ಹುಡುಕಿ

CHILE CHURCHES EPISCOPAL CHILE CHURCHES EPISCOPAL  (ANSA)

ಅಶಾಂತಿಯ ನಡುವೆ ‘ಹೆಚ್ಚಿನ ಸಂವಾದ ನೈತಿಕತೆ’ಗೆ ಚಿಲಿಯ ಧರ್ಮಾಧ್ಯಕ್ಷರ ಕರೆ

ಕಳೆದ ಕೆಲವು ತಿಂಗಳುಗಳಿಂದ ಚಿಲಿ ಕಾಡ್ಗಿಚ್ಚುಗಳು, ಪೊಲೀಸ್ ಮತ್ತು ವಿದ್ಯಾರ್ಥಿ ಪ್ರತಿಭಟನಾಕಾರರ ನಡುವಿನ ಘರ್ಷಣೆಗಳು ಹಾಗೂ ಸರ್ಕಾರದ ಬದಲಾವಣೆಗಳಂತಹ ಸಂಕಷ್ಟಗಳನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಚಿಲಿಯ ಧರ್ಮಾಧ್ಯಕ್ಷರ ಮಂಡಳಿಯ ಸ್ಥಾಯಿ ಸಮಿತಿಯು ಪ್ರಕಟಣೆ ಹೊರಡಿಸಿ, “ಪ್ರೀತಿ ಮತ್ತು ಐಕ್ಯತೆಯಲ್ಲಿ ರೂಪುಗೊಂಡ ಹೃದಯಗಳ” ಮೇಲೆ ನಿರ್ಮಿತವಾಗಿರುವ ಹೊಸ ಸಮಾಜಕ್ಕಾಗಿ ಕರೆ ನೀಡಿದೆ.

ಲೇಖಕರು: ಕೀಲ್ ಗಸ್ಸಿ

ಕೇವಲ ಎರಡು ತಿಂಗಳ ಹಿಂದೆ ಚಿಲಿಯ ಹೊಸ ಅಧ್ಯಕ್ಷರು ಅಧಿಕಾರ ಸ್ವೀಕರಿಸಿದ್ದರು. ಕಳೆದ ಕೆಲವು ವಾರಗಳಿಂದ ಉಚಿತ ಉನ್ನತ ಶಿಕ್ಷಣದ ಪ್ರವೇಶವನ್ನು ಮಿತಿಗೊಳಿಸುವ ಹೊಸ ನೀತಿಗಳ ವಿರುದ್ಧ ಪೊಲೀಸ್ ಮತ್ತು ವಿದ್ಯಾರ್ಥಿ ಪ್ರತಿಭಟನಾಕಾರರ ನಡುವೆ ಘರ್ಷಣೆಗಳು ನಡೆಯುತ್ತಿವೆ.

ಇದರ ಜೊತೆಗೆ, ದೇಶವು ಕಾಡ್ಗಿಚ್ಚುಗಳಿಂದ ಉಂಟಾದ ತುರ್ತು ಪರಿಸ್ಥಿತಿಗಳು ಮತ್ತು ಹೆಚ್ಚುತ್ತಿರುವ ವಲಸೆ ಸವಾಲುಗಳನ್ನೂ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಚಿಲಿಯ ಧರ್ಮಾಧ್ಯಕ್ಷರ ಮಂಡಳಿಯ ಸ್ಥಾಯಿ ಸಮಿತಿಯು ಮೇ 13ರಂದು “ಸಾಮಾಜಿಕ ಶಾಂತಿ ಮತ್ತು ರಾಜಕೀಯ ಸಂವಾದದ ಸ್ಥಾಪನೆ” ಎಂಬ ಶೀರ್ಷಿಕೆಯೊಂದಿಗೆ ಪ್ರಕಟಣೆಯನ್ನು ಬಿಡುಗಡೆ ಮಾಡಿತು.

