ಹುಡುಕಿ

ಅಮೇರಿಕಾದ ಧರ್ಮಾಧ್ಯಕ್ಷರ ಗುಂಪು ಅಮೇರಿಕಾದ ಧರ್ಮಾಧ್ಯಕ್ಷರ ಗುಂಪು 

ವರ್ಣಭೇದದ ವಿರುದ್ಧದ ಪಾಲನಾ ಪತ್ರದಿಂದ ಪ್ರೇರಿತರಾಗಿ, ಅಮೇರಿಕಾದ ಧರ್ಮಾಧ್ಯಕ್ಷರು ಡೀಪ್ ಸೌತ್ ಪ್ರದೇಶಕ್ಕೆ ಪ್ರಯಾಣ

ಅಮೇರಿಕಾದಲ್ಲಿ ಮರಣದಂಡನೆಯನ್ನು ಕೊನೆಗೊಳಿಸಲು ಕೆಲಸ ಮಾಡುತ್ತಿರುವ ಒಂದು ಸಂಸ್ಥೆಯ ನಿರ್ದೇಶಕಿ ಕ್ರಿಸ್ಯಾನ್ ವೈಲ್ಯಾಂಕೋರ್ಟ್ ಮರ್ಫಿ, ಅಮೇರಿಕಾದ ಧರ್ಮಾಧ್ಯಕ್ಷರೊಂದಿಗಿನ ಪ್ರವಾಸದಲ್ಲಿ ಭಾಗವಹಿಸಿ, ದೇಶದಲ್ಲಿನ ವರ್ಣಭೇದದ ಪರಂಪರೆ ಮತ್ತು ಅದರ ಇಂದಿನ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಮೇಲೆ ಇರುವ ಪರಿಣಾಮಗಳ ನಡುವಿನ ಸಂಬಂಧವನ್ನು ಅನ್ವೇಷಿಸುತ್ತಿದ್ದಾರೆ.

ಲೇಖಕರು: ಕ್ರಿಸ್ಯಾನ್ ವೈಲ್ಯಾಂಕೋರ್ಟ್ ಮರ್ಫಿ-ಕಾರ್ಯನಿರ್ವಾಹಕ ನಿರ್ದೇಶಕಿ, ಕಥೋಲಿಕ ಮೊಬೈಲೈಸಿಂಗ್ ನೆಟ್‌ವರ್ಕ್*

ಎಂಟು ವರ್ಷಗಳ ಹಿಂದೆ, ಅಮೇರಿಕಾದ ಕಥೋಲಿಕ ಧರ್ಮಾಧ್ಯಕ್ಷರ ಸಮ್ಮೇಳನ (USCCB) ವರ್ಣಭೇದದ ವಿರುದ್ಧ ಒಂದು ಪಾಲನಾ ಪತ್ರವನ್ನು ಪ್ರಕಟಿಸಿತು. Open Wide Our Hearts: The Enduring Call to Love ಎಂಬ ಈ ಪತ್ರವು “ವರ್ಣಭೇದ ಎಂದರೇನು?” ಮತ್ತು “ಈ ದುಷ್ಟತನವನ್ನು  ನಾವು ಹೇಗೆ ಜಯಿಸಬೇಕು?” ಎಂಬ ಪ್ರಶ್ನೆಗಳನ್ನು ಪರಿಶೀಲಿಸುತ್ತದೆ.

“ವರ್ಣಭೇದ, ಒಂದು ಜೀವದ ಪ್ರಶ್ನೆಯಾಗಿದೆ,” ಮತ್ತು “ಎಲ್ಲರೂ ದೇವರ ಸ್ವರೂಪ ಮತ್ತು ಸದೃಶತೆಯಲ್ಲಿ ಸೃಷ್ಟಿಸಲ್ಪಟ್ಟವರು ಎಂಬ ಸತ್ಯವನ್ನು ವಕ್ರಗೊಳಿಸುವ, ದೇವರ ಇಚ್ಛೆಯ ವಿಕೃತಿ.” ಸಮಾಜವು “ನ್ಯಾಯವಿಲ್ಲದ ಮತ್ತು ಹಿಂಸಾತ್ಮಕ ಸಾಮಾಜಿಕ ರಚನೆಗಳಿಂದ ನಮ್ಮನ್ನೆಲ್ಲ ವರ್ಣಭೇದದ ಸಹಪಾಲಕರನ್ನಾಗಿಸುವ ವ್ಯವಸ್ಥೆಗಳಿಂದ ಮುಂದೆ ಸಾಗಬೇಕಾದರೆ,” ಧರ್ಮಾಧ್ಯಕ್ಷರು ತಮ್ಮ ಪತ್ರದಲ್ಲಿ ಒತ್ತಿಹೇಳುವಂತೆ, ಮುಂದಿನ ದಾರಿಯಲ್ಲಿ ಅರ್ಥಪೂರ್ಣ ಮತ್ತು ವೈಯಕ್ತಿಕ ಭೇಟಿಗಳು ಅವಶ್ಯವಾಗಿರಬೇಕು” ಎಂದು ಧರ್ಮಾಧ್ಯಕ್ಷರು ಬರೆಯುತ್ತಾರೆ.

“ವರ್ಣಭೇದವನ್ನು ಅಂತ್ಯಗೊಳಿಸಲು, ನಾವು ಜಗತ್ತಿನೊಂದಿಗೆ ತೊಡಗಿಕೊಳ್ಳಬೇಕು ಮತ್ತು ಇತರರನ್ನು ಎದುರಿಸಬೇಕು—ಬಹುಶಃ ಮೊದಲ ಬಾರಿಗೆ, ನಮ್ಮ ಸೀಮಿತ ದೃಷ್ಟಿಯ ಅಂಚಿನಲ್ಲಿರುವವರನ್ನು ನೋಡಲು.” (Open Wide Our Hearts)

