ಹುಡುಕಿ

ಈಕ್ವಟೋರಿಯಲ್ ಗಿನಿಯಾದ ಮೊಂಗೊಮೊದ ಧರ್ಮಾಧ್ಯಕ್ಷರಾದ ಪೂಜ್ಯ ಜುವಾನ್ ಡೊಮಿಂಗೊ-ಬೇಕಾ ಇಸೊನೊ ಅಯಾಂಗ್ ಅವರೊಂದಿಗೆ ಪೂಜ್ಯ ಜಗದ್ಗುರು ಲಿಯೋ ಈಕ್ವಟೋರಿಯಲ್ ಗಿನಿಯಾದ ಮೊಂಗೊಮೊದ ಧರ್ಮಾಧ್ಯಕ್ಷರಾದ ಪೂಜ್ಯ ಜುವಾನ್ ಡೊಮಿಂಗೊ-ಬೇಕಾ ಇಸೊನೊ ಅಯಾಂಗ್ ಅವರೊಂದಿಗೆ ಪೂಜ್ಯ ಜಗದ್ಗುರು ಲಿಯೋ  (@Vatican Media)

ಧರ್ಮಾಧ್ಯಕ್ಷರಾದ ಬೇಕಾ: ಪೂಜ್ಯ ಜಗದ್ಗುರು ಈಕ್ವೆಟೋರಿಯಲ್ ಗಿನಿಗೆ ಹೊಸ ಉತ್ತೇಜನ ನೀಡಿದ್ದಾರೆ

ಈಕ್ವೆಟೋರಿಯಲ್ ಗಿನಿಯ ಧರ್ಮಾಧ್ಯಕ್ಷರ ಮಹಾಸಭೆಯ ಅಧ್ಯಕ್ಷರಾದ ಧರ್ಮಾಧ್ಯಕ್ಷ ಬೇಕಾ, ಪೂಜ್ಯ ಜಗದ್ಗುರು ಲಿಯೋ ಅವರ ಅಪೋಸ್ತೋಲಿಕ ಭೇಟಿಯ ಕುರಿತು ಚಿಂತನೆ ವ್ಯಕ್ತಪಡಿಸಿ, ಸಮನ್ವಯದ ತುರ್ತು ಅಗತ್ಯತೆ, ವೈವಿಧ್ಯತೆಯ ಗೌರವ ಮತ್ತು ಸಾಮಾಜಿಕ ಬದ್ಧತೆಯನ್ನು ದೇಶದ ಬದಲಾವಣೆಗೆ ಪ್ರಮುಖ ಚಕ್ರಗಳೆಂದು ಒತ್ತಿಹೇಳುತ್ತಾರೆ.

ಲೇಖಕರು:ಸೆಬಾಸ್ಟಿಯನ್ ಸಾನ್ಸೋನ್ ಫೆರಾರಿ - ಮಲಾಬೊ, ಈಕ್ವೆಟೋರಿಯಲ್ ಗಿನಿ

ಪೂಜ್ಯ ಜಗದ್ಗುರು ಲಿಯೋ ಅವರು ರೋಮ್‌ಗೆ ಹೊರಟ ನಂತರ  ವಿಮಾನದ ಶಬ್ದ ಇನ್ನೂ ವಿಮಾನ ನಿಲ್ದಾಣದಲ್ಲಿ ಪ್ರತಿಧ್ವನಿಸುತ್ತಿರುವಂತೆಯೇ, ಭಕ್ತರು ತಮ್ಮ ಮನೆಗಳಿಗೆ, ಉದ್ಯೋಗಗಳಿಗೆ ಮತ್ತು ದೈನಂದಿನ ಜೀವನಕ್ಕೆ ಹಿಂತಿರುಗುತ್ತಿರುವ ಈ ಸಂದರ್ಭದಲ್ಲಿ—ಸುವಾರ್ತೆಯನ್ನು ಹೊಸ ಉತ್ಸಾಹದಿಂದ ಘೋಷಿಸಲು ಕರೆಯಲ್ಪಟ್ಟವರಾಗಿ—ಈಕ್ವೆಟೋರಿಯಲ್ ಗಿನಿಯ ಧರ್ಮಸಭೆ ಈಗಾಗಲೇ “ಐತಿಹಾಸಿಕ ಘಟ್ಟ”ವೆಂದು ವಿವರಿಸಲ್ಪಡುತ್ತಿರುವ ಈ ಭೇಟಿಯ ಅರ್ಥವನ್ನು ಆಳವಾಗಿ ಗ್ರಹಿಸಲು ಆರಂಭಿಸಿದೆ.

