ಜೀವನದ ‘ಅಲ್ಗಾರಿದಮೀಕರಣ’ ಮತ್ತು ಮಾನವ ಘನತೆಯ ಸಂರಕ್ಷಣೆ
ಲೇಖಕರು: ಬ್ರೂನೊ ಜಿಯುಸ್ಸಾನಿ*
ನಮ್ಮ ದೈನಂದಿನ ಜೀವನದಲ್ಲಿ ಎಷ್ಟು ಅಲ್ಗಾರಿದಮ್‌ಗಳು ಭಾಗವಾಗಿವೆ? ಎಷ್ಟು ಸಂವೇದಕಗಳು? ಎಷ್ಟು ಪರದೆಗಳು?
ವಿವಿಧ ರೀತಿಯ ಪರದೆಗಳು ಮತ್ತು ಡಿಜಿಟಲ್ ಸಂಪರ್ಕ ವ್ಯವಸ್ಥೆಗಳೊಂದಿಗೆ ಸಂವಹನ ನಡೆಸುವುದು, ಇಂದು ನಮ್ಮ ಬಹುತೇಕರ ಪ್ರಮುಖ ಚಟುವಟಿಕೆಯಾಗಿಬಿಟ್ಟಿದೆ.
ಆದರೆ, ಈ ಸಂವಹನಗಳಲ್ಲಿ ಎಷ್ಟು ನಿಜವಾದ ಆಯ್ಕೆಯ ಫಲಿತಾಂಶವಾಗಿವೆ? ಇದು ಈಗ ಕೇವಲ ಅಭ್ಯಾಸವಲ್ಲ; ನಿಧಾನವಾಗಿ ಬದುಕಿನ ಒಂದು ಪರಿಸ್ಥಿತಿಯಾಗಿದೆ. ನಮ್ಮ ಸಮಾಜವು ಹೆಚ್ಚಾಗಿ ಅಲ್ಗಾರಿದಮ್‌ಗಳು ಮತ್ತು ಡಿಜಿಟಲ್ ಜಾಲಗಳ ಸುತ್ತ ನಿರ್ಮಿತವಾಗುತ್ತಿದೆ. ಅವೇ ಸಮಾಜದ ರೂಪರೇಖೆಗಳನ್ನೂ ಚಲನಶೀಲತೆಯನ್ನೂ ನಿರ್ಧರಿಸುತ್ತಿವೆ.
ಇದು ಸಾರ್ವಜನಿಕ ಚರ್ಚೆ, ರಾಜಕೀಯ ನಿರ್ಧಾರ ಅಥವಾ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳ ಮೂಲಕ ಸಂಭವಿಸಿರುವುದಿಲ್ಲ. ಬದಲಾಗಿ, ವಾಣಿಜ್ಯ ವ್ಯವಸ್ಥೆಗಳ ಪರಿಣಾಮವಾಗಿ — ಮತ್ತು ತಂತ್ರಜ್ಞಾನಗಳನ್ನು ವಿಮರ್ಶಾತ್ಮಕ ಚಿಂತನೆಯಿಲ್ಲದೆ, ಅತಿಯಾದ ಆತುರದಿಂದ ಅಳವಡಿಸಿಕೊಂಡ ಪರಿಣಾಮವಾಗಿ ರೂಪುಗೊಂಡಿದೆ. ಆದರೆ, ಇವು ಕೇವಲ ತಂತ್ರಜ್ಞಾನಗಳಲ್ಲ; ಇವು ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳನ್ನೇ ಮರುರೂಪಿಸುತ್ತಿವೆ.
