ಹುಡುಕಿ

ಜೆರುಸಲೇಮಿನಲ್ಲಿ ಪ್ರಧಾನ ಗುರು ಪಿಜ್ಜಾಬಲ್ಲಾ ಅವರು ಪವಿತ್ರ ಗುರುವಾರದ ಬಲಿಪೂಜೆ ನೆರವೇರಿಸುತ್ತಿರುವ ದೃಶ್ಯ ಜೆರುಸಲೇಮಿನಲ್ಲಿ ಪ್ರಧಾನ ಗುರು ಪಿಜ್ಜಾಬಲ್ಲಾ ಅವರು ಪವಿತ್ರ ಗುರುವಾರದ ಬಲಿಪೂಜೆ ನೆರವೇರಿಸುತ್ತಿರುವ ದೃಶ್ಯ 

ಪವಿತ್ರ ಗುರುವಾರ: ‘ನಾವು ಇಲ್ಲಿ ಜೀವನವನ್ನು ಆಚರಿಸಲು ಇದ್ದೇವೆ’: ಪ್ರಧಾನ ಗುರು ಪಿಜ್ಜಾಬಲ್ಲಾ

ಜೆರುಸಲೇಮಿನ ಲ್ಯಾಟಿನ್ ಧರ್ಮಪ್ರಾಂತ್ಯದ ಪ್ರಧಾನ ಗುರು ಪಿಯರ್‌ಬತ್ತಿಸ್ತ ಪಿಜ್ಜಬಲ್ಲಾ ಅವರು, ಜೆರುಸಲೇಮಿನ ಪವಿತ್ರ ಸಮಾಧಿಯ ಪ್ರಧಾನ ದೇವಾಲಯದಲ್ಲಿ ಮುಚ್ಚಿದ ಬಾಗಿಲುಗಳ ಹಿಂದೆ ಇನ್ ಕೋಯ್ನಾ ಡೊಮಿನಿ ಬಲಿಪೂಜೆಯನ್ನು ನೆರವೇರಿಸಿದರು. ನಿರ್ಲಕ್ಷಿಸಲಾಗದ ಉದ್ವಿಗ್ನತೆಯ ಈ ಕಾಲದಲ್ಲಿ, “ನಾವು ಇಲ್ಲಿ ಶಾಂತಿಯ ಗರ್ಭದೊಳಗಿನವರಂತೆ ಇದ್ದೇವೆ; ನಮ್ಮ ಸುತ್ತಲೂ ಜಗತ್ತು ಚಿಂದಿಯಾಗುತ್ತಿರುವಾಗ, ಈ ಎಲ್ಲವನ್ನೂ ಬದಲಾಯಿಸಲು ಸಾಧ್ಯವಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು......” ಎಂದು ಅವರು ಹೇಳಿದರು.

ವ್ಯಾಟಿಕನ್ ವರದಿ

ಯುದ್ಧ ಮತ್ತು ನಿರ್ಬಂಧಗಳಿಂದ ಗುರುತಿಸಲ್ಪಟ್ಟ ಈ ಪರಿಸ್ಥಿತಿಯಲ್ಲಿ, ಪವಿತ್ರ ಗುರುವಾರದ ಬೆಳಿಗ್ಗೆ, ಜೆರುಸಲೇಮಿನ ಲ್ಯಾಟಿನ್ ಧರ್ಮಪ್ರಾಂತ್ಯದ ಪ್ರಧಾನ ಗುರು ಪಿಜ್ಜಬಲ್ಲಾ ಅವರು ಪವಿತ್ರ ಸಮಾಧಿಯ ಪ್ರಧಾನ ದೇವಾಲಯದಲ್ಲಿ ಮುಚ್ಚಿದ ಬಾಗಿಲುಗಳ ಹಿಂದೆ ಇನ್ ಕೋಯ್ನಾ ಡೊಮಿನಿ ಬಲಿಪೂಜೆಯನ್ನು(ಪ್ರಭುವಿನ ಪವಿತ್ರ ಭೋಜನದ ಬಲಿಪೂಜೆ) ನೆರವೇರಿಸಿದರು.