ಆರು ಅಂಶಗಳಾಗಿ ವಿಭಾಗಿಸಲಾದ ಈ ಪ್ರಕಟಣೆಯಲ್ಲಿ, ಸಾಮಾಜಿಕ ಶಾಂತಿ, ಆಡಳಿತಗಾರರ ನೈತಿಕ ಹೊಣೆಗಾರಿಕೆ, ಸಾರ್ವಜನಿಕ ಜೀವನದ ಕುಸಿತ, ಸಂವಾದದ ಮಹತ್ವ, ದೇಶದ ಮೇಲಿನ ಪ್ರಸ್ತುತ ಪರಿಸ್ಥಿತಿಯ ಪರಿಣಾಮ ಹಾಗೂ ಆತ್ಮಿಕ ನವೀಕರಣದ ಅಗತ್ಯತೆಗಳನ್ನು ಒತ್ತಿಹೇಳಲಾಗಿದೆ.

ಶಾಂತಿಯೇ ಭವಿಷ್ಯದ ದಾರಿ

“ಸಾಮಾಜಿಕ ಶಾಂತಿ ಎಂದರೆ ಕೇವಲ ಹಿಂಸಾಚಾರದ ಅನುಪಸ್ಥಿತಿಯಲ್ಲ; ಅದು ನ್ಯಾಯ, ಪರಸ್ಪರ ಗೌರವ ಮತ್ತು ಒಟ್ಟಾಗಿ ಸಾಮಾನ್ಯ ಹಿತವನ್ನು ಹುಡುಕುವ ನಿಷ್ಠಾವಂತ ಮನೋಭಾವದ ಫಲವಾಗಿದೆ.”

ಚಿಲಿಯ ಧರ್ಮಾಧ್ಯಕ್ಷರ ಮಂಡಳಿಯ ಸ್ಥಾಯಿ ಸಮಿತಿಯು ತಮ್ಮ ಪ್ರಕಟಣೆಯಲ್ಲಿ ಮೊದಲನೆಯದಾಗಿ ಈ ವಿಚಾರವನ್ನು ಒತ್ತಿಹೇಳಿತು. “ನಿರಂತರ ವಿಭಜನೆ, ವೈಮನಸ್ಸು ಮತ್ತು ಪರಸ್ಪರ ತಿರಸ್ಕಾರಗಳಿಂದ ನಾಗರಿಕ ಸಹಬಾಳ್ವೆ ಕುಸಿದಿರುವಾಗ, ಯಾವುದೇ ದೇಶವೂ ನಿಜವಾದ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಿಲ್ಲ” ಎಂದು ಸಮಿತಿಯು ತಿಳಿಸಿದೆ. ಸಂತ ಅಗಸ್ಟಿನ್ ಅವರ ಮಾತುಗಳನ್ನು ಉಲ್ಲೇಖಿಸಿದ ಸಮಿತಿಯು, “ಒಂದು ನಗರದ ಶಾಂತಿ ಅದರ ನಾಗರಿಕರ ಸುವ್ಯವಸ್ಥಿತ ಸೌಹಾರ್ದತೆಯಿಂದ ಉದ್ಭವಿಸುತ್ತದೆ” (De civitate Dei, XIX, 13) ಎಂದು ನೆನಪಿಸಿತು.

ಈ ಸೌಹಾರ್ದತೆಯನ್ನು ಬೆಳೆಸಿದಾಗ, ನಗರದ ನೈತಿಕ, ಆತ್ಮಿಕ ಮತ್ತು ಸಾಂಸ್ಕೃತಿಕ ಅಡಿಪಾಯಗಳು ಬಲಗೊಳ್ಳುತ್ತವೆ. ಆದರೆ, ಈ ಸೌಹಾರ್ದತೆ ಕಳೆದುಹೋದಾಗ, ಅದರ ಭವಿಷ್ಯವೇ ಅಪಾಯಕ್ಕೆ ಸಿಲುಕುತ್ತದೆ ಎಂದು ಸಮಿತಿ ಎಚ್ಚರಿಸಿತು.