ಇದನ್ನು ಕೆಲವು ವಾರಗಳ ಹಿಂದೆ ನಡೆದ ಘಟನೆಯೊಂದಿಗೆ ಹೋಲಿಸಿ ನೋಡಬಹುದು. ಮಾರ್ಚ್ 2026ರಲ್ಲಿ, ನಾನು ಆರು ಅಮೇರಿಕಾದ ಧರ್ಮಾಧ್ಯಕ್ಷರೊಂದಿಗೆ, ಹಾಗೆಯೇ USCCBಯ ವರ್ಣ ನ್ಯಾಯ ಮತ್ತು ಸೌಹಾರ್ದತೆಯ ಪ್ರೋತ್ಸಾಹ ಉಪಸಮಿತಿಯ ಸಿಬ್ಬಂದಿ ಮತ್ತು ಸಲಹೆಗಾರರೊಂದಿಗೆ, ಇಂತಹ ಒಂದು “ಭೇಟಿ”ಗಾಗಿ ಡೀಪ್ ಸೌತ್ ಪ್ರದೇಶಕ್ಕೆ ಪ್ರಯಾಣಿಸುವ ಸೌಭಾಗ್ಯವನ್ನು ಪಡೆದಿದ್ದೆ.

ಅಲಬಾಮಾದ ಮಾಂಟ್‌ಗೊಮೇರಿ ಮತ್ತು ಸೆಲ್ಮಾ ನಗರಗಳಲ್ಲಿ ನಡೆದ ಈ ತಪಸ್ಸು ಕಾಲದ ಅನುಭವವು, ಕಥೋಲಿಕ ಮೊಬೈಲೈಸಿಂಗ್ ನೆಟ್‌ವರ್ಕ್ ಮತ್ತು USCCB ನಡುವಿನ ಎರಡನೇ ಸಹಯೋಗವಾಗಿತ್ತು, ಇದರ ಉದ್ದೇಶ ಅಮೇರಿಕಾದ ಧರ್ಮಾಧ್ಯಕ್ಷರನ್ನು ಅಲಬಾಮಾಕ್ಕೆ ಕರೆತರುವುದು.

19ನೇ ಶತಮಾನದಲ್ಲಿ, ಮಾಂಟ್‌ಗೊಮೇರಿ ಅಮೇರಿಕಾದ ಅತ್ಯಂತ ಪ್ರಮುಖ ದಾಸರ ವ್ಯಾಪಾರದ ಕೇಂದ್ರಗಳಲ್ಲಿ ಒಂದಾಗಿತ್ತು. 20ನೇ ಶತಮಾನದಲ್ಲಿ, ಅದು ನಾಗರಿಕ ಹಕ್ಕುಗಳ ಚಳುವಳಿಯ ಹುಟ್ಟೂರಾಗಿ ಪರಿಣಮಿಸಿತು. ಈ ಪ್ರಯಾಣವು 400 ವರ್ಷಗಳ ದಾಸ್ಯ, ಹತ್ಯೆ ಮತ್ತು ವರ್ಣವಿಭಜನೆಯ ಪರಂಪರೆ ಇಂದಿಗೂ ನಮ್ಮ ನ್ಯಾಯ ವ್ಯವಸ್ಥೆಯನ್ನು ಹೇಗೆ ರೂಪಿಸುತ್ತಿದೆ ಎಂಬುದನ್ನು ಅನ್ವೇಷಿಸಲು ಅವಕಾಶ ನೀಡಿತು; ಜೊತೆಗೆ ಅಮೇರಿಕಾದಲ್ಲಿ ಸತ್ಯವನ್ನು ಹೇಳುವ ಮತ್ತು ಸೌಹಾರ್ದತೆಯನ್ನು ಪುನರುಜ್ಜೀವನಗೊಳಿಸುವ ಕಾರ್ಯದಲ್ಲಿ ತೊಡಗಿಕೊಳ್ಳುವ ಅವಕಾಶವನ್ನೂ ಒದಗಿಸಿತು.

ಎಂಟು ವರ್ಷಗಳ ಹಿಂದೆ ತಮ್ಮನ್ನು ತಾವು ಬದ್ಧಗೊಳಿಸಿಕೊಂಡಿದ್ದುದನ್ನು ಈ ಧರ್ಮಾಧ್ಯಕ್ಷರು ಜೀವನದಲ್ಲಿ ಅನ್ವಯಿಸುತ್ತಿರುವುದನ್ನು ಅವರೊಂದಿಗೆ ನಡೆದುಕೊಂಡು ನೋಡಲು ನನಗೆ ವಿಶೇಷವಾದ ಗೌರವದ ಭಾವನೆ ಉಂಟಾಯಿತು. ಅಲಬಾಮಾದಲ್ಲಿನ ನಮ್ಮ ಅನುಭವವು ಸತ್ಯವನ್ನು ಹೇಳುವ ಒಂದು ಪ್ರಯಾಣವಾಗಿದ್ದು, ಅಮೇರಿಕಾದಲ್ಲಿನ ವ್ಯವಸ್ಥಾತ್ಮಕ ವರ್ಣಭೇದದ ನಡುವೆ ಆಶೆ ಮತ್ತು ಸೌಹಾರ್ದತೆಯ ಸೇವಕರಾಗಿರಲು ಧರ್ಮಸಭೆ, ಅದರ ನಾಯಕತ್ವ ಮತ್ತು ಅದರ ಭಕ್ತರಿಂದ ಏನು ಅಗತ್ಯವಿದೆ ಎಂಬುದನ್ನು ಅನ್ವೇಷಿಸುವ ಒಂದು ಆಳವಾದ ಪ್ರಯತ್ನವಾಗಿತ್ತು.

ಪಾಸ್ಕದ ಭರವಸೆಯನ್ನು ಅನಾವರಣಗೊಳಿಸುವ ತಪಸ್ಸು ಕಾಲದ ಪ್ರಯಾಣ

 ಈ ಪ್ರಯಾಣವು ತಪಸ್ಸು ಕಾಲದಲ್ಲಿ ನಡೆದದ್ದು ಯಾದೃಚ್ಛಿಕವಾಗಿರಲಿಲ್ಲ. ನಮ್ಮ ಈ ಯಾತ್ರೆ ಮನಸ್ಸಿನೂ ಹೃದಯದೂ ಆಗಿದ್ದು—ಸ್ಮರಣೆ, ಪಶ್ಚಾತ್ತಾಪ, ಪ್ರಾರ್ಥನೆ ಮತ್ತು ಪಾಸ್ಕದ ನವೀಕರಣಕ್ಕೆ ಸಿದ್ಧತೆಯ ಪ್ರಯಾಣವಾಗಿತ್ತು.