ಜೀವನದ ಈ “ಅಲ್ಗಾರಿದಮೀಕರಣ” ಕೆಲವು ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತದೆ. ಈ ವ್ಯವಸ್ಥೆಗಳನ್ನು ನಿಯಂತ್ರಿಸುವವರು ಯಾರು? ಅವು ಯಾವ ಮೌಲ್ಯಗಳು ಮತ್ತು ತರ್ಕಗಳನ್ನು ಮುಂದಿಟ್ಟುಕೊಳ್ಳುತ್ತವೆ? ಯಾವುದನ್ನು ಹೊರತುಪಡಿಸುತ್ತವೆ? ಮಾನವರಾಗಿ ನಮ್ಮ ಸ್ವಾಯತ್ತತೆಯ ಮೇಲೆ ಇದರ ಪರಿಣಾಮವೇನು? ಮತ್ತಷ್ಟು ಗಂಭೀರವಾದ ಪ್ರಶ್ನೆಯೇನೆಂದರೆ — ಈ ಪ್ರಶ್ನೆಗಳನ್ನೇ ಕೇಳುವ ಸಾಮರ್ಥ್ಯವನ್ನು ನಾವು ಇನ್ನೂ ಉಳಿಸಿಕೊಂಡಿದ್ದೇವೆಯೇ? ಅಥವಾ ನಮ್ಮನ್ನು ಸುತ್ತುವರಿದಿರುವ ಗಣಕಯಂತ್ರ ಕೋಡ್‌ಗಳಲ್ಲೇ ಉತ್ತರಗಳು ಈಗಾಗಲೇ ಬರೆಯಲ್ಪಟ್ಟಿರುವ ಲೋಕದಲ್ಲಿ ಬದುಕಲು ನಾವು ನಿಧಾನವಾಗಿ ಹೊಂದಿಕೊಳ್ಳುತ್ತಿದ್ದೇವೆಯೇ?
ಮೇ 17ರಂದು ಆಚರಿಸಲಾದ 60ನೇ ವಿಶ್ವ ಸಾಮಾಜಿಕ ಸಂವಹನ ದಿನಕ್ಕಾಗಿ ತಮ್ಮ ಆಳವಾದ ಸಂದೇಶದಲ್ಲಿ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು, “ನಮ್ಮ ಸವಾಲು ತಾಂತ್ರಿಕವಲ್ಲ; ಅದು ಮಾನವಶಾಸ್ತ್ರೀಯವಾಗಿದೆ” ಎಂದು ಬರೆದಿದ್ದಾರೆ.ಸರಳವಾಗಿ ಕಾಣುವ ಈ ಒಂದು ವಾಕ್ಯವೇ, ಮುಂದುವರಿಯುತ್ತಿರುವ ಡಿಜಿಟಲ್ ತಂತ್ರಜ್ಞಾನಗಳ ಎದುರು — ವಿಶೇಷವಾಗಿ ಕೃತಕ ಬುದ್ಧಿಮತ್ತೆಯ ಎದುರು — ನಾವು ಅನುಭವಿಸಬೇಕಾದ ಆಳ, ಅಸ್ವಸ್ಥತೆ ಮತ್ತು ಜವಾಬ್ದಾರಿಯನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುತ್ತದೆ.
