ಹುಡುಕಿ

ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಭವ್ಯ ಮಾನವೀಯತೆ’ (Magnifica humanitas) ವಿಶ್ವಪತ್ರಿಕೆಯ ಒಂದು ಪ್ರತಿ. (AFP ಅಥವಾ ಪರವಾನಗಿ ಹೊಂದಿದ ಮೂಲಗಳು) ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಭವ್ಯ ಮಾನವೀಯತೆ’ (Magnifica humanitas) ವಿಶ್ವಪತ್ರಿಕೆಯ ಒಂದು ಪ್ರತಿ. (AFP ಅಥವಾ ಪರವಾನಗಿ ಹೊಂದಿದ ಮೂಲಗಳು)  (AFP or licensors)

ಸಿಲಿಕಾನ್ ವ್ಯಾಲಿಯ ಧರ್ಮಗುರು: ಧರ್ಮಸಭೆ ಮತ್ತು ಬಿಗ್ ಟೆಕ್ ನಡುವಿನ ಸಂವಾದಕ್ಕೆ ಹೊಸ ಉತ್ತೇಜನ ನೀಡಿದ ವಿಶ್ವಪತ್ರಿಕೆ

ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಲ್ಲಿರುವ ಲೋಸ್ ಆಲ್ಟೋಸ್‌ನ ಸಂತ ಸೈಮನ್ ಧರ್ಮಕೇಂದ್ರದ ಧರ್ಮಗುರು ಹಾಗೂ ಮಾಜಿ ಇಂಜಿನಿಯರ್ ವಂ. ಗುರು ಬ್ರೆಂಡನ್ ಮ್ಯಾಕ್‌ಗ್ವೈರ್ ಅವರ ಪ್ರಕಾರ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ‘ಭವ್ಯ ಮಾನವೀಯತೆ’ (Magnifica humanitas) ವಿಶ್ವಪತ್ರಿಕೆ, ತಂತ್ರಜ್ಞಾನದ ಅಗ್ರಭಾಗದಲ್ಲಿ ಕಾರ್ಯನಿರ್ವಹಿಸುವವರೊಂದಿಗೆ ಧರ್ಮಸಭೆಯ ಸಂವಾದಕ್ಕೆ ಹೊಸ ಚೈತನ್ಯ ನೀಡಿದೆ.

ಲೇಖಕರು: ಸಾಲ್ವತೊರೆ ಸೆರ್ನುಜಿಯೊ

ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ತಮ್ಮ ಮೊದಲ ವಿಶ್ವಪತ್ರಿಕೆ  ‘ಭವ್ಯ ಮಾನವೀಯತೆ’ (Magnifica humanitas)  ಅನ್ನು ಪ್ರಕಟಿಸಿದ ಸಂದರ್ಭದಲ್ಲಿ, ಸಿಲಿಕಾನ್ ವ್ಯಾಲಿ ಎಂದು ಪ್ರಸಿದ್ಧವಾಗಿರುವ ಕ್ಯಾಲಿಫೋರ್ನಿಯಾದ ಲೋಸ್ ಆಲ್ಟೋಸ್‌ನ ಸಂತ ಸೈಮನ್ ಧರ್ಮಕೇಂದ್ರದ ಧರ್ಮಗುರು ವಂ. ಗುರು ಬ್ರೆಂಡನ್ ಮ್ಯಾಕ್‌ಗ್ವೈರ್ ಅವರು, ಪವಿತ್ರ ಸಿಂಹಾಸನದ ಕೃತಕ ಬುದ್ಧಿಮತ್ತೆಯ ಮೇಲಿನ ಆಸಕ್ತಿಯನ್ನು ಕ್ರಮೇಣ ಗಾಢಗೊಳಿಸಿದ “ಹತ್ತು ವರ್ಷಗಳ ಸಂವಾದ”ದ ಕುರಿತು ಚಿಂತನೆ ಹಂಚಿಕೊಂಡರು.

ಐರ್ಲೆಂಡ್ ಮೂಲದ ಈ ಮಾಜಿ ಇಂಜಿನಿಯರ್ ಕಂಪ್ಯೂಟರ್ ಸೈನ್ಸ್ ಮತ್ತು ಸೈಬರ್ ಭದ್ರತೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಮತ್ತು ಇಪ್ಪತ್ತಾರು ವರ್ಷಗಳಿಂದ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಂ. ಗುರು ಮ್ಯಾಕ್‌ಗ್ವೈರ್ ಅವರು ವಿಜ್ಞಾನಿಗಳು, ತಜ್ಞರು ಮತ್ತು ತಂತ್ರಜ್ಞಾನ ಕ್ಷೇತ್ರದ ನಾಯಕರ ನಡುವೆ ವಾಸಿಸಿ ಕೆಲಸ ಮಾಡುತ್ತಿದ್ದಾರೆ. ಈ ವರ್ಷಗಳಲ್ಲಿ ಅವರು ಅನೇಕರಿಗೆ ಪಾಪನಿವೇದನೆ ಧರ್ಮಗುರು, ಮಾರ್ಗದರ್ಶಕ ಮತ್ತು ವೈಯಕ್ತಿಕ ಸ್ನೇಹಿತರಾಗಿದ್ದಾರೆ.

ಅವರಲ್ಲಿ ಒಬ್ಬರು ಆಂಥ್ರೋಪಿಕ್ ಸಂಸ್ಥೆಯ ಸಹ-ಸ್ಥಾಪಕರಾದ ಕ್ರಿಸ್ ಓಲಾ. ಅವರು ಸೋಮವಾರ ನಡೆದ ವಿಶ್ವಪತ್ರಿಕೆಯ ಪರಿಚಯ ಕಾರ್ಯಕ್ರಮದಲ್ಲಿ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರೊಂದಿಗೆ ಸೇರಿದ್ದರು. “ಕ್ರಿಸ್ ನನ್ನ ಆತ್ಮೀಯ ಸ್ನೇಹಿತ,” ಎಂದು ವಂ. ಗುರು ಮ್ಯಾಕ್‌ಗ್ವೈರ್ ಅವರು ಕಾರ್ಯಕ್ರಮದ ಪಕ್ಕದಲ್ಲಿ ಆರನೇ ಪಾಲ್ ಸಭಾಂಗಣದಲ್ಲಿ ಪತ್ರಕರ್ತರಿಗೆ ಹೇಳಿದರು.


ಮೊದಲ ಸಂಪರ್ಕಗಳು

“ನನಗೆ ಧರ್ಮಗುರುಗಳಾಗಿ ದೀಕ್ಷೆ ದೊರೆತು 26 ವರ್ಷಗಳಾಗಿವೆ, ಮತ್ತು ನಾನು ಈ ಕ್ಷೇತ್ರದಿಂದಲೇ ಬಂದವನು,” ಎಂದು ವಂ. ಗುರು ಮ್ಯಾಕ್‌ಗ್ವೈರ್ ವಿವರಿಸಿದರು. “ಹಾಗಾಗಿ, ನಾನು ಅನೇಕ ವಿಭಿನ್ನ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರೂ, ಈ ಜಗತ್ತಿನಿಂದ ಎಂದಿಗೂ ಸಂಪೂರ್ಣವಾಗಿ ದೂರವಾಗಲಿಲ್ಲ. ಈ ಕ್ಷೇತ್ರದ ಜನರೊಂದಿಗೆ ನನ್ನ ಸಂಬಂಧಗಳನ್ನು ಸದಾ ಉಳಿಸಿಕೊಂಡಿದ್ದೇನೆ.”

“ನಾನು ಒಂದು ಕಂಪನಿಯಲ್ಲಿ ನಿರ್ವಹಣಾ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದೆ. ನನ್ನ ಸ್ನೇಹಿತರು ನಂತರ CEOಗಳು ಮತ್ತು CFOಗಳಾದರು. ಕಳೆದ 25 ವರ್ಷಗಳಿಂದ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ — ವಿಶೇಷವಾಗಿ ಕಳೆದ ಹತ್ತು ವರ್ಷಗಳಲ್ಲಿ ಬಹಳ ಆಳವಾಗಿ,” ಎಂದು ಅವರು ನೆನಪಿಸಿಕೊಂಡರು. “ಅವರಲ್ಲಿ ಅನೇಕರು ನನ್ನ ಬಳಿ ಬಂದು, ಸಿಲಿಕಾನ್ ವ್ಯಾಲಿಯ ಒಳಗಿನಿಂದ ಹೊರಬರುತ್ತಿರುವ ಸಂಗತಿಗಳನ್ನು ನೋಡಿ ಆತಂಕವಾಗುತ್ತಿದೆ ಎಂದು ಹೇಳುತ್ತಿದ್ದರು. ಕೆಲವರು, ‘ಇದು ನನಗೆ ತುಂಬಾ ಹೆಚ್ಚು’ ಎಂದು ಹೇಳಿ ಹಿಂದೆ ಸರಿಯಲು ಬಯಸಿದರು. ಇನ್ನೂ ಕೆಲವರು, ‘ನಾವು ಏನು ಮಾಡಬಹುದು?’ ಎಂದು ಕೇಳುತ್ತಿದ್ದರು.”

“ಆಗ ನಾವು ಗುಂಪುಗಳನ್ನು ಒಟ್ಟುಗೂಡಿಸಲು ಆರಂಭಿಸಿದೆವು,” ಎಂದು ಅವರು ಮುಂದುವರಿಸಿದರು. ಸಂಸ್ಕೃತಿ ಮತ್ತು ಶಿಕ್ಷಣ ವಿಭಾಗದ ಕಾರ್ಯದರ್ಶಿಯಾದ ಧರ್ಮಾಧ್ಯಕ್ಷ  ಪೂಜ್ಯ ಪೌಲ್ ಟೈಘ್ ಅವರ ಸಹಾಯದಿಂದ, ಅವರು “ಆಲಿಸುವಿಕೆ ಸಭೆಗಳನ್ನು” ಆಯೋಜಿಸಲು ಆರಂಭಿಸಿದರು.

‘ಜ್ಞಾನದ ಹುಡುಕಾಟ’

ಈ ಪ್ರಕ್ರಿಯೆ ಸುಮಾರು ಎಂಟು ಅಥವಾ ಒಂಬತ್ತು ವರ್ಷಗಳ ಹಿಂದೆ ಆರಂಭವಾಯಿತು. ನಂತರ, ಸಂಸ್ಕೃತಿ ಮತ್ತು ಶಿಕ್ಷಣ ವಿಭಾಗದ ಸಹಯೋಗದಲ್ಲಿ ಸಾಂಟಾ ಕ್ಲಾರಾ ವಿಶ್ವವಿದ್ಯಾಲಯದಲ್ಲಿ ತಂತ್ರಜ್ಞಾನ, ನೀತಿಶಾಸ್ತ್ರ ಮತ್ತು ಸಂಸ್ಕೃತಿ ಸಂಸ್ಥೆ (Institute for Technology, Ethics and Culture) ಎಂಬ ಸಂಸ್ಥೆ ಸ್ಥಾಪನೆಯಾಗುವುದರ ಮೂಲಕ ಇದು ಸ್ಪಷ್ಟ ರೂಪ ಪಡೆದಿತು.

“ನಾವು ಕ್ರಾಂತಿಕಾರಿ ತಂತ್ರಜ್ಞಾನಗಳ ಯುಗದಲ್ಲಿ ನೀತಿಶಾಸ್ತ್ರ’ (Ethics in the Age of Disruptive Technologies) ಎಂಬ ಕೈಪಿಡಿ ಸ್ವರೂಪದ ಪುಸ್ತಕವನ್ನೂ ಪ್ರಕಟಿಸಿದೆವು,” ಎಂದು ಫಾ. ಮ್ಯಾಕ್‌ಗ್ವೈರ್ ಹೇಳಿದರು. “ಅದರ ನಂತರ, ನಮಗೆ ಇನ್ನಷ್ಟು ಪ್ರತಿಕ್ರಿಯೆಗಳು ಬರತೊಡಗಿದವು.”

ಕಳೆದ ಶರತ್ಕಾಲದಲ್ಲಿ ಅವರು ಶ್ರೀ ಕ್ರಿಸ್ ಓಲಾ ಅವರನ್ನು ಭೇಟಿಯಾದರು. “ಪರಸ್ಪರ ಆಲಿಸುವಿಕೆಯನ್ನು ಆಧರಿಸಿದ ಅತ್ಯಂತ ಆತ್ಮೀಯ ಸಂಬಂಧ ಅಲ್ಲಿ ಹುಟ್ಟಿಕೊಂಡಿತು,” ಎಂದು ಅವರು ಹೇಳಿದರು.

ಧರ್ಮಾಧ್ಯಕ್ಷ ಪೂಜ್ಯ ಪೌಲ್ ಟೈಘ್ ಅವರು ಸಿಲಿಕಾನ್ ವ್ಯಾಲಿಯ ಕಾರ್ಯನಿರ್ವಾಹಕರೊಂದಿಗೆ ನಡೆದ ಮಿನರ್ವ ಮಾತುಕತೆ (Minerva Talks) ಕಾರ್ಯಕ್ರಮಕ್ಕಾಗಿ ಕ್ಯಾಲಿಫೋರ್ನಿಯಾಗೆ ಭೇಟಿ ನೀಡಿದರು. ಜೊತೆಗೆ, ರೋಮ್‌ನಲ್ಲಿಯೂ ಅನೇಕ ಸಭೆಗಳು ನಡೆದವು. ಈ ಎಲ್ಲವೂ ಕಥೋಲಿಕ ಧರ್ಮಸಭೆ, ಇತರ ಧರ್ಮಗಳು ಮತ್ತು ತಂತ್ರಜ್ಞಾನ ಜಗತ್ತಿನ ನಡುವೆ “ಜ್ಞಾನದ ಹುಡುಕಾಟ” ಎಂಬ ಸಾಮಾನ್ಯ ಉದ್ದೇಶದ ಆಧಾರದ ಮೇಲೆ ಸಂವಾದವನ್ನು ಬಲಪಡಿಸಲು ನೆರವಾಯಿತು.

“ಈ ಪಯಣದಲ್ಲಿ ನಾವು ಅವರಿಗೆ ಒಬ್ಬ ಸಹಯಾತ್ರಿಯಂತೆ ಕಂಡೆವು ಎಂಬ ಭಾವನೆ ಅವರಿಗೆ ಉಂಟಾಯಿತು,” ಎಂದು ವಂ. ಗುರು ಮ್ಯಾಕ್‌ಗ್ವೈರ್ ಹೇಳಿದರು. “ಅದೇ ನಾವು ಆಗಲು ಪ್ರಯತ್ನಿಸಿದ್ದೇವೆ.”

ಪಯಣದ ಒಂದು ಮೈಲಿಗಲ್ಲು

ಈ ಅರ್ಥದಲ್ಲಿ, Magnifica humanitas ಅನ್ನು ದೀರ್ಘ ಮತ್ತು ಸಂಕೀರ್ಣ ಪಯಣದ ಮುದ್ರೆಯಾಗಿ ಕಾಣಬಹುದು. ಈ ಪಯಣದಲ್ಲಿ, ಧರ್ಮಸಭೆ “ಶುಭಸಂದೇಶದ ಬೆಳಕಿನಲ್ಲಿ” ನಮ್ಮ ಕಾಲದ ಸವಾಲುಗಳು ಮತ್ತು ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ.ಈ ಬದಲಾವಣೆಗಳನ್ನು ಮುನ್ನಡೆಸುತ್ತಿರುವವರೊಂದಿಗೆ ಸಂವಾದಕ್ಕೆ ಪ್ರವೇಶಿಸುವ ಪ್ರಯತ್ನ ಇದಾಗಿದೆ, ಹೀಗೆ ಧರ್ಮಸಭೆಯ ಕೊಡುಗೆ ಇನ್ನಷ್ಟು ಪರಿಣಾಮಕಾರಿಯಾಗಿ ಮತ್ತು ತಕ್ಷಣದ ರೀತಿಯಲ್ಲಿ ವ್ಯಕ್ತವಾಗಲಿ ಎಂಬ ಉದ್ದೇಶ ಹೊಂದಿದೆ.

“ಸಂವಾದಕ್ಕೆ ಪ್ರವೇಶಿಸುವ ಅಪಾಯವನ್ನು ತೆಗೆದುಕೊಳ್ಳದೇ ಇರುವುದು ಇನ್ನೂ ದೊಡ್ಡ ಅಪಾಯವಾಗುತ್ತದೆ,” ಎಂದು in ವಂ. ಗುರು ಮ್ಯಾಕ್‌ಗ್ವೈರ್ ಹೇಳಿದರು. ಆಂಥ್ರೋಪಿಕ್‌ನಂತಹ ಕಂಪನಿಯು ವ್ಯಾಟಿಕನ್ ಅನ್ನು “ಸಾಮಾಜಿಕ ಮೆರಗು” ಅಥವಾ ಖ್ಯಾತಿ ಶುದ್ಧೀಕರಣಕ್ಕಾಗಿ ಬಳಸಿಕೊಳ್ಳಬಹುದು ಎಂಬ ಟೀಕೆಗಳನ್ನು ಅವರು ತಳ್ಳಿಹಾಕಿದರು.

“ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಅತಿ ದೊಡ್ಡ ಅಪಾಯ,” ಎಂದು ಅವರು ಒತ್ತಿ ಹೇಳಿದರು. “1967ರಲ್ಲಿ ಮಾರ್ಟಿನ್ ಲೂಥರ್ ಕಿಂಗ್ ನೀಡಿದ ಭಾಷಣವನ್ನು ನಾನು  ನೆನಪಿಸಿಕೊಳ್ಳುತ್ತೇನೆ — ನಮ್ಮ ಧ್ವನಿಯನ್ನು ಬಳಸುವ ಮಹತ್ವದ ಕುರಿತು ನೀಡಿದ ಶಕ್ತಿಯುತ ಭಾಷಣ ಅದು. ಅವರು, ಇಂದಿನ ಕ್ಷಣದ ತೀವ್ರ ತುರ್ತು ಪರಿಸ್ಥಿತಿ ಮೌನವನ್ನು ದ್ರೋಹವನ್ನಾಗಿ ಮಾಡುತ್ತದೆ ಎಂದು ಹೇಳಿದರು. ನಾವು ಈಗ ಇತಿಹಾಸದ ಅಂತಹ ಕ್ಷಣದಲ್ಲಿ ಇದ್ದೇವೆ; ಇಲ್ಲಿ ನಾವು ನಮ್ಮ ಧ್ವನಿಯನ್ನು ಬಳಸಬೇಕು ಮತ್ತು ಸಂವಾದ ನಡೆಸಬೇಕು ಎಂದು ನಾನು ಭಾವಿಸುತ್ತೇನೆ.”

ನಿರಂತರ ಸಂವಾದ

“ಧರ್ಮಸಭೆಯಾಗಿ, ನಾವು ಖಂಡಿತವಾಗಿಯೂ ಪ್ರತಿಯೊಂದು ವಿಷಯದಲ್ಲೂ ಒಪ್ಪಿಗೆಯಲ್ಲಿಲ್ಲ,” ಎಂದು ವಂ. ಗುರು ಮ್ಯಾಕ್‌ಗ್ವೈರ್ ಹೇಳಿದರು. “ಆದರೆ, ಪೂಜ್ಯ ಜಗದ್ಗುರು ಫ್ರಾನ್ಸಿಸ್ ಅವರ ಸಿನೋಡ್ ಪರಿಕಲ್ಪನೆಯನ್ನು ನಾವು ನಿಜವಾಗಿ ಅನುಸರಿಸುವುದು ಅತ್ಯಗತ್ಯ — ಅಂದರೆ, ಆಲಿಸುವುದು, ಭೇಟಿಯಾಗುವುದು ಮತ್ತು ಜನರೊಂದಿಗೆ ಸೇರಿ ಕಾರ್ಯನಿರ್ವಹಿಸುವುದು. ಮತ್ತು ಇದುವರೆಗೆ ಈ ಸಂವಾದ ಅತ್ಯಂತ ಫಲಪ್ರದವಾಗಿದೆ ಎಂದು ನಾನು ಭಾವಿಸುತ್ತೇನೆ.”

ಧರ್ಮಸಭೆಯ ನಿಲುವು ವಿಮರ್ಶಾತ್ಮಕವಾಗಿದ್ದರೂ ಅಥವಾ ಪ್ರವಾದಿಯ ಧ್ವನಿಯಂತಿದ್ದರೂ ಸಹ ಈ ಸಂವಾದ ಮುಂದುವರಿಯಬೇಕು. Magnifica humanitas ವಿಶ್ವಪತ್ರಿಕೆಯಲ್ಲಿ “ಬಿಗ್ ಟೆಕ್” ಕುರಿತು ಇದೇ ರೀತಿಯ ದೃಷ್ಟಿಕೋನವನ್ನು ವ್ಯಕ್ತಪಡಿಸಲಾಗಿದೆ: ಅಂದರೆ, “ಕೆಲವರ” ಕೈಯಲ್ಲಿ ಅಧಿಕಾರ ಮತ್ತು ನಿಯಂತ್ರಣವನ್ನು ಕೇಂದ್ರೀಕರಿಸಿರುವ ಪ್ರಮುಖ ತಂತ್ರಜ್ಞಾನ ಕಂಪನಿಗಳು, ಈಗಾಗಲೇ ಆರ್ಥಿಕ ಮತ್ತು ಸಾಮಾಜಿಕ ಜೀವನದ ಅಂಚಿನಲ್ಲಿ ಬದುಕುತ್ತಿರುವವರ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿವೆ.

“ತಂತ್ರಜ್ಞಾನವು ತಮ್ಮ ಮೇಲೆ, ತಮ್ಮ ಮಕ್ಕಳ ಮೇಲೆ ಮತ್ತು ಉದ್ಯೋಗ ಕ್ಷೇತ್ರದ ಮೇಲೆ ಬೀರುವ ಪರಿಣಾಮದ ಬಗ್ಗೆ ಅನೇಕ ಜನರು ಭಯಪಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ನಿಜ ಹೇಳಬೇಕಾದರೆ, ಆ ಭಯಕ್ಕೆ ಸಮಂಜಸವಾದ ಕಾರಣಗಳಿವೆ,” ಎಂದು ವಂ. ಗುರು ಮ್ಯಾಕ್‌ಗ್ವೈರ್ ಹೇಳಿದರು. “ಆದರೆ, ಅದೇ ಸಮಯದಲ್ಲಿ, ತಂತ್ರಜ್ಞಾನವು ಸದಾ ಸ್ಥಳಾಂತರ, ಬದಲಾವಣೆ ಮತ್ತು ಪರಿವರ್ತನೆಯನ್ನು ತಂದಿದೆ.”

“ಅವರು ಶತ್ರುಗಳೆಂಬ ಭಾವನೆಯನ್ನು ನಾನು ಅರ್ಥಮಾಡಿಕೊಳ್ಳುತ್ತೇನೆ,” ಎಂದು ಅವರು ಮುಂದುವರಿಸಿದರು. “ನಾನು ಐರ್ಲೆಂಡ್‌ನವನು. ಅಲ್ಲಿ ಉತ್ತರ ಭಾಗದಲ್ಲಿ ಯುದ್ಧವಿತ್ತು. ಆಗ ಜನರು, ಶತ್ರುವಿನೊಂದಿಗೆ ಮಾತನಾಡುವವನೇ ಶತ್ರು ಎಂದು ಹೇಳುತ್ತಿದ್ದರು. ಅದು ತಪ್ಪು ಮತ್ತು ದಾರಿ ತಪ್ಪಿಸುವ ಕಲ್ಪನೆ. ಶಾಂತಿಯನ್ನು ಬಯಸಿದರೆ, ಶತ್ರುಗಳೆಂದು ಕಾಣುವವರೊಂದಿಗೂ ಸಂವಾದ ನಡೆಸಬೇಕು. ತಂತ್ರಜ್ಞಾನಕ್ಕೂ ಇದೇ ಅನ್ವಯಿಸುತ್ತದೆ: ನಾವು ಅದರೊಂದಿಗೆ ಸಂವಾದ ನಡೆಸಲೇಬೇಕು. ಅವರು ನಮ್ಮ ಭವಿಷ್ಯವನ್ನು ನಿರ್ಮಿಸುತ್ತಿದ್ದಾರೆ — ನಾವು ಇದ್ದರೂ ಇಲ್ಲದಿದ್ದರೂ.”

ಮೊದಲ ಹೆಜ್ಜೆ, ಅಂತ್ಯವಲ್ಲ

ಮುಂದಿನ ಹಂತವೆಂದರೆ, “ನಾನು ‘ಜ್ಞಾನ ವಲಯಗಳು’ ಎಂದು ಕರೆಯುವಂತಹ ವೇದಿಕೆಗಳನ್ನು ನಿರ್ಮಿಸುವುದು — ಅಲ್ಲಿ ಜನರು ಒಂದೇ ಮೇಜಿನ ಸುತ್ತ ಕುಳಿತು ಪರಸ್ಪರ ಆಲಿಸಬಹುದು,” ಎಂದು ವಂ. ಗುರು ಮ್ಯಾಕ್‌ಗ್ವೈರ್ ಸಮಾರೋಪದಲ್ಲಿ ಹೇಳಿದರು.

“ಇದನ್ನು ನಾವು ತಕ್ಷಣವೇ ಆರಂಭಿಸಲಿದ್ದೇವೆ,ನಾಳೆಯೇ ಪರಿಚಯಾತ್ಮಕ ಸಭೆಗಳು ಈಗಾಗಲೇ ಯೋಜಿಸಲ್ಪಟ್ಟಿವೆ. ದೇವರ ಇಚ್ಛೆಯಿದ್ದರೆ, ವಿಶಾಲ ದೃಷ್ಟಿಕೋನದಿಂದ ಆಲಿಸಲು ಒಂದು ಪ್ರತಿನಿಧಿ ಮಂಡಳಿ ಸಿಲಿಕಾನ್ ವ್ಯಾಲಿಗೆ ಪ್ರಯಾಣಿಸಲಿದೆ ಎಂಬುದು ನಮ್ಮ ಆಶೆಯಾಗಿದೆ.”

“ಇದು ಮೊದಲ ಹೆಜ್ಜೆ, ಅಂತ್ಯವಲ್ಲ,” ಎಂದು ಅವರು ಹೇಳಿದರು. “ಇದು ಸಂವಾದದ ಆರಂಭ, ಅದರ ಸಮಾಪ್ತಿಯಲ್ಲ.”

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

26 ಮೇ 2026, 19:22