ನೈಜೀರಿಯಾ: ಮೂರು ತಿಂಗಳ ಬಂಧನದ ಬಳಿಕ ಅಪಹರಣಕ್ಕೊಳಗಾಗಿದ್ದ ಯಾಜಕರೋರ್ವರ ಬಿಡುಗಡೆ
ವ್ಯಾಟಿಕನ್ ವರದಿ
ಮೇ 12ರಂದು ಪ್ರಕಟಿಸಿದ ಪ್ರಕಟಣೆಯಲ್ಲಿ, ಕಾಫಾಂಚನ್ ಕಥೋಲಿಕ ಧರ್ಮಕ್ಷೇತ್ರವು ಮೂರು ತಿಂಗಳ ಬಂಧನದ ಬಳಿಕ ವಂ. ಗುರು ನಥಾನಿಯೇಲ್ ಅಸುವಾಯೆ ಸುರಕ್ಷಿತವಾಗಿ ಮರಳಿರುವುದಕ್ಕಾಗಿ “ದೇವರಿಗೆ ಆಳವಾದ ಕೃತಜ್ಞತೆ” ಸಲ್ಲಿಸಿದೆ.
“ವಂ. ಗುರು ನಥಾನಿಯೇಲ್ ಈಗ ಸುರಕ್ಷಿತರಾಗಿದ್ದು, ಅಗತ್ಯ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದನ್ನು ನಿಮಗೆ ತಿಳಿಸಲು ನಾವು ಸಂತೋಷಪಡುತ್ತೇವೆ,” ಎಂದು ಪ್ರಕಟಣೆ ತಿಳಿಸಿದೆ. “ಅವರ ಆರೋಗ್ಯ ಸ್ಥಿರವಾಗಿದೆ, ಅವರು ಉತ್ತಮ ಮನೋಭಾವದಲ್ಲಿದ್ದಾರೆ ಮತ್ತು ನಿಮ್ಮ ಪ್ರಾರ್ಥನೆ ಹಾಗೂ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.”
ಕಡುನಾ ರಾಜ್ಯದ ಕೌರಾ ಜಿಲ್ಲೆಯ ಕಾರ್ಕುವಿನ ಪವಿತ್ರ ತ್ರಿತ್ವ ದೇವಾಲಯದ ದೇವಾಲಯ ಗುರುವಾಗಿದ್ದ ವಂ. ಗುರು ನಥಾನಿಯೇಲ್ ಅವರನ್ನು, 2026ರ ಫೆಬ್ರವರಿ 7ರ ಮುಂಜಾನೆ ಶಸ್ತ್ರಸಜ್ಜಿತ ದಾಳಿಕೋರರು ದೇವಾಲಯ ನಿವಾಸದ ಮೇಲೆ ದಾಳಿ ನಡೆಸಿದಾಗ ಅಪಹರಿಸಲಾಗಿತ್ತು. ಆ ಸಮಯದ ವರದಿಗಳ ಪ್ರಕಾರ, ದಾಳಿಯ ವೇಳೆ ಇನ್ನೂ ಹತ್ತು ವಿಶ್ವಾಸಿಗಳನ್ನು ಅಪಹರಿಸಲಾಗಿತ್ತು ಮತ್ತು ಕನಿಷ್ಠ ಮೂವರು ಸಾವನ್ನಪ್ಪಿದ್ದರು. ಅಪಹರಣದ ನಂತರದ ತಿಂಗಳುಗಳಾದ್ಯಂತ ಧರ್ಮಕ್ಷೇತ್ರವು, ವಂ. ಗುರುಗಳ ಬಿಡುಗಡೆಗಾಗಿ ನಿರಂತರವಾಗಿ ಪ್ರಾರ್ಥಿಸಲು ವಿಶ್ವಾಸಿಗಳನ್ನು ಮನವಿ ಮಾಡಿದ್ದಾಗಿ ತಿಳಿಸಿದೆ.
“ಏಪ್ರಿಲ್ ಅಂತ್ಯದ ವೇಳೆಗೆ, ವಾರ್ಷಿಕ ಮರಿಯಮ್ಮನ ಭಕ್ತಿಪೂರ್ವಕ ಆಚರಣೆಗಳು ಮತ್ತು ಇತರ ಪ್ರಾರ್ಥನೆಗಳ ಮೂಲಕ, ವಿಶೇಷವಾಗಿ ಪವಿತ್ರ ಬಲಿಪೂಜೆಯ ಸಂದರ್ಭದಲ್ಲಿ, ಮೇ ತಿಂಗಳನ್ನು ದೇವರಿಗೆ ಸಮರ್ಪಿಸಿದ್ದೇವೆ,” ಎಂದು ಪ್ರಕಟಣೆ ತಿಳಿಸಿದೆ. “ತನ್ನ ಹೆಸರನ್ನು ಧರಿಸಿ ತನ್ನನ್ನು ಕರೆದವರನ್ನು ದೇವರು ಎಂದಿಗೂ ತೊರೆಯುವುದಿಲ್ಲ. ಅವರು ನಮ್ಮ ಪ್ರಾರ್ಥನೆಗಳನ್ನು ಆಲಿಸಿ, ವಂ. ಗುರು ನಥಾನಿಯೇಲ್ ಅವರ ಸುರಕ್ಷಿತ ಮರಳುವಿಕೆಯನ್ನು ಅನುಗ್ರಹಿಸಿದ್ದಾರೆ” ಎಂದು ಅದು ಸೇರಿಸಿದೆ.
ಕಾಫಾಂಚನ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಜೂಲಿಯಸ್ ಯಾಕುಬು ಕುಂಡಿ, ಧರ್ಮಕ್ಷೇತ್ರದ ಯಾಜಕರು ಮತ್ತು ವಿಶ್ವಾಸಿಗಳೊಂದಿಗೆ ಸೇರಿ, ಈ ಕಠಿಣ ಸಮಯದಲ್ಲಿ ಧರ್ಮಸಭೆಗೆ ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ವಿಶೇಷವಾಗಿ ವಂ. ಗುರುಗಳ ಕುಟುಂಬದ ಆರೈಕೆ ಮಾಡಿದವರು ಮತ್ತು ಪ್ರಾರ್ಥನೆ ಹಾಗೂ ಐಕ್ಯತೆಯ ಮೂಲಕ ಸಮುದಾಯದೊಂದಿಗೆ ನಿಂತವರನ್ನು ಅವರು ಸ್ಮರಿಸಿದರು.
“ಪ್ರಾರ್ಥನೆಗಳಿಗೆ ಉತ್ತರ ದೊರೆತಿರುವ ಈ ಸಂತಸದ ಕ್ಷಣದಲ್ಲಿ, ನಾವು ನಂಬಿಕೆಯಲ್ಲಿ ದೃಢರಾಗಿರೋಣ, ಒಂದೇ ಕುಟುಂಬವಾಗಿ ಒಂದಾಗಿರೋಣ ಮತ್ತು ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲೋಣ,” ಎಂದು ಧರ್ಮಕ್ಷೇತ್ರ ಹೇಳಿದೆ. ಜೊತೆಗೆ, ವಿಶ್ವಾಸಿಗಳು ಸದಾ ಎಚ್ಚರಿಕೆಯಿಂದ ಮತ್ತು ಪರಸ್ಪರ ಕರುಣೆಯಿಂದ ವರ್ತಿಸಬೇಕು ಎಂದು ಪ್ರೋತ್ಸಾಹಿಸಿದೆ.
ವ್ಯಾಪಕ ಅಸುರಕ್ಷತೆ ಕುರಿತು ಕಳವಳ
ಫಿಡೆಸ್ ಸುದ್ದಿ ಸಂಸ್ಥೆಯ ಪ್ರಕಾರ, ವಂ. ಗುರು ನಥಾನಿಯೇಲ್ ಅವರೊಂದಿಗೆ ಅಪಹರಣಕ್ಕೊಳಗಾಗಿದ್ದ ಹತ್ತು ಭಕ್ತರ ಸ್ಥಿತಿಗತಿಯ ಕುರಿತು ಇದುವರೆಗೆ ಯಾವುದೇ ಮಾಹಿತಿ ಪ್ರಕಟವಾಗಿಲ್ಲ. ಈ ಯಾಜಕರ ಬಿಡುಗಡೆ, ನೈಜೀರಿಯಾದ ಹಲವು ಭಾಗಗಳಲ್ಲಿ ಯಾಜಕರ ಅಪಹರಣ ಮತ್ತು ಹೆಚ್ಚುತ್ತಿರುವ ಅಸುರಕ್ಷತೆ ಕುರಿತು ಮುಂದುವರಿಯುತ್ತಿರುವ ಕಳವಳದ ನಡುವೆಯೇ ನಡೆದಿದೆ.
ಫಿಡೆಸ್ ವರದಿಯ ಪ್ರಕಾರ, ಕನಿಷ್ಠ ಇಬ್ಬರು ಕಥೋಲಿಕ ಯಾಜಕರು ಇನ್ನೂ ಬಂಧನದಲ್ಲಿದ್ದಾರೆ. ಅವರಲ್ಲಿ, ಅನಂಬ್ರಾ ರಾಜ್ಯದ ಅಗ್ಯುಲೆರಿ ಧರ್ಮಕ್ಷೇತ್ರದ ವಂ. ಗುರು ಜೋಸೆಫ್ ಇಗ್ವಿಯಾಗು ಅವರನ್ನು 2022ರ ಅಕ್ಟೋಬರ್ 12ರಂದು ಅಪಹರಿಸಲಾಗಿತ್ತು. ಹಾಗೆಯೇ, ಕಡುನಾ ರಾಜ್ಯದ ಜಾರಿಯಾ ಧರ್ಮಕ್ಷೇತ್ರದ ವಂ. ಗುರು ಇಮ್ಮಾನುಯೇಲ್ ಎಝೆಮಾ ಅವರನ್ನು 2025ರ ಡಿಸೆಂಬರ್ 2ರಂದು ಅಪಹರಿಸಲಾಗಿತ್ತು.
ನೈಜೀರಿಯಾದ ಕಥೋಲಿಕ ಧರ್ಮಸಭೆ, ಮಾನವ ಜೀವ ರಕ್ಷಣೆ ಮತ್ತು ಹಿಂಸಾಚಾರ ಹಾಗೂ ಅಪರಾಧ ದಾಳಿಗಳಿಂದ ಬಾಧಿತ ಸಮುದಾಯಗಳಲ್ಲಿ ಶಾಂತಿಯನ್ನು ಪುನಃ ಸ್ಥಾಪಿಸಲು ಬಲವಾದ ಭದ್ರತಾ ಕ್ರಮಗಳು ಹಾಗೂ ಹೊಸ ಪ್ರಯತ್ನಗಳನ್ನು ಕೈಗೊಳ್ಳುವಂತೆ ಹಲವು ಬಾರಿ ಮನವಿ ಮಾಡಿದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).