾವಂತ ಮಾರ್ಗದರ್ಶಕರಾಗಿರುವವರ ಧರ್ಮಗುರುಗಳು ಮತ್ತು ಧಾರ್ಮಿಕ ಸಹೋದರ-ಸಹೋದರಿಯರು ಮತ್ತು ಸಹಬಾಳ್ವೆಯ ಸಾಧ್ಯತೆಯ ಮಾದರಿಗಳಾಗಿರುವವ ಎಲ್ಲರೂ ಪ್ರಮುಖ ಪಾತ್ರವಹಿಸುತ್ತಾರೆ. ಅಂತಿಮವಾಗಿ, ಕಾರ್ಡಿನಲ್ ಪಿಜ್ಜಬಲ್ಲಾ ಹೇಳುವಂತೆ, ಅಂತರ್ಧರ್ಮ ಸಂವಾದವು “ಅತ್ಯಾವಶ್ಯಕ ಅಗತ್ಯ”ವಾಗಿಯೇ ಉಳಿಯುತ್ತದೆ. 

ಸ್ವರ್ಗಾರೋಹಣದ ನಂತರ ಶಿಷ್ಯರಂತೆ

ಈ ಪತ್ರವನ್ನು ಮುಕ್ತಾಯಗೊಳಿಸುತ್ತಾ, ಪಿತೃಪ್ರಧಾನರಾದ ಪಿಜ್ಜಬಲ್ಲಾ “ಹಿಂಸೆಯ ಸಂಸ್ಕೃತಿಯೊಂದಿಗೆ ಯಾವುದೇ ರೀತಿಯ ಸಹಭಾಗಿತ್ವವನ್ನು ತಿರಸ್ಕರಿಸುವುದು” ಅತ್ಯವಶ್ಯಕವೆಂದು ಹೇಳುತ್ತಾರೆ; ಅದೇ ಸಮಯದಲ್ಲಿ ನಂಬಿಕೆಗೆ ಸ್ಥಳ ನೀಡಬೇಕೆಂದು ಸೂಚಿಸುತ್ತಾರೆ. ಇದು ಹೇಗೆ ಸಾಧ್ಯ? ಉತ್ತರ ಸರಳವಾಗಿದೆ: ಒಬ್ಬರೇ ಇದ್ದರೆ ಅದು ಸಾಧ್ಯವಿಲ್ಲ—ಆದರೆ ನಾವು ಒಬ್ಬರಲ್ಲ.” ನಮ್ಮ ಧರ್ಮಕೇಂದ್ರಗಳಲ್ಲಿ, ನಮ್ಮ ವಿಶ್ವಾಸ ಸಮುದಾಯಗಳಲ್ಲಿ, ನಮ್ಮ ಗುಂಪುಗಳಲ್ಲಿ ಮತ್ತು ಧರ್ಮಸಭೆಯ ಚಳವಳಿಗಳಲ್ಲಿ ಯೇಸು ನಮ್ಮನ್ನು ಕಾಯುತ್ತಿದ್ದಾರೆ.” “ನಮಗೆ ಆಧಾರವಾಗಿರುವುದು ನಮ್ಮ ಶಕ್ತಿಯಲ್ಲ; ಬದಲಿಗೆ ಶುಭಸಂದೇಶದ ಸಂತೋಷ,” ಎಂದು ಅವರು ಒತ್ತಿಹೇಳುತ್ತಾರೆ.

“ಸಂತೋಷದೊಂದಿಗೆ ಜೆರುಸಲೇಮಿಗೆ ಮರಳೋಣ, ಉತ್ಸಾಹದಿಂದ ನಮ್ಮ ಜೀವನಗಳಿಗೆ ಮರಳೋಣ. ದೇವರ ನಗರದ ಬಗ್ಗೆ ದೇವರ ಕನಸನ್ನು ನಮ್ಮ ಹೃದಯಗಳಲ್ಲಿ ಹೊತ್ತುಕೊಂಡು, ಆ ಕನಸು ಹಂತ ಹಂತವಾಗಿ, ದಿನದಿಂದ ದಿನಕ್ಕೆ, ನಮ್ಮದೇ ಜೀವನವಾಗುವಂತೆ ಮಾಡೋಣ” ಎಂದು ಪಿಜ್ಜಬಲ್ಲಾ ಪತ್ರವನ್ನು ಸಮಾಪ್ತಿಗೊಳಿಸಿದ್ದಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

27 ಏಪ್ರಿಲ್ 2026, 20:27