ಏಪ್ರಿಲ್ 23ರಂದು, ಪೂಜ್ಯ ಜಗದ್ಗುರು ಲಿಯೋ ಹದಿನಾಲ್ಕನೇ ಅವರು ತಮ್ಮ ಆಫ್ರಿಕಾ ಅಪೋಸ್ತೋಲಿಕ ಭೇಟಿಯನ್ನು—ಅಲ್ಜೀರಿಯಾ, ಕ್ಯಾಮರೂನ್, ಆಂಗೋಲಾ ಮತ್ತು ಗಿನಿ ದೇಶಗಳನ್ನು ಒಳಗೊಂಡ ಈ ಪ್ರಯಾಣವನ್ನು—ಸಮಾಪ್ತಿಗೊಳಿಸಿದರು. ಈ ಭೇಟಿ “ಆಳವಾದ ನವೀಕರಣ”ದ ಸಂದೇಶವನ್ನು ಹಿಂದೆ ಬಿಟ್ಟುಹೋಗಿದ್ದು, ಅದು ಧರ್ಮಸಭೆಯ ವ್ಯವಸ್ಥೆಗಳಲ್ಲಷ್ಟೇ ಅಲ್ಲ, ನಾಗರಿಕ ಸಮಾಜದಲ್ಲಿಯೂ ಆಳವಾಗಿ ಪ್ರತಿಧ್ವನಿಸಿದೆ.

ರೋಮ್‌ನಲ್ಲಿ ವಂ. ಗುರು ಜೋಹಾನ್ ಪಾಚೆಕೊ ಅವರೊಂದಿಗೆ ‘ನೋಟಾ ಎಕ್ಲೆಸಿಯಲ್’ ಕಾರ್ಯಕ್ರಮದಲ್ಲಿ ನಡೆದ ವಿಶೇಷ ಸಂದರ್ಶನದಲ್ಲಿ, ಮೊಂಗೊಮೊ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಮತ್ತು ಧರ್ಮಾಧ್ಯಕ್ಷರ ಮಹಾಸಭೆಯ ಅಧ್ಯಕ್ಷರಾದ ಧರ್ಮಾಧ್ಯಕ್ಷ ಜುವಾನ್ ಡೊಮಿಂಗೊ ಬೇಕಾ ಎಸೊನೊ ಅಯಾಂಗ್ ಅವರು, ಈ ಭೇಟಿಯನ್ನು “ಸಾಮೂಹಿಕ ಆಶೀರ್ವಾದ”ವೆಂದು ವರ್ಣಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಧರ್ಮಾಧ್ಯಕ್ಷರ ದೃಷ್ಟಿಯಲ್ಲಿ, ಪೂಜ್ಯ ಜಗದ್ಗುರು ಬಿಟ್ಟುಹೋದ ಅತ್ಯಂತ ಗಮನಾರ್ಹ ಚಿತ್ರಣವು ಕೇವಲ ಉತ್ಸಾಹಭರಿತ ಭಾರಿ ಜನಸ್ತೋಮವಲ್ಲ; ಬದಲಾಗಿ, ಅದು ನೇರ ಮತ್ತು ವೈಯಕ್ತಿಕ ಜವಾಬ್ದಾರಿಯ ಕರೆಯಾಗಿದೆ. “ಪೂಜ್ಯ ಜಗದ್ಗುರು, ಧರ್ಮಸಭೆಯನ್ನೂ ಹಾಗೂ ಸಾಮಾಜಿಕ ಜೀವನದಲ್ಲಿ ತೊಡಗಿರುವ ಕ್ರೈಸ್ತರನ್ನೂ ದೇವರಾಜ್ಯದ ಆಗಮನಕ್ಕಾಗಿ ಕಾರ್ಯನಿರ್ವಹಿಸಲು ಕರೆ ನೀಡಿದ್ದಾರೆ. ಭವಿಷ್ಯವೆಂದರೆ ಕೇವಲ ನಿರೀಕ್ಷಿಸಿ ಕುಳಿತುಕೊಳ್ಳಬೇಕಾದುದಲ್ಲ; ಅದು ನಮ್ಮ ಪ್ರತಿಯೊಬ್ಬರ ಬದ್ಧತೆಯನ್ನು ಕೇಳುತ್ತದೆ.”

ಈಕ್ವೆಟೋರಿಯಲ್ ಗಿನಿಯಲ್ಲಿ ನೀಡಿದ ತಮ್ಮ ಭಾಷಣಗಳಲ್ಲಿ, ಪೂಜ್ಯ ಜಗದ್ಗುರು ಮಾನವ ವ್ಯಕ್ತಿಗೌರವದ ಮೇಲೆ ವಿಶೇಷ ಒತ್ತನ್ನು ನೀಡಿದರು. ಜೊತೆಗೆ, ಸುವಾರ್ತೆಯ ಘೋಷಣೆ ಕೇವಲ ಮಾತುಗಳಲ್ಲಿ ಸೀಮಿತವಾಗದೆ, ಜೀವಂತ ಸಾಕ್ಷಿಯಾಗಬೇಕು ಮತ್ತು ನಿಜವಾದ “ಶಾಂತಿಯ ಸಂಸ್ಕೃತಿ”ಯನ್ನು ಉತ್ತೇಜಿಸಬೇಕು ಎಂದು ಅವರು ಒತ್ತಿಹೇಳಿದರು.