ನಮ್ಮ ಪ್ರಯಾಣದ ಮೊದಲ ದಿನದಲ್ಲಿ, ಅಲಬಾಮಾದ ಮಾಂಟ್‌ಗೊಮೇರಿಯಲ್ಲಿ ಇರುವ Equal Justice Initiative (EJI) ಸಂಸ್ಥಾಪಕರಾದ ಬ್ರಯಾನ್ ಸ್ಟೀವೆನ್ಸನ್ ಅವರೊಂದಿಗೆ ನಡೆದ ಮರೆಯಲಾಗದ ಭೇಟಿಯು ಒಳಗೊಂಡಿತ್ತು. ಹಲವು ದಶಕಗಳ ಕಾಲ ಅವರು ನಡೆಸಿದ ಪ್ರೇರಣಾದಾಯಕ ಕಾರ್ಯವು ತಪ್ಪಾಗಿ ದೋಷಾರೋಪಣೆಗೊಂಡ, ಅನ್ಯಾಯಕರ ಶಿಕ್ಷೆಗೆ ಒಳಗಾದ ಅಥವಾ ರಾಜ್ಯದ ಜೈಲುಗಳಲ್ಲಿ ಹಿಂಸೆಗೆ ಒಳಗಾದವರಿಗೆ ಕಾನೂನು ಸಹಾಯ ಒದಗಿಸಿದೆ. EJI ಅಲಬಾಮಾದ ಅಂಚಿನಲ್ಲಿರುವ ಜನರಿಗೆ ಜೀವನಾಡಿಯಂತಾಗಿದ್ದು, ಕಾನೂನು ಹಾಗೂ ಕಥನಾತ್ಮಕ ಬದಲಾವಣೆಯಲ್ಲಿ ಮುಂಚೂಣಿಯಲ್ಲಿದೆ. ಮಾಂಟ್‌ಗೊಮೇರಿ ನಗರದೆಲ್ಲೆಡೆ ನಿರ್ಮಿಸಲಾದ “ಪಾರಂಪರಿಕ ತಾಣಗಳು” ಮೂಲಕ, EJI ಸಾಮೂಹಿಕ ಕಾರಾಗೃಹವಾಸ ಮತ್ತು ಅತಿಯಾದ ಶಿಕ್ಷೆಗಳು ವರ್ಣ ಹಾಗೂ ಆರ್ಥಿಕ ಅನ್ಯಾಯದ ಗಾಢ ಸಮಸ್ಯೆಗಳೊಂದಿಗೆ ಹೊಂದಿರುವ ಸಂಬಂಧವನ್ನು ಬೆಳಕಿಗೆ ತರುತ್ತದೆ.

ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಅಡಕವಾಗಿರುವ ವರ್ಣಭೇದ ಮತ್ತು ಅನ್ಯಾಯದ ವಿಷಯಗಳನ್ನು ವಿವರಿಸುತ್ತಾ, ಶ್ರೀ ಸ್ಟೀವೆನ್ಸನ್ “ವರ್ಣಭೇದ” ಎಂಬ “ಕ್ಯಾನ್ಸರ್”ನ ಅತ್ಯಂತ ಅಪಾಯಕಾರಿ ಪರಿಣಾಮಗಳಲ್ಲಿ ಒಂದಾಗಿ ವರ್ಣ ಹಂತಕ್ರಮದ ಕಥನ ಮತ್ತು ಕಪ್ಪು ಜನರ ಹೀನತ್ವದ ಕಲ್ಪನೆಯನ್ನು ಗುರುತಿಸಿದರು. ವಿಶೇಷವಾಗಿ, ಕಪ್ಪು ಮತ್ತು ಕಂದು ವರ್ಣದ ಜನರ ಮೇಲೆ ಹೇರಲಾಗುವ ಅಪಾಯ ಮತ್ತು ದೋಷದ ಸಂಶಯವೇ ಇಂದಿಗೂ ಅತಿಯಾದ ಶಿಕ್ಷೆಗಳು ಮತ್ತು ಹೆಚ್ಚುವರಿ ಕಾರಾಗೃಹವಾಸಕ್ಕೆ ಕಾರಣವಾಗುತ್ತಿದೆ ಎಂದು ಅವರು ಹೇಳಿದರು. ತಪಸ್ಸು ಕಾಲದಲ್ಲಿ ಮರುಭೂಮಿಯಲ್ಲಿ ಉಪವಾಸವಿದ್ದ ಯೇಸುವಿನ ಶೋಧನೆಯನ್ನು ನಾವು ಚಿಂತಿಸುವಂತೆ, ಶ್ರೀ ಸ್ಟೀವೆನ್ಸನ್ ಅವರೊಂದಿಗೆ ನಡೆದ ಈ ತಪಸ್ಸು ಕಾಲದ ಭೇಟಿಯು ಇಂದಿನ ಸಮಾಜದಲ್ಲಿ ವರ್ಣಭೇದದ ಪಾಪವು ಹೇಗೆ ನಮ್ಮನ್ನು ಶೋಧಿಸುತ್ತಿದೆ ಎಂಬುದನ್ನು ಸ್ಪಷ್ಟಗೊಳಿಸಿತು.