ಗಂಭೀರ ನೈತಿಕ ಹೊಣೆಗಾರಿಕೆ

ಸಾರ್ವಜನಿಕ ಅಧಿಕಾರಿಗಳು “ತಮ್ಮ ನಡೆ-ನುಡಿಗಳ ಮೂಲಕ ನಾಗರಿಕ ಜೀವನದ ಗೌರವವನ್ನು ಕಾಪಾಡುವ” ಗಂಭೀರ ನೈತಿಕ ಹೊಣೆಗಾರಿಕೆಯನ್ನು ಹೊಂದಿದ್ದಾರೆ ಎಂದು ಧರ್ಮಾಧ್ಯಕ್ಷರು ಒತ್ತಿಹೇಳಿದರು. ಇದಲ್ಲದೆ, ಶಾಸಕರು ವಿವೇಕ, ಗೌರವ ಮತ್ತು ಪ್ರಾಮಾಣಿಕತೆಯ ಮಾದರಿಗಳಾಗಬೇಕು ಎಂದು ಅವರು ಹೇಳಿದರು. ಪ್ರಸ್ತುತ ಚಿಲಿ ದೇಶದ ಸಂಸ್ಥೆಗಳಲ್ಲಿ ಕಂಡುಬರುತ್ತಿರುವ “ವೈಮನಸ್ಸಿನ ಮಟ್ಟ” ಜನರಲ್ಲಿ ಹೆಚ್ಚುತ್ತಿರುವ ಕಳವಳಕ್ಕೆ ಕಾರಣವಾಗಿದೆ ಎಂದು ಸಮಿತಿಯು ಗಮನಿಸಿತು.

ಪೂಜ್ಯ ಜಗದ್ಗುರು 16ನೆ ಬೆನೆಡಿಕ್ಟ್ ಅವರು Caritas in Veritate (17)ರಲ್ಲಿ ಹೇಳಿದಂತೆ, “ಸಮಗ್ರ ಮಾನವ ಅಭಿವೃದ್ಧಿ ವ್ಯಕ್ತಿಗಳ ಮತ್ತು ಜನಾಂಗಗಳ ಜವಾಬ್ದಾರಿಯುತ ಸ್ವಾತಂತ್ರ್ಯವನ್ನು ಪೂರ್ವಾನುಮಾನಿಸುತ್ತದೆ” ಎಂದು ಸಮಿತಿ ನೆನಪಿಸಿತು. ಆದ್ದರಿಂದ, ಸಾರ್ವಜನಿಕ ಸೇವೆ ಎಂಬುದು “ಸಮಾಜದ ಕುರಿತು ಇರುವ ಒಂದು ನೈತಿಕ ದೃಷ್ಟಿಕೋನದ ಅಭಿವ್ಯಕ್ತಿ” ಎಂದು ಸಮಿತಿ ತಿಳಿಸಿದೆ.

ಹಿಂಸಾಚಾರವು ದೈಹಿಕವಾಗಿಯೂ ವೈಚಾರಿಕವಾಗಿಯೂ ವ್ಯಕ್ತವಾಗುತ್ತದೆ

ದೈಹಿಕ ಹಿಂಸಾಚಾರ ಜಗತ್ತಿನ ಅನೇಕ ಸಮಾಜಗಳಲ್ಲಿ ಗೋಚರಿಸುತ್ತಿದ್ದರೂ, ಮಾತಿನ, ವೈಚಾರಿಕ ಮತ್ತು ತಂತ್ರಾತ್ಮಕ ಹಿಂಸಾಚಾರವೂ ಒಂದು ಸಮುದಾಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಚಿಲಿಯ ಧರ್ಮಾಧ್ಯಕ್ಷರ ಮಂಡಳಿಯ ಸ್ಥಾಯಿ ಸಮಿತಿಯು ಹೇಳಿದೆ.

ಇಂತಹ ಹಿಂಸಾಚಾರವು ಸಾಮಾಜಿಕ ಐಕ್ಯತೆಯನ್ನು ದುರ್ಬಲಗೊಳಿಸುತ್ತದೆ. ಏಕೆಂದರೆ “ಸತ್ಯವಿಲ್ಲದೆ, ವಿಶ್ವಾಸವಿಲ್ಲದೆ ಮತ್ತು ಸತ್ಯದ ಮೇಲಿನ ಪ್ರೀತಿಯಿಲ್ಲದೆ, ಸಾಮಾಜಿಕ ಮನಸ್ಸು ಮತ್ತು ಜವಾಬ್ದಾರಿತನ ಇರುವುದಿಲ್ಲ” (Caritas in Veritate, 5) ಎಂದು ಸಮಿತಿಯು ನೆನಪಿಸಿತು.