ಇನ್ನೂ ಅನೇಕರು ಈ ತಂತ್ರಜ್ಞಾನಗಳನ್ನು ಕೇವಲ ಇರುವ ಪ್ರಕ್ರಿಯೆಗಳನ್ನು ಸರಳಗೊಳಿಸುವ ಮತ್ತು ವೇಗಗೊಳಿಸುವ ಸಾಧನಗಳೆಂದು ಮಾತ್ರ ನೋಡುತ್ತಾರೆ. ಆದರೆ ಕಳೆದ ಎರಡು ದಶಕಗಳಲ್ಲಿ — ಮೊದಲಿಗೆ ನಿಧಾನವಾಗಿ, ನಂತರ ವೇಗವಾಗಿ — ಸಾಮಾಜಿಕ ಜಾಲತಾಣಗಳಿಂದ ವಾಣಿಜ್ಯ ವ್ಯವಸ್ಥೆಗಳವರೆಗೆ ಈ ತಂತ್ರಜ್ಞಾನಗಳು “ವೇದಿಕೆ”ಗಳಾಗಿ ರೂಪಾಂತರಗೊಂಡಿವೆ. ಇವು ನಮ್ಮ ಜೀವನ ಮತ್ತು ಕಾರ್ಯಚಟುವಟಿಕೆಗಳು ನಡೆಸುವ ಅದೃಶ್ಯ ವಾಸ್ತುಶಿಲ್ಪಿಗಳಾಗಿವೆ. ಸಾಮಾಜಿಕ ಮತ್ತು ವೃತ್ತಿಜೀವನದಲ್ಲಿ ಪಾಲ್ಗೊಳ್ಳುವ ನಮ್ಮ ಸಾಮರ್ಥ್ಯವೂ ಹೆಚ್ಚಾಗಿ ಅವುಗಳ ಮೇಲೆ ಅವಲಂಬಿತವಾಗಿದೆ.
ಮೂರುವರೆ ವರ್ಷಗಳ ಹಿಂದೆ ಬಂದ ಸೃಜನಾತ್ಮಕ ಕೃತಕ ಬುದ್ಧಿಮತ್ತೆ !ಜನರೇಟಿವ್ ಕೃತಕ ಬುದ್ಧಿಮತ್ತೆ) — ಅಂದರೆ, ನಾವು ಬರೆಯುವ ಅಥವಾ ಮಾತನಾಡುವ ಮೂಲಕ ಸಂವಹನ ನಡೆಸುವ ಚಾಟ್‌ಬಾಟ್‌ಗಳು — ಮಾನವ ತರ್ಕವನ್ನು ತಾಂತ್ರಿಕ ತರ್ಕದಿಂದ ಬದಲಿಸುವ ಪ್ರಕ್ರಿಯೆಯನ್ನು ಇನ್ನಷ್ಟು ವೇಗಗೊಳಿಸಿವೆ.
ಈಗ “ಕೃತಕ ಬುದ್ಧಿಮತ್ತೆ ಪ್ರತಿನಿಧಿಗಳು” ಹರಡಲು ಆರಂಭಿಸಿವೆ. ಇವು ಹೆಚ್ಚಿನ ಸ್ವಾಯತ್ತತೆಯನ್ನು ಹೊಂದಿರುವ ವ್ಯವಸ್ಥೆಗಳಾಗಿದ್ದು, ಬಳಕೆದಾರರಿಂದ ವಿವರವಾದ ಸೂಚನೆಗಳಿಲ್ಲದೆ ವಿವಿಧ ಸಂಕೀರ್ಣ ಕಾರ್ಯಗಳನ್ನು ನಿರ್ವಹಿಸಬಲ್ಲವು. ಏತನ್ಮಧ್ಯೆ,ಮಾನವ ಮೆದುಳು ಮತ್ತು ನರಮಂಡಲದೊಂದಿಗೆ ನೇರವಾಗಿ ಸಂಪರ್ಕ ಸಾಧಿಸುವ ನರತಂತ್ರಜ್ಞಾನಗಳೂ ಕಾಣಿಸಿಕೊಳ್ಳುತ್ತಿವೆ.