ಈ ಹಿನ್ನೆಲೆಯಲ್ಲೇ, ಅವರು ಧರ್ಮಸಭೆಯ ನಾಯಕರನ್ನು ಸಮಾಜದಲ್ಲಿ ಪರಿವರ್ತನೆಗೆ ಕಾರಣರಾಗುವ ಪ್ರಮುಖ “ಸಹಾಯಕರ” ಎಂದು ವಿವರಿಸಿದರು. ಏಕೆಂದರೆ ಸತ್ಯವನ್ನು ಒಪ್ಪಿಕೊಳ್ಳುವುದು ಮತ್ತು ಪಾಪದಿಂದ ಪಶ್ಚಾತ್ತಾಪ ಪಡುವುದೇ ಮನಸ್ಸುಗಳನ್ನು ವಿಮೋಚನೆ ಮತ್ತು ಸೌಹಾರ್ದತೆಯತ್ತ ತೆರೆದಿಡುತ್ತದೆ ಎಂಬುದನ್ನು ಅವರು ಅರಿತಿದ್ದಾರೆ. ಅಮೇರಿಕಾದು ದಾಸ್ಯ ಪರಂಪರೆ ಮತ್ತು ಇಂದಿನ ವರ್ಣ ಅನ್ಯಾಯದ ರೂಪಗಳನ್ನು ಎದುರಿಸುತ್ತಿರುವ ಈ ಸಮಯದಲ್ಲಿ, ಸಮಾಜವು ಮೌನದಿಂದ ಮುಕ್ತವಾಗಲು ಮತ್ತು ಸತ್ಯವನ್ನು ಹೇಳುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಲು, ಸದಾ ಭರವಸೆಯನ್ನು ಹಿಡಿದಿಟ್ಟುಕೊಳ್ಳುತ್ತಾ ಸಹಕರಿಸಲು ಶ್ರೀ ಸ್ಟೀವೆನ್ಸನ್ ನಮಗೆ ಪ್ರೇರಣೆ ನೀಡಿದರು.

ಶ್ರೀ ಸ್ಟೀವೆನ್ಸನ್ ಅವರೊಂದಿಗೆ ನಡೆದ ನಮ್ಮ ಭೇಟಿಯು, ಮಾಂಟ್‌ಗೊಮೇರಿ ಮತ್ತು ಸೆಲ್ಮಾ ನಗರಗಳ ಮೂಲಕ ನಡೆದ 48 ಗಂಟೆಗಳ ಪ್ರಯಾಣದ ಒಂದು ದಶಕದಷ್ಟು ಪ್ರಮುಖ ಭೇಟಿಗಳಲ್ಲಿ ಒಂದಾಗಿತ್ತು. 1950 ಮತ್ತು 1960ರ ದಶಕಗಳ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ನಿವಾಸ, ರೆವದಂತಹ ಅಮೇರಿಕಾದ ನಾಗರಿಕ ಹಕ್ಕುಗಳ ಚಳುವಳಿಯ ಪ್ರಮುಖ ಸ್ಥಳಗಳಿಗೆ ಭೇಟಿ ನೀಡುವಾಗ, ನಾವು ಶಿಲುಬೆ ಹಾದಿಯ ಪ್ರಾರ್ಥನೆಗಳನ್ನು ನೆರವೇರಿಸುತ್ತಾ ಈ ಎಲ್ಲ ಅನುಭವಗಳನ್ನು ಆಧ್ಯಾತ್ಮಿಕವಾಗಿ ನೆಲೆಗೆ ತಂದೆವು. ಸ್ಥಳೀಯ ನಾಯಕರನ್ನು ಭೇಟಿ ಮಾಡಿ, ಇಂದಿನ ಮರಣದಂಡನೆಯ ವಾಸ್ತವಿಕತೆಗಳ ಬಗ್ಗೆ ನಮ್ಮ ಅರಿವುಗಳನ್ನು ಆಳಗೊಳಿಸಿದೆವು. ನಮ್ಮ ಕಣ್ಣುಗಳು, ಕಿವಿಗಳು ಮತ್ತು ಹೃದಯಗಳೊಂದಿಗೆ, ನಾವು ಕ್ರಿಸ್ತನ ಕಲ್ವರಿಯತ್ತಿನ ಪ್ರಯಾಣವನ್ನು ಧ್ಯಾನಿಸಿ, ನಾವು ಸಾಕ್ಷಿಯಾದ ದುಃಖದ ಮಧ್ಯೆ ನಮ್ಮ ರಕ್ಷಕನ ಸಮೀಪತೆಯನ್ನು ಮನನ ಮಾಡಿದೆವು. ಕಥೋಲಿಕರಾಗಿರುವ ನಾವು, ಕ್ರಿಸ್ತನ ಪಾಡುಗಳ ಸಾಕ್ಷಿಯ ಮೂಲಕವೇ ಪಾಸ್ಕದ ಬೆಳಗಿನ ಬೆಳಕು ಉದಯಿಸುತ್ತದೆ ಎಂಬುದನ್ನು ಅರಿತಿದ್ದೇವೆ. ಇದೇ ಸತ್ಯವು ಮಾಂಟ್‌ಗೊಮೇರಿ ಮತ್ತು ಸೆಲ್ಮಾದಲ್ಲಿನ ನಮ್ಮ ತಪಸ್ಸು ಕಾಲದ ಅನುಭವಕ್ಕೂ ಅನ್ವಯಿಸುತ್ತದೆ.