ಸಮನ್ವಯ: ಏಕರೂಪತೆ ಇಲ್ಲದ ಐಕ್ಯತೆ

ಈ ಭೇಟಿಯ ಪ್ರಮುಖ ವಿಷಯಗಳಲ್ಲಿ ಒಂದಾಗಿ, ಉದ್ವಿಗ್ನತೆ ಮತ್ತು ವಿಭಜನೆಯಿಂದ ಕೂಡಿರುವ ಜಗತ್ತಿನಲ್ಲಿ ಶಾಂತಿಯ ಕರೆ ಸ್ಪಷ್ಟವಾಗಿ ಹೊರಹೊಮ್ಮಿತು. ಧರ್ಮಾಧ್ಯಕ್ಷ ಬೇಕಾ ಅವರು, ಸ್ಥಳೀಯ ಧರ್ಮಸಭೆ ಸಮನ್ವಯದ ಕಾರ್ಯದಲ್ಲಿ ಆಳವಾಗಿ ತೊಡಗಿಸಿಕೊಂಡಿದೆ ಎಂದು ಹೇಳಿ, ಅದರ ಮೂಲತತ್ವವಾಗಿ “ವೈವಿಧ್ಯತೆಯ ಗೌರವ”ವನ್ನು ಒತ್ತಿಹೇಳಿದರು.

“ಸಹಭಾಗಿತ್ವ ಎಂದರೆ ಏಕರೂಪತೆ ಎಂದಲ್ಲ,” ಎಂದು ಅವರು ವಿವರಿಸಿದರು. “ಈಕ್ವೆಟೋರಿಯಲ್ ಗಿನಿಯನ್ನು ರೂಪಿಸುವ ವಿವಿಧ ಸಂಸ್ಕೃತಿಗಳು ಮತ್ತು ಜನಾಂಗಗಳ ಶ್ರೀಮಂತಿಕೆಯನ್ನು ನಾವು ಗುರುತಿಸಬೇಕು. ಇದೇ ನಿಜವಾದ ಗುರುತಿಸುವಿಕೆ  ಮತ್ತು ಒಳಗೊಳ್ಳುವಿಕೆಗೆ ದಾರಿ ಮಾಡುತ್ತದೆ ಮತ್ತು ಹೊರತಳ್ಳುವಿಕೆಯನ್ನು ತಡೆಯುತ್ತದೆ.”

ಬಾಟಾ ಕಾರಾಗೃಹ ಭೇಟಿ: ಅಂಚಿನವರಲ್ಲಿ ಭರವಸೆ

ಈ ಪ್ರಯಾಣದ ಅತ್ಯಂತ ಸ್ಪರ್ಶಕ ಕ್ಷಣಗಳಲ್ಲಿ ಒಂದಾಗಿ, ಪೂಜ್ಯ ಜಗದ್ಗುರು ಬಾಟಾ ಕಾರಾಗೃಹಕ್ಕೆ ನೀಡಿದ ಭೇಟಿ ಗಮನಸೆಳೆಯಿತು. ಧರ್ಮಾಧ್ಯಕ್ಷ ಬೇಕಾ ಅವರ ಪ್ರಕಾರ, ಈ ನಡೆ ಆಳವಾದ ಅರ್ಥವನ್ನು ಹೊಂದಿದೆ: “ಪೂಜ್ಯ ಜಗದ್ಗುರುವಿನ ಭೇಟಿ ಒಂದು ಆಶೀರ್ವಾದವೆಂದರೆ, ಆ ಕೃಪೆ ಜನರ ಪ್ರತಿಯೊಂದು ಸ್ಥಿತಿಗೂ ತಲುಪಬೇಕು—ಕಾರಾಗೃಹದಲ್ಲಿರುವವರಿಗೂ ಸೇರಿ—ಅಲ್ಲಿ ನಿರುತ್ಸಾಹಗೊಂಡವರಿಗೂ ಭರವಸೆಯ ಸಂದೇಶ ತಲುಪಬೇಕು.”

