ಪ್ರಧಾನ ಗುರು ಕೊಚ್: ರಕ್ತಸಾಕ್ಷಿಗಳ ಸಾಕ್ಷಿ ಐಕ್ಯತೆ ಮತ್ತು ಶಾಂತಿಗೆ ದಾರಿ
ವ್ಯಾಟಿಕನ್ ವರದಿ
2026ರ ಏಪ್ರಿಲ್ 23ರಂದು, ಶಾಂತಿಗಾಗಿ ನಡೆದ ಐಕ್ಯತೆಯ ಪ್ರಾರ್ಥನಾ ಆಚರಣೆಯಲ್ಲಿ ಕ್ರೈಸ್ತ ಭಕ್ತರು ಒಂದಾಗಿ ಸೇರಿ “ಹೊಸ ರಕ್ತಸಾಕ್ಷಿಗಳನ್ನು” ಸ್ಮರಿಸಿದರು. “ಮೆಡ್ಜ್ ಯೆಘೆರ್‌ನ” ಅರ್ಮೇನಿಯನ್ ಬಲಿದಾನಿಗಳನ್ನು ಅದರ ವಾರ್ಷಿಕೋತ್ಸವದ ಮುನ್ನದ ದಿನ ವಿಶೇಷವಾಗಿ ನೆನಪಿಸಲಾಯಿತು.
ಈ ಸಂದರ್ಭದ ಸಂದೇಶದಲ್ಲಿ, ಕ್ರೈಸ್ತ ಐಕ್ಯತೆಯನ್ನು ಉತ್ತೇಜಿಸುವ ದಿಕಾಸ್ಟರಿಯ ಮುಖ್ಯಸ್ಥರಾದ ಪ್ರಧಾನ ಗುರು ಕೂರ್ಟ್ ಕೊಚ್ ಅವರು, ರಕ್ತಸಾಕ್ಷಿಗಳ ಸಾಕ್ಷಿ ಧರ್ಮಸಭೆಯ ಜೀವನದ ಹೃದಯದಲ್ಲಿದೆ ಎಂದು ಹೇಳಿದರು. ದ್ವಿತೀಯ ವ್ಯಾಟಿಕನ್ ಮಹಾಸಭೆಯ ಬೋಧನೆಗಳನ್ನು ಉಲ್ಲೇಖಿಸಿ, ಕ್ರಿಸ್ತನಿಗಾಗಿ ತಮ್ಮ ಜೀವವನ್ನು ಅರ್ಪಿಸಿದವರ ಸಾಕ್ಷಿಯನ್ನು ಗೌರವಿಸುವುದು “ಪವಿತ್ರ ಆತ್ಮದಲ್ಲಿ ನಿಜವಾದ ಐಕ್ಯತೆ” ಯನ್ನು ಪ್ರಕಟಿಸುತ್ತದೆ ಎಂದು ಅವರು ತಿಳಿಸಿದರು.
ರಕ್ತದ ಐಕ್ಯತೆ
ಇಪ್ಪತ್ತನೆಯ ಶತಮಾನದ ಆರಂಭದ ಅರ್ಮೇನಿಯನ್ ರಕ್ತಸಾಕ್ಷಿಗಳ ಬಗ್ಗೆ ಚಿಂತನೆ ನಡೆಸುತ್ತಾ, ಪ್ರಧಾನ ಗುರು ಅವರು ಅವರ ಬಲಿದಾನವನ್ನು ವಿಭಜನೆಗಳನ್ನು ಮೀರಿ ಸಾಗುವ “ಸಾಮಾನ್ಯ ರಕ್ತಸಾಕ್ಷಿಗಳ ಪರಂಪರೆ”ಯ ಭಾಗವೆಂದು ವಿವರಿಸಿದರು.
ಜಗದ್ಗುರು ಸಂತ ದ್ವಿತೀಯ ಜಾನ್ ಪಾಲ್ ಅವರ “ರಕ್ತದ ಐಕ್ಯತೆ”ಯ ಬೋಧನೆಯನ್ನು ಪ್ರತಿಧ್ವನಿಸುತ್ತಾ, ಹಂಚಿಕೊಂಡ ನೋವು ಕ್ರೈಸ್ತರ ನಡುವೆ ಐಕ್ಯತೆಗೆ ಮೂಲವಾಗುತ್ತದೆ ಎಂದು ತಿಳಿಸಿದರು.