ಮಿಸ್ಸಿಸಿಪ್ಪಿಯ ಜಾಕ್ಸನ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಜೋಸೆಫ್ ಕೋಪಾಕ್ “ಸಿಸ್ಟರ್ ಥಿಯಾ ಬೋಮನ್ ಹೇಳುವಂತೆ, ನಾವು ಸತ್ಯದತ್ತ ತಲುಪಬೇಕು—ವಾಸ್ತವಿಕತೆಯ ಸತ್ಯದತ್ತ—ಆಗ ಮಾತ್ರ ಸೌಹಾರ್ದತೆ ಸಾಧ್ಯವಾಗುತ್ತದೆ” ಎಂದು ಹೇಳಿದರು. ವರ್ಣದ ಭಯೋತ್ಪಾದನೆ ಮತ್ತು ವ್ಯವಸ್ಥಾತ್ಮಕ ವರ್ಣಭೇದದಿಂದ ಉಂಟಾದ ಆಳವಾದ ಗಾಯ ಮತ್ತು ಕಚ್ಚಾ ನೋವನ್ನು ನೆನಪಿಸಿಕೊಳ್ಳುವಾಗ, ನಾವು ಪವಿತ್ರಾತ್ಮನ ಕಾರ್ಯದ ಸಾಕ್ಷಿಗಳನ್ನೂ, ವಿಶ್ವಾಸದ ಬೆಳಕಿನಲ್ಲಿ ಪ್ರತಿರೋಧ ಮತ್ತು ಸ್ಥೈರ್ಯದ ಉದಾಹರಣೆಗಳನ್ನೂ ಕೇಳಿದೆವು. ಸ್ಯಾನ್ ಡಿಯಾಗೋ ಮಹಾಧರ್ಮಪ್ರಾಂತ್ಯದ ಸಹಾಯಕ ಧರ್ಮಾಧ್ಯಕ್ಷರಾದ ಫೆಲಿಪೆ ಪುಲಿದೋ “ಜನರು ತಮ್ಮ ಜೀವನದಲ್ಲಿ ಎಷ್ಟು ಕಷ್ಟಗಳನ್ನು ಎದುರಿಸಿದರೂ, ಭೂತಕಾಲದ ನೋವುಗಳ ನಡುವೆಯೂ, ಅವರು ಇನ್ನೂ ನಮ್ಮ ಕರ್ತ ಯೇಸು ಕ್ರಿಸ್ತನಲ್ಲಿ ನಂಬಿಕೆ ಇಟ್ಟಿದ್ದಾರೆ. ಅದೇ ಅವರಿಗೆ ಮುಂದುವರಿಯಲು ಭರವಸೆ ಮತ್ತು ಸ್ಥೈರ್ಯವನ್ನು ನೀಡಿದೆ” ಎಂದು ಹೇಳಿದರು.

ಖಚಿತವಾಗಿ, ಶಿಲುಬೆ ದೇವರ ಪ್ರೀತಿಯ ಆಳವನ್ನು ಪ್ರಕಟಿಸುತ್ತದೆ; ಖಾಲಿ ಸಮಾಧಿ ದೇವರ ರಕ್ಷಣಾ ಶಕ್ತಿಯ ಸಂಕೇತವಾಗಿದೆ. ಜೀವನವು ಯಾವಾಗಲೂ ಮರಣದ ಮೇಲೆ ಜಯ ಸಾಧಿಸುತ್ತದೆ ಎಂಬ ಭರವಸೆಯಲ್ಲೇ ನಮ್ಮ ವಿಶ್ವಾಸ ನೆಲೆಗೊಂಡಿದೆ. ನಿಜವಾಗಿಯೂ, ಈ ಸತ್ಯವನ್ನು ಅರಿಯಲು ನಾವು ಕೈಗೊಂಡ ಈ ಪ್ರಯಾಣವು ಪಾಸ್ಕದ ಭರವಸೆಯ ಒಂದು ಆಳವಾದ ಅಭಿವ್ಯಕ್ತಿಯಾಗಿದೆ.

ಪ್ರಯಾಣದ ಹಂತಗಳು

EJI ಸಂಸ್ಥಾಪಕರಾದ ಬ್ರಯಾನ್ ಸ್ಟೀವೆನ್ಸನ್ ಅವರನ್ನು ಭೇಟಿ ಮಾಡುವುದರ ಜೊತೆಗೆ, ಆ ಸಂಸ್ಥೆ ಸ್ಥಾಪಿಸಿರುವ ಮೂರು ಪ್ರಮುಖ ಪಾರಂಪರಿಕ ತಾಣಗಳಿಗೂ ನಾವು ಭೇಟಿ ನೀಡಿದೆವು: ದಿ ಲೆಗಸಿ ಮ್ಯೂಸಿಯಂ: ದಾಸ್ಯದಿಂದ ಸಾಮೂಹಿಕ ಕಾರಾಗೃಹವಾಸದವರೆಗೆ, ರಾಷ್ಟ್ರೀಯ ಶಾಂತಿ ಮತ್ತು ನ್ಯಾಯ ಸ್ಮಾರಕ, ಹಾಗೂ ಫ್ರೀಡಂ ಮೋನ್ಯೂಮೆಂಟ್ ಶಿಲ್ಪ ಉದ್ಯಾನವನ. ಈ ಸ್ಥಳಗಳು 1619ರಿಂದ 1865ರವರೆಗೆ ಅಮೇರಿಕಾದಲ್ಲಿ ದಾಸ್ಯಕ್ಕೆ ಒಳಗಾದ ಸುಮಾರು 10 ಮಿಲಿಯನ್ ಕಪ್ಪು ಜನರ ಜೀವನ ಮತ್ತು ಸ್ಮೃತಿಗಳನ್ನು ಗೌರವಿಸುತ್ತವೆ.

ನಾವು ಕಥೋಲಿಕ ಧರ್ಮಕೇಂದ್ರಗಳಲ್ಲಿ ಒಟ್ಟಾಗಿ ಬಲಿಪೂಜೆಯನ್ನು ಆಚರಿಸಿ, ಗುರುಗಳು ಮತ್ತು ಸ್ಥಳೀಯ ನಾಯಕರೊಂದಿಗೆ ಊಟ ಹಂಚಿಕೊಂಡೆವು—ಇದಲ್ಲದೆ ನಾಗರಿಕ ಹಕ್ಕುಗಳ ಚಳುವಳಿಯ ಕಾಲದಿಂದ ಸಮುದಾಯದಲ್ಲಿ ಸಕ್ರಿಯರಾಗಿದ್ದ ವ್ಯಕ್ತಿಗಳನ್ನೂ ಭೇಟಿಯಾದೆವು.

ಮಾಂಟ್‌ಗೊಮೇರಿಯ ಮೂಲ ನಿವಾಸಿಯಾಗಿರುವ ವಂ. ಗುರು ಮ್ಯಾನುಯೆಲ್ ವಿಲಿಯಮ್ಸ್, C.R., ದಕ್ಷಿಣದ ರೆಸರೆಕ್ಷನ್ ಕಥೋಲಿಕ ಮಿಷನ್ಸ್‌ನ ಧರ್ಮಕೇಂದ್ರದ ಗುರುಗಳಾಗಿರುವ ಅವರು, ಶಿಕ್ಷಣ, ಸುವಾರ್ತೆ ಪ್ರಸಾರ, ಆರೋಗ್ಯ ಸೇವೆ, ಸಾಮಾಜಿಕ ಸೇವೆಗಳು ಮತ್ತು ಹಕ್ಕುಗಳ ಪರ ಹೋರಾಟದಲ್ಲಿ ತೊಡಗಿರುವ ಚೈತನ್ಯಮಯ ಕಥೋಲಿಕ ಸಮುದಾಯದ ನಾಯಕನಾಗಿ ತಮ್ಮ ಸ್ಥೈರ್ಯ ಮತ್ತು ಭರವಸೆಯ ಅನುಭವಗಳನ್ನು ಹಂಚಿಕೊಂಡರು.

