ಹುಡುಕಿ

ಯೇಸುಕ್ರಿಸ್ತ-ಜೀವಂತ ರೊಟ್ಟಿ ಯೇಸುಕ್ರಿಸ್ತ-ಜೀವಂತ ರೊಟ್ಟಿ 

ಪ್ರಭುವಿನ ದಿನದ ಧ್ಯಾನ: “ನೀವು ನನ್ನನ್ನು ಪ್ರೀತಿಸುವುದಾದರೆ...”

ಧರ್ಮಸಭೆ ಪುನರುತ್ಥಾನ ಮಹೋತ್ಸವದ ಆರನೇ ಭಾನುವಾರವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ವಂ. ಗುರು ಎಡ್ಮಂಡ್ ಪವರ್, OSB ಇಂದಿನ ವಾಚನಗಳ ಕುರಿತು “ನೀವು ನನ್ನನ್ನು ಪ್ರೀತಿಸುವುದಾದರೆ...” ಎಂಬ ವಿಷಯದ ಮೇಲೆ ತಮ್ಮ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ.

ಲೇಖಕರು: ವಂ. ಗುರು ಎಡ್ಮಂಡ್ ಪವರ್, OSB

ಪುನರುತ್ಥಾನ ಮಹೋತ್ಸವದ ಈ ಕೊನೆಯ ನಾಲ್ಕು ಭಾನುವಾರಗಳಲ್ಲಿ, ಯೊವಾನ್ನರ ಶುಭಸಂದೇಶದಲ್ಲಿ ಕೊನೆಯ ಭೋಜನದ ವೇಳೆ ಪ್ರಭು ಯೇಸು ನೀಡಿದ ಸಂದೇಶಗಳನ್ನು ನಾವು ಆಲಿಸುತ್ತಿದ್ದೇವೆ. ಸಂಪೂರ್ಣ ಶುಭಸಂದೇಶವೇ ಒಂದು “ಮಿಸ್ಟಾಗೋಜಿ” — ಅಂದರೆ ಅಡಗಿರುವ ಸತ್ಯಗಳೊಳಗೆ, ಪ್ರಭು ಯೇಸು ಕ್ರಿಸ್ತರ ರಹಸ್ಯಾರ್ಥದ ಆಳವಾದ ಅರಿವಿನತ್ತ ನಮ್ಮನ್ನು ಕರೆದೊಯ್ಯುವ ಆತ್ಮಿಕ ಪಯಣವಾಗಿದೆ.

ಕವಿ ಜಾನ್ ಕೀಟ್ಸ್ “ನಮ್ಮ ಮೇಲೆ ಸ್ಪಷ್ಟ ಉದ್ದೇಶವನ್ನು ಹೇರುವ ಕಾವ್ಯವನ್ನು ನಾನು ಇಷ್ಟಪಡುವುದಿಲ್ಲ” ಎಂದು ಹೇಳಿದ್ದರು. ಆದರೆ ಯೊವಾನ್ನರ ಶುಭಸಂದೇಶವು ಅತ್ಯಂತ ಸೂಕ್ಷ್ಮವಾಗಿಯೂ ಸ್ಪಷ್ಟವಾಗಿಯೂ ಉದ್ದೇಶಗಳನ್ನು ಹೊಂದಿದೆ. ಇಂದಿನ ವಚನಭಾಗವು ಅದರ ಸುಂದರ ಪುನರಾವರ್ತನೆ ಮತ್ತು ಆಳವಾದ ಅರ್ಥಗಳಿಗೆ ಒಂದು ವಿಶಿಷ್ಟ ಉದಾಹರಣೆಯಾಗಿದೆ.

“ನೀವು ನನ್ನನ್ನು ಪ್ರೀತಿಸುವುದಾದರೆ ನನ್ನ ಆಜ್ಞೆಗಳನ್ನು ಪಾಲಿಸುವಿರಿ” ಎಂಬ ಮಾತಿನಿಂದ ಆರಂಭವಾಗುವ ಈ ಭಾಗ, ಅದೇ ಭಾವನೆಯೊಂದಿಗೆ ಅಂತ್ಯಗೊಳ್ಳುತ್ತದೆ. ಆದರೆ ಇಲ್ಲಿ ಪ್ರಭು ಯೇಸು ಹೇಳುವ “ಆಜ್ಞೆಗಳು” ಎಂದರೆ ಅಂತ್ಯವಿಲ್ಲದ ನಿಯಮಗಳು, ಆದೇಶಗಳು ಅಥವಾ ಫರಿಸಾಯರ ಭಾರಗಳಲ್ಲ. ಇದೇ ಸಂಭಾಷಣೆಯ ಮತ್ತೊಂದು ಭಾಗದಲ್ಲಿ ಪ್ರಭು ಯೇಸು ಸ್ಪಷ್ಟವಾಗಿ ಹೇಳುತ್ತಾರೆ: “ನಾನು ನಿಮ್ಮನ್ನು ಪ್ರೀತಿಸಿದಂತೆ ನೀವು ಒಬ್ಬರನ್ನೊಬ್ಬರು ಪ್ರೀತಿಸಿರಿ; ಇದೇ ನನ್ನ ಆಜ್ಞೆ” (ಯೊವಾನ್ನ 15:12).

ಪ್ರಭು ಯೇಸು ಈಗಾಗಲೇ ಪವಿತ್ರಾತ್ಮರನ್ನು ಕಳುಹಿಸುವುದಾಗಿ ವಾಗ್ದಾನ ಮಾಡಿದ್ದರು — “ಅವರನ್ನು ನಂಬಿದವರು ಪಡೆಯಲಿರುವ ಆತ್ಮರ ಕುರಿತು ಅವರು ಇದನ್ನು ಹೇಳಿದರು” (ಯೊವಾನ್ನ 7:39). ಆದರೆ ಕೊನೆಯ ಭೋಜನದ ಸಂದರ್ಭದಲ್ಲಿ ಈ ವಾಗ್ದಾನ ಐದು ಬಾರಿ ಪುನರಾವರ್ತಿತವಾಗುತ್ತದೆ. ಇಂದು ನಾವು ಅದರ ಮೊದಲ ಉಲ್ಲೇಖವನ್ನು ಕೇಳುತ್ತೇವೆ.

ಪವಿತ್ರಾತ್ಮರನ್ನು ಎರಡು ಬಾರಿ “ಸತ್ಯದ ಆತ್ಮ” ಎಂದು ಕರೆಯಲಾಗಿದೆ (ಯೊವಾನ್ನ 14:17 ಮತ್ತು 16:13). ಸುಳ್ಳು, ಕುಯುಕ್ತಿಗಳು, ಅಲಂಕೃತ ಮಾತುಗಳು ಮತ್ತು ಸತ್ಯದ ಮುಖವಾಡ ಧರಿಸಿರುವ ಅಸತ್ಯಗಳಿಂದ ತುಂಬಿರುವ ಈ ಜಗತ್ತಿನಲ್ಲಿ, ನಮ್ಮ ಹೃದಯಗಳೂ ಆ ವರಕ್ಕಾಗಿ ಹಾತೊರೆಯುವುದಿಲ್ಲವೇ? ಸತ್ಯದ ನೆಲದಲ್ಲಿ ಅರಳುವ ಹೃದಯದ ಶಾಂತಿಗಾಗಿ ನಾವು ಹಂಬಲಿಸುವುದಿಲ್ಲವೇ?

ಯೊವಾನ್ನರ “ಸತ್ಯ”ದ ಕಲ್ಪನೆ ಅತ್ಯಂತ ಪ್ರೇರಣಾದಾಯಕವಾಗಿದೆ. ಅಂತಿಮವಾಗಿ, ಅದು ಕೇವಲ ಒಂದು ಅಮೂರ್ತ ಗುಣವಲ್ಲ; ಅದು ಒಬ್ಬ ವ್ಯಕ್ತಿ. ಇದೇ ಅಧ್ಯಾಯದ ಕೆಲವೇ ವಚನಗಳ ಮುಂಚೆ ಪ್ರಭು ಯೇಸು ಹೇಳುತ್ತಾರೆ: “ನಾನೇ ಮಾರ್ಗ, ಸತ್ಯ ಮತ್ತು ಜೀವ” (ಯೊವಾನ್ನ 14:6). ಮತ್ತು ಪಿಲಾತನು ಕೇಳಿದ “ಸತ್ಯವೆಂದರೇನು?” (ಯೊವಾನ್ನ 18:38) ಎಂಬ ಪ್ರಶ್ನೆಗೆ ಉತ್ತರವೇ ಅವನ ಮುಂದೆ ನಿಂತಿದ್ದ ಪ್ರಭು ಯೇಸುವಾಗಿದ್ದರು.

ಇಂದಿನ ಶುಭಸಂದೇಶದ ಭಾಗವು ಪರಮತ್ರಿತ್ವದ ಪ್ರೇಮಬಂಧವನ್ನು ಒಂದಾಗಿ ನೇಯುತ್ತದೆ ಮತ್ತು ನಾವು ಆ ಅದ್ಭುತ ನೆಯ್ಗೆಯೊಳಗೆ ಸೆಳೆಯಲ್ಪಡುತ್ತೇವೆ. ಯೊವಾನ್ನರ ಶುಭಸಂದೇಶದಲ್ಲಿ ಪ್ರೀತಿ ಪ್ರಮುಖ ಸ್ಥಾನವನ್ನು ಹೊಂದಿದ್ದು, ಇಂದಿನ ಏಳು ವಚನಗಳ ಆರಂಭ ಮತ್ತು ಅಂತ್ಯದಲ್ಲಿಯೂ ಅದೇ ಭಾವನೆ ಪ್ರತಿಧ್ವನಿಸುತ್ತದೆ.

“ನೀವು ನನ್ನನ್ನು ಪ್ರೀತಿಸುವುದಾದರೆ…” (ಯೊವಾನ್ನ 14:15) ಎಂಬ ಮಾತಿನಿಂದ ಆರಂಭವಾಗುವ ಈ ಭಾಗ, “ನನ್ನನ್ನು ಪ್ರೀತಿಸುವವನು ನನ್ನ ತಂದೆಯಿಂದ ಪ್ರೀತಿಸಲ್ಪಡುವನು; ನಾನು ಅವನನ್ನು ಪ್ರೀತಿಸುವೆನು…” (ಯೊವಾನ್ನ 14:21) ಎಂಬ ಘೋಷಣೆಯೊಂದಿಗೆ ಮುಕ್ತಾಯಗೊಳ್ಳುತ್ತದೆ.

ದೇವರ ಪ್ರೀತಿಯಿಂದ ಹುಟ್ಟಿಕೊಂಡು, ಪರಮತ್ರಿತ್ವದ ಜೀವ ರಹಸ್ಯದೊಳಗೆ ಸೆಳೆಯಲ್ಪಟ್ಟಿರುವ ನಾವು, ಅದನ್ನು ಸ್ವೀಕರಿಸಲು ಮತ್ತು ಪ್ರತಿಯಾಗಿ ಪ್ರೀತಿಸಲು ಆಹ್ವಾನಿಸಲ್ಪಟ್ಟಿದ್ದೇವೆ. ಸತ್ಯ ಮತ್ತು ನಿಷ್ಠೆಯ ಪುರುಷರು ಹಾಗೂ ಮಹಿಳೆಯರಾಗಿ, ಅಲುಗಾಡುತ್ತಿರುವ ಈ ಜಗತ್ತಿಗೆ ಆಧ್ಯಾತ್ಮಿಕ ಮತ್ತು ನೈತಿಕ ಬೆನ್ನೆಲುಬಾಗಲು ಕರೆಯಲ್ಪಟ್ಟಿದ್ದೇವೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

09 ಮೇ 2026, 23:24