ಹುಡುಕಿ

CNEWA ಸಂಸ್ಥೆ ನೀಡಿದ ನಿಧಿಗಳ ಮೂಲಕ ಗಾಜಾ ನಗರದ ಅಲ್-ಅಹ್ಲಿ ಆಂಗ್ಲಿಕನ್ ಆಸ್ಪತ್ರೆಯಲ್ಲಿ, ಜೆರುಸಲೇಮ್‌ನ ಆಂಗ್ಲಿಕನ್ ಧರ್ಮಪ್ರಾಂತದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸುಟ್ಟ ಗಾಯಗಳ ವಿಭಾಗವನ್ನು (burn unit) ಸಜ್ಜುಗೊಳಿಸಲಾಗಿದೆ. CNEWA ಸಂಸ್ಥೆ ನೀಡಿದ ನಿಧಿಗಳ ಮೂಲಕ ಗಾಜಾ ನಗರದ ಅಲ್-ಅಹ್ಲಿ ಆಂಗ್ಲಿಕನ್ ಆಸ್ಪತ್ರೆಯಲ್ಲಿ, ಜೆರುಸಲೇಮ್‌ನ ಆಂಗ್ಲಿಕನ್ ಧರ್ಮಪ್ರಾಂತದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸುಟ್ಟ ಗಾಯಗಳ ವಿಭಾಗವನ್ನು (burn unit) ಸಜ್ಜುಗೊಳಿಸಲಾಗಿದೆ.  (© CNEWA Jerusalem)

ಪ್ಯಾಲೆಸ್ತೀನ್ ಜನರಿಗಾಗಿ ಧರ್ಮಸಭೆಯ ಪರಿಹಾರ ಕಾರ್ಯಗಳಿಗೆ ಕಥೋಲಿಕ ಸಹಾಯ ಸಂಸ್ಥೆಯ ಬೆಂಬಲ ಮುಂದುವರಿಕೆ

ಕಥೋಲಿಕ ನಿಯರ್ ಈಸ್ಟ್ ವೆಲ್ಫೇರ್ ಅಸೋಸಿಯೇಷನ್ (CNEWA) 2025ರ ಅಕ್ಟೋಬರ್‌ನಲ್ಲಿ ಗಾಜಾದಲ್ಲಿ ಯುದ್ಧ ವಿರಾಮ ಆರಂಭವಾದ ನಂತರದಿಂದ ಪ್ಯಾಲೆಸ್ಟೀನ್‌ನ ಗಾಜಾ ಮತ್ತು ವೆಸ್ಟ್ ಬ್ಯಾಂಕ್ ಪ್ರದೇಶಗಳಲ್ಲಿ ಧರ್ಮಸಭೆ ಪ್ರಾಯೋಜಿತ ಪರಿಹಾರ ಕಾರ್ಯಗಳಿಗೆ ಸುಮಾರು 1.2 ಮಿಲಿಯನ್ ಡಾಲರ್ ನೆರವನ್ನು ತ್ವರಿತವಾಗಿ ಒದಗಿಸಿದೆ.

ಲೇಖಕರು: ಮೈಕೆಲ್ ಜೆ. ಲಾ ಸಿವಿಟಾ,CNEWA

2025ರ ಅಕ್ಟೋಬರ್‌ನಲ್ಲಿ ಗಾಜಾದಲ್ಲಿ ಯುದ್ಧ ವಿರಾಮ ಜಾರಿಯಾದ ನಂತರದಿಂದ, ಕಥೋಲಿಕ ನಿಯರ್ ಈಸ್ಟ್ ವೆಲ್ಫೇರ್ ಅಸೋಸಿಯೇಷನ್ (CNEWA) ಪ್ಯಾಲೆಸ್ತೀನ್‌ನ ಗಾಜಾ ಮತ್ತು ವೆಸ್ಟ್ ಬ್ಯಾಂಕ್ ಪ್ರದೇಶಗಳಲ್ಲಿ ಧರ್ಮಸಭೆಯ ಪರಿಹಾರ ಕಾರ್ಯಗಳಿಗೆ ಸುಮಾರು 1.2 ಮಿಲಿಯನ್ ಡಾಲರ್ ನೆರವನ್ನು ಒದಗಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಮೊನ್ಸಿನೊರ್ ಪೀಟರ್ ಐ. ವಕ್ಕಾರಿ ತಿಳಿಸಿದ್ದಾರೆ.

ಜೆರುಸಲೇಮ್‌ನಲ್ಲಿ ಇರುವ ಜಗದ್ಗುರುಗಳ ಸೇವಾ ತಂಡದ ಮೂಲಕ, ಗಾಜಾದ ಅತೀ ದುರ್ಬಲ ಕುಟುಂಬಗಳಿಗೆ—ವಿಶೇಷವಾಗಿ ಮಹಿಳಾ ನೇತೃತ್ವದ ಕುಟುಂಬಗಳಿಗೆ, ಚಿಕ್ಕ ಮಕ್ಕಳಿರುವವರಿಗೆ, ವೃದ್ಧರು ಮತ್ತು ವಿಶೇಷ ಅಗತ್ಯವಿರುವವರಿಗೆ—$457,635 ಹಣವನ್ನು ವಿನಿಯೋಗಿಸಲಾಗಿದೆ. ಈ ನೆರವನ್ನು ಆಹಾರ, ಸ್ವಚ್ಛತಾ ವಸ್ತುಗಳು ಮತ್ತು ಚಳಿಗಾಲದ ಬಟ್ಟೆಗಳನ್ನು ಒದಗಿಸಲು ಬಳಸಲಾಗಿದೆ.

ಗಾಜಾದಲ್ಲಿ ದೀರ್ಘಕಾಲದ ಸಹಭಾಗಿಯಾದ ನಿಯರ್ ಈಸ್ಟ್ ಕೌನ್ಸಿಲ್ ಆಫ್ ಚರ್ಚಸ್ ಮೂಲಕ ಈ ಕಾರ್ಯಗಳನ್ನು ಸಂಯೋಜಿಸಲಾಗಿದ್ದು, ಉತ್ತರ ಗಾಜಾ ಮತ್ತು ಗಾಜಾ ನಗರದಲ್ಲಿರುವ ಕುಟುಂಬಗಳಿಗೆ ಆಹಾರ ಪ್ಯಾಕೆಟ್‌ಗಳು, ಸಿದ್ಧ ಆಹಾರ, ಸ್ವಚ್ಛತಾ ಕಿಟ್‌ಗಳು ಮತ್ತು ಬಟ್ಟೆಗಳನ್ನು ವಿತರಿಸಲಾಗಿದೆ.

ಗಾಜಾದಲ್ಲಿ ಯುದ್ಧ ವಿರಾಮ ಅಸ್ಥಿರವಾಗಿರುವ ಸಂದರ್ಭದಲ್ಲೇ, ಇಸ್ರಾಯೇಲಿನ ನಿರಂತರ ಯುದ್ಧ ಪರಿಸ್ಥಿತಿಯಿಂದ ಯಾತ್ರಿಕರು ಮತ್ತು ಪ್ರವಾಸಿಗರು ಕಡಿಮೆಯಾಗಿರುವುದರಿಂದ ಪ ಪ್ಯಾಲೆಸ್ತೀನ್‌ನ ವೆಸ್ಟ್ ಬ್ಯಾಂಕ್ ಪ್ರದೇಶದ ಅನೇಕ ಕುಟುಂಬಗಳ ಜೀವನಮಟ್ಟ ಕುಗ್ಗಿದೆ.

ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿರುವ ಸ್ಥಳೀಯ ಪ್ಯಾಲೆಸ್ತೀನ್ ಆರ್ಥಿಕತೆ ಇದರಿಂದ ತೀವ್ರವಾಗಿ ಹಾನಿಗೊಳಗಾಗಿದೆ. ಜೊತೆಗೆ, ಅತಿರೇಕಿ ವಸಾಹತುದಾರರಿಂದ ಪ್ಯಾಲೆಸ್ತೀನ್ ಸಮುದಾಯಗಳ ಮೇಲೆ ಹೆಚ್ಚುತ್ತಿರುವ ಹಿಂಸಾಚಾರ—ಅವುಗಳಿಗೆ ಕೆಲವೊಮ್ಮೆ ಇಸ್ರಾಯೇಲ್ ರಕ್ಷಣಾ ಪಡೆಗಳ ರಕ್ಷಣೆ ಮತ್ತು ಬೆಂಬಲವೂ ಇರುವುದಾಗಿ ಆರೋಪಿಸಲಾಗಿದೆ. ಇದು ಸಮಾಜದ ಸ್ಥಿರತೆಯನ್ನು ಮತ್ತಷ್ಟು ಕುಂದಿಸಿದೆ.

CNEWA ಸಂಸ್ಥೆ ವಿತರಿಸಿದ ನೆರವಿನ ಸುಮಾರು ಅರ್ಧ ಭಾಗವಾದ $507,550 ಅನ್ನು ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ, ಸಮುದಾಯ ಮೂಲಸೌಕರ್ಯ ಮತ್ತು ಸ್ಥೈರ್ಯ ಯೋಜನೆಗಳಿಗೆ ಬಳಸಲಾಗಿದೆ.

ಜೆರುಸಲೇಮ್‌ನಲ್ಲಿರುವ ತಂಡವು ಹೆಚ್ಚು ಜನಸಂಖ್ಯೆ ಹೊಂದಿರುವ ಮತ್ತು ಆರ್ಥಿಕವಾಗಿ ಹಾನಿಗೊಂಡ ಬೆತ್ಲೆಹೇಮ್‌ ಪ್ರದೇಶ ಹಾಗೂ ತೆಯ್ಬೆಹ್ ಪಟ್ಟಣದ ಮೇಲೆ ಗಮನ ಹರಿಸಿದೆ. ವೆಸ್ಟ್ ಬ್ಯಾಂಕ್‌ನ ಆಕ್ರಮಿತ ಪ್ರದೇಶಗಳಲ್ಲಿ ಉಳಿದಿರುವ ಏಕೈಕ ಕ್ರೈಸ್ತ ಪಟ್ಟಣವಾಗಿರುವ ತೆಯ್ಬೆಹ್ ಅತಿರೇಕಿ ವಸಾಹತುದಾರರಿಂದ ಅನೇಕ ದಾಳಿಗಳನ್ನು ಎದುರಿಸಿದ್ದು, ಅದರ ಪುರಾತನ ಸಂತ ಜಾರ್ಜ್ ದೇವಾಲಯವನ್ನು ಸುಡುವ ಪ್ರಯತ್ನವೂ ನಡೆದಿದೆ.

ಸ್ಥಳೀಯ ಧರ್ಮಸಭೆ ಮತ್ತು ಸಂಬಂಧಿತ ಸಂಸ್ಥೆಗಳ ಸಹಯೋಗದಲ್ಲಿ— ಪೂರ್ವ ಜೆರುಸಲೇಮ್, ಗಾಜಾ ಮತ್ತು ವೆಸ್ಟ್ ಬ್ಯಾಂಕ್‌ನಲ್ಲಿ ವಾಸಿಸುವ ಪ್ಯಾಲೆಸ್ತೀನ್ ಜನರಿಗೆ ಸುಮಾರು 40% ಸಾಮಾಜಿಕ ಸೇವೆಗಳನ್ನು ಒದಗಿಸಲಾಗುತ್ತಿದೆ. ಈ ಉದ್ಯೋಗ ಯೋಜನೆಗಳು ಸಮುದಾಯ ಮೂಲಸೌಕರ್ಯ ಮತ್ತು ಸೇವೆಗಳನ್ನು ಬಲಪಡಿಸಿವೆ. ಜೊತೆಗೆ, ಉದ್ಯೋಗವಿಲ್ಲದ ಕುಟುಂಬ ಮುಖ್ಯಸ್ಥರಿಗೆ ಗೌರವದೊಂದಿಗೆ ಕೆಲಸ ಮತ್ತು ಕುಟುಂಬವನ್ನು ಪೋಷಿಸಲು ಆದಾಯವನ್ನು ಒದಗಿಸಿವೆ.

ಉಳಿದ ಸುಮಾರು $200,000 ನಿಧಿಯನ್ನು ಗಾಜಾ ನಗರದಲ್ಲಿರುವ ಅಲ್-ಅಹ್ಲಿ ಆಂಗ್ಲಿಕನ್ ಆಸ್ಪತ್ರೆಗೆ ವೈದ್ಯಕೀಯ ಸಾಮಗ್ರಿಗಳು, ಔಷಧಿಗಳು ಮತ್ತು ಸೇವೆಗಳಿಗಾಗಿ ವಿಶೇಷವಾಗಿ ಯುದ್ಧದ ವೇಳೆ ಗಂಭೀರವಾಗಿ ಸುಟ್ಟವರಿಗೆ ಹಾಗೂ ಮಕ್ಕಳ ಮತ್ತು ಯುವಜನರ ತುರ್ತು ಶಸ್ತ್ರಚಿಕಿತ್ಸೆಗಳಿಗೆ ಬಳಸಲಾಗಿದೆ. ಜೊತೆಗೆ, ಗಾಜಾ ನಗರದ ಅಲ್-ರಿಮಾಲ್ ಪ್ರದೇಶದಲ್ಲಿರುವ ನಿಯರ್ ಈಸ್ಟ್ ಕೌನ್ಸಿಲ್ ಆಫ್ ಚರ್ಚ್ಸ್ ತಾಯಿ-ಮಗು ಕ್ಲಿನಿಕ್‌ಗೆ ಪ್ರಯೋಗಾಲಯ ಉಪಕರಣಗಳನ್ನೂ ಒದಗಿಸಲಾಗಿದೆ.

“ಪವಿತ್ರ ಭೂಮಿಯಲ್ಲಿನ ಬಡವರ ಅಳಲಿಗೆ ಉದಾರವಾಗಿ ಸ್ಪಂದಿಸಿದ ನಮ್ಮ ಎಲ್ಲಾ ದಾನಿಗಳಿಗೆ CNEWA ಕೃತಜ್ಞವಾಗಿದೆ,” ಎಂದು ಸಂಸ್ಥೆಯ ಅಧ್ಯಕ್ಷ ಮೊನ್ಸಿನೊರ್ ಪೀಟರ್ ಐ. ವಕ್ಕಾರಿ ತಿಳಿಸಿದ್ದಾರೆ.

ಕಳೆದ ಅಕ್ಟೋಬರ್‌ನಿಂದ ಬಿಡುಗಡೆ ಮಾಡಿದ ನಿಧಿಗಳ ಒಂದು ಭಾಗವು ಅಮೇರಿಕಾದಾದ್ಯಂತದ ಧರ್ಮಕೇಂದ್ರಗಳು ಮತ್ತು ಧರ್ಮಪ್ರಾಂತಗಳಿಂದ ಸಂಗ್ರಹಿಸಲ್ಪಟ್ಟಿದ್ದು, ಆಗಿನ ಅಮೆರಿಕಾದ ಕಥೋಲಿಕ ಧರ್ಮಾಧ್ಯಕ್ಷರ  ಸಮಾವೇಶದ ಅಧ್ಯಕ್ಷರಾದ ತಿಮೋತಿ ಪಿ. ಬ್ರೋಗ್ಲಿಯೊ ಅವರ ಮನವಿಗೆ ಪ್ರತಿಕ್ರಿಯೆಯಾಗಿ ನೀಡಲಾಗಿದೆ. ಇದಲ್ಲದೆ ನೈಟ್ಸ್ ಆಫ್ ಕೊಲಂಬಸ್ ಹಾಗೂ ಇಂಟರ್ನ್ಯಾಷನಲ್ ಆರ್ಥೊಡಾಕ್ಸ್ ಕ್ರಿಶ್ಚಿಯನ್ ಚಾರಿಟೀಸ್ ಉತ್ತರ ಅಮೇರಿಕಾ ಮತ್ತು ಇತರ ಪ್ರದೇಶಗಳ ವ್ಯಕ್ತಿಗಳಿಂದ ಸಹಾಯ ಲಭಿಸಿದೆ.

ಈ ಲೇಖನವನ್ನು ಮೂಲತಃ Catholic Near East Welfare Association ಪ್ರಕಟಿಸಿದೆ. ಎಲ್ಲಾ ಹಕ್ಕುಗಳು ಕಾಯ್ದಿರಿಸಲಾಗಿದೆ. ಮೂರನೇ ವ್ಯಕ್ತಿಗಳಿಂದ ಅನುಮತಿಯಿಲ್ಲದೆ ಮರುಪ್ರಕಟಣೆ ಮಾಡಲು ಅವಕಾಶವಿಲ್ಲ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

01 ಮೇ 2026, 20:07