ಸೆಲ್ಮಾದಿಂದ ಮಾಂಟ್‌ಗೊಮೇರಿಯವರೆಗೆ ನಡೆದ ಐತಿಹಾಸಿಕ ಮೆರವಣಿಗೆಯ ಅಂತಿಮ ನಿಲ್ದಾಣವಾಗಿದ್ದ ಸೇಂಟ್ ಜೂಡ್ ನಗರದ ಧರ್ಮಕೇಂದ್ರದ ಗುರುಗಳಾಗಿರುವ  ವಂ. ಗುರು ಆಂಡ್ರೂ ಜೋನ್ಸ್, 1965ರ ಮಾರ್ಚ್ 24ರಂದು ರಾಜ್ಯ ರಾಜಧಾನಿಗೆ ತಲುಪುವ ಮೊದಲು ಈ ಸ್ಥಳವು ಮೆರವಣಿಗೆಯ ಅಂತಿಮ ತಂಗುದಾಣವಾಗಿದ್ದ ಇತಿಹಾಸವನ್ನು ವಿವರಿಸಿದರು. ತಮ್ಮ ಧರ್ಮಕೇಂದ್ರ ನಾಗರಿಕ ಹಕ್ಕುಗಳ ಚಳುವಳಿಯಲ್ಲಿ ಧರ್ಮಸಭೆಯ ಪ್ರಮುಖ ಪಾತ್ರವನ್ನು ಹೇಗೆ ಸಂರಕ್ಷಿಸಿದೆ ಮತ್ತು ಇಂದಿಗೂ ಮಾನವ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯದತ್ತ ತನ್ನ ಬದ್ಧತೆಯನ್ನು ಹೇಗೆ ವ್ಯಕ್ತಪಡಿಸುತ್ತಿದೆ ಎಂಬುದನ್ನೂ ಅವರು ಹಂಚಿಕೊಂಡರು.

ಈ ಆಳವಾಗಿ ಮನಸ್ಸನ್ನು ತಟ್ಟುವ ವೈಯಕ್ತಿಕ ಭೇಟಿಗಳು ಸುಲಭವಾಗಿರಲಿಲ್ಲ. ಪೆನ್ಸಾಕೊಲಾ-ಟಲ್ಲಹಾಸಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಿಲಿಯಂ ವಾಕ್ ಅವರು ಇದನ್ನು ಹೀಗೆ ವಿವರಿಸಿದರು:

“ನನ್ನ ಮೇಲೆ ಗಾಢವಾದ ಪರಿಣಾಮ ಬೀರಿದ ಕೆಲವು ವಿಷಯಗಳಲ್ಲಿ ಶಿಲ್ಪಗಳು, ಕಲಾಕೃತಿಗಳು ಮತ್ತು ಛಾಯಾಚಿತ್ರಗಳ ಮೂಲಕ ದಾಸ್ಯ ಮತ್ತು ವರ್ಣಭೇದದ ನಿಜವಾದ ವಾಸ್ತವಿಕತೆಯನ್ನು ನೋಡುವುದೂ ಒಂದಾಗಿದೆ. ಅದು ಹತ್ಯೆ ಮತ್ತು ಸಾಮೂಹಿಕ ಕಾರಾಗೃಹವಾಸದ ಮೂಲಕ ಹೇಗೆ ಮುಂದುವರಿದಿದೆ ಎಂಬುದನ್ನೂ ಕಂಡೆ. ಅದನ್ನು ನೋಡುವುದು, ಹಾಗೆಯೇ 1950 ಮತ್ತು 1960ರ ದಶಕಗಳಲ್ಲಿ ನಾಗರಿಕ ಹಕ್ಕುಗಳ ಚಳುವಳಿಯಲ್ಲಿ ಭಾಗವಹಿಸಿದ್ದವರೊಂದಿಗೆ ಮಾತನಾಡಿ ಅವರ ಧ್ವನಿಯನ್ನು ಕೇಳುವುದು—ಇವೆಲ್ಲವೂ ನನಗೆ ಅತ್ಯಂತ ಮಹತ್ವದ್ದಾಗಿತ್ತು.”

ದೇವರು ಕೇಳುವುದೇನು

ನಮ್ಮ ಪ್ರಯಾಣದ ಕೊನೆಯ ಬೆಳಿಗ್ಗೆ, ನಾವು ರಾಷ್ಟ್ರೀಯ ಶಾಂತಿ ಮತ್ತು ನ್ಯಾಯ ಸ್ಮಾರಕದಲ್ಲಿ ನಿಂತಿದ್ದೇವೆ—ನೂರಾರು ಉಕ್ಕಿನ ಕಂಬಗಳು ಮೇಲಿನಿಂದ ತೂಗುತಿರುವ ಆ ಸ್ಥಳದಲ್ಲಿ. 1877ರಿಂದ 1950ರವರೆಗೆ ನಡೆದ 4,400ಕ್ಕೂ ಹೆಚ್ಚು ದಾಖಲಾಗಿರುವ ವರ್ಣಭೇದದ ಭಯೋತ್ಪಾದಕ ಹತ್ಯೆಗಳಲ್ಲಿ ಬಲಿಯಾದವರ ದೇಹಗಳನ್ನು ನೆನಪಿಸುವ ದೃಶ್ಯ ಚಿಹ್ನೆಗಳಾಗಿವೆ ಆ ಕಂಬಗಳು. ಮತ್ತೊಮ್ಮೆ, ನಾವು ಕ್ರಿಸ್ತನ ಪಾಡುಗಳತ್ತ ಮುಖಮಾಡಿ, ಶಿಲುಬೆಯ ಮಾರ್ಗದ ಅಂತಿಮ ಹಂತದೊಂದಿಗೆ ನಮ್ಮ ಪ್ರಾರ್ಥನೆಯನ್ನು ಸಮಾಪ್ತಿಗೊಳಿಸಿದೆವು.