ಇದು ಬಹುದೂರದ ಭವಿಷ್ಯವಲ್ಲದ ಒಂದು ಲೋಕದ ಮುನ್ಸೂಚನೆ — ಅಲ್ಲಿ ಮಾನವರು ಮತ್ತು ಕೃತಕ ಅಸ್ತಿತ್ವಗಳು ಸಹಜೀವನ ನಡೆಸುತ್ತವೆ, ಪರಸ್ಪರ ಸಂವಹನ ನಡೆಸುತ್ತವೆ ಮತ್ತು ಒಟ್ಟಿಗೆ ವಿಕಸಿಸುತ್ತವೆ. ಈ ಬೆಳವಣಿಗೆಗಳು “ಸಾಮಾನ್ಯ” ಮತ್ತು “ಸ್ವೀಕಾರಾರ್ಹ” ಎನ್ನುವುದರ ಅರ್ಥವನ್ನೇ ನಿಧಾನವಾಗಿ ಮರುಪರಿಭಾಷಿಸುತ್ತಿವೆ. ಅವು ನಮ್ಮ ಸಮಾಜಗಳ ನೈತಿಕ ಮತ್ತು ನೀತಿಶಾಸ್ತ್ರೀಯ ದೃಶ್ಯವನ್ನೇ ರೂಪಿಸುತ್ತಿವೆ.
ವಾಸ್ತವವಾಗಿ, ಅಲ್ಗಾರಿದಮ್‌ಗಳು ತಟಸ್ಥವಲ್ಲ. ಅವು ನಿರ್ದಿಷ್ಟ ಗುರಿಗಳನ್ನು ಸಾಧಿಸುವಂತೆ ರೂಪಿಸಲ್ಪಟ್ಟಿವೆ — ಸಾಮಾನ್ಯವಾಗಿ ಆರ್ಥಿಕ ಗುರಿಗಳು: ಲಾಭ, ತೊಡಗಿಸಿಕೊಳ್ಳುವಿಕೆ, ಕಾರ್ಯಕ್ಷಮತೆ ಮತ್ತು ಸ್ಪರ್ಧೆ. ಕೆಲವೊಮ್ಮೆ ರಾಜಕೀಯ ಮತ್ತು ಸಾಂಸ್ಕೃತಿಕ ಉದ್ದೇಶಗಳನ್ನೂ ಅವು ಹೊತ್ತುಕೊಂಡಿರುತ್ತವೆ.
ಈ ಪ್ರಕ್ರಿಯೆಯಲ್ಲಿ, ಯಾವುದು ಸರಿಯಾದುದು, ಯಾವುದು ಅಪೇಕ್ಷಣೀಯ, ಯಾವುದು ಅಗತ್ಯ ಎಂಬುದರ ವ್ಯಾಖ್ಯಾನವೇ ಮರುಹೊಂದಿಸಲಾಗುತ್ತಿದೆ. ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಮಾತುಗಳಲ್ಲಿ ಹೇಳುವುದಾದರೆ, ಇವು “ಮಾನವ ನಾಗರಿಕತೆಯ ಕೆಲವು ಮೂಲಭೂತ ಸ್ತಂಭಗಳನ್ನೇ ಬದಲಿಸುತ್ತಿವೆ.”
ಸ್ವೀಕಾರಾರ್ಹ ಮತ್ತು ಅಸ್ವೀಕಾರಾರ್ಹದ ನಡುವಿನ ಗಡಿ, ಜಾಗೃತ ನಿರ್ಧಾರಗಳ ಮೂಲಕವಲ್ಲ; ಬದಲಾಗಿ, ತಂತ್ರಜ್ಞಾನವು ಅನುಕೂಲಕರ, ಗೋಚರ ಮತ್ತು ಮೌಲ್ಯಯುತವೆಂದು ತೋರಿಸುವುದನ್ನು ನಿಷ್ಕ್ರಿಯವಾಗಿ ಒಪ್ಪಿಕೊಳ್ಳುವ ಮೂಲಕ ನಿಧಾನವಾಗಿ ಸರಿಯುತ್ತಿದೆ. ಹೀಗೆ, ಸಮಾಜವು ಅಲ್ಗಾರಿದಮ್‌ಗಳ ಮೂಲಕ ಮರುಕಾರ್ಯಕ್ರಮಗೊಳ್ಳುತ್ತಿದೆ.