“ಅವರು ನಮ್ಮ ಸಹೋದರರು ಮತ್ತು ಸಹೋದರಿಯರು, ನಮ್ಮ ಸಹಪೌರರು. ಯಾವುದೋ ಕಾರಣದಿಂದ ಅವರು ಅಲ್ಲಿ ಇದ್ದಾರೆ—ಆದರೆ ಅದು ಅವರ ಅಂತಿಮ ಗುರಿಯಲ್ಲ. ಅವರು ಭರವಸೆಯನ್ನು ಹಿಡಿದುಕೊಳ್ಳಬೇಕು.” ಕಾರಾಗೃಹದಲ್ಲಿರುವವರ ಗಾಯನವನ್ನು ಅವರು ಒಂದು ಬಲವಾದ ಸಂಕೇತವಾಗಿ ಉಲ್ಲೇಖಿಸಿ, “ಧರ್ಮಸಭೆಯೂ ಸಮಾಜವೂ ಅವರನ್ನು ಮರೆತಿಲ್ಲ” ಎಂಬ ಸಂದೇಶವನ್ನು ಅದು ನೀಡುತ್ತದೆ ಎಂದರು. ಜೊತೆಗೆ, ಸ್ವಾತಂತ್ರ್ಯ ಕಳೆದುಕೊಂಡವರು ಪರಿವರ್ತನೆಯನ್ನು ಹುಡುಕಿ, ಶಾಂತಿ ನಿರ್ಮಾಣಕ್ಕೆ ಬದ್ಧರಾದ ನಾಗರಿಕರಾಗಿ ಮರಳಲು ಸಿದ್ಧರಾಗಬೇಕು ಎಂದು ಅವರು ಪ್ರೋತ್ಸಾಹಿಸಿದರು.

‘ಸ್ವಾಗತ’ದಿಂದ ‘ಜೀವನ’ದತ್ತ

ಇತ್ತೀಚೆಗೆ ಮೂರು ಧರ್ಮಪ್ರಾಂತ್ಯಗಳಿಂದ ಐದು ಧರ್ಮಪ್ರಾಂತ್ಯಗಳವರೆಗೆ ವಿಸ್ತರಿಸಿರುವ ಈಕ್ವೆಟೋರಿಯಲ್ ಗಿನಿಯ ಧರ್ಮಸಭೆ, ಈ ಭೇಟಿಯನ್ನು ತನ್ನ ಧ್ಯೇಯದ ಹೊಸ ಹಂತಕ್ಕೆ ಉತ್ತೇಜನ ನೀಡುವ ಘಟಕವಾಗಿ ಕಾಣುತ್ತಿದೆ. ಧರ್ಮಾಧ್ಯಕ್ಷ ಬೇಕಾ ಅವರ ಪ್ರಕಾರ, ಮುಂದಿನ ಮಾರ್ಗವನ್ನು ಸರಳವಾದ ಆದರೆ ಸವಾಲಿನ ಆತ್ಮಪಾಲನಾ ಕರೆಯಾಗಿ ಹೀಗೆ ಸಾರಬಹುದು:

“ನಾವು ಜನರಿಗೆ ಮೂರು ಕ್ರಿಯಾಪದಗಳನ್ನು ಅಳವಡಿಸಿಕೊಳ್ಳಲು ಕೇಳುತ್ತೇವೆ: ಸಿದ್ಧವಾಗು, ಸ್ವಾಗತಿಸು ಮತ್ತು ಜೀವಿಸು. ನಾವು ಸಿದ್ಧರಾಗಿದ್ದೇವೆ ಮತ್ತು ಈ ಕೃಪೆಯನ್ನು ಸ್ವಾಗತಿಸಿದ್ದೇವೆ—ಈಗ ಅದನ್ನು ಜೀವಿಸಬೇಕು. ಈ ಭೇಟಿ ನಮ್ಮ ಸಂಬಂಧಗಳನ್ನು ಪರಿವರ್ತಿಸಲು ಶಕ್ತಿಯಾಗಿದೆ.”

ಧರ್ಮಸಭೆ ಪೂಜ್ಯ ಜಗದ್ಗುರು ಲಿಯೋ ಹದಿನಾಲ್ಕನೇ ಅವರ “ಮಹತ್ವದ ಪರಂಪರೆ”ಯನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ಮುಂದಿನ ಚಿಂತನೆಗೆ ಸಿದ್ಧವಾಗಿರುವಾಗ, ಅದು ಆನಂದದಿಂದ ತುಂಬಿದ ಒಂದು ಅಧ್ಯಾಯವನ್ನು ಮುಗಿಸಿ, ಸಾಮಾಜಿಕ ಮತ್ತು ಆತ್ಮಿಕ ನವೀಕರಣದಿಂದ ರೂಪುಗೊಂಡ ಮತ್ತೊಂದು ಹೊಸ ಅಧ್ಯಾಯವನ್ನು ಆರಂಭಿಸುತ್ತದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

24 ಏಪ್ರಿಲ್ 2026, 00:01