ತಮ್ಮ ಉಪದೇಶದಲ್ಲಿ ಅವರು ಹೇಳಿದರು: “ಒಮ್ಮೆ ಮರಣವನ್ನು ಮುಚ್ಚಿಹಾಕಿದ್ದ ಕಲ್ಲು ಇದ್ದ ಸ್ಥಳದಲ್ಲೇ ನಾವು ಇದ್ದೇವೆ. ಆದರೆ ಇಂದಿನ ದಿನ ನಾವು ಇಲ್ಲಿ ಜೀವವನ್ನು ಆಚರಿಸಲು ಇದ್ದೇವೆ.”

ಮಧ್ಯಪ್ರಾಚ್ಯದ ಈ ನಿರ್ದಿಷ್ಟ ಇತಿಹಾಸಘಟ್ಟದ ವಾತಾವರಣವನ್ನು ಚಿಂತಿಸುತ್ತಾ ಅವರು ಹೇಳಿದರು: “ನಾವು ನಿರ್ಲಕ್ಷಿಸದಿರಲು ಸಾಧ್ಯವಿಲ್ಲದ ಉದ್ವಿಗ್ನತೆ ಇದೆ: ಹೊರಗೆ ಪವಿತ್ರ ಸಮಾಧಿಯ ಬಾಗಿಲುಗಳು ಮುಚ್ಚಲ್ಪಟ್ಟಿವೆ. ಯುದ್ಧವು ಈ ಸ್ಥಳವನ್ನು ಆಶ್ರಯಸ್ಥಾನವನ್ನಾಗಿ ಮಾಡಿದೆ — ಭಯ ಮತ್ತು ಒತ್ತಡದಿಂದ ಕೂಡಿದ ಹೊರಜಗತ್ತಿನಿಂದ ಕತ್ತರಿಸಲ್ಪಟ್ಟ ಒಳಜಗತ್ತಿನಂತಾಗಿದೆ. ನಾವು ಇಲ್ಲಿ ಶಾಂತಿಯ ಗರ್ಭದೊಳಗಿನವರಂತೆ ಇದ್ದೇವೆ; ನಮ್ಮ ಸುತ್ತಲೂ ಜಗತ್ತು ಚಿಂದಿಯಾಗುತ್ತಿರುವಾಗ, ಈ ಎಲ್ಲವನ್ನೂ ಬದಲಾಯಿಸಲು ಸಾಧ್ಯವಿದ್ದರೆ ಎಂಬ ಆಸೆಯಿದೆ.”

ಕ್ರಿಸ್ತರ ಪಕ್ಕದಲ್ಲಿ ನಿಂತು ಪರೀಕ್ಷೆಗೆ ಒಳಗಾಗುತ್ತಿರುವ ಧರ್ಮಸಭೆ

ಈ ಸಂದರ್ಭವನ್ನು ಮುಂದುವರಿಸುತ್ತಾ, ಪ್ರಧಾನ ಗುರು ಅವರು ಪಾದಸ್ನಾನದ ಕ್ರಿಯೆಯನ್ನು ಕ್ರೈಸ್ತ ಪಾಸ್ಕದ ಹೃದಯವೆಂದು ಸೂಚಿಸಿದರು. “ಪ್ರಭು ಕ್ರಿಸ್ತರು, ಹೊರಟುಹೋಗುವವನ ಕ್ರಿಯೆಯನ್ನು ಸೇವೆ ಮಾಡುವವನ ಕ್ರಿಯೆಯಾಗಿ ಪರಿವರ್ತಿಸುತ್ತಾರೆ. ದೇವರ ತತ್ತ್ವದಲ್ಲಿ ನಿರ್ಗಮನವು ಲೋಕದಿಂದ ಓಡಿಹೋಗುವಿಕೆಯಲ್ಲ; ಅದು ಲೋಕದೊಳಗೆ ಇಳಿಯುವಿಕೆ — ಅದರ ಆಳಗಳವರೆಗೆ ಇಳಿಯುವಿಕೆ. ಕಟ್ಟಿ ಕಟ್ಟಿಕೊಂಡಿರುವ ಪ್ರಭು ಕ್ರಿಸ್ತರ ಸೊಂಟವು ಇನ್ನು ದಾಸ್ಯದಿಂದ ಓಡುವವನ ಗುರುತಲ್ಲ; ಅದು ಪ್ರೀತಿಯಿಂದ ಸ್ವಯಂ ದಾಸನಾಗುವವನ ಗುರುತಾಗಿದೆ.”