ಹೀಗಾಗಿ, ಮೂಲ ಪ್ರಶ್ನೆಯೇನೆಂದರೆ: ಈ ಹೊಸ ಸಮಾಜದ ನಿಯಮಗಳನ್ನು ನಿರ್ಧರಿಸುವವರು ಯಾರು? ಸಾಮಾಜಿಕ, ಆರ್ಥಿಕ ಮತ್ತು ನೈತಿಕ ಚಲನಶೀಲತೆಗಳು ಕೆಲವೇ ದೊಡ್ಡ ಕಂಪನಿಗಳು ಅಥವಾ ಸರ್ಕಾರಗಳ ನಿಯಂತ್ರಣದಲ್ಲಿರುವ ಸ್ವಯಂಚಾಲಿತ ವ್ಯವಸ್ಥೆಗಳ ಮೂಲಕ ನಿರ್ಧರಿಸಲ್ಪಡುತ್ತಿದ್ದರೆ, ವೈಯಕ್ತಿಕ ಮತ್ತು ಸಾಮೂಹಿಕ ಆಯ್ಕೆಗೆ ಎಷ್ಟು ಸ್ಥಳ ಉಳಿಯುತ್ತದೆ?
ಬಹುತೇಕರಿಗೆ ಅರ್ಥವಾಗದ ಯಂತ್ರಗಳು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ, ನ್ಯಾಯ, ಸಮಾನತೆ ಮತ್ತು ಘನತೆಯನ್ನು ಹೇಗೆ ಖಚಿತಪಡಿಸಬಹುದು? ಅಲ್ಗಾರಿದಮ್ ಆಧಾರಿತ ಮರುಕಾರ್ಯಕ್ರಮಗೊಳಿಸುವಿಕೆ ಅನಿವಾರ್ಯ ವಿಧಿಯಲ್ಲ. ಆದರೆ, ಅದನ್ನು ತುರ್ತಾಗಿ ಅರ್ಥಮಾಡಿಕೊಳ್ಳಬೇಕು, ವಿಮರ್ಶಾತ್ಮಕವಾಗಿ ಚರ್ಚಿಸಬೇಕು ಮತ್ತು ಅಗತ್ಯವಿದ್ದರೆ ಪ್ರತಿರೋಧಿಸಬೇಕು.
“ನಮ್ಮಲ್ಲಿ ಪ್ರತಿಯೊಬ್ಬರೂ ಬದಲಾಯಿಸಲಾಗದ ಮತ್ತು ಅನುಕರಿಸಲಾಗದ ಒಂದು ಕರೆಯನ್ನು ಹೊಂದಿದ್ದೇವೆ; ಅದು ನಮ್ಮ ಬದುಕಿನ ಅನುಭವದಿಂದ ಹುಟ್ಟಿಕೊಂಡಿದ್ದು, ಇತರರೊಂದಿಗೆ ಸಂವಹನದಲ್ಲಿ ವ್ಯಕ್ತವಾಗುತ್ತದೆ,” ಎಂದು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಬರೆಯುತ್ತಾರೆ.
ಈ ಸಂವಹನದ ವಲಯದಲ್ಲೇ ನಮ್ಮ ಮಾನವೀಯತೆ ವ್ಯಕ್ತವಾಗುತ್ತದೆ ಮತ್ತು ಗುರುತಿಸಲ್ಪಡುತ್ತದೆ. ಆದರೆ, ಯೋಚನೆ ಮತ್ತು ಮಾತುಗಳನ್ನು ಅನುಕರಿಸಲು ನಿರ್ಮಿಸಲಾದ ಈ ಯಂತ್ರಗಳು, ಅನುಮತಿ ಕೇಳದೆ ಇದೇ ವಲಯಕ್ಕೆ ಪ್ರವೇಶಿಸುತ್ತಿವೆ. ಅವು “ಸ್ನೇಹಿತರ” ರೂಪದಲ್ಲಿ ತಮ್ಮನ್ನು ಪರಿಚಯಿಸಿಕೊಂಡು, ನಮ್ಮ ಮತ್ತು ಇತರರ ನಡುವೆ, ಹಾಗೆಯೇ ನಮ್ಮ ಮತ್ತು ಜಗತ್ತಿನ ವಾಸ್ತವಿಕತೆಯ ನಡುವೆ ಮಧ್ಯವರ್ತಿಗಳಾಗಿ ತಲೆದೋರುತ್ತಿವೆ.