ನಾವು ಒಟ್ಟಾಗಿ ಪ್ರಾರ್ಥಿಸುತ್ತಾ, Open Wide Our Hearts ಪತ್ರ ನೀಡಿದ ಪ್ರೇರಣೆಯನ್ನು ನೆನಪಿಸಿಕೊಂಡೆವು: “ಓ  ಮನುಜಾ, ನಿನಗೆ ಯಾವುದು ಒಳಿತೆಂದು ಸರ್ವೇಶ್ವರ ಈಗಾಗಲೇ ಸ್ಪಷ್ಟಪಡಿಸಿದ್ದಾರೆ: ನ್ಯಾಯನೀತಿಯ ನಡವಳಿಕೆ, ಕರುಣೆಯಲ್ಲಿ ಅಚಲ ಆಸಕ್ತಿ, ದೇವರ ಮುಂದೆ ನಮ್ರತೆ, ಇಷ್ಟನ್ನೇ ಆ ಸ್ವಾಮಿ ನಿನ್ನಿಂದ ಅಪೇಕ್ಷಿಸುವುದು” (ಮೀಕ 6:8).

ನಾವು “ನ್ಯಾಯವನ್ನು ಆಚರಿಸಲು” ಪ್ರಯತ್ನಿಸುವಾಗ, ಈ ಪಾಲನಾ ಪತ್ರವು ನ್ಯಾಯವನ್ನು ಹೀಗೆ ವ್ಯಾಖ್ಯಾನಿಸುತ್ತದೆ: “ನಾವು ದೇವರೊಂದಿಗೆ, ಪರಸ್ಪರರೊಂದಿಗೆ ಮತ್ತು ದೇವರ ಸೃಷ್ಟಿಯ ಉಳಿದ ಭಾಗಗಳೊಂದಿಗೆ ಸರಿಯಾದ ಸಂಬಂಧದಲ್ಲಿರುವ ಸ್ಥಿತಿ.” ಈ ಸಂಬಂಧಾಧಾರಿತ ನ್ಯಾಯದ ಬದ್ಧತೆಯಲ್ಲಿ, ವರ್ಣಭೇದದ ಪಾಪದಿಂದ ನೇರವಾಗಿ ಪ್ರಭಾವಿತರಾದವರ ಕಥೆಗಳನ್ನು ಕೇಳುವುದು ಅತ್ಯಂತ ಮುಖ್ಯವಾಗಿದೆ.

“ನ್ಯಾಯನೀತಿಯನ್ನು ಪ್ರೀತಿಸಲು” ಮಾಡುವ ಪ್ರಯತ್ನದಲ್ಲಿ, ಈ ಪತ್ರವು ಶಿಲುಬೆಯ ಮೇಲೆ ಕ್ರಿಸ್ತನ ಪಾಡುಗಳ ಉದಾಹರಣೆಯನ್ನು ಪರಿಗಣಿಸಲು ನಮ್ಮನ್ನು ಆಹ್ವಾನಿಸುತ್ತದೆ: “ಅವರ ಶಿಲುಬೆಯ ಮೂಲಕವೇ ನಾವು ಪ್ರೀತಿಯ ಮಹತ್ತಾದ ಪಾಠವನ್ನು ಕಲಿಯುತ್ತೇವೆ.” ರಾಜ್ಯದ ಕೈಯಲ್ಲಿ ನಡೆದ ಕ್ರಿಸ್ತನ ಶಿಲುಬೆ ಶಿಕ್ಷೆಯನ್ನು ಚಿಂತಿಸುವುದು, ವರ್ಣ ಅನ್ಯಾಯ, ಮಾನವೀಯತೆಯ ಕಳೆವಿಕೆ ಮತ್ತು ವಿಭಜನೆಯ ನಡುವೆಯೂ ಏಕತೆ ಮತ್ತು ಪುನರುತ್ಥಾನವನ್ನು ಹುಡುಕುವ ಪ್ರೀತಿಯ ವಿಶಾಲ ಅರ್ಥವನ್ನು ನಮಗೆ ನೀಡುತ್ತದೆ.

ಮತ್ತು “ದೇವರೊಂದಿಗೆ ವಿನಮ್ರವಾಗಿ ನಡೆಯುವ” ಪ್ರಯತ್ನದಲ್ಲಿ, ಈ ಪತ್ರವು ಧರ್ಮಸಭೆಯ ನಾಯಕತ್ವದಲ್ಲಿರುವವರನ್ನು “ಸಂಸ್ಕೃತಿ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಅಧಿಕೃತ ಭೇಟಿಗಳನ್ನು ನೀಡಲು” ಪ್ರೋತ್ಸಾಹಿಸುತ್ತದೆ. ಜೊತೆಗೆ, ನಮ್ಮ ದೇಶದ ಸಂಕೀರ್ಣ ವರ್ಣ ಇತಿಹಾಸವನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಅರ್ಥಪೂರ್ಣ ಅನುಭವಗಳಲ್ಲಿ ತೊಡಗಿಸಿಕೊಳ್ಳಲು ಆಹ್ವಾನಿಸುತ್ತದೆ.