“ಆದ್ದರಿಂದ,” ಅವರು ಮುಂದುವರಿಸಿದರು, “ಪಾದಸ್ನಾನ ಒಂದು ನೈತಿಕ ಪಾಠವಲ್ಲ, ಕೇವಲ ಒಳ್ಳೆಯ ಉದಾಹರಣೆಯೂ ಅಲ್ಲ, ಮೃದುವಾದ ದೃಶ್ಯವೂ ಅಲ್ಲ. ಅದು ಪ್ರಭು ಕ್ರಿಸ್ತರ ಪಾಸ್ಕದ ಸ್ಪಷ್ಟ ರೂಪವಾಗಿದೆ. ಅದು ದೇವರು ಇತಿಹಾಸದ ಮೂಲಕ ಸಾಗುವ ವಿಧಾನವಾಗಿದೆ. ಅದು ಪ್ರೀತಿ ಲೋಕದೊಳಗೆ ಪ್ರವೇಶಿಸುವ ದಾರಿಯಾಗಿದೆ.”

ವಾಚನಗಳಲ್ಲಿ ಘೋಷಿಸಲ್ಪಟ್ಟ ಪ್ರಭು ಕ್ರಿಸ್ತರು ಮತ್ತು ಪೇತ್ರನ ನಡುವಿನ ಸಂಭಾಷಣೆಯನ್ನು — “ನಾನು ನಿನ್ನನ್ನು ತೊಳೆಯದಿದ್ದರೆ, ನಿನಗೆ ನನ್ನಲ್ಲಿ ಭಾಗವಿರುವುದಿಲ್ಲ” — ನೆನಪಿಸುತ್ತಾ, ಪ್ರಧಾನ ಗುರು ಅವರು ಶುಭಸಂದೇಶದ ಪ್ರೀತಿಯ ತೀವ್ರತೆಯನ್ನು ಒತ್ತಿ ಹೇಳಿದರು. ಈ ಮಾತುಗಳು ಕೇವಲ ಸಂಬಂಧವನ್ನು ಸೂಚಿಸುವುದಲ್ಲ; ಅದು ಆಳವಾದ ಸಂಗಾತಿತನವನ್ನು ಸೂಚಿಸುತ್ತದೆ: “ನೀನು ನನ್ನನ್ನು ಮೆಚ್ಚಬಹುದು, ನನ್ನನ್ನು ಅನುಸರಿಸಬಹುದು… ಆದರೆ ಈ ಪ್ರೀತಿಯ ಮಾರ್ಗವನ್ನು ಅಂಗೀಕರಿಸದಿದ್ದರೆ, ನೀನು ನನ್ನ ಪಥದಲ್ಲಿ ಪ್ರವೇಶಿಸುವುದಿಲ್ಲ.”