ಉತ್ಪಾದಕತೆ, ವೇಗ ಮತ್ತು ಲಾಭಕ್ಕೆ ಅತಿಯಾದ ಮಹತ್ವ ನೀಡುವ ಇಂದಿನ ಜಗತ್ತಿನಲ್ಲಿ, ಜನರೇಟಿವ್ ಕೃತಕ ಬುದ್ಧಿಮತ್ತೆ ನೀಡುತ್ತಿರುವ ಆಕರ್ಷಣೆ ಅತ್ಯಂತ ಪ್ರಬಲವಾಗಿದೆ. ಯೋಚಿಸುವುದು, ಕಲಿಯುವುದು, ಮೌಲ್ಯಮಾಪನ ಮಾಡುವುದು, ಬರೆಯುವುದು ಮತ್ತು ಸ್ವತಃ ನಿರ್ಧಾರ ತೆಗೆದುಕೊಳ್ಳುವ ಶ್ರಮವನ್ನು ಯಂತ್ರಗಳಿಗೆ ವಹಿಸುವ ಸಾಧ್ಯತೆಯೇ ಅದರ ದೊಡ್ಡ ಮೋಹವಾಗಿದೆ.
ಆದರೆ, ಈ ಹಸ್ತಾಂತರವು ಅಂತಿಮವಾಗಿ ನಮ್ಮ ಮಾನಸಿಕ ಮತ್ತು ಭಾವನಾತ್ಮಕ ಸಾಮರ್ಥ್ಯಗಳ ಕುಸಿತಕ್ಕೆ ಕಾರಣವಾಗಬಹುದು. ಇದು ಒಂದು ರೀತಿಯ “ಜ್ಞಾನಾತ್ಮಕ ಸಾಲ”ವನ್ನು ಸೃಷ್ಟಿಸುತ್ತದೆ. ಹೆಚ್ಚು ಹೆಚ್ಚು ಜನರು, ಜೀವನದ ನಿಜವಾದ ಅನುಭವವಿಲ್ಲದ — ನೋವು ಮತ್ತು ಸಂತೋಷಗಳನ್ನು ಅರಿಯದ ವ್ಯವಸ್ಥೆಗಳ ಮಾರ್ಗದರ್ಶನಕ್ಕೆ ಒಲವು ತೋರಬಹುದು. ಹೀಗೆ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು “ಚಿಂತಿಸದ ಚಿಂತನೆಗಳು” ಎಂದು ಕರೆಯುವ ಸಂಗತಿಗಳನ್ನು ಜನರು ನಿಷ್ಕ್ರಿಯವಾಗಿ ಸ್ವೀಕರಿಸುವ ಪರಿಸ್ಥಿತಿ ಎದುರಾಗಬಹುದು.
ಫ್ರೆಂಚ್ ಕಥೋಲಿಕ ಲೇಖಕ ಜಾರ್ಜ್ ಬೆರ್ನಾನೋಸ್ ಒಮ್ಮೆ ಹೇಳಿದಂತೆ, ಅಪಾಯವು ಯಂತ್ರಗಳ ಹೆಚ್ಚಳದಲ್ಲಿಲ್ಲ; ಬಾಲ್ಯದಿಂದಲೇ “ಯಂತ್ರಗಳು ನೀಡಬಲ್ಲದ್ದನ್ನು ಮಾತ್ರ ಬಯಸುವ” ಜನರ ಸಂಖ್ಯೆಯ ಹೆಚ್ಚಳದಲ್ಲಿದೆ.