ನಾವು ಪಾಸ್ಕದ ಜನರು—ಪವಿತ್ರ ಆತ್ಮ ವಾಗ್ದಾನದೊಳಗೆ ಬದುಕುತ್ತಿರುವವರು. ಅದಕ್ಕಾಗಿಯೇ, ಅಲಬಾಮಾದಲ್ಲಿ ನಾವು ಪರಸ್ಪರರ ಜೊತೆಗೆ ಪ್ರಾರ್ಥನಾತ್ಮಕ ಮನೋಭಾವದಲ್ಲಿ, ತೆರೆದ ಮನಸ್ಸಿನಿಂದ ಮತ್ತು ಭೇಟಿಯ ಆತ್ಮದಲ್ಲಿ ಸಾಗುತ್ತಾ, ನಮ್ಮ ಗಾಯಗೊಂಡ ಜಗತ್ತಿನಲ್ಲಿ ಸೌಹಾರ್ದತೆಯನ್ನು ನಿರ್ಮಿಸುವವರಾಗಲು ದೇವರ ಕೃಪೆಯನ್ನು ಬೇಡುತ್ತೇವೆ. ನಮ್ಮ ತಪಸ್ಸು ಕಾಲದ ಪ್ರಯಾಣವು, ನಮ್ಮ ದೇಶದ ವರ್ಣಭೇದದಿಂದ ಉಂಟಾದ ಆಳವಾದ ಗಾಯಗಳನ್ನು ನೆನಪಿಸಿಕೊಳ್ಳಲು ಒಂದು ಆಳವಾದ ಅವಕಾಶವನ್ನು ಸೃಷ್ಟಿಸಿತು. ಈ ಕಾಲವು ನಮಗೆಲ್ಲರಿಗೂ ವ್ಯವಸ್ಥಾತ್ಮಕ ವರ್ಣಭೇದವು ಹೇಗೆ ಪ್ರತೀಕಾರ ಮತ್ತು ಶಿಕ್ಷೆಯ ವ್ಯಾಪಕ ಕಥನಕ್ಕೆ ದಾರಿಯಾಗಿದೆ ಮತ್ತು ಅದು ಇಂದಿನ ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಹೇಗೆ ಗುರುತಿಸಿದೆ ಎಂಬುದನ್ನು ಇನ್ನಷ್ಟು ಸ್ಪಷ್ಟವಾಗಿ ತಿಳಿಯಲು ಸಹಾಯಮಾಡಿತು.

ನಮ್ಮ ಪ್ರಯಾಣದ ಅವಧಿಯಲ್ಲಿ ನಾವು ಪ್ರಾರ್ಥಿಸಿದ ಪ್ರತಿಯೊಂದು ಶಿಲುಬೆಯ ಮಾರ್ಗದ ಹಂತದೊಂದಿಗೆ, ನಾವು ಹೀಗೆ ಉಚ್ಚರಿಸಿದೆವು: “ನಿನ್ನ ಪವಿತ್ರ ಶಿಲುಬೆಯ ಮೂಲಕ ನೀನು ಲೋಕವನ್ನು ವಿಮೋಚಿಸಿದ್ದೀ.” ಈ ಸರಳ ಪ್ರಾರ್ಥನೆ ದೇವರ ಪ್ರೀತಿಯ ಆಳವನ್ನೂ ಅವರ ಅಪಾರ ಕರುಣೆಯನ್ನೂ ಪ್ರಕಟಿಸುತ್ತದೆ. ಇದರ ಮೂಲಕ, ಸೌಹಾರ್ದತೆ ಮತ್ತು ಪುನರುಜ್ಜೀವನದತ್ತ ಕರೆದೊಯ್ಯುವ ಈ ಸತ್ಯವಾಚಕ ಕಾರ್ಯದ ಮಹತ್ವದ ಬಗ್ಗೆ ನಮ್ಮೊಳಗಿನ ಕೃತಜ್ಞತೆ ಹೆಚ್ಚಾಯಿತು.

ಕೃತಜ್ಞತೆಯಿಂದ, ಪುನರುತ್ಥಾನದ ಬೆಳಕು ದುಃಖದ ಆಳವನ್ನು ಹೊಸ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ನಮ್ಮ ಮಾರ್ಗವನ್ನು ಪ್ರಕಾಶಿಸುತ್ತದೆ. ಇದರ ಮೂಲಕ, ವ್ಯವಸ್ಥಾತ್ಮಕ ವರ್ಣಭೇದದ ಗಾಯಗಳು ಇನ್ನೂ ಉಳಿದಿರುವ ಎಲ್ಲ ಸ್ಥಳಗಳಲ್ಲಿ, ಪರಿವರ್ತನೆ ಮತ್ತು ಪುನರುಜ್ಜೀವನದ ಸಹಾಯಕರಾಗಿ ನಾವು ಪಾಸ್ಕದ ಶುಭಸಂದೇಶವನ್ನು ಹರಡಲು ಸಾಧ್ಯವಾಗುತ್ತದೆ.

* ಕ್ರಿಸ್ಯಾನ್ ವೈಲ್ಯಾಂಕೋರ್ಟ್ ಮರ್ಫಿ ಅವರು ಕಥೋಲಿಕ ಮೊಬೈಲೈಸಿಂಗ್ ನೆಟ್‌ವರ್ಕ್‌ನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿದ್ದಾರೆ. ಅಮೇರಿಕಾದ ಈ ರಾಷ್ಟ್ರೀಯ ಸಂಸ್ಥೆ, ಕಥೋಲಿಕರು ಮತ್ತು ಸತ್ಸಂಕಲ್ಪದ ಜನರನ್ನು ಒಗ್ಗೂಡಿಸಿ ಮರಣದಂಡನೆಯನ್ನು ಅಂತ್ಯಗೊಳಿಸಲು, ಕಥೋಲಿಕ ಮೌಲ್ಯಗಳಿಗೆ ಹೊಂದುವ ನ್ಯಾಯದ ಪರಿಹಾರಗಳನ್ನು ಉತ್ತೇಜಿಸಲು ಮತ್ತು ಪುನರುಜ್ಜೀವನಾತ್ಮಕ ನ್ಯಾಯದ ವಿಧಾನಗಳ ಮೂಲಕ ಸೌಹಾರ್ದತೆ ಹಾಗೂ ಚೇತರಿಕೆಯನ್ನು ಪ್ರೋತ್ಸಾಹಿಸಲು ಕಾರ್ಯನಿರ್ವಹಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಈ ಚಳುವಳಿಗೆ ಸೇರಲು, catholicsmobilizing.orgಗೆ ಭೇಟಿ ನೀಡಿ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

30 ಏಪ್ರಿಲ್ 2026, 15:25