ಇದಲ್ಲದೆ, “ಇತರರ ಗೌರವದ ಕುರಿತು ಆಳವಾದ ಅರಿವು ಮತ್ತು ಭಿನ್ನ ಅಭಿಪ್ರಾಯಗಳಿಗೆ ಗೌರವ” ಮರುಸ್ಥಾಪನೆಯಾಗದಿದ್ದರೆ, ಯಾವುದೇ ಸಂಸ್ಥಾತ್ಮಕ ಬದಲಾವಣೆ ಅಥವಾ ಪ್ರಗತಿಯೂ ಸಾಧ್ಯವಾಗುವುದಿಲ್ಲ ಎಂದು ಧರ್ಮಾಧ್ಯಕ್ಷರು ಎಚ್ಚರಿಸಿದರು.

ಸಮಾಜದಲ್ಲಿನ ಸಹಬಾಳ್ವೆಯು “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು” (ಮತ್ತಾಯ 22:39) ಎಂಬ ಆಜ್ಞೆಯ ಮೇಲೆ ಆಧಾರಿತವಾಗಿದೆ ಎಂದು ಅವರು ಒತ್ತಿಹೇಳಿದರು. ಈ ಆಧಾರ ಕಳೆದುಹೋದರೆ, ಸಮಾಜದ ಮೂಲ ಅಡಿಪಾಯವೇ ಕುಸಿದುಹೋಗುತ್ತದೆ ಎಂದು ಅವರು ತಿಳಿಸಿದರು.

ಅದನ್ನು ತಪ್ಪಿಸಲು, ಚಿಂತನೆ, ಆಂತರಿಕ ಮೌನ, ನೈತಿಕ ರೂಪುಗೊಳಿಕೆ ಮತ್ತು ಆತ್ಮಿಕ ಜೀವನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸಮಿತಿಯು ತಿಳಿಸಿತು.“ಪ್ರೀತಿ ಮತ್ತು ಐಕ್ಯತೆಯಲ್ಲಿ ರೂಪುಗೊಂಡ ಹೃದಯವೇ ನಿಜವಾದ ಮಾನವೀಯ ಸಮಾಜವನ್ನು ಉಳಿಸಬಲ್ಲದು” ಎಂದು ಸಮಿತಿ ವಾದಿಸಿತು.

ಕೊನೆಯಲ್ಲಿ, ಚಿಲಿಯ ಧರ್ಮಾಧ್ಯಕ್ಷರು ಕಾರ್ಮೆಲ್ ಮಾತೆಯ ಮಧ್ಯಸ್ಥಿಕೆಯನ್ನು ಕೋರಿ ತಮ್ಮ ಪ್ರಕಟಣೆಯನ್ನು ಮುಕ್ತಾಯಗೊಳಿಸಿದರು. “ಚಿಲಿಯಲ್ಲಿ ಸಾಮಾಜಿಕ ಮತ್ತು ರಾಜಕೀಯ ಶಾಂತಿ ನೆಲೆಸಲಿ; ಮತ್ತು ವಿಶೇಷವಾಗಿ ರಾಷ್ಟ್ರದ ಭವಿಷ್ಯವನ್ನು ಮುನ್ನಡೆಸಲು ಕರೆಯಲ್ಪಟ್ಟ ಎಲ್ಲರ ನಿರ್ಧಾರಗಳಿಗೆ, ನೆರೆಯವರ ಮೇಲಿನ ಪ್ರೀತಿಯೇ ನಿಜವಾದ ಕಾನೂನಾಗಲಿ” ಎಂದು ಅವರು ಪ್ರಾರ್ಥಿಸಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

15 ಮೇ 2026, 18:26