1944ರಲ್ಲಿ — “ಕೃತಕ ಬುದ್ಧಿಮತ್ತೆ” ಎಂಬ ಪರಿಕಲ್ಪನೆಯೇ ಹುಟ್ಟುವ ಹನ್ನೆರಡು ವರ್ಷಗಳ ಮುಂಚೆ — ಬರೆಯಲ್ಪಟ್ಟ ಈ ಮಾತುಗಳು ಇಂದು ಭವಿಷ್ಯವಾಣಿಯಂತಿವೆ. ಹೀಗಾಗಿ, ಅಪಾಯವು ಕೇವಲ ಅಲ್ಗಾರಿದಮ್‌ಗಳಲ್ಲ ಅಥವಾ ಅವುಗಳನ್ನು ನಿಯಂತ್ರಿಸುವವರಲ್ಲ; ಬದಲಾಗಿ, ನಮ್ಮ ಸ್ವಂತ ಸಾಮರ್ಥ್ಯಗಳನ್ನು ಉಪಯೋಗಿಸುವ ಅಭ್ಯಾಸವನ್ನು ನಾವು ನಿಧಾನವಾಗಿ ತ್ಯಜಿಸುತ್ತಿರುವುದಲ್ಲಿದೆ.
ಪೂಜ್ಯ ಜಗದ್ಗುರುಗಳು ತಮ್ಮ ಸಂದೇಶದಲ್ಲಿ ಹೇಳುವಂತೆ, ನಾವು “ಮುಖಗಳನ್ನೂ ಧ್ವನಿಗಳನ್ನೂ” ಸಂರಕ್ಷಿಸಬೇಕು. ಅಂದರೆ, ನಮ್ಮ “ವೈಶಿಷ್ಟ್ಯಪೂರ್ಣ” ಮತ್ತು “ಅನನ್ಯ” ಮಾನವೀಯತೆಯನ್ನು ನಾವು ರಕ್ಷಿಸಬೇಕು.
ಕೃತಕ ಬುದ್ಧಿಮತ್ತೆಯೊಂದಿಗೆ ಸಂವಹನ ನಡೆಸುವ ಅನುಭವ ಪ್ರತಿಯೊಬ್ಬರಿಗೂ ವಿಭಿನ್ನವಾಗಿದೆ. ಒಬ್ಬರಿಗೆ ಅದು ಸಮೃದ್ಧಿಕರವಾಗಿ ತೋರಿದರೆ, ಮತ್ತೊಬ್ಬರಿಗೆ ಅಸ್ಥಿರತೆಯ ಅನುಭವವಾಗಬಹುದು. ಕೆಲವರು ಅದರಲ್ಲಿ ಕ್ರಮವನ್ನು ಕಾಣಬಹುದು; ಇನ್ನು ಕೆಲವರು ಅಸ್ತವ್ಯಸ್ತತೆಯನ್ನು ಅನುಭವಿಸಬಹುದು.
ಆದರೆ, ಜಾಗೃತ ಮತ್ತು ಸಮೂಹ ಪ್ರಯತ್ನವಿಲ್ಲದೆ ಕೃತಕ ಬುದ್ಧಿಮತ್ತೆ ಸುರಕ್ಷಿತ, ಹಿತಕರ ಮತ್ತು ಸಾಮಾನ್ಯ ಹಿತಾಸಕ್ತಿಗೆ ಸೇವೆ ಸಲ್ಲಿಸುವ ರೀತಿಯಲ್ಲಿ ಬೆಳೆಯುವುದು ಅತೀ ಅಸಂಭವ.
