ಹುಡುಕಿ

2027ರ ವಿಶ್ವ ಯುವ ದಿನದ ಪಾಲಕ ಸಂತರು 2027ರ ವಿಶ್ವ ಯುವ ದಿನದ ಪಾಲಕ ಸಂತರು 

ದಕ್ಷಿಣ ಕೊರಿಯಾದ ರಾಜಧಾನಿ ಸೋಲ್‌ನಲ್ಲಿ 2027ರ ವಿಶ್ವ ಯುವ ದಿನದ ಪಾಲಕ ಸಂತರ ಪಟ್ಟಿಯ ಘೋಷಣೆ

ವಿಶ್ವ ಯುವ ದಿನ 2027ರ ಆಯೋಜಕರು, ಹಿಂಸೆ, ವಲಸೆ ಮತ್ತು ಸಾಮಾಜಿಕ ಹೋರಾಟಗಳನ್ನು ಪ್ರತಿಬಿಂಬಿಸುವ ಜೀವನವನ್ನು ನಡೆಸಿದ ಐವರು ಸಂತರನ್ನು ಪಾಲಕರಾಗಿ ಘೋಷಿಸಿದ್ದು, ಜಾಗತಿಕ ಸಮಾವೇಶಕ್ಕೆ ಸಿದ್ಧಗೊಳ್ಳುತ್ತಿರುವ ಯುವಜನರಿಗೆ ಅವರನ್ನು ಮಾರ್ಗದರ್ಶಕರನ್ನಾಗಿ ಪರಿಚಯಿಸಿದ್ದಾರೆ.

LiCAS ವರದಿ

ವಿಶ್ವ ಯುವ ದಿನ 2027ರ ಸೋಲ್ ಸ್ಥಳೀಯ ಆಯೋಜನಾ ಸಮಿತಿ (LOC), ಈ ಕಾರ್ಯಕ್ರಮದ “ಸತ್ಯ, ಪ್ರೀತಿ ಮತ್ತು ಶಾಂತಿ” ಎಂಬ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಐದು ಪಾಲಕ ಸಂತರುಗಳನ್ನು ಆಯ್ಕೆ ಮಾಡಿರುವುದಾಗಿ ಘೋಷಿಸಿದೆ.

ಈ ಪಟ್ಟಿಯಲ್ಲಿ ವಿಶ್ವ ಯುವ ದಿನದ ಸ್ಥಾಪಕರಾದ ಜಗದ್ಗುರು ಸಂತ ದ್ವಿತೀಯ ಜಾನ್ ಪಾಲ್; ಪ್ರಾರಂಭಿಕ ಕೊರಿಯಾ ಧರ್ಮಸಭೆಯ ರಕ್ತಸಾಕ್ಷಿಗಳಾದ ಸಂತ ಆಂದ್ರೇ ಕಿಮ್ ತೇಗೋನ್ ಹಾಗೂ ಅವರ ಸಹಚರರು; ವಲಸಿಗರ ಸೇವೆಗೆ ಹೆಸರಾಗಿರುವ ಸಂತ ಫ್ರಾನ್ಸಿಸ್ ಜೇವಿಯರ್ ಕಬ್ರಿನಿ; ಸಂಕಷ್ಟದ ನಡುವೆ ವಿಶ್ವಾಸವನ್ನು ತೋರಿದ ಜೀವನಕ್ಕಾಗಿ ಪ್ರಸಿದ್ಧರಾದ ಸಂತ ಜೋಸೆಫಿನ್ ಬಾಖಿತಾ; ಮತ್ತು ಡಿಜಿಟಲ್ ಯುಗದ ಶುಭಸಂದೇಶ ಪ್ರಚಾರ ಕಾರ್ಯದೊಂದಿಗೆ ಸಂಬಂಧ ಹೊಂದಿರುವ ಸಂತ ಕಾರ್ಲೋ ಅಕುಟಿಸ್ ಸೇರಿದ್ದಾರೆ.

ಒಟ್ಟಾಗಿ ನೋಡಿದರೆ, ಈ ಸಂತರು ಖಂಡಗಳನ್ನೂ ಪೀಳಿಗೆಗಳನ್ನೂ ದಾಟಿದವರು; ಯುದ್ಧ, ಸ್ಥಳಾಂತರ, ದಾಸ್ಯ ಮತ್ತು ಆಧುನಿಕ ಸಂಸ್ಕೃತಿಯ ಸವಾಲುಗಳಿಂದ ರೂಪುಗೊಂಡ ಬದುಕನ್ನು ಜೀವಿಸಿದವರು—ಇವು ಇಂದಿನ ಅನೇಕ ಯುವಜನರು ಎದುರಿಸುತ್ತಿರುವ ವಾಸ್ತವಿಕತೆಗಳೊಂದಿಗೆ ಪ್ರತಿಧ್ವನಿಸುತ್ತವೆ ಎಂದು ಆಯೋಜಕರು ಹೇಳಿದ್ದಾರೆ.