ಇದರಿಂದ, ಪ್ರಭು ಕ್ರಿಸ್ತರ ಪ್ರೀತಿಯನ್ನು ವಿರೋಧವಿಲ್ಲದೆ ಸ್ವೀಕರಿಸುವ ಆಹ್ವಾನವು ಮೂಡುತ್ತದೆ. ಪವಿತ್ರ ಭೂಮಿಯ ಇಂದಿನ ಪರಿಸ್ಥಿತಿಯಲ್ಲಿ — ಹಿಂಸೆ ಮತ್ತು ಭಯದಿಂದ ಗುರುತಿಸಲ್ಪಟ್ಟ ಈ ಸಂದರ್ಭದಲ್ಲಿ — “ಇತಿಹಾಸದ ಮಹಾ ಪ್ರವಾಹಗಳನ್ನು ಬದಲಾಯಿಸಲು ಸಾಧ್ಯವಿಲ್ಲದಿರಬಹುದು,” ಆದರೆ “ಇತಿಹಾಸದೊಳಗೆ ಕ್ರಿಸ್ತರಿರುವ ರೀತಿಯಲ್ಲಿ ನಾವೂ ನಿಲ್ಲಬೇಕೆ ಅಥವಾ ಇಲ್ಲವೆಂದು ತೀರ್ಮಾನಿಸುವುದು ಸಾಧ್ಯ: ಅದರ ಮೇಲಲ್ಲ, ಅದರ ವಿರುದ್ಧವಲ್ಲ, ಆದರೆ ಅದರ ಪಕ್ಕದಲ್ಲಿ.”

ಸ್ಥಳೀಯ ಕಥೋಲಿಕ ಧರ್ಮಸಭೆಗೆ — “ಅನೆಕ ಬಾರಿ ದಣಿದ ಧರ್ಮಸಭೆ, ಪರೀಕ್ಷೆಗೆ ಒಳಗಾದ ಧರ್ಮಸಭೆ, ಕೆಲವೊಮ್ಮೆ ತನ್ನನ್ನು ರಕ್ಷಿಸಿಕೊಳ್ಳಲು ಪ್ರೇರಿತವಾಗುವ ಧರ್ಮಸಭೆ” — ಇದರ ಅರ್ಥ ಸೇವೆಯ ತತ್ತ್ವವನ್ನು ಅಪ್ಪಿಕೊಳ್ಳುವುದಾಗಿದೆ: “ಪ್ರಭು ನಮ್ಮನ್ನು ಶಕ್ತಿಶಾಲಿಗಳಾಗಬೇಕೆಂದು ಕೇಳುವುದಿಲ್ಲ; ತನ್ನ ಜೀವನದಲ್ಲಿ ಪಾಲುದಾರರಾಗಬೇಕೆಂದು ಕೇಳುತ್ತಾರೆ. ಎಲ್ಲವನ್ನೂ ಪರಿಹರಿಸಬೇಕೆಂದು ಕೇಳುವುದಿಲ್ಲ; ಆದರೆ ಅವರ ಪ್ರೀತಿಯ ಮಾರ್ಗವನ್ನು ತಳ್ಳಿಹಾಕಬಾರದು ಎಂದು ಕೇಳುತ್ತಾರೆ. ಧರ್ಮಸಭೆ ತನ್ನನ್ನು ಸುರಕ್ಷಿತವಾಗಿಟ್ಟುಕೊಳ್ಳುವಾಗ ಅಲ್ಲ, ತನ್ನನ್ನು ತಗ್ಗಿಸಿಕೊಂಡು ಹಂಚಿಕೊಳ್ಳುವಾಗ ಕ್ರಿಸ್ತರಲ್ಲಿ ಪಾಲುಗೊಳ್ಳುತ್ತದೆ.”

“ಈ ಭೂಮಿಯಲ್ಲಿ ಬದುಕಿ, ಶುಭಸಂದೇಶಕ್ಕೆ ಸಾಕ್ಷಿಯಾಗಿರುವ ನಮಗೆ, ಅವರಲ್ಲಿ ಭಾಗವಹಿಸುವುದೆಂದರೆ ವಿನಯದ ಭಾಷೆಯನ್ನು, ತಲೆತಗ್ಗಿಸುವ ಭಾಷೆಯನ್ನು ಕಲಿಯುವುದಾಗಿದೆ.”