ಇಂದಿನ ಹಿಂಸೆಗೆ ಒಳಗಾಗುತ್ತಿರುವ ಕ್ರೈಸ್ತರು
ಪ್ರಧಾನ ಗುರು ಕೊಚ್ ಅವರು ಇಂದಿನ ಹಿಂಸಾಚಾರದ ವಾಸ್ತವಿಕತೆಯತ್ತವೂ ಗಮನ ಸೆಳೆದರು. ಕಳೆದ ಶತಮಾನದಲ್ಲಿ ಸಮಗ್ರಾಧಿಕಾರ ವ್ಯವಸ್ಥೆಗಳು ಕುಸಿದಿದ್ದರೂ, ಅನೇಕ ಕ್ರೈಸ್ತ ಸಮುದಾಯಗಳು ಇನ್ನೂ ಹಿಂಸೆ ಮತ್ತು ಭೇದಭಾವವನ್ನು ಎದುರಿಸುತ್ತಿವೆ ಎಂದು ಅವರು ಹೇಳಿದರು.
ಆದರೂ, ಟೆರ್ಥುಲ್ಲಿಯನ್ ಅವರ ಮಾತುಗಳನ್ನು ಸ್ಮರಿಸುತ್ತಾ, “ರಕ್ತಸಾಕ್ಷಿಗಳ ರಕ್ತವೇ ಕ್ರೈಸ್ತರ ಬೀಜ” ಎಂದು ಅವರು ದೃಢಪಡಿಸಿದರು. ಇಂದಿನ ಸಾಕ್ಷಿಗಳು ಭವಿಷ್ಯದಲ್ಲಿ ಕ್ರಿಸ್ತನ ದೇಹದಲ್ಲಿ ಐಕ್ಯತೆಯನ್ನು ಬೆಳೆಸಲಿ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.
ಐಕ್ಯತೆ ಮತ್ತು ಶಾಂತಿಯತ್ತ ಮಾರ್ಗ
ಈ ಆಚರಣೆ, ರಕ್ತಸಾಕ್ಷಿಗಳ ಉದಾಹರಣೆ ಮತ್ತು ಅವರ ಮಧ್ಯಸ್ಥಿಕೆ ಕ್ರೈಸ್ತರನ್ನು ಸಂಪೂರ್ಣ ಸಹಭಾಗಿತ್ವದತ್ತ ನಡೆಸಲಿ ಹಾಗೂ ಎಲ್ಲ ವಿಶ್ವಾಸಿಗಳು ಒಂದೇ ಪಾತ್ರೆಯಲ್ಲಿ ಪಾಲುಗೊಳ್ಳುವ ದಿನವನ್ನು ಶೀಘ್ರಗೊಳಿಸಲಿ ಎಂಬ ಪ್ರಾರ್ಥನೆಯೊಂದಿಗೆ ಸಮಾಪ್ತಿಯಾಯಿತು.
ಆಧುನಿಕ ರಕ್ತಸಾಕ್ಷಿಗಳ ಸ್ಮರಣೆಯೊಂದಿಗೆ ದೀರ್ಘಕಾಲದಿಂದ ಸಂಬಂಧ ಹೊಂದಿರುವ ಸಂತ ಬಾರ್ತಲೋಮಿಯೋ ಬಸಿಲಿಕಾ, ಮತ್ತೊಮ್ಮೆ ಸ್ಮರಣೆ ಮತ್ತು ಭರವಸೆಯ ಸ್ಥಳವಾಗಿ ಪರಿಣಮಿಸಿತು. ಅಲ್ಲಿ ಭೂತಕಾಲ ಮತ್ತು ವರ್ತಮಾನದಲ್ಲಿನ ಸಾಕ್ಷಿಗಳ ನೋವು ಮತ್ತು ನಂಬಿಕೆ ಧರ್ಮಸಭೆಯ ಐಕ್ಯತೆ ಮತ್ತು ಶಾಂತಿಯತ್ತ ಪ್ರಯಾಣಕ್ಕೆ ನಿರಂತರವಾಗಿ ಪ್ರೇರಣೆಯಾಗುತ್ತಿವೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).