ಹೀಗಾಗಿ, ತಂತ್ರಜ್ಞಾನ ತಜ್ಞರಾಗಿರಲಿ ಅಥವಾ ಆರಂಭಿಕರಾಗಿರಲಿ, ಅಭಿಮಾನಿಗಳಾಗಿರಲಿ ಅಥವಾ ಸಂಶಯಿಗಳಾಗಿರಲಿ — ನಮ್ಮೆಲ್ಲರೂ ಒಂದೇ ಜವಾಬ್ದಾರಿಯನ್ನು ಹಂಚಿಕೊಂಡಿದ್ದೇವೆ.
ಅಂದರೆ, ಮನುಷ್ಯರಿಗೂ ಸತ್ಯಕ್ಕೂ ಸೇವೆ ಮಾಡುವ ತಂತ್ರಜ್ಞಾನಗಳನ್ನು ನಾವು ಆಗ್ರಹಿಸಬೇಕು; ಮನುಷ್ಯರು ಮತ್ತು ಸತ್ಯವೇ ತಂತ್ರಜ್ಞಾನಗಳಿಗೆ ಸೇವೆ ಮಾಡುವಂತಾಗಬಾರದು. ಅವು ಅಧಿಕಾರದ ಸಾಧನಗಳಿಗಿಂತ ನ್ಯಾಯದ ಸಾಧನಗಳಾಗಿರಬೇಕು. ಸ್ವಾತಂತ್ರ್ಯ, ಸಮಾನತೆ ಮತ್ತು ಮಾನವೀಯ ವಿವೇಚನೆಯನ್ನು ರಕ್ಷಿಸಬೇಕು. ಪ್ರತಿಯೊಂದು ಪ್ರಶ್ನೆಗೂ ಅಲ್ಗಾರಿದಮ್ ಆಧಾರಿತ ಉತ್ತರ ಇರುವುದಿಲ್ಲ ಎಂಬುದನ್ನು ನಾವು ಅರಿಯಬೇಕು. ಹಾಗೆಯೇ, ಲೆಕ್ಕ ಹಾಕಬಹುದಾದ ಪ್ರತಿಯೊಂದೂ ಸರಿಯಾದದ್ದು, ಒಳ್ಳೆಯದ್ದು ಅಥವಾ ಅಪೇಕ್ಷಣೀಯವಾದದ್ದು ಅಲ್ಲ ಎಂಬುದನ್ನೂ ಒಪ್ಪಿಕೊಳ್ಳಬೇಕು. ನವೀನತೆಯನ್ನು, ಪ್ರತಿಯೊಬ್ಬ ಮಾನವನ ಘನತೆಯ ಮಾನದಂಡದ ಆಧಾರದ ಮೇಲೆಯೇ ಅಳೆಯಬೇಕು.
ಮತ್ತು ಪ್ರತಿಯೊಂದು ಅಲ್ಗಾರಿದಮ್, ಪ್ರತಿಯೊಂದು ಅಪ್ಲಿಕೇಶನ್ ಮತ್ತು ಪ್ರತಿಯೊಂದು ಪರದೆಯ ಹಿಂದೆ ನಮ್ಮ ಸಹಮಾನವರ ಮುಖಗಳೂ ಧ್ವನಿಗಳೂ ಇರುವುದನ್ನು ಎಂದಿಗೂ ಮರೆಯಬಾರದು.
*ಬ್ರೂನೊ ಜಿಯುಸ್ಸಾನಿ ಅವರು “ನಮ್ಮ ಮನಸ್ಸುಗಳು ಮುತ್ತಿಗೆಯಲ್ಲಿವೆ: ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಪ್ರಭಾವದಿಂದ ಹೇಗೆ ತಪ್ಪಿಸಿಕೊಳ್ಳುವುದು” ಎಂಬ ಕೃತಿಯ ಲೇಖಕರಾಗಿದ್ದಾರೆ. ಈ ಕೃತಿ 2026ರ ಜೂನ್‌ನಲ್ಲಿ ಪ್ರಕಟವಾಗಲಿದೆ. ಅವರು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ವಾಸಿಸುತ್ತಿದ್ದಾರೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).