ಹುಡುಕಿ

ಪೆಂಬಾ ಧರ್ಮಕ್ಷೇತ್ರ, ಕಾಬೊ ಡೆಲ್ಗಾಡೊದಲ್ಲಿರುವ ಸಾಂ ಲೂಯಿಸ್ ಮರಿಯಾ ಡೆ ಮಾಂಟ್‌ಫೋರ್ಟ್ ದೇವಾಲಯ ಧ್ವಂಸಗೊಂಡಿರುವ ದೃಶ್ಯ ಪೆಂಬಾ ಧರ್ಮಕ್ಷೇತ್ರ, ಕಾಬೊ ಡೆಲ್ಗಾಡೊದಲ್ಲಿರುವ ಸಾಂ ಲೂಯಿಸ್ ಮರಿಯಾ ಡೆ ಮಾಂಟ್‌ಫೋರ್ಟ್ ದೇವಾಲಯ ಧ್ವಂಸಗೊಂಡಿರುವ ದೃಶ್ಯ 

ಮೊಜಾಂಬಿಕ್‌ನಲ್ಲಿ ಕಾಬೊ ಡೆಲ್ಗಾಡೊದಲ್ಲಿನ ಕ್ಯಾಥೋಲಿಕ್ ಮಿಷನ್ ಮೇಲೆ ದಾಳಿಯನ್ನು ಖಂಡಿಸಿದ ಮಹಾಧರ್ಮಾಧ್ಯಕ್ಷರು

ಮೊಜಾಂಬಿಕ್‌ನ ಮಹಾಧರ್ಮಾಧ್ಯಕ್ಷರಾದ ಪೂಜ್ಯ ಇನಾಸಿಯೊ ಸೌರೆ ಅವರು ಕಾಬೊ ಡೆಲ್ಗಾಡೊದಲ್ಲಿನ ಕ್ಯಾಥೋಲಿಕ್ ಮಿಷನ್ ಧ್ವಂಸಗೊಂಡಿರುವುದನ್ನು ತೀವ್ರವಾಗಿ ಖಂಡಿಸಿ, ಹಿಂಸಾಚಾರ ಅಂತ್ಯವಾಗಬೇಕು ಹಾಗೂ ಧಾರ್ಮಿಕ ಸಮುದಾಯಗಳ ನಡುವೆ ಶಾಂತಿಯುತ ಸಹಬಾಳ್ವೆ ಸ್ಥಾಪಿತವಾಗಬೇಕೆಂದು ಕೋರಿದ್ದಾರೆ.

ಲೇಖಕರು: ಕ್ರೆಮಿಲ್ಡೊ ಅಲೆಕ್ಸಾಂಡ್ರೆ ಮತ್ತು ಫ್ರಾನ್ಸೆಸ್ಕ್ಯಾ ಮೆರ್ಲೊ

ನಂಪುಲಾದ ಮಹಾಧರ್ಮಾಧ್ಯಕ್ಷರು ಮತ್ತು ಮೊಜಾಂಬಿಕ್ ಧರ್ಮಾಧ್ಯಕ್ಷರ ಮಹಾಸಭೆಯ (CEM) ಅಧ್ಯಕ್ಷರಾದ ಪೂಜ್ಯ ಇನಾಸಿಯೊ ಸೌರೆ ಅವರು, ಕಾಬೊ ಡೆಲ್ಗಾಡೊ ಪ್ರಾಂತ್ಯದ ಪೆಂಬಾ ಧರ್ಮಕ್ಷೇತ್ರದಲ್ಲಿರುವ ಸೇಂಟ್ ಲೂಯಿಸ್ ಮೇರಿ ಡೆ ಮಾಂಟ್‌ಫೋರ್ಟ್ ಕ್ಯಾಥೋಲಿಕ್ ಮಿಷನ್ ಮೇಲೆ ನಡೆದ ಇತ್ತೀಚಿನ ದಾಳಿಯ ಹಿನ್ನೆಲೆಯಲ್ಲಿ “ಆಳವಾದ ದುಃಖ” ಮತ್ತು ತೀವ್ರ ಖಂಡನೆಯನ್ನು ವ್ಯಕ್ತಪಡಿಸಿದ್ದಾರೆ.

ಏಪ್ರಿಲ್ ಅಂತ್ಯದ ವೇಳೆಯಲ್ಲಿ ನಡೆದ ಈ ದಾಳಿಯಿಂದ ಧರ್ಮಕೇಂದ್ರದ ದೇವಾಲಯ, ಮಿಷನರಿಗಳ ವಾಸಸ್ಥಾನಗಳು ಮತ್ತು ಸಣ್ಣ ಸಮುದಾಯ ಶಾಲೆ ಸೇರಿದಂತೆ ಪ್ರಮುಖ ಧಾರ್ಮಿಕ ಹಾಗೂ ಸಾಮಾಜಿಕ ಮೂಲಸೌಕರ್ಯಗಳು ಧ್ವಂಸಗೊಂಡಿದ್ದು, ಮಿಷನ್ ಬಹುತೇಕ ಸಂಪೂರ್ಣವಾಗಿ ನಾಶವಾಗಿದೆ. 1946ರಲ್ಲಿ ಮಾಂಟ್‌ಫೋರ್ಟ್ ಮಿಷನರಿಗಳಿಂದ ಸ್ಥಾಪಿಸಲಾದ ಈ ಮಿಷನ್, ಆ ಪ್ರದೇಶದ ಶುಭಸಂದೇಶ ಪ್ರಚಾರದ ಪ್ರಾರಂಭಿಕ ಇತಿಹಾಸದ ಭಾಗವೆಂದು ಪರಿಗಣಿಸಲಾಗಿದೆ.

ತಮ್ಮ ಪ್ರಕಟಣೆಯಲ್ಲಿ ಮಹಾಧರ್ಮಾಧ್ಯಕ್ಷ ಇನಾಸಿಯೊ ಸೌರೆ ಅವರು ಈ ದಾಳಿಯ ಸುದ್ದಿಯನ್ನು “ಆಳವಾದ ನೋವಿನಿಂದ” ಸ್ವೀಕರಿಸಿದ್ದಾಗಿ ಹೇಳಿ, ಸ್ಥಳೀಯ ಸಮುದಾಯದ ಧಾರ್ಮಿಕ ಹಾಗೂ ಸಾಮಾಜಿಕ ಜೀವನಕ್ಕೆ ಸೇವೆ ಸಲ್ಲಿಸುತ್ತಿದ್ದ ಕಟ್ಟಡಗಳ “ಕ್ರೂರ ಧ್ವಂಸವನ್ನು” ವಿವರಿಸಿದರು. ದಾಳಿಕೋರರು ಕೇವಲ ಕಟ್ಟಡಗಳಿಗೆ ಬೆಂಕಿ ಹಚ್ಚುವುದಲ್ಲದೆ, “ಕ್ರೈಸ್ತರ ವಿರುದ್ಧ ಸ್ಪಷ್ಟ ಮತ್ತು ತೀವ್ರ ದ್ವೇಷದ ಸಂದೇಶಗಳನ್ನು” ಹರಡಿದ್ದಾರೆ.”

ಇಂತಹ ಕೃತ್ಯಗಳು ಮೊಜಾಂಬಿಕ್ ಸಮಾಜದ ಮೂಲಭೂತ ಅಡಿಪಾಯಗಳನ್ನು ದುರ್ಬಲಗೊಳಿಸುತ್ತವೆ ಎಂದು ಅವರು ಎಚ್ಚರಿಸಿದರು. “ಇದು ಮೊಜಾಂಬಿಕ್‌ನಲ್ಲಿ ವಿವಿಧ ಧಾರ್ಮಿಕ ನಂಬಿಕೆಗಳ ಜನರ ನಡುವೆ ಇರುವ ಶಾಂತಿಯುತ ಸಹಬಾಳ್ವೆಯ ಸಂಸ್ಕೃತಿಗೆ ಸಂಪೂರ್ಣ ಮಾರಕವಾಗಿದೆ—ನಮ್ಮ ಜೀವನ ವಿಧಾನ, ನಮ್ಮ ನಡೆ ಮತ್ತು ನಮ್ಮ ಶಾಂತಿಯುತ ಜೀವನಕ್ಕೆ ವಿರುದ್ಧವಾಗಿದೆ,” ಎಂದು ಅವರು ಹೇಳಿದರು.

“ಅಬ್ರಹಾಮರ ದೇವರು, ಮೊಹಮ್ಮದರ ದೇವರು ಮತ್ತು ಯೇಸು ಕ್ರಿಸ್ತರ ದೇವರು ದ್ವೇಷ ಮತ್ತು ಹಿಂಸೆಯ ದೇವರಲ್ಲ; ಪ್ರೀತಿಯ ದೇವರು,” ಎಂದು ಅವರು ಮುಂದುವರಿಸಿ, ವಿಶೇಷವಾಗಿ ಅಬ್ರಹಾಮೀಯ ಧರ್ಮಗಳ ಅನುಯಾಯಿಗಳ ನಡುವೆ ಪರಸ್ಪರ ಗೌರವಕ್ಕೆ ಕರೆ ನೀಡಿದರು.

ಮಹಾಧರ್ಮಾಧ್ಯಕ್ಷರು ಹಿಂಸಾಚಾರ ಅಂತ್ಯವಾಗಬೇಕು ಎಂದು ಕರೆ ನೀಡಿ, ಎಲ್ಲಾ ರೀತಿಯ ಧಾರ್ಮಿಕ ಅತಿರೇಕತೆಯನ್ನು ತಿರಸ್ಕರಿಸಿದರು. ಅವರು ಕ್ರೈಸ್ತರ ವಿರುದ್ಧದ ದ್ವೇಷವನ್ನೂ ಇಸ್ಲಾಮೋಫೋಬಿಯಾವನ್ನೂ(tಇಸ್ಲಾಂ ಧರ್ಮ ಮತ್ತು ಅದರ ಅನುಯಾಯಿಗಳ (ಮುಸ್ಲಿಮರ) ವಿರುದ್ಧ ಇರುವ ಅನಗತ್ಯ ಭಯ, ದ್ವೇಷ ಅಥವಾ ತಾರತಮ್ಯ) ಖಂಡಿಸಿದರು. “ಅವರು ನಾಶ ಮತ್ತು ಮರಣವನ್ನು ಬಿತ್ತುವುದನ್ನು ನಿಲ್ಲಿಸಲಿ,” ಎಂದು  ಮನವಿ ಮಾಡಿ, ಮುಸ್ಲಿಮರು “ಶತ್ರುಗಳಲ್ಲ, ನಮ್ಮ ಪ್ರಿಯ ಸಹೋದರರು” ಎಂದರು.

ಶಾಂತಿಯುತ ಸಹಬಾಳ್ವೆ ಸಾಧ್ಯವಷ್ಟೇ ಅಲ್ಲ, ಅಗತ್ಯವೂ ಆಗಿದೆ ಎಂದು ಒತ್ತಿ ಹೇಳಿದರು. “ನಂಬುವವರಾಗಲಿ ಅಥವಾ ಅಲ್ಲದವರಾಗಲಿ, ಎಲ್ಲರೂ ಒಟ್ಟಾಗಿ ಸಾಮರಸ್ಯ ಮತ್ತು ಶಾಂತಿಯಲ್ಲೇ ಬದುಕಬೇಕು,” ಎಂದು ಹೇಳಿದರು.

ಈ ದಾಳಿ, 2017ರಿಂದ ಅತಿರೇಕಿ ಗುಂಪುಗಳಿಗೆ ಸಂಬಂಧಿಸಿದ ಬಂಡಾಯ ಚಟುವಟಿಕೆಗಳು ನಡೆಯುತ್ತಿರುವ ಕಾಬೊ ಡೆಲ್ಗಾಡೊ ಪ್ರದೇಶದ ವ್ಯಾಪಕ ಅಸುರಕ್ಷಿತ ಪರಿಸ್ಥಿತಿಯ ಭಾಗವಾಗಿದೆ. ಈ ಸಂಘರ್ಷವು ಲಕ್ಷಾಂತರ ಜನರನ್ನು ಸ್ಥಳಾಂತರಗೊಳಿಸಿದ್ದು, ಶಿಕ್ಷಣ, ಆರೋಗ್ಯ ಸೇವೆ ಮತ್ತು ಪೂಜಾಸ್ಥಳಗಳಿಗೆ ಪ್ರವೇಶವನ್ನು ಗಂಭೀರವಾಗಿ ಮೊಟಕುಗೊಳಿಸಿದೆ.

ಯುವಜನರ ಪ್ರತಿಕ್ರಿಯೆ

ನಂಪುಲಾ ಮಹಾಧರ್ಮಪ್ರಾಂತ್ಯದ ಯುವ ಕಥೋಲಿಕರು ಕೂಡ ಈ ಪರಿಸ್ಥಿತಿಯ ಬಗ್ಗೆ ಚಿಂತೆಯನ್ನು ವ್ಯಕ್ತಪಡಿಸಿದರು. ಹೆನ್ರಿಕ್ವೆಸ್ ಮಗಾಜಾ ಅವರು ಈ ದಾಳಿಗಳನ್ನು ಆಧ್ಯಾತ್ಮಿಕ ದಿಕ್ಕು ಕಳೆದುಕೊಂಡಿರುವುದರ ಲಕ್ಷಣವೆಂದು ವಿವರಿಸಿದರು. “ಇದು ತುಂಬಾ ದುಃಖಕರ. ನಾವು ದೇವರ ಬಳಿಗೆ ಮರಳಬೇಕು, ಆತನ ವಾಕ್ಯವನ್ನು ಕೇಳಬೇಕು ಮತ್ತು ಇದಕ್ಕೆ ಕಾರಣರಾದವರು ತಮ್ಮ ಮಾರ್ಗವನ್ನು ಬದಲಿಸಲಿ ಎಂದು ಪ್ರಾರ್ಥಿಸಬೇಕು,” ಎಂದು ಅವರು ಹೇಳಿದರು.

ನಿಲ್ಜಾ ಮನುವೇಲ್ ಕಾರ್ಲೋಸ್ ಆಂಟೋನಿಯೋ ಅವರು ಬಾಧಿತರಿಗೆ, “ನಮ್ಮ ಸಹೋದರ ಸಹೋದರಿಯರೇ ಧೈರ್ಯ—ಭರವಸೆಯನ್ನು ಕಳೆದುಕೊಳ್ಳಬೇಡಿ. ದೇವರು ನೋಡುತ್ತಾನೆ ಮತ್ತು ಕಾರ್ಯನಿರ್ವಹಿಸುತ್ತಾನೆ” ಎಂದು ಬೆಂಬಲದ ಸಂದೇಶ ನೀಡಿದರು.

ಯುವ ನಾಯಕ ಮಲಿಟೋ ಜೋಆವೊ ಅವರು ವಿಶೇಷವಾಗಿ ಹಿಂಸಾಚಾರದಿಂದ ಬಾಧಿತ ಪ್ರದೇಶಗಳಲ್ಲಿ ಯುವಜನರು ಎದುರಿಸುತ್ತಿರುವ ಸಾಮಾಜಿಕ ಮತ್ತು ಆಧ್ಯಾತ್ಮಿಕ ಸವಾಲುಗಳಿಗೆ ಪ್ರತಿಕ್ರಿಯಿಸಲು ಧರ್ಮಸಭೆ ತನ್ನ ಪ್ರಯತ್ನಗಳನ್ನು ಮುಂದುವರಿಸುತ್ತಿದೆ ಎಂದು ತಿಳಿಸಿದರು.

ಕಾಬೊ ಡೆಲ್ಗಾಡೊ ಪ್ರದೇಶದಲ್ಲಿ ಮುಂದುವರಿಯುತ್ತಿರುವ ಅಸ್ಥಿರತೆಯ ನಡುವೆಯೂ, ಮೊಜಾಂಬಿಕ್‌ನ ಕಥೋಲಿಕ ಧರ್ಮಸಭೆ ಶಾಂತಿ, ಅಂತರ್ಧರ್ಮೀಯ ಸಂವಾದ ಮತ್ತು ಮಾನವ ಗೌರವದ ರಕ್ಷಣೆಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

04 ಮೇ 2026, 22:58