ಜಾರ್ಜಿಯಾದ ಆರ್ಥೊಡಾಕ್ಸ್ ಧರ್ಮಸಭೆಯ ನೂತನ ಕಥೋಲಿಕ-ಪ್ರಧಾನ ಧರ್ಮಾಧ್ಯಕ್ಷರಾಗಿ ಮೂರನೇ ಶಿಯೋ ಆಯ್ಕೆ
ಲೇಖಕರು: ಜಿಯೋವಾನ್ನಿ ಜವತ್ತಾ
ಮಾರ್ಚ್ 17ರಂದು ಎರಡನೇ ಇಲಿಯಾ ನಿಧನರಾದ ಎರಡು ತಿಂಗಳೊಳಗೆ, ಜಾರ್ಜಿಯಾದ ಆರ್ಥೊಡಾಕ್ಸ್ ಧರ್ಮಸಭೆಯ ಸಿನೋಡ್ ಮೇ 11ರ ಸೋಮವಾರ, ಸೆನಾಕಿ ಮತ್ತು ಚ್ಖೊರೊಟ್ಸ್ಕು ಮಹಾಧರ್ಮಾಧ್ಯಕ್ಷರಾದ ಶಿಯೋ ಅವರನ್ನು ಸಮಸ್ತ ಜಾರ್ಜಿಯಾದ ನೂತನ ಕಥೋಲಿಕ-ಪ್ರಧಾನ ಧರ್ಮಾಧ್ಯಕ್ಷರಾಗಿ ಆಯ್ಕೆ ಮಾಡಿತು.
57 ವರ್ಷಗಳ ಹಿಂದೆ ಟಿಬಿಲಿಸಿಯಲ್ಲಿ ಜನಿಸಿದ ಎಲಿಜ್‌ಬಾರ್ ತೇಮುರಾಜ್ ಮುಜಿರಿ, ಬಹುಕಾಲದಿಂದ ಪ್ರಧಾನ ಧರ್ಮಾಧ್ಯಕ್ಷ ಸ್ಥಾನಕ್ಕೆ ತಾತ್ಕಾಲಿಕ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಈಗ “ಮೂರನೇ ಶಿಯೋ” ಎಂಬ ಹೆಸರನ್ನು ಸ್ವೀಕರಿಸಲಿದ್ದು, ಸ್ವಯಂ ಎಂಟ್ಸಾಖೆತ್-ಟಿಬಿಲಿಸಿ ಮಹಾಧರ್ಮಾಧ್ಯಕ್ಷ ಹಾಗೂ ಅಬ್ಖಾಜಿಯಾ ಮತ್ತು ಬಿಚ್ವಿಂಟಾ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷ ಪದವಿಗಳನ್ನು ವಹಿಸಿಕೊಳ್ಳಲಿದ್ದಾರೆ.
ಜಾರ್ಜಿಯಾದ ರಾಜಧಾನಿ ಟಿಬಿಲಿಸಿಯ ಪರಮ ತ್ರಿತ್ವ ಪ್ರಧಾನ ದೇವಾಲಯದಲ್ಲಿ ನಡೆದ ಸಿನೋಡ್ ಸಭೆಯಲ್ಲಿ ಜಾರ್ಜಿಯಾದ ವಿವಿಧ ಭಾಗಗಳಿಂದ ಸುಮಾರು 1,200 ಪ್ರತಿನಿಧಿಗಳು ಭಾಗವಹಿಸಿದ್ದರು. ಪಟ್ಟಾಭಿಷೇಕ ಸಮಾರಂಭವು ಮಂಗಳವಾರ ಬೆಳಿಗ್ಗೆ ಸ್ವೆಟಿಟ್ಸ್‌ಖೊವೆಲಿ ಪ್ರಧಾನ ದೇವಾಲಯದಲ್ಲಿ ನಡೆಯಿತು.
ಕಾರ್ಡಿನಲ್ ಕೋಚ್ ಅವರ ಅಭಿನಂದನೆಗಳು
“ಅನೇಕ ಪವಿತ್ರರ ಸಾಕ್ಷಿ ಮತ್ತು ನಿಷ್ಠೆಯಿಂದ ಪ್ರಕಾಶಮಾನಗೊಂಡಿರುವ ಜಾರ್ಜಿಯನ್ ಧರ್ಮಸಭೆಯ ಪುರಾತನ ಮತ್ತು ದೀಪ್ತಿಮಯ ಆಧ್ಯಾತ್ಮಿಕ ಪರಂಪರೆಯ ಹಾದಿಯಲ್ಲಿ,” ಎಂದು ಕ್ರೈಸ್ತ ಏಕತೆಯ ಪ್ರೋತ್ಸಾಹಕ್ಕಾಗಿ ಇರುವ ಆಡಳಿತ ವಿಭಾಗದ ಆಡಳಿತಾಧಿಕಾರಿಯಾದ ಕಾರ್ಡಿನಲ್ ಕರ್ಟ್ ಕೋಚ್ ತಮ್ಮ ಅಭಿನಂದನಾ ಸಂದೇಶದಲ್ಲಿ ಬರೆದಿದ್ದಾರೆ.
“ನಿಮ್ಮ ಸೇವೆ ನಮ್ಮ ಧರ್ಮಸಭೆಗಳ ನಡುವಿನ ಸ್ನೇಹಬಂಧಗಳನ್ನು ಮತ್ತಷ್ಟು ಬಲಪಡಿಸಲಿ ಮತ್ತು ಇನ್ನಷ್ಟು ಸಹೋದರಭಾವದ ಸಂವಾದವನ್ನು ಉತ್ತೇಜಿಸಲಿ,” ಎಂದು ಅವರು ಮುಂದುವರಿಸಿದರು.
“ಪವಿತ್ರಾತ್ಮ ವರದಿಂದ, ಯೇಸು ಕ್ರಿಸ್ತನಲ್ಲಿ ನಂಬಿಕೆಯಿರುವ ಎಲ್ಲರನ್ನು—ಇನ್ನೂ ಸಂಪೂರ್ಣವಾಗಿ ಒಂದಾಗದಿದ್ದರೂ ಸಹ—ನಿಜವಾಗಿ ಒಂದಾಗಿಸುವ ಪ್ರೀತಿ ಮತ್ತು ಏಕತೆಯ ಬಂಧಗಳನ್ನು ನಿಮ್ಮ ಸೇವೆ ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂಬ ವಿಶ್ವಾಸ ನನಗಿದೆ. ಹೀಗೆ ಪ್ರಭುವಿನ ‘ನಾನು ನಿಮ್ಮನ್ನು ಪ್ರೀತಿಸಿದಂತೆ ನೀವು ಒಬ್ಬರನ್ನೊಬ್ಬರು ಪ್ರೀತಿಸಿರಿ”
ಎಂಬ ಆಜ್ಞೆ ಇನ್ನಷ್ಟು ಸ್ಪಷ್ಟವಾಗಲಿ. ಕಾರ್ಡಿನಲ್ ಕೋಚ್ ಅವರು, ಪವಿತ್ರ ಪೀಠದ ಪ್ರತಿನಿಧಿ ತಂಡದೊಂದಿಗೆ, ಮಾರ್ಚ್ 22ರಂದು ಟಿಬಿಲಿಸಿಯಲ್ಲಿ ನಡೆದ ಎರಡನೇ ಇಲಿಯಾ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಆ ಅಂತ್ಯಕ್ರಿಯೆಯನ್ನು ಸಾರ್ವತ್ರಿಕ ಪ್ಯಾಟ್ರಿಯಾರ್ಕ್ ಒಂದನೇ ಬಾರ್ತಲೋಮೆಯೋ ಅಧ್ಯಕ್ಷತೆ ವಹಿಸಿದ್ದರು.
ದೇವಶಾಸ್ತ್ರಜ್ಞ ಮತ್ತು ಚೆಲೋ ವಾದಕ
ಮುಜಿರಿ ಅವರು ತಮ್ಮ ವಿವಿಧ ವಿದ್ಯಾಭ್ಯಾಸಗಳ ನಡುವೆ ರಾಜ್ಯ ಸಂಗೀತ ಮಹಾವಿದ್ಯಾಲಯದಿಂದ ಚೆಲೋ ವಾದನದಲ್ಲಿ ಡಿಪ್ಲೊಮಾವನ್ನೂ ಪಡೆದಿದ್ದಾರೆ. 1993ರಲ್ಲಿ ಅವರು “ಶಿಯೋ” ಎಂಬ ಹೆಸರಿನಿಂದ ಸಂನ್ಯಾಸ ದೀಕ್ಷೆ ಸ್ವೀಕರಿಸಿದರು.
ನಂತರ ಅವರು ಉಪಯಾಜಕರಾಗಿ ಹಾಗೂ 1996ರಲ್ಲಿ ಯಾಜಕರಾಗಿ ಅಭಿಷೇಕಗೊಂಡರು. ಮಾಸ್ಕೋದಲ್ಲಿ ದೇವಶಾಸ್ತ್ರ ಅಧ್ಯಯನವನ್ನು ಪೂರ್ಣಗೊಳಿಸಿದ ಬಳಿಕ ಟಿಬಿಲಿಸಿಯಲ್ಲಿ ಮಠಾಧಿಪತಿಯಾಗಿ ಸೇವೆ ಸಲ್ಲಿಸಿ, ನಂತರ ಧರ್ಮಾಧ್ಯಕ್ಷರು, ಮಹಾಧರ್ಮಾಧ್ಯಕ್ಷರು ಮತ್ತು 2010ರಲ್ಲಿ ಮಹಾಧರ್ಮಪ್ರಾಂತ್ಯಾಧ್ಯಕ್ಷರಾಗಿ ನೇಮಕಗೊಂಡರು.
ತಮ್ಮ ಆಯ್ಕೆಗೆ ಸ್ವಲ್ಪ ಸಮಯ ಮೊದಲು ಮಾತನಾಡಿದ ಮೂರನೇ ಶಿಯೋ, “ಜಾರ್ಜಿಯಾದ ಆರ್ಥೊಡಾಕ್ಸ್ ಧರ್ಮಸಭೆ ಯಾವಾಗಲೂ ರಾಷ್ಟ್ರವನ್ನು ಒಂದಾಗಿಸುವ ಶಕ್ತಿಯಾಗಿದ್ದು, ನಿಜವಾದ ನಂಬಿಕೆ, ಜಾರ್ಜಿಯನ್ ಭಾಷೆ, ಸಂಪ್ರದಾಯಗಳು ಮತ್ತು ಐತಿಹಾಸಿಕ ಸ್ಮೃತಿಯನ್ನು ರಕ್ಷಿಸುವ ಕಾರ್ಯ ಮಾಡಿದೆ. ಪ್ರಭುವಿನ ಸಹಾಯದಿಂದ ಅದು ಇದೇ ದಾರಿಯಲ್ಲಿ ಮುಂದುವರಿಯಲಿದೆ” ಎಂದು ಹೇಳಿದರು.
ಎರಡನೇ ಇಲಿಯಾರ ನಿಧನದ ನಂತರ, ಮಾರ್ಚ್ 18ರಂದು ತಾತ್ಕಾಲಿಕ ನಿರ್ವಾಹಕರಾಗಿದ್ದ ಶಿಯೋ ಅವರಿಗೆ ಕಳುಹಿಸಿದ ಸಂದೇಶದಲ್ಲಿ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ, “ದಿವಂಗತ ಪ್ರಧಾನ ಧರ್ಮಾಧ್ಯಕ್ಷರನ್ನು ಪ್ರೇರೇಪಿಸಿದ್ದ ಅದೇ ಕುರುಬನ ಪ್ರೀತಿಯಿಂದ ಜಾರ್ಜಿಯಾದ ಆರ್ಥೊಡಾಕ್ಸ್ ಧರ್ಮಸಭೆಯನ್ನು ಮುನ್ನಡೆಸಲು ಪ್ರಭು ಅವರಿಗೆ ಬೆಳಕು, ವಿವೇಕ ಮತ್ತು ಶಕ್ತಿಯನ್ನು ನೀಡಲಿ” ಎಂದು ಪ್ರಾರ್ಥಿಸಿರುವುದಾಗಿ ಬರೆದಿದ್ದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).