ಯುದ್ಧದಿಂದ ಗಾಯಗೊಂಡ ಪವಿತ್ರ ಭೂಮಿ

ಉಪದೇಶದ ಅಂತ್ಯದಲ್ಲಿ, ಪ್ರಧಾನ ಗುರು ಅವರು ಸಮುದಾಯಕ್ಕೆ ಒಂದು ಪ್ರಶ್ನೆಯನ್ನು ಮುಂದಿಟ್ಟರು: “ನಾವು ಅವರಲ್ಲಿ ಭಾಗವಹಿಸಲು ಬಯಸುತ್ತೇವೇ? (…) ನಮಗೆ ತಲೆತಗ್ಗಿಸುವ ಪ್ರೀತಿಯೊಳಗೆ ಪ್ರವೇಶಿಸಲು ಆಸೆಯಿದೆಯೇ? ಸೇವೆಯ ಮೂಲಕ ಬರುವ ರಕ್ಷಣೆಯನ್ನು ನಾವು ಬಯಸುತ್ತೇವೇ?”

ಇಂತಹ ಆಯ್ಕೆಯೇ ಒಂದು ಹೊಸ ನಿರ್ಗಮನವಾಗುತ್ತದೆ: “ಸ್ವಯಂ ರಕ್ಷಣೆಯಿಂದ ಸ್ವಯಂ ಸಮರ್ಪಣೆಯತ್ತ, ಭಯದಿಂದ ವಿಶ್ವಾಸದತ್ತ, ಅಹಂಕಾರದಿಂದ ಸಂಗಾತಿತ್ವದತ್ತ ಸಾಗುವ ಪಥ.”

ಯುದ್ಧದಿಂದ ಗಾಯಗೊಂಡಿರುವ ಪವಿತ್ರ ಭೂಮಿಯಲ್ಲಿ, ಈ ಪುನರುತ್ಥಾನ ಮಹೋತ್ಸವ ನಮ್ಮನ್ನು ಪ್ರೀತಿಸಿಕೊಳ್ಳಲು ಅವಕಾಶ ನೀಡುವುದರಿಂದ ಮತ್ತು ಇತರರ ಮುಂದೆ ತಲೆತಗ್ಗಿಸುವುದನ್ನು ಕಲಿಯುವುದರಿಂದ ಪ್ರಾರಂಭವಾಗುತ್ತದೆ ಎಂದು ಅವರು ಹೇಳಿದರು.

“ಇಂದು ನಾವು ಬಲಿಪೂಜೆಯನ್ನು ಆಚರಿಸುವಾಗ, ಒಂದು ಮೂಲಭೂತ ಕೃಪೆಯನ್ನು ಬೇಡೋಣ: ನಾವು ತೊಳೆಯಲ್ಪಡಲು ಅವಕಾಶ ನೀಡುವುದು, ಸೇವೆ ಮಾಡಲು ಅವಕಾಶ ನೀಡುವುದು, ಯಾವುದೇ ಷರತ್ತಿಲ್ಲದೆ ಪ್ರೀತಿಸಲ್ಪಡಲು ಅವಕಾಶ ನೀಡುವುದು. ಏಕೆಂದರೆ ಈ ಮಾರ್ಗದಲ್ಲಿಯೇ ನಾವು ನಿಜವಾಗಿ ಅವರ ಜೀವನದಲ್ಲಿ ಪಾಲುಗೊಳ್ಳಬಹುದು. ಮತ್ತು ಇದೇ ಮಾರ್ಗದಲ್ಲಿ ನಮ್ಮ ಜೀವನವು ನಿಧಾನವಾಗಿ ಅವರ ಪಾಸ್ಕದ ರೂಪವನ್ನು ಪಡೆಯುತ್ತದೆ.”

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

02 ಏಪ್ರಿಲ್ 2026, 19:10