ಈ ಆಯ್ಕೆ ಪ್ರಕ್ರಿಯೆ 2024ರ ಕೊನೆಯ ಭಾಗದಲ್ಲಿ ಆರಂಭವಾಗಿ, ಯುವಜನರು, ಯುವ ಕಾರ್ಯಕರ್ತರು ಮತ್ತು ಧಾರ್ಮಿಕಪಾಲನಾ ಸೇವಕರ ರಾಷ್ಟ್ರವ್ಯಾಪಿ ಸಮೀಕ್ಷೆಯನ್ನು ಒಳಗೊಂಡಿತ್ತು. ನಂತರ, ಸ್ಥಳೀಯ ಆಯೋಜನಾ ಸಮಿತಿಯ ಚರ್ಚೆಯ ಮೂಲಕ ಅಂತಿಮ ಆಯ್ಕೆ ಮಾಡಲಾಗಿದೆ.

ನಂತರ, ಯುವ ಸ್ವಯಂಸೇವಕರ ಒಂದು ಗುಂಪು ಎರಡು ತಿಂಗಳುಗಳ ಕಾಲ ಈ ಸಂತರುಗಳ ಜೀವನ ಮತ್ತು ಆಧ್ಯಾತ್ಮಿಕತೆಯನ್ನು ಅಧ್ಯಯನ ಮಾಡಿ, ಚಿಂತನೆ ಮತ್ತು ಸಂವಾದದ ಮೂಲಕ ಪ್ರಾರ್ಥನೆಗಳು ಹಾಗೂ ಪ್ರತೀಕಾತ್ಮಕ ನಿರೂಪಣೆಯನ್ನು ಸಿದ್ಧಪಡಿಸಿದರು.

ಜನಸಾಮಾನ್ಯರ, ಕುಟುಂಬ ಮತ್ತು ಜೀವನದ ವಿಭಾಗದ ಆಡಳಿತಾಧಿಕಾರಿಯಾಗಿರುವ ಕಾರ್ಡಿನಲ್ ಕೆವಿನ್ ಫರ್ರೆಲ್, ಪಾಲಕ ಸಂತರು ಈ ಕಾರ್ಯಕ್ರಮದ ಆಧ್ಯಾತ್ಮಿಕ ಸಿದ್ಧತೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ ಎಂದು ಹೇಳಿದರು.

“ಪ್ರತಿ ವಿಶ್ವ ಯುವ ದಿನದ ಸಿದ್ಧತೆಯಲ್ಲಿ ಪಾಲಕ ಸಂತರು ಮೂಲಭೂತ ಪಾತ್ರವಹಿಸುತ್ತಾರೆ. ಅವರು ಯುವಜನರು, ತರಬೇತುದಾರರು ಮತ್ತು ಧಾರ್ಮಿಕ ಸೇವಕರನ್ನು ದೇವರ ಕರೆಯ ವರವನ್ನು ಕುರಿತು ಚಿಂತಿಸಲು ಆಹ್ವಾನಿಸುತ್ತಾರೆ; ನಮ್ಮ ದೀಕ್ಷಾಸ್ನಾನ, ಯಾಜಕ, ಧಾರ್ಮಿಕ ಮತ್ತು ವೈವಾಹಿಕ ವೃತ್ತಿಗಳ ಕುರಿತು ಧ್ಯಾನಿಸಲು ಪ್ರೇರೇಪಿಸುತ್ತಾರೆ. ಜಗತ್ತನ್ನು ಜಯಿಸಿದ ಕ್ರಿಸ್ತನನ್ನು ಅನುಸರಿಸುವಲ್ಲಿ ಉದಾರತೆ ಮತ್ತು ಧೈರ್ಯದಿಂದ ಪ್ರತಿಕ್ರಿಯಿಸಲು ಅವರು ನಮ್ಮನ್ನು ಉತ್ತೇಜಿಸುತ್ತಾರೆ—ಇದನ್ನೇ ಮುಂಬರುವ ವಿಶ್ವ ಯುವ ದಿನದ ವಿಷಯವೂ ನಮಗೆ ನೆನಪಿಸುತ್ತದೆ,” ಎಂದು ಅವರು ಹೇಳಿದರು.

“ಈ ಪಾಲಕ ಸಂತರುಗಳ ಸಾಕ್ಷ್ಯವು, ಜಗತ್ತಿನಾದ್ಯಂತದ ಯುವಜನರಿಗೆ—ವಿಶೇಷವಾಗಿ ಸಂಕಷ್ಟಗಳು ಮತ್ತು ಹಿಂಸಾಚಾರದಿಂದ ಕೂಡಿದ ಪರಿಸ್ಥಿತಿಗಳಲ್ಲಿ ಬದುಕುತ್ತಿರುವವರಿಗೆ—ಪರಿಶುದ್ಧತೆ ಎಂಬುದು ದೂರದ ಆದರ್ಶವಲ್ಲ ಎಂಬುದನ್ನು ಅರಿಯಲು ಪ್ರೇರಣೆ ನೀಡಲಿ; ಅವರು ತಮ್ಮ ದೃಷ್ಟಿಯನ್ನು ಕ್ರಿಸ್ತನ ಮೇಲೆ ನೆಟ್ಟು, ಅವರ ಕರೆಗೆ ಉದಾರವಾಗಿ ಪ್ರತಿಕ್ರಿಯಿಸಲು ಧೈರ್ಯ ಹೊಂದಲಿ” ಎಂದು ಕಾರ್ಡಿನಲ್ ಫರ್ರೆಲ್ ಪ್ರಾರ್ಥಿಸಿದರು.

ಆಯೋಜನಾ ಸಮಿತಿಯ ಅಧ್ಯಕ್ಷರಾದ ಪೀಟರ್ ಸೂನ್-ತೈಕ್ ಚುಂಗ್, ಈ ಸಂತರು ಯುವಜನರಿಗೆ ಸ್ಪಷ್ಟ ಮಾದರಿಗಳಾಗಿದ್ದಾರೆ ಎಂದು ಹೇಳಿದರು. “ಈ ಪಾಲಕ ಸಂತರು ಖಂಡಗಳಲ್ಲೂ ಪೀಳಿಗೆಗಳಲ್ಲೂ ವ್ಯಾಪಿಸಿದ್ದಾರೆ; ಪ್ರತಿಯೊಬ್ಬ ಸಂತರೂ ಯುವಜನರು ಇಂದಿನ ದಿನಗಳಲ್ಲಿ ಎದುರಿಸುತ್ತಿರುವ ವಾಸ್ತವಿಕ ಪರಿಸ್ಥಿತಿಗಳ ಮಧ್ಯದಲ್ಲಿಯೂ ವಿಶ್ವಾಸದಲ್ಲಿ ಹೇಗೆ ಬದುಕಬೇಕು ಎಂಬುದಕ್ಕೆ ಸ್ಪಷ್ಟವಾದ ಮಾರ್ಗವನ್ನು ತೋರಿಸುತ್ತಾರೆ, ಯುವಜನರು ಈ ಸಂತರುಗಳಲ್ಲಿ ತಮ್ಮ ಜೀವನಕ್ಕೆ ಮಾದರಿಗಳನ್ನು ಕಂಡುಕೊಂಡು, ವಿಶ್ವ ಯುವ ದಿನದ ಸಿದ್ಧತಾ ಯಾತ್ರೆಯ ಮೂಲಕ ಅವರೊಂದಿಗೆ ಆಳವಾದ ಆಧ್ಯಾತ್ಮಿಕ ಬಾಂಧವ್ಯವನ್ನು ಬೆಳೆಸಿಕೊಳ್ಳಲಿ ಎಂದು ನಾನು ಆಶಿಸುತ್ತೇನೆ" ಎಂದು ತಮ್ಮ ಬಿನ್ನಹವನ್ನು ವ್ಯಕ್ತಪಡಿಸಿದರು.

ಆಯೋಜಕರು, 2027ರ ಸಮಾವೇಶದ ಮುನ್ನ ಸಂತರುಗಳನ್ನು ಅಧಿಕೃತ ವೇದಿಕೆಗಳ ಮೂಲಕ ಪರಿಚಯಿಸುವ ಕಾರ್ಯವನ್ನು ಮುಂದುವರಿಸಿ, ಯುವಜನರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳನ್ನು ರೂಪಿಸುವುದಾಗಿ ತಿಳಿಸಿದ್ದಾರೆ.

“ನಿಮ್ಮ ಪಾಲಕ ಸಂತರನ್ನು ಪರಿಚಯಿಸಿಕೊಳ್ಳಿ!” ಎಂಬ ಶೀರ್ಷಿಕೆಯೊಂದಿಗಿನ ವಿಶಿಷ್ಟ ಸಂವಾದಾತ್ಮಕ ಚಟುವಟಿಕೆಯನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ ಬಳಕೆದಾರರು ಕೆಲವು ಪ್ರಶ್ನೆಗಳಿಗೆ ಉತ್ತರಿಸಿ, ಐದು ಸಂತರುಗಳಲ್ಲಿ ತಮ್ಮೊಂದಿಗೆ ಹೆಚ್ಚು ಹೊಂದಾಣಿಕೆಯಿರುವ ಸಂತರನ್ನು ಕಂಡುಕೊಳ್ಳಲು ಅವಕಾಶ ನೀಡಲಾಗಿದೆ.

ಈ ಲೇಖನವು ಮೂಲತಃ https://www.licas.news  ನಲ್ಲಿ ಪ್ರಕಟಿಸಲಾಗಿದೆ. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಮೂರನೇ ವ್ಯಕ್ತಿಗಳಿಂದ ಅನುಮತಿಯಿಲ್ಲದೆ ಮರುಪ್ರಕಟನೆ ಮಾಡಲು ಅನುಮತಿ ಇಲ್ಲ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

27 ಏಪ್ರಿಲ್ 2026, 17:53