ಹುಡುಕಿ

ಹೈಟಿಯ ಪೋರ್ಟ್-ಔ-ಪ್ರಿನ್ಸ್‌ನಲ್ಲಿ ಪ್ರತಿಸ್ಪರ್ಧಿ ಗ್ಯಾಂಗ್‌ಗಳ ಘರ್ಷಣೆಯಿಂದ ನಿವಾಸಿಗಳು ಪಲಾಯನ ಮಾಡುತ್ತಿರುವ ದೃಶ್ಯ ಹೈಟಿಯ ಪೋರ್ಟ್-ಔ-ಪ್ರಿನ್ಸ್‌ನಲ್ಲಿ ಪ್ರತಿಸ್ಪರ್ಧಿ ಗ್ಯಾಂಗ್‌ಗಳ ಘರ್ಷಣೆಯಿಂದ ನಿವಾಸಿಗಳು ಪಲಾಯನ ಮಾಡುತ್ತಿರುವ ದೃಶ್ಯ 

ನೋವಿನಲ್ಲಿರುವ ಹೈಟಿಯ ಜನರ ನೆರವಿಗೆ ವಿಶ್ವ ನಾಯಕರ ನೆರವಿನ ಅಗತ್ಯವಿದೆ: ಧರ್ಮಾಧ್ಯಕ್ಷರ ಮನವಿ

ಗ್ಯಾಂಗ್ ಹಿಂಸಾಚಾರ, ವ್ಯಾಪಕ ಬಡತನ ಹಾಗೂ ರಾಜಕೀಯ ಮತ್ತು ಸಂಸ್ಥಾತ್ಮಕ ಸಂಕಷ್ಟದ ನಡುವೆ, ಅನ್ಸ್-ಆ-ವೋ–ಮಿರಾಗೋಆನ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಮತ್ತು ದೇಶದ ಧರ್ಮಾಧ್ಯಕ್ಷರ ಮಂಡಳಿಯ ಉಪಾಧ್ಯಕ್ಷರಾದ ಪೂಜ್ಯ ಪಿಯರ್-ಆಂದ್ರೆ ಡುಮಾಸ್, ಸಂಕಷ್ಟದಲ್ಲಿರುವ ಹೈಟಿಯ ಜನರಿಗೆ ನೆರವಾಗುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದ್ದಾರೆ.

ಲೇಖಕರು: ಫೆಡೆರಿಕೊ ಪಿಯಾನಾ

“ವಿಶ್ವದಿಂದ ಕೈಬಿಡಲ್ಪಟ್ಟಿರುವ ಹೈಟಿಯ ಜನರ ಭರವಸೆ ಈಗ ಪ್ರಾರ್ಥನೆಯೊಂದೇ ಆಗಿದೆ” ಎಂದು ಅನ್ಸ್-ಆ-ವೋ–ಮಿರಾಗೋಆನ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪೂಜ್ಯ ಪಿಯರ್-ಆಂದ್ರೆ ಡುಮಾಸ್ ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಧರ್ಮಾಧ್ಯಕ್ಷರ ಮಂಡಳಿಯ ಉಪಾಧ್ಯಕ್ಷರೂ ಆಗಿರುವ ಅವರು, ಪ್ರಾರ್ಥನಾಪೂರ್ಣ ಬೆಂಬಲದ ಅಗತ್ಯವನ್ನು ಹಲವು ಬಾರಿ ಒತ್ತಿಹೇಳಿದರು. ಅವರ ಧ್ವನಿಯಲ್ಲಿ ಆಳವಾದ ಕಳವಳ ವ್ಯಕ್ತವಾಗುತ್ತಿದ್ದರೂ, ಅವರು ಐಕ್ಯತೆಯ ಭರವಸೆಯನ್ನು ಸಹ ವ್ಯಕ್ತಪಡಿಸಿದರು.

“ನಮ್ಮ ಜನರು ವರ್ಷಾಂತರಗಳಿಂದ ಅನುಭವಿಸುತ್ತಿರುವ ನೋವಿನ ಕಡೆ ಯಾರ ಗಮನವೂ ಇಲ್ಲ,ನಿರ್ಲಕ್ಷ್ಯದ ಮಧ್ಯೆ ನಿರಂತರ ನೋವನ್ನು ಅನುಭವಿಸುತ್ತಲೇ ಇದ್ದಾರೆ. ಅದಕ್ಕಾಗಿ ಪ್ರಾರ್ಥನೆಯ ಮೂಲಕ ಹೈಟಿಯೊಂದಿಗೆ ನೈಜ ಐಕ್ಯತೆಯ ಭಾವನೆಯನ್ನು ಜಗತ್ತು ಮತ್ತೆ ಕಂಡುಕೊಳ್ಳಲು ಸಹಾಯ ಮಾಡಬೇಕು. ವ್ಯಕ್ತಿಗಳು, ದೇವಾಲಯಗಳು, ಸಂಸ್ಥೆಗಳು, ಕುಟುಂಬಗಳು ಮತ್ತು ಧಾರ್ಮಿಕ ಸಮುದಾಯಗಳು ಒಂದಾಗಿ ವಿಶ್ವವ್ಯಾಪಿ ಪ್ರಾರ್ಥನಾ ದಿನವನ್ನು ಆಚರಿಸುವುದನ್ನು ನೋಡುವುದು ಅತ್ಯಂತ ಸುಂದರವಾಗಿರುತ್ತದೆ” ಎಂದು ಅವರು ಹೇಳಿದರು.

ಹತಾಶ ಮನವಿಗಳು

ಅನೇಕ ವರ್ಷಗಳಿಂದ ಸ್ಥಳೀಯ ಧರ್ಮಸಭೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಹತಾಶ ಮನವಿಗಳನ್ನು ಮಾಡುತ್ತಲೇ ಬಂದಿದೆ. ಆದರೆ ಅವುಗಳಿಗೆ ಸಮರ್ಪಕ ಪ್ರತಿಕ್ರಿಯೆ ದೊರೆತಿಲ್ಲ. ಪ್ರತಿದಿನ ಡಜನ್‌ಗಟ್ಟಲೆ ಜೀವಗಳನ್ನು ಬಲಿ ಪಡೆಯುತ್ತಿರುವ ಗ್ಯಾಂಗ್ ಹಿಂಸಾಚಾರ, ತೀವ್ರ ಬಡತನ ಮತ್ತು ಅನ್ಯಾಯ ಹಾಗೂ ಅಸಮಾನತೆಯನ್ನು ಹುಟ್ಟುಹಾಕುತ್ತಿರುವ ದೀರ್ಘಕಾಲದ ರಾಜಕೀಯ ಅಸ್ಥಿರತೆ — ಇವೆಲ್ಲವೂ ಜಗತ್ತಿನ ಸರ್ಕಾರಗಳ ಆದ್ಯತೆಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿವೆ ಎಂದು ಧರ್ಮಾಧ್ಯಕ್ಷರು ಹೇಳಿದ್ದಾರೆ.

ಆದರೂ ಧರ್ಮಾಧ್ಯಕ್ಷ ಡುಮಾಸ್ ನಿರಾಶರಾಗಲು ನಿರಾಕರಿಸುತ್ತಿದ್ದಾರೆ. ಅವರು ಈಗ ಹಿಂದೆಂದಿಗಿಂತಲೂ ಗಟ್ಟಿಯಾಗಿ ಧ್ವನಿ ಎತ್ತುತ್ತಿದ್ದಾರೆ. “ರಾಷ್ಟ್ರಗಳ ಕುಟುಂಬದಲ್ಲಿ ಬಲಿಷ್ಠ ಸಹೋದರನು ದುರ್ಬಲ ಮತ್ತು ಗಾಯಗೊಂಡ ಸಹೋದರನನ್ನು ಮರೆತಬಾರದು ಎಂದು ನಾನು ನಂಬುತ್ತೇನೆ. ಹೈಟಿಯಲ್ಲಿ ನಡೆಯುತ್ತಿರುವ ಸಂಗತಿಗಳು ಅಂತರರಾಷ್ಟ್ರೀಯ ಸಮುದಾಯವನ್ನು ಆಳವಾಗಿ ಪ್ರಶ್ನಿಸಬೇಕು. ನನ್ನ ದೇಶವು ಜಗತ್ತಿನ ಅತಿದೊಡ್ಡ ಶಕ್ತಿಯಾದ ಅಮೆರಿಕದಿಂದ ಕೇವಲ ಒಂದು ಗಂಟೆಯ ದೂರದಲ್ಲಿದೆ. ಆದರೂ, ಅದು ಯುದ್ಧಗಳಿಗೆ ಅಪಾರ ಹಣ ವ್ಯಯಿಸುತ್ತಿರುವಾಗ, ನಾವು ಅದರ ಪಕ್ಕದಲ್ಲೇ ದುಃಖ ಅನುಭವಿಸುತ್ತಿದ್ದೇವೆ. ಹೈಟಿ ಮೇಲ್ಮೈಯ ಕರುಣೆಯನ್ನು ಕೇಳುತ್ತಿಲ್ಲ; ನೈಜ ಸಹೋದರತ್ವವನ್ನು ಕೇಳುತ್ತಿದೆ” ಎಂದು ಅವರು ಹೇಳಿದರು.

ದಶಕಗಳಿಂದಲೂ ಮುಂದುವರಿಯುತ್ತಿರುವ ದುಃಖ

“ಹೈಟಿಯ ಜನರ ನೋವು ವರ್ಷಗಳಿಂದ ಮುಂದುವರಿಯುತ್ತಿದ್ದು, ಅದು ಜಗತ್ತಿನ ನಾಯಕರಿಗೆ ಚೆನ್ನಾಗಿ ತಿಳಿದಿದೆ ಆದರೂ ಪರಿಸ್ಥಿತಿ ಎಂದಿನಂತೆಯೇ ಉಳಿದಿದೆ” ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಧರ್ಮಾಧ್ಯಕ್ಷ ಡುಮಾಸ್ ಮತ್ತೊಮ್ಮೆ ವಿವರಿಸುವಂತೆ, “ಶಸ್ತ್ರಸಜ್ಜಿತ ಗ್ಯಾಂಗ್‌ಗಳ ಹಿಂಸಾಚಾರ ಭಯ, ಮರಣ ಮತ್ತು ವಿನಾಶವನ್ನು ನಿರಂತರವಾಗಿ ಹರಡುತ್ತಿದೆ. ರಾಜಧಾನಿಯಾದ ಪೋರ್ಟ್-ಔ-ಪ್ರಿನ್ಸ್‌ನ ಬಹುಭಾಗ ಈಗ ಗ್ಯಾಂಗ್‌ಗಳ ನಿಯಂತ್ರಣದಲ್ಲಿದೆ. ಸಾವಿರಾರು ಕುಟುಂಬಗಳು ತಮ್ಮ ಮನೆಗಳಿಂದ ಪಲಾಯನ ಮಾಡಬೇಕಾಗಿದೆ. ಆ ಮನೆಗಳನ್ನು ಅನೇಕ ಬಾರಿ ಸುಟ್ಟುಹಾಕಲಾಗಿದೆ ಅಥವಾ ನಾಶಗೊಳಿಸಲಾಗಿದೆ. ಮಕ್ಕಳು ಮತ್ತು ಯುವಜನರು ಶಾಶ್ವತ ಅಸುರಕ್ಷಿತ ವಾತಾವರಣದಲ್ಲಿ ಆಘಾತದ ಬದುಕು ನಡೆಸುತ್ತಿದ್ದಾರೆ.”

ಮಾನವೀಯ ಸಂಕಷ್ಟ

ಇದರ ಜೊತೆಗೆ ಮಾನವೀಯ ಸಂಕಷ್ಟವೂ ಗಂಭೀರವಾಗಿದೆ. ಐದು ಮಿಲಿಯನ್‌ಗಿಂತ ಹೆಚ್ಚು ಜನರು ಹಸಿವಿನಿಂದ ಸಾವಿನ ಅಂಚಿನಲ್ಲಿದ್ದಾರೆ. ಜನಸಂಖ್ಯೆಯ ಬಹುಭಾಗಕ್ಕೆ ಮೂಲಭೂತ ಆರೋಗ್ಯ ಸೇವೆಗಳಿಗೂ ಪ್ರವೇಶವಿಲ್ಲ. ಏಕೆಂದರೆ ಕೆಲವು ಆಸ್ಪತ್ರೆಗಳು ಗ್ಯಾಂಗ್ ಸದಸ್ಯರ ವಶದಲ್ಲಿವೆ. ಅನೇಕ ಶಾಲೆಗಳು ಮುಚ್ಚಲ್ಪಟ್ಟಿದ್ದು, ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣದ ಹಕ್ಕಿನಿಂದ ವಂಚಿತರಾಗಿದ್ದಾರೆ.

ರಾಜಕೀಯ ಮತ್ತು ಸಂಸ್ಥಾತ್ಮಕ ಪರಿಸ್ಥಿತಿಯೂ  ಸಂಕಷ್ಟಕ್ಕೆ ಸಿಲುಕಿದೆ. “ರಾಜ್ಯ ಸಂಸ್ಥೆಗಳಲ್ಲಿ ತೀವ್ರ ದುರ್ಬಲತೆ ಇದೆ,” ಎಂದು ಧರ್ಮಾಧ್ಯಕ್ಷ ಡುಮಾಸ್ ಖಂಡಿಸುತ್ತಾರೆ. “ಅವುಗಳ ಬಗ್ಗೆ ವ್ಯಾಪಕ ಅವಿಶ್ವಾಸವಿದೆ. ಸಾರ್ವಜನಿಕ ಭ್ರಷ್ಟಾಚಾರ ಎಲ್ಲೆಡೆ ಹರಡಿದೆ. ಸರ್ಕಾರದ ಅಸ್ಥಿರತೆ ಅಸ್ವಸ್ಥಕರ ಮಟ್ಟಕ್ಕೆ ತಲುಪಿದೆ. ಹೈಟಿ ಜಗತ್ತಿನ ಒಂದು ಭಾಗದ ಗಾಯವಾಗಿದೆ — ಅದು ಪ್ರತಿಯೊಬ್ಬರ ಮನಸ್ಸನ್ನು ಕದಡಬೇಕಾಗಿದೆ” ಎಂದು ಅವರು ಹೇಳಿದರು.

ಪವಿತ್ರ ಪೀಠದ ಬೆಂಬಲ

ಇಂತಹ ಅಸ್ಥಿರತೆಯನ್ನು ಸಹಜವಾಗಿ ನಿರೀಕ್ಷಿಸಲಾಗುವುದಿಲ್ಲ ಎಂಬುದನ್ನು ಧರ್ಮಾಧ್ಯಕ್ಷ ಡುಮಾಸ್ ಚೆನ್ನಾಗಿ ಅರಿತಿದ್ದಾರೆ. ಅದಕ್ಕಾಗಿ ಅವರು ತಮ್ಮ ಪ್ರೀತಿಯ ಜನರಿಗಾಗಿ ನಿರಂತರ ಬೆಂಬಲ ನೀಡುತ್ತಿರುವ ಪವಿತ್ರ ಪೀಠಕ್ಕೆ ಕೃತಜ್ಞತೆ ಸಲ್ಲಿಸುತ್ತಾರೆ. “ಕೆಲವು ದಿನಗಳ ಹಿಂದೆ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಮತ್ತು ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ಹೈಟಿ ಸರ್ಕಾರದ ಪ್ರತಿನಿಧಿ ಮಂಡಳಿಯನ್ನು ಭೇಟಿಯಾದದ್ದು, ನಮ್ಮ ಪಾಲಿಗೆ ಶಾಂತಿಯತ್ತ ಒಂದು ನೈಜ ಪ್ರಯತ್ನವಾಗಿದೆ. ಎಲ್ಲಕ್ಕಿಂತ ಮೊದಲು, ನಮ್ಮ ರಾಷ್ಟ್ರದ ಸ್ವಾತಂತ್ರ್ಯಕ್ಕೆ ಮೊದಲಿಗೆ ಮಾನ್ಯತೆ ನೀಡಿದ್ದೇ ಪವಿತ್ರ ಪೀಠ” ಎಂದು ಅವರು ಹೇಳಿದರು.

ಒಂದು ಮಹಾನ್ ಕನಸು

ಪ್ರಸ್ತುತ ಫ್ಲೋರಿಡಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅನ್ಸ್-ಆ-ವೋ–ಮಿರಾಗೋಆನ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರ ಹೃದಯದಲ್ಲಿ ಇನ್ನೊಂದು ಆಶೆಯೂ ಇದೆ. ಸರ್ಕಾರ ಮತ್ತು ಶಸ್ತ್ರಸಜ್ಜಿತ ಗುಂಪುಗಳ ನಡುವೆ ಶಾಂತಿ ಮಧ್ಯಸ್ಥಿಕೆ ನಡೆಸಲು ಪ್ರಯತ್ನಿಸಿದ್ದಕ್ಕಾಗಿ ಗ್ಯಾಂಗ್ ದಾಳಿಯಿಂದ ಪಾರಾದ ನಂತರ ಅವರು ಚೇತರಿಸಿಕೊಳ್ಳುತ್ತಿದ್ದಾರೆ.

ಆ ಆಶೆಯನ್ನು ಅವರು ಒಂದು ಕನಸು ಎಂದು ಕರೆಯುತ್ತಾರೆ.“ಒಂದು ದಿನ ಪೂಜ್ಯ ಜಗದ್ಗುರುಗಳು ಹೈಟಿಗೆ ಭೇಟಿ ನೀಡುವುದನ್ನು ನೋಡಬೇಕು. ಅವರ ಸಾನ್ನಿಧ್ಯವು ಮೃದುವಾದರೂ ಶಕ್ತಿಯುತವಾದ ಬೆಳಕಿನ ನೆರಳಿನಂತೆ ಆಳವಾದ ಶಾಂತಿಯನ್ನು ತರಬಲ್ಲದು ಎಂಬ ವಿಶ್ವಾಸ ನನಗಿದೆ” ಎಂದು ಪೂಜ್ಯ ಧರ್ಮಾಧ್ಯಕ್ಷ ಡುಮಾಸ್ ಹೇಳಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

13 ಮೇ